ರಸ್ತೆ ನಿರ್ಮಿಸಲು ಆಗದಿದ್ದರೆ ಹೆಲಿಕಾಪ್ಟರ್ ಕೊಡಿ: ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ ಬರೆದ ಛತ್ತೀಸ್‌ಗಢ ಗ್ರಾಮಸ್ಥರು
Chhattisgarh villagers write to Amit Shah: ದೇಶದ ಗ್ರಾಮೀಣ ಭಾಗಗಳಲ್ಲಿ ಹಲವು ಕಡೆ ಇನ್ನೂ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಈ ನಡುವೆ ಇಲ್ಲೊಂದೆಡೆ ಗ್ರಾಮಸ್ಥರು ಕೇಂದ್ರ ಸರ್ಕಾರಕ್ಕೆ ವಿಶಿಷ್ಟ ಬೇಡಿಕೆಯನ್ನಿಟ್ಟಿದ್ದಾರೆ. ತಮಗೆ ಉತ್ತಮ ರಸ್ತೆ ನಿರ್ಮಿಸಿ ಕೊಡಲು ಸಾಧ್ಯವಾಗದಿದ್ದರೆ, ಹೆಲಿಕಾಪ್ಟರ್‌ಗಳನ್ನು ಕೊಡಿ ಎಂದು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ನಿವಾಸಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿನ ಅಪೂರ್ಣ ರಸ್ತೆ -
ರಾಯ್ಪುರ್, ಮೇ 26: ದೇಶದ ಗ್ರಾಮೀಣ ಭಾಗದ ಹಲವು ಕಡೆ ಇನ್ನೂ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ಇಲ್ಲೊಂದೆಡೆ ಬೇಸೆತ್ತ ಗ್ರಾಮಸ್ಥರು ಕೇಂದ್ರ ಸರ್ಕಾರಕ್ಕೆ (Central Government) ವಿಶಿಷ್ಟ ಬೇಡಿಕೆಯನ್ನಿಟ್ಟಿದ್ದಾರೆ. ತಮಗೆ ಉತ್ತಮ ರಸ್ತೆಗಳನ್ನು ನಿರ್ಮಿಸಿ ಕೊಡಲು ಸಾಧ್ಯವಾಗದಿದ್ದರೆ, ಹೆಲಿಕಾಪ್ಟರ್‌ಗಳನ್ನು ಕೊಡಿ ಎಂದು ಛತ್ತೀಸ್‌ಗಢದ (Chhattisgarh) ಸುಕ್ಮಾ ಜಿಲ್ಲೆಯ ಬುಡಕಟ್ಟು ಹಳ್ಳಿಯ ನಿವಾಸಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿದ್ದಾರೆ. ಆ ಪ್ರದೇಶದ ಮತ್ತು ಸುತ್ತಮುತ್ತಲಿನ ರಸ್ತೆಗಳ ಶೋಚನೀಯ ಸ್ಥಿತಿಯ ಬಗ್ಗೆ ಅವರು ಈ ಮೂಲಕ ತಿಳಿಸಿದ್ದಾರೆ.
ಮಾರುಕಿ ಗ್ರಾಮದ ಗ್ರಾಮಸ್ಥರು ಈ ರೀತಿ ಮನವಿ ಮಾಡಿಕೊಂಡಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ. ಕಳಪೆ ಮೂಲಸೌಕರ್ಯ, ಅಪೂರ್ಣ ರಸ್ತೆ ಕಾಮಗಾರಿ ಮತ್ತು ಪದೇ ಪದೆ ಭರವಸೆ ನೀಡಿದರೂ ಅಧಿಕಾರಿಗಳು ನಿರಾಸಕ್ತಿ ತೋರುತ್ತಿರುವುದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾರುಕಿಯನ್ನು ಸಂಪರ್ಕಿಸುವ ರಸ್ತೆ ಸುಮಾರು 10 ವರ್ಷಗಳಿಂದ ಅಪೂರ್ಣವಾಗಿಯೇ ಉಳಿದಿದೆ. ಗುತ್ತಿಗೆದಾರರು ದೊಡ್ಡ ಹೊಂಡಗಳನ್ನು ಅಗೆದು ಸೇತುವೆಗಳು ಮತ್ತು ಕಲ್ವರ್ಟ್‌ಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಆದರೆ ಯೋಜನೆಯನ್ನು ಅರ್ಧಕ್ಕೆ ಕೈಬಿಟ್ಟರು. ಇದರಿಂದಾಗಿ ಜಲ್ಲಿಕಲ್ಲು ಮತ್ತು ಗುಂಡಿಗಳಿಂದ ತುಂಬಿದ ಹಾನಿಗೊಳಗಾದ ರಸ್ತೆಯಲ್ಲಿ ಸಂಚರಿಸಬೇಕಾದ ದುರ್ಗತಿ ಬಂದೊದಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಛತ್ತೀಸ್‌ಗಢ ಸಶಸ್ತ್ರ ಬಂಡುಕೋರ ಮುಕ್ತ ಎಂದು ಸರ್ಕಾರ ಘೋಷಿಸಿದ ಕೆಲವೇ ದಿನಗಳಲ್ಲಿ ಮಹಿಳಾ ಮಾವೋವಾದಿಯ ಹತ್ಯೆ
ವಿಶೇಷವಾಗಿ ಮಳೆಗಾಲದಲ್ಲಿ ರಸ್ತೆಯ ದುಸ್ಥಿತಿಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ನಿವಾಸಿಗಳು ಹೇಳಿದ್ದಾರೆ. ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಗ್ರಾಮಸ್ಥರು, ʼʼಸರ್ಕಾರವು ಸರಿಯಾದ ರಸ್ತೆಯನ್ನು ಒದಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಒಂದು ಹೆಲಿಕಾಪ್ಟರ್ ಸೌಕರ್ಯ ಮಾಡಬೇಕು. ಇದರಿಂದ ನಿವಾಸಿಗಳು ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸಬಹುದುʼʼ ಎಂದು ಹೇಳಿದ್ದಾರೆ. ಮೂಲಸೌಕರ್ಯಗಳ ಕೊರತೆಯ ಬಗ್ಗೆ ಗ್ರಾಮಸ್ಥರಲ್ಲಿ ಹೆಚ್ಚುತ್ತಿರುವ ರೋಷವನ್ನು ಇದು ಪ್ರತಿಬಿಂಬಿಸಿದೆ.
ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ಬಹಳ ಕಠಿಣವಾಗಿರುತ್ತದೆ. ಗರ್ಭಿಣಿಯರು, ವೃದ್ಧರು ಮತ್ತು ತೀವ್ರ ಅಸ್ವಸ್ಥ ರೋಗಿಗಳನ್ನು ಹಾಸಿಗೆಗಳ ಮೇಲೆ ಹಲವು ಕಿಲೋ ಮೀಟರ್‌ಗಳಷ್ಟು ಹೊತ್ತುಕೊಂಡು ಸಾಗಿ ಮುಖ್ಯ ರಸ್ತೆ ತಲುಪಬೇಕಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ʼʼನಾವು ಪ್ರತಿ ಅಧಿಕಾರಿಗೂ ಅರ್ಜಿ ಸಲ್ಲಿಸಿದ್ದೇವೆ. ಪ್ರತಿ ಬಾರಿ ನಮಗೆ ಭರವಸೆಗಳನ್ನು ಮಾತ್ರ ನೀಡಲಾಗುತ್ತದೆ. ಆದರೆ ವಾಸ್ತವವಾಗಿ ಯಾವುದೇ ಕೆಲಸ ನಡೆಯುತ್ತಿಲ್ಲ. ನಮ್ಮ ಕುಂದುಕೊರತೆಗಳನ್ನು ಕೇಳಲು ಯಾರೂ ಸಿದ್ಧರಿಲ್ಲʼʼ ಎಂದು ಗ್ರಾಮದ ಸರಪಂಚ್ ಹೇಳಿದರು. ʼʼಹಳ್ಳಿಯ ರಸ್ತೆ ಹತ್ತು ವರ್ಷಗಳಿಂದ ನಿರ್ಮಾಣ ಹಂತದಲ್ಲಿದೆ. ಆದರೆ ಇಂದಿಗೂ ಅಪೂರ್ಣವಾಗಿಯೇ ಉಳಿದಿದೆ. ಮಳೆಗಾಲದಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಬಹಳ ಕಷ್ಟವಾಗುತ್ತದೆʼʼ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.
ʼʼಯೋಜನೆಗಳು ಸ್ಥಗಿತಗೊಳ್ಳಲು ನಕ್ಸಲ್ ಚಟುವಟಿಕೆಯೇ ಕಾರಣʼʼ ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ʼʼಈಗ ಛತ್ತೀಸ್‌ಗಢವು ಈ ನಕ್ಸಲಿಸಂನಿಂದ ಮುಕ್ತವಾಗಿದೆ ಎಂದು ಸರ್ಕಾರ ಪದೇ ಪದೆ ಘೋಷಿಸಿದ್ದರೂ ಇನ್ನೂ ಗ್ರಾಮಕ್ಕೆ ಮೂಲಭೂತ ಸೌಕರ್ಯ ಯಾಕೆ ಒದಗಿಸಿಲ್ಲ ಮತ್ತು ರಸ್ತೆ ಸಂಪರ್ಕ ಇನ್ನೂ ಏಕೆ ನಿರ್ಮಿಸಿಲ್ಲ?ʼʼ ಎಂದು ಕೆಲವರು ಪ್ರಶ್ನಿಸಿದ್ದಾರೆ.