'ಜಾನಕಿʼ ನಮ್ಮ ಕಾಲದ ಅದ್ಭುತ ಗಾಯಕಿ !
ಮೊನ್ನೆ ತಾನೆ ನಮ್ಮನ್ನು ಅಗಲಿದ ಗಾಯಕಿ, ಎಸ್.ಜಾನಕಿಯವರನ್ನು ನಾನು ಸುಮಾರು ಮೂವತ್ತು ವರ್ಷಗಳಿಂದ ಹತ್ತಿರದಿಂದ ನೋಡಿದ್ದೇನೆ, ಅವರ ಕೈ ತುತ್ತು ತಿಂದಿದ್ದೇನೆ, ಅವರ ಅಸದಳ ವಾತ್ಸಲ್ಯ ವನ್ನು ಅನುಭವಿಸಿದ್ದೇನೆ. ಎಸ್.ಜಾನಕಿಯವರು ಸಂಗೀತಕ್ಕಾಗಿಯೇ ಅವತರಿಸಿದವರು. ಹಾಡನ್ನು ಬಿಟ್ಟು ಅವರ ಜೀವನದಲ್ಲಿ ಇನ್ನೇನು ಇರಲಿಲ್ಲ. ದೇವರು ಅವರಿಗಾಗಿಯೇ ಸೃಷ್ಟಿಸಿದಂತಿದ್ದ ರಾಮಪ್ರಸಾದ್ ಅವರಂತಹ ಪತಿ, ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.
-
ಎನ್.ಎಸ್.ಶ್ರೀಧರ ಮೂರ್ತಿ
‘ಅವರೊಬ್ಬರು ಅದ್ಭುತ ಗಾಯಕಿ’ ಎಂದು ಅತಿಶಯೋಕ್ತಿಯಲ್ಲಿ ಮಾತನಾಡುವುದು ರೂಢಿಗತ ವಾಗಿದೆ. ಬಹಳಷ್ಟು ಸಲ ಅದು ಉತ್ಪ್ರೆಕ್ಷೆಯೇ ಆಗಿರುತ್ತದೆ. ಆದರೆ ಎಸ್.ಜಾನಕಿ ಯವರ ಮಟ್ಟಿಗೆ ಹಾಗಲ್ಲ, ಅವರಂತಹ ಗಾಯಕಿ ಇನ್ನೊಬ್ಬರಿಲ್ಲ ಎನ್ನುವುದನ್ನು ಹಲವು ನೆಲೆಗಳಿಂದ ಹೇಳಬಹುದು.
ಮೊನ್ನೆ ತಾನೆ ನಮ್ಮನ್ನು ಅಗಲಿದ ಗಾಯಕಿ, ಎಸ್.ಜಾನಕಿಯವರನ್ನು ನಾನು ಸುಮಾರು ಮೂವತ್ತು ವರ್ಷಗಳಿಂದ ಹತ್ತಿರದಿಂದ ನೋಡಿದ್ದೇನೆ, ಅವರ ಕೈ ತುತ್ತು ತಿಂದಿದ್ದೇನೆ, ಅವರ ಅಸದಳ ವಾತ್ಸಲ್ಯ ವನ್ನು ಅನುಭವಿಸಿದ್ದೇನೆ. ಎಸ್.ಜಾನಕಿಯವರು ಸಂಗೀತಕ್ಕಾಗಿಯೇ ಅವತರಿಸಿದವರು. ಹಾಡನ್ನು ಬಿಟ್ಟು ಅವರ ಜೀವನದಲ್ಲಿ ಇನ್ನೇನು ಇರಲಿಲ್ಲ. ದೇವರು ಅವರಿಗಾಗಿಯೇ ಸೃಷ್ಟಿಸಿದಂತಿದ್ದ ರಾಮಪ್ರಸಾದ್ ಅವರಂತಹ ಪತಿ, ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.
‘ಕೆಂಪು ದೀಪ ಹತ್ತುವುದು ಆರುವುದನ್ನು ನೋಡುತ್ತಲೇ ನನ್ನ ಜೀವನ ಕಳೆದು ಹೇಳಿದ್ದುಂಟು. ಅವರೊಬ್ಬ ಹೋಯಿತು’ ಎಂದು ಅವರೊಮ್ಮೆ ಅದ್ಭುತ ಗಾಯಕಿ! ಆದರೆ, ‘ನಾನು ಸಂಗೀತವನ್ನು ಕಲಿತೇ ಇಲ್ಲ’ ಎಂದು ಅವರು ಒಮ್ಮೊಮ್ಮೆ ಹೇಳುತ್ತಿದ್ದರು! ಆದರೆ ಎರಡನೆಯ ವರ್ಷದಿಂದಲೇ ಹಾಡಲು ಆರಂಭಿಸಿದ ಚೈಲ್ಡ್ ವಂಡರ್ ಅವರು. ಹತ್ತನೆಯ ವರ್ಷದಲ್ಲಿ ನಾದಸ್ವರ ವಿದ್ವಾನ್ ಪಯಡಿ ಸ್ವಾಮಿಯವರ ಬಳಿ ಸಂಗೀತ ಕಲಿಸುವ ಪ್ರಯತ್ನ ನಡೆದಿತ್ತು. ಅವರು ‘ನನಗೆ ಸರಿಗಮಪದ ಅವಶ್ಯಕತೆ ಇಲ್ಲ’ ಎಂದು ‘ನಗುಮೋಮೋ’ದಿಂದಲೇ ಪಾಠ ಆರಂಭಿಸಿದ್ದರು. ಆಗಲೇ ಅವರಿಗೆ ಆಕಾಶವಾಣಿ ಸಂಗೀತ ಸ್ಪರ್ಧೆಯಲ್ಲಿ ಎರಡೆನಯ ಬಹುಮಾನ! ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸ್ವೀಕರಿಸಿದ್ದರು.
ಕಪ್ಪು ಸೊಣಕಲಿ
ಜಾನಕಿಯವರ ಸೋದರ ಮಾವ ವಿ.ಚಂದ್ರಶೇಖರ್ ಮಿಮಿಕ್ರಿ ಕಲಾವಿದರು. ಅವರು ಮುಂದಿನ ತಯಾರಿ ನಡುವೆ, ಒಂದು ಹಾಡನ್ನು ಹಾಡಲು ನಲ್ಲೂರಿನ ಒಂದು ಕಾರ್ಯಕ್ರಮದಲ್ಲಿ ಬಾಲಕಿ ಜಾನಕಿಯವರಿಗೆ ಹೇಳಿದರು. ಬಹುತೇಕ ಕಾಲೇಜ್ ವಿದ್ಯಾರ್ಥಿಗಳೇ ತುಂಬಿದ್ದ ಸಭೆಗೆ ಎರಡು ಜಡೆ ಹಾಕಿಕೊಂಡ ಅನಾಕರ್ಷಕ ರೂಪಿನ ‘ಕಪ್ಪು ಸೊಣಕಲಿ’(ಇದೆಲ್ಲವೂ ಜಾನಕಿ ಯವರದೇ ಪದಗಳು.. ಇದನ್ನು ಅವರು ನನಗೆ ಲೆಕ್ಕವಿಲ್ಲದಷ್ಟು ಸಲ ಹೇಳಿದ್ದಾರೆ) ಬಂದಾಗ ಸಭೆಯಲ್ಲಿ ವಿದ್ಯಾರ್ಥಿಗಳ ಗುಸು ಗುಸು ಹೆಚ್ಚಾಯಿತು. ಆದರೆ ‘ಮೇರೆ ದಿಲ್ ಪುಕಾರ್’ ಎಂದು ಹಾಡಲು ಆರಂಭಿಸುತ್ತಿದ್ದಂತೆ ಇಡೀ ಸಭೆ ನಿಶ್ಯಬ್ದ. ಆ ನಂತರ, ಅಂದಿನ ಮುಖ್ಯ ಮಿಮಿಕ್ರಿಗಿಂತಲೂ ಜಾನಕಿಯವರಿಗೆ ಹಾಡಿಗೆ ಬೇಡಿಕೆ ಹೆಚ್ಚಾಯಿತು.
ಇದನ್ನೂ ಓದಿ: S Janaki: ʼʼನಮ್ಮ ನಡುವೆ ಜಗಳ ಸೃಷ್ಟಿಸಿದರು!ʼʼ ಎಸ್. ಜಾನಕಿ ನೆನೆದು ಗಾಯಕಿ ಪಿ. ಸುಶೀಲಾ ಭಾವುಕ
‘ಅವಳು ಅದ್ಭುತ ಪ್ರತಿಭಾವಂತೆ. ನಿಮ್ಮ ಕಾರ್ಯಕ್ರಮಕ್ಕೆ ಹೀಗೆ ಬಳಸಿಕೊಳ್ಳಬೇಡಿ’ ಎಂದು ಹೇಳಿ ದವರು ಮುಂದೆ ಜಾನಕಿಯವರ ಪತಿಯಾದ ರಾಮ್ ಪ್ರಸಾದ್. ಎ.ವಿ.ಎಂ. ಸ್ಟುಡಿಯೋದಲ್ಲಿ ಅಡಿಷನ್ ‘ರಸಿಕಾ ಬಲುಮಾ’ ಹಾಡಿ ಜಾನಕಿ ಆಯ್ಕೆಯಾದರು. ಅಲ್ಲಿಂದ ಮುಂದೆ ಭಾರತೀಯ ಸಂಗೀತ ಲೋಕದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಇದು ಜಾನಕಿಯವರಿಗೆ ಮಾತ್ರ ಸಾಧ್ಯ! ಜಾನಕಿಯವರು ಎಷ್ಟು ಹಾಡುಗಳನ್ನು ಹಾಡಿದ್ದಾರೆ ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.
ನನಗೆ ಮುಖ್ಯವಾಗುವುದು ‘ಅವರು ಹಾಡುಗಳನ್ನು ಹೇಗೆ ಹಾಡಿದ್ದಾರೆ?’ ಎನ್ನುವುದು. ‘ಗೆಜ್ಜೆಪೂಜೆ’ ಚಿತ್ರದ ‘ಗಗನವು ಎಲ್ಲೋ’ ಹಾಡನ್ನು ತೆಗೆದು ಕೊಳ್ಳಿ, ವಿಜಯಭಾಸ್ಕರ್ ಈ ಗೀತೆಯನ್ನು ಅಭೇರಿ ರಾಗದಲ್ಲಿ ಸಂಯೋಜಿಸಿದ್ದಾರೆ. ಇದು ಔಡವ ಸಂಪೂರ್ಣ ರಾಗ. ಈ ಹಾಡಿನಲ್ಲಿ ವಿಜಯಭಾಸ್ಕರ್ ಅವರೋಹಣದಲ್ಲಿ ಚತುಶ್ರುತ ರಿಷಭವನ್ನು ಕೈ ಬಿಟ್ಟಿದ್ದಾರೆ. ಇದನ್ನು ಸಾಧಿಸಿ, ಜಾನಕಿ ಸಲೀಸಾಗಿ ಮಧ್ಯಮದಿಂದ ಕೈಶಕಿ ನಿಷಾದಕ್ಕೆ ಬಂದಿದ್ದಾರೆ. ಈ ಹಾಡನ್ನು ನೂರಾರು ಜನ ಹಾಡಿದ್ದನ್ನು ನಾನು ಕೇಳಿದ್ದೇನೆ, ಯಾರಿಗೂ ರಿಷಭ ಬಿಡುವುದು ಸಾಧ್ಯವಾಗಿಲ್ಲ; ಏಕೆಂದರೆ, ಇದೊಂದು ರೀತಿಯಲ್ಲಿ, ಮೆಟ್ಟಿಲು ಇಳಿಯುವಾಗ ಮೂರು ಮಹಡಿ ಮೆಟ್ಟಿಲುಗಳನ್ನು ಜಂಪ್ ಮಾಡಿದ ಹಾಗೆ! ಸಂಗೀತ ದಲ್ಲಿ ಅದು ಜಾನಕಿಯವರಿಗೆ ಮಾತ್ರ ಸಾಧ್ಯವಾಗುವ ಜಾದು.
‘ಸನಾದಿ ಅಪ್ಪಣ್ಣ’ ಚಿತ್ರದ ‘ಕರೆದರೂ ಕೇಳದೆ. .’ ಗೀತೆ ಯನ್ನು ಬಿಸ್ಮಲ್ಲಾ ಖಾನ್ ಅವರ ಶೆಹನಾಯಿ ಜೊತೆಗೆ ಹಾಡಿದ ಹಾಡು ಎಂದು ಗುರುತಿಸುತ್ತಾರೆ. ಇದರ ಮಹತ್ವ ಅಷ್ಟೇ ಅಲ್ಲ. ಅದು ಸಂಯೋಜಿತವಾಗಿರುವ ಬೆಹಾಗ್ ಪೂರ್ವಾಂಗ ಪ್ರಧಾನ ರಾಗ. ಮಂದ್ರ ಮತ್ತು ಸಪ್ತಕದಲ್ಲಿ ಇದರ ನಡೆ ಪ್ರಜ್ವಲ, ಆದರೆ ಜಾನಕಿ ಅದನ್ನು ತಾರಕಕ್ಕೂ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ನಿಷಾದವನ್ನು ಬಳಿಸಿದ್ದಾರೆ. ಈ ಹಾಡನ್ನು ಹಾಡಲು ಯತ್ನಿಸಿದ ಯಾರಿಗೂ ನಿಷಾದವನ್ನು ತರಲು ಆಗಿಲ್ಲ. ‘ಎರಡು ಕನಸು’ ಚಿತ್ರದ ‘ಪೂಜಿಸಲೆಂದೆ ಹೂಗಳ ತಂದೆ’ ಉದಯರಾಗ ಮಾಯಾಮಾಳವ ಗೌಳದಲ್ಲಿ ಆರಂಭ ವಾಗುತ್ತದೆ. ಅದರ ಕೊನೆಯ ಚರಣ ಅರ್ಪಣೆಯ ಶಿವರಂಜಿನಿಯಲ್ಲಿದೆ. ಜಾನಕಿ ‘ತೆರೆಯೋ ಬಾಗಿಲನು’ ಮೂಲಕ ಮತ್ತೆ ಮಾಯಾಮಾಳವ ಗೌಳಕ್ಕೆ ಸಹಜವಾಗಿ ಬಂದಿದ್ದಾರೆ.
ಬಹುತೇಕರು ರಾಗ ಬದಲಾಯಿಸದೆ ಹಾಡುತ್ತಾರೆ. ಸುಖದ ಸಪ ಗಾನದ ಸಾಧಕಿ ‘ಮರೆಯದ ಹಾಡು’ ಚಿತ್ರದ ‘ಸುಖದ ಸ್ವಪ್ನಗಾನ’ದ ವಿಶೇಷತೆ ಎಂದರೆ ಪಲ್ಲವಿಗಿಂತಲೂ ಪ್ರತಿ ಚರಣದ ಶ್ರುತಿ ಹೆಚ್ಚುತ್ತಾ ಹೋಗಿರುವುದು. ಆ ಮೂಲಕ ಮೂರ್ತದಿಂದ ಅಮೂರ್ತದ ಕಡೆಗೆ ಸಾಗುವುದು; ಹಾಡು ಮುಗಿದ ನಂತರ ಕೇಳುಗರ ಮನದಲ್ಲಿಯೇ ಒಂದು ಹಾಡು ಸೃಷ್ಟಿಯಾಗುವುದು ಇದರ ಸಂಗೀತ ಸಂಯೋಜಕ ಜಿ.ಕೆ.ವೆಂಕಟೇಶ್ ಮತ್ತು ಗೀತರಚನೆಕಾರ ಮತ್ತು ನಿರ್ದೇಶಕ ಗೋಪಾಲ್ ಅವರ ಉದ್ದೇಶ.
‘ಇದನ್ನು ಅದ್ಭುತವಾಗಿ ಜಾನಕಿ ಸಾಽಸಿದ್ದಾರೆ’ ಎಂದು ಜಿ.ಕೆ.ವೆಂಕಟೇಶ್ ಸದಾ ಹೇಳುತ್ತಿದ್ದರು. ‘ಉಪಾಸನೆ’ ಚಿತ್ರದ ‘ಭಾರತ ಭೂಶಿರ ಮಂದಿರ ಸುಂದರಿ’ ವಿಜಯ ಭಾಸ್ಕರ್ ಅವರಿಗೆ ಬಹುಪ್ರಿಯ ವಾದ ಸಾರಮತಿ ರಾಗದ ಸಂಯೋಜನೆ. ಇದು ಸಂಪೂರ್ಣ ಔಡವರಾಗ ಅವರೋಹಣದಲ್ಲಿ ಪಂಚಮ ಮತ್ತು ರಿಷಭ ಎರಡೂ ಇಲ್ಲ. ಅದನ್ನು ಮಧುರವಾಗಿ ಹಾಡುವುದು ಬಹಳ ಕಷ್ಟ. ಜಾನಕಿ ಅದನ್ನು ಸಾಽಸಿದ್ದಾರೆ. ಅಷ್ಟೇ ಅಲ್ಲ ’ಪಂಚಮ ಧಾರಿಣಿ’ ಅಂತಹ ರೂಪಕ ಪಂಚಮ ದಲ್ಲಿಯೇ ಇದೆ. ಅಲ್ಲಿ ಶಬ್ದ, ಅರ್ಥದ ಜೊತೆಗೆ ನಾದವೂ ಸೇರಿದೆ. ಜಾನಕಿ ಮಾತ್ರ ಈ ಮೂರನ್ನು ಸಾಧಿಸಿದ್ದಾರೆ.
ಅವಧೂತ ರಾಗ ಎನ್ನಿಸಿ ಕೊಂಡಿರುವ ಭೈರಾಗಿ ಭೈರವ್ ನಲ್ಲಿ ಗಾಂಧಾರ ಮತ್ತು ನಿಷಾದ ಎರಡೂ ಸ್ವರಗಳು ಇಲ್ಲ. ‘ನಾ ನಿನ್ನ ಬಿಡಲಾರೆ’ ಚಿತ್ರದ ‘ಬಿಡೆನು ನಿನ್ನ ಪಾದ’ ಗೀತೆಯಲ್ಲಿ ಜಾನಕಿ ಮಧ್ಯಮ ದ ಏಣಿ ಹತ್ತಿ ಬಹಳ ಸಲೀಸಾಗಿ ತಾರಕಕ್ಕೆ ಹೋಗಿದ್ದಾರೆ. ಅವರನ್ನು ಅನುಸರಿಸಲು ಹೋದವ ರೆಲ್ಲರೂ ಮುಗ್ಗರಿಸಿ ಬಿದ್ದಿ ದ್ದಾರೆ. ‘ಕೃಷ್ಣ ನೀ ಬೇಗನೆ ಬಾರೋ’ ಚಿತ್ರದ ‘ಈ ರಾಧೆಗೆ ಗೋಪಾಲನಾ’ ಚಾರುಕೇಶಿ ರಾಗದಲ್ಲಿರುವ ಸಂಯೋಜನೆ. ಇದರಲ್ಲಿ ಜಾನಕಿ ಪಂಚಮ ಬಳಿಸಿರುವ ಕ್ರಮ ಯಾರೂ ಅನುಕರಿಸುವುದು ಅಸಾಧ್ಯ. ಅರ್ಥವನ್ನು ಅರಿತು ಹಾಡಿದವರು ಎಸ್.ಜಾನಕಿ ಸಾಕಷ್ಟು ಕವಿಗೀತೆ ಗಳನ್ನು ಹಾಡಿದ್ದಾರೆ ಎನ್ನುವುದರ ಜೊತೆಗೆ ಅತ್ಯಂತ ಸ್ಪುಟವಾಗಿ ಅರ್ಥವನ್ನು ಅರಿತು ಹಾಡಿದ್ದಾರೆ ಎನ್ನುವುದು ಮುಖ್ಯ.
ಮೋಹನ ರಾಗದಲ್ಲಿ ಸಂಯೋಜಿತವಾದ ‘ಯಾವ ಜನ್ಮದ ಮೈತ್ರಿ’ಯನ್ನು ಅವರು ಹಾಡಿದ ಮೇಲೆ ಈ ರಾಗದಲ್ಲಿ ಕನಿಷ್ಟ ಮುನ್ನೂರು ಭಾವಗೀತೆಗಳು ಬಂದಿವೆ. ಅದರಲ್ಲಿಯೂ ‘ವಿಶ್ವಜೀವನವೊಂದು’ ಸಾಲನ್ನು ಅವರು ಹಾಡಿರುವ ಕ್ರಮ ಅನನ್ಯ. ಮೋಹನ ಮಂದ್ರಸಪ್ತಕದ ರಾಗ ಅಲ್ಲಿ ತಾರಕಕ್ಕೆ ಹೋಗಲು ಅವಕಾಶವೇ ಇಲ್ಲ. ಜಾನಕಿ ಈ ಸಾಲಿನಲ್ಲಿ ಸಲೀಸಾಗಿ ತಾರಕಕ್ಕೆ ಹೋಗಿದ್ದಾರೆ.
‘ಮೂಡಣ ಮನೆಯ’ ‘ತಾಯ ಬಾರ ಮೊಗವ ತೋರ’ ‘ದೋಣಿ ಸಾಗಲಿ’ ಮೊದಲಾದ ಕವಿಗೀತೆ ಗಳಿಗೂ ಇದು ಅನ್ವಯ. ‘ಹೇಮಾವತಿ’ ಚಿತ್ರದ ‘ಶಿವ ಶಿವ ಎನ್ನದ ನಾಲಿಗೆ’ ಗೀತೆಯಲ್ಲಿ ಅವರ ತೋಡಿ-ಅಭೋಗಿ ರಾಗಗಳನ್ನು ಸರಿದೂಗಿಸುವ ಜೊತೆಗೆ ಅರ್ಥವನ್ನು ನಿಖರವಾಗಿ ಹಿಡಿದಿದ್ದಾರೆ ಎನ್ನುವುದು ಮುಖ್ಯ. ಪೂರ್ವಿ ಕಲ್ಯಾಣಿ ಯಲ್ಲಿ ಸಂಯೋಜಿತವಾಗಿರುವ ‘ಸಂಧ್ಯಾರಾಗ’ ಚಿತ್ರದ ‘ನಂಬಿದೆ ನಿನ್ನ ನಾದ ದೇವತೆ’ಯನ್ನು ಭೀಮಸೇನ್ ಜೋಶಿ ಮತ್ತು ಬಾಲಮುರಳಿ ಕೃಷ್ಣ ಕೂಡ ಹಾಡಿದ್ದಾರೆ. ಆದರೆ ಅರ್ಥಸ್ಪಷ್ಟವಾಗಿರುವುದು ಜಾನಕಿಯವರ ಗಾಯನದಲ್ಲಿಯೇ, ಇದೇ ರಾಗದಲ್ಲಿರುವ ‘ದೀಪವು ನಿನ್ನದೆ’ ಜಾನಕಿಯವರು ಹಾಡಿರುವ ಇನ್ನೊಂದು ಅದ್ಭುತ. ‘ಸಂತ ತುಕಾರಾಂ’ ಚಿತ್ರದ ’ಬೇಡ ಕೃಷ್ಣ ರಂಗಿ ನಾಟ’ ಗೀತೆಯಲ್ಲಿ ನಗುತ್ತಲೇ ಅವರು ಗ-ಪ-ದ-ಸ ಸ್ವರಗಳನ್ನು ಅಚ್ಚರಿ ಮೂಡಿಸುವಂತೆ ನಿರಾಯಾಸವಾಗಿ, ಪರಿಪೂರ್ಣವಾಗಿ ಹಾಡಿದ್ದಾರೆ.
ಹಾಡು ಮುಗಿಯುವುದಿಲ್ಲ 2007ರ ಜುಲೈ ತಿಂಗಳ ‘ಮಲ್ಲಿಗೆ ಮಾಸಪತ್ರಿಕೆ’ ಸಂಚಿಕೆ ಯನ್ನು ನಾನು ಆಗ ಗಾಯನದಲ್ಲಿ ಐವತ್ತು ವರ್ಷ ಮುಗಿಸಿದ್ದ ಎಸ್.ಜಾನಕಿ ವಿಶೇಷಾಂಕವಾಗಿ ರೂಪಿಸಿದ್ದೆ. ಅದಕ್ಕಾಗಿ ಸಾವಿರ ಜಾನಕಿಯವರ ಹಾಡಿನ ಪಟ್ಟಿ ಮಾಡಿದ್ದೆ. ಅದರ ಹಿನ್ನೆಲೆಯನ್ನು ಜಾನಕಿ ಯವರು ಪ್ರತಿ ಹಾಡನ್ನು ಗುನುಗುತ್ತಲೇ ಹೇಳಿದ್ದರು. ಅದು ಮುಗಿ ದಾಗ ‘ಅಯ್ಯೋ ಈ ಅಲೌಕಿಕ ಅನುಭವ ಮುಗಿಯಿತೆ’ ಎಂದು ಕಣ್ಣಿನಲ್ಲಿ ನೀರು ತುಂಬಿತು.
ಆಗ ಜಾನಕಿ ನನ್ನ ಬೆನ್ನು ತಟ್ಟಿ.. ‘ನಾನು ಎಲ್ಲೋ ಹೋಗಲ್ಲ ಹಾಡಿನಲ್ಲೇ ಇರುತ್ತೇನೆ’ ಎಂದಿದ್ದರು. ಅವರು ಸದಾ ಹಾಡಿನ ಜೊತೆಗೇ ಇದ್ದರೂ. 2017ರಲ್ಲಿ ಸಾರ್ವಜನಿಕವಾಗಿ ಹಾಡುಗಾರಿಕೆ ನಿಲ್ಲಿಸಿ ದರೂ ಕೊನೆಯ ದಿನದವರೆಗೂ ಹಾಡುತ್ತಾ, ಸಂಯೋಜನೆ ಮಾಡುತ್ತಲೇ ಇದ್ದರು. .. ಅವರು ಇನ್ನು ಮುಂದೆಯೂ ಹಾಡಿನಲ್ಲಿಯೇ ನಮ್ಮ ಜೊತೆಗೆ ಇರುತ್ತಾರೆ. ಎಲ್ಲೂ ಹೋಗಲ್ಲ ಅಮ್ಮ ಎಲ್ಲೋ ಹೋಗಲ್ಲ ನಮ್ಮನ್ನು ಬಿಟ್ಟು ಎಂದಿಗೂ ಅವರು ದೂರ ಆಗಲ್ಲ.