Viral Video: ಪಾಕ್‌ನಲ್ಲಿ ಮೊಳಗಿತು ಗಣಪತಿ ಬಪ್ಪಾ ಮೋರಯಾ
ಪಾಕಿಸ್ತಾನದಲ್ಲಿ ಹಿಂದೂಗಳು ಗಣಪತಿ ಬಪ್ಪಾ ಮೋರಯಾ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಹಿಂದೂ ಸಮುದಾಯದ ಸದಸ್ಯರೊಬ್ಬರು ಹಂಚಿಕೊಂಡಿರುವ ಈ ವಿಡಿಯೊ ನೋಡಿ ಅನೇಕರು ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯನ್ನು ಉಂಟು ಮಾಡಿದೆ.

-

ಕರಾಚಿ: ಪಾಕಿಸ್ತಾನದಲ್ಲಿ ಹಿಂದೂಗಳು ಗಣಪತಿ ಬಪ್ಪಾ ಮೋರಯಾ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (Viral Video). ಇದು ಈಗ ಸಾಕಷ್ಟು ಚರ್ಚೆಯನ್ನು ಉಂಟು ಮಾಡಿದೆ. ಅನೇಕರು ಈ ವಿಡಿಯೊ ನೋಡಿ ಇದು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ. ಭಾರತೀಯ ನಗರಗಳಲ್ಲಿ ಕಂಡುಬರುವಂತೆಯೇ ಅದೇ ಭಕ್ತಿ ಮತ್ತು ಉತ್ಸಾಹದಿಂದ ಜನರು ಗಣಪತಿ ಹಬ್ಬವನ್ನು ಆಚರಿಸುತ್ತಿರುವುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ. ಪಾಕಿಸ್ತಾನದ ಹಿಂದೂ ಸಮುದಾಯದ ಸದಸ್ಯರೊಬ್ಬರು ಇದನ್ನು ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಅತ್ಯಂತ ವೈಭವದಿಂದ ಆಚರಿಸಲ್ಪಡುವ ಗಣೇಶ ಚತುರ್ಥಿಯನ್ನು ಈ ವರ್ಷ ಪಾಕಿಸ್ತಾನದಲ್ಲೂ ಅತ್ಯಂತ ಅದ್ದೂರಿಯಾಗಿ ಆಚರಿಸಲಾಗಿದೆ. ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯನ್ನು ಉಂಟು ಮಾಡಿದೆ. ಈ ವಿಡಿಯೊಗಳನ್ನು ಕರಾಚಿಯ ಹಿಂದೂ ಸಮುದಾಯದ ಸದಸ್ಯರೊಬ್ಬರು ಹಂಚಿಕೊಂಡಿದ್ದಾರೆ.
ಕರಾಚಿಯ ಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ಸಂಗೀತ, ಪ್ರಾರ್ಥನೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಇದರಲ್ಲಿ ಅಪಾರ ಜನರು ಭಾಗವಹಿಸಿರುವುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ.
ಕರಾಚಿಯಲ್ಲಿ ಗಣೇಶ ಚತುರ್ಥಿ
ಬೃಹತ್ ಮೈದಾನದಲ್ಲಿ ಸುಂದರವಾಗಿ ಅಲಂಕರಿಸಲ್ಪಟ್ಟ ಪೆಂಡಾಲ್‌ನಲ್ಲಿ ದೀಪಗಳಿಂದ ಭವ್ಯ ಅಲಂಕಾರ ಮಾಡಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಕೆಲವರು ಶಿವ ಮತ್ತು ಪಾರ್ವತಿ ದೇವಿಯ ವೇಷ ಧರಿಸಿದ್ದರು. ಭಕ್ತರು ಬೀದಿಗಳಲ್ಲಿ ಆಶೀರ್ವಾದ ಪಡೆಯುವುದನ್ನು ಮತ್ತು ನೃತ್ಯ ಮಾಡುವುದನ್ನು ಕೂಡ ಇದರಲ್ಲಿ ಕಾಣಬಹುದು.
ಗಣೇಶ ಚತುರ್ಥಿಯನ್ನು ಕರಾಚಿಯ ಸ್ವಾಮಿನಾರಾಯಣ ದೇವಸ್ಥಾನವನ್ನು ಹೊರತುಪಡಿಸಿ ರತ್ನೇಶ್ವರ ಮಹಾದೇವ ಮತ್ತು ಗಣೇಶ ಮಠ ದೇವಾಲಯಗಳಲ್ಲೂ ಪ್ರತಿ ವರ್ಷ ಆಚರಿಸಲಾಗುತ್ತದೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಒಬ್ಬ ಬಳಕೆದಾರರು, ಇದು ನಿಜ, ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪಾಕಿಸ್ತಾನದಲ್ಲಿರುವ ಇಡೀ ಹಿಂದೂ ಜನಸಮುದಾಯ ಇಷ್ಟೇ. ಅವರು ಬಯಸಿದ್ದನ್ನು ಆಚರಿಸಲು ಸಿಕ್ಕಿರುವುದು ಸಂತೋಷ ಎಂದಿದ್ದಾರೆ. ಮತ್ತೊಬ್ಬರು, ಪಾಕಿಸ್ತಾನ ಭಾರತದಂತೆಯೇ ಇದೆ. ಮುಸ್ಲಿಮರು ಮತ್ತು ಹಿಂದೂಗಳು ಸಮಾನವಾಗಿ ಮತ್ತು ಶಾಂತಿಯುತವಾಗಿ ಬದುಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Blood Donation Scheme Awareness: ಯಾತ್ರಿಕರ ಜೀವ ಉಳಿಸಲು ಟಿಟಿಡಿಯಿಂದ ರಕ್ತದಾನದ ಜಾಗೃತಿ
ಪಾಕಿಸ್ತಾನದಲ್ಲಿ ಹಿಂದೂಗಳು
ಪಾಕಿಸ್ತಾನದಲ್ಲಿ ಸುಮಾರು 1.96 ಮಿಲಿಯನ್ ಹಿಂದೂಗಳಿದ್ದಾರೆ ಎನ್ನುತ್ತದೆ ಒಂದು ಅಂಕಿ ಅಂಶ. ಇದು ದೇಶದ ಒಟ್ಟು ಜನಸಂಖ್ಯೆಯ ಶೇ. 1.2ರಷ್ಟಿದೆ. ಅವರಲ್ಲಿ ಹೆಚ್ಚಿನವರು ಸಿಂಧ್‌ನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನು ಕೆಲವು ಸಣ್ಣ ಗುಂಪುಗಳು ಸಂಘರ್ ಮತ್ತು ಥಾರ್ಪಾರ್ಕರ್‌ನಂತಹ ಜಿಲ್ಲೆಗಳಲ್ಲಿ ಹಾಗೂ ಬಲೂಚಿಸ್ತಾನ್ ಮತ್ತು ಪಂಜಾಬ್‌ನ ಕೆಲವು ಭಾಗಗಳಲ್ಲಿ ವಾಸಿಸುತ್ತಿದೆ.