Viral Video: ಕರ್ವಾ ಚೌತ್ ದಿನದಂದು ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಮಹಿಳೆ ಸಾವು; ವಿಡಿಯೊ ಇಲ್ಲಿದೆ
Woman Dies of Heart Attack: ಉತ್ತರ ಭಾರತದಲ್ಲಿ ಇತ್ತೀಚೆಗಷ್ಟೇ ಕರ್ವಾ ಚೌತ್ ಹಬ್ಬವನ್ನು ಆಚರಿಸಲಾಯಿತು. ಈ ಹಬ್ಬದ ಸಮಯದಲ್ಲಿ ಮಹಿಳೆಯರು ಉಪವಾಸವಿದ್ದು, ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಇದೀಗ ಮಹಿಳೆಯೊಬ್ಬರು ಕರ್ವಾ ಚೌತ್ ದಿನದಂದೇ ಡಾನ್ಸ್ ಮಾಡುತ್ತಾ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

-

ಚಂಡೀಗಢ: ಕರ್ವಾ ಚೌತ್ (Karwa Chauth) ಆಚರಣೆಯ ಸಂದರ್ಭದಲ್ಲಿ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸವಿದ್ದ ಮಹಿಳೆಯೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟ ಆಘಾತಕಾರಿ ಘಟನೆ ಪಂಜಾಬ್‌ನ ಬರ್ನಾಲಾದಲ್ಲಿ ಸಂಭವಿಸಿದೆ. 59 ವರ್ಷದ ಆಶಾ ರಾಣಿ ಸ್ನೇಹಿತೆಯರೊಂದಿಗೆ ನೃತ್ಯ ಮಾಡುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು.
ಆಶಾ ರಾಣಿ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಹಿಂದೂ ಮಹಿಳೆಯರು ಆಚರಿಸುವ ಕರ್ವಾ ಚೌತ್ ಹಬ್ಬದ ಪ್ರಯುಕ್ತ ಉಪವಾಸ ಮಾಡುತ್ತಿದ್ದರು. ಈ ಹಬ್ಬವನ್ನು ಮುಖ್ಯವಾಗಿ ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದಂದು ಮಹಿಳೆಯರು ದಿನವಿಡೀ ಉಪವಾಸ ಮಾಡುತ್ತಾರೆ. ಚಂದ್ರನನ್ನು ನೋಡಿದ ಮೇಲೆ ಮಾತ್ರ ಊಟ ಮಾಡುತ್ತಾರೆ. ಗಂಡನು ಉಪವಾಸ ಮಾಡುವ ಮಹಿಳೆಗೆ ಮೊದಲ ಗುಟುಕು ನೀರನ್ನು ನೀಡುತ್ತಾನೆ.
ಸಂಜೆ ವೇಳೆಗೆ ಆಶಾ ರಾಣಿ, ಅವರ ಪತಿ ತರ್ಸೆಮ್ ಲಾಲ್ ಮತ್ತು ಅವರ ಮೊಮ್ಮಗಳು ಕರ್ವಾ ಚೌತ್ ಆಚರಣೆಯಲ್ಲಿ ಭಾಗವಹಿಸಲು ಸ್ನೇಹಿತರ ಮನೆಗೆ ಭೇಟಿ ನೀಡಿದರು. ಆದರೆ ಚಂದ್ರ ಕಾಣಿಸಲಿಲ್ಲ. ಆಶಾ ರಾಣಿ ಸೇರಿದಂತೆ ಉಪವಾಸ ನಿರತ ಮಹಿಳೆಯರು ಪಂಜಾಬಿ ಹಾಡುಗಳಿಗೆ ನೃತ್ಯ ಮಾಡಲು ಪ್ರಾರಂಭಿಸಿದರು. ವಿಪರ್ಯಾಸವೆಂದರೆ, ನೀವೇ ಆನಂದಿಸಿ, ನಾಳೆ ಬೆಳಗ್ಗೆ ಏನಾಗಬಹುದು ಎಂದು ನಮಗೆ ತಿಳಿದಿಲ್ಲ ಎಂಬ ಹಾಡಿಗೆ ಮಹಿಳೆಯರೆಲ್ಲರೂ ನೃತ್ಯ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
पंजाब के करनाल से हैरान करने वाला वीडियो सामने आया, जहां पति की लंबी उम्र की कामना करते-करते एक पत्नी की दिल का दौरा पड़ने से मौत हो गई.#KarwaChauth #HeartAttack pic.twitter.com/jU0QdHHuIo
— NDTV India (@ndtvindia) October 13, 2025
ಹಳದಿ ಸೀರೆ ಧರಿಸಿದ ಆಶಾ ರಾಣಿ ಹಾಡಿಗೆ ಭರ್ಜರಿ ನೃತ್ಯ ಮಾಡಿದ್ದಾರೆ. ವಿಡಿಯೊದಲ್ಲಿ ಮಹಿಳೆಯರು ಡಾನ್ಸ್ ಮಾಡುವುದನ್ನು ನೋಡಬಹುದು. ಈ ವೇಳೆ ಇದ್ದಕ್ಕಿದ್ದಂತೆ ಆಶಾ ರಾಣಿ ಕುಸಿದು ಬಿದ್ದಿದ್ದಾರೆ. ಕೂಡಲೇ ಇತರರು ಆಶಾ ರಾಣಿ ಅವರಿಗೆ ಏನಾಯಿತು ಎಂದು ನೋಡಲು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಜ್ಞೆಯಿಲ್ಲದೆ ಬಿದ್ದಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಘಟನೆ ಬರ್ನಾಲಾ ನಿವಾಸಿಗಳನ್ನು ಆಘಾತಗೊಳಿಸಿದೆ. ಆಶಾ ರಾಣಿ ಅವರ ಕುಟುಂಬವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ನೆರೆಹೊರೆಯವರು ಹೇಳಿದ್ದಾರೆ. ಕರ್ವಾ ಚೌತ್ ದಿನದಂದು ಅವರು ನಿಧನರಾಗಿರುವುದು ನೋವು ತಂದಿದೆ. ಕುಟುಂಬವು ಈ ಸಾವನ್ನು ಹೇಗೆ ಎದುರಿಸುತ್ತದೆ ಎಂದು ನಾವು ಊಹಿಸಲೂ ಸಾಧ್ಯವಿಲ್ಲ ಎಂದು ಹರ್ದೀಪ್ ಸಿಂಗ್ ಹೇಳಿದರು.
ಇದನ್ನೂ ಓದಿ: Viral Video: ಗಂಡನ ಮೇಲೆ ದೌರ್ಜನ್ಯ ಎಸಗಿದ್ದಕ್ಕೆ ಮಹಿಳೆಯ ಮೇಲೆ ಎಂಎನ್‌ಎಸ್ ಕಾರ್ಯಕರ್ತೆಯಿಂದ ಕಪಾಳಮೋಕ್ಷ; ಇಲ್ಲಿದೆ ವಿಡಿಯೊ
ಆಶಾ ರಾಣಿ ಅವರ ನೆರೆಮನೆಯವರಾದ ರಿಂಕಾ ಕುಮಾರ್, ಈ ದುರಂತದ ಬಗ್ಗೆ ಕೇಳಿದಾಗ ನಂಬಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಅವರು ಕುಸಿದು ಬೀಳುವ ಮೊದಲು ಆರೋಗ್ಯದಿಂದಲೇ ಇದ್ದರು. ಅವರು ಸಂತೋಷದಿಂದ ನೃತ್ಯ ಮಾಡುತ್ತಿದ್ದರು. ಅವರು ನಿಧನರಾಗಿರುವುದು ಕೇಳಿ ತುಂಬಾ ದುಃಖವಾಗಿದೆ. ಕರ್ವಾ ಚೌತ್ ದಿನದಂದು ಒಬ್ಬ ಮಹಿಳೆ ತನ್ನ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾಳೆ. ಪತಿಯ ಸ್ಥಿತಿ ಹೇಗಿರಬಹುದು ಅನ್ನೋದು ಊಹಿಸಲು ಅಸಾಧ್ಯ ಎಂದು ಹೇಳಿದ್ದಾರೆ.
ತನ್ನ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಿದ್ದ ಮಹಿಳೆಯೊಬ್ಬರು ಅದೇ ದಿನ ಸಾವನ್ನಪ್ಪಿದ್ದು ತುಂಬಾ ದುರಂತ ಎಂದು ನೆರೆಮನೆಯವರಾದ ಸುರಿಂದರ್ ಕೌರ್ ವಾಲಿಯಾ ಹೇಳಿದರು.