ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರಿ ಮಳೆಗೆ ಕೆರೆಯಂತಾದ ಗಂಗಾ ಎಕ್ಸ್‌ಪ್ರೆಸ್‌ವೇ: 36 ಸಾವಿರ ಕೋಟಿ ರೂಪಾಯಿ ರಸ್ತೆಯ ಟೋಲ್ ಪ್ಲಾಜಾದಲ್ಲಿ ಮೀನು ಹಿಡಿದ ಸಾರ್ವಜನಿಕರು!

Ganga Expressway: ಉತ್ತರ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಸುಮಾರು 36,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಹತ್ವಾಕಾಂಕ್ಷೆಯ ಗಂಗಾ ಎಕ್ಸ್‌ಪ್ರೆಸ್‌ವೇಯ ಟೋಲ್ ಪ್ಲಾಜಾ ಮತ್ತು ಇಂಟರ್‌ಚೇಂಜ್ ರಸ್ತೆ ಸಂಪೂರ್ಣ ಜಲಾವೃತಗೊಂಡು ಕೆರೆಯಂತಾಗಿದೆ. ನೆರೆನೀರಿನಲ್ಲಿ ತೇಲಿಬಂದ ಮೀನುಗಳನ್ನು ಹಿಡಿಯಲು ಸ್ಥಳೀಯರು ಬಲೆ ಹಿಡಿದು ಬಂದು ಹೆದ್ದಾರಿಯ ಮೇಲೆಯೇ ಕುಳಿತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಕೆರೆಯಂತಾದ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಮೀನು ಹಿಡಿದ ಸ್ಥಳೀಯರು

ಭಾರಿ ಮಳೆಗೆ ಕೆರೆಯಂತಾದ ಉತ್ತರ ಪ್ರದೇಶದ ಗಂಗಾ ಎಕ್ಸ್‌ಪ್ರೆಸ್‌ವೇ -

Ramesh Ballamoole
Ramesh Ballamoole Sep 28, 2026 8:23 PM

ಲಖನೌ, ಸೆ. 28: ಮಳೆಯಿಂದಾಗಿ ಹೆದ್ದಾರಿಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಳ್ಳುವುದು ಹೊಸದೇನಲ್ಲ. ಆದರೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ಹೆದ್ದಾರಿಯೊಂದು ಮಳೆನೀರಿನಿಂದ ಕೆರೆಯಂತಾಗಿ, ಅಲ್ಲಿ ಸಾರ್ವಜನಿಕರು ಬಲೆ ಬೀಸಿ ಮೀನು ಹಿಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ (Viral Video) ಆಗಿದೆ.

ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಬಶೀರತ್‌ಗಂಜ್ ಬಳಿ ಹಾದುಹೋಗುವ ಸುಮಾರು 36,000 ಕೋಟಿ ರೂಪಾಯಿ ವೆಚ್ಚದ ಗಂಗಾ ಎಕ್ಸ್‌ಪ್ರೆಸ್‌ವೇಯ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳು ಭಾರಿ ಮಳೆಗೆ ಸಂಪೂರ್ಣ ಜಲಾವೃತಗೊಂಡಿವೆ. ಹೆದ್ದಾರಿಯ ಮೇಲೆ ಸುಮಾರು ಮೂರರಿಂದ ನಾಲ್ಕು ಅಡಿಗಳಷ್ಟು ನೀರು ನಿಂತಿದ್ದು, ರಸ್ತೆಯು ಸಣ್ಣ ಕೆರೆಯಂತೆ ಮಾರ್ಪಟ್ಟಿದೆ.

ಕೆರೆಯಂತಾದ ಗಂಗಾ ಎಕ್ಸ್‌ಪ್ರೆಸ್‌ವೇ:



ಟೋಲ್ ಬಳಿ ಮೀನು ಹಿಡಿಯುತ್ತಿರುವ ಸ್ಥಳೀಯರು

ಟೋಲ್‌ ರಸ್ತೆಯಲ್ಲಿ ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದರಿಂದ ಸಮೀಪದ ಕಾಲುವೆ ಹಾಗೂ ತಗ್ಗು ಪ್ರದೇಶಗಳಿಂದ ಮೀನುಗಳು ಹೆದ್ದಾರಿಯ ನೀರಿಗೆ ಕೊಚ್ಚಿ ಬಂದಿವೆ. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಎಕ್ಸ್‌ಪ್ರೆಸ್‌ವೇ ಮೇಲೆ ಬಲೆ ಬೀಸಿ ಮೀನು ಹಿಡಿಯಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಗಳ ವಿಡಿಯೊ ತುಣುಕುಗಳು ವ್ಯಾಪಕವಾಗಿ ವೈರಲ್ ಆಗಿವೆ. ವಿಡಿಯೊದಲ್ಲಿ ಸ್ಥಳೀಯರು ರಸ್ತೆಯ ಮೇಲೆಯೇ ಆರಾಮವಾಗಿ ಮೀನು ಹಿಡಿಯುತ್ತಿರುವುದು ಕಂಡು ಬಂದಿದೆ. ನೆಟ್ಟಿಗರು ʼʼಇದು ಟೋಲ್ ಪ್ಲಾಜಾವೋ ಅಥವಾ ಮೀನುಗಾರಿಕಾ ಕೇಂದ್ರವೋ?" ಎಂದು ವ್ಯಂಗ್ಯವಾಡಿದ್ದಾರೆ.

ಉದ್ಘಾಟನೆಯಾಗಿ 12 ದಿನಕ್ಕೆ ಬಿರುಕು ಬಿಟ್ಟ 4,200 ಕೋಟಿ ರೂ. ವೆಚ್ಚದ ಎಕ್ಸ್‌ಪ್ರೆಸ್‌ವೇ ; ಯೋಗಿ ಸರ್ಕಾರದ ವಿರುದ್ಧ ವಿಪಕ್ಷ ಕಿಡಿ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್

ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಾರ್ವಜನಿಕರು ಮೀನು ಹಿಡಿಯುತ್ತಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ನೆಟ್ಟಿಗರೊಬ್ಬರು AI ತಂತ್ರಜ್ಞಾನದ ಮೂಲಕ ರೂಪಿಸಿದ ಟೋಲ್ ಸೈನ್ ಬೋರ್ಡ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ "ಗಂಟೆಗೆ 500 ರೂಪಾಯಿಗೆ ಮೀನು ಹಿಡಿಯುವ ಗಾಳ ಮತ್ತು ಬಲೆಗಳು ಬಾಡಿಗೆಗೆ ಲಭ್ಯ" ಎಂದು ಬರೆದು, "ಶೀಘ್ರದಲ್ಲೇ ದೇಶದ ಪ್ರತಿಯೊಂದು ಎಕ್ಸ್‌ಪ್ರೆಸ್‌ವೇಯಲ್ಲೂ ಇದು ಆರಂಭವಾಗಲಿದೆ" ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಮತ್ತೊಬ್ಬರು ಪ್ರಸಿದ್ಧ ರಾಜಕೀಯ ಘೋಷಣೆಯನ್ನು ಉಲ್ಲೇಖಿಸಿ, "ಸ್ಥಳೀಯರು ವಿಪತ್ತಿನ ಸಮಯದಲ್ಲೂ ತಮಗೆ ಬೇಕಾದ ಅವಕಾಶವನ್ನು ಕಂಡುಕೊಂಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಕಾಮಗಾರಿ ಗುಣಮಟ್ಟದ ವಿರುದ್ಧ ಆಕ್ರೋಶ

ಸುಮಾರು 594 ಕಿ.ಮೀ. ಉದ್ದದ ಈ ಮಹತ್ವಾಕಾಂಕ್ಷೆಯ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಯು ಮೀರತ್‌ನಿಂದ ಪ್ರಯಾಗ್‌ರಾಜ್‌ವರೆಗೆ ಹಾದು ಹೋಗಿದೆ. ಆದರೆ, ಮೊದಲ ಮಳೆಗಾಲದಲ್ಲೇ ಉನ್ನಾವ್ ವ್ಯಾಪ್ತಿಯಲ್ಲಿ ರಸ್ತೆ ಕುಸಿತ ಹಾಗೂ ಅಪಾರ ಪ್ರಮಾಣದ ನೀರು ನಿಲ್ಲುವ ಸಮಸ್ಯೆ ಎದುರಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೂಕ್ತ ಚರಂಡಿ ಹಾಗೂ ನೀರು ಹರಿದುಹೋಗುವ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣ ಎಂದು ವಾಹನ ಸವಾರರು ಮತ್ತು ಸ್ಥಳೀಯರು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ.

ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

‘ಗಂಗಾ ವಾಟರ್‌ವೇ’ ಎಂದು ಬದಲಾಯಿಸಿ: ಅಖಿಲೇಶ್ ಯಾದವ್ ಟೀಕೆ

ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಬಿಜೆಪಿಯ ಭ್ರಷ್ಟಾಚಾರದ ನದಿಗಳು ಈಗ ಎಕ್ಸ್‌ಪ್ರೆಸ್‌ವೇ ಮೇಲೆ ಹರಿಯುತ್ತಿವೆ. ಹೆಸರು ಬದಲಾಯಿಸುವ ಅಭ್ಯಾಸವಿರುವ ಬಿಜೆಪಿಯವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ತಕ್ಷಣವೇ ಇದರ ಹೆಸರನ್ನು ‘ಗಂಗಾ ಎಕ್ಸ್‌ಪ್ರೆಸ್‌ವೇ’ ಬದಲಿಗೆ ‘ಗಂಗಾ ಎಕ್ಸ್‌ಪ್ರೆಸ್ ವಾಟರ್‌ವೇ ಎಂದು ಮರುನಾಮಕರಣ ಮಾಡಲಿʼʼ ಎಂದು ವ್ಯಂಗ್ಯವಾಡಿದ್ದಾರೆ.

ಸದ್ಯ ವೈರಲ್ ವಿಡಿಯೊ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ಕುರಿತು ಆಡಳಿತ ಯಂತ್ರದ ವಿರುದ್ಧ ಸಾರ್ವಜನಿಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.