ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr N Someshwara Column: ಜೀವವನ್ನು ಬಲಿಕೊಟ್ಟ ಲಾಜರನಿಗೆ ಕೀರ್ತಿಯು ಸಲ್ಲಲೇ ಇಲ್ಲ !

ಒಬ್ಬ ವಯಸ್ಕನಿಗೆ ಏಳುವಾಗಲೇ ಜ್ವರ. ಸಂಜೆಯಾಗುತ್ತಿರುವಂತೆಯೇ ಅವನ ಕಣ್ಣುಗಳು ಕಾಮಾಲೆ ಪೀಡಿತರಂತೆ ಹಳದಿ ಬಣ್ಣವನ್ನು ತಳೆಯುತ್ತಿತ್ತು. ರಾತ್ರಿಯ ಒಳಗೆ ವಿಪರೀತ ವಾಂತಿ. ಅಂತಿಂತಹ ವಾಂತಿಯಲ್ಲ. ಕಡು ಕಪ್ಪು ವಾಂತಿ. ಎರಡು ಮೂರು ದಿನಗಳಲ್ಲಿ ಸಾವು ಬಂದು ಅವನನ್ನು ಕರೆದೊಯ್ಯುತ್ತಾ ಆ ದೇಹಕ್ಕೆ ಚಿರವಿಶ್ರಾಂತಿಯನ್ನು ನೀಡುತ್ತಿತ್ತು.

ಜೀವವನ್ನು ಬಲಿಕೊಟ್ಟ ಲಾಜರನಿಗೆ ಕೀರ್ತಿಯು ಸಲ್ಲಲೇ ಇಲ್ಲ !

-

ಹಿಂದಿರುಗಿ ನೋಡಿದಾಗ

19ನೇಯ ಶತಮಾನದ ಕೊನೆಯ ಭಾಗ. ಹಳದಿ ಜ್ವರ ಅಥವಾ ಯೆಲ್ಲೋ ಫೀವರ್ ಎನ್ನುವುದು ಕೇವಲ ಒಂದು ಜ್ವರ ಮಾತ್ರವಾಗಿರಲಿಲ್ಲ. ಅದೊಂದು ಮಹಾಮಾರಿ. ಸದ್ದಿಲ್ಲದ ಹಾಗೆ ನಗರವನ್ನು ಪ್ರವೇಶಿಸುತ್ತಿತ್ತು. ಮನೆಯ ಬಾಗಿಲನ್ನು ತಟ್ಟದೆ ಒಳನುಗ್ಗುತ್ತಿತ್ತು. ಮನೆಯಲ್ಲಿರುವವರನ್ನೆಲ್ಲ ನುಂಗಿ ನೀರು ಕುಡಿದು, ಮುಂದಿನ ಮನೆಯನ್ನು ಅರಸಿಕೊಂಡು ಹೋಗುತ್ತಿತ್ತು.

ಶಾಲಾ ಕಾಲೇಜುಗಳನ್ನು ಮುಚ್ಚಿದರು. ಅಂಗಡಿಮುಂಗಟ್ಟುಗಳಿಗೆ ಬೀಗವನ್ನು ಹಾಕಿದರು. ಮಾರುಕಟ್ಟೆಯು ಬಂದಾಯಿತು. ಬೀದಿಗಳು ಬಿಕೋ ಎನ್ನಲಾರಂಭಿಸಿದವು. ಊರಿನ ಪ್ರತಿಯೊಂದು ಮನೆಯು ಆಸ್ಪತ್ರೆಯಾಯಿತು. ಸಾವನ್ನು ಸ್ವಾಗತಿಸುವ ಕಾಯುವ ಕೋಣೆಯಾಗಿ ಪರಿವರ್ತಿತ ವಾಯಿತು.

ಒಬ್ಬ ವಯಸ್ಕನಿಗೆ ಏಳುವಾಗಲೇ ಜ್ವರ. ಸಂಜೆಯಾಗುತ್ತಿರುವಂತೆಯೇ ಅವನ ಕಣ್ಣುಗಳು ಕಾಮಾಲೆ ಪೀಡಿತರಂತೆ ಹಳದಿ ಬಣ್ಣವನ್ನು ತಳೆಯುತ್ತಿತ್ತು. ರಾತ್ರಿಯ ಒಳಗೆ ವಿಪರೀತ ವಾಂತಿ. ಅಂತಿಂತಹ ವಾಂತಿಯಲ್ಲ. ಕಡು ಕಪ್ಪು ವಾಂತಿ. ಎರಡು ಮೂರು ದಿನಗಳಲ್ಲಿ ಸಾವು ಬಂದು ಅವನನ್ನು ಕರೆದೊಯ್ಯುತ್ತಾ ಆ ದೇಹಕ್ಕೆ ಚಿರವಿಶ್ರಾಂತಿಯನ್ನು ನೀಡುತ್ತಿತ್ತು.

ಇದನ್ನೂ ಓದಿ: Dr N Someshwara Column: ಈತ ಬ್ಯಾಕ್ಟೀರಿಯಾಗಳನ್ನು ಗಟಗಟನೇ ಕುಡಿದ !

ಹಳದಿ ಜ್ವರವು ಪ್ರಜಾಪ್ರಭುತ್ವವಾದಿಯಾಗಿತ್ತು. ಬಡವರನ್ನು, ಶ್ರೀಮಂತರನ್ನು, ಬುದ್ಧಿವಂತರನ್ನು, ದಡ್ಡರನ್ನು, ಸೈನಿಕರನ್ನು, ಶ್ರೀಸಾಮಾನ್ಯರನ್ನು, ವ್ಯಾಪಾರಿಗಳನ್ನು, ಗುಲಾಮರನ್ನು, ಮಾಲಿಕರನ್ನು, ಪುರೋಹಿತರನ್ನು, ವೈದ್ಯರನ್ನು, ದಾದಿಯರನ್ನು, ಹೆಂಗಸರನ್ನು, ಮಕ್ಕಳನ್ನು ಯಾರಿಗೂ ವಿನಾಯತಿಯನ್ನು ನೀಡದೆ ಅವರನ್ನು ಕೊಲ್ಲುತ್ತಿತ್ತು.

ಹಳದಿಜ್ವರವು ನಿಷ್ಪಕ್ಷಪಾತಿಯಾಗಿದ್ದರೂ ಸಹ, ಅದೇನೋ ಬಡವರನ್ನು ಕಂಡರೆ ವಿಪರೀತ ಪ್ರೀತಿ. ಅವರನ್ನು ಹೆಚ್ಚಿನ ಪ್ರಮಾಣದಲ್ಲಿ ಕರೆದೊಯ್ಯುತ್ತಿತ್ತು. ಬಡವರು ಸಾಮಾನ್ಯವಾಗಿ ಜನನಿಬಿಡ ಪ್ರದೇಶಗಳಲ್ಲಿ ಹಾಗೂ ಜೌಗು ಪ್ರದೇಶದ ಬಳಿ ವಾಸಿಸುತ್ತಿದ್ದರು.

ಸ್ಪ್ಯಾನಿಶ್-ಅಮೆರಿಕನ್ ಯುದ್ಧ:

1898 ಸ್ಪ್ಯಾನಿಶ್-ಅಮೆರಿಕನ್ ಯುದ್ಧವು ನಡೆಯಿತು. ಈ ಯುದ್ಧದಲ್ಲಿ ಎಷ್ಟು ಜನರು ಗುಂಡೇಟಿ ನಿಂದ ಸತ್ತರೋ, ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಜನರು ಹಳದಿಜ್ವರದಿಂದ ಸಾಯಲಾ ರಂಭಿಸಿದರು. ಯುದ್ಧವು ಅಮೆರಿಕ ಮತ್ತು ಸ್ಪೇನ್ ದೇಶದ ನಡುವೆ ನಡೆಯಿತು. ಯುದ್ಧವು ಪ್ರಧಾನವಾಗಿ ಕ್ಯೂಬಾ, ಪ್ಯುರೆಟೊ ರಿಕೊ, ಗ್ವಾಮ್, ಫಿಲಿಪೈನ್ಸ್ ಪ್ರದೇಶದಲ್ಲಿ ನಡೆದವು.

ಕ್ಯೂಬಾನ್ನರು ಸ್ಪೇನ್‌ನವರಿಂದ ಸ್ವಾತಂತ್ರವನ್ನು ಪಡೆಯಲು ಹೋರಾಟವನ್ನು ನಡೆಸುತ್ತಿದ್ದರು. ಸ್ಪೇನಿಗಳು ಕ್ಯೂಬನ್ನರಿಗೆ ಚಿತ್ರಹಿಂಸೆಯನ್ನು ಕೊಟ್ಟು ಕೊಲ್ಲುವ ಸುದ್ದಿಯನ್ನು ಕೇಳಿದ ಅಮೆರಿಕವು ಸ್ಪೇನ್ ಮೇಲೆ ಯುದ್ಧವನ್ನು ಸಾರಿತು. ಈ ಯುದ್ಧದಲ್ಲಿ ಅಮೆರಿಕವು ವಿಜಯಿಯಾಯಿತು. ನಿಜ. ಆದರೆ ಹವಾನದಿಂದ ನ್ಯೂಅರ್ಲೆನ್ಸ್ ವರೆಗಿನ ಬಂದರು ನಗರಗಳು ಹಳದಿಜ್ವರದ ಸಾಮ್ರಾಜ್ಯವಾಗಿ ಜನರನ್ನು ನಿರ್ದಯವಾಗಿ ಕೊಲ್ಲುತ್ತಿದ್ದವು.

Screenshot_9

ಹಳದಿಜ್ವರದ ನಿಯಂತ್ರಣವು ಕೇವಲ ವೈದ್ಯಕೀಯ ತುರ್ತು ಸ್ಥಿತಿ ಮಾತ್ರವಾಗಿರಲಿಲ್ಲ, ರಾಜಕೀಯ, ಮಿಲಿಟರಿ ಹಾಗೂ ಸಾರ್ವಜನಿಕರ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ಹಳದಿಜ್ವರ ಬರಲು ಏನು ಕಾರಣ ಎಂದು ಯಾರಿಗೂ ತಿಳಿದಿರಲಿಲ್ಲ. ಕೆಲವರು ಕೆಟ್ಟ ಗಾಳಿ ಕಾರಣವೆಂದರು. ರೋಗಿಗಳು ಧರಿಸಿದ್ದ ವಸ್ತ್ರಗಳು ಎಂದರು. ಉಳಿದವರು ಇಲ್ಲ ಅವರ ಮಲಗುವ ಹಾಸಿಗೆಯಿಂದ ಹರಡುತ್ತದೆ ಎಂದರು. ಆಗ ಮನೆಮಂದಿಯು ರೋಗಿಗಳ ಬಟ್ಟೆ, ಹಾಸಿಗೆ, ಹೊದಿಕೆ ಎಲ್ಲವನ್ನೂ ಸುಟ್ಟರು.

ಬಂದರುಗಳನ್ನು ಪ್ರವೇಶಿಸುವ ಹಡಗುಗಳನ್ನು ಕ್ವಾರಂಟೈನ್ ಮಾಡಿದರು. ಆದರೆ ರೋಗವು ಮಾತ್ರ ಕಡಿಮೆಯಾಗಲಿಲ್ಲ. ಕ್ಯೂಬಾ ದೇಶದ ವೈದ್ಯ ಕಾರ್ಲೋಸ್ ಯುವಾನ್ ಫಿನ್ಲೆ (1833-1915) ಮೊದಲ ಬಾರಿಗೆ ಹಳದಿ ಜ್ವರವು ಹರಡುವುಕೆಗೆ ಬಹುಶಃ ಸೊಳ್ಳೆಗಳು ಕಾರಣವಿರಬೇಕೆಂದು 1881ರಷ್ಟು ಹಿಂದೆಯೇ ತರ್ಕಿಸಿದ. ಏಡಿಸ್ ಈಜಿಪ್ಟೈ ಎಂಬ ಬಿಳಿಬಣ್ಣದ ಗೆರೆಗಳಿರುವ ಸೊಳ್ಳೆಯು, ಸದ್ದಿಲ್ಲದ ಹಾಗೆ ಹಳದಿಜ್ವರವನ್ನು ರೋಗಿಗಳಿಂದ ಆರೋಗ್ಯವಂತರಿಗೆ ಹರಡುತ್ತಿತ್ತು.

ಆದರೆ ಫಿನ್ಲೆಯ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಹೊಸ ವೈಜ್ಞಾನಿಕ ಪರಿಕಲ್ಪನೆಗಳು ಯಾವಾಗಲೂ ಮೂರು ಅಡ್ಡಿಗಳನ್ನು ದಾಟಬೇಕಾದದ್ದು ಅನಿವಾರ್ಯವಾಗಿರುತ್ತದೆ. ಮೊದ ಮೊದಲು ಹಾಸ್ಯ ಮಾಡಿ ನಕ್ಕು ನಿರ್ಲಕ್ಷಿಸಿ ಮುಂದೆ ಹೋಗುತ್ತಾರೆ.

ಎರಡನೇಯ ಹಂತದಲ್ಲಿ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಹುಸಿತಜ್ಞರು ಬಲವಾಗಿ ಪ್ರತಿರೋಧಿಸುತ್ತಾರೆ. ಕೊನೆಗೆ ಮೂರನೇಯ ಘಟ್ಟದಲ್ಲಿ ನಿರಾಕರಿಸಲು ಸಾಧ್ಯವೇ ಇಲ್ಲದಂತಹ ಪುರಾವೆಯನ್ನು ಒದಗಿಸಿದಾಗ ಸದ್ದಿಲ್ಲದಂತೆ ಸತ್ಯವನ್ನು ಒಪ್ಪಿಕೊಂಡು ಮುನ್ನಡೆಯುತ್ತಾರೆ. ಹಳದಿಜ್ವರದ ವಿಚಾರದಲ್ಲಿಯೂ ಹೀಗೆಯೇ ನಡೆಯಿತು. ಫಿನ್ಲೆ ಮೂರನೇಯ ಅಡ್ಡಿಯನ್ನು ತಲುಪುವ ವೇಳೆಗೆ ೨೦ ವರ್ಷಗಳಾಗಿದ್ದವು.

ಹಳದಿಜ್ವರ ಆಯೋಗ: 1900ರ ವೇಳೆಗೆ ಅಮೆರಿಕ ಸರಕಾರವು ಮೇಜರ್ ವಾಲ್ಟರ್ ರೀಡ್ (1851-1902) ಅವರ ನೇತೃತ್ವದಲ್ಲಿ ಹಳದಿಜ್ವರ ಆಯೋಗವನ್ನು (ಯೆಲ್ಲೋಫೀವರ್ ಕಮಿಷನ್) ನೇಮಿಸಿತು. ರೀಡ್ ಅವರ ತಂಡದಲ್ಲಿ ಜೇಮ್ಸ್ ಕೆರೋಲ್ (1854-1907), ಜೆಸ್ಸಿ ವಿಲಿಯಂ ಲಾಜ಼ರ್ (1866-1900), ಮತ್ತು ಅರಿಸ್ಟೈಡ್ ಅಗ್ರಿಮೊಂಟೆ (1868-1931) ಇದ್ದರು.

ಮೂವರು ಕ್ಯೂಬಾಕ್ಕೆ ಹೊರಟರು. ಮಾರಣಾಂತಿಕ ಹಳದಿಜ್ವರವು ಹೇಗೆ ಬರುತ್ತದೆ ಎನ್ನುವ ಏಕೈಕ ಪ್ರಶ್ನೆಗೆ ಉತ್ತರವನ್ನು ಹುಡುಕುವುದು ಅವರ ಪ್ರಾಥಮಿಕ ಆದ್ಯತೆಯಾಗಿತ್ತು. ಹಳದಿ ಜ್ವರಕ್ಕೆ ಕಾರಣ ವನ್ನು ಕಂಡುಹಿಡಿಯಲು ಹೊರಟ ತಂಡವು ಹವಾನ ಬಳಿಗೆ ಬಂದಿತು. ಅಲ್ಲಿ ತಮ್ಮ ಪ್ರಯೋಗಾ ಲಯವನ್ನು ಸ್ಥಾಪಿಸಿತು. ಪ್ರಯೋಗಾಲಯ ಎಂದರೆ ಕಲ್ಲಿನ ಇಲ್ಲವೇ ಇಟ್ಟಿಗೆಯ ಕಟ್ಟಡ ವಾಗಿರಲಿಲ್ಲ. ಅದೊಂದು ಗುಡಿಸಲಾಗಿತ್ತು.

ವಿಶೇಷವಾಗಿ ನಿರ್ಮಿಸಿದ ಈ ಗುಡಿಸಲು ಗಳಲ್ಲಿಯೇ ಸಂಶೋಧಕರು ಉಳಿದುಕೊಂಡರು. ಅವರ ಹಾಸಿಗೆ ಹೊದಿಕೆಗಳನ್ನು ಅಲ್ಲಿಯೇ ಜೋಡಿಸಿಕೊಂಡರು. ಜತೆಗೆ ಅವರ ಅಧ್ಯಯನದಲ್ಲಿ ಪಾಲು ಗೊಳ್ಳಲು ಅನೇಕ ಸ್ವಯಂಸೇವಕರು ಬಂದಿದ್ದರು. ಅವರೂ ಸಹ ಇದೇ ಗುಡಿಸಲುಗಳಲ್ಲಿ ಉಳಿದು ಕೊಳ್ಳಬೇಕಾಗಿ ಬಂದಿತು. ಅವರ ಪ್ರಯೋಗಾಲಯ, ಅಧ್ಯಯನದ ಮೇಜು, ಅಡುಗೆಮನೆ, ಊಟದ ಮನೆ, ಸ್ನಾನ ಶೌಚಗಳೆಲ್ಲ ಈ ಗುಡಿಸಲುಗಳಲ್ಲೇ ನಡೆಯಬೇಕಾಗಿತ್ತು. ಫಿನ್ಲೆ ಸೊಳ್ಳೆಯ ಮೂಲಕ ಹಳದಿಜ್ವರವು ಹರಡುತ್ತದೆ ಎಂಬ ಮಾತಿನ ಸತ್ಯಾಸತ್ಯತೆಯನ್ನು ಪರೀಕ್ಷಿಸಲೆಂದು ಅವರು ಸೊಳ್ಳೆಗಳನ್ನು ಸಾಕುವ ವಿಶೇಷ ಪಂಜರಗಳನ್ನೂ ತಂದಿದ್ದರು.

ಹಳದಿಜ್ವರವು ಹೇಗೆ ಬರುತ್ತದೆ ಎಂಬುದನ್ನು ಅಧಿಕೃತವಾಗಿ ಕಂಡುಹಿಡಿದ ಈ ಸ್ಥಳವು ಕ್ಯಾಂಪ್ ಲಾಜ಼ರ್ ಎಂದು ಇತಿಹಾಸದಲ್ಲಿ ಹೆಸರಾಗಿದೆ. ರೀಡ್ ಅವರ ತಂಡದಲ್ಲಿದ್ದ ಜೆಸ್ಸಿ ವಿಲಿಯಂ ಲಾಜ಼ರ್ ಅವರು, ಹಳದಿ ಜ್ವರದ ಅಧ್ಯಯನದಲ್ಲಿ ತಮ್ಮನ್ನು ತಾವು ಬಲಿಕೊಟ್ಟರು. ಹಾಗಾಗಿ ಅವರ ನೆನಪಿನಲ್ಲಿ ಈ ಸಂಶೋಧನಾ ಕೇಂದ್ರವನ್ನು ಕ್ಯಾಂಪ್ ಲಾಜ಼ರ್ ಎಂದು ಕರೆದರು.

ಜೈವನೈತಿಕತೆ: ವೈದ್ಯಕೀಯ ಸಂಶೋಧನೆಗಳಲ್ಲಿ ಸ್ವಯಂಸೇವಕರ ಪಾತ್ರ ಬಹಳ ದೊಡ್ಡದು. ಅವರು ಪ್ರಜ್ಞಾಪೂರ್ವಕವಾಗಿ ಪ್ರಯೋಗದಲ್ಲಿ ಭಾಗಿಯಾಗಬೇಕಾಗುತ್ತದೆ. ಅಧ್ಯಯನದಲ್ಲಿ ಅಜ್ಞಾನ ಪಾರ್ಶ್ವಪರಿಣಾಮಗಳು ಕಂಡುಬರುತ್ತವೆ. ಜೀವಹೋಗುವ ಇಲ್ಲವೇ ಜೀವನಪರ್ಯಂತ ಪಾರ್ಶ್ವಪರಿಣಾಮಗಳ ನರಳುವ ಸಾಧ್ಯತೆಯು ಅಧಿಕವಾಗಿರುತ್ತದೆ.

ಹಾಗಾಗಿ ತಿಳಿದೂ ತಿಳಿದು ಅಧ್ಯಯನದಲ್ಲಿ ಭಾಗಿಯಾಗಲು ಎಂಟೆದೆ ಬೇಕು. ಹಳದಿ ಜ್ವರದ ಅಧ್ಯಯನದಲ್ಲಿ ಪಾಲುಗೊಳ್ಳಲು ಬರುವ ಸ್ವಯಂಸೇವಕರನ್ನು ಜೈವನೈತಿಕತೆಯಿಂದ (ಬಯೋ ಎಥಿಕ್ಸ್) ಹಾಗೂ ಅವರ ಯೋಗಕ್ಷೇಮವನ್ನು ಅಧಿಕೃತವಾಗಿ ಹಾಗೂ ವ್ಯವಸ್ಥಿತವಾಗಿ ಹೊರುವ ಪ್ರಥಮ ಪ್ರಯತ್ನವು ಮಾನವನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯಿತು. ಅಲ್ಲಿಯವರೆಗೆ ವೈದ್ಯಕೀಯ ಪ್ರಯೋಗಗಳಿಗೆ ಗುಲಾಮರನ್ನು ಇಲ್ಲವೇ ಮರಣದಂಡನೆಗೆ ಗುರಿಯಾದ ಖೈದಿಗಳನ್ನು ಬಳಸುತ್ತಿದ್ದರು. ಈಗ ಮೊದಲ ಬಾರಿಗೆ ಅಧ್ಯಯನದಲ್ಲಿ ಪಾಲುಗೊಳ್ಳುವ ಸ್ವಯಂಸೇವಕರ ಲಿಖಿತ ಒಪ್ಪಿಗೆಯನ್ನು ಪಡೆದರು.

ಸ್ವಯಂಸೇವಕನಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಯೋಗದ ಎಲ್ಲ ವಿವರಗಳನ್ನು ಬರೆದು, ಮುಖ್ಯವಾಗಿ ಪಾರ್ಶ್ವಪರಿಣಾಮಗಳು ಹಾಗೂ ಸಾವು ಸಂಭವ ಸಾಧ್ಯತೆಯನ್ನು ವಿವರಿಸಿ, ಅವನ ಸಹಿಯನ್ನು ತೆಗೆದುಕೊಳ್ಳುತ್ತಿದ್ದರು. ತಿಳಿ ಹೇಳಿದ ಒಪ್ಪಿಗೆ ಪತ್ರವನ್ನು ಸ್ಪ್ಯಾನಿಶ್ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಿದ್ಧಪಡಿಸಿದರು. ಹಾಗಾಗಿ ಅಧುನಿಕ ವೈದ್ಯಕೀಯ ಇತಿಹಾಸದಲ್ಲಿ ಮಾನವನ ಮಹಾನ್ ಜೈವನೈತಿಕ ಪ್ರಥಮ ಪ್ರಯೋಗ (ದಿ ಗ್ರೇಟ್ ಹ್ಯೂಮನ್ ಎಕ್ಸ್‌ಪೆರಿಮೆಂಟ್ ಇನ್ ಬಯೋ ಎಥಿಕ್ಸ್) ಎಂದು ಹೆಸರಾಗಿದೆ. ಹಳದಿಜ್ವರ ಕ್ರಮಬದ್ಧ ಅಧ್ಯಯನವು ಆರಂಭವಾಯಿತು.

- ಪ್ರಥಮ ಪ್ರಯೋಗ: ಮೊತ್ತ ಮೊದಲು ಹಳದಿಜ್ವರ ಪೀಡಿತರ ಉಡುಪು, ಹಾಸಿಗೆ, ಹೊದಿಕೆಗಳಿಂದ ಹಳದಿ ಜ್ವರವು ಬರುವುದಿಲ್ಲ ಎನ್ನುವುದನ್ನು ನಿರೂಪಿಸಬೇಕಾಗಿತ್ತು. ಡಾ| ರಾಬರ್ಟ್ ಕುಕ್ ಮತ್ತು ಹಲವು ಅಮೆರಿಕನ್ ಸೈನಿಕರು ಸ್ವಯಂಸೇವಕರಾಗಿ ಬಂದರು. ಅವರೆಲ್ಲರೂ ಹಳದಿಜ್ವರದಿಂದ ಸತ್ತವರ ಪೈಜಾಮಗಳಲ್ಲಿ ಧರಿಸಿದರು. ಅವರು ವಾಂತಿಮಾಡಿದ್ದ, ಭೇದಿ ಹೊಡೆದಿದ್ದ ಬೆಡ್ ಶೀಟು ಗಳ ಮೇಲೆ ಮಲಗಿದರು. ಅದೊಂದು ಮಾನಸಿಕ ಸ್ಥೈರ್ಯದ ಪರೀಕ್ಷೆಯಾಗಿತ್ತು. ಹೀಗೆ ಒಂದಲ್ಲ, 20 ದಿನಗಳವರೆಗೆ ಒಂದು ಕೋಣೆಯಲ್ಲಿ ಕಳೆದರು. ಒಬ್ಬ ವ್ಯಕ್ತಿಗೂ ಹಳದಿಜ್ವರವು ಬರಲಿಲ್ಲ. ಹಳದಿ ಜ್ವರವು ಉಟ್ಟಬಟ್ಟೆಗಳಿಂದ, ರೋಗಿ ಉಪಯೋಗಿಸಿದ ವಸ್ತುಗಳಿಂದ, ಅವರು ಬಳಸಿದ ಹಾಸಿಗೆ ಹೊದಿಕೆಗಳಿಂದ ಹರಡುವುದಿಲ್ಲ ಎನ್ನುವುದಕ್ಕೆ ಅಗತ್ಯ ಪುರಾವೆಯು ಈಗ ದೊರೆತಿತ್ತು.

- ಆತ್ಮಾಹುತಿ: ಅಧ್ಯಯನದ ಎರಡನೇಯ ಹಂತಕ್ಕೆ ಸಿದ್ಧವಾದರು. ಫಿನ್ಲೆ ಹೇಳಿದ ಸೊಳ್ಳೆಗಳ ಮೂಲಕ ಹರಡುವ ಸಿದ್ಧಾಂತಕ್ಕೆ ಅಗತ್ಯವಾದ ಪುರಾವೆಯನ್ನು ಒದಗಿಸಬೇಕಾಗಿತ್ತು.

ಅಧ್ಯಯನದ ಮೊತ್ತಮೊದಲ ಘಟ್ಟ ಆರಂಭವಾಯಿತು. ಹಳದಿಜ್ವರ ಪೀಡಿತರನ್ನು ಒಂದು ಕೋಣೆಯಲ್ಲಿ ಮಲಗಿಸಿದರು. ಅವರ ಕೋಣೆಯ ಒಳಗೆ ಸೊಳ್ಳೆಗಳನ್ನು ಹಿಂಡು ಹಿಂಡಾಗಿ ಬಿಟ್ಟರು. ಸೊಳ್ಳೆಗಳು ಹಳದಿಜ್ವರ ಪೀಡಿತರ ರಕ್ತವನ್ನು ಹೀರಿದವು. ನಂತರ ಆ ಎಲ್ಲ ಸೊಳ್ಳೆಗಳನ್ನು ಹಿಡಿದು ಪಂಜರದಲ್ಲಿ ನಿಗದಿತ ದಿನಗಳವರೆಗೆ ಇಟ್ಟರು.

ಈಗ ಅಧ್ಯಯನದ ಎರಡನೇಯ ಘಟ್ಟ ಆರಂಭವಾಯಿತು. ರೀಡ್ ತಂಡದಲ್ಲಿದ್ದ ಜೇಮ್ ಕೆರೋಲ್ ಮತ್ತು ಜೆಸ್ಸಿ ಲಾಜ಼ರ್ ತಾವೇ ಮೊದಲ ಸ್ವಯಂಸೇವಕರಾಗಿ ಮುಂದೆ ಬಂದರು. ಅವರನ್ನು ಒಂದು ಕೋಣೆಯಲ್ಲಿ ಇರಿಸಿ, ಆ ಕೋಣೆಯ ಒಳಗೆ ಪಂಜರದಲ್ಲಿದ್ದ ರೋಗಗ್ರಸ್ತ ಸೊಳ್ಳೆಗಳನ್ನು ಬಿಟ್ಟರು. ಸೊಳ್ಳೆಗಳು ಇಬ್ಬರೂ ಸಂಶೋಧಕರನ್ನು ಕಚ್ಚಿದವು. ಇಬ್ಬರಿಗೂ ಹಳದಿ ಜ್ವರವು ಬಂದಿತು. ಜೆಸ್ಸಿ ಲಾಜ಼ರ್ ಹಳದಿಜ್ವರದ ತೀವ್ರತೆಯನ್ನು ತಾಳಿಕೊಳ್ಳಲಾಗದೆ ಜೀವವನ್ನು ಬಿಟ್ಟ. ಜೇಮ್ಸ್ ಕೆರೋಲ್, ಹಳದಿಜ್ವರದಿಂದ ಸುಧಾರಿಸಿಕೊಂಡರೂ ಆತ ಪರಿಪೂರ್ಣ ಆರೋಗ್ಯವಂತನಾಗಲಿಲ್ಲ. 1907ರಲ್ಲಿ ಹೃದಯಸ್ನಾಯು ಉರಿಯೂತಕ್ಕೆ (ಮಯೋಕಾರ್ಡೈಟಿಸ್) ತುತ್ತಾಗಿ ಮರಣಿಸಿದ. ತನ್ನ ಹೃದಯ ಸ್ನಾಯು ದುರ್ಬಲಗೊಳ್ಳಲು ಹಳದಿಜ್ವರವೇ ಕಾರಣವಾಗಿರಬಹುದು ಎಂದು ಆತ ನಂಬಿದ್ದ.

ಅಮೆರಿಕದ ಒಹಾಯೋ ಪ್ರಾಂತದ ಸೈನಿಕ ಜಾನ್ ಆರ್. ಕಿಸ್ಸಿಂಜರ್ ಹಾಗೂ ಜಾನ್ ಜೆ. ಮೊರಾನ್ ಸ್ವಯಂಸೇವಕರಾಗಿ ಮುಂದೆ ಬಂದರು. ಪ್ರಯೋಗದಲ್ಲಿ ಭಾಗಿಯಾಗುತ್ತಿದ್ದ ಇಬ್ಬರಿಗೂ ಪ್ರತಿ-ಲವಾಗಿ ರೀಡ್ ಚಿನ್ನದ ಬಿಸ್ಕತ್ತುಗಳನ್ನು ನೀಡಿದ. ಆದರೆ ಅವರು ಚಿನ್ನವನ್ನು ನಿರಾಕರಿಸಿದರು. ವಿಜ್ಞಾನಕ್ಕಾಗಿ ಹಾಗೂ ಮನುಕುಲದ ಹಿತಕ್ಕಾಗಿ ತಾವು ಪ್ರಯೋಗದಲ್ಲಿ ಭಾಗಿಯಾಗುತ್ತಿರುವ ಕಾರಣ, ತಮಗೆ ಯಾವುದೇ ಪ್ರತಿಫಲವು ಬೇಡವೆಂದರು.

ಒಂದು ಕೋಣೆ. ಅದನ್ನು ತಂತಿಬಲೆಯ ಮೂಲಕ ಎರಡು ಭಾಗಗಳನ್ನಾಗಿ ವಿಂಗಡಿಸಿದರು. ಮೊದಲ ಭಾಗದಲ್ಲಿ ಮೊರಾನ್ ಮಲಗಿದ. ಆ ಭಾಗದಲ್ಲಿ ಹಳದಿಜ್ವರಕ್ಕೆ ಕಾರಣವಾದ ಜೀವಿಯನ್ನು ಉದರದಲ್ಲಿ ಪೋಷಿಸುತ್ತಿದ್ದ ಒಂದು ಡಜ಼ನ್ ಸೊಳ್ಳೆಗಳನ್ನು ಬಿಟ್ಟರು. ಇನ್ನೊಂದು ಭಾಗದಲ್ಲಿ ಇಬ್ಬರು ಆರೋಗ್ಯವಂತ ಯುವಕರು. ಆದರೆ, ಅವರಿದ್ದ ಭಾಗದಲ್ಲಿ ಸೊಳ್ಳೆಗಳನ್ನು ಬಿಡಲಿಲ್ಲ.

ಸೊಳ್ಳೆಯಿಂದ ಕಚ್ಚಿಸಿಕೊಂಡ ಮೊರಾನ್ ಹಳದಿಜ್ವರ ಪೀಡಿತನಾದ. ಇಬ್ಬರು ಆರೋಗ್ಯವಂತರು ಸ್ವಸ್ಥವಾಗಿದ್ದರು. ಇಂತಹುದೇ ಮತ್ತೊಂದು ಪ್ರಯೋಗದಲ್ಲಿ ಜಾನ್ ಆರ್. ಕಿಸ್ಸಿಂಜರ್ ಸಹ ಹಳದಿ ಜ್ವರ ಪೀಡಿತನಾದ. ಮೊರಾನ್ ಮತ್ತು ಕಿಸ್ಸಿಂಜರ್ ಬದುಕುಳಿದರೂ ಸಹ, ಜೀವನಪರ್ಯಂತ ಒಂದಲ್ಲ ಒಂದು ರೀತಿಯ ನರಬೇನೆಯಿಂದ ನರಳಿದರು.

1901ರಲ್ಲಿ ಕ್ಲಾರಾ ಮಾಸ್ ಎನ್ನುವ ನರ್ಸ್ ಹಳದಿ ಜ್ವರ ಅಧ್ಯಯನದಲ್ಲಿ ಸ್ವಯಂಸೇವಕಿಯಾಗಿ ಬಂದಳು. ಅವಳಿಗೆ ಹಳದಿಜ್ವರವು ಅಂಟಿಕೊಂಡಿತು. ಆದರೆ, ಆಕೆ ಅದರಿಂದ ಚೇತರಿಸಿಕೊಳ್ಳಲಾಗದೆ ಅಸುವನ್ನು ನೀಗಿದಳು. ಕ್ಲಾರಾ ಮಾಸ್ ಸತ್ತಕೂಡಲೇ ಅಮೆರಿಕದಲ್ಲಿ ಹುಯಿಲೆದ್ದಿತು. ಜನರನ್ನು ಪ್ರಜ್ಞಾಪೂರ್ವಕವಾಗಿ ಕೊಲ್ಲುವ ಈ ಪ್ರಯೋಗವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

ಪನಾಮ ಕಾಲುವೆ: ಹಳದಿಜ್ವರಕ್ಕೆ ಕಾರಣ ಒಂದು ವೈರಸ್. ಈ ವೈರಸ್ಸನ್ನು ರೋಗಿಗಳಿಂದ ಆರೋಗ್ಯವಂತರಿಗೆ ಹರಡುವುದು ಏಡಿಸ್ ಈಜಿಪ್ಟೈ ಎಂಬ ಸೊಳ್ಳೆ. ಇದನ್ನು ಮೊದಲ ಬಾರಿಗೆ ತಿಳಿಸಿದವನು ಕ್ಯೂಬಾ ವೈದ್ಯ ಫಿನ್ಲೆ. ಸೊಳ್ಳೆಯಿಂದಲೇ ಹಳದಿಜ್ವರ ಹರಡುತ್ತದೆ ಎನ್ನುವುದಕ್ಕೆ ಪುರಾವೆಯನ್ನು ನೀಡಿದವರು ಕ್ಯಾಂಪ್ ಲಾಜ಼ರ್‌ನಲ್ಲಿದ್ದ ರೀಡ್ ಮತ್ತು ಅವನ ಸಂಗಡಿಗರು. ಈ ಮಾಹಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡವನು ಅಮೆರಿಕದ ವೈದ್ಯ ವಿಲಿಯಂ ಕ್ರಾಫರ್ಡ್ ಗೋರ್ಗಾಸ್. ಪನಾಮ ಕಾಲುವೆಯನ್ನು ನಿರ್ಮಿಸುವ ಹೊಣೆಯನ್ನು ಫ್ರೆಂಚ್ ಎಂಜಿನಿಯರುಗಳು ಹೊತ್ತಿದ್ದರು. ಆದರೆ, ಹಳದಿಜ್ವರದ ಉಪಟಳವನ್ನು ತಡೆಯಲಾಗದೆ ಅವರು ಯೋಜನೆ ಯಿಂದ ಹಿಂದಕ್ಕೆ ಸರಿದರು. ಆಗ ಅಮೆರಿಕನ್ ಎಂಜಿನಿಯರುಗಳಿಗೆ ಗೋರ್ಗಾಸ್ ಸಹಾಯ ಮಾಡಿದ. ಸೊಳ್ಳೆಗಳ ವರ್ಧನಾ ತಾಣಗಳನ್ನು ನಿರ್ಮೂಲನ ಮಾಡಿದರೆ, ಸಹಜವಾಗಿ ಹಳದಿಜ್ವರವು ಮಾಯ ವಾಗುತ್ತದೆ ಎಂದು ಲೆಕ್ಕ ಹಾಕಿದ.

ಪನಾಮ ಕಾಲುವೆಯಲ್ಲಿ ನೀರು ನಿಲ್ಲದಂತೆ ಮಾಡಿದ. ಸೊಳ್ಳೆಗಳ ವರ್ಧನಾತಾಣಗಳನ್ನು ಪತ್ತೆ ಹಚ್ಚಿ ಅಲ್ಲಿದ್ದ ಸೊಳ್ಳೆಗಳ ಲಾರ್ವಗಳನ್ನು ನಿವಾರಿಸಿದ. ಇಡೀ ಪ್ರದೇಶದಲ್ಲಿ ನಿಯಮಿತವಾಗಿ ಧೂಮಸಿಂಚನವನ್ನು (ಫ್ಯೂಮಿಗೇಶನ್) ಮಾಡಿ ಸೊಳ್ಳೆಗಳನ್ನು ನಿವಾರಿಸಿದ.

ಸೊಳ್ಳೆಗಳು ಜಾಗೃತವಾಗಿರುವ ವೇಳೆಯಲ್ಲಿ ಹೊರಗೆ ಓಡಾಡಬಾರದು ಎಂದ. ಮನೆಯ ಒಳಗೆ ಸೊಳ್ಳೆಯ ಪರದೆಯೊಳಗೇ ಮಲಗಬೇಕೆಂದ... ಈ ಎಲ್ಲ ಕ್ರಮಗಳಿಂದ ಹಳದಿಜ್ವರವು ಪನಾಮ ಪ್ರದೇಶದಿಂದ ಮಾಯವಾಯಿತು. ಅಮೆರಿಕನ್ ಎಂಜಿನಿಯರುಗಳು ಪನಾಮ ಕಾಲುವೆಯನ್ನು ಕಟ್ಟಿ ಮುಗಿಸಿದರು.

ವೈರುಧ್ಯ: ಸಂಶೋಧನೆಗಳಲ್ಲಿ ಒಬ್ಬರಿಗೋ ಇಬ್ಬರಿಗೋ ಯಶಸ್ಸು ದೊರೆಯುತ್ತದೆ. ಹಳದಿಜ್ವರವು ಸೊಳ್ಳೆಗಳಿಂದ ಹರಡುತ್ತದೆ ಎನ್ನುವುದನ್ನು ಕಂಡುಹಿಡಿದ ಕೀರ್ತಿ ಮೇಜರ್ ವಾಲ್ಟರ್ ರೀಡ್-ಗೆ ಸಂದಿದೆ. ಅದು ಫಿನ್ಲೆಗೆ ಸಲ್ಲಬೇಕಾಗಿತ್ತು. ಕ್ಯಾರೆಲ್, ಲಾಜ಼ರ್, ಕ್ಲಾರಾ ಮಾಸ್, ಕಿಸ್ಸಿಂಜರ್, ಮೊರಾನ್ ಮುಂತಾದ ಅಸಂಖ್ಯ ಜನರಿಗೆ ಯಶಸ್ಸಿನಲ್ಲಿ ಯಾವುದೇ ಪಾಲು ದೊರೆಯಲಿಲ್ಲ. ಜೀವವನ್ನು ಬಲಿದಾನ ಮಾಡಿದ, ಜೀವನಪರ್ಯಂತ ನೋವಿನಿಂದ ನರಳುವ ಸ್ವಯಂಸೇವಕರಿಗೆ ಯಾವುದೇ ಕೀರ್ತಿಯು ದೊರೆಯುವುದಿಲ್ಲ. ಇದು ವೈದ್ಯಕೀಯ ಸಂಶೋಧನಾ ಜಗತ್ತಿನ ವೈರುಧ್ಯವಾಗಿದೆ.