ಸ್ವಾರ್ಥಿಗಳಿಗೆ ಶರಣರ ವಚನಗಳು ಎಚ್ಚರಿಕೆ ಗಂಟೆ
ಸ್ವಾರ್ಥಿಗಳಿಗೆ ಶರಣರ ವಚನಗಳು ಎಚ್ಚರಿಕೆ ಗಂಟೆ
Vishwavani News
September 7, 2022
ಸಂವಾದ ೩೭೫
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮೃತ್ಯುಂಜಯ ದೊಡ್ಡವಾಡ ಅವರಿಂದ ವಚನ ದರ್ಶನ
ಬೆಂಗಳೂರು: ಶರಣರು ಮಾಡುವ ಕಾಯಕದಲ್ಲಿ ಕೊಂಚವೂ ಸ್ವಾರ್ಥ ಇರುವುದಿಲ್ಲ. ಅವರು ಮಾಡುವ ಕಾಯಕದಿಂದ ಬರುವ
ಪ್ರತಿಫಲವೆಲ್ಲಾ ಗುರುಲಿಂಗ ಜಂಗಮಕ್ಕೆ ಸಮರ್ಪಿತ. ಗುರುಲಿಂಗ ಜಂಗಮವನ್ನು ಸಂಕೇತವನ್ನಾಗಿಟ್ಟುಕೊಂಡು ಕಾಯಕದಿಂದ ಗಳಿಸಿದ್ದನ್ನೆಲ್ಲಾ ಲೋಕಕ್ಕೆ ಸಮರ್ಪಿಸುವ ತ್ಯಾಗ ಭವ ಶರಣರದ್ದು.
ಸಮಾಜದಿಂದ ಗಳಿಸಿದ್ದನ್ನು ತಮಗಾಗಿ ತಮ್ಮ ಕುಟುಂಬದ ಸದಸ್ಯರಿಗಾಗಿ ವಿನಿಯೋಗಿ ಸುವ ಇಂದಿನ ದಿನದಲ್ಲಿನ ಸ್ವಾರ್ಥ ಮನೋಭಾವ ಇರುವವರಿಗೆ ಶರಣರ ವಚನಗಳು ಎಚ್ಚರಿಕೆಯ ಗಂಟೆಯಾಗಿದೆ ಎಂದು ವಚನ ಗಾಯನ ಕ್ಷೇತ್ರದ ಮೃತ್ಯುಂಜಯ
ದೊಡ್ಡವಾಡ ಹೇಳಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ವಚನ ದರ್ಶನ ಕಾರ್ಯಕ್ರಮದಲ್ಲಿ ಗಾನಯಾನ ನಡೆಸಿಕೊಟ್ಟ ಅವರು, ವಚನಗಳ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದರು. ಶರಣ ದೃಷ್ಠಿಯಲ್ಲಿ ಸತ್ಯ, ಶುದ್ಧವಾಗಿ ನಡೆಸುವ ಕಾಯಕದ ಉದ್ದೇಶ ಸಾರ್ವ ಜನಿಕ ಕಲ್ಯಾಣ. ತನಗೆ ಬಂದ -ಲವೆಲ್ಲವೂ ಭಗವಂತ ನೀಡಿದ್ದು. ಹೀಗಾಗಿ ಭಗವಂತನ ಆಶಯದಂತೆ ಅದನ್ನು ಸಮಾಜಕ್ಕೆ ಅರ್ಪಿಸಬೇಕಾಗಿರುವುದು ಆಧ್ಯ ಕರ್ತವ್ಯ. ತನಗೆ ಆಶ್ರಯ ನೀಡಿದ ಸಮಾಜವನ್ನು ಎಂದಿಗೂ ಮರೆಯಬಾರದು ಎಂಬುದು ವಚನಗಳ ಆಶಯ ಎಂದರು.
ನಾನು ಸುಗಮ ಸಂಗೀತ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದು ಉದ್ದೇಶಪೂರ್ವಕವಾಗಿ. ಚಲನ ಚಿತ್ರ ಕ್ಷೇತ್ರದಲ್ಲಿ ಸಂಗೀತ ನಿರ್ದೇಶಕನಾಗಿ ಹೋಗಬೇಕು ಎಂದುಕೊಂಡಿದ್ದವನು ಈ ಕ್ಷೇತ್ರಕ್ಕೆ ಬಂದೆ. ಈ ಕ್ಷೇತ್ರದಲ್ಲಿ ಅಳವಾಗಿ ಅಧ್ಯಯನ ನಡೆಸಿದೆ. ಅದರಲ್ಲೂ ಮೈಸೂರು ಅನಂತಸ್ವಾಮಿ ಅವರ ಬಗ್ಗೆ ಹೆಚ್ಚು ಒಲವು ಹೊಂದಿದ್ದೆ.. ಮೊದಲಿನಿಂದ ಸಿ.ಅಶ್ವಥ್ ಅವರ ಹಾಡಿನ ಶೈಲಿಗೆ ಮೋಹಿತನಾಗಿ, ಅವರ ಹಾಡುಗಳನ್ನು ಪ್ರಾರಂಭದ ದಿನಗಳಲ್ಲಿ ಹಾಡುತ್ತಾ ಬಂದಿದ್ದೆ. ಹೀಗಾಗಿ ೨೦೦೫ರಿಂದ ಸುಗಮ ಸಂಗಮ ಸಂಗೀತ ಕ್ಷೇತ್ರದಲ್ಲಿ ಸಂಗೀತ ನಿರ್ದೇಶಕ ನಾಗಿ ಕೆಲಸ ಮಾಡಿಕೊಂಡುಬಂದ್ದೇನೆ ಎಂದು ಹೇಳಿದರು.
ಸಿ.ಅಶ್ವಥ್ ಅವರ ಕೂಡಲ ಸಂಗಮ ಎಂಬ ಧ್ವನಿ ಸುರುಳಿಯಿಂದ ತುಂಬಾ ಆಕರ್ಷಿತನಾದೆ. ಹೀಗಾಗಿ ಶುದ್ಧ ಭಾವಗೀತೆ ಶೈಲಿ ಯಲ್ಲಿ ಎಲ್ಲಾ ಶರಣರ ವಚನವನ್ನು ತರಬೇಕು ಎಂಬ ಆಸೆ ನನ್ನೊಳಗಿತ್ತು. ಅದಕ್ಕೆ ಸಂಪೂರ್ಣ ಬೆಂಬಲ ನೀಡಿದವರು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್. ಅವರ ಪ್ರೋತ್ಸಾಹದಿಂದ ವಚನಗಳಿಗೆ ರಾಗ ಸಂಯೋಜನೆ ಮಾಡಿದ ಸಿಡಿ ಹೊರ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
|| ನಾನು ಆರಂಭವ ಮಾಡುವೆನು ಅಯ್ಯಾ ಗುರು ಪೂಜೆಗೆಂದು ನಾನು ವ್ಯವಹಾರವ ಮಾಡುವೆನು ಅಯ್ಯಾ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನು ಅಯ್ಯಾ ಜಂಗಮದಾಸೋಕೆಂದು ನಾನಾವಾವಾ ಕರ್ಮಂಗಳ ಮಾಡಿದೆನು ಆ ಕರ್ಮ ಫಲಭೋಗವ ನೀ ಕೊಡುವೆ ಎಂಬುದ ಬಲ್ಲೆ ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನೂ, ನಿಮ್ಮ ಸೊಮ್ಮಿಂಗೆ ಸಲ್ಲಿಸುವೆನೋ ನಿಮ್ಮಾಣೆ ಕೂಡಲ ಸಂಗಮದೇವ ||
ಎಂಬ ಬಸವಣ್ಣನ ಹಾಡುಗಳನ್ನು ಹೇಳಿ ಶ್ರೋತೃಗಳಿಗೆ ಅದರ ಅರ್ಥವನ್ನು ವಿವರಿಸಿದರು.
ವಚನದಲ್ಲೇ ಹೇಳಿದಂತೆ, ನಾವು ಆಡುವ ಮಾತು ಮುತ್ತಿನ ಹಾರದಂತಿರಬೇಕು. ಮಾತಿಗೆ ಸತ್ಯದ ಹೊಳಪಿರಬೇಕು. ಮಾತು ಪಾರದರ್ಶಕವಾಗಿ ಹಾಗು ಪ್ರಾಮಾಣಿಕವಾಗಿಯೂ ಇರಬೇಕು. ಎಲ್ಲಕ್ಕಿಂತ ಮಿಗಿಲಾಗಿ ಲಿಂಗ ಮೆಚ್ಚುವ ರೀತಿಯಲ್ಲಿ ಆತ್ಮ ಸಾಕ್ಷಿಗೆ ಅನುಗುಣವಾಗಿರಬೇಕು. ನುಡಿದಂತೆ ನಡೆಯದಿದ್ದರೆ ಶಿವನು ಒಲಿಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಬಸವಣ್ಣ.
ಅಲ್ಲಮಪ್ರಭುಗಳು ಹೇಳುವಂತೆ ಮಾತೆಂಬುದು ಜೋತಿರ್ಲಿಂಗ. ಮಾತು ಸತ್ಯದ ಸ್ಪರ್ಷದಿಂದ ಜೋತಿ ಸ್ವರೂಪದ ದಿವ್ಯ ಮಂತ್ರ ವಾಗುತ್ತದೆ. ಶರಣರು ನುಡಿ ಜಾಣರಲ್ಲ, ನಡೆ-ನುಡಿಯ ಸಮನ್ವಯಕಾರರು ಎಂದ ಅವರು ಬಸವಣ್ಣವರ ವಚನಗಳನ್ನು ಹೇಳಿ ರಂಜಿಸಿದರು.
|| ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಪಟಿಕದ ಶಲಾಕೆಯಂತಿರ ಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮ ದೇವನೆಂತೊಲಿವ ನಯ್ಯಾ||
|| ಜ್ಞಾನದ ಬಲದಿಂದ ಅeನದ ಕೇಡು ನೋಡಯ್ಯಾ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ||
ಕಳಬೇಡ ಕೊಲಬೇಡ ಹುಸಿಯ ನುಡಿಯಲೂ ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡೆ ತನ್ನ ಬಣ್ಣಿಸ ಬೇಡ ಇದಿರ ಅಳಿಯಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೆ ನಮ್ಮ ಕೂಡಲ ಸಂಗಮ ದೇವ ಒಲಿಸುವ ಪರಿ||
ಎಂದು ಹೇಳುತ್ತಾ ಅದರ ಅರ್ಥವನ್ನು ಬಿಡಿಸಿ ಶ್ರೋತೃಗಳ ಮನರಂಜಿಸಿದರು.