ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಪತ್ಯ ಕೊನೆಗೊಳಿಸಿ, ಕೇಸರಿಪಡೆ ದಿಗ್ವಿಜಯ ಸಾಧಿಸುವ ಮೂಲಕ ಗಡಿ ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸವೊಂದು ಸೃಷ್ಟಿಯಾಗಿದೆ. ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಹಿಂದೆಂದೂ ಕಾಣದ ರೀತಿಯಲ್ಲಿ ಮುಗ್ಗರಿಸಿದ್ದು, ಟಿಎಂಸಿಯ ಹಿಂಸಾಚಾರದ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ

ದೀದಿಗೆ ಗುಡ್‌ಬೈ , ಮೋದಿಗೆ ಹಾಯ್ ಹಾಯ್..!

-

ಗ್ರೌಂಡ್‌ ರಿಪೋರ್ಟ್

ಮಮತಾ ಭದ್ರಕೋಟೆ ಭೇದಿಸಿದ ಕೇಸರಿಪಡೆ

ಮೌನವಾಗಿದ್ದುಕೊಂಡೇ ತೃಣಮೂಲ ಕಾಂಗ್ರೆಸ್‌ಗೆ ಗುದ್ದಿದ ಬಂಗಾಳಿ ಮತದಾರ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಪತ್ಯ ಕೊನೆಗೊಳಿಸಿ, ಕೇಸರಿಪಡೆ ದಿಗ್ವಿಜಯ ಸಾಧಿಸುವ ಮೂಲಕ ಗಡಿ ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸವೊಂದು ಸೃಷ್ಟಿಯಾಗಿದೆ. ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಹಿಂದೆಂದೂ ಕಾಣದ ರೀತಿಯಲ್ಲಿ ಮುಗ್ಗರಿಸಿದ್ದು, ಟಿಎಂಸಿಯ ಹಿಂಸಾಚಾರದ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ. ದೀದಿ ಪಕ್ಷದ ರಾಜಕೀಯ ಕುಸಿತ ಹಾಗೂ ಬಿಜೆಪಿಯ ಐತಿಹಾಸಿಕ ಗೆಲುವಿಗೆ ಕಾರಣವಾದ 16 ಪ್ರಮುಖ ಅಂಶಗಳನ್ನು ವಿಶ್ವವಾಣಿ ವಿಶೇಷ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಇಲ್ಲಿ ದಾಖಲಿಸಿದ್ದಾರೆ.

೧. ಹಿಂದುಗಳ ಕ್ರೋಢೀಕರಣ: ಐತಿಹಾಸಿಕವಾಗಿ ಬಂಗಾಳದ ಮತದಾರರು ಹಿಂದು-ಮುಸ್ಲಿಂ ಎಂಬ ಪ್ರತ್ಯೇಕ ಭಾವನೆಯಿಂದ ಮತದಾನ ಮಾಡಿದ್ದು ಕಡಿಮೆ. ಆದರೆ, ಮೊದಲ ಬಾರಿಗೆ ಬಿಜೆಪಿ ಹಿಂದು ಮತಗಳ ಕ್ರೋಢೀಕರಣ ಮಾಡುವಲ್ಲಿ ಯಶಸ್ವಿಯಾಗಿದೆ. ಬಂಗಾಳದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆ, ಟಿಎಂಸಿ ಮುಸ್ಲಿಂ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂಬ ನರೇಟಿವ್ ಅನ್ನು ವ್ಯವಸ್ಥಿತವಾಗಿ ಹಬ್ಬಿಸಿದ ಬಿಜೆಪಿ, ಹಿಂದುಗಳ ಹಬ್ಬಗಳನ್ನು ಸಂಘ ಮತ್ತು ಪಕ್ಷದ ಕಾರ್ಯಕರ್ತರ ಮೂಲಕ ರಾಜ್ಯಾದ್ಯಂತ ಆಚರಿಸುತ್ತಾ ಮನೆ-ಮನಗಳನ್ನು ತಲುಪಿತು. ಬಂಗಾಳಿ ಅಸ್ಮಿತೆ ಜತೆಗೆ ಹಿಂದು ಅಸ್ಮಿತೆಯೂ ನಿಧಾನವಾಗಿ ಬೇರೂರುವಂತೆ ಬಿಜೆಪಿ ಮಾಡಿತು.

೨. ಹತ್ಯೆಗಳ ಸಂಚಲನ: ಬಾಂಗ್ಲಾದೇಶದಲ್ಲಿ ಹಿಂದುಗಳ ಮಾರಣಹೋಮ ನಡೆದ ಘಟನೆಗಳು ಬಂಗಾಳದ ಹಿಂದುಗಳಲ್ಲಿ ಆತಂಕ ಸೃಷ್ಟಿ ಮಾಡಿದ್ದಾಗಲೇ 2026 ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶವಿದೆ ಎನ್ನುವುದನ್ನು ದಿಲ್ಲಿ ನಾಯಕರು ಆಗ್ರಹಿಸಿದ್ದರು. ಹಿಂದುಗಳ ಹತ್ಯೆ ಯಾದಾಗ ಅದನ್ನು ಬಾಂಗ್ಲಾದೇಶದ ಮುಸ್ಲಿಮರು ಸಂಭ್ರಮಿಸಿದ ವಿಚಾರಗಳು ಬಂಗಾಳದ ಹಿಂದು ಗಳನ್ನು ವಿಚಲಿತಗೊಳಿಸಿದ್ದರಿಂದ, ಬಿಜೆಪಿ ಕಾರ್ಯಕರ್ತರು ಬಂಗಾಳದ ಹಿಂದುಗಳ ಮಧ್ಯೆ ರಾಷ್ಟ್ರ ಜಾಗೃತಿಯ ಅಭಿಯಾನ ನಡೆಸಿದರು. ಚುನಾವಣೆ ಆರಂಭವಾಗುತ್ತಿದ್ದಂತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮತ್ತು ಬಿಜೆಪಿ ಸ್ಥಳೀಯ ಮುಖಂಡ ಸುವೇಂದು ಅಧಿಕಾರಿ ‘ಅಕ್ರಮ ನುಸುಳುಕೋರ ರಿಂದ ಬಂಗಾಳವನ್ನು ರಕ್ಷಿಸಿ’ ಎಂಬ ಕರೆ ಕೊಡಲು ಆರಂಭಿಸಿದರು.

೩. ಮೋದಿ-ಶಾ ಚರೀಷ್ಮಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಚುನಾವಣೆಯುದ್ದಕ್ಕೂ ರಾಜ್ಯದ ಉದ್ದಗಲ ಪ್ರವಾಸ ಮಾಡಿ ಪ್ರಚಾರ ಮಾಡಿದ್ದಲ್ಲದೆ, ಶ್ರೀಸಾಮಾನ್ಯ ರೊಂದಿಗೆ ನೇರ ಸಂಪರ್ಕ ಸಾಧಿಸಿದರು. ಡಬಲ್ ಎಂಜಿನ್ ಸರಕಾರದಿಂದ ಮಾತ್ರ ಅರಾಜಕತೆ ಮುಕ್ತ ಬಂಗಾಳದ ಅಭಿವೃದ್ಧಿ ಸಾಧ್ಯ ಎನ್ನುತ್ತಾ ಜನರ ಮನವೊಲಿಸಿದರು. 2021ರ ಚುನಾವಣೆ 7 ಹಂತಗಳಲ್ಲಿ ನಡೆದಿದ್ದರಿಂದ ಟಿಎಂಸಿಗೆ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಾಲವಕಾಶ ದೊರೆತಿತ್ತು. ಆದರೆ, ಹಾಲಿ ಚುನಾವಣೆ ಕೇವಲ 2 ಹಂತಗಳಲ್ಲಿ ನಡೆದದ್ದು ಕೂಡ ಬಿಜೆಪಿಗೆ ಲಾಭವಾಗಿ ಪರಿಣಮಿಸಿತು.

ಇದನ್ನೂ ಓದಿ: Raghava Sharma Nidle Column: ಭಯಮುಕ್ತ ಚುನಾವಣೆಗೆ ದೀದಿ ಥ್ಯಾಂಕ್ಸ್‌ ಹೇಳಬೇಡವೇ ?

೪. ಗೂಂಡಾಗಿರಿಯ ತಿರಸ್ಕಾರ: ರಾಜಕೀಯ ಹಿಂಸಾಚಾರದ ಕರಾಳ ಇತಿಹಾಸವುಳ್ಳ ಬಂಗಾಳದಲ್ಲಿ ಜನರು ಗೂಂಡಾ ಸಂಸ್ಕೃತಿಯಿಂದ ಬೇಸತ್ತಿದ್ದರು. ಟಿಎಂಸಿ ಪ್ರೇರಿತ ಗೂಂಡಾಗಿರಿಯಿಂದಾಗಿ ಸಂತ್ರಸ್ತ ಕುಟುಂಬಗಳ ರೋದನ ತಟಸ್ಥ ಮತದಾರರನ್ನೂ ವಿಚಲಿತಗೊಳಿಸಿತ್ತು. ಹಿಂಸಾಚಾರದ ರಾಜಕಾರಣದ ಪರಿಣಾಮ ಮತದಾರರು ಮುಕ್ತ ಮನಸ್ಸಿನಿಂದ ಮಾತನಾಡುವ ವಾತಾವರಣ ಇರಲಿಲ್ಲ. ಟಿಎಂಸಿ ಹೊರತುಪಡಿಸಿದ ಪಕ್ಷಗಳನ್ನು ಬೆಂಬಲಿಸುವ ವರನ್ನು ಗುರುತಿಸಿ ದಾಳಿ ಮಾಡಲಾಗುತ್ತಿತ್ತು. ಈ ಘಟನೆಗಳಿಂದ ಜನ ರೋಸಿ ಹೋಗಿದ್ದರು ಮತ್ತು ಸಂತ್ರಸ್ತರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅನಿವಾರ್ಯವಾಗಿ ವಲಸೆ ಹೋಗಬೇಕಾಗಿತ್ತು. ಈ ಬಾರಿ ಹಿಂಸಾ ಚಾರ ರಾಜಕೀಯ ತಿರಸ್ಕರಿಸಿದ ಮತದಾರರು, ರಾಜ್ಯದಲ್ಲಿ ಶಾಂತಿ ನೆಲೆಸಲು ಬಿಜೆಪಿ ಶ್ರಮಿಸ ಬೇಕು ಎಂಬ ಸಂದೇಶವನ್ನು ಮತದಾನದ ಮೂಲಕ ನೀಡಿ, ಟಿಎಂಸಿಯನ್ನು ತಿರಸ್ಕರಿಸಿದರು.

೫. ಕೇಸರಿಗೆ ಮಹಿಳೆಯರ ಶ್ರೀರಕ್ಷೆ: ಟಿಎಂಸಿ ಸರಕಾರ ರಾಜ್ಯದ 25-65 ವಯಸ್ಸಿನ ಮಹಿಳೆಯರಿಗೆ ಲಕ್ಷ್ಮಿ ಭಂಡಾರ್ ಯೋಜನೆ ಅಡಿಯಲ್ಲಿ ಮಾಸಿಕ ರು. 1500 ನೀಡುತ್ತಿದ್ದುದರಿಂದ ಬಿಜೆಪಿ ಅದಕ್ಕೆ ಪರ್ಯಾಯವಾಗಿ ರು. 3000 ನೀಡುವ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿತು. ಆದರೆ, ಮಾಸಿಕ ನೆರವಿನಾಚೆ ಯೋಚನೆ ಮಾಡಿದ ಬಹುಪಾಲು ಮಹಿಳಾ ಮತದಾರರಲ್ಲಿ, ರಾಜ್ಯದ ಬಾಲಕಿ, ಯುವತಿ, ಮಹಿಳೆಯರಿಗೆ ಕಿಡಿಗೇಡಿಗಳಿಂದ ಭದ್ರತೆ ಬೇಕಿದೆ. ಅವರಿಗೆ ಭದ್ರತೆ ಒದಗಿಸುವಲ್ಲಿ ಟಿಎಂಸಿ ವಿಫಲವಾಗಿದೆ ಎಂಬ ಭಾವನೆ ಬಲವಾಗಿ ಬೇರೂರಿತ್ತು. ಲಕ್ಷ್ಮಿ ಭಂಡಾರ್ ಯೋಜನೆ ಕಾರಣಕ್ಕಾಗಿ ಒಂದಿಷ್ಟು ಮಹಿಳಾ ಮತವರ್ಗ ದೀದಿಯನ್ನು ಬೆಂಬಲಿಸಿದ್ದರೂ, ಬಹುಪಾಲು ಮಹಿಳೆ ಯರಿಗೆ ಭದ್ರತೆಯ ವಿಷಯದಲ್ಲಿ (ಮುಖ್ಯವಾಗಿ ವಿದ್ಯಾವಂತ ವರ್ಗ) ಪರಿವರ್ತನೆ ಅನಿವಾರ್ಯ ವಾಗಿತ್ತು ಎನ್ನುವುದು ಫಲಿತಾಂಶದಲ್ಲಿ ಕಂಡಿದೆ.

೬. ಸುವೇಂದು ಆಕ್ರಮಣಕಾರಿತ್ವ: 2021ರ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭೆ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ಪರಾಕ್ರಮ ಮೆರೆದಿದ್ದ ಸುವೇಂದು ಅಧಿಕಾರಿ, ಈ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸ್ಪರ್ಧಿಸುವ ಜತೆಗೆ ಭವಾನಿಪುರ ದಲ್ಲೂ ಸ್ಪರ್ಧಿಸಿದ್ದರಿಂದ ಮಮತಾ ದೀದಿ ರಾಜಕೀಯ ಒತ್ತಡಕ್ಕೆ ಸಿಲುಕಿದ್ದರು. ದೀದಿ ರಾಜ್ಯಾದ್ಯಂತ ಪ್ರವಾಸ ಮಾಡಿದರೂ, ಅವರ ಒಳಮನಸ್ಸು ಭವಾನಿಪುರದ ಬಗ್ಗೆಯೇ ಯೋಚಿಸುತ್ತಿತ್ತು. ಮೇಲಾಗಿ, ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರಕಾರವನ್ನು ಸುವೇಂದು ತಮ್ಮ ಆಕ್ರಮಣಕಾರಿ ಧೋರಣೆ ಯಿಂದಲೇ ಎದುರಿಸಿ, ವಾಗ್ಬಾಣಗಳ ಮೂಲಕ ಬಿಜೆಪಿ ಕಾರ್ಯಕರ್ತರ ಮನೋಬಲ ವೃದ್ಧಿಸಿದರು. ಒಂದೊಮ್ಮೆ ಟಿಎಂಸಿಯಲ್ಲಿದ್ದುಕೊಂಡು ಜಾತ್ಯತೀತ ಮಂತ್ರ ಜಪಿಸಿದ್ದ ಸುವೇಂದು, ತಮ್ಮ ಸೈದ್ಧಾಂತಿಕ ರೂಪಾಂತರದೊಂದಿಗೆ ಕೇಸರಿ ಕಾರ್ಯಕರ್ತರಿಗೂ ಹತ್ತಿರವಾಗಿದ್ದರು.

೭. ದಿಕ್ಕು ಬದಲಿಸಿದ ಆರ್‌ಜಿ ಕರ್ ಘಟನೆ: 15 ವರ್ಷಗಳ ಆಡಳಿತಾವಧಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ ವರ್ಚಸ್ಸಿಗೆ ತೀವ್ರವಾಗಿ ಹಾನಿ ಮಾಡಿದ್ದು ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆ ಯಲ್ಲಿ ವೈದ್ಯೆ ವಿದ್ಯಾರ್ಥಿನಿಯ ಅತ್ಯಾಚಾರ-ಕೊಲೆ ಪ್ರಕರಣ. ವಿದ್ಯಾರ್ಥಿನಿ ಹತ್ಯೆ-ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಸರಕಾರ ರಕ್ಷಣೆ ಮಾಡುತ್ತಿದೆಯೇ ಎಂಬಷ್ಟರ ಮಟ್ಟಿಗೆ ರಾಜ್ಯದಲ್ಲಿ ಚರ್ಚೆ ಗಳು ನಡೆದು, ಸರಕಾರದ ಬಗ್ಗೆ ಮತ್ತು ಮುಖ್ಯವಾಗಿ ಸಿಎಂ ಮಮತಾ ಬಗ್ಗೆ ಜನರಲ್ಲಿ ಆಕ್ರೋಶ ದುಪ್ಪಟ್ಟಾಗಿತ್ತು. ಈ ಪ್ರಕರಣವನ್ನು ರಾಜಕೀಯ ವಿಸ್ತರಣೆಗೆ ಬಳಸಿಕೊಂಡ ಬಿಜೆಪಿ, ಸಂತ್ರಸ್ತೆಯ ತಾಯಿ ರತ್ನಾ ದೇಬನಾಥ್ ಅವರಿಗೆ ಪಾಣಿಹಾಟಿ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ನೀಡಿ, ಅವರ ಹೋರಾಟಕ್ಕೆ ರಾಜಕೀಯ ಬಲ ನೀಡಿತು. ಈ ಪ್ರಕರಣವನ್ನು ಬಿಜೆಪಿ ರಾಜಕೀಯ ಗೊಳಿಸಿದೆ ಎಂಬ ಅಪಸ್ವರಗಳು ಪಾಣಿಹಾಟಿಯಲ್ಲಿ ಕೇಳಿ ಬಂದರೂ, ರತ್ನಾ ದೇಬನಾಥ್ ಅವರ ಗೆಲುವಿಗೆ ಇದು ಅಡ್ಡಿ ಮಾಡಲಿಲ್ಲ. ರತ್ನಾ ದೇಬನಾಥ್ ಅವರ ಚಿತ್ರ ಮುಂದಿಟ್ಟುಕೊಂಡೇ ಬಿಜೆಪಿ ಮಹಿಳಾ ಪರ ರಣನೀತಿ ಅನುಸರಿಸಿತು.

೮. ಬಾಂಗ್ಲಾದೇಶಿಯರ ಭಯ: ಬಂಗಾಳದಲ್ಲಿ ಬಾಂಗ್ಲಾದೇಶೀಯರಿಗಿರುವಷ್ಟು ಮಾನ್ಯತೆ ಮೂಲ ನಿವಾಸಿಗಳಿಗೆ ಇಲ್ಲ ಎಂಬ ಆಕ್ರೋಶವೂ ಟಿಎಂಸಿ ಕುಸಿತಕ್ಕೆ ಕಾರಣ. ಇಂತಹ ಆಕ್ರೋಶ ತುಂಬಿದ ಮಾತುಗಳು ರಾಜ್ಯದ ಹಲವು ಜಿಗಳಲ್ಲಿ ಕೇಳಿಬಂದವು. ಇದೇ ಕಾರಣಕ್ಕೆ ಗಡಿ ಭಾಗದ ಕ್ಷೇತ್ರಗಳಲ್ಲಿ ಬಿಜೆಪಿ ಅಮೋಘ ವಿಜಯ ದಾಖಲಿಸಿತು. ಬಾಂಗ್ಲಾದೇಶಿಯರನ್ನು ಭಾರತದಿಂದ ಓಡಿಸಬೇಕು ಎಂಬ ಬಿಜೆಪಿಯ ಪೊಲಿಟಿಕಲ್ ನರೇಟಿವ್ ರಾಜ್ಯದ ಜನರನ್ನು ತಲುಪಿತು ಮತ್ತು ಅಕ್ರಮ ನುಸುಳು ಕೋರರು ರಾಜ್ಯ ಮತ್ತು ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಮೂಲ ನಿವಾಸಿಗಳು ಸಂತ್ರಸ್ತರಾಗಿದ್ದಾರೆ ಎಂಬ ಮತದಾರನ ಬೇಸರ ಟಿಎಂಸಿ ವಿರೋಧಿ ಮತಗಳಾಗಿ ಬದಲಾದವು.

೯. ಯುವ ಜನಾಂಗದ ಬೆಂಬಲ: ಪಶ್ಚಿಮ ಬಂಗಾಳವನ್ನು ಕರ್ನಾಟಕ, ತ.ನಾಡು, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಂತಹ ರಾಜ್ಯಗಳಿಗೆ ಹೋಲಿಸಿದ ಯುವ ಮತದಾರರು, ನಮ್ಮ ರಾಜ್ಯ ಏಕೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂಬುದನ್ನೇ ಪ್ರಶ್ನೆ ಮಾಡುತ್ತಿದ್ದರು. ಕಂಪನಿ, ಫ್ಯಾಕ್ಟರಿ, ಉದ್ಯಮ ಸಂಸ್ಥೆಗಳ ಕೊರತೆ ಯಿಂದಾಗಿ ಯುವಕರು ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತಿರುವುದು ಜನರನ್ನು ಚಿಂತೆಗೀಡು ಮಾಡಿತ್ತು. ಬೇರೆ ರಾಜ್ಯಗಳಿಂದ ಮತದಾನಕ್ಕಾಗಿ ಬಂಗಾಳಕ್ಕೆ ಬಂದಿದ್ದ ವಲಸಿಗ ಮತವರ್ಗ ಕೂಡ ಬಂಗಾಳದಲ್ಲಿ ಪರಿವರ್ತನೆ ಅನಿವಾರ್ಯ ಎಂಬ ಮಾತುಗಳನ್ನಾಡು ತ್ತಿತ್ತು. ವಿದ್ಯಾವಂತ ಯುವಕರ ಮಧ್ಯೆ ಉದ್ಯೋಗ ಸ್ನೇಹಿ ವಾತಾವರಣಕ್ಕಾಗಿ ಬದಲಾವಣೆ ಅನಿವಾರ್ಯ ಎಂಬ ಚರ್ಚೆಗಳಾಗುತ್ತಿದ್ದುದನ್ನು ಬಿಜೆಪಿ ತನ್ನ ಪರವಾದ ಅಲೆ ವೃದ್ಧಿಸಲು ಬಳಸಿಕೊಂಡಿತು.

10. ಎಸ್‌ಐಆರ್ ಪರಿಣಾಮ: ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಯಿಂದಾಗಿ (ಎಸ್‌ಐಆರ್) 94 ಲಕ್ಷ ಮತದಾರರ ಹೆಸರನ್ನು ಅಳಿಸಿ ಹಾಕಲಾಯಿತು. ಇದರಲ್ಲಿ 27 ಲಕ್ಷ ಮಂದಿ ಪಟ್ಟಿಯಲ್ಲಿ ಮರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಆದರೆ, ಉಳಿದ 67 ಲಕ್ಷ ನಕಲಿ ಮತದಾರರ ಹೆಸರನ್ನು ಶಾಶ್ವತವಾಗಿ ಅಳಿಸಿ ಹಾಕಲಾಯಿತು. ಇದರಿಂದಾಗಿ ಹಲವು ಕ್ಷೇತ್ರಗಳ ರಾಜಕೀಯ ಚಿತ್ರಣವೇ ಬದಲಾಯಿತು. ಮತದಾನ ಪ್ರಮಾಣದಲ್ಲೂ ಏರಿಕೆಯಾಯಿತು. ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸರಕಾರಿ ದಾಖಲೆಗಳಿಲ್ಲದೆ ಬಂಗಾಳದಲ್ಲಿ ನೆಲೆಸಿದ್ದ ಅನೇಕ ಬಾಂಗ್ಲಾದೇಶಿ ಪ್ರಜೆಗಳು ಗಡಿ ಮೂಲಕ ಬಾಂಗ್ಲಾದೇಶಕ್ಕೆ ವಾಪಸ್ ತೆರಳಿದರು. ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ, ನ್ಯಾಯಾಲಯದ ಆದೇಶಗಳಿಗೂ ಬಗ್ಗದೆ ಟಿಎಂಸಿ ಮುಖಂಡರು ನಡೆಸಿದ ಹೈಡ್ರಾಮಗಳೂ ಮತದಾರರ ಮನಸ್ಸಿನ ಮೇಲೆ ವ್ಯಾಪಕ ಪರಿಣಾಮ ಬೀರಿದವು.

11. ಬಂಗಾಳಿ ಅಸ್ಮಿತೆಯಾಚೆ ಮತ: ಮೂರು ಅವಧಿಗಳಿಂದ ತನ್ನನ್ನು ಬಂಗಾಳಿ ಅಸ್ಮಿತೆಯ ಪ್ರತಿನಿಧಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಸಿಎಂ ಮಮತಾ, ಈ ಬಾರಿ ಕೂಡ ಬಿಜೆಪಿಯನ್ನು ಉತ್ತರ ಭಾರತದ ಪೊಲಿಟಿಕಲ್ ಪಾರ್ಟಿ ಎಂದು ಬಿಂಬಿಸಿ, ಬಂಗಾಳಿ ಸಂಸ್ಕೃತಿ, ಪರಂಪರೆ ಮತ್ತು ಗುರುತನ್ನು ಇವರು ಹಾಳು ಮಾಡಲಿದ್ದಾರೆ ಎಂದು ಪ್ರಚಾರ ನಡೆಸಿದರು.

ಮೋದಿ-ಅಮಿತ್ ಶಾ ಬಂಗಾಳವನ್ನು ಹತ್ತಿಕ್ಕಲಿದ್ದಾರೆ ಎಂದೂ ಎಚ್ಚರಿಸಲಾಯಿತು. ಆದರೆ, ದೀದಿಯ ಈ ತಂತ್ರಗಾರಿಕೆಯನ್ನು ಜನ ಈ ಬಾರಿ ಒಪ್ಪಲಿಲ್ಲ. ಬಂಗಾಳಿಗರನ್ನು ಕಾಪಾಡುವುದು ಬಂಗಾಳಿ ಅಸ್ಮಿತೆ ಒಂದೇ ಅಲ್ಲ. ಅಭಿವೃದ್ಧಿ ಮತ್ತು ರಕ್ಷಣೆಗೆ ಅಸ್ಮಿತೆಯಾಚೆಗೂ ಯೋಚಿಸುವುದು ಅನಿವಾರ್ಯ ಎನ್ನುವುದನ್ನು ಚುನಾವಣಾ ತೀರ್ಪಿನಲ್ಲಿ ಮತದಾರ ಸ್ಪಷ್ಟಪಡಿಸಿದ್ದಾನೆ.

12. ಸೈಲೆಂಟ್ ವೋಟರ್ಸ್: ನನ್ನಂತೆ ಅನೇಕ ಪತ್ರಕರ್ತರು ಬಂಗಾಳಿ ಮತದಾರರನ್ನು ಮಾತನಾಡಿಸಿ, ಅವರ ಮನದಾಳ ಅರಿಯುವ ಯತ್ನ ಮಾಡಿದ್ದರು. 10 ಮಂದಿ ಜತೆ ಮಾತಾಡಿದರೆ ಅವರಲ್ಲಿ 2-3 ಮಂದಿ ಮಾತ್ರ ರಾಜಕೀಯ ಒಲವು-ನಿಲುವುಗಳ ಬಗ್ಗೆ ಹೇಳುತ್ತಿದ್ದರು. ಉಳಿದವರದ್ದು ಗಾಢ ಮೌನ. ಹೀಗಾಗಿ, ಯಾರೆಲ್ಲ ಮೌನವಾಗಿದ್ದರೋ ಅವರು ಬದಲಾವಣೆಗೆ ಮತ ಹಾಕುವ ಬಗ್ಗೆ ನಿರ್ಣಯಿಸಿದ್ದರು ಎನ್ನುವುದು ಈಗ ದೃಢವಾಗಿದೆ. ಟಿಎಂಸಿ ಗೂಂಡಾ ರಾಜಕಾರಣದ ಭಯ, ಆತಂಕದಿಂದಾಗಿ ಅವರು ತಮ್ಮ ಮನಸ್ಸಿನ ಆಶಯಗಳನ್ನು ಹಂಚಿಕೊಳ್ಳಲಿಲ್ಲ. ಜನರು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳದ್ದರಿಂದ ಮತದಾರನ ಮನದೊಳಗೇನಿದೆ ಎನ್ನುವುದು ಸುಲಭದಲ್ಲಿ ಅರ್ಥವಾಗುತ್ತಿರಲಿಲ್ಲ. ಆದರೆ, ಮತದಾರರು ತಮ್ಮ ಮೌನದ ಮೂಲಕವೇ ಟಿಎಂಸಿಗೆ ಸಂದೇಶ ರವಾನಿಸಿದರು ಎನ್ನುವುದನ್ನು ಫಲಿತಾಂಶ ತೋರಿಸಿದೆ.

13. ಎಡ-ಕಾಂಗ್ರೆಸ್ ವೋಟುಗಳ ಶಿಫ್ಟ್: ಟಿಎಂಸಿ ದಬ್ಬಾಳಿಕೆ‌ ರಾಜಕಾರಣದಿಂದ ಬೇಸತ್ತಿದ್ದ ಎಡಪಕ್ಷಗಳ ಮತ್ತು ಕಾಂಗ್ರೆಸ್‌ನ ಕೆಲವೊಂದಿಷ್ಟು ಮತದಾರರು ಈ ಸಲ ಟಿಎಂಸಿ ಸೋಲಲೇಬೇಕು ಎಂಬ ಕಾರಣಕ್ಕಾಗಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಮತದಾರರು ಟಿಎಂಸಿಯನ್ನು ಸೋಲಿಸುವ ರಾಜಕೀಯ ಸಾಮರ್ಥ್ಯ ಕಾಂಗ್ರೆಸ್ ಅಥವಾ ಎಡಪಕ್ಷಗಳಲ್ಲಿ ಇಲ್ಲ ಎಂಬ ವಾಸ್ತವ ಒಪ್ಪಿಕೊಂಡು, ತಾವು ಬಿಜೆಪಿ ತತ್ವ-ಸಿದ್ಧಾಂತದ ವಿರೋಧಿಗಳಾಗಿದ್ದರೂ, ಟಿಎಂಸಿ ಯನ್ನು ಹತ್ತಿಕ್ಕಲು ಬಿಜೆಪಿಗೆ ಮತ ಹಾಕುವುದು ಅನಿವಾರ್ಯ ಎಂದು ಆಲೋಚಿಸಿದ್ದರು. ಇದು ಬಿಜೆಪಿಯ ಸಂಖ್ಯಾಬಲ ಮತ್ತಷ್ಟು ಹೆಚ್ಚಿಸಿತು.

14. ಚುನಾವಣೆ ಆಯೋಗದ ಸಾಹಸ: ರಾಜ್ಯದಲ್ಲಿ ಮೊದಲ ಬಾರಿಗೆ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಬಿಗಿ ನಿಯಮಗಳನ್ನು ಜಾರಿ ಮಾಡಿತು. ಇದುವರೆಗಿನ ಚುನಾವಣೆಗಳು ಹಿಂಸಾಚಾರವಿಲ್ಲದೆ ನಡೆದ ಉದಾಹರಣೆಯೇ ಇಲ್ಲ. ಆದರೆ, ಪಕ್ಷಪಾತ ಧೋರಣೆಯುಳ್ಳ ಅಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತುಗೊಳಿಸಿದ ಚುನಾವಣಾ ಆಯೋಗ, ಬೂತ್‌ಗಳಲ್ಲಿ ಮತದಾರರ ಮೇಲೆ ರಾಜಕೀಯ ಪಕ್ಷಗಳ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸಿತು. ಬೂತ್‌ಗಳ 100 ಮೀಟರ್ ಅಂತರದಲ್ಲಿ ಮತದಾರ, ಪ್ರಿಸೈಡಿಂಗ್ ಆಫಿಸರ್ ಮತ್ತು ಸೇನಾ ಸಿಬ್ಬಂದಿ ಬಿಟ್ಟು ಬೇರೆ ಯಾರೂ ಬರುವಂತಿರಲಿಲ್ಲ. 100 ಮೀಟರ್ ದೂರದಲ್ಲಿ ವೋಟರ್ ಕಾರ್ಡು ಪರಿಶೀಲನೆಗಾಗಿ ಬಿಎಲಒಗಳು ಕುಳಿತಿದ್ದರು. ಇವೆಲ್ಲವೂ ನ್ಯಾಯಯುತ ಚುನಾವಣೆ ನಡೆಸಲು ಸಹಕಾರಿಯಾದವು.

15. ಧೈರ್ಯ ತುಂಬಿದ ಸೇನೆ: ಮತದಾನಕ್ಕೆ ಮುನ್ನ ಸಿಆರ್‌ಪಿಎಫ್‌ ಸೇರಿ ವಿವಿಧ ಭದ್ರತಾ ಪಡೆಗಳ ಸೇನಾ ಸಿಬ್ಬಂದಿ ಗ್ರಾಮ, ಪಟ್ಟಣಗಳಲ್ಲಿ ಜನರು, ಸಮುದಾಯಗಳನ್ನು ತಲುಪಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು. ಯಾವ ಭಯವಿಲ್ಲದೆ ಮತದಾನಕ್ಕೆ ಬನ್ನಿ, ನಿಮ್ಮ ಮಕ್ಕಳಂತೆ ನಾವು ರಕ್ಷಣೆ ನೀಡುತ್ತೇವೆ ಎಂದು ಮನೋಬಲ ವೃದ್ಧಿಸಿದರು. ಹೀಗಾಗಿ, ಜನರು ಭಯಮುಕ್ತ ಪರಿಸರದಲ್ಲಿ ಮತದಾನ ಮಾಡಲು ಸಾಧ್ಯವಾಯಿತು. ಭಯಮುಕ್ತ ವಾತಾವರಣ ಕೂಡ ಜನ ಪರಿವರ್ತನೆಗೆ ಮತ ಹಾಕಲು ಪ್ರೇರೇಪಣೆಯಾಯಿತು..! ರಾಜ್ಯವೊಂದರ ಚುನಾವಣೆಗೆ 2.5 ಲಕ್ಷ ಸೇನಾ ಸಿಬ್ಬಂದಿ ರಕ್ಷಣೆಗಾಗಿ ನಿಯೋಜನೆಗೊಂಡ ಮೇಲೂ ಸಣ್ಣಪುಟ್ಟ ಹಿಂಸಾಚಾರ ಘಟನೆಗಳು ಸಂಭವಿದವು ಎಂದರೆ ಈ ಹಿಂದಿನ ಚುನಾವಣೆಗಳು ಹೇಗೆ ನಡೆಯುತ್ತಿದ್ದವು ಎನ್ನುವು ದನ್ನು ನೀವು ಊಹಿಸಬಹುದು..!

16. ಆರ್‌ಎಸ್‌ಎಸ್ ಗ್ರೌಂಡ್‌ವರ್ಕ್: 2021ರ ವಿಧಾನಸಭೆ ಚುನಾವಣೆ ಸೋಲಿನ ಹೊರತಾಗಿಯೂ ಆರ್‌ಎಸ್‌ಎಸ್ ತನ್ನ ಗ್ರೌಂಡ್ ವರ್ಕ್ ಅನ್ನು ಬಂಗಾಳದಲ್ಲಿ ವಿಸ್ತರಿಸುತ್ತಲೇ ಇತ್ತು. ರಾಜ್ಯದ ವಿವಿಧೆಡೆ ಹಿಂದು ಜಾಗೃತಿ ಸಭೆ, ಅಭಿಯಾನ, ಜಾಗರಣೆಗಳನ್ನು ನಡೆಸುತ್ತಾ ರಾಷ್ಟ್ರೀಯ ವಿಚಾರ ಧಾರೆಗಳ ಬೀಜಗಳನ್ನು ಬಿತ್ತುತ್ತಾ ಜನರನ್ನು ತಲುಪಿತು. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುದೀರ್ಘ ಕಾರ್ಯಾಚರಣೆ ಮತ್ತು ಕಾರ್ಯಕರ್ತರ ತಾಳ್ಮೆಯ ಫಲವಾಗಿ ಬಂಗಾಳವನ್ನು ಗೆಲ್ಲಲು ಕೇಸರಿಪಡೆಗೆ ಸಾಧ್ಯವಾಗಿದೆ.