Relationship Insurance: ಇದು ವಿಶ್ವದ ಮೊದಲ ರಿಲೇಶನ್‌ಶಿಪ್ ಇನ್ಶೂರೆನ್ಸ್ ಪಾಲಿಸಿ; ತಲೆ ಕೆರೆದುಕೊಂಡ ನೆಟ್ಟಿಗರು
Viral News: ಜಿಕಿಲೋವ್ ವೆಬ್‌ಸೈಟ್ ರಿಲೇಶನ್‌ಶಿಪ್ ಇನ್ಶೂರೆನ್ಸ್ ಅನ್ನು ಶುರು ಮಾಡಿದೆ. ವ್ಯಕ್ತಿಯೊಬ್ಬ ರಿಲೇಶನ್‌ಶಿಪ್ ಇನ್ಶೂರೆನ್ಸ್ ಒದಗಿಸುವುದಾಗಿ ಹೇಳಿಕೊಂಡಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಬಂಧಗಳನ್ನು ಗಟ್ಟಿಗೊಳಿಸಲು ವೆಬ್‌ಸೈಟ್ ಈ ಯೋಜನೆ ಜಾರಿಗೆ ತಂದಿದೆ ಎನ್ನಲಾಗಿದೆ.


ಹೆಲ್ತ್ ಇನ್ಶೂರೆನ್ಸ್, ಎಜುಕೇಶನ್ ಇನ್ಶೂರೆನ್ಸ್, ಲೈಫ್ ಇನ್ಶೂರೆನ್ಸ್ ಎಂಬ ಹಲವು ವಿಧದ ವಿಮೆ ಬಗ್ಗೆ ನಾವು ಕೇಳಿರುತ್ತೇವೆ. ಆದರೆ ಆಶ್ಚರ್ಯಕರವೆಂದರೆ ವೆಬ್‌ಸೈಟ್‌ವೊಂದು ರಿಲೇಶನ್‌ಶಿಪ್ ಇನ್ಶೂರೆನ್ಸ್ ಪಾಲಿಸಿ (First Relationship Insurance Policy) ಅನ್ನು ಶುರು ಮಾಡಿದೆ. ಇತ್ತೀಚಿನ ದಿನಗಳಲ್ಲಿ ರಿಲೇಶನ್‌ಶಿಪ್‌ನಲ್ಲಿ ಮೋಸ, ಬ್ರೇಕ್‍ಅಪ್‍ಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರಿಲೇಶನ್‌ಶಿಪ್ ಅನ್ನು ಗಟ್ಟಿಗೊಳಿಸಲು ವೆಬ್‌ಸೈಟ್ ಈ ಯೋಜನೆ ಜಾರಿಗೆ ತಂದಿದೆಯಂತೆ. ವ್ಯಕ್ತಿಯೊಬ್ಬ ರಿಲೇಶನ್‌ಶಿಪ್ ಇನ್ಶೂರೆನ್ಸ್ ಒದಗಿಸುವುದಾಗಿ ಹೇಳಿಕೊಂಡಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ.
ಜಿಕಿಲೋವ್ ವೆಬ್‌ಸೈಟ್ ಈ ವಿಶಿಷ್ಟ ಕವರೇಜ್ ಯೋಜನೆಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಇದು ಜೋಡಿಗಳು ತಮ್ಮ ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ವೆಬ್‌ಸೈಟ್ ಪ್ರಕಾರ, ಯಾವುದೇ ಜೋಡಿ ತಮ್ಮ ಸಂಬಂಧವನ್ನು ಉಳಿಸಿಕೊಂಡು ಮದುವೆಯಾಗಲು ಬಯಸಿದರೆ, ಈ ರಿಲೇಶನ್‌ಶಿಪ್ ಇನ್ಶೂರೆನ್ಸ್‌ನಲ್ಲಿ ಅವರ ಮದುವೆಗೆ ಧನಸಹಾಯ ಮಾಡಲು ಅವರ ಒಟ್ಟು ಪ್ರೀಮಿಯಂಗಳ 10 ಪಟ್ಟು ಗಣನೀಯ ಪಾವತಿಯನ್ನು ನೀಡಲಾಗುತ್ತದೆ. ಒಂದುವೇಳೆ ಅವರು ಬೇರ್ಪಟ್ಟರೆ, ಅವರಿಗೆ ಏನೂ ಸಿಗುವುದಿಲ್ಲ ಎಂಬುದಾಗಿ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಟ್ಟಿಗರಲ್ಲಿ ಒಬ್ಬರು "ಇದು ಅತ್ಯುತ್ತಮ ಹೂಡಿಕೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ತಮಾಷೆ ಮಾಡಿ, "ಮದುವೆಯಾದ ನಂತರ ನಾನು ಈ ಬಹುಮಾನವನ್ನು ಪಡೆಯಬಹುದೇ? ಯಾಕೆಂದರೆ ನಂತರ ಬಹುಮಾನದ ಹಣವನ್ನು ಸಂಗಾತಿಯೊಂದಿಗೆ ಪರಸ್ಪರ ಶೇರ್ ಮಾಡಿಕೊಳ್ಳಬಹುದು ಅಥವಾ ಮದುವೆಯನ್ನು ರದ್ದುಗೊಳಿಸಬಹುದು” ಎಂದಿದ್ದಾರೆ.
"ನಾನು ಈಗಾಗಲೇ ವೇಟಿಂಗ್ ಲಿಸ್ಟ್‌ನಲ್ಲಿ ಇದ್ದೇನೆ" ಎಂದು ಮೂರನೇಯವರು ಕಾಮೆಂಟ್ ಮಾಡಿದ್ದಾರೆ. "ಇವರು ಮುಂದಿನ ದೊಡ್ಡ ಉದ್ಯಮಿಯಾಗಲು ಸಿದ್ಧರಾಗಿದ್ದಾರೆ" ಎಂದು ನಾಲ್ಕನೆಯವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: 65 ವರ್ಷದ ವ್ಯಕ್ತಿಯ ಜೆನ್ ಝಡ್ ಫ್ಯಾಷನ್‍ಗೆ ನೆಟ್ಟಿಗರು ಫುಲ್ ಫಿದಾ; ವಿಡಿಯೊ ವೈರಲ್
ಈ ಹಿಂದೆ ಇದೇ ರೀತಿಯ ಸುದ್ದಿಯೊಂದು ವೈರಲ್ ಆಗಿತ್ತು. ಪ್ರತೀಕ್ ಆರ್ಯನ್ ಎಂಬ ನೆಟ್ಟಿಗನೊಬ್ಬ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತನ್ನ ಮಾಜಿ ಗೆಳತಿಯೊಂದಿಗೆ 'ಹಾರ್ಟ್ ಬ್ರೇಕ್ ಇನ್ಶೂರೆನ್ಸ್ ಫಂಡ್' ಅನ್ನು ಶುರುಮಾಡಿರುವುದಾಗಿ ಬಹಿರಂಗಪಡಿಸಿದ್ದ. ಪೋಸ್ಟ್‌ನಲ್ಲಿ ತಿಳಿಸಿದ ಪ್ರಕಾರ, ಈ ಒಪ್ಪಂದದಲ್ಲಿ ಜಂಟಿ ಖಾತೆಗೆ ತಿಂಗಳಿಗೆ 500 ರೂ.ಗಳ ಠೇವಣಿಯನ್ನು ಕಟ್ಟಬೇಕಾಗುತ್ತದೆ. ಒಂದು ವೇಳೆ ಸಂಬಂಧದಲ್ಲಿ ಮೋಸ ಮಾಡುವವರು ತಾವು ಕಟ್ಟಿದ ಸಂಪೂರ್ಣ ಹಣವನ್ನು ಬಿಟ್ಟುಬಿಡಬೇಕಾಗುತ್ತದೆ. ಮೋಸ ಹೋದವರು ಅದರ ಸಂಪೂರ್ಣ ಮೊತ್ತವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎನ್ನಲಾಗಿತ್ತು. ಆದರೆ ತನ್ನ ಗೆಳತಿ ತನಗೆ ಮೋಸ ಮಾಡಿದ ನಂತರ 'ಹಾರ್ಟ್ ಬ್ರೇಕ್ ಇನ್ಶೂರೆನ್ಸ್ ಫಂಡ್'ನಲ್ಲಿ 2 ವರ್ಷದಿಂದ ಸಂಗ್ರಹಿಸಿದ 25,000 ರೂ.ಗಳನ್ನು ಸ್ವೀಕರಿಸಿದ್ದೇನೆ ಎಂದು ಪ್ರತೀಕ್ ಹಂಚಿಕೊಂಡಿದ್ದ.