Viral News: SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಬ್ಯಾಗ್‍ನಲ್ಲಿ ಸಿಕ್ಕಿದ್ದೇನು? ಬೆಚ್ಚಿಬಿದ್ದ ಶಿಕ್ಷಕರು
ಕೇರಳದ ಪತ್ತಣಂತಿಟ್ಟ ಜಿಲ್ಲೆಯ ಕೋಝೆಂಚೇರಿಯ ಶಾಲೆಯೊಂದರಲ್ಲಿ ಎಸ್ಎಸ್ಎಲ್‍ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಯೊಬ್ಬ ಕುಡಿದ ಮತ್ತಿನಲ್ಲಿ ಶಾಲೆಗೆ ಬಂದಿದ್ದಾನೆ. ಪರೀಕ್ಷಾ ಕೊಠಡಿಯೊಳಗೆ ವಿದ್ಯಾರ್ಥಿಯ ವಿಚಿತ್ರ ನಡವಳಿಕೆಯನ್ನು ಗಮನಿಸಿದ ಮೇಲ್ವಿಚಾರಕರು ಅವನ ಬ್ಯಾಗ್ ಪರಿಶೀಲಿಸಿದಾಗ ಮದ್ಯದ ಬಾಟಲಿ ಮತ್ತು ಸುಮಾರು 10,000 ರೂ.ಗಳು ಅವರಿಗೆ ಸಿಕ್ಕಿದೆಯಂತೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.


ತಿರುವನಂತಪುರಂ: ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಲಿ ಎಂದು ಪೋಷಕರು ಕಷ್ಟಪಟ್ಟು ದುಡಿದು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಮಕ್ಕಳು ಮಾತ್ರ ಸ್ನೇಹಿತರ ಜೊತೆ ಸೇರಿ ಕುಡಿದು ಮಜಾ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳು ಸಿಗರೇಟು ಸೇದುವುದು, ಮದ್ಯಪಾನ ಮಾಡುವಂತಹ ಕೃತ್ಯ ಆಗಾಗ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗೆ ಕೇರಳದ ಪಥನಂತಿಟ್ಟ ಜಿಲ್ಲೆಯ ಕೋಝೆಂಚೇರಿಯ ಶಾಲೆಯೊಂದರಲ್ಲಿ ಎಸ್ಎಸ್ಎಲ್‍ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಯೊಬ್ಬ ಕುಡಿದ ಮತ್ತಿನಲ್ಲಿ ಶಾಲೆಗೆ ಬಂದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಪರೀಕ್ಷಾ ಕೊಠಡಿಯೊಳಗೆ ವಿದ್ಯಾರ್ಥಿಯ ವಿಚಿತ್ರ ನಡವಳಿಕೆಯನ್ನು ಗಮನಿಸಿದ ಮೇಲ್ವಿಚಾರಕರು ಅವನ ಬಳಿ ಬಂದು ಆತನನ್ನು ಪರಿಶೀಲಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.ಈ ಸುದ್ದಿ ಈಗ ವೈರಲ್(Viral News) ಆಗಿದೆ.
ಶಿಕ್ಷಕರು ವಿದ್ಯಾರ್ಥಿಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಮದ್ಯದ ಬಾಟಲಿ ಮತ್ತು ಸುಮಾರು 10,000 ರೂಪಾಯಿಗಳು ಇರುವುದು ಪತ್ತೆಯಾಗಿದೆ. ವಿದ್ಯಾರ್ಥಿಯನ್ನು ಶಾಲಾ ಆವರಣದಿಂದ ಹೊರಹಾಕಲು ಶಾಲಾ ಆಡಳಿತವು ಮುಂದಾಗಿತಂತೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಈ ಘಟನೆಯ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದ್ದಾರೆ.
ಆತನ ಚೀಲದಲ್ಲಿ ಪತ್ತೆಯಾದ ನಗದು ಪರೀಕ್ಷೆಯ ನಂತರದ ಸಂಭ್ರಮಾಚರಣೆಗಾಗಿ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ವಿದ್ಯಾರ್ಥಿಗೆ ಮದ್ಯ ಮತ್ತು ಹಣ ಹೇಗೆ ಸಿಕ್ಕಿತು ಎಂಬುದು ಸ್ಪಷ್ಟವಾಗಿಲ್ಲ. ವಿದ್ಯಾರ್ಥಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲಿಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಶಾಲಾ ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಪರಿಶೀಲಿಸಲಾಗಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ನೆಚ್ಚಿನ ಶಿಕ್ಷಕನಿಗೆ ವಿದಾಯ ಹೇಳಲು ಈ ವಿದ್ಯಾರ್ಥಿಗಳು ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ವೈರಲ್
ಶಾಲಾ ಆವರಣದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿಗಳು
ಈ ರೀತಿ ವಿದ್ಯಾರ್ಥಿಗಳು ಶಾಲಾ ಆವರಣದೊಳಗೆ ಮದ್ಯಪಾನ ಮಾಡಿರುವ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕರ್ನೂಲ್ ಜಿಲ್ಲೆಯ ಆತ್ಮಕೂರ್ ಹೈಸ್ಕೂಲ್ ನಲ್ಲಿ ಮಧ್ಯಾಹ್ನದ ಊಟದ ವಿರಾಮದ ಸಮಯದಲ್ಲಿ ಐವರು ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದರು.ಶಾಲೆಯ ಮುಖ್ಯೋಪಾಧ್ಯಾಯ ನೀಡಿದ ಮಾಹಿತಿಯ ಪ್ರಕಾರ, 8 ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆ ಮದ್ಯ ಸೇವಿಸುವುದನ್ನು ಕಂಡು ತಾನು ಅದೇ ದಾರಿಯನ್ನು ಹಿಡಿದಿದ್ದಾನೆ. ಹೀಗಾಗಿ ಆ ದಿನ ಕುಡಿದ ಅಮಲಿನಲ್ಲಿ ಶಾಲೆಗೆ ಬಂದಿದಲ್ಲದೇ ತನ್ನ ಸ್ನೇಹಿತರಿಗಾಗಿ ಮದ್ಯದ ಬಾಟಲಿಯನ್ನು ತೆಗೆದುಕೊಂಡು ಬಂದು ಅವರಿಗೆ ನೀಡಿದ್ದಾನೆ. ಅವರು ಮಧ್ಯಾಹ್ನದ ಊಟದ ವಿರಾಮದ ಸಮಯದಲ್ಲಿ ಅದನ್ನು ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಈ ವಿಚಾರದಲ್ಲಿ ವಿದ್ಯಾರ್ಥಿಗಳನ್ನು ರೆಡ್‍ಹ್ಯಾಂಡ್ ಆಗಿ ಹಿಡಿದ ಶಿಕ್ಷಕರು ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಕೌನ್ಸೆಲಿಂಗ್ ವೇಳೆ ಮನೆಯಿಂದ ಹಣವನ್ನು ಕದ್ದು ಮದ್ಯದ ಬಾಟಲಿಗಳನ್ನು ಪಡೆದಿದ್ದೇನೆ ಎಂದು ಬಾಲಕ ಒಪ್ಪಿಕೊಂಡಿದ್ದಾನೆ. ಹೀಗಾಗಿ ಶಾಲಾ ಆಡಳಿತ ಮಂಡಳಿಯು ಶಿಸ್ತು ಕ್ರಮವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣಪತ್ರಗಳನ್ನು ನೀಡಿತ್ತು. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡಿದವರು ಯಾರು ಎಂದು ಪೊಲೀಸರು ತನಿಖೆ ನಡೆಸಿದ್ದಾರಂತೆ.