ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಉತ್ತರ ಪ್ರದೇಶ: ಮುಸ್ಲಿಂ ವ್ಯಕ್ತಿಯ ಅಂತಿಮ ಯಾತ್ರೆಗೆ ದಾರಿ ಬಿಟ್ಟುಕೊಟ್ಟ ಕನ್ವರ್ ಯಾತ್ರಿಕರು; ವಿಡಿಯೊ ನೋಡಿ
Viral Video: ಉತ್ತರ ಪ್ರದೇಶದ ಮೀರತ್‌ನಲ್ಲಿ ಮಾನವೀಯತೆ ಮತ್ತು ಕೋಮು ಸೌಹಾರ್ದತೆ ಮೆರೆದ ಅಪರೂಪದ ಘಟನೆ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟ ಮುಸ್ಲಿಂ ವ್ಯಕ್ತಿಯೊಬ್ಬರ ಅಂತ್ಯಕ್ರಿಯಗೆ ಜಾಗ ಮಾಡಿಕೊಡಲು ಸಾವಿರಾರು ಶಿವಭಕ್ತರು ಮಾನವ ಸರಪಳಿ ನಿರ್ಮಿಸಿ ದಾರಿ ಮಾಡಿ ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಕನ್ವರ್ ಯಾತ್ರೆ -
ಲಖನೌ, ಆ. 11: ದೇಶಾದ್ಯಂತ ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ಉದ್ವಿಗ್ನತೆ ಸೃಷ್ಟಿಯಾಗುವ ಘಟನೆಗಳ ನಡುವೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಮಾನವೀಯತೆ ಮತ್ತು ಕೋಮು ಸೌಹಾರ್ದತೆ ಮೆರೆದ ಅಪರೂಪದ ಘಟನೆ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟ ಮುಸ್ಲಿಂ ವ್ಯಕ್ತಿಯೊಬ್ಬರ ಅಂತ್ಯಕ್ರಿಯಗೆ ಜಾಗ ಮಾಡಿಕೊಡಲು ಸಾವಿರಾರು ಶಿವಭಕ್ತರು (Kanwariyas) ಮಾನವ ಸರಪಳಿ ನಿರ್ಮಿಸಿ ಮಾದರಿಯಾಗಿದ್ದಾರೆ (Viral Video). ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮೀರತ್‌ನ ಶಿವಾಯ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಲೈವ್ ಹಿಂದೂಸ್ತಾನ ವರದಿಯ ಪ್ರಕಾರ ಹೃದಯಾಘಾತದಿಂದ ಮೃತಪಟ್ಟಿದ್ದ 40 ವರ್ಷದ ನಿಜಾಮ ಎಂಬ ಮುಸ್ಲಿಂ ವ್ಯಕ್ತಿಯ ಅಂತ್ಯಕ್ರಿಯೆ ಮೆರವಣಿಗೆ ದೆಹಲಿ-ಡೆಹ್ರಾಡೂನ್ ಹೆದ್ದಾರಿ ದಾಟಬೇಕಿತ್ತು. ಸ್ಮಶಾನವು ಗ್ರಾಮದ ಇನ್ನೊಂದು ಬದಿಯಲ್ಲಿತ್ತು. ಆದರೆ ಅದೇ ಸಮಯದಲ್ಲಿ ಕನ್ವರ್ ಯಾತ್ರೆ ಕೈಗೊಂಡಿದ್ದ ಸಾವಿರಾರರು ಶಿವಭಕ್ತರಿಂದ ಹೆದ್ದಾರಿ ತುಂಬಿತ್ತು. ಪರಿಸ್ಥಿತಿಯನ್ನ ಮನಗಂಡ ಶಿವಭಕ್ತರು ತಕ್ಷಣ ತಮ್ಮ ಯಾತ್ರೆಯನ್ನು ತಡೆದು ಅಂತ್ಯಕ್ರಿಯೆಗೆ ದಾರಿ ಮಾಡಿಕೊಡುವ ಮೂಲಕ ಮಾನವೀಯತೆ ಮೆರದಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
मेरठ के सिवाया गांव में कांवड़ियों ने इंसानियत और सांप्रदायिक सौहार्द की मिसाल पेश की। हार्ट अटैक से हुई निजाम की मौत के बाद जनाजा हाईवे पार कर कब्रिस्तान जा रहा था।
— Samachar Plus Uttar Pradesh/UttaraKhand (@SamacharPlusUP1) August 10, 2026
कांवड़ियों ने खुद यात्रा रोककर जनाजे के लिए रास्ता दिया। हजारों शिवभक्त शांतिपूर्वक रुके रहे और जनाजा गुजरने के… pic.twitter.com/pKLxYTnZve
ಇದೇ ವೇಳೆ ಗ್ರಾಮಸ್ಥರು ಸ್ಥಳೀಯ ಪೊಲೀಸರ ನೆರವು ಪಡೆದು, ಅಂತ್ಯಕ್ರಿಯೆ ಮೆರವಣಿಗೆ ಯಾವುದೇ ಅಡಚಣೆ ಇಲ್ಲದೆ ಶಾಂತಿಯುತವಾಗಿ ನಡೆಯಲು ಮನವಿ ಮಾಡಿದರು. ಅಂತ್ಯಕ್ರಿಯೆ ಮರವಣಿಗೆ ನಂತರ ಶಿವಭಕ್ತರು ತಮ್ಮ ಕನ್ವರ್ ಯಾತ್ರೆ ಮುಂದುವರಿಸಿದರು.
ಹೆದ್ದಾರಿಯಲ್ಲಿ ಭಕ್ತ ಸಾಗರ
ಶ್ರಾವಣ ಮಾಸದ ಹಿನ್ನಲೆಯಲ್ಲಿ ಹರಿದ್ವಾರದಿಂದ ಗಂಗಾಜಲವನ್ನು ಹೊತ್ತು ಸಾಗುತ್ತಿದ್ದ ಲಕ್ಷಾಂತರ ಕನ್ವರ್ ಯಾತ್ರಿಕರಿಂದ ದೆಹಲಿ ಹೆದ್ದಾರಿ ಸಂಪೂರ್ಣ ಭರ್ತಿಯಾಗಿತ್ತು. ವಾಹನ ಸಂಚಾರ ಮತ್ತು ಜನಸಂದಣಿಯ ನಡುವೆ ಅಂತ್ಯಕ್ರಿಯೆ ಮೆರವಣಿಗೆ ರಸ್ತೆ ದಾಟುವುದು ಅತ್ಯಂತ ಕಷ್ಟವಾಗಿತ್ತು. ಆದರೆ ಶಿವಭಕ್ತರ ಮಾನವೀಯ ನಡೆಯಿಂದಾಗಿ ಇದು ಸಾಧ್ಯವಾಯಿತು.
ಶ್ರಾವಣ ಶಿವರಾತ್ರಿ ಆಚರಣೆ
ಪವಿತ್ರ ಸ್ರಾವಣ ಮಾಸದ ಹಿನ್ನಲೆಯಲ್ಲಿ ಸಾವಿರಾರು ಶಿವಭಕ್ತರು ಪ್ರಸಿದ್ಧ ಶಿವ ಕ್ಷೇತ್ರಗಳಿಗೆ ಯಾತ್ರೆ ಕೈಗೊಂಡಿದ್ದಾರೆ. ಮಂಗಳವಾರದ (ಆಗಸ್ಟ್ 11) ಶ್ರಾವಣ ಶಿವರಾತ್ರಿಯಿಂದ ವಿಜೃಂಭಣೆಯಿಂದ ಆಚರಿಸಿದರು. ಉತ್ತರ ಪ್ರದೇಶ, ಉತ್ತರಾಖಂಡ, ಜಾರ್ಖಂಡ್, ದೆಹಲಿ ಹಾಗೂ ಹರಿಯಾಣದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಜಲಾಭಿಷೇಕ ನೆರವೇರಿಸಿದರು.
ಏನಿದು ಕನ್ವರ್ ಯಾತ್ರೆ?
ಕನ್ವರ್ ಯಾತ್ರೆಯು ಕನ್ವರ್ಯಾಸ್ ಅಥವಾ ಭೋಲೆ ಎಂದು ಕರೆಯಲ್ಪಡುವ ಶಿವನ ಭಕ್ತರ ವಾರ್ಷಿಕ ತೀರ್ಥ ಯಾತ್ರೆ. ಈ ಸಂದರ್ಭದಲ್ಲಿ ಭಕ್ತರು ಪವಿತ್ರ ಹಿಂದೂ ಯಾತ್ರಾ ಸ್ಥಳಗಳಿಂದ ನೀರನ್ನು ತಂದು ಶಿವನಿಗೆ ಅಭಿಷೇಕ ಮಾಡುತ್ತಾರೆ. ಉತ್ತರಾಖಂಡದ ಹರಿದ್ವಾರ, ಗೌಮುಖ ಮತ್ತು ಗಂಗೋತ್ರಿ ಹಾಗೂ ಭಾಗಲ್ಪುರದ ಅಜ್‌ಗಯ್‌ಬಿನಾಥ್, ಬಿಹಾರದ ಸುಲ್ತಂಗಂಜ್ ಗಂಗಾ ನದಿಯ ಪವಿತ್ರ ನೀರನ್ನು ತಂದು ಶಿವನಿಗೆ ಅಭಿಷೇಕ ಮಾಡಲಾಗುತ್ತದೆ. ಶಿವ ಭಕ್ತರು ಪ್ರತಿ ವರ್ಷ ಶ್ರಾವಣ ಮಾಸದ ಆರಂಭದೊಂದಿಗೆ ಹರಿದ್ವಾರಕ್ಕೆ ತೆರಳುತ್ತಾರೆ. ಕೆಲವರು ಹರಿದ್ವಾರದಿಂದ ಮತ್ತೆ ಕೆಲವರು ಗಂಗಾನದಿಯಿಂದ ಜಲವನ್ನು ತಂದು ಶಿವನಿಗೆ ಅರ್ಪಿಸುತ್ತಾರೆ.