ಮಾನವೀಯತೆಯನ್ನೇ ಮರೆತ ಜನ: ಟ್ರಕ್ ಅಪಘಾತದಲ್ಲಿ ಗಾಯಗೊಂಡವರನ್ನು ಉಪಚರಿಸುವ ಬದಲು ಮೇಕೆ ಹೊತ್ತೊಯ್ದ ಸ್ಥಳೀಯರು
Viral Video: ಮೇಕೆ ತುಂಬಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಸ್ಥಳೀಯರು ಮಾನವೀಯತೆಯನ್ನೇ ಮರೆತು ವರ್ತಿಸಿದ್ದಾರೆ. ಅಪಘಾತಕ್ಕೀಡಾದವರನ್ನು ರಕ್ಷಿಸುವ ಬದಲು ರಸ್ತೆಯಲ್ಲಿ ಬಿದ್ದಿದ್ದ ಮೇಕೆಗಳನ್ನು ಹೊತ್ತೊಯ್ದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಯಾಳುಗಳಿಗೆ ನೆರವಾಗುವ ಬದಲು ಮೇಕೆಗಳನ್ನು ದೋಚಿದ ಜನ -
ಲಖನೌ, ಮೇ 26: ಇತ್ತೀಚೆಗೆ ಮಾನವೀಯತೆ ಅನ್ನೋದು ಮರೆಯಾಗಿದೆ ಎನ್ನುವ ಮಾತು ಆಗಾಗ ಕೇಳುತ್ತಲೇ ಇದ್ದೇವೆ. ಯಾವುದಾದರೂ ಅಪಾಯ ಅಥವಾ ಅಪಘಾತ ಎದುರಾದಾಗ ಜನರು ಸಹಾಯ ಹಸ್ತ ಚಾಚುವ ಬದಲು ಅದರಿಂದ ಲಾಭ ಮಾಡಿಕೊಳ್ಳಲು ಮುಂದಾಗುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೇಕೆಗಳನ್ನು ಸಾಗಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸ್ಥಳೀಯರು ಅಪಘಾತಕ್ಕೀಡಾದವರನ್ನು ರಕ್ಷಿಸುವ ಬದಲು ರಸ್ತೆಯಲ್ಲಿ ಬಿದ್ದಿದ್ದ ಮೇಕೆಗಳನ್ನು ಹೊತ್ತೊಯ್ದಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಜನರ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಅಪಘಾತ ಸಂಭವಿಸಿದಾಗ ಜನರು ನೆರವಿಗೆ ಧಾವಿಸಬೇಕು. ಆದರೆ ಸ್ವಾರ್ಥವೇ ತುಂಬಿದ ಜನ ತಮ್ಮ ಲಾಭವನ್ನೇ ನೋಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಗಾಯಾಳುಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಚೀರಾಡುತ್ತಿದ್ದರೆ ಸ್ಥಳೀಯರು ಅವರ ರಕ್ಷಣೆಗೆ ಮುಂದಾಗದೆ ಮೇಕೆಗಳನ್ನು ಒಯ್ಯಲು ಮುಗಿ ಬಿದ್ದಿದ್ದಾರೆ.
ವಿಡಿಯೊ ನೋಡಿ:
कौशांबी में अनियंत्रित होकर पलटा बकरियों से भरा ट्रक। ट्रक पलटते ही स्थानीय लोगों में बकरियों को लूटने की मची होड़।कोखराज थाना क्षेत्र के टेढ़ी मोड़ के पास हुआ भीषण हादसा।बकरी लूटने की अफ़रातफ़री का वीडियो सोशल मीडिया पर वायरल।@Uppolice@kaushambipolice@IgPrayagraj pic.twitter.com/fVxs9RoAiW
— Johit Kumar (Journalist) (@JohitKumar30938) May 24, 2026
200ಕ್ಕೂ ಹೆಚ್ಚು ಮೇಕೆಗಳನ್ನು ಸಾಗಿಸುತ್ತಿದ್ದ ಟ್ರಕ್ ಅಪಘಾತವಾಗಿದ್ದು, ನಾಲ್ವರು ಗಾಯಗೊಂಡು 20ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿವೆ. ಕೋಖ್ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಡವಾ ತೇಧಿ ತಿರುವಿನಲ್ಲಿ ಈ ಭೀಕರ ಅಪಘಾತ ನಡೆದಿದೆ. ಟ್ರಕ್ ರಸ್ತೆಬದಿಯಲ್ಲಿ ಉರುಳಿ ಬೀಳುತ್ತಿದ್ದಂತೆ ಮೇಕೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದ ಪರಿಣಾಮ ಹಲವು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಟ್ರಕ್ನಲ್ಲಿದ್ದ ಅನೇಕರು ಗಾಯಗೊಂಡಿದ್ದಾರೆ. ಆದರೆ ಈ ಅಪಘಾತದ ಶಬ್ದ ಕೇಳಿ ಓಡಿ ಬಂದ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸುವ ಬದಲು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೇಕೆಗಳನ್ನು ಎತ್ತಿಕೊಂಡು ಓಡಲು ಮುಂದಾಗಿದ್ದಾರೆ.
ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ
ಅಪಘಾತದ ಸ್ಥಳದ ಸುತ್ತಲೂ ಸ್ಥಳೀಯರು ಜಮಾಯಿಸಿದ್ದರಿಂದ ಮಾರ್ಗದಲ್ಲಿ ಸಂಚಾರಕ್ಕೆ ಕೂಡ ತೊಂದರೆ ಉಂಟಾಯಿತು. ಗಾಯಾಳುಗಳು ನೋವಿನಿಂದ ನರಳುತ್ತಿದ್ದರೂ ಜನ ಮಾತ್ರ ಮೇಕೆಗಳನ್ನು ಲೂಟಿ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಸದ್ಯ ಈ ದೃಶ್ಯಗಳು ಟೀಕೆಗೆ ಗುರಿಯಾಗಿದ್ದು, ಇವರು ಎಂತಹ ಕಟುಕರು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಕೊಖ್ರಾಜ್ ಪೊಲೀಸ್ ಠಾಣೆ ಮತ್ತು ಶಹಜಾದ್‌ಪುರ ಹೊರ ಠಾಣೆಯಿಂದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಧಿಕಾರಿಗಳು ಕ್ರೇನ್ ಬಳಸಿ ಪಲ್ಟಿಯಾದ ಟ್ರಕ್ ತೆರವುಗೊಳಿಸಿದ ರಸ್ತೆಯ ಅಡೆತಡೆ ನಿವಾರಿಸಿದ್ದಾರೆ.