ನೆನಪಿನಂಗಳದಲ್ಲಿ ಕೆ.ಎಸ್.ನರಸಿಂಹಸ್ವಾಮಿ
1915ರ ಜನವರಿ 26ರಂದು ಜನಿಸಿದ ‘ಕೆಎಸ್‌ನ’, ಕನ್ನಡ ಕಾವ್ಯ ಕ್ಷಿತಿಜದ ಬೆಳ್ಳಿತಾರೆ. ಇಂಥ ಕವಿ ಯನ್ನು ಅವರ 111ನೇ ಜನ್ಮದಿನದಂದು ಸ್ಮರಿಸುವುದು ಹೆಮ್ಮೆಯ ಸಂಗತಿ. ಬದುಕಿನ ದುರ್ಭರ ನೋವು ‘ಕೆಎಸ್‌ನ’ ಅವರನ್ನು ಬಾಳಿನುದ್ದಕ್ಕೂ ಕಾಡಿದೆ. ಆದರೆ ಅದಕ್ಕೆ ಅವರು ಹತಾಶರಾಗಲಿಲ್ಲ. ಜೀವನ್ಮುಖಿ ಪ್ರವೃತ್ತಿಯು ‘ಕೆಎಸ್‌ನ’ ಅವರ ಕಾವ್ಯ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿತು, ಶಕ್ತಿಯಾಗಿ ಬಿಟ್ಟಿತು.
-
ಡಾ.ಶ್ರೀನಿವಾಸ ಪ್ರಸಾದ್ ಡಿ.ಎಸ್., ಕೋಲಾರ
ಕನ್ನಡ ಕಾವ್ಯ ಪ್ರಪಂಚದ ಮೆಲುದನಿಯ ಹಾಡಿನ ಕವಿಯೆಂದರೆ ಕೆ.ಎಸ್.ನರಸಿಂಹಸ್ವಾಮಿ ಯವರು. ಇವರು ‘ಕೆಎಸ್‌ನ’ ಎಂದೇ ಖ್ಯಾತರು. ಬಾಳಿನ ಮೌಲ್ಯವನ್ನು ಎತ್ತಿ ಹಿಡಿದು, ಮಧ್ಯಮ ವರ್ಗದ ಜನರ ನಿಡುಸುಯ್ಯವ ಬವಣೆಗಳನ್ನು ಜೀರ್ಣಾಗ್ನಿಯಾಗಿಸಿಕೊಂಡ ಸ್ವಾಭಿಮಾನದ ಮತ್ತು ಸಂಯಮದ ಕವಿ ಇವರು. ಜನವರಿ 26ನ್ನು ಭಾರತದ ಗಣರಾಜ್ಯೋತ್ಸವವೆಂದು ಆಚರಿಸುತ್ತೇವೆ. ಇದು ‘ಕೆಎಸ್‌ನ’ ಅವರ ಜನ್ಮದಿನವೂ ಹೌದು.
1915ರ ಜನವರಿ 26ರಂದು ಜನಿಸಿದ ‘ಕೆಎಸ್‌ನ’, ಕನ್ನಡ ಕಾವ್ಯ ಕ್ಷಿತಿಜದ ಬೆಳ್ಳಿತಾರೆ. ಇಂಥ ಕವಿ ಯನ್ನು ಅವರ 111ನೇ ಜನ್ಮದಿನದಂದು ಸ್ಮರಿಸುವುದು ಹೆಮ್ಮೆಯ ಸಂಗತಿ. ಬದುಕಿನ ದುರ್ಭರ ನೋವು ‘ಕೆಎಸ್‌ನ’ ಅವರನ್ನು ಬಾಳಿನುದ್ದಕ್ಕೂ ಕಾಡಿದೆ. ಆದರೆ ಅದಕ್ಕೆ ಅವರು ಹತಾಶರಾಗಲಿಲ್ಲ. ಜೀವನ್ಮುಖಿ ಪ್ರವೃತ್ತಿಯು ‘ಕೆಎಸ್‌ನ’ ಅವರ ಕಾವ್ಯ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿತು, ಶಕ್ತಿಯಾಗಿ ಬಿಟ್ಟಿತು.
‘ನಿರಾಶೆ ಬದುಕಿನ ಅರ್ಥವಲ್ಲ’ ಎಂಬ ಇವರ ಸಾಲು, ಬದುಕಿನ ಬಗೆಗಿನ ತೀವ್ರವಾದ ಭರವಸೆ ನ್ನು ಗಟ್ಟಿಗೊಳಿಸುವಂಥದ್ದು. ‘ಇಲ್ಲದುದಕೆ ಆಶಿಸದೆ, ಇದ್ದುದಕೆ ತೃಪ್ತಿಯಲಿ ಬಾಳುವುದೇ ಸಜ್ಜನರ ಬಾಳಧರ್ಮ’ (‘ಬದುಕಿನ ಮರ್ಮ’ ಎಂಬ ಕವಿತೆಯಲ್ಲಿ) ಎಂಬುದಾಗಿ ‘ಕೆಎಸ್‌ನ’ ಬರೆದರೂ, ಬದುಕಿನ ಚಕ್ರಗತಿ ಸ್ಥಿರವಲ್ಲ ಎಂಬುದನ್ನೂ ಅರಿತಿದ್ದರು.
ಇದನ್ನೂ ಓದಿ: R T Vittalmurthy Column: ಸಿದ್ದುಗೆ ಅನುದಾನ ಹೊಂದಿಸುವ ತಲೆನೋವು ಶುರುವಾಗಿದೆ
ಆದ್ದರಿಂದ ಅವರು ಬದುಕಿನ ಸೂತ್ರಧಾರನನ್ನು ಪಯಣದ ಜಾಡಿನಲ್ಲೇ ಗುರುತಿಸುತ್ತಾರೆ. ಈ ಅನ್ವೇಷಣೆಯನ್ನು ಅವರು ಅರ್ಥೈಸುವುದು ಹೀಗೆ: ‘ಯಾವುದೋ ಶಕ್ತಿ ನಮ್ಮನ್ನು ಆಳುತಿದೆ, ಆಗುವುದು ಆಗುತಿದೆ ಹೋಗುವುದು ಹೋಗುತಿದೆ, ನಂಬಿಕೆಯ ಮೇಲೆ ನಿಂತಿದೆ ಜಗತ್ತು, ಕತ್ತಲೆಯ ದಾರಿಯುದ್ದಕೂ ಬೆಳಕು ಇಲ್ಲಲ್ಲಿ ಕಾಣುತ್ತಿದೆ’. (‘ಕೈಮರದ ನೆಳಲಲ್ಲಿ’ ಕವನದಲ್ಲಿ).
ದೈವತ್ವದ ಸದೃಢ ಶಕ್ತಿಯ ಹಿಂದೆ ಅಚಲವಾದ ನಂಬಿಕೆ ಇರಬೇಕು ಎನ್ನುವ ‘ಕೆಎಸ್‌ನ’, ಪ್ರಬಲವೂ ಸ್ವತಂತ್ರವೂ ಆಗಿರುವ ಆತ್ಮಸ್ಥೈರ್ಯದ ಬದುಕು ನಮ್ಮದಾಗಿರಬೇಕು ಎಂಬ ಸಂಗತಿಯನ್ನು ‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ’ ಎಂಬ ಕವನದಲ್ಲಿ ಪ್ರತಿಪಾದಿಸಿರುವುದು ಹೀಗೆ: ‘ನಿನ್ನ ಹಂಗಿಲ್ಲದೆಯೇ ಬಾಳುವುದು ಕಲಿಸು, ನೊಂದು ಮಾಗಲಿ ಜೀವ ಎಂದು ಹರಸು’.
ಹೀಗೆ ಹೇಳುವಾಗ, ಯಾವ ಹಂಗು, ದಾಕ್ಷಿಣ್ಯವಿರದ ಅನಿರ್ಬಂಧಿತ ಜೀವನ ನಮ್ಮನ್ನು ಕಾಯಲಿ ಎಂಬುದೇ ಜೀವಸತ್ವವಾಗಿ ಕಂಡಿದೆ. ಬದುಕಿನಲ್ಲಿ ಸಮಸ್ಯೆ-ಸಂಕಷ್ಟಗಳ ಸರಪಳಿ ಇಲ್ಲ ಎಂದು ‘ಕೆಎಸ್‌ನ’ ಹೇಳುವುದಿಲ್ಲ; ಆದರೆ ಆ ಶೃಂಖಲೆಗಳಿಂದ ಹೊರಬರುವುದಕ್ಕಾಗಿನ ಶಕ್ತಿಯ ಅವಶ್ಯಕತೆ ಯನ್ನು ಅವರು ಅಮೂರ್ತ ದೈವದ ಮೂಲಕ ಗ್ರಹಿಸುತ್ತಾರೆ.
‘ಎರಡು ಚಿತ್ರಗಳು’ ಕವಿತೆಯಲ್ಲಿ ಅದು ಪಡಿಮೂಡಿರುವುದು ಹೀಗೆ: ‘ಎಲ್ಲ ಚೆನ್ನಾಗಿಹುದು ಎಂದು ಹೇಳಲಿ ಹೇಗೆ? ಗಂಭೀರವಾಗಿಹುದು ಬಿಸಿಲಬೇಗೆ! ದೇವರಿದ್ದಾನೆ ಸರಿ, ಗೊತ್ತಿಲ್ಲ ಎಲ್ಲೆಂದು; ಎಲ್ಲಿದ್ದರೂ ಬರಬೇಕು ಅವನು ಹೊರಗೆ’. ಮಧ್ಯಮ ವರ್ಗದವರ ದಿನನಿತ್ಯದ ಸಂಕಟಗಳನ್ನು ತಾವೂ ಅನುಭವಿಸಿ, ಅದನ್ನು ತಮ್ಮ ಕಾವ್ಯದಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಮೂಡಿಸಿ ಆರ್ದ್ರವಾಗಿಸಿದವರು ಕೆ.ಎಸ್.ನರಸಿಂಹಸ್ವಾಮಿ.
ಆದರೆ ಈ ಆರ್ದ್ರತೆ ಕಂಬನಿಯ ಕುಯಿಲಲ್ಲ, ಅಳುಮುಂಜಿತನದ ಕಡಲೂ ಅಲ್ಲ. ಸಂಕಟವನ್ನು ಸಹಿಸುವ ಗುಣದಾರ್ಢ್ಯತೆ ಇಲ್ಲಿ ಕಾಣಬರುತ್ತದೆ. ಜನಸಾಮಾನ್ಯರ ನಿತ್ಯದ ಗೋಳನ್ನೂ ‘ಕೆಎಸ್‌ನ’ ಸಹಜಾತಿಸಹಜವಾಗಿ ಮೂಡಿಸಿ ಗಾಢವಾಗಿಸುವ ಪರಿ ಇಲ್ಲಿದೆ ನೋಡಿ: ‘ಬರಿಗೊಡಗಳಿಗೆ ಸಮಾಧಾನ ಹೇಳುತಿದೆ ನೀರಿಲ್ಲದ ನಲ್ಲಿ, ಮಟಮಟ ಮಧ್ಯಾಹ್ನದಲ್ಲಿ ಬೀದಿಯೊಳಗಾಗಿ ಒಂದು ತಲೆಯಿಲ್ಲ, ಬಿಸಿಲೇ ಎಲ್ಲ’.
ಇಲ್ಲಿ ಮಧ್ಯಾಹ್ನದ ಉರಿಬಿಸಿಲಿನ ಧಗೆ ವಾಚ್ಯಾರ್ಥವಾದರೆ, ಬಿಸಿಲು ಕಷ್ಟದ ಸಂಕೇತವೂ ಹೌದೆಂಬ ಧ್ವನ್ಯಾರ್ಥವೂ ಇದೆ. ಇದು ‘ಕೆಎಸ್‌ನ’ ಅವರ ಕಾವ್ಯದ ‘ನಿರಾಭರಣ’ ಕಾವ್ಯಕೌಶಲ. ಅನುಭವ, ಅನ್ವೇಷಣೆ ಹಾಗೂ ಅದರೆಡೆಗಿನ ನಿಷ್ಠಾವಂತ ಪ್ರಯತ್ನವು ‘ಕೆಎಸ್‌ನ’ ಅವರಿಂದ ಸತತವಾಗಿ, ನಿಸ್ಪೃಹವಾಗಿ ಆಗಿದೆ.
ಆತ್ಮಗೌರವದ ಜೀವನವೇ ಬಾಳಿನ ಸೌಂದರ್ಯ ಎಂದ ಈ ಕವಿ, ಬಾಳನ್ನು ಸಹನೀಯವಾಗಿಯೇ ಎದುರಿಸಿದ ಧೀಮಂತರು. ‘ಚಂದ್ರಪದಕ’ ಎಂಬ ಅವರ ಕವನದ ಈ ಸಾಲುಗಳಲ್ಲೊಮ್ಮೆ ನೋಡಿ: ‘ಯಾವುದನುಭವ, ಕನಸು ಯಾವುದೆನ್ನಲಿ ನಾನು, ಚೆಲುವನಪ್ಪಿದ ಹಾಡ ಕೇಳಬೇಕು, ಚೆಲುವಿನಿಂದಲೇ ಬದುಕು ಸಹ್ಯವಾಗಿದೆ ನೋಡಿ, ಅಳಲ ದಾಟಿದ ಹಾಡ ಹಾಡಬೇಕು’.
‘ಕೆಎಸ್‌ನ’ ಬಹು ಎಚ್ಚರದ, ಗಾಂಭೀರ್ಯವಂತ ಕವಿಯೂ ಹೌದು ಎಂಬುದಕ್ಕೆ ‘ನನ್ನ ನೆಲೆ’ ಎಂಬ ಕವನದ ಈ ಸಾಲುಗಳನ್ನು ನೋಡಿ: ‘ಯಾವುದು ನಿಜವೋ ಯಾವುದು ಗುಣವೋ ಅದಾಗಲಿ ನನ್ನ ಗುರು; ಯಾವುದು ಮಾನವಲೋಕದ ಋಣವೋ ಅದಾಗಲಿ ನನ್ನುಸಿರು’.
ಹೀಗೆ ಕಾವ್ಯ ಮತ್ತು ಬದುಕು ಎರಡರ ಸಂಯಮದ ಪ್ರತೀಕವಾಗಿದ್ದ ಕೆ.ಎಸ್. ನರಸಿಂಹಸ್ವಾಮಿ ಅವರ ಮನೆಗೆ, ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದ ನಮ್ಮನ್ನು ಕರೆದುಕೊಂಡು ಹೋಗಿದ್ದು ಗುರುಗಳಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಡಾ.ಎಚ್.ಎಸ್. ವೆಂಕಟೇಶ ಮೂರ್ತಿಯವರು. ‘ಕೆಎಸ್‌ನ’ ಅವರ ಮನೆಯ ಹೆಸರು, ಈ ಕವಿಯ ಕಾವ್ಯಬದುಕಿಗೆ ಅನ್ವರ್ಥವಾಗಿಯೇ ‘ಕಾವ್ಯಶ್ರೀ’ ಎಂದಿತ್ತು.
ಕವಿಯನ್ನು ಎದುರಾಗಿ ಮಾತನಾಡಿಸುವ ಸುಸಂದರ್ಭ ನಮ್ಮದು. ನಮ್ಮ ಸಹಪಾಠಿಯೊಬ್ಬರು ‘ಕೆಎಸ್‌ನ’ ಅವರನ್ನು, “ಸರ್, ಇವತ್ತಿನ ಕಾವ್ಯಲೋಕ ಹೇಗಿದೆ? ಕವಿಗಳು ಹೇಗಿದ್ದಾರೆ?" ಎಂದು ಪ್ರಶ್ನಿಸಿದರು (‘ಕೆಎಸ್‌ನ’ ಅವರಿಗೆ ಅದಾಗಲೇ ವಯಸ್ಸು 85. ಬುದ್ಧಿ ಚುರುಕಾಗಿದ್ದರೂ, ಕಿವಿ ಮಂದವಾಗಿತ್ತು; ಹಾಗಾಗಿ 2-3 ಸಲ ಪ್ರಶ್ನೆಯನ್ನು ಕೇಳಬೇಕಾಯಿತು). ಆಗ ‘ಕೆಎಸ್‌ನ’ ಅವರು ಸಾವಕಾಶವಾಗಿ ಉತ್ತರಿಸಿದ್ದು ಹೀಗೆ: “ಕೋಗಿಲೆಗಳೇನೋ ಸಿದ್ಧವಾಗಿವೆ, ವಸಂತಕಾಲ ಕೂಡಿಬರಬೇಕು".
ಎಂಥ ಅನುಭವಪೂರ್ಣ ಮಾತು! ‘ಒಲವು’ ಎಂಬ ಕವಿತೆಯಲ್ಲಿ, ‘ಚಿಂತೆಯನು ಬದಿಗಿಟ್ಟು ವೀಣೆಯನು ನುಡಿಸುತ್ತಾ, ಹತ್ತಾರು ಹಾಡುಗಳ ಹಾಡಬೇಕು; ಮಳೆ ನಿಂತು ದೂರದಲಿ ಬಂತು ಕಾಮನಬಿಲ್ಲು, ನಾವದಕೆ ಕೈಮುಗಿದು ತೆರಳಬೇಕು’ ಎಂದಿದ್ದಾರೆ ‘ಕೆಎಸ್‌ನ’.
ಕನ್ನಡ ಕಾವ್ಯ ಸಂದರ್ಭದ ಬಹುಮುಖ್ಯ ಕವಿಯಾದ ಕೆ.ಎಸ್.ನರಸಿಂಹ ಸ್ವಾಮಿಯವರು ತೀರಿ ಹೋಗಿ 23 ವರ್ಷಗಳೇ ಆಗಿವೆ (ಮರಣ: 2003ರ ಡಿಸೆಂಬರ್ 27). ಅವರ 111ನೆಯ ಜನ್ಮದಿನದ ಆಚರಣೆಯು ಮರೆಯಬಾರದ, ಮರೆಯಲಾಗದ ಈ ಪ್ರಾತಃಸ್ಮರಣೀಯ ಕವಿಗೆ ನಾವು ಸಲ್ಲಿಸಬಹು ದಾದ ಕೊಡುಗೆ. ಈ ನುಡಿಮುಡಿಪು ಕೂಡ ಅದರ ಒಂದು ಭಾಗವೇ...
ಸಾಹಿತ್ಯಿಕ ಜಂಗೀಕುಸ್ತಿ!
ಕವಿ ಗೋಪಾಲಕೃಷ್ಣ ಅಡಿಗರು ‘ಪುಷ್ಪಕವಿಯ ಪರಾಕು’ ಎಂಬ ತಮ್ಮ ಕವನದಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರ ಬಗ್ಗೆ ಮೊನಚಾಗಿ ಟೀಕಿಸಿಬಿಟ್ಟರು! ಆಗಲೂ ‘ಕೆಎಸ್‌ನ’ ಉದ್ವಿಗ್ನರಾಗದೆ ‘ಅಡಿಗರ ಮಾತು’ ಎಂಬ ತಮ್ಮ ಕವನದಲ್ಲಿ ಇದಕ್ಕೆ ನಿರುಮ್ಮಳವಾಗಿಯೇ ಉತ್ತರಿಸಿದ್ದು ಹೀಗೆ: ಗೋಪಾಲಕೃಷ್ಣ ಅಡಿಗರು ಒಮ್ಮೆ ಹೇಳಿದರುನನ್ನ ಅನುಭವವೇ ತೆಳುವೆಂದು. ಒಪ್ಪುತ್ತೇನೆ.
ಅವರವರ ಪ್ರತಿಭೆ ಅವರವರದಾಗಿರುವಾಗ ನನ್ನ ದನಿ ಅಡಿಗರದು ಎಂತಾದೀತು, ಬಿಡಿ. ಅವರ ದನಿ ಯಕ್ಷಗಾನದ ರೀತಿ: ನನ್ನ ದನಿ ತಂಪಾದ ಸಂಜೆಯಲಿ ಗೆಳೆಯರಿಬ್ಬರು ಕುಳಿತು ಎತ್ತರಕ್ಕೇರದೆಯೇ ಮಾತಾಡುವ ರೀತಿ. ಅವರವರ ಅನುಭವದ ಆಯ್ಕೆ ಅವರವರಿಷ್ಟ. ಅವರ ನಂಬಿಕೆ ಅವರ ದೇವರಾ ಗಿರುವಾಗ ಅದ ಹೊತ್ತು ಮುಂದುವರಿಯುವುದು ಸೌಜನ್ಯ. ಕವಿತೆಯುತ್ಸಾಹದಲಿ ಡೊಂಕು ನುಡಿಗಳು ಬೇಡ: ಅಡ್ಡದಾರಿಯ ಹಿಡಿದು ಮಾತಾಡುವುದು ಬೇಡ.