ʻಲಂಬೋದರ 2.0ʼ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಬಾಲಿವುಡ್ ನಟ ಕುನಾಲ್ ಕಪೂರ್; ಇದು ʻಸಿಂಪಲ್ʼ ಸುನಿ ಸಿನಿಮಾ
ನಿರ್ದೇಶಕ 'ಸಿಂಪಲ್' ಸುನಿ ಅವರ ಸೈ-ಫೈ ಸೋಶಿಯಲ್ ಥ್ರಿಲ್ಲರ್ 'ಲಂಬೋದರ 2.0' ಚಿತ್ರಕ್ಕೆ ಬಾಲಿವುಡ್ ನಟ ಕುನಾಲ್ ಕಪೂರ್ ಪ್ರಮುಖ ಪಾತ್ರದ ಮೂಲಕ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅನಿಲ್ ಶೆಟ್ಟಿ ನಾಯಕನಾಗಿ ಹಾಗೂ ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
-
ಸ್ಯಾಂಡಲ್‌ವುಡ್ ನಿರ್ದೇಶಕ ‘ಸಿಂಪಲ್’ ಸುನಿ ಆಕ್ಷನ್ ಕಟ್ ಹೇಳುತ್ತಿರುವ, ಸೈನ್ಸ್-ಫಿಕ್ಷನ್ ಸೋಶಿಯಲ್ ಥ್ರಿಲ್ಲರ್ ‘ಲಂಬೋದರ 2.0’ ಚಿತ್ರಕ್ಕೆ ಬಾಲಿವುಡ್‌ನ ಖ್ಯಾತ ನಟ ಕುನಾಲ್ ಕಪೂರ್ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್‌ನ ಕ್ಲಾಸಿಕ್ ಸಿನಿಮಾ 'ರಂಗ್ ದೇ ಬಸಂತಿ', ಶಾರುಖ್ ಖಾನ್ ನಟನೆಯ 'ಡಾನ್ 2', 'ವೀರಂ' ಮತ್ತು 'ಡಿಯರ್ ಜಿಂದಗಿ' ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಗುರುತಿಸಿಕೊಂಡಿರುವ ಕುನಾಲ್ ಕಪೂರ್, ಲಂಬೋದರ 2.0 ಚಿತ್ರದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.
ಇನ್ನುಳಿದಂತೆ ಈ ಚಿತ್ರದ ಮೂಲಕ ಖ್ಯಾತ ನಿರ್ಮಾಪಕ ಹಾಗೂ ಬರಹಗಾರ ಅನಿಲ್ ಶೆಟ್ಟಿ ಅವರು ನಾಯಕ ನಟನಾಗಿ ಪ್ರಥಮ ಬಾರಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸುತ್ತಿರುವುದು ವಿಶೇಷ.
ಇದು ಕೃತಕ ಬುದ್ಧಿಮತ್ತೆ (AI) ಪ್ರಪಂಚದ ಕಥೆ
‘ಲಂಬೋದರ 2.0’ ಸಿನಿಮಾವು ಇಂದಿನ ಸೋಶಿಯಲ್ ಮೀಡಿಯಾ ತಲೆಮಾರಿನ (Gen Z) ವಾಸ್ತವಿಕ ಜೀವನ ಮತ್ತು ಕೃತಕ ಬುದ್ಧಿಮತ್ತೆ (Artificial Intelligence) ಜಗತ್ತಿನ ಸುತ್ತ ಸಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಮನುಷ್ಯ ಅನುಭವಿಸುತ್ತಿರುವ ಒಂಟಿತನ, ಸಾಮಾಜಿಕ ಜಾಲತಾಣಗಳ ಅತಿಯಾದ ಚಟ, ನಕಲಿ ಪ್ರಶಂಸೆಗಳ ಹಿಂದಿನ ಅಲೆದಾಟ, ಸಂತೋಷ ಹಾಗೂ ಎಐ ತಂತ್ರಜ್ಞಾನದ ಮೂಲಕ ನಡೆಯುವ ಮಾನಸಿಕ ನಿಯಂತ್ರಣದಂತಹ ಸಮಕಾಲೀನ ವಿಷಯಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲಲಿದೆಯಂತೆ.
ತಂತ್ರಜ್ಞಾನ, ತತ್ತ್ವಶಾಸ್ತ್ರ, ಸಸ್ಪೆನ್ಸ್ ಹಾಗೂ ಎಮೋಷನಲ್ ಡ್ರಾಮಾವನ್ನು ಒಳಗೊಂಡಿರುವ ಹೊಸ ಮಾದರಿಯ ಸೋಶಿಯಲ್ ಥ್ರಿಲ್ಲರ್ ಇದಾಗಿದೆ. ಅನಿಲ್ ಶೆಟ್ಟಿ ಅವರ ಸ್ವಂತ ಬ್ಯಾನರ್ ಆದ ‘ಮಾಸ್ ಪ್ರೊಡಕ್ಷನ್’ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ವೀರ್ ಸಮರ್ಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
Moda Kavida Vatavarana: ಸಿಂಪಲ್ ಸುನಿ ಹೊಸ ಸಿನಿಮಾ ಘೋಷಣೆ; ‘ಮೋಡ ಕವಿದ ವಾತಾವರಣಕ್ಕೆ ಹೀರೋ ಆದ ಶೀಲಮ್
"ಸ್ಯಾಂಡಲ್‌ವುಡ್‌ಗೆ ಸುಸ್ವಾಗತ ಕುನಾಲ್ ಕಪೂರ್ ಸರ್. ನಮ್ಮ ʻಲಂಬೋದರ 2.0ʼ ಚಿತ್ರತಂಡದ ಪರವಾಗಿ ನಿಮಗೆ ಆತ್ಮೀಯ ಸ್ವಾಗತ. ಈ ʻಲಂಬೋದರ 2.0ʼ ಚಿತ್ರದ ಮೂಲಕ ಅನಿಲ್ ಶೆಟ್ಟಿ ಅವರು ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಜೊತೆಗೆ, ಬಾಲಿವುಡ್ ನಟಿ ಸಾಚಿ ಬಿಂದ್ರಾ ಕೂಡ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ʻಲಂಬೋದರ 2.0ʼ ಒಂದು ಸೈ-ಫೈ ಸೋಶಿಯಲ್ ಥ್ರಿಲ್ಲರ್ ಚಿತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಿಂದ ತೀವ್ರವಾಗಿ ಪ್ರಭಾವಿತರಾಗಿರುವ ಇಂದಿನ ಯುವ ಪೀಳಿಗೆಯ ಗೊಂದಲಮಯ ಹಾಗೂ ಸಂಕೀರ್ಣ ಜೀವನವನ್ನು ಇದು ಅನಾವರಣಗೊಳಿಸುತ್ತದೆ" ಎಂದು ನಿರ್ದೇಶಕ ಸಿಂಪಲ್ ಸುನಿ ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ?
ಸದ್ಯ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರತಂಡವು ಸೆಪ್ಟೆಂಬರ್ ತಿಂಗಳಿನಲ್ಲಿ ಸಿನಿಮಾವನ್ನು ಚಿತ್ರಮಂದಿರಗಳಿಗೆ ತರಲು ಸಜ್ಜಾಗಿದೆ. ಕಥೆಯು ಇಡೀ ಜಗತ್ತಿಗೆ ಹಾಗೂ ಇಂದಿನ ಯುವ ಪೀಳಿಗೆಗೆ ಹೆಚ್ಚು ಕನೆಕ್ಟ್ ಆಗುವಂತದ್ದಾಗಿರುವುದರಿಂದ, ಚಿತ್ರವನ್ನು ದೊಡ್ಡಮಟ್ಟದಲ್ಲಿ ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲು ತಂಡ ಯೋಜಿಸಿದೆ.