Viral Video: ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ 145 ಕೆಜಿ ತೂಕ ಎತ್ತಿ ಪದಕ ಗೆದ್ದ 7 ತಿಂಗಳ ಗರ್ಭಿಣಿ; ಇಲ್ಲಿದೆ ವಿಡಿಯೊ
Pregnant Delhi Cop Lifts 145 Kg: 7 ತಿಂಗಳ ಗರ್ಭಿಣಿ ಪೊಲೀಸ್ ಪೇದೆಯೊಬ್ಬರು ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ 145 ಕೆಜಿ ತೂಕ ಎತ್ತಿದ್ದಾರೆ. ಈ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ಗರ್ಭಿಣಿ ಪೇದೆ ಸೋನಿಕಾ ಯಾದವ್ ಭಾರ ಎತ್ತುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
-
Priyanka P
Oct 28, 2025 6:56 PM
ಹೈದರಾಬಾದ್: ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗಿಯಾದ 7 ತಿಂಗಳ ಗರ್ಭಿಣಿ ದೆಹಲಿ ಪೊಲೀಸ್ ಪೇದೆಯೊಬ್ಬರು 145 ಕೆಜಿ ತೂಕ ಎತ್ತಿದ್ದಾರೆ. ಹೀಗೆ ದೃಢಸಂಕಲ್ಪದಿಂದ ದೇಶವನ್ನೇ ಬೆರಗುಗೊಳಿಸಿದ ಪೊಲೀಸ್ ಕಾನ್ಸ್‌ಟೇಬಲ್ (Police Constable) ಸೋನಿಕಾ ಯಾದವ್. ಅವರು ಏಳು ತಿಂಗಳ ಗರ್ಭಿಣಿಯಾಗಿದ್ದರೂ, ಆಂಧ್ರ ಪ್ರದೇಶದಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ವೇಟ್‌ಲಿಫ್ಟಿಂಗ್ ಕ್ಲಸ್ಟರ್ 2025–26ರಲ್ಲಿ ಸ್ಪರ್ಧಿಸಿ ಒಟ್ಟು 145 ಕಿಲೋಗ್ರಾಂಗಳಷ್ಟು ಭಾರ ಎತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಸೋನಿಕಾ ಯಾದವ್ ಅವರಿಂದ ಸಾಧ್ಯವಾಗುವುದಿಲ್ಲವೇನೋ ಎಂದು ಜನರು ವೀಕ್ಷಿಸುತ್ತಿದ್ದಾಗ, ಅವರು ಎಚ್ಚರನ್ನೂ ಅಚ್ಚರಿಗೆ ದೂಡಿ ಭಾರ ಎತ್ತಿದರು. ತಮ್ಮ ಅಂತಿಮ ಡೆಡ್‌ಲಿಫ್ಟ್ ಅನ್ನು ಪೂರ್ಣಗೊಳಿಸಿದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಆ ಮೂಲಕ ಅವರು ಧೈರ್ಯ ಮತ್ತು ಶಿಸ್ತು ಎಲ್ಲ ಮಿತಿಗಳನ್ನು ಮೀರಬಲ್ಲದು ಎಂಬುದನ್ನು ಸಾಬೀತುಪಡಿಸಿದರು.
ಮೇಯಲ್ಲಿ ಸೋನಿಕಾ ಯಾದವ್ ಗರ್ಭಿಣಿ ಎಂದು ತಿಳಿದಾಗ ಅವರು ತಮ್ಮ ವ್ಯಾಯಾಮವನ್ನು ನಿಲ್ಲಿಸುತ್ತಾರೆಂದು ಪತಿ ಭಾವಿಸಿದ್ದರು. ಆದರೆ ಸೋನಿಕಾ ಯಾದವ್ ಬೇರೆಯದೇ ನಿರ್ಧಾರ ತೆಗೆದುಕೊಂಡರು. ವೈದ್ಯರ ಮಾರ್ಗದರ್ಶನದೊಂದಿಗೆ, ಗರ್ಭಧಾರಣೆಯು ತನ್ನನ್ನು ನಿಧಾನಗೊಳಿಸಲು ಬಿಡಬಾರದು ಎಂಬ ದೃಢ ನಿಶ್ಚಯದಿಂದ ತರಬೇತಿ ದಿನಚರಿಯನ್ನು ಮುಂದುವರೆಸಿದರು.
ವಿಡಿಯೊ ವೀಕ್ಷಿಸಿ:
सोनिका यादव ने पेश की हिम्मत की मिसाल! दिल्ली पुलिस की कॉन्स्टेबल सोनिका यादव ने 7 महीने की गर्भावस्था में भी 145 किलो वजन उठाकर ऑल इंडिया पुलिस वेटलिफ्टिंग चैंपियनशिप में कांस्य पदक जीता। बधाई सोनिका जी ।हमे आप पर गर्व है । #SonikaYadav #DelhiPolice #WomenPower pic.twitter.com/1BlR8Fgpg8
— Subhash Yaduvansh (@MrYaduvansh) October 28, 2025
ಚಾಂಪಿಯನ್‌ಶಿಪ್‌ನಲ್ಲಿ ಅವರು ಸ್ಕ್ವಾಟ್‌ಗಳಲ್ಲಿ 125 ಕೆಜಿ, ಬೆಂಚ್ ಪ್ರೆಸ್‌ನಲ್ಲಿ 80 ಕೆಜಿ ಮತ್ತು ಡೆಡ್‌ಲಿಫ್ಟ್‌ನಲ್ಲಿ 145 ಕೆಜಿ ಎತ್ತಿದರು. ಅವರ ಅದ್ಭುತ ಪ್ರದರ್ಶನವು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಗರ್ಭಾವಸ್ಥೆಯಲ್ಲಿ ತೂಕ ಎತ್ತಿದ್ದ ಲೂಸಿ ಮಾರ್ಟಿನ್ಸ್ ಅವರಿಂದ ತನಗೆ ಸ್ಫೂರ್ತಿ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ. ಸಲಹೆ ಪಡೆಯಲು ಮತ್ತು ಸುರಕ್ಷಿತ ತರಬೇತಿ ಯೋಜನೆಯನ್ನು ಅನುಸರಿಸಲು ಸೋನಿಕಾ ಇನ್‌ಸ್ಟಾಗ್ರಾಮ್ ಮೂಲಕ ಲೂಸಿಯನ್ನು ಸಂಪರ್ಕಿಸಿದ್ದರು.
ಇದನ್ನೂ ಓದಿ: Viral Video: ಮಗುವಿನ ತಂದೆಗೆ ಕಪಾಳಮೋಕ್ಷ ಮಾಡಿ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯೆ; ವಿಡಿಯೊ ವೈರಲ್
ಅಂದಹಾಗೆ, ಕಾರ್ಯಕ್ರಮದ ಉದ್ದಕ್ಕೂ, ಸೋನಿಕಾ ಗರ್ಭಿಣಿ ಎಂದು ಯಾರಿಗೂ ತಿಳಿದಿರಲಿಲ್ಲ. ಅವರು ಸಡಿಲವಾದ ಬಟ್ಟೆಯನ್ನು ಧರಿಸಿದ್ದರು. ಭಾರ ಎತ್ತುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿದ್ದರು. ಸ್ಪರ್ಧೆಯ ನಂತರವೇ ಸತ್ಯ ಹೊರಬಂದಿತ್ತು. ಅವರು ಗರ್ಭಿಣಿ ಎಂದು ಗೊತ್ತಾದಾಗ ನೆರೆದಿದ್ದ ಜನಸಮೂಹವು ಚಪ್ಪಾಳೆ ತಟ್ಟಿತು.
2014ರ ಬ್ಯಾಚ್‌ನ ಕಾನ್‌ಸ್ಟೇಬಲ್ ಆಗಿರುವ ಸೋನಿಕಾ, ಪ್ರಸ್ತುತ ಸಮುದಾಯ ಪೊಲೀಸ್ ಸೆಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು, ಅವರು ಮಜ್ನು ಕಾ ತಿಲಾದಲ್ಲಿ ಬೀಟ್ ಅಧಿಕಾರಿಯಾಗಿ ಕೆಲಸ ಮಾಡಿದರು. ಅಲ್ಲಿ ಅವರು ಮಾದಕ ದ್ರವ್ಯ ವಿರೋಧಿ ಅಭಿಯಾನಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಅವರ ಸಾಧನೆಗೆ 2022ರಲ್ಲಿ ದೆಹಲಿ ಪೊಲೀಸ್ ಆಯುಕ್ತರಿಂದ ಗೌರವ ಮತ್ತು ಮಹಿಳಾ ದಿನದಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಂದ ಮೆಚ್ಚುಗೆ ಸೇರಿದಂತೆ ಹಲವು ಮನ್ನಣೆಗಳನ್ನು ಗಳಿಸಿದ್ದಾರೆ.
ವೇಟ್‌ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡುವ ಮೊದಲು, ಸೋನಿಕಾ ಯಾದವ್ ಕಬಡ್ಡಿ ಆಡುತ್ತಿದ್ದರು. ನಂತರ ಅವರು ಪವರ್‌ಲಿಫ್ಟಿಂಗ್ ಪ್ರಯತ್ನಿಸಿದರು. 2023ರ ದೆಹಲಿ ರಾಜ್ಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆ, ಅನೇಕ ಬಳಕೆದಾರರು ಸೋನಿಕಾ ಯಾದವ್ ಅವರ ದೃಢಸಂಕಲ್ಪವನ್ನು ಶ್ಲಾಘಿಸಿದರೆ, ಇತರರು ಕಾಳಜಿ ತೋರಿದ್ದಾರೆ.
ಇದು ಒಂದು ಸಾಧನೆಯಾಗಿರಬಹುದು. ಆದರೆ ಆಕೆಗೆ ವೇಟ್‍ಲಿಫ್ಟಿಂಗ್‍ನಲ್ಲಿ ಭಾಗವಹಿಸಲು ಹೇಗೆ ಅನುಮತಿ ನೀಡಲಾಯಿತು? ಈ ಹಂತದಲ್ಲಿ ಭಾರ ಎತ್ತುವುದು ತಾಯಿ ಮತ್ತು ಮಗುವಿಗೆ ಗಂಭೀರ ಅಪಾಯಗಳನ್ನುಂಟು ಮಾಡುತ್ತದೆ. ಕ್ರೀಡೆಗಿಂತ ಸುರಕ್ಷತೆ ಮುಖ್ಯ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೂ ಕೆಲವರು ಸೋನಿಕಾ ಯಾದವ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.