Dr Shashikaran Umakanth Column: ಮಧುಮೇಹದ ಅವಳಿ ಜವಳಿಗಳು !
ನಮ್ಮ ದೇಹದ ರಕ್ಷಣಾ ವ್ಯವಸ್ಥೆಯೇ (ಇಮ್ಯು ನಿಟಿ) ದಾರಿ ತಪ್ಪಿ, ಈ ಇನ್ಸುಲಿನ್ ಕಾರ್ಖಾನೆಯ ಮೇಲೆ ದಾಳಿ ಮಾಡಿ, ಅದನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತದೆ. ಕಾರ್ಖಾನೆಗೆ ಶಾಶ್ವತ ಬೀಗಮುದ್ರೆ! ಒಂದು ಹನಿ ಇನ್ಸುಲಿನ್ ಕೂಡ ಉತ್ಪಾದನೆಯಾಗುವುದಿಲ್ಲ. ಕಾರ್ಮಿಕರೆಲ್ಲಾ ಖಾಯಂ ಮುಷ್ಕರ ಹೂಡಿದ ಹಾಗೆ ಇದು.
-
ಡಾ.ಶಶಿಕಿರಣ್ ಉಮಾಕಾಂತ್
ಟೈಪ್ 2 ಮಧುಮೇಹದಿಂದ ದೂರವಿರಬೇಕಾದರೆ, ಪ್ಯಾಕೆಟ್'ಗಳಲ್ಲಿ ಬರುವ ಸಂಸ್ಕರಿಸಿದ ಆಹಾರವನ್ನು ಬಿಟ್ಟು ಪ್ರಕೃತಿಗೆ ಹತ್ತಿರವಾದ ಮತ್ತು ನಾರು ಜಾಸ್ತಿ ಇರುವ ಆಹಾರ ಸೇವಿಸ ಬೇಕು ಮತ್ತು ಪ್ರತಿದಿನ ನಿಯಮಿತವಾಗಿ ಬೆವರು ಸುರಿಸಿ ವ್ಯಾಯಾಮ ಮಾಡಬೇಕು.
ಆಸ್ಪತ್ರೆಯಲ್ಲಿ ಆಗಾಗ ನಡೆಯುವ ಒಂದು ಸಂಭಾಷಣೆ ಇದು. ನಿಮಗೆ ಡಯಾಬಿಟಿಸ್ ಇದೆ ಎಂದು ಹೇಳಿದ ತಕ್ಷಣ ಕೆಲವರು ಮುಗ್ಧತೆಯಿಂದ ಕೇಳುವ ಪ್ರಶ್ನೆ: ಹೌದಾ ಡಾಕ್ಟ್ರೇ? ನನಗಿರೋದು ಯಾವ ಟೈಪು? ಒಂದೋ ಅಥವಾ ಎರಡೋ?
ಅವರಿಗೆ ನಾನು ಹೇಳೋದು: ಇವರಿಬ್ಬರೂ ಹಳೆಯ ಸಿನಿಮಾಗಳಲ್ಲಿ ಬರುವ ಅವಳಿ-ಜವಳಿಗಳಿದ್ದ ಹಾಗೆ! ನೋಡಲು ಇಬ್ಬರೂ ಒಂದೇ ತರಹ ಕಾಣುತ್ತಾರೆ, ಇಬ್ಬರ ಉದ್ದೇಶವೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದೇ. ಆದರೆ, ಇವರು ನಮ್ಮ ದೇಹದ ಒಳಗೆ ಶುರುವಾಗುವ ಶೈಲಿ ಮಾತ್ರ ತದ್ವಿರುದ್ಧ!
ಮಧುಮೇಹ ಎಂಬ ರೋಗಸಮೂಹದಲ್ಲಿ ಈ ಟೈಪ್ 1 ಮತ್ತು ಟೈಪ್ 2 ಎಂಬ ಇಬ್ಬರು ಸಹೋದರ ರಿದ್ದಾರೆ. ಇಬ್ಬರ ಲಕ್ಷಣಗಳೂ ಒಂದೇ... ವಿಪರೀತ ಬಾಯಾರಿಕೆ, ಸುಸ್ತು, ಅತಿಯಾದ ಮೂತ್ರ ವಿಸರ್ಜನೆ. ಆದರೆ ಒಳಗೆ ಇವರು ಸೃಷ್ಟಿಸುವ ರಂಪಾಟ ಬೇರೆ ಬೇರೆ. ಹಲವಾರು ಬಾರಿ ಈ ಲಕ್ಷಣ ಗಳೂ ಇರುವುದಿಲ್ಲ...
ಟೈಪ್ 1: ಮುಷ್ಕರ ಹೂಡಿದ ಕಾರ್ಖಾನೆ!
ನಮ್ಮ ಹೊಟ್ಟೆಯ ಹಿಂಭಾಗದಲ್ಲಿ ‘ಮೇದೋಜೀರಕ ಗ್ರಂಥಿ’ ಎಂಬುದು ಒಂದು ಹಾರ್ಮೋನ್ ಕಾರ್ಖಾನೆ. ಈ ಕಾರ್ಖಾನೆಯ ಮುಖ್ಯ ಕೆಲಸವೆಂದರೆ ‘ಇನ್ಸುಲಿನ್’ ಎಂಬ ಹಾರ್ಮೋ ನ್ ಅನ್ನು ಉತ್ಪಾದಿಸುವುದು. ಇನ್ಸುಲಿನ್ ಎಂದರೆ ನಮ್ಮ ಜೀವಕೋಶಗಳ ಬಾಗಿಲು ತೆರೆಯುವ ಬೀಗದ ಕೈ ಇದ್ದ ಹಾಗೆ.
ಇದನ್ನೂ ಓದಿ: Diabetes Control Tips: ಮಧುಮೇಹ ಇದ್ದವರು ಎಷ್ಟು ಬಾರಿ ಶುಗರ್ ಲೆವೆಲ್ ಟೆಸ್ಟ್ ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ
ಟೈಪ್ 1 ಮಧುಮೇಹದಲ್ಲಿ ಏನಾಗುತ್ತದೆ ಗೊತ್ತೇ? ನಮ್ಮ ದೇಹದ ರಕ್ಷಣಾ ವ್ಯವಸ್ಥೆಯೇ (ಇಮ್ಯು ನಿಟಿ) ದಾರಿ ತಪ್ಪಿ, ಈ ಇನ್ಸುಲಿನ್ ಕಾರ್ಖಾನೆಯ ಮೇಲೆ ದಾಳಿ ಮಾಡಿ, ಅದನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತದೆ. ಕಾರ್ಖಾನೆಗೆ ಶಾಶ್ವತ ಬೀಗಮುದ್ರೆ! ಒಂದು ಹನಿ ಇನ್ಸುಲಿನ್ ಕೂಡ ಉತ್ಪಾ ದನೆಯಾಗುವುದಿಲ್ಲ. ಕಾರ್ಮಿಕರೆಲ್ಲಾ ಖಾಯಂ ಮುಷ್ಕರ ಹೂಡಿದ ಹಾಗೆ ಇದು.
ಹೀಗಾಗಿ, ಟೈಪ್ 1 ಡಯಾಬಿಟಿಸ್ ಇರುವವರು (ಹೆಚ್ಚಾಗಿ ಸಣ್ಣ ವಯಸ್ಸಿನ ಮಕ್ಕಳು) ಆರೋಗ್ಯ ವಾಗಿರಲು ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಲೇಬೇಕು. ಇದರಲ್ಲಿ ಅವರ ತಪ್ಪೇನೂ ಇರುವುದಿಲ್ಲ, ಅದು ವಿಧಿಯ ಆಟ!
ಟೈಪ್ 1 ಎಂದರೆ ಇನ್ಸುಲಿನ್ ಇಲ್ಲದ ಪರಿಸ್ಥಿತಿ.
ಟೈಪ್ 2: ಬೀಗದ ಕೈ ಇದ್ದರೂ, ತೆಗೆಯದ ಬಾಗಿಲು!
ಇನ್ನು ಶೇಕಡಾ 95ರಷ್ಟು ಮಂದಿಗೆ ಇರುವುದು ‘ಟೈಪ್ 2’ ಮಧುಮೇಹ. ಈ ಕಥೆಯ ವಿಲನ್ ಬೇರೆ! ಇಲ್ಲಿ ಕಾರ್ಖಾನೆ ಸರಿಯಾಗಿ ಕೆಲಸ ಮಾಡುತ್ತಿರುತ್ತದೆ. ಇನ್ಸುಲಿನ್ ಕೂಡ ಉತ್ಪಾದನೆಯಾಗು ತ್ತಿರುತ್ತದೆ. ಉತ್ಪಾದನೆಯಾದ ಇನ್ಸುಲಿನ್, ಸಕ್ಕರೆಯನ್ನು (ಗ್ಲೂಕೋಸ್) ಕರೆದುಕೊಂಡು ಜೀವ ಕೋಶದ ಬಾಗಿಲ ಬಳಿ ಬಂದು ‘ಬಾಗಿಲು ತೆಗೆಯಿರಿ, ನಿಮಗೆ ಶಕ್ತಿ ತುಂಬಲು ಸಕ್ಕರೆ ತಂದಿದ್ದೇನೆ’ ಎಂದು ಬಡಿಯುತ್ತದೆ. ಆದರೆ, ಒಳಗಿರುವ ಜೀವಕೋಶಗಳು ಬಾಗಿಲನ್ನು ತೆರೆಯುವುದೇ ಇಲ್ಲ! ಇದನ್ನೇ ವೈದ್ಯಕೀಯ ಭಾಷೆಯಲ್ಲಿ ‘ಇನ್ಸುಲಿನ್ ರೆಸಿಸ್ಟೆನ್ಸ್’ ಎನ್ನುತ್ತಾರೆ. ಬೀಗ ತುಕ್ಕು ಹಿಡಿದು ಬೀಗದ ಕೈ ಕೆಲಸ ಮಾಡದ ಸ್ಥಿತಿ ಇದು!
ಟೈಪ್ 2 ಎಂದರೆ ಇನ್ಸುಲಿನ್ ಇದ್ದರೂ ಇಲ್ಲದ ಪರಿಸ್ಥಿತಿ!
ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ಉಪಯೋಗಿಸಿಕೊಳ್ಳಲು ಆಗದೆ ಆಗುವ ಕಷ್ಟ, ರಕ್ತದಲ್ಲಿ ಗ್ಲೂಕೋಸ್ ತುಂಬಿ ತುಳುಕಿ ರಕ್ತನಾಳ ಹಾಗೂ ಅಂಗಗಳಿಗೆ ಆಗುವ ಪೆಟ್ಟು ಬೇರೆ! ಯಾಕೆ ಬಾಗಿಲು ಹಾಕಿಕೊಳ್ಳುತ್ತವೆ? ಇದಕ್ಕೆ ಉತ್ತರ ನಮ್ಮ ಇಂದಿನ ಜೀವನಶೈಲಿಯಲ್ಲಿದೆ. ನಮ್ಮ ಹಿಂದಿನ ತಲೆಮಾರಿ ನವರು ನಾರಿನಂಶ (ಫೈಬರ್) ಹೆಚ್ಚಿರುವ ಪ್ರಕೃತಿದತ್ತವಾದ ಧಾನ್ಯಗಳು, ಪಾಲಿಷ್ ಮಾಡಿರದ ಅಕ್ಕಿಯ ಅನ್ನ, ರಾಗಿ ಮುದ್ದೆ, ತರಕಾರಿ ತಿನ್ನುತ್ತಿದ್ದರು. ಅವು ನಿಧಾನವಾಗಿ ಕರಗಿ, ಹನಿಹನಿಯಾಗಿ ರಕ್ತಕ್ಕೆ ಸಕ್ಕರೆಯನ್ನು ಬಿಡುತ್ತಿದ್ದವು. ಜೊತೆಗೆ ಅವರು ಮನೆಯಲ್ಲಿ, ಗದ್ದೆಯಲ್ಲಿ ಮೈಬೆವರಿ ದುಡಿ ಯುತ್ತಿದ್ದರು, ಮೈಲುಗಟ್ಟಲೆ ನಡೆಯು ತ್ತಿದ್ದರು. ಆ ದಿನ ತಿಂದ ಅಷ್ಟೂ ಶಕ್ತಿ ಅಂದೇ ಖರ್ಚಾಗು ತ್ತಿತ್ತು.
ಆದರೆ ನಮ್ಮ ಇಂದಿನ ಕಥೆ ಏನು? ನಾವೀಗ ಅತಿಯಾಗಿ ಸಂಸ್ಕರಿಸಿದ ಆಹಾರ, ಮೈದಾ, ಬೇಕರಿ ತಿಂಡಿಗಳು, ಪಾಲಿಶ್ ಮಾಡಿದ ಅಕ್ಕಿ ಮತ್ತು ಅತ್ಯಂತ ಸರಳ ಸಕ್ಕರೆ (ಸಕ್ಕರೆ ಹಾಗೂ ಬೆಲ್ಲ ಇರುವ ವಸ್ತುಗಳು) ತಿನ್ನುತ್ತಿದ್ದೇವೆ. ಇವು ಹೊಟ್ಟೆಗೆ ಹೋದ ತಕ್ಷಣವೇ ’‘ಲೆಟ್ ಟ್ರೈನ್’ ವೇಗದಲ್ಲಿ ಕರಗಿ, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ದಿಢೀರನೆ ಏರಿಸಿ ಬಿಡುತ್ತವೆ. ಇಷ್ಟೆಲ್ಲಾ ಸಕ್ಕರೆ ತುಂಬಿದ ಆಹಾರ ತಿಂದರೂ ನಾವು ಮಾಡುವ ದೈಹಿಕ ಕೆಲಸವೇನು? ಎಸಿ ರೂಮಿನಲ್ಲಿ ಕುಳಿತು ದಿನವಿಡೀ ಕಂಪ್ಯೂ ಟರ್ ಮೌಸ್ ಕ್ಲಿಕ್ ಮಾಡುವುದು ಅಥವಾ ಸೋಫಾ ಮೇಲೆ ಒರಗಿ ಮೊಬೈಲ್, ಟಿವಿ ನೋಡುವುದು!
ದೈಹಿಕ ಶ್ರಮವಿಲ್ಲದ ಕಾರಣ, ಜೀವಕೋಶಗಳು ಮೊದಲೇ ಇರುವ ಶಕ್ತಿ ಉಪಯೋಗವಾಗದೇ ತುಂಬಿ ಬೊಜ್ಜಾಗಿರುತ್ತವೆ. ಹೀಗಿರುವಾಗ ಇನ್ಸುಲಿನ್ ಬಂದು ‘ಇನ್ನೂ ಸ್ವಲ್ಪ ಸಕ್ಕರೆ ತಗೋ’ಎಂದರೆ, ‘ಸ್ವಾಮಿ, ಇವರೋ ಯಾವ ಕೆಲಸವೂ ಮಾಡದೆ ಸುಮ್ಮನೆ ಮೊಬೈಲ್ ನೋಡ್ತಾ ಕೂತಿದ್ದಾರೆ. ನಮಗೆ ಯಾವ ಶಕ್ತಿಯೂ ಬೇಡ, ದಯವಿಟ್ಟು ಹೋಗಿ’ ಎಂದು ಜೀವಕೋಶಗಳು ಇನ್ಸುಲಿನ್ ಅನ್ನು ವಾಪಸ್ ಕಳುಹಿಸಿ ಬಿಡುತ್ತವೆ.
ಪರಿಣಾಮ? ಜೀವಕೋಶಗಳು ಬಾಗಿಲು ತೆರೆಯದ ಕಾರಣ, ಸಕ್ಕರೆಯೆಲ್ಲಾ ರಕ್ತದ ನಾಳಗಳಲ್ಲೇ ಶೇಖರಣೆಯಾಗಿ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತದೆ. ಇದನ್ನು ‘ಇನ್ಸುಲಿನ್ ವಿರೋಧ’ (ಇನ್ಸುಲಿನ್ ರೆಸಿಸ್ಟೆನ್ಸ್) ಎನ್ನುವುದು. ಬೀಗ ತುಕ್ಕು ಹಿಡಿದು ಬೀಗದ ಕೈ ಕೆಲಸ ಮಾಡದ ಸ್ಥಿತಿ ಇದು!
ಏನು ಮಾಡಬೇಕು?: ಹಾಗಾಗಿ, ಟೈಪ್ 1 ಎನ್ನುವುದು ನಮ್ಮ ನಿಯಂತ್ರಣದಲ್ಲಿ ಇಲ್ಲದ ಮುಷ್ಕರ. ಆದರೆ ಟೈಪ್ 2 ಎನ್ನುವುದು ಸಾಮಾನ್ಯವಾಗಿ, ನಾವಾಗಿಯೇ ಆಹ್ವಾನಿಸಿ ತಂದುಕೊಂಡಿರುವ ಅತಿಥಿ. ಮಧುಮೇಹ ಬಂದ ಕೂಡಲೇ ಭಯಪಡುವ ಅಗತ್ಯವಿಲ್ಲ. ಪ್ಯಾಕೆಟ್‌ಗಳಲ್ಲಿ ಬರುವ ಸಂಸ್ಕರಿಸಿದ ಆಹಾರವನ್ನು ಬಿಟ್ಟು ಪ್ರಕೃತಿಗೆ ಹತ್ತಿರವಾದ ಮತ್ತು ನಾರು ಜಾಸ್ತಿ ಇರುವ ಆಹಾರ ಸೇವಿಸುವುದು ಮತ್ತು ಪ್ರತಿದಿನ ನಿಯಮಿತವಾಗಿ ಬೆವರು ಸುರಿಸಿ ವ್ಯಾಯಾಮ ಮಾಡುವುದೇ ಇದಕ್ಕೆ ಮದ್ದು.
ಜ್ಞಾಪಕ ಇರಲಿ: ಹಿಂದಿನ ಕಾಲದವರ ತರಹ ತಿನ್ನಬೇಕೆಂದರೆ, ಅವರ ಹಾಗೆ ದುಡಿಯಲೂ ಸಿದ್ಧರಿರಬೇಕು! ನಿಮ್ಮ ದೇಹಕ್ಕೆ ದೈಹಿಕ ಕೆಲಸ ಕೊಟ್ಟರೆ ಮಾತ್ರ, ಆ ‘ತುಕ್ಕು ಹಿಡಿದ ಬಾಗಿಲುಗಳಿಗೆ’ ಎಣ್ಣೆ ಬಿಟ್ಟ ಹಾಗೆ ಆಗಿ, ನಮ್ಮ ದೇಹದ ಇನ್ಸುಲಿನ್ ಮತ್ತೆ ಸರಿಯಾಗಿ ಕೆಲಸ ಮಾಡಲು ಶುರು ಮಾಡುತ್ತದೆ.