ಈ ಕುಗ್ರಾಮದ ಮಕ್ಕಳ ಪಾಲಿಗೆ ಈಕೆಯೇ ನಿಜವಾದ ಸರಸ್ವತಿ! ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
ಬುಡಕಟ್ಟು ಸಮುದಾಯದ ಮಕ್ಕಳು ಆಧುನಿಕ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಮಾಲತಿ ಮುರ್ಮು ತಮ್ಮ ಮನೆಯನ್ನೇ ಶಾಲೆಯನ್ನಾಗಿಸಿಕೊಂಡಿದ್ದು, ಅವರು ಮಾಡುತ್ತಿರುವ ಈ ಮಾದರಿ ಕಾರ್ಯ ಇದೀಗ ದೇಶದ ಗಮನ ಸೆಳೆಯುತ್ತಿದೆ. ಈಕೆ ತನ್ನ ಪುಟ್ಟ ಮಣ್ಣಿನ ಗೋಡೆಯ ಮನೆಯನ್ನೇ ಈ ಭಾಗದ ಪುಟಾಣಿಗಳ ಪಾಲಿಗೆ ಶಾಲೆ ಪ್ರಾರಂಭ ಮಾಡಿ ಉಚಿತವಾಗಿ ಶಿಕ್ಷಣ ನೀಡಿ ಪರಿವರ್ತನೆ ಮಾಡಿ ಅವರಿಗೆ ಜ್ಞಾನದ ಬೆಳಕನ್ನು ನೀಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ.
ಮಾಲತಿ ಮುರ್ಮು(ಸಾಂದರ್ಭಿಕ ಚಿತ್ರ) -
ಕೋಲ್ಕತ್ತಾ: ನಮ್ಮಲ್ಲಿ ಅದೆಷ್ಟೋ ವ್ಯಕ್ತಿಗಳು ಸದ್ದಿಲ್ಲದೇ ಯಾವುದಾದರು ಒಂದು ರೀತಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುತ್ತಾರೆ. ಅಂತಹ ವ್ಯಕ್ತಿಗಳ ಉತ್ತಮ ಕೆಲಸಗಳು ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬಂದಾಗ ಅದು ಎಷ್ಟೋ ಜನರಿಗೆ ಸ್ಪೂರ್ತಿಯಾಗುತ್ತದೆ. ಅಂತಹ ಒಂದು ವಿಶೇಷ ಸಾಧಕಿಯ ಬಗ್ಗೆ ನಾವು ಇವತ್ತ ನಿಮಗೆ ತಿಳಿಸಿಕೊಡಲಿದ್ದೇವೆ. ಇವರ ಹೆಸರು ಮಾಲತಿ ಮುರ್ಮು (Malati Murmu), ಪಶ್ಚಿಮ ಬಂಗಾಲದ (West Bengal) ಜಿಲಿಂಗ್ ಸೆರೆಂಗ್ ನ(Jilingsereng) ಗ್ರಾಮೀಣ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಈ ಮಹಿಳೆ ಆಶಾವಾದಕ್ಕೆ ನೈಜ ಉದಾಹರಣೆಯಾಗಿ ನಿಲ್ಲುತ್ತಾರೆ. ಈಕೆ ತನ್ನ ಪುಟ್ಟ ಮಣ್ಣಿನ ಗೋಡೆಯ ಮನೆಯನ್ನೇ ಈ ಭಾಗದ ಪುಟಾಣಿಗಳ ಪಾಲಿಗೆ ಉಚಿತ ಶಾಲೆಯನ್ನಾಗಿ ಪರಿವರ್ತನೆ ಮಾಡಿ ಅವರಿಗೆ ಜ್ಞಾನದ ಬೆಳಕನ್ನು ನೀಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಆಧುನಿಕ ಶಿಕ್ಷಣದಿಂದ ಈ ಸಮುದಾಯದ ಮಕ್ಕಳು ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಮರ್ಮು ಮಾಡುತ್ತಿರುವ ಈ ಮಾದರಿ ಕಾರ್ಯ ಇದೀಗ ದೇಶದ ಗಮನ ಸೆಳೆಯುತ್ತಿದೆ.
ಸಂತಾಲಿ ಮತ್ತು ಬೆಂಗಾಲಿ ಭಾಷೆಯನ್ನು ಮಾತನಾಡುವವರಿಗಾಗಿ ನಡೆಸಿಕೊಂಡು ಬರುತ್ತಿರುವ ಈ ಶಾಲೆಯಲ್ಲಿ ಕೇವಲ ಒಬ್ಬರು ಶಿಕ್ಷಕಿ ಮಾತ್ರವಿದ್ದಾರೆ. ಈ ಭಾಗದಲ್ಲಿ ವಾಸಿಸುತ್ತಿರುವ ಸಮುದಾಯದ ಜನರಿಗೆ ತಮ್ಮ ಸುತ್ತಲಿರುವ ನಗರಗಳಿಗೆ ಹೋಗಲು ಸೂಕ್ತ ರಸ್ತೆಗಳು ಮತ್ತು ವಾಹನ ವ್ಯವಸ್ಥೆಗಳು ಇಲ್ಲದೇ ಇರುವ ಕಾರಣ ಇಲ್ಲಿನ ಮಕ್ಕಳಿಗೆ ಶಿಕ್ಷಣವೆಂಬುದು ಗಗನ ಕುಸುಮವಾಗಿತ್ತು. ಮತ್ತು ದೂರದಲ್ಲಿರುವ ಪಟ್ಟಣಕ್ಕೆ ನಡೆದುಕೊಂಡೇ ಹೋಗಬೇಕಾಗಿರುವ ದುಃಸ್ಥಿತಿ ಇಲ್ಲಿನವರದ್ದಾಗಿದೆ.
Happy Teachers Day💐 Not big degrees ahead of the name, not enough money! But Malti Murmu made schools for tribal children. Because the light of education Salute to this struggling mom's unique effort on Teachers Day! @ciet_ncert @EduMinOfIndia @PMOIndia pic.twitter.com/jWPNhVItc8
— Vikram Adsul (@vikiadsul) September 5, 2025
ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಈ ಸಮುದಾಯದವರ ಪಾಲಿಗೆ ಮಾಲತಿ 2019ರಲ್ಲಿ ವರದಾನವಾಗಿ ವಧುವಿನ ರೂಪದಲ್ಲಿ ಈ ಹಳ್ಳಿಗೆ ಆಗಮಿಸುತ್ತಾರೆ. ತಾನು ಈ ಊರಿಗೆ ಮದುವೆಯಾಗಿ ಬಂದ ಸಂದರ್ಭದಲ್ಲಿ ಮಾಲತಿ ಮೊದಲಿಗೆ ಗಮನಿಸುವುದು ಇಲ್ಲಿನ ಹಲವು ಮಕ್ಕಳು ಶಾಲೆಯನ್ನು ಬಿಡುತ್ತಿರುವ ವಿಚಾರ. ಇದಕ್ಕೆ ಕಾರಣ ಅವರಿಗೆ ಶಾಲೆಗೆ ಹೋಗಲು ಇಷ್ಟವಿಲ್ಲವೆಂದಲ್ಲ, ಬದಲಿಗೆ ಅವರಿಗೆ ಪ್ರತೀ ದಿನ ಶಾಲೆಗೆ ಹೋಗಿ ಬುರುವುದು ಕಷ್ಟವಾಗುತ್ತಿತ್ತು. ಇಷ್ಟು ಮಾತ್ರವಲ್ಲದೇ ಈ ಮಕ್ಕಳು ತಮ್ಮ ಮನೆಗೆ ಕಟ್ಟಿಗೆ ತರುವಲ್ಲಿ, ಮನೆಕೆಲಸಗಳಲ್ಲಿ ಸಹಾಯ ಮಾಡುವ ಅನಿವಾರ್ಯತೆಯೂ ಅವರನ್ನು ಶಾಲೆಯಿಂದ ವಿಮುಖರಾಗುವಂತೆ ಮಾಡುತ್ತಿತ್ತು. ಮತ್ತು ಇವರಿಗೆ ಸಮೀಪವಿರುವ ಸರಕಾರಿ ಶಾಲೆಗೆ ಹೋಗಬೇಕೆಂದರೆ ಮೈಲುಗಟ್ಟಲೆ ನಡೆದುಕೊಂಡೇ ಸಾಗಬೇಕಿತ್ತು.
ಈ ಸುದ್ದಿಯನ್ನೂ ಓದಿ: Viral Video: ನ್ಯಾಯ ಕೊಡಿ ಎಂದ ಅತ್ಯಾಚಾರ ಸಂತ್ರಸ್ತೆ ಗೋಳಾಟ! ಪೊಲೀಸ್ ಉಪ ಮಹಾನಿರ್ದೇಶಕರ ಕಚೇರಿ ಬಳಿ ಹೈಡ್ರಾಮಾ, ಇಲ್ಲಿದೆ ವಿಡಿಯೊ
ಆ ಶಾಲೆ ಭಾಗ್ ಮುಂಡಿ ಎಂಬ ಪ್ರದೇಶದಲ್ಲಿತ್ತು. ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಮಾಲತಿ 2020ರಲ್ಲಿ ತನ್ನೂರಲ್ಲೇ, ತನ್ನ ಮನೆಯನ್ನೇ ಶಾಲೆಯನ್ನಾಗಿ ಪರಿವರ್ತಿಸುತ್ತಾರೆ. ಇದಕ್ಕೂ ಮೊದಲು ಬಡತನ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಇಲ್ಲಿನ ಬಹುತೇಕ ಮಕ್ಕಳು ಶಾಲೆಗಳಿಗೇ ಹೋಗುತ್ತಿರಲಿಲ್ಲ ಎಂಬ ವಿಚಾರವನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತನ್ನ ಪತಿಯ ಸಹಕಾರದಿಂದ ಮಾಲತಿ, ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒಟ್ಟುಗೂಡಿಸಿ ಈ ಶಾಲೆಯನ್ನು ಪ್ರಾರಂಭಿಸುತ್ತಾರೆ.
ಹಾಗೆಂದು ಮಾಲತಿ ಯಾವುದೇ ರೀತಿಯ ಶಿಕ್ಷಕ ತರಬೇತಿಯನ್ನು ಪಡೆದುಕೊಂಡವರಲ್ಲ. ಈಕೆ 12ನೇ ತರಗತಿವರೆಗೆ ಓದಿಕೊಂಡಿದ್ದರು. ಆದರೆ ಇದೆಲ್ಲಾ ಆಕೆಯ ಶಿಕ್ಷಣ ಯಜ್ಞಕ್ಕೆ ಅಡ್ಡಿಯಾಗಲೇ ಇಲ್ಲ. ಕೋವಿಡ್ ಸಂಧರ್ಭದಲ್ಲಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಗಿ ಬಂದಿತ್ತು. ಗ್ರಾಮೀಣ ಭಾಗವಾಗಿದ್ದ ಕಾರಣ ಇಲ್ಲಿ ಆನ್ ಲೈನ್ ತರಗತಿಗಳನ್ನು ನಡೆಸಲೂ ಸಾಧ್ಯವಿರಲಿಲ್ಲ. ಈಕೆ ಇಲ್ಲಿ ಶಾಲೆಯನ್ನು ಸ್ಥಳಿಯರ ಸಹಕಾರದಿಂದ ಮಣ್ಣಿನ ಗೋಡೆಯ ರಚನೆಯಲ್ಲಿ ರಚಿಸಿಕೊಂಡಿರುವುದು ವಿಶೇಷ.
ಮಾಲ್ತಿಬಾಲಾ ಎಂದೇ ಹೆಸರಿರುವ ಈ ಶಾಲೆಯಲ್ಲಿ ಪ್ರಸ್ತುತ 45 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪಶ್ಚಿಮ ಬಂಗಾಲದ ತೀರಾ ಕುಗ್ರಾಮವಾಗಿರುವ ಈ ಪ್ರದೇಶದ ಮಕ್ಕಳಿಗೆ ಅಕ್ಷರ ಜ್ಞಾನವನ್ನು ಧಾರೆಯೆರೆಯುತ್ತಿರುವ ಮಾಲತಿ ಮುರ್ಮು ಇಲ್ಲಿನವರ ಪಾಲಿಗೆ ನಿಜವಾದ ‘ಸರಸ್ವತಿ’ಯಾಗಿದ್ದಾರೆ.