ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಧೂಮಪಾನ ಮಾಡಿ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ ಟೆಕ್ಕಿ; ಶಿಕ್ಷಣ ಇದ್ದರೆ ಸಾಲದು ಸಂಸ್ಕಾರವೂ ಬೇಕು ಎಂದ ನೆಟ್ಟಿಗರು
Viral Video: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗೂಗಲ್ ತಂತ್ರಜ್ಞನೊಬ್ಬ ಧೂಮಪಾನ ಮಾಡಿದ್ದಲ್ಲದೆ ಪ್ರಶ್ನಿಸಿದವರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತನ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣದಲ್ಲೇ ಧೂಪಪಾನ ಮಾಡಿದ ವ್ಯಕ್ತಿ -
ಬೆಂಗಳೂರು, ಮಾ. 30: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೆಂಗಳೂರು ವಿಮಾನ ನಿಲ್ದಾಣದ ಒಳಗಿನ ಟಾರ್ ರಸ್ತೆಯಲ್ಲಿ ಗೂಗಲ್ ತಂತ್ರಜ್ಞನೊಬ್ಬ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ. ಅದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೂ ಆತ ಅಸಭ್ಯವಾಗಿ ವರ್ತಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ವೈರಲ್ ವಿಡಿಯೊದಲ್ಲಿ ಅಲ್ಲಿನ ಸಿಬ್ಬಂದಿ ಆ ವ್ಯಕ್ತಿಗೆ ಆ ಪ್ರದೇಶದಲ್ಲಿ ಧೂಮಪಾನವನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪದೇ ಪದೆ ತಿಳಿಸಿದರೂ ಅದನ್ನು ನಿರ್ಲಕ್ಷಿಸಿ ಆತ ತನ್ನ ಕೃತ್ಯ ಮುಂದುವರಿಸಿರುವುದು ಕಂಡು ಬಂದಿದೆ.
ವಿಡಿಯೊ ನೋಡಿ:
ವಿಮಾನ ನಿಲ್ದಾಣದ ಸುರಕ್ಷಿತ ಪ್ರದೇಶವಾದ 'ಟಾರ್ಮ್ಯಾಕ್'ನಲ್ಲಿಯೇ ಆತ ಧೂಮಪಾನ ಮಾಡಿದ್ದಾನೆ. ಅದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ವಿಡಿಯೊದಲ್ಲಿರುವ ವ್ಯಕ್ತಿಯನ್ನು ಉತ್ಕರ್ಷ್ ಗೌತಮ್ ಎಂದು ಗುರುತಿಸಲಾಗಿದೆ.
282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ
ವಿಮಾನ ನಿಲ್ದಾಣದ ಈ ಭಾಗದಲ್ಲಿ ಇಂಧನ ತುಂಬುವ ಪ್ರಕ್ರಿಯೆ ಇರುವುದರಿಂದ ಇದು ಅಪಾಯಕಾರಿ. ಇಲ್ಲಿ ಬೆಂಕಿ ಅಥವಾ ಕಿಡಿ ಹಾರಿದರೆ ಭಾರಿ ಅನಾಹುತವಾಗಲಿದೆ. ಉತ್ಕರ್ಷ್ ಗೌತಮ್ ಈ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾನೆ. ಭದ್ರತಾ ಸಿಬ್ಬಂದಿ ಧೂಮಪಾನ ಮಾಡದಂತೆ ಕೇಳಿಕೊಂಡಾಗ ''ಧೂಮಪಾನ ಮಾಡಬಾರದು ಎಂಬ ನಿಯಮ ಎಲ್ಲಿದೆ ನನಗೆ ತೋರಿಸಿ" ಎಂದು ಕಿಡಿಕಾರಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಆತನ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿಮಾನ ನಿಲ್ದಾಣಗಳಲ್ಲಿನ ಭದ್ರತಾ ಪ್ರೋಟೋಕಾಲ್‌ಗಳ ಉಲ್ಲಂಘನೆಯ ಗಂಭೀರತೆಯನ್ನು ಇದು ಎತ್ತಿ ತೋರಿಸಿದೆ. ವಿಮಾನ ನಿಲ್ದಾಣಗಳು ಹೆಚ್ಚಿನ ಭದ್ರತಾ ವಲಯಗಳಾಗಿವೆ. ಅಲ್ಲಿ ಯಾವುದೇ ನಿಯಮ ಉಲ್ಲಂಘನೆಯಾದರೆ ಅದರನ್ನು ಸಂಪೂರ್ಣವಾಗಿ ತನಿಖೆ ನಡೆಸಬೇಕು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.