Yagati Raghu Naadig : ನೋಡಿಲ್ಲಿ ಕೊಂಚ..ಇದೇ ನೋಡು ಪ್ರವಾಸಿ ಪ್ರಪಂಚ
“ಅಬಾಧಿತ ಜ್ಞಾನದ ಹರಿವು, ಜೀವನಾನುಭವ, ಆಮೋದ, ಖುಷಿ, ಹಿಗ್ಗು, ನಲಿವು, ವಿವಿಧ ಪ್ರಾಂತ್ಯ ಗಳ ಬಗೆಬಗೆಯ ಭಕ್ಷ್ಯ-ಭೋಜ್ಯಗಳನ್ನು ಸವಿದು ನಾಲಿಗೆಯ ರುಚಿಯನ್ನು ತಣಿಸಿಕೊಳ್ಳುವಿಕೆ ಮತ್ತು ಅಲ್ಲಿನ ಜೀವನಶೈಲಿಯನ್ನು ಆಸ್ವಾದಿಸುವ ಅವಕಾಶ ಇವೆಲ್ಲ ಒಂದೇ ಗುಕ್ಕಿಗೆ ದಕ್ಕಬೇಕೆಂದರೆ, ‘ಪ್ರಯಾಣ-ಪ್ರವಾಸ-ಪರ್ಯಟನೆ-ಯಾತ್ರೆ-ದೇಶ ಸಂಚಾರ’ ಎಂದೆಲ್ಲಾ ಕರೆಯಲ್ಪಡುವ ‘ಊರು ಸುತ್ತೋ ಕಸುಬು’ ಬೆಸ್ಟು ಕಣ್ರೀ!"


ಇದು ಒಬ್ಬಿಬ್ಬರ ಮಾತಲ್ಲ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕೂತ ಕಡೆ ಕೂರದೆ, ನಿಂತ ಕಡೆ ನಿಲ್ಲದೆ, ಗೋಲಿ ಗಾತ್ರದ ಕಂಗಳಲ್ಲಿ ಜಗವನ್ನೇ ತುಂಬಿಕೊಂಡು ಬೆರಗಾಗಲು ಹಾತೊರೆಯುವವರ ನಿತ್ಯ ಸ್ಲೋಗನ್ನು. ಇಂಥ ‘ಪರ್ಯಟನಾ-ಪ್ರಿಯ’ ಪಂಟರುಗಳ ತವಕ, ಕುತೂಹಲ, ಆಸಕ್ತಿಗಳನ್ನು ತಣಿಸಲೆಂದೇ ಇತ್ತೀಚೆಗೆ ಬಿಡುಗಡೆಯಾಗಿದೆ ‘ಪ್ರವಾಸಿ ಪ್ರಪಂಚ’ ವಾರ ಪತ್ರಿಕೆ. ಇದು ‘ವಿಶ್ವವಾಣಿ’ ಪತ್ರಿಕಾ ಬಳಗದ ಮತ್ತೊಂದು ಸಾಹಸ ಎಂಬುದು ನಿಮ್ಮ ಗಮನಕ್ಕೆ.
ತಿರುಗಿ ಕೆಟ್ಟವರಿಲ್ಲ, ಮರುಗಿ ಫಲವಿಲ್ಲ ‘ಜ್ಞಾನದ ಪರಿಧಿ ಹಿಗ್ಗಬೇಕೆಂದರೆ ಒಂದೋ ದೇಶ ಸುತ್ತಬೇಕು, ಇಲ್ಲವೇ ಕೋಶವನ್ನು ಓದಬೇಕು’ ಎಂಬುದು ಬಲ್ಲವರು ಆಡುವ ಬೆಲ್ಲದಂಥ ಮಾತು. ಆದರೆ, ‘ದೇಶ’ ಸುತ್ತೋರಿ ಗೆಂದೇ ಒಂದು ‘ಕೋಶ’ವನ್ನು ಸಜ್ಜುಗೊಳಿಸಬೇಕು ಎಂಬ ‘ಸೃಜನಶೀಲ ಕೀಟ’ ತಲೆಯೊಳಗೆ ಹೊಕ್ಕರೆ ಏನಾಗುತ್ತೆ? ಎಂಬ ಪ್ರಶ್ನೆ ಯಾರಲ್ಲಾದರೂ ಸುರಿಸಿದರೆ ಅದಕ್ಕೆ ಹೊಮ್ಮುವ ಉತ್ತರವೇ ಈ ‘ಪ್ರವಾಸಿ ಪ್ರಪಂಚ’.
ಹೌದು, ಪ್ರವಾಸ ಎಂಬುದು ಕೇವಲ ಒಂದು ಕಡೆ ಬಸ್ಸು ಹತ್ತಿ ಮತ್ತೊಂದು ಕಡೆ ಇಳಿದು ಬಿಡುವಂಥ ಬಾಬತ್ತಲ್ಲ. ಅದಕ್ಕೆ ಸಾಕಷ್ಟು ಮೊದಲೇ ಒಂದು ಯೋಜನೆಯನ್ನು ರೂಪಿಸಿಕೊಳ್ಳ ಬೇಕಾಗುತ್ತದೆ, ಅಗತ್ಯ ಸಾಧನ-ಸಂಪನ್ಮೂಲ-ಸಲಕರಣೆಗಳನ್ನು ಹೊಂದಿಸಿ ಕೊಳ್ಳಬೇಕಾಗುತ್ತದೆ. ನಿರ್ದಿಷ್ಟ ಪ್ರವಾಸಿ ತಾಣಕ್ಕೆ (ಅದು ಐತಿಹಾಸಿಕ/ ಪಾರಂಪರಿಕ ಮಹತ್ವದ್ದೇ ಇರಲಿ, ಶೈಕ್ಷಣಿಕ ಅಧ್ಯಯನದ ಹೆಬ್ಬಯಕೆಗೆ ಒತ್ತಾಸೆಯಾಗುವ ಬೀಡೇ ಆಗಿರಲಿ, ಸುಸ್ತಾಗುವವರೆಗೂ ಮೋಜು-ಮಸ್ತಿಗೆ ಒಡ್ಡಿ ಕೊಳ್ಳುವ ‘ಜಾಲಿ’ ನೆಲೆಯೇ ಇರಲಿ, ಮಧುಚಂದ್ರದ ಮಂಟಪವೇ ಇರಲಿ) ತೆರಳುವುದಕ್ಕೂ ಮುನ್ನ ಉಳಿಯಲು- ಉಣ್ಣಲು-ವಿಹರಿಸಲು ಅಲ್ಲಿ ಲಭ್ಯವಿರುವ ವ್ಯವಸ್ಥೆಗಳ ಕುರಿತು ಮಾಹಿತಿ ವಂತರಾಗಬೇಕಾಗುತ್ತದೆ. ಈ ಎಲ್ಲ ಬಾಬತ್ತುಗಳ ಕಡೆಗೂ ಪ್ರವಾಸಿಗರನ್ನು ‘ಕೈಹಿಡಿದು ನಡೆಸುವ ಕರುಣಾಳು ಕೈಪಿಡಿ’ಯೇ ‘ಪ್ರವಾಸಿ ಪ್ರಪಂಚ’.
ಅನುಭವವೂ ಶ್ರೀಮಂತ, ಬೊಕ್ಕಸವೂ ಸಮೃದ್ಧ
ಕಾಲಾನುಕಾಲಕ್ಕೆ ಪ್ರವಾಸಕ್ಕೆ ತೆರಳುವುದರಿಂದ ವ್ಯಕ್ತಿ ಯೊಬ್ಬನ ದೇಹ ಮತ್ತು ಮನಸ್ಸು ತಾಜಾ ತಾಜಾ ಆಗಿ ನಳನಳಿಸತೊಡಗಿ, ತೊಡಗಿಸಿಕೊಂಡ ಕಾರ್ಯಕ್ಷೇತ್ರದಲ್ಲಿ ನವೋತ್ಸಾಹ ಚಿಮ್ಮುವುದು ಒಂದು ಕಡೆಯಾದರೆ, ಪ್ರವಾಸಿಗರನ್ನೇ ನೆಚ್ಚಿ ಕೊಂಡಿರುವ ನೆಲೆಗಳ ಆಸುಪಾಸಿನಲ್ಲಿ ಬೀಡು ಬಿಟ್ಟಿರುವ ವೈವಿಧ್ಯಮಯ ವ್ಯಾಪಾರ-ವ್ಯವಹಾರ ಚಟುವಟಿಕೆಗಳಿಗೂ ಪ್ರವಾಸಿಗರಿಂದ ಪ್ರತ್ಯಕ್ಷ-ಪರೋಕ್ಷವಾಗಿ ಒತ್ತಾಸೆ ಸಿಕ್ಕಂತಾಗುತ್ತದೆ.
ಇದನ್ನೂ ಓದಿ: Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿ ಕುಲಮೂಲದ ಕಾರ್ಯಾಗಾರ !
ಅದಕ್ಕೆ ಪ್ರತಿಫಲವೆಂಬಂತೆ ಅಂಥ ವ್ಯಾಪಾರಿ ನೆಲೆಗಳಿಂದ ಸರಕಾರಕ್ಕೆ ಯಥೋಚಿತ ಪ್ರಮಾಣದಲ್ಲಿ ತೆರಿಗೆ ಸಲ್ಲಿಕೆಯಾಗುತ್ತದೆ. ಆ ತೆರಿಗೆ ಹಣಕ್ಕೆ ಮತ್ತಷ್ಟು ರೆಕ್ಕೆಪುಕ್ಕಗಳು ಸೇರಿಕೊಂಡು ಪ್ರವಾಸಿಗರಿಗೆ ಅಗತ್ಯವಾಗುವ ಮೂಲಭೂತ ಸೌಕರ್ಯಗಳು ಮೈದಳೆಯುತ್ತವೆ. ಹೀಗೆ ಪ್ರವಾಸಿಯೊಬ್ಬ ತಾನು ಕೈಗೊಂಡ ಪರ್ಯಟನೆಯಿಂದಾಗಿ ತನ್ನ ಅನುಭವದ ಭಂಡಾರವನ್ನು ಸಮೃದ್ಧಗೊಳಿಸಿಕೊಳ್ಳು ದರ ಜತೆಜತೆಗೆ ಸರಕಾರಿ ಬೊಕ್ಕಸಕ್ಕೂ ಹಣ ಹರಿದುಬರುವಂತೆ ಮಾಡುತ್ತಾನೆ. ಸಮಾಜದ ವಿವಿಧ ಸ್ತರಗಳು ಸಂತಸ-ಸಮಾಧಾನದಿಂದ ದಿನದೂಡುವುದಕ್ಕೆ ‘ಪ್ರವಾಸ’ ಎಂಬ ಮೂರಕ್ಷರದ ಬೆರಗು ಹೇಗೆಲ್ಲಾ ನೀರೆರೆಯುತ್ತದೆ, ಅಲ್ಲವೇ?
ದಕ್ಕಿದ್ದನ್ನು ಹಂಚಿಕೊಳ್ಳಿ
ಪ್ರವಾಸ ಮುಗಿಸಿ ಮನೆಗೆ ಮರಳಿದವರನ್ನು ಒಮ್ಮೆ ಗಮನಿಸಿ ನೋಡಿ- ಬೆನ್ನಮೇಲಿನ ಡಿಸ್ಕೋ ಬ್ಯಾಗು, ಪಾದಗಳನ್ನು ಆವರಿಸಿದ್ದ ಸ್ಪೋರ್ಟ್ಸ್ ಷೂಗಳನ್ನು ಇನ್ನೂ ಬಿಚ್ಚಿಯೇ ಇರುವುದಿಲ್ಲ, ಆದರೆ ಅದಾಗಲೇ ಎಲ್ಲವನ್ನೂ ಹೇಳಿಕೊಂಡುಬಿಡುವ ಉಮೇದು ಅವರಲ್ಲಿ ಚಿಮ್ಮುತ್ತಿರುತ್ತದೆ. ಅಂದರೆ, ಎಲ್ಲೆಲ್ಲಿ ಏನೇನು ರೋಮಾಂಚಕ ಅನುಭವಗಳಾದವು, ‘ಪ್ರವಾಸ’ ಅಂದುಕೊಂಡು ಹೋಗಿದ್ದು ಅದ್ಯಾವ ಮಟ್ಟಿಗೆ ‘ಪ್ರಯಾಸ’ ವಾಗಿಬಿಟ್ಟಿತು,
ಹತ್ತಿದ ಬಸ್ಸು ಘಾಟ್ ಸೆಕ್ಷನ್ನಲ್ಲಿ ಬಳುಕುತ್ತಾ ಸಾಗುವಾಗ ಸಹಪ್ರವಾಸಿಯೊಬ್ಬ ಕೊರಳನ್ನು ಕಿಟಕಿಯಾಚೆಗೆ ತೂರಿಸಿ ಹ್ಯಾಗೆ ‘ವ್ಯಾಕ್...’ ಅಂದುಬಿಟ್ಟ, ತೀರ್ಥಕ್ಷೇತ್ರಕ್ಕೆ ತೆಂಗಿನಕಾಯಿ-ಬಾಳೆಹಣ್ಣು ಒಯ್ಯುತ್ತಿರು ವಾಗ ‘ಅದರ ಮೇಲೆ ತಮಗೆ ಮಾತ್ರ ಸಂಪೂರ್ಣ ಹಕ್ಕಿರುವುದು’ ಎಂಬಂಥ ಧೋರಣೆ ಯಲ್ಲಿ ಕೋತಿಗಳ ದಂಡು ‘ದಂಡಯಾತ್ರೆ’ಗೆ ಇಳಿದು ಅಷ್ಟನ್ನೂ ಲೂಟಿ ಹೊಡೆದುಕೊಂಡು ಹೋದರೂ ತಮಗೆ ಸಿಟ್ಟೇ ಬಾರದೆ ಅದನ್ನು ಎಂಜಾಯ್ ಮಾಡಿದ್ದು....
ಈ ಎಲ್ಲ ಘಟನೆಗಳನ್ನು ಮನೆಯಲ್ಲಿರುವವರಿಗೆ ಒಂದೇ ಗುಕ್ಕಿಗೆ ಹೇಳಿಕೊಂಡು ಬಿಡುವ ಉಮೇದು ಅವರಲ್ಲಿ ಉಕ್ಕುತ್ತಿರುತ್ತದೆ. ವ್ಯಕ್ತಿಯೊಬ್ಬನು ತನ್ನ ಇಂಥ ಅನುಭವಗಳನ್ನು ಮಿಕ್ಕವ ರೊಂದಿಗೆ ಹಂಚಿಕೊಂಡಾಗ ಸಿಗುವ ಸಮಾಧಾನವೇ, ಒದ ಗುವ ನಿರಾಳತೆಯೇ ಇಂಥ ವರ್ತನೆಗೆ ಹೇತು ನ್ನುತ್ತಾರೆ ಬಲ್ಲವರು.
ಇಂಥವರಿಗೂ ಪರಿಪೂರ್ಣ ವೇದಿಕೆಯಾಗಬಲ್ಲದು ‘ಪ್ರವಾಸಿ ಪ್ರಪಂಚ’. ಹೌದು, ನಿಮ್ಮಂಥ ‘ತಿರುಗಾಳುಗಳು’ ಪ್ರವಾಸದ ಅನುಭವಗಳನ್ನು ನಿಮ್ಮ ಎದೆಗೂಡಿನಲ್ಲೇ ‘ಫಿಕ್ಸೆಡ್ ಡೆಪಾಸಿಟ್’ ರೀತಿಯಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡು ಅದರಿಂದ ಬರುವ ‘ಬಡ್ಡಿ’ಯನ್ನು ನೀವೊಬ್ಬರೇ ಮೆಲುಕು ಹಾಕುವುದು ಸ್ವಾರ್ಥವಲ್ಲವೇ?! ಅದನ್ನು ಇನ್ನೂ ಸಾವಿರಾರು ಮಂದಿಯೊಂದಿಗೆ ಹಂಚಿ ಕೊಳ್ಳುವುದು ‘ಸಮಾಜಸೇವೆ’ಯ ಮತ್ತೊಂದು ರೂಪವೇ ಅಲ್ಲವೇ?! ಮನೆಯಿಂದ ಹೊರಗೆ ಹೆಜ್ಜೆಯಿಟ್ಟು ಬಯಲಿಗೆ ಬಂದು ಅಲ್ಲಿ ಬಟಾಬಯಲಾಗುವ ನಿಮ್ಮ ಮನ, ತಾನು ದಕ್ಕಿಸಿಕೊಂಡ ಅನುಭವಗಳನ್ನು ಅಕ್ಷರ ರೂಪಕ್ಕೂ ಇಳಿಸಲಿ ಎಂದು ಬಯಸುತ್ತದೆ ‘ಪ್ರವಾಸಿ ಪ್ರಪಂಚ’. ಇನ್ಯಾಕೆ ತಡ? ನಿಮ್ಮೆದುರು ಇರುವ ಕಾಗದವನ್ನೋ, ಕಂಪ್ಯೂಟರ್ ಅನ್ನೋ ಬಳಸಿಕೊಳ್ಳಿರಲ್ಲಾ....!
ಪ್ರವಾಸಿಗರ ನಿಜಕೈಪಿಡಿ
ಕೋಶ ಓದಿಕೊಂಡು ದೇಶ ಸುತ್ತಲು ಬಯಸುವವರಿಗೆ ‘ಪ್ರವಾಸಿ ಪ್ರಪಂಚ’ ದಲ್ಲಿ ಕಾಲಾನುಕಾಲಕ್ಕೆ ಪ್ರಕಟವಾಗುವ ವಿವಿಧ ಪ್ರವಾಸಿ ಸಂಸ್ಥೆಗಳ ‘ಪ್ಯಾಕೇಜ್ ಟೂರ್’ ಸಂಬಂಧಿತ ವಿವರಗಳು ಒತ್ತಾಸೆ ಯಾಗಿ ನಿಲ್ಲಬಲ್ಲವು. ಇಂಥ ವೈವಿಧ್ಯಮಯ ವಿವರಗಳನ್ನು ಪರಸ್ಪರ ತುಲನೆ ಮಾಡಿ, ತಂತಮ್ಮ ಜೇಬಿನ ಸ್ಥಿತಿಗತಿ, ಸಮಯದ ಲಭ್ಯತೆ ಮುಂತಾದ ಅಂಶಗಳಿಗೆ ಫಲಗತ್ತಾಗುವಂಥ ‘ಪ್ಯಾಕೇಜ್’ ಅನ್ನು ಆಯ್ದು ಕೊಳ್ಳುವಲ್ಲಿ ಪ್ರವಾಸಿಗರಿಗೆ ಇವು ನೆರವಾಗಬಲ್ಲವು.
ಖರೀದಿಗೆ ಮಾರ್ಗದರ್ಶಿ
ಮಕ್ಕಳ ಕಲ್ಪನಾಲೋಕವನ್ನು ಮತ್ತಷ್ಟು ವಿಸ್ತರಿಸುವಲ್ಲಿ, ಅವರ ಹಿಗ್ಗಿನಬುಗ್ಗೆಯು ಮತ್ತಷ್ಟು ಉತ್ಸಾಹದಿಂದ ಚಿಮ್ಮುವುದಕ್ಕೆ ಇಂಧನವಾಗಿ ಪರಿಣಮಿಸುವಲ್ಲಿ ತರಹೇವಾರಿ ಆಟಿಕೆಗಳು ತಮ್ಮದೇ ಆದ ಕೊಡುಗೆಯನ್ನು ನೀಡಬಲ್ಲವು. ಇಂಥ ಆಟಿಕೆಗಳು ಮತ್ತು ಬೊಂಬೆಗಳನ್ನು ಮಹಾನಗರಿಯ ಯಾವುದೋ ಒಂದು ಮಾಲ್ನಲ್ಲಿ ಕೊಳ್ಳುವುದಕ್ಕೂ, ಆಟಿಕೆಗಳು-ಬೊಂಬೆಗಳ ಸ್ವರ್ಗವಾದ ‘ಚನ್ನಪಟ್ಟಣ’ದಲ್ಲೇ ಖರೀದಿಸುವುದಕ್ಕೂ ವ್ಯತ್ಯಾಸವಿದೆ.
ಪ್ರವಾಸಿ ತಾಣಗಳಲ್ಲಿ ಹೀಗೆ ಖರೀದಿಸುವಾಗ ಮನದಲ್ಲಿ ಅದೆಂಥದೋ ಅವರ್ಣನೀಯ ಸಂಭ್ರಮ ಮನೆಮಾಡಿರುತ್ತದೆ. ಹೀಗೆ ನಾಡಿನ ವಿವಿಧ ಪ್ರವಾಸಿ ತಾಣಗಳಲ್ಲಿ ಸಿಗುವ ಹಾಗೂ ಆಯಾ ಪ್ರದೇಶದ ‘ವೈಶಿಷ್ಟ್ಯ’ ಎನಿಸಿರುವ ವೈವಿಧ್ಯಮಯ ಉತ್ಪನ್ನಗಳ ಖರೀದಿಗೆ ಸಂಬಂಧಿಸಿ ಪರಿಪೂರ್ಣ ಮಾರ್ಗದರ್ಶಿಯಾಗಲಿದೆ ‘ಪ್ರವಾಸಿ ಪ್ರಪಂಚ’. ಬಿದರಿ ಕಲೆ, ಕುಂಬಾರಿಕೆ, ಕೈಮಗ್ಗದ ಉತ್ಪನ್ನಗಳು, ಕಸೂತಿ ಮಾಡಲಾದ ಉಡುಪುಗಳು ಮತ್ತು ಸೀರೆಗಳು, ಕಲಾತ್ಮಕ ತೊಟ್ಟಿಲು, ನಿರ್ದಿಷ್ಟ ಪ್ರದೇಶದ ವೈಶಿಷ್ಟ್ಯ ಎನಿಸಿದ ತಿಂಡಿ-ತಿನಿಸುಗಳು ಹೀಗೆ ಆಯಾ ಪ್ರವಾಸಿ ತಾಣಗಳಲ್ಲಿ ದಕ್ಕುವ ವೈವಿಧ್ಯಮಯ ಉತ್ಪನ್ನಗಳು/ಸೇವೆಗಳ ಕುರಿತಾಗಿ ‘ಪ್ರವಾಸಿ ಪ್ರಪಂಚ’ವು ಮಾಹಿತಿಯನ್ನು ಮೊಗೆ ಮೊಗೆದು ಕೊಡಲಿದೆ.
ಇದು ಮಡಿಲ ಕೂಸಾಗಲಿ
ವಾರಕ್ಕೊಮ್ಮೆ ಪ್ರಕಟವಾಗುವ ‘ಪ್ರವಾಸಿ ಪ್ರಪಂಚ’ ಪತ್ರಿಕೆಯು ಕೇವಲ ವಿಶ್ವವಾಣಿ ಬಳಗದ ಮತ್ತೊಂದು ‘ಅಕ್ಷರ ಮೂಟೆ’ ಅಲ್ಲ; ಇದು ಓದುಗರು, ಪ್ರವಾಸ ಪ್ರಿಯರು ಬೆನ್ನಮೇಲೆ ಹೊತ್ತು ಸಾಗುವ ‘ಕೂಸುಮರಿ’ ಆಗಬೇಕು, ಅವರ ಮಡಿಲಲ್ಲಿ ನಲಿದಾಡುವ ‘ಅಕ್ಕರೆಯ ಮಗು’ ಆಗಬೇಕು. ಈ ಆಶಯ ಸಾಕಾರಗೊಳ್ಳಬೇಕೆಂದರೆ, ‘ಪ್ರವಾಸಿ ಪ್ರಪಂಚ’ದಲ್ಲಿ ಪ್ರತಿ ಬಾರಿ ಪ್ರಕಟವಾಗುವ ಹೂರಣ ವನ್ನು ಅವಲೋಕಿಸುತ್ತಾ, ಅದರಲ್ಲಿ ಧ್ವನಿತವಾಗಿರುವ ಆಶಯವನ್ನು ಹೀರಿಕೊಳ್ಳುತ್ತಾ ಓದುಗರು ಕೂಡ ತಮ್ಮ ಮನದಾಳದ ಮಾತನ್ನು ಈ ವೇದಿಕೆಯ ಮೂಲಕ ಹಂಚಿಕೊಳ್ಳುವಂತಾಗಬೇಕು.
ನಿರ್ದಿಷ್ಟ ಪ್ರವಾಸಿ ತಾಣದಲ್ಲಿ ಅಗತ್ಯವಾಗಿ ಕಲ್ಪಿಸಬೇಕಿರುವ ಮೂಲಭೂತ ಸೌಕರ್ಯಗಳ ಕುರಿತಾಗಿ ಆಳುಗರ ಗಮನವನ್ನು ಸೆಳೆಯುವಂತಾಗಬೇಕು. ಜತೆಗೆ, ನಾಡಿನ ವಿವಿಧೆಡೆಯ ಪ್ರವಾಸಿ, ಧಾರ್ಮಿಕ ಮತ್ತು ವಿಹಾರ ತಾಣಗಳಲ್ಲಿ ಮೈಚೆಲ್ಲಿ ಕೊಂಡಿರುವ ವೈವಿಧ್ಯಮಯ ವ್ಯಾಪಾರ-ವ್ಯವಹಾರ ಕೇಂದ್ರಗಳು ತಮ್ಮ ವೈಶಿಷ್ಟ್ಯವನ್ನು ಪ್ರವಾಸಿ-ಓದುಗರೊಂದಿಗೆ ಹಂಚಿಕೊಳ್ಳು ವಂತಾಗಬೇಕು. ಅದಕ್ಕೆ ಇಲ್ಲಿದೆ ನೋಡಿ ವಿಳಾಸ.
ಪ್ರವಾಸಿ ಪ್ರಪಂಚ
ಸುವಿಶ್ವ ಮೀಡಿಯಾ ಪ್ರೈ. ಲಿ.,
ನಂ. 11, ಎಸ್ಪಿಆರ್ ನಿಸರ್ಗ ಎನ್ಕ್ಲೇವ್,
ಮೂರನೇ ಮಹಡಿ, ಐದನೇ ಹಂತ,
ಬಿಇಎಂಎಲ್ ಲೇಔಟ್, ರಾಜರಾಜೇಶ್ವರಿ ನಗರ,
ಬೆಂಗಳೂರು-೫೬೦೦೯೮
ಫೋನ್: ೦೮೦-೨೮೬೦೯೦೦೯;
ಮೊಬೈಲ್ : + ೯೧ ೮೩೧೦೧೨೧೩೧೪.
ಇ-ಮೇಲ್ : info@pravasiprapancha.com
ವೆಬ್ಸೈಟ್ : www.pravasiprapancha.com