Rudrappa Lamani Interview: ಹಾವೇರಿಗೆ ನೀರು ತಂದ ಭಗೀರಥ ರುದ್ರಪ್ಪ ಲಮಾಣಿ !
ಬಡತನದಲ್ಲಿ ಬೆಳೆದು, ದನ- ಆಡು ಮೇಯಿಸಿ, ಒಪ್ಪತ್ತು ಶಾಲೆ ಸೇರಿ, ಕಾರ್ಮಿಕನಾಗಿ ದುಡಿದು, ಬಳಿಕ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು, ಉತ್ತಮ ಸಾಧನೆಯನ್ನು ಮಾಡಿ ತೋರಿಸಿದ ಲೀಡರ್ ರುದ್ರಪ್ಪ ಮಾನಪ್ಪ ಲಮಾಣಿಯವರು. ಹಾವೇರಿಯ ಶಾಸಕರಾದ ಲಮಾಣಿ ಈಗ ವಿಧಾನ ಸಭೆಯ ಉಪಸಭಾಪತಿ ಕೂಡ ಹೌದು
-
ಸಂದರ್ಶನ: ಚಿದಾನಂದ ರುದ್ರಾಪುರಮಠ
ತುಂಗಭದ್ರಾ ಯೋಜನೆಯ ನೀರನ್ನು ಹಾವೇರಿ ಮತ್ತು ಸುತ್ತಮುತ್ತಲಿನ ಕೆರೆಗಳಿಗೆ ತುಂಬಿಸಿರುವುದು ಮತ್ತು ಹಾವೇರಿ, ಬ್ಯಾಡಗಿ ಮೊದಲಾದ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿರುವುದು ಇವರು ಅಪರೂಪದ ಸಾಧನೆ. ಜತೆಗೆ ಹಿಂದುಳಿದವರ ವಿದ್ಯಾಭ್ಯಾಸಕ್ಕೂ ಅನುಕೂಲ ಮಾಡಿಕೊಟ್ಟಿದ್ದಾರೆ.
ಬಡತನದಲ್ಲಿ ಬೆಳೆದು, ದನ- ಆಡು ಮೇಯಿಸಿ, ಒಪ್ಪತ್ತು ಶಾಲೆ ಸೇರಿ, ಕಾರ್ಮಿಕನಾಗಿ ದುಡಿದು, ಬಳಿಕ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು, ಉತ್ತಮ ಸಾಧನೆಯನ್ನು ಮಾಡಿ ತೋರಿಸಿದ ಲೀಡರ್ ರುದ್ರಪ್ಪ ಮಾನಪ್ಪ ಲಮಾಣಿಯವರು. ಹಾವೇರಿಯ ಶಾಸಕರಾದ ಲಮಾಣಿ ಈಗ ವಿಧಾನ ಸಭೆಯ ಉಪಸಭಾಪತಿ ಕೂಡ ಹೌದು. ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಬಂಜಾರ ಸಮುದಾಯದ ಏಕೈಕ ಶಾಸಕ ರುದ್ರಪ್ಪ ಲಮಾಣಿ, ತಮ್ಮ ಸಜ್ಜನಿಕೆ, ನಡೆನುಡಿಗಳಿಂದ ತಾವು ಪ್ರತಿನಿಧಿಸುವ ಕ್ಷೇತ್ರದ ಜನರ ನಡುವೆ ಬಹಳ ಜನಪ್ರಿಯ ಜನಪ್ರತಿನಿಧಿ.
ಕಷ್ಟಗಳ ನಡುವೆ ಬೆಳೆದು ಬಂದ ಅವರಿಗೆ ಬಡವರನ್ನು ಕಂಡರೆ ಕರುಳಬಳ್ಳಿಯ ಸೆಳೆತ, ಆದ್ದರಿಂದಲೇ ಕ್ಷೇತ್ರಕ್ಕಾಗಿ ಅವರು ಮಾಡುವ ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಕಡೆಗೆ ಹೆಚ್ಚಿನ ಪ್ರಾತಿನಿಧ್ಯ.
ಬ್ಯಾಡಗಿಯಿಂದ ಒಂದು ಬಾರಿ, ಹಾವೇರಿಯಿಂದ ಎರಡು ಬಾರಿ ಹೀಗೆ ಮೂರು ಸಲ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿರುವ ರುದ್ರಪ್ಪ ಲಮಾಣಿ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲ್ಲಿ ಜವಳಿ ಹಾಗೂ ಮುಜರಾಯಿ ಖಾತೆ ಸಚಿವರಾಗಿದ್ದರು. ಈ ಬಾರಿ ಅವರನ್ನು ವಿಧಾನ ಸಭೆ ಉಪಾಧ್ಯಕ್ಷ ಸ್ಥಾನ ಹುಡುಕಿಕೊಂಡು ಬಂದುದು ಅವರ ಹಿರಿತನಕ್ಕೆ ಸಂದ ಮನ್ನಣೆ. ರುದ್ರಪ್ಪ ಲಮಾಣಿ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವಾಗ ಶಾಲೆ ಶಿಕ್ಷಣಕ್ಕಾಗಿ ಕಷ್ಟಪಟ್ಟಿದ್ದನ್ನು ಜ್ಞಾಪಿಸಿ ಕೊಳ್ಳುತ್ತಾರೆ. ಅವರ ತಂದೆ ಕಾಫಿ ನಾಡಿಗೆ ಪ್ರತಿವರ್ಷ ವಲಸೆ ಹೋಗುತ್ತಿದ್ದವರು.
ಇದನ್ನೂ ಓದಿ: Lokesh Kaayarga Column: ಕಾರ್ಮಿಕರ ಕಾನೂನು ಕಾರ್ಮಿಕರ ಹಿತ ಕಾಯಬಲ್ಲುದೇ ?
ಶಾಲೆಯಲ್ಲಿ ಮೇಷ್ಟ್ರುಗಳು ಹೊಡೆಯುತ್ತಾರೆ ಎಂದು ಹೆದರಿ ಇವರು ಒಂದನೇ, ಎರಡನೇ ತರಗತಿಗೆ ಹೋಗದೆ ದನ ಕಾಯುವುದು, ಆಡು ಕಾಯುವುದು ಮಾಡಿದರು. ಬಡಿಗೇರ್ ಎಂಬ ಮೇಸ್ಟರು ಕರೆದೊಯ್ದು ಇವರನ್ನು ಒಪ್ಪತ್ತು ಶಾಲೆಗೆ ಸೇರಿಸಿದರು. ಹೀಗೆ ನಾಲ್ಕನೇ ಕ್ಲಾಸು ಕಲಿತರು. ಊರಿನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಕರೂರು ಎಂಬ ಊರಿನ ಶಾಲೆಗೆ ಹೋಗಿ ಮುಂದಿನ ತರಗತಿಗಳನ್ನು ಕಲಿಯುವಂತಾಯಿತು. ಮುಂದೆ ರಾಣೆ ಬೆನ್ನೂರಿನಲ್ಲಿ ಮೇಸ್ಟ್ರು ಹೈಸ್ಕೂಲ್ ಓದಿಸಿದರು. ಹೈಸ್ಕೂಲ್ ಬಳಿಕ ಬಿರ್ಲಾ ಕಂಪನಿಯಲ್ಲಿ ಕಾರ್ಮಿಕನಾಗಿ ದುಡಿಯು ತ್ತಿದ್ದರು. ಆಗ ಅವರಿಗೆ ನಾಲ್ಕು ರೂಪಾಯಿ ಸಂಬಳ!
ನನ್ನ ಸಂಬಳ ಜಾಸ್ತಿ ಮಾಡಿ ಎಂದು ಕೇಳಲು ಹೋದಾಗ, ಇವನು ಮುಂದೆ ಕಾರ್ಮಿಕ ಲೀಡರ್ ಆಗಬಹುದು ಎಂಬ ಭಯದಿಂದ ಕೆಲಸದಿಂದ ಕಿತ್ತು ಹಾಕಿದರು. ನಂತರ, ಪಿಯುಸಿ ಕಲಿಯಲು ಕಾಲೇಜಿಗೆ ತೆರಳಿದರು.
ರಾಣೆಬೆನ್ನೂರಿನಲ್ಲಿ ಪದವಿ ಮುಗಿಸಿ, ದಾವಣಗೆರೆಯ ರಾತ್ರಿ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು. ಆಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ, ನಜೀರ್ ಸಾಹೇಬರು ಗ್ರಾಮೀಣಾಭಿವೃದ್ಧಿ ಮಂತ್ರಿ, ಕೆಬಿ ಕೋಳಿವಾಡ ಶಾಸಕರು. ಧಾರವಾಡ ಜಿಲ್ಲಾ ಪರಿಷತ್ ಮೀಸಲು ಸದಸ್ಯ ಸ್ಥಾನದ ಚುನಾವಣೆಗೆ ಇವರನ್ನು ನಿಲ್ಲಿಸೋಣ ಎಂದು ನಿರ್ಧರಿಸಿದರು.
ಖರ್ಚು ಮಾಡಲು ಅಷ್ಟೊಂದು ಹಣವಿಲ್ಲ ಎಂದು ನಿರಾಕರಿಸಿದರೂ ಒಪ್ಪದೆ ಒತ್ತಾಯಿಸಿ ನಿಲ್ಲಿಸಿದರು. ಲಮಾಣಿ ಐದು ಮತಗಳಿಂದ ಗೆದ್ದರು. ಹೀಗೆ 1980ರಲ್ಲಿ ರಾಜಕೀಯಕ್ಕೆ ಧುಮುಕಿದ ರುದ್ರಪ್ಪ ಲಮಾಣಿ, 1985 ರಿಂದ 89ರವರೆಗೆ ಜಿಲ್ಲಾ ಪರಿಷತ್‌ನ ಸದಸ್ಯರಾಗಿ ದುಡಿದರು.
ಮುಂದೆ 1990 ರಿಂದ 1994ರವರೆಗೂ ಕಾಂಗ್ರೆಸ್ ಕಾರ್ಯಕರ್ತರಾಗಿ ದುಡಿದರು. ಹಿರಿಯ ನಾಯಕರ ಒಡನಾಟ ರಾಜಕೀಯ ನಾಯಕರುಗಳಾದ ಎಚ್‌ಕೆ ಪಾಟೀಲ್, ಕೆಎಚ್ ಪಾಟೀಲ, ಡಿಆರ್ ಪಾಟೀಲ, ಎಸ್‌ಆರ್ ಪಾಟೀಲ ಮೊದಲಾದವರ ಸಂಪರ್ಕ ಬಂತು. ಬ್ಯಾಡಗಿ ವಿಧಾನಸಭೆ ಕ್ಷೇತ್ರಕ್ಕೆ ನಿಷ್ಕಳಂಕ ವ್ಯಕ್ತಿತ್ವದ ಒಬ್ಬರು ಬೇಕು ಎಂದು, ವೀರಪ್ಪ ಮೊಯ್ಲಿಯವರು 1994ರಲ್ಲಿ ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರು. ಕಡಿಮೆ ಅಂತರದಿಂದ ಸೋತರು. 1999ರಲ್ಲಿ ಕಾಂಗ್ರೆಸ್ ಟಿಕೆಟ್ ಲಭ್ಯವಾಯಿತು; ಸುಮಾರು 18 ಸಾವಿರ ಮತಗಳಿಂದ ಗೆಲುವು ಸಾಧಿಸಿದರು.
ಬ್ಯಾಡಗಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇತ್ತು. ವಿಶೇಷ ಗ್ರ್ಯಾಂಟ್ ಪಡೆದು, ನೀರಿನ ಸಮಸ್ಯೆ ಪರಿಹರಿಸಲು ಲಮಾಣಿ ಮುತುವರ್ಜಿ ವಹಿಸಿದರು. 2004ರಲ್ಲಿ ಬ್ಯಾಡಗಿಯಿಂದ ಸ್ಪರ್ಧಿಸಿದ ಲಮಾಣಿ, ಓಲೇಕಾರ್ ವಿರುದ್ಧ ಸೋಲು ಅನುಭವಿಸಿದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಸ್ಪರ್ಧಿಸಿದ ರುದ್ರಪ್ಪ ಲಮಾಣಿ, 2013 ಹಾಗೂ 2023ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕುಡಿಯುವ ನೀರನ್ನು ತಂದರು!
ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ತಂದು ಬ್ಯಾಡಗಿ ತಾಲೂಕಿನ ಹಾಗೂ ರಾಣೇಬೆನ್ನೂರು ತಾಲೂಕಿನ ಹಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರುದ್ರಪ್ಪ ಲಮಾಣಿ ಪ್ರಯತ್ನಿಸಿದರು. ಗುಡ್ಡದ ಮಲ್ಲಾಪುರದ 13 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿದರು.
ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಯ ಅಭಿವೃದ್ಧಿ, ಎಪಿಎಂಸಿ ಸಂಕೀರ್ಣ ಹಾಗೂ ಕ್ರೀಡಾಂ ಗಣಗಳ ನಿರ್ಮಾಣ ಮಾಡಿದ್ದಾರೆ. ತುಂಗಾ ಮೇಲ್ದಂಡೆ ಯೋಜನೆಯ ಮೂಲಕ ಹಾವೇರಿಯ ಏಳೂ ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಿಕೊಂಡರು.
‘ನೀರಾವರಿ ವಿಚಾರದಲ್ಲಿ ಹಾವೇರಿಯನ್ನು ಮತ್ತೊಂದು ಮಂಡ್ಯ ಎನಿಸುವಂತೆ ನೋಡಿಕೊಂಡಿ ದ್ದೇವೆ’ ಎಂದು ಲಮಾಣಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತುಂಗಭದ್ರಾ ನದಿಯಿಂದ ನೀರು ತಂದು ಕೆರೆಗಳನ್ನು ತುಂಬಿಸಿದ್ದಾರೆ. ಈಗ ರಾಣೆಬೆನ್ನೂರು, ಹಾವೇರಿ, ಹಾನಗಲ್ಲು ಪ್ರಾಂತ್ಯಗಳಲ್ಲಿ ರೈತರು ಕಬ್ಬು, ಭತ್ತ, ಅಡಿಕೆ, ತೆಂಗು, ಬಾಳೆ ಬೆಳೆಯುತ್ತಿದ್ದಾರೆ!
ಸವಣೂರು ತಾಲೂಕಿನ ೪೮ ಕೆರೆಗಳಿಗೆ ನೀರು ತುಂಬುವ ಕೆಲಸ ಆರಂಭಿಸಿ, ಈಗ ಅಷ್ಟೂ ಕೆರೆಗಳಲ್ಲಿ ನೀರು ತುಂಬಿದೆ. ಎಸ್‌ಎಚ್ ಡಿಪಿ ರಸ್ತೆಗಳೂ ಆಗಿವೆ. ಹಾವೇರಿಯ ಕುಡಿಯುವ ನೀರು ಯೋಜನೆಗೆ, 200 ಕೋಟಿ ರೂ. ಅನುದಾನದಿಂದ ಅಮೃತ ಯೋಜನೆಯನ್ನು ದಕ್ಕಿಸಿಕೊಂಡರು. ಹಾವೇರಿಗೆ ನಗರಸಭೆಗೆ ಹೊಸ ಉತ್ತಮ ಕಟ್ಟಡವನ್ನು ಕಟ್ಟಿಸಲಾಗಿದೆ. ಆ ಅವಧಿಯಲ್ಲಿ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಈಗ ಅದು ಕಾರ್ಯಾರಂಭಿಸಿದೆ.
ಹಿಂದುಳಿದವರ ಹಾಸ್ಟೆಲ್ ಕ್ರಾಂತಿ
ಮುಖ್ಯವಾಗಿ ಹಿಂದುಳಿದವರು ಹಾಸ್ಟೆಲ್‌ಗಳ ವಿಚಾರದಲ್ಲಿ ಕ್ರಾಂತಿಯಾಗಿದೆ. ಲಮಾಣಿ ಯವರು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿನಿಲಯ ಸೇರಿದಂತೆ ಎಲ್ಲ ಇಲಾಖೆಗಳು ಹಾಸ್ಟೆಲ್‌ಗಳನ್ನು ನಿರ್ಮಿಸಲು ಅವಕಾಶ ನೀಡಿ ಕಲಿಯುವ ಮಕ್ಕಳಿಗೆ ಅವಕಾಶ ಮಾಡಿಕೊಟ್ಟರು. ೪೪ ಕೋಟಿ ರೂ. ವೆಚ್ಚದಲ್ಲಿ ಎಸ್‌ಸಿ ಎಸ್‌ಟಿ ವಸತಿಸಹಿತ ಡಿಗ್ರಿ ಕಾಲೇಜು ಆರಂಭಿಸಲಾಗಿದೆ.
ಮಹಿಳಾ ಕಾಲೇಜಿಗೆ ನಿಮ್ಮನಗೌಡರೆಂಬವರಿಂದ ಐದು ಎಕರೆ ಜಾಗವನ್ನು ದಾನವಾಗಿ ಪಡೆದು, ೨ ಕೋಟಿ ಅನುದಾನದಲ್ಲಿ ಕೆಲಸ ಆರಂಭಿಸಲಾಗಿದೆ. ಮುಸ್ಲಿಂ ಸಮುದಾಯಕ್ಕೂ ಹಾಸ್ಟೆಲ್‌ಗಳು, ಜೂನಿಯರ್ ಕಾಲೇಜುಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಕಾಗಿನೆಲೆಯ ಅಭಿವೃದ್ಧಿ ಕನಕದಾಸರ ಕರ್ಮಭೂಮಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವ ವಹಿಸಿದ ರುದ್ರಪ್ಪ ಲಮಾಣಿ ಅವರು, ಕಾಗಿನೆಲೆಯ ಅಭಿವೃದ್ಧಿಯನ್ನೂ ಆರಂಭಿಸಿದರು. ಹೆಗ್ಗೇರಿ ಎಂಬಲ್ಲಿ 600 ಎಕರೆಯಷ್ಟು ದೊಡ್ಡದಾದ ಕೆರೆಯನ್ನು ಚೊಕ್ಕಟಗೊಳಿಸಿ ಮರಳಿ ತುಂಬಲು ಯತ್ನಿಸಿದಾಗ ಹಲವರು ವಿರೋಧ ಬಂತು. ಅದನ್ನೆಲ್ಲ ಎದುರಿಸಿ, ಯೋಜನೆ ಆರಂಭಿಸಿ ಕೆರೆ ತುಂಬಿಸಲಾಯಿತು. ಈಗ ಆ ಕೆರೆಗೆ ಪಕ್ಷಿಗಳು ವಲಸೆ ಬರುತ್ತಿವೆ. ಅವುಗಳಿಗಾಗಿ ನಡುಗಡ್ಡೆ, ಗ್ಲಾಸ್‌ಹೌಸ್ ಸೇರಿದಂತೆ ಪಕ್ಷಿಧಾಮ ಮಾಡಲು ಉದ್ದೇಶಿಸಲಾಗಿದೆ. ಆ ಮೂಲಕ ಪ್ರವಾಸೋದ್ಯಮ ತಾಣವಾಗಿಯೂ ಅದು ಬೆಳೆಯುತ್ತಿದೆ.
ಮನೆ ನಿರ್ಮಾಣ
ಹಾವೇರಿಯಲ್ಲಿ ಮನೆ ಇಲ್ಲದ ಹಿಂದುಳಿದ ಸಮುದಾಯದ ಮಂದಿಗಾಗಿ 1112 ಮನೆಗಳನ್ನು ಕಟ್ಟಿಸಿಕೊಡಲಾಗುತ್ತಿದೆ. ಇದು ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ಬರುತ್ತಿದ್ದು, ರಾಜ್ಯ ಸರಕಾರ ಕೂಡ ಪ್ರತಿ ಮನೆಗೆ ಒಂದು ಲಕ್ಷ ಕೊಡುತ್ತದೆ. ಸ್ಲಂ ಬೋರ್ಡ್ ವಸತಿ ಯೋಜನೆಯ ಮಾದರಿಯಲ್ಲಿ ಮನೆ ಕಟ್ಟಲು ಅವಕಾಶ ಮಾಡಿಕೊಡುವಂತೆ ಮಾಡಿಕೊಂಡ ಮನವಿಗೆ ಸಿಎಂ ಒಪ್ಪಿದ್ದು, ಬಜೆಟ್‌ನಲ್ಲಿ ಅನುದಾನ ಕಲ್ಪಿಸಿದ್ದಾರೆ. ಕಿಳ್ಳೆಕ್ಯಾತರು, ಸುಡುಗಾಡು ಸಿದ್ದರು ಮುಂತಾದ ಅಲೆಮಾರಿಗಳಿಗೆ ಇದರಿಂದ ನೆರವಾಗಲಿದೆ. ನೂರು ಮನೆಗಳು ಸಿದ್ಧವಾಗಿವೆ, ಎಸ್‌ಟಿಪಿ ಪ್ಲಾಂಟ್ ಆಗಬೇಕಿದೆ.
ಜವಳಿ ಸಚಿವರಾಗಿದ್ದಾಗ ಎಸ್‌ಸಿ, ಎಸ್‌ಟಿ ಸಮುದಾಯದವರು ಗಾರ್ಮೆಂಟ್ ಕಟ್ಟಿಕೊಂಡರೆ 90 ಶೇಕಡ ಸಹಾಯಧನ ಕೊಡುವ ಅವಕಾಶ ಕಲ್ಪಿಸಿದೆ. ಮುಜರಾಯಿ ಇಲಾಖೆ ಸಚಿವ ರಾಗಿದ್ದಾಗ ಚಾಮುಂಡಿ ಬೆಟ್ಟದಲ್ಲಿ ಪಾರ್ಕಿಂಗ್ ಏರಿಯಾವನ್ನು ವಿಸ್ತರಿಸಿದರು. ಯಲ್ಲಮ್ಮನ ಗುಡ್ಡ ಸೇರಿದಂತೆ ಹಲವು ದೇವಾಲಯಗಳು ಇನ್ನಷ್ಟು ಭಕ್ತಾದಿಗಳನ್ನು ಸ್ವಾಗತಿಸಲು ಸಾಧ್ಯವಾಗುವಂತೆ ಮಾಡಿದರು.
ಲಂಬಾಣಿ ಸಮುದಾಯದ ಹೆಮ್ಮೆ ಹಿಂದುಳಿದ ಲಂಬಾಣಿ ಸಮುದಾಯಕ್ಕಾಗಿ ರುದ್ರಪ್ಪ ಲಮಾಣಿ ಯವರು ದುಡಿದಿದ್ದಾರೆ. ಪ್ರತಿ ಕ್ಯಾಬಿನೆಟ್‌ನಲ್ಲಿ ಒಬ್ಬ ಲಂಬಾಣಿ ಸಮುದಾಯ ದವರಿದ್ದರೂ, ಈ ಬಾರಿ ದೊರೆತಿಲ್ಲ. ಆದರೆ ರುದ್ರಪ್ಪ ಅವರಿಗೆ ಸಚಿವ ಸ್ಥಾನಮಾನ ಕಲ್ಪಿಸಿ ಉಪಸಭಾಪತಿ ಸ್ಥಾನ ನೀಡಲಾಗಿದೆ. ಲಂಬಾಣಿ ಸಮುದಾಯದವರಿಗೆ ಡೆಪ್ಯುಟಿ ಸ್ಪೀಕರ್ ಸ್ಥಾನ ದೊರೆತಿರುವುದು ಇದೇ ಮೊದಲು. ಆ ಬಗ್ಗೆ ರುದ್ರಪ್ಪ ಅವರಿಗೆ ಹೆಮ್ಮೆ, ಅಭಿಮಾನ ಇದೆ.
ಉತ್ತರ ಕರ್ನಾಟಕದಲ್ಲಿ ಉದ್ಯೋಗರಾಹಿತ್ಯ, ಗುಳೆ ಸಮಸ್ಯೆ ವ್ಯಾಪಕವಾಗಿದೆ. ಇದನ್ನು ನಿವಾರಿಸಲು, ಬಡತನದಿಂದ ವಿಮುಕ್ತಿ ದೊರಕಿಸಲು ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳು, ರಾಜ್ಯ ಸರಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಿಕೆ, ಅಭಿವೃದ್ಧಿ ಯೋಜನೆಗಳು, ನೇರ ಫಲಾನು ಭವಿ ಯೋಜನೆಗಳನ್ನು ತಲುಪಿಸುವಲ್ಲಿ ರುದ್ರಪ್ಪ ಅವರು ತುಂಬಾ ದುಡಿದಿದ್ದಾರೆ.
ನನ್ನ ದತ್ತು ಮಗ ಎಂದಿದ್ದ ಎಸ್ ಎಂ ಕೃಷ್ಣ
ರುದ್ರಪ್ಪ ಲಮಾಣಿ ಅವರು ಎಸ್‌ಎಂ ಕೃಷ್ಣ ಅವರನ್ನು ಪ್ರೀತಿಯಿಂದ ನೆನೆಯುತ್ತಾರೆ. ಅವರು ನನ್ನನ್ನು ದತ್ತುಮಗನಂತೆ ನೋಡಿಕೊಳ್ಳುತ್ತಿದ್ದರು ಎನ್ನುತ್ತಾರೆ. ‘ಅವನು ನನ್ನ ಮಾನಸಿಕ ದತ್ತುಮಗನಿದ್ದಂತೆ, ಅವನಿಗೆ ಊಟ ಮಾಡುವಾಗ ಎರಡು ಚಮಚ ತುಪ್ಪ ಜಾಸ್ತಿ ಹಾಕುತ್ತೇನೆ’ ಎನ್ನುತ್ತಿದ್ದರು. ವೀರಪ್ಪ ಮೊಯ್ಲಿಯವರೂ ಅಷ್ಟೇ ಪ್ರೀತಿಯಿಂದ ನೋಡಿಕೊಂಡರು ಎನ್ನುತ್ತಾರೆ.
ಲಂಬಾಣಿ ಸಮುದಾಯದ ಅಭಿವೃದ್ಧಿ
ಹೊನ್ನಾಳಿ ತಾಲೂಕಿನ ಸುರಗೊಂಡನಕೊಪ್ಪದ ಸಂತ ಶ್ರೀ ಸೇವಾಲಾಲ್ ಜನ್ಮಸ್ಥಾನ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ, ಸಂತ ಸೇವಾಲಾಲ್ ಜನ್ಮಸ್ಥಳದ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಕಾರಣವಾಗಿದ್ದಾರೆ. ಅವರು ಹುಟ್ಟಿ ನೆಲೆ ನಿಂತ ಕ್ಷೇತ್ರ ವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿಯೂ ರುದ್ರಪ್ಪ ನಿರತರಾಗಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿ ಸಮಿತಿಯಲ್ಲಿ ಹದಿಮೂರು ಕ್ಷೇತ್ರಗಳಿಂದ ಅಧ್ಯಕ್ಷರಾಗಿರುವ ರುದ್ರಪ್ಪ, ನೂರು ಕೋಟಿಗೂ ಅಧಿಕ ಅನುದಾನ ತಂದು ಈ ಕ್ಷೇತ್ರವನ್ನು ಭಕ್ತಾದಿಗಳ ನೆಚ್ಚಿನ ತಾಣವನ್ನಾಗಿ ಬೆಳೆಸಿದ್ದಾರೆ. ಬಲಿ ಕೊಡುವುದು ಮುಂತಾದ ಮೌಢ್ಯಗಳನ್ನ ನಿವಾರಿಸಿದ್ದಾರೆ. ಲಂಬಾಣಿ ಸಮುದಾಯದವರು ಕಸೂತಿ ಕೌಶಲ ಕಲಿಯುವ ಶಾಲೆಯನ್ನೂ ಇಲ್ಲಿ ಆರಂಭಿಸಿದ್ದಾರೆ. ಜನತೆ ಮದ್ಯಪಾನದ ಚಟಕ್ಕೆ ತುತ್ತಾಗದಂತೆ ಮನವೊಲಿಸು ತ್ತಿದ್ದಾರೆ. ಮದ್ಯವರ್ಜನ ಶಿಬಿರಗಳನ್ನು ನಡೆಸುತ್ತಿದ್ದಾರೆ. ಐಟಿಐ ಸ್ಥಾಪಿಸಿದ್ದಾರೆ, ಗೋಶಾಲೆ ಸ್ಥಾಪಿಸಿದ್ದಾರೆ. ಹೀಗೆ ಅನೇಕ ರೀತಿಯ ಉದ್ಯೋಗ ಸೃಷ್ಟಿಯ ಅವಕಾಶ ಕಲ್ಪಿಸಿದ್ದಾರೆ.