Viral Video: ವಿಮಾನದಲ್ಲೇ ಪ್ರಯಾಣಿಸಿದ್ರೂ ಗುಟ್ಕಾ ಮಾತ್ರ ಬಿಡಲ್ಲ! ಈ ವಿಡಿಯೊ ನೋಡಿ
Man Caught Crushing Gutka: ವಿಮಾನದಲ್ಲಿ ಪ್ರಯಾಣಿಸುವಾಗ ವ್ಯಕ್ತಿಯೊಬ್ಬ ತನ್ನ ಅಂಗೈಯಲ್ಲಿ ಗುಟ್ಕಾ (ತಂಬಾಕು) ಪುಡಿಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೆಲವು ಬಳಕೆದಾರರು ಈ ಬಗ್ಗೆ ಟೀಕಿಸಿದರೆ, ಇನ್ನೂ ಕೆಲವರು ಆ ವ್ಯಕ್ತಿಯ ಪರವಾಗಿ ಮಾತನಾಡಿದ್ದಾರೆ.

-

ನವದೆಹಲಿ: ಪ್ರಯಾಣ ಮಾಡುವಾಗ ನಮ್ಮ ನಡವಳಿಕೆಗಳು ಹೇಗಿರುತ್ತವೆ ಅನ್ನೋದನ್ನು ಸುತ್ತಮುತ್ತಲಿನ ಜನ ನೋಡುತ್ತಿರುತ್ತಾರೆ. ರೈಲು, ಬಸ್ ಅಥವಾ ವಿಮಾನದಲ್ಲಿ (flight) ಪ್ರಯಾಣಿಸುವಾಗ, ಪ್ರಯಾಣಿಕರು ಸಾಮಾನ್ಯವಾಗಿ ಏನಾದರೂ ತಿನ್ನುವುದು, ಮಾತನಾಡುವುದು ಅಥವಾ ಇತ್ಯಾದಿ ಏನಾದರೂ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಕೆಲವೊಮ್ಮೆ ಸಣ್ಣ ಕ್ರಿಯೆಗಳು ಸಹ ಎದ್ದು ಕಾಣುತ್ತವೆ, ಅದು ಎಲ್ಲರ ಗಮನವನ್ನು ಸೆಳೆಯುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ (Viral Video) ಖಂಡಿತಾ ನಿಮಗೆ ಅಚ್ಚರಿ ತರುವುದರಲ್ಲಿ ಸಂಶಯವಿಲ್ಲ.
ಥೈಲ್ಯಾಂಡ್ (Thailand) ಗೆ ತೆರಳುತ್ತಿದ್ದ ವಿಮಾನದಲ್ಲಿ ಇಂತಹ ಘಟನೆ ನಡೆದಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ನಾಗರಿಕ ಪ್ರಜ್ಞೆಯ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ಪ್ರಯಾಣಿಕನೊಬ್ಬ ತನ್ನ ಪಕ್ಕದ ವ್ಯಕ್ತಿಯೊಂದಿಗೆ ಮಾತನಾಡುತ್ತಾ ತನ್ನ ಅಂಗೈಯಲ್ಲಿ ಗುಟ್ಕಾ (ತಂಬಾಕು) ಪುಡಿಮಾಡುತ್ತಿರುವುದು ಕಂಡುಬಂದಿದೆ. ವಿಮಾನ ಹಾರಾಟದ ಸಮಯದಲ್ಲಿ, ಕಪ್ಪು ಟಿ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬ, ಭಾರತದಲ್ಲಿ ಜನಪ್ರಿಯವಾಗಿರುವ ತಂಬಾಕಿನ ಒಂದು ರೂಪವಾದ ಗುಟ್ಕಾವನ್ನು ತನ್ನ ಅಂಗೈಯಲ್ಲಿ ಪುಡಿಮಾಡುತ್ತಿರುವುದು ಕಂಡುಬಂದಿದೆ. ಅವನು ತನ್ನ ಪಕ್ಕದ ಪ್ರಯಾಣಿಕನೊಂದಿಗೆ ಮಾತನಾಡುತ್ತಾ ಅದನ್ನು ಉಜ್ಜುತ್ತಲೇ ಇದ್ದನು.
ಸಹ ಪ್ರಯಾಣಿಕನೊಬ್ಬ ಈ ಕೃತ್ಯವನ್ನು ರೆಕಾರ್ಡ್ ಮಾಡಿದ್ದು, ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಭಾರಿ ವೈರಲ್ ಆಗಿದೆ. ವಿಮಾನದ ತನ್ನ ಆಸನದಲ್ಲಿ ಕುಳಿತಿರುವ ಆತ ತನ್ನ ಅಂಗೈಯಲ್ಲಿ ಗುಟ್ಟಾ ಉಜ್ಜುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ವಿಡಿಯೊ ನೋಡಿದ ನೆಟ್ಟಿಗರು ಕಿಡಿಕಾರಿದ್ದಾರೆ.
ವಿಡಿಯೊ ವೀಕ್ಷಿಸಿ:
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ, ಈ ವಿಡಿಯೊ ಸಾಮಾಜಿಕ ಮಾಧ್ಯಮ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಆ ವ್ಯಕ್ತಿಯ ನಡವಳಿಕೆಯನ್ನು ಶಿಷ್ಟಾಚಾರದ ಲೋಪ ಎಂದು ಹಲವರು ಟೀಕಿಸಿದ್ದಾರೆ. ವಿಮಾನದಲ್ಲಿ ಗುಟ್ಕಾ ಸೇವಿಸಲು ಅವಕಾಶ ನೀಡಿದವರು ಯಾರು? ಇದರರ್ಥ ಭದ್ರತಾ ತಪಾಸಣೆಯಲ್ಲಿ ಅವರನ್ನು ಸರಿಯಾಗಿ ಪರಿಶೀಲಿಸಲಾಗಿಲ್ಲ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಭಾರತೀಯರನ್ನು ಎಲ್ಲರೂ ಏಕೆ ದ್ವೇಷಿಸುತ್ತಾರೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಆ ವ್ಯಕ್ತಿಗೆ ಇನ್ಮುಂದೆ ವಿಮಾನದಲ್ಲಿ ಪ್ರಯಾಣಿಸದಂತೆ ನಿಷೇಧ ಹೇರಬೇಕು. ಅಲ್ಲದೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬರು ಆಗ್ರಹಿಸಿದರು. ನಾಗರಿಕ ಪ್ರಜ್ಞೆಯ ವಿಷಯದಲ್ಲಿ, ಭಾರತವನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ ಎಂದು ಮಗದೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral News: ಕಸದ ಲಾರಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಔಷಧ ಸಾಗಾಟ; ವೈದ್ಯನ ಅಮಾನತು
ಈ ಘಟನೆಯು ದ್ವಿಮುಖ ನೀತಿಗಳ ಬಗ್ಗೆ ಚರ್ಚೆಗಳಿಗೂ ಕಾರಣವಾಯಿತು. ಕೆಲವು ಬಳಕೆದಾರರು ವಿಮಾನಗಳಲ್ಲಿ ಮದ್ಯವನ್ನು ಏಕೆ ಅನುಮತಿಸಲಾಗಿದೆ? ಆದರೆ ಗುಟ್ಕಾಗೆ ಮಾತ್ರ ಈ ನಿಮಯವೇಕೆ ಎಂಬ ಆಕ್ರೋಶಕ್ಕೆ ಕಾರಣವಾಗಿದೆ. ವಿಮಾನದಲ್ಲಿ ವೈನ್ ಕುಡಿಯುವುದು ಕ್ಲಾಸಿ, ಆದರೆ ಗುಟ್ಕಾ ತಿನ್ನುವುದು ಕ್ಷುಲ್ಲಕ ನಡವಳಿಕೆ? ಇದು ಸರಿಯಾ ಎಂದು ಒಬ್ಬ ವ್ಯಕ್ತಿ ಪ್ರಶ್ನಿಸಿದ್ದಾರೆ.
ಬಿಸಿನೆಸ್ ಕ್ಲಾಸ್‌ನಲ್ಲಿರುವ ಜನರು ಮದ್ಯ ಸೇವಿಸಬಹುದು. ಆದರೆ ಮಧ್ಯಮ ವರ್ಗದ ಪ್ರಯಾಣಿಕರು ಏನಾದರೂ ಮಾಡಿದರೆ ಅದು ದೊಡ್ಡ ಸಮಸ್ಯೆಯಾಗುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಆ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆ ವ್ಯಕ್ತಿಯು ಯಾರಿಗೂ ತೊಂದರೆಯನ್ನುಂಟು ಮಾಡಿಲ್ಲ ಎಂದು ಹೇಳಿದರು.
ಅವನು ಆ ಸ್ಥಳವನ್ನು ಕೊಳಕು ಮಾಡದಿದ್ದರೆ ಮತ್ತು ಅಲ್ಲೇ ಉಗುಳದಿದ್ದರೆ, ಅವನು ಯಾರಿಗೂ ತೊಂದರೆ ಕೊಡುತ್ತಿಲ್ಲ ಎಂದು ಬಳಕೆದಾರರೊಬ್ಬರು ಹೇಳಿದರು. ಗುಟ್ಕಾ ಮತ್ತು ಪಾನ್ ನಿಷೇಧಿಸುವುದರಿಂದ ಭಾರತವನ್ನು ಅಕ್ಷರಶಃ ಶೇಕಡ 65 ರಷ್ಟು ಸ್ವಚ್ಛವಾಗಿಸಬಹುದು. ಆದರೆ ನಮ್ಮ ಸರ್ಕಾರ ಹಾಗೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಭಾರತದಲ್ಲಿನ ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ವಿಮಾನಗಳಲ್ಲಿ ಇಂತಹ ವರ್ತನೆ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. 2023 ರಲ್ಲಿ, ಇಂಡಿಗೋ ವಿಮಾನದಲ್ಲಿ, ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಗಗನಸಖಿಗೆ ಕರೆ ಮಾಡಿ, ಕ್ಷಮಿಸಿ, ನೀವು ಕಿಟಕಿ ತೆರೆಯಬಹುದೇ? ನಾನು ಗುಟ್ಕಾ ಉಗುಳಬೇಕು ಎಂದು ಹೇಳಿದ್ದರು. ಈ ಮಾತಿಗೆ ಗಗನಸಖಿ ನಕ್ಕಿದ್ದರು. ಈ ವಿಡಿಯೊ ವೈರಲ್ ಆಗಿತ್ತು.