ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KAR vs GOA: ಗೋವಾ ವಿರುದ್ಧದ ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಕರ್ನಾಟಕ ಖಾತೆಗೆ 3 ಅಂಕ!

ಶಿವಮೊಗ್ಗದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದಿದ್ದ ಕರ್ನಾಟಕ ಹಾಗೂ ಗೋವಾ ತಂಡಗಳ ನಡುವಣ 2025-26ರ ರಣಜಿ ಟ್ರೋಫಿ ಟೂರ್ನಿಯ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆಯ ಕಾರಣ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ ತಂಡಕ್ಕೆ ಮೂರು ಅಂಕಗಳನ್ನು ನೀಡಿದ್ದರೆ, ಗೋವಾಗೆ ಒಂದು ಅಂಕ ಲಭಿಸಿದೆ.

ಶಿವಮೊಗ್ಗದಲ್ಲಿ ಕರ್ನಾಟಕ-ಗೋವಾ ನಡುವಣ ಪಂದ್ಯ ಡ್ರಾ!

ಕರ್ನಾಟಕ ಹಾಗೂ ಗೋವಾ ನಡುವಣ ರಣಜಿ ಟ್ರೋಫಿ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. -

Profile Ramesh Kote Oct 28, 2025 9:57 PM

ಶಿವಮೊಗ್ಗ: ವಿದ್ವತ್‌ ಕಾವೇರಪ್ಪ ಅವರ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಕರ್ನಾಟಕ ತಂಡ, ಎದುರಾಳಿ ಗೋವಾ ವಿರುದ್ಧದ 2025-26ರ ರಣಜಿ ಟ್ರೋಫಿ ಟೂರ್ನಿಯ ಎಲೈಟ್‌ ಬಿ ಪಂದ್ಯದ (KAR vs GOA) ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಪಡದಿದೆ. ಈ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯ ಕಂಡರೂ ಪ್ರಥಮ ಇನಿಂಗ್ಸ್‌ನ ಮುನ್ನಡೆಯ ಆಧಾರದ ಮೇಲೆ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ (Karnakata) ತಂಡ, ಮೂರು ಅಂಕಗಳನ್ನು ಪಡೆದಿದೆ. ಇನ್ನು ಹಿನ್ನೆಡೆ ಅನುಭವಿಸಿದ್ದ ಗೋವಾ ತಂಡ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿದೆ. ಕರ್ನಾಟಕ ತಂಡದ ಪರ ಪ್ರಥಮ ಇನಿಂಗ್ಸ್‌ನಲ್ಲಿ 174 ರನ್‌ಗಳನ್ನು ಕಲೆ ಹಾಕಿದ್ದ ಕರುಣ್‌ ನಾಯರ್‌ (Karun Nair) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಂಗಳವಾರ ಇಲ್ಲಿನ ಕೆಎಸ್‌ಸಿಎ ನವುಲೆ ಮೈದಾನದಲ್ಲಿ 171 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಪ್ರಥಮ ಇನಿಂಗ್ಸ್‌ ಅನ್ನು ಮುಂದುವರಿಸಿದ ಗೋವಾ ತಂಡ, ವಿದ್ವತ್‌ ಕಾವೇರಪ್ಪ (51 ಕ್ಕೆ 5) ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿತು. ಆ ಮೂಲಕ ಅಂತಿಮವಾಗಿ 87.2 ಓವರ್‌ಗಳಿಗೆ 217 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ 371 ರನ್‌ಗಳನ್ನು ಕಲೆ ಹಾಕಿದ್ದ ಕರ್ನಾಟಕ ಎದುರು 154 ರನ್‌ಗಳ ಹಿನ್ನಡೆಯನ್ನು ಅನುಭವಿಸಿತ್ತು. ಇದೀಗ ಮೂರು ಅಂಕಗಳನ್ನು ಕಲೆ ಹಾಕಿರುವ ಕರ್ನಾಟಕ ತಂಡ ಎಲೈಟ್‌ ಬಿ ಗುಂಪಿನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ, ಗೋವಾ ತಂಡ ಈ ಪಂದ್ಯದಲ್ಲಿ ಕೇವಲ ಒಂದು ಅಂಕ ಪಡೆದರೂ ಒಟ್ಟು 8 ಪಾಯಿಂಟ್ಸ್‌ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

KAR vs GOA: ಕರ್ನಾಟಕ ಎದುರು ಹಿನ್ನಡೆಯ ಭೀತಿಯಲ್ಲಿರುವ ಗೋವಾಗೆ ಮರಿ ತೆಂಡೂಲ್ಕರ್‌ ಆಸರೆ!

ಮೋಹಿತ್‌ ರೆಡ್ಕರ್‌ ಅರ್ಧಶತಕ

ಅಂದ ಹಾಗೆ ಪಂದ್ಯದ ಮೂರನೇ ದಿನ 43 ರನ್‌ ಗಳಿಸಿ ಗಮನ ಸೆಳೆದಿದ್ದ ಅರ್ಜುನ್‌ ತೆಂಡೂಲ್ಕರ್‌ ನಾಲ್ಕನೇ ದಿನ ಕೇವಲ 4 ರನ್‌ ಹೆಚ್ಚುವರಿಯಾಗಿ ಕಳುಹಿಸಿ ವಿದ್ವತ್‌ ಕಾವೇರಪ್ಪಗೆ ವಿಕೆಟ್‌ ಒಪ್ಪಿಸಿದರು. ಆದರೆ, ಮಂಗಳವಾರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದ ಮೋಹಿತ್‌ ರೆಡ್ಕರ್‌, 77 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 53 ರನ್‌ ಗಳಿಸಿದರು. ಆ ಮೂಲಕ ಗೋವಾ ಮೊತ್ತವನ್ನು 200ರ ಗಡಿ ದಾಟಿಸಿ ವಿದ್ವತ್‌ ಕಾವೇರಪ್ಪಗೆ ವಿಕೆಟ್‌ ಒಪ್ಪಿಸಿದರು. ಕರ್ನಾಟಕ ಪರ ವಿದ್ವತ್‌ ಕಾವೇರಪ್ಪ 5 ವಿಕೆಟ್‌ ಸಾಧನೆ ಮಾಡಿದರೆ, ಅಭಿಲಾಷ್‌ ಶೆಟ್ಟಿ 3 ವಿಕೆಟ್‌ ಕಿತ್ತರು.

ಗೋವಾ: ದ್ವಿತೀಯ ಇನಿಂಗ್ಸ್‌ 143-1

ಬಳಿಕ ಫಾಲೋ ಆನ್‌ಗೆ ಒಳಗಾದ ಗೋವಾ ತಂಡ, ದ್ವಿತೀಯ ಇನಿಂಗ್ಸ್‌ ಆರಂಭಿಸಿತು. ಆರಂಭಿಕ ಮಂಥನ್‌ ಖುಟ್ಕರ್‌ (55* ರನ್)‌ ಹಾಗೂ ಅಭಿನವ್‌ ತೇಜ್ರಾಣ (73* ರನ್‌) ಅವರು ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅಂತಿಮವಾಗಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ಗೋವಾ ತಂಡ 46 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 143 ರನ್‌ಗಳಿಸಿತು. ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿದ್ದರಿಂದ ಪಂದ್ಯದಲ್ಲಿ ನಿಗದಿತ ಓವರ್‌ಗಳನ್ನು ಮುಗಿಸಲು ಸಾಧ್ಯವಾಗಿಲ್ಲ. ಈ ಕಾರಣ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.



ಭರ್ಜರಿ ಶತಕ ಬಾರಿಸಿದ್ದ ಕರುಣ್‌ ನಾಯರ್‌

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಕರ್ನಾಟಕ ತಂಡದ ಪರ ಕರುಣ್‌ ನಾಯರ್‌ ಅದ್ಭುತ ಇನಿಂಗ್ಸ್‌ ಅನ್ನು ಆಡಿದ್ದರು. ಅವರು ಆಡಿದ್ದ 267 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 174 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಪಂದ್ಯದಲ್ಲಿ ಕರ್ನಾಟಕ ತಂಡ ಮುನ್ನಡೆಸಲು ಸಾಧಿಸಲು ನೆರವು ನೀಡಿದ್ದರು. ಇವರ ಜೊತೆಗೆ ಪ್ರಥಮ ಇನಿಂಗ್ಸ್‌ನಲ್ಲಿ ಶ್ರೇಯಸ್‌ ಗೋಪಾಲ್‌ ಅವರು 109 ಎಸೆತಗಳಲ್ಲಿ 57 ರನ್‌ಗಳನ್ನು ಗಳಿಸಿದ್ದರು.