Viral Video: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪ; ಮರಿಗಳನ್ನು ರಕ್ಷಿಸಲು ಆನೆಗಳು ಮಾಡಿದ್ದೇನು?
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ 5.2 ತೀವ್ರತೆಯ ಭೂಕಂಪ ಸಂಭವಿಸುತ್ತಿದ್ದಂತೆ, ಎಸ್ಕೊಂಡಿಡೊದ ಸ್ಯಾನ್ ಡಿಯಾಗೋ ಮೃಗಾಲಯ ಸಫಾರಿ ಪಾರ್ಕ್‍ನಲ್ಲಿ ಆಫ್ರಿಕನ್ ಆನೆಗಳು ತಮ್ಮ ಮರಿಗಳ ಸುತ್ತಲೂ ವೃತ್ತಾಕಾರವಾಗಿ ನಿಂತಿದ್ದವು. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.


ವಾಷಿಂಗ್ಟನ್: ತಾಯಿ ತನ್ನ ಮಕ್ಕಳ ರಕ್ಷಣೆಗೆ ಯಾವಾಗಲೂ ಮುಂದಿರುತ್ತಾಳೆ. ಅಪಾಯದಿಂದ ಮಕ್ಕಳನ್ನು ಕಾಪಾಡಲು ತನ್ನ ಪ್ರಾಣ ತ್ಯಾಗಕ್ಕೂ ಸಿದ್ಧಳಾಗುತ್ತಾಳೆ. ಈ ಗುಣ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಲ್ಲಿಯೂ ಕಂಡುಬರುತ್ತದೆ. ಇದಕ್ಕೆ ಉತ್ತಮ ನಿರ್ದರ್ಶನ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಘಟನೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ 5.2 ತೀವ್ರತೆಯ ಭೂಕಂಪ ಸಂಭವಿಸುತ್ತಿದ್ದಂತೆ, ಎಸ್ಕೊಂಡಿಡೊದ ಸ್ಯಾನ್ ಡಿಯಾಗೋ ಮೃಗಾಲಯ ಸಫಾರಿ ಪಾರ್ಕ್‍ನಲ್ಲಿ ವಿಚಿತ್ರವಾದ ದೃಶ್ಯವೊಂದು ಕಂಡುಬಂದಿದೆ. ಭೂಕಂಪನದ ಅನುಭವವಾಗುತ್ತಿದ್ದಂತೆ ಉದ್ಯಾನವನದಲ್ಲಿದ್ದ ಆಫ್ರಿಕನ್ ಆನೆಗಳು ತಮ್ಮ ಮರಿಗಳ ಸುತ್ತಲೂ ಒಂದು ವೃತ್ತವನ್ನು ರಚಿಸಿ ನಿಂತಿದ್ದವು. ಇದನ್ನು ʼಅಲರ್ಟ್ ಸರ್ಕಲ್ʼ ಎಂದು ಕರೆಯಲಾಗುತ್ತದೆ. ಇದು ಆನೆಗಳು ತಮ್ಮ ಮರಿಗಳ ರಕ್ಷಣೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಈ ವಿಡಿಯೊವನ್ನು ಸಫಾರಿ ಪಾರ್ಕ್‍ನ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ ಆನೆಗಳು ಇದ್ದಕ್ಕಿದ್ದಂತೆ ತಮ್ಮ ಮರಿಗಳನ್ನು ಮಧ್ಯದಲ್ಲಿ ಇರಿಸಿ ಅವುಗಳ ಸುತ್ತಲೂ ಸುತ್ತುವರಿದಿರುವುದು ಕಂಡು ಬಂದಿದೆ.
ಮರಿಗಳ ರಕ್ಷಣೆಗೆ ನಿಂತ ಆನೆಗಳ ವಿಡಿಯೊ ಇಲ್ಲಿದೆ ನೋಡಿ...
Stronger together 🐘
— San Diego Zoo Wildlife Alliance (@sandiegozoo) April 14, 2025
Elephants have the unique ability to feel sounds through their feet and formed an "alert circle" during the 5.2 magnitude earthquake that shook Southern California this morning. This behavior is a natural response to perceived threats to protect the herd. pic.twitter.com/LqavOKHt6k
ಮಾಹಿತಿ ಪ್ರಕಾರ, ನೆಲವು ನಡುಗಲು ಪ್ರಾರಂಭಿಸಿದಾಗ, ದೊಡ್ಡ ಆನೆಗಳಾದ ಎನ್ಡ್ಲುಲಾ, ಉಮ್ಂಗಾನಿ ಮತ್ತು 18 ವರ್ಷದ ಖೋಸಿ ಬೇಗನೆ ತಮ್ಮ ಮರಿಗಳ ಸುತ್ತಲೂ ಗುರಾಣಿಯನ್ನು ರಚಿಸಿದವು. ಇದರಲ್ಲಿ 7 ವರ್ಷದ ಅವಳಿ ಸಹೋದರರಾದ ಜುಲಿ ಮತ್ತು ಮಖಾಯಾ ಕೂಡ ಸೇರಿದ್ದವು. ಕುತೂಹಲಕಾರಿ ಸಂಗತಿಯೆಂದರೆ, ಮಖಾಯಾ ಗುಂಪಿನೊಳಗೆ ಸುರಕ್ಷಿತವಾಗಿ ಉಳಿದಾಗ, ಜುಲಿ ದೊಡ್ಡ ಆನೆಗಳ ಜತೆ ಸೇರಿಕೊಂಡು ರಕ್ಷಕನಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ.
ವರದಿಯ ಪ್ರಕಾರ ಆನೆಗಳು ತಮ್ಮ ಪಾದಗಳ ಮೂಲಕ ದೂರದ ಶಬ್ದಗಳನ್ನು ಗ್ರಹಿಸುತ್ತವೆ. ಈ ಕೌಶಲ್ಯವು ಭೂಕಂಪದ ಸಮಯದಲ್ಲಿ ಅವುಗಳು ಅಲರ್ಟ್ ಆಗಲು ಸಹಾಯ ಮಾಡುತ್ತವೆ ಎನ್ನಲಾಗಿದೆ. ತೊಂದರೆಗಳು ಎದುರಾದಾಗ ಹಿಂಡಿನ ಹಿರಿಯರು ಸಾಮಾನ್ಯವಾಗಿ ಪಲಾಯನ ಮಾಡಬೇಕೆ ಅಥವಾ ಗುರಾಣಿ ರಚಿಸಬೇಕೆ ಎಂದು ನಿರ್ಧರಿಸುತ್ತವೆ ಎನ್ನುತ್ತಾರೆ ತಜ್ಞರು.
2010ರಲ್ಲಿ ಬಾಜಾ ಕ್ಯಾಲಿಫೋರ್ನಿಯಾದಲ್ಲಿ 7.2 ತೀವ್ರತೆಯ ಭೂಕಂಪದ ಸಮಯದಲ್ಲಿ ಆನೆಗಳ ಹಿಂಡು ಇದೇ ರೀತಿಯ ಪ್ರತಿಕ್ರಿಯೆ ತೋರಿತ್ತು.
ಈ ಸುದ್ದಿಯನ್ನೂ ಓದಿ:Viral Video: ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ರೋಗಿಗಳು ಪಾರಾಗಿದ್ದೇ ರೋಚಕ
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಭೂಕಂಪ ಸಂಭವಿಸಿದ್ದು, ಭೂಕಂಪದ ಕೇಂದ್ರಬಿಂದು ಜೂಲಿಯನ್ ಬಳಿ ಕಂಡು ಬಂದಿತ್ತು. ಲಾಸ್ ಏಂಜಲೀಸ್‍ನಿಂದ ಮೆಕ್ಸಿಕೋದ ಟಿಜುವಾನಾವರೆಗೆ ಭೂಕಂಪನದ ಅನುಭವವಾಗಿದೆ. ಆದರೆ ಈ ಪ್ರದೇಶದಲ್ಲಿ ಯಾವುದೇ ಗಮನಾರ್ಹ ಹಾನಿ ಅಥವಾ ಗಾಯಗಳು ವರದಿಯಾಗಿಲ್ಲ.