ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwanath Hegde Column: ಜಾಗತಿಕ ತಾಪಮಾನ: 1.5 ಡಿಗ್ರಿ ದಾಟಿದ ಮೇಲೆ… ಮುಂದೇನು ಮಾಡೋಣ ?

ಹವಾಮಾನಕ್ಕೆ ತನ್ನದೇ ಸಹಜ ಏರಿಳಿತಗಳಿವೆ. ಅಷ್ಟಕ್ಕೂ ಇದು ಬೆಂಗಳೂರಿನ ಕಥೆ ಮಾತ್ರವೂ ಅಲ್ಲ. ದೇಶದ ಹಲವು ಭಾಗಗಳಲ್ಲಿ ಮಳೆಯ ಸಮಯ ಮತ್ತು ಪ್ರಮಾಣದಲ್ಲಿ ಏರುಪೇರು ಕಾಣಿಸುತ್ತಿದೆ. ಎಲ್ಲಾ ಮಳೆಗಾಗಿ ಕಾಯುವ ಪರಿಸ್ಥಿತಿ ಇದ್ದರೆ, ಇನ್ನೆ ಕೆಲವೇ ಗಂಟೆಗಳಲ್ಲಿ ಸುರಿಯುವ ಅತಿವೃಷ್ಟಿ ಬದುಕನ್ನೇ ಅಸ್ತವ್ಯಸ್ತಗೊಳಿಸುತ್ತಿದೆ.

ಜಾಗತಿಕ ತಾಪಮಾನ: 1.5 ಡಿಗ್ರಿ ದಾಟಿದ ಮೇಲೆ… ಮುಂದೇನು ಮಾಡೋಣ ?

-

Profile
Ashok Nayak Oct 3, 2026 6:38 PM

ಪರ್ಯಾವರಣ

ವಿಶ್ವನಾಥ್‌ ಹೆಗಡೆ

ಹವಾಮಾನ, ಮಳೆ, ಋತುಗಳ ಏರುಪೇರು, ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಬದಲಾಗುತ್ತಿರುವ ಹವಾಮಾನ ಮಾದರಿ- ಇವೆಲ್ಲವನ್ನು ಗಮನಿಸುವುದು ನನಗೆ ಮೊದಲಿನಿಂದಲೂ ಆಸಕ್ತಿಯ ವಿಷಯ. ಈ ಸೆಪ್ಟೆಂಬರ್ ಮೊದಲ ವಾರದ ಒಂದು ರಾತ್ರಿ ಸುಮಾರು 9 ಗಂಟೆಗೆ ಏನೋ ಕೆಲಸ ಮಾಡುತ್ತಾ ಕುಳಿತಿz. ಸೆಖೆ ಹೆಚ್ಚಾದಂತೆ ಅನಿಸಿತು. ರಾತ್ರಿ ಮುಂದುವರಿದಂತೆ ಅದು ಇನ್ನಷ್ಟು ಹೆಚ್ಚಾದ ಅನುಭವ. ಇವತ್ತು ನನಗೇ ಹೀಗೆ ಅನಿಸುತ್ತಿದೆಯೇ? ಎಂದು ಮೊದಲಿಗೆ ಸುಮ್ಮನಾದೆ.

ಸೆಪ್ಟೆಂಬರ್ ತಿಂಗಳಲ್ಲಿ, ಅದೂ ಬೆಂಗಳೂರಿನಲ್ಲಿ, ರಾತ್ರಿ ಹೊತ್ತಿನಲ್ಲಿ ಇಂತಹ ಸೆಖೆ ಸ್ವಲ್ಪ ಅಸಹಜ ವೆನಿಸಿತ್ತು. ಆದರೆ ಮರುದಿನವೂ ಅದೇ ಅನುಭವ. ನಂತರ ತಿಳಿದದ್ದು- ಅದು ನನ್ನೊಬ್ಬನ ಅನುಭವ ವಾಗಿರಲಿಲ್ಲ; ಬೆಂಗಳೂರು ನಿಜವಾಗಿಯೂ ಅಸಾಮಾನ್ಯವಾದ ಸೆಖೆಯನ್ನು ಅನುಭವಿ ಸುತ್ತಿತ್ತು. ಒಂದೆರಡು ದಿನಗಳ ಪತ್ರಿಕೆಗಳಲ್ಲೂ ಬೆಂಗಳೂರಿನ ಸೆಪ್ಟೆಂಬರ್ ತಾಪಮಾನ ಹಲವು ದಶಕಗಳ ದಾಖಲೆಯ ಸಮೀಪಕ್ಕೆ ಬಂದಿರುವ ಸುದ್ದಿ ಕಾಣಿಸಿತು.

ಒಂದು ಶೀರ್ಷಿಕೆ ಹೀಗಿತ್ತು-"Hottest' September in 75 years: What disrupted Bengaluru's weather calendar. ಬೆಂಗಳೂರು ಎಂದರೆ ಹಿತವಾದ ವಾತಾವರಣದ ನೆನಪು. ಮಳೆ ಬಂದು ಹೋದ ರಸ್ತೆಗಳು, ಬೆಳಗಿನ ತುಸು ಚಳಿ, ಮಧ್ಯಾಹ್ನವೂ ಅಷ್ಟಾಗಿ ಕಾಡದ ಬಿಸಿಲು- ಇಲ್ಲಿನ ಹವಾಮಾನದ ಬಗ್ಗೆ ಹೊರಗಿನ ವರಿಗೂ ಒಂದು ಕಾಲದಲ್ಲಿ ಅಸೂಯೆ ಇತ್ತು. ಆದರೆ ಈ ಬಾರಿ ಸೆಪ್ಟೆಂಬರ್‌ನ ರಾತ್ರಿ ಫೋನ್, ಎಸಿ ಬೇಕೆನಿಸುವಷ್ಟು ಸೆಖೆ.

ಸೆಪ್ಟೆಂಬರ್ 6ರಂದು ಬೆಂಗಳೂರಿನ ತಾಪಮಾನ 32.2 ಡಿಗ್ರಿ ಸೆಲ್ಸಿಯಸ್ ತಲುಪಿತು. 1951ರ ಸೆಪ್ಟೆಂಬರ್‌ನಲ್ಲಿ ದಾಖಲಾಗಿದ್ದ 33.3 ಡಿಗ್ರಿಯ ದಾಖಲೆಯ ಸಮೀಪಕ್ಕೆ, ಸುಮಾರು 75 ವರ್ಷಗಳ ನಂತರ ಬೆಂಗಳೂರು ಮತ್ತೆ ಬಂದು ನಿಂತಿತ್ತು. ಒಂದು ದಿನದ ಬಿಸಿಲನ್ನೇ ಹವಾಮಾನ ಬದಲಾವಣೆ ಎಂದು ಕರೆಯುವುದು ವೈಜ್ಞಾನಿಕವಾಗಿ ಸರಿಯಲ್ಲ.

ಇದನ್ನೂ ಓದಿ: Vishwanath Hegde Column: ನಮ್ಮ ಊಟದ ತಟ್ಟೆಗೆ ಕಾವಲು ಯಾರು ?

ಹವಾಮಾನಕ್ಕೆ ತನ್ನದೇ ಸಹಜ ಏರಿಳಿತಗಳಿವೆ. ಅಷ್ಟಕ್ಕೂ ಇದು ಬೆಂಗಳೂರಿನ ಕಥೆ ಮಾತ್ರವೂ ಅಲ್ಲ. ದೇಶದ ಹಲವು ಭಾಗಗಳಲ್ಲಿ ಮಳೆಯ ಸಮಯ ಮತ್ತು ಪ್ರಮಾಣದಲ್ಲಿ ಏರುಪೇರು ಕಾಣಿಸುತ್ತಿದೆ. ಎಲ್ಲಾ ಮಳೆಗಾಗಿ ಕಾಯುವ ಪರಿಸ್ಥಿತಿ ಇದ್ದರೆ, ಇನ್ನೆ ಕೆಲವೇ ಗಂಟೆಗಳಲ್ಲಿ ಸುರಿಯುವ ಅತಿವೃಷ್ಟಿ ಬದುಕನ್ನೇ ಅಸ್ತವ್ಯಸ್ತಗೊಳಿಸುತ್ತಿದೆ. ಕೆಲವು ಪ್ರದೇಶಗಳು ತೀವ್ರ ಬಿಸಿಲನ್ನು ಎದುರಿಸು ತ್ತಿದ್ದರೆ, ಇನ್ನೂ ಕೆಲವು ಕಡೆ ಪ್ರವಾಹ ಮತ್ತು ಭೂಕುಸಿತಗಳು ಮರುಕಳಿಸುತ್ತಿವೆ. ಹಾಗಾಗಿ ಸ್ಥಳ ಬೇರೆ, ಘಟನೆ ಬೇರೆ, ಪರಿಣಾಮ ಬೇರೆ- ಆದರೆ ಹವಾಮಾನದ ಹಳೆಯ ಲಯದಲ್ಲಿ ಏನೋ ಬದಲಾಗುತ್ತಿದೆ ಎಂಬ ಅನುಭವ ಮಾತ್ರ ಅನೇಕ ಕಡೆ ಒಂದೇ.

ಆದರೆ ಆಶ್ಚರ್ಯವೆಂದರೆ, ಈ ಎಲ್ಲದರ ಮಧ್ಯೆ ಜಗತ್ತಿನ ಹವಾಮಾನ ವಿಜ್ಞಾನಿಗಳು ಈಗ ಆತಂಕದಿಂದ ಚರ್ಚಿಸುತ್ತಿರುವ ಸಂಖ್ಯೆ ಬೆಂಗಳೂರಿನ 32.2 ಡಿಗ್ರಿಯೂ ಅಲ್ಲ. 40 ಡಿಗ್ರಿಯೂ ಅಲ್ಲ. 50 ಡಿಗ್ರಿಯೂ ಅಲ್ಲ. ಕೇವಲ 1.5 ಡಿಗ್ರಿ! ಏನಿದು ಒಂದೂವರೆ ಡಿಗ್ರಿ? ಮತ್ತೆ ಅಷ್ಟು ಹೆಚ್ಚಾದರೆ ಅಷ್ಟೊಂದು ದೊಡ್ಡ ವಿಷಯವೇ? ಬೆಂಗಳೂರಿನಲ್ಲಿ ಬೆಳಿಗ್ಗೆ 25 ಡಿಗ್ರಿ ಇದ್ದದ್ದು ಮಧ್ಯಾಹ್ನ 26.5 ಡಿಗ್ರಿಯಾದರೆ ನಾವು ಗಮನಿಸುವುದೂ ಇಲ್ಲ.

ಮನೆಯ ಎ.ಸಿಯಲ್ಲಿ 22 ರಿಂದ 23.5ಕ್ಕೆ ಉಷ್ಣತೆ ಬದಲಾದರೂ ದೊಡ್ಡ ವ್ಯತ್ಯಾಸವೆನಿಸುವುದಿಲ್ಲ. ಹಾಗಿರುವಾಗ ಜಗತ್ತಿನ ನಾಯಕರು, ವಿಜ್ಞಾನಿಗಳು, ವಿಶ್ವಸಂಸ್ಥೆ- ಎಲ್ಲರೂ ವರ್ಷಗಳಿಂದ ಈ 1.5 ಡಿಗ್ರಿಯ ಹಿಂದೆ ಯಾಕೆ ಬಿದ್ದಿದ್ದಾರೆ? ಅದಕ್ಕಿಂತಲೂ ಕುತೂಹಲಕಾರಿ ಮತ್ತು ಆತಂಕಕಾರಿ ಪ್ರಶ್ನೆ ಇನ್ನೊಂದಿದೆ.

ಇಷ್ಟು ವರ್ಷ 1.5 ಡಿಗ್ರಿ ದಾಟಬಾರದು ಎಂದು ಹೇಳುತ್ತಿದ್ದ ಜಗತ್ತು, ಈಗ ಅದನ್ನು ದಾಟಿದ ಮೇಲೆ ಏನು ಮಾಡಬೇಕು? ಎಂದು ಯಾಕೆ ಮಾತನಾಡಲು ಆರಂಭಿಸಿದೆ? ಬಹುಶಃ ಈ ಪ್ರಶ್ನೆಯ ಉತ್ತರದಲ್ಲಿಯೇ ನಮ್ಮ ಮುಂದಿನ ಹಲವು ದಶಕಗಳ ಹವಾಮಾನದ ಕಥೆ ಅಡಗಿದೆ. ಈ 1.5 ಡಿಗ್ರಿ, ಬೆಂಗಳೂರಿನ ಇಂದಿನ ತಾಪಮಾನವನ್ನು ನಿನ್ನೆಯ ತಾಪಮಾನಕ್ಕೆ ಹೋಲಿಸಿದ ಲೆಕ್ಕವಲ್ಲ. ಭಾರತದ ಈ ವರ್ಷದ ಬಿಸಿಯನ್ನು ಕಳೆದ ವರ್ಷದ ಬಿಸಿಗೆ ಹೋಲಿಸಿದ ಸಂಖ್ಯೆಯೂ ಅಲ್ಲ.

ಕೈಗಾರಿಕಾ ಕ್ರಾಂತಿಯ ಮೊದಲಿನ ಕಾಲವನ್ನು ಪ್ರತಿನಿಧಿಸುವ 1850ರಿಂದ 1900ರ ಅವಧಿಯ ಜಾಗತಿಕ ಸರಾಸರಿ ಉಷ್ಣತೆಯನ್ನು ಆಧಾರವಾಗಿ ತೆಗೆದುಕೊಂಡು, ಅದಕ್ಕೆ ಹೋಲಿಸಿದಾಗ ಇಡೀ ಭೂಮಿಯ ದೀರ್ಘಾವಽಯ ಸರಾಸರಿ ಉಷ್ಣತೆ ಎಷ್ಟು ಏರಿದೆ ಎಂಬುದೇ ಈ ಲೆಕ್ಕ.

ಸಾಗರಗಳು, ಭೂಭಾಗ, ಧ್ರುವಗಳು, ಕಾಡುಗಳು, ನಗರಗಳು- ಎಲ್ಲವನ್ನೂ ಒಳಗೊಂಡ ಭೂಮಿಯ ಸರಾಸರಿ ಉಷ್ಣತೆಯ ಏರಿಕೆ ಇದು. ಅದಕ್ಕಾಗಿಯೇ ಸಂಖ್ಯೆಯಲ್ಲಿ ಚಿಕ್ಕದಾಗಿ ಕಾಣುವ 1.5 ಪರಿಣಾಮದಲ್ಲಿ ಚಿಕ್ಕದಲ್ಲ. ಈ 1.5 ಡಿಗ್ರಿ ಎಂಬ ಗೆರೆಯನ್ನು ಯಾರೋ ಒಬ್ಬ ವಿಜ್ಞಾನಿ ತನ್ನಷ್ಟಕ್ಕೆ ತಾನೇ ಎಳೆದದ್ದಲ್ಲ. ಹಲವು ದಶಕಗಳ ಹವಾಮಾನ ವಿಜ್ಞಾನ, ಐಪಿಸಿಸಿಯ ಅಧ್ಯಯನಗಳು ಮತ್ತು ದೇಶಗಳ ನಡುವಿನ ಮಾತುಕತೆಗಳ ಹಿನ್ನೆಲೆಯಲ್ಲಿ 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸಿಒಪಿ21 ಹವಾಮಾನ ಸಮ್ಮೇಳನದಲ್ಲಿ ಪ್ಯಾರಿಸ್ ಒಪ್ಪಂದ ಅಂಗೀಕಾರವಾಯಿತು.

ಕೈಗಾರಿಕಾ ಪೂರ್ವದ ಮಟ್ಟಕ್ಕೆ ಹೋಲಿಸಿದ ಜಾಗತಿಕ ತಾಪಮಾನ ಏರಿಕೆಯನ್ನು ಸಾಧ್ಯವಾದಷ್ಟು 1.5॰ ಸಿ ಒಳಗೆ ನಿಯಂತ್ರಿಸುವುದು ಇದರ ಪ್ರಮುಖ ಗುರಿ. ಆದರೆ ಪ್ರಶ್ನೆ ಬರಬಹುದು- 2 ಡಿಗ್ರಿ ಬದಲು 1.5 ಡಿಗ್ರಿಯೇ ಏಕೆ? ಆ ಅರ್ಧ ಡಿಗ್ರಿಯಿಂದ ಏನು ಮಹಾ ವ್ಯತ್ಯಾಸ? ಅದಕ್ಕೆ ಸಮುದ್ರದೊಳಗೆ ಒಂದು ಕುತೂಹಲಕಾರಿ ಉತ್ತರ ಸಿಗುತ್ತದೆ.

ಹವಳ ದಿಬ್ಬಗಳು ಎಂದರೆ ಸಮುದ್ರದೊಳಗಿನ ಬಣ್ಣಬಣ್ಣದ ಕಲ್ಲಿನ ರಾಶಿಗಳಷ್ಟೇ ಅಲ್ಲ; ಅವು ಜೀವಂತ ಪರಿಸರ ವ್ಯವಸ್ಥೆಗಳು. ಪುಟ್ಟ ಪುಟ್ಟ ಹವಳ ಜೀವಿಗಳು ಸಾವಿರಾರು ವರ್ಷಗಳ ಕಾಲ ನಿರ್ಮಿಸುವ ಈ ದಿಬ್ಬಗಳು ಮೀನು, ಕಪ್ಪೆಚಿಪ್ಪು ಸೇರಿದಂತೆ ಅಸಂಖ್ಯಾತ ಸಮುದ್ರ ಜೀವಿಗಳಿಗೆ ಆಹಾರ ಮತ್ತು ಆಶ್ರಯ ಒದಗಿಸುತ್ತವೆ. ಆದರೆ ಸಮುದ್ರದ ನೀರಿನ ಉಷ್ಣತೆ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿ, ಅದೇ ಸ್ಥಿತಿ ದೀರ್ಘಕಾಲ ಮುಂದುವರಿದರೂ ಹವಳಗಳು ಒತ್ತಡಕ್ಕೆ ಒಳಗಾಗಿ ತಮ್ಮ ಬಣ್ಣ ಕಳೆದುಕೊಂಡು ಬಿಳಿಯಾಗಲು ಆರಂಭಿಸುತ್ತವೆ. ಇದನ್ನೇ ಹವಳ ಬಿಳಿಚುವಿಕೆ ಎನ್ನುತ್ತಾರೆ. ಭೂಮಿಯ ತಾಪಮಾನವು ೨॰ ಸಿ ಏರಿಕೆಯಾದರೆ, ಉಷ್ಣವಲಯದ ಹವಳದ ದಿಬ್ಬಗಳು ಬಹುತೇಕ ಸಂಪೂರ್ಣ ಪರಿಸರ ಕುಸಿತವನ್ನು ಎದುರಿಸುತ್ತವೆ ಮತ್ತು ವಾಸ್ತವವಾಗಿ ಭೂಮಿಯ ಮೇಲಿಂದಲೇ ಅಳಿಸಿಯೂ ಹೋಗಬಹುದು.

1.5 ಮತ್ತು ೨॰ ಸಿ ತಾಪಮಾನ ಏರಿಕೆಯ ನಡುವಿನ ವ್ಯತ್ಯಾಸದ ಅರ್ಥ ಹೆಚ್ಚಿನ ಹಾನಿ ಮಾತ್ರವಲ್ಲ. ಒಂದು, ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ, ತೀವ್ರವಾಗಿ ಹಾನಿಗೊಳಗಾದ ಪರಿಸರ ವ್ಯವಸ್ಥೆ, ಇನ್ನೊಂದು, ಹಿಂತಿರುಗಿಸಲಾಗದ, ಶಾಶ್ವತ ಅಳಿವಿನ ಘಟನೆ. 2024ರ ಏಪ್ರಿಲ್‌ನಲ್ಲಿ ಅಮೆರಿಕದ ಎನ್ ಒಎಎ ಜಗತ್ತು ನಾಲ್ಕನೇ ಜಾಗತಿಕ ಹವಳ ಬಿಳಿಚುವಿಕೆ ಘಟನೆ ಎದುರಿಸುತ್ತಿದೆ ಎಂದು ಅಧಿಕೃತವಾಗಿ ಘೋಷಿಸಿತು.

ಅಟ್ಲಾಂಟಿಕ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರ ಪ್ರದೇಶಗಳಲ್ಲೂ ವ್ಯಾಪಕ ಬಿಳಿಚುವಿಕೆ ದಾಖಲಾಗಿತ್ತು. ಪ್ರಮುಖ ಕಾರಣಗಳಲ್ಲಿ ಒಂದು- ಅಸಾಮಾನ್ಯವಾಗಿ ಹೆಚ್ಚಿದ್ದ ಸಮುದ್ರದ ಉಷ್ಣತೆ. ಇಲ್ಲಿ ಹವಳ ದಿಬ್ಬಗಳಿಗೆ ಬೆಂಕಿ ತಗುಲಿರಲಿಲ್ಲ. ಅದರ ಬದುಕಿಗೆ ಹೊಂದಿಕೊಂಡ ಮಿತಿಗಿಂತ ನೀರು ಸ್ವಲ್ಪ ಹೆಚ್ಚು ಬಿಸಿಯಾಗಿತ್ತು.

1.5 ಮತ್ತು 2॰ಸಿ ನಡುವಿನ ವ್ಯತ್ಯಾಸ ಕೇವಲ ಅರ್ಧ ಡಿಗ್ರಿ. ಆದರೆ ಅದರ ಪರಿಣಾಮ ಅಷ್ಟು ಚಿಕ್ಕದಲ್ಲ. ಜಾಗತಿಕ ತಾಪಮಾನ ಏರಿಕೆಯನ್ನು 1.5॰ ಸಿಗೆ ನಿಯಂತ್ರಿಸಿದರೆ, ಐದು ವರ್ಷಕ್ಕೊಮ್ಮೆ ಯಾದರೂ ತೀವ್ರ ಬಿಸಿಗಾಳಿಗೆ ತುತ್ತಾಗುವ ವಿಶ್ವದ ಜನಸಂಖ್ಯೆ ಸುಮಾರು 14% ಇರಬಹುದು; ತಾಪಮಾನ ಏರಿಕೆ 2 ಕೆಸಿ ತಲುಪಿದರೆ ಅದು ಸುಮಾರು 37%ಕ್ಕೆ ಏರಬಹುದು. ಅಂದರೆ ಕೇವಲ ಅರ್ಧ ಡಿಗ್ರಿಯ ಹೆಚ್ಚಳದಿಂದ ತೀವ್ರ ಬಿಸಿಗಾಳಿಗೆ ತುತ್ತಾಗುವ ಜನರ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಾಗಬಹುದು.

ಸಮುದ್ರಮಟ್ಟದಲ್ಲಿಯೂ ಇದೇ ಅರ್ಧ ಡಿಗ್ರಿ ದೊಡ್ಡ ವ್ಯತ್ಯಾಸ ಮಾಡುತ್ತದೆ. 1.5 ಕೆಸಿಗೆ ಹೋಲಿಸಿದರೆ ೨॰ಸಿ ಉಷ್ಣತೆಯ ಜಗತ್ತಿನಲ್ಲಿ 2100ರ ವೇಳೆಗೆ ಸಮುದ್ರಮಟ್ಟ ಸುಮಾರು 10 ಸೆಂ.ಮೀ. ಹೆಚ್ಚುವರಿಯಾಗಿ ಏರಬಹುದು; ಇದರಿಂದ ಲಕ್ಷಾಂತರ ಹೆಚ್ಚುವರಿ ಕರಾವಳಿ ನಿವಾಸಿಗಳು ಅಪಾಯಕ್ಕೆ ಸಿಲುಕಬಹುದು. ಆರ್ಕ್‌ಟಿಕ್ ಪ್ರದೇಶದ ಕಥೆ ಇನ್ನೂ ಸ್ಪಷ್ಟ – 1.5 ಉಷ್ಣತೆಯ ಜಗತ್ತಿನಲ್ಲಿ ಬೇಸಿಗೆಯಲ್ಲಿ ಆರ್ಕ್‌ಟಿಕ್ ಸಮುದ್ರದ ಹಿಮ ಬಹುತೇಕ ಸಂಪೂರ್ಣ ಮಾಯವಾಗುವ ಪರಿಸ್ಥಿತಿ ಸುಮಾರು ಶತಮಾನಕ್ಕೊಮ್ಮೆ ಸಂಭವಿಸಬಹುದು ಎಂದು ಅಂದಾಜಿಸಿದರೆ, 2ರಲ್ಲಿ ಅದು ಹತ್ತು ವರ್ಷಕ್ಕೊಮ್ಮೆ ಸಂಭವಿಸುವ ಸಾಧ್ಯತೆ ಇದೆ.

ಹೀಗಾಗಿ 1.5 ಮತ್ತು 2 ನಡುವಿನ ಅಂತರ ಕಾಗದದ ಮೇಲೆ ಕೇವಲ 0.5॰ಸಿ; ಆದರೆ ಪ್ರಕೃತಿ ಮತ್ತು ಮನುಷ್ಯನ ಬದುಕಿನ ಲೆಕ್ಕದಲ್ಲಿ ಅದರ ಅಂತರ ಬಹಳ ದೊಡ್ಡದು. ಹವಾಮಾನ ವಿಜ್ಞಾನದಲ್ಲಿ ಆ ಅರ್ಧ ಡಿಗ್ರಿಯೂ ಸಣ್ಣದಲ್ಲ. ಉಷ್ಣತೆ ಹೆಚ್ಚಿದಂತೆ ತೀವ್ರ ಬಿಸಿಗಾಳಿ, ಅತಿವೃಷ್ಟಿ, ಬರ, ನೀರಿನ ಸಮಸ್ಯೆ, ಸಮುದ್ರಮಟ್ಟ ಏರಿಕೆ, ಹಿಮನದಿಗಳ ಕರಗುವಿಕೆ, ಕೃಷಿ ಮತ್ತು ಆಹಾರ ಉತ್ಪಾದನೆಯ ಮೇಲಿನ ಒತ್ತಡ, ಜೀವವೈವಿಧ್ಯದ ನಷ್ಟ - ಇವುಗಳ ಅಪಾಯವೂ ಹೆಚ್ಚುತ್ತದೆ.

ಉಷ್ಣತೆ ಹೆಚ್ಚಿದಂತೆ ಅಪಾಯವೂ ಹೆಚ್ಚುತ್ತದೆ; 1.5॰ಸಿ ಆ ಅಪಾಯವನ್ನು ಸಾಧ್ಯವಾದಷ್ಟು ಕಡಿಮೆ ಮಟ್ಟದಲ್ಲಿ ಹಿಡಿದಿಡಲು ಜಗತ್ತು ಒಪ್ಪಿಕೊಂಡ ಪ್ರಮುಖ ಗಡಿ. ಇಲ್ಲಿಯವರೆಗೆ ಕಥೆ ನಮಗೆ ಸ್ವಲ್ಪ ಪರಿಚಿತವೇ. ಜಾಗತಿಕ ತಾಪಮಾನ ಏರಿಕೆಯನ್ನು ಕಡಿಮೆ ಮಾಡಬೇಕು, ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಬೇಕು ಎಂದು ಹಲವು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ಆದರೆ 2026ರ ಸೆಪ್ಟೆಂಬರ್ 2ರಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಬಿಡುಗಡೆ ಮಾಡಿದ ವರದಿ ಈ ಕಥೆಗೆ ಒಂದು ಅಸಹಜ ತಿರುವು ಕೊಟ್ಟಿದೆ.

ಈಗಿನ ನೀತಿಗಳು ಮತ್ತು ನಾವು ಸಾಗುತ್ತಿರುವ ದಾರಿಯನ್ನು ನೋಡಿದರೆ 1.5॰ಸಿ ಮಿತಿಯನ್ನು ಜಗತ್ತು ಮೀರುವುದು ಈಗ ಬಹುತೇಕ ತಪ್ಪಿಸಲಾಗದ ಸ್ಥಿತಿಗೆ ಬಂದಿದೆ ಎಂಬುದು ಅದರಲ್ಲಿನ ಒಂದು ಅಂಶವಾಗಿತ್ತು. ಹಾಗಾದರೆ ಇಷ್ಟು ವರ್ಷ ಜಗತ್ತು ದಾಟಬಾರದು ಎಂದುಕೊಂಡಿದ್ದ ಗೆರೆಯನ್ನೇ ದಾಟಲಿದ್ದೇವೆ ಎಂದಾದರೆ... ಮುಂದೇನು? ಇಲ್ಲಿಂದಲೇ ಯುಎನ್‌ಇಪಿ ಬಳಸಿರುವ ಮತ್ತೊಂದು ಪದ ನಮ್ಮ ಕಥೆಗೆ ಬರುತ್ತದೆ- Overshoot.

ಸರಳವಾಗಿ ಹೇಳುವುದಾದರೆ- ಮಿತಿ ಮೀರುವುದು. ಮಿತಿ ಮೀರಿತು ಎಂದಾಕ್ಷಣ ಎಲ್ಲವೂ ಮುಗಿದುಹೋಯಿತು ಎಂದರ್ಥವಲ್ಲ. ಜಾಗತಿಕ ಸರಾಸರಿ ತಾಪಮಾನ 1.5॰ಸಿ ಮೀರಬಹುದು; ಅಲ್ಲಿಂದ ಇನ್ನಷ್ಟು ಏರಿ ಒಂದು ಗರಿಷ್ಠ ಮಟ್ಟ ತಲುಪಬಹುದು; ನಂತರ ಹಸಿರುಮನೆ ಅನಿಲ ಹೊರಸೂಸುವಿಕೆ ಯನ್ನು ತೀವ್ರವಾಗಿ ಕಡಿಮೆ ಮಾಡಿ, ವಾತಾವರಣದಲ್ಲಿರುವ ಇಂಗಾಲವನ್ನು ತೆಗೆದುಹಾಕುವ ಕ್ರಮಗಳ ಮೂಲಕ ತಾಪಮಾನವನ್ನು ಮತ್ತೆ ಕೆಳಗೆ ತರುವ ಪ್ರಯತ್ನ ಮಾಡಬಹುದು.

ಅಂದರೆ ಈಗ ಪ್ರಶ್ನೆ 1.5॰ಸಿ ದಾಟುತ್ತೇವೆಯೇ? ಎನ್ನುವುದೊಂದೇ ಅಲ್ಲ. ಎಷ್ಟು ದೂರ ದಾಟುತ್ತೇವೆ? ಎಷ್ಟು ಕಾಲ ಆ ಮಿತಿಯ ಮೇಲೆ ಉಳಿಯುತ್ತೇವೆ? ಮತ್ತೆ ಎಷ್ಟು ಬೇಗ ಹಿಂದಿರುಗುತ್ತೇವೆ? ಹವಳದ ದಿಬ್ಬಗಳಂತೆ ಭೂಮಿಗೂ ಈಗ ಅದೇ ಪ್ರಶ್ನೆ. ಇದರ ಅರ್ಥ 1.5॰ಸಿ ದಾಟಿದರೆ ಪ್ರಯತ್ನವೆಲ್ಲ ವ್ಯರ್ಥ ಎಂದಲ್ಲ.

1.5ರಿಂದ 1.6ಕ್ಕೆ ಹೋಗದಂತೆ ತಡೆಯುವುದಕ್ಕೂ ಬೆಲೆ ಇದೆ; 1.6ರಿಂದ 1.8ಕ್ಕೆ ಹೋಗದಂತೆ ತಡೆಯುವು ದಕ್ಕೂ ಬೆಲೆ ಇದೆ; 2॰ಸಿ ದಾಟದಂತೆ ನೋಡಿಕೊಳ್ಳುವುದಕ್ಕೂ ಅಷ್ಟೇ ಮಹತ್ವವಿದೆ. ಹವಾಮಾನ ಬದಲಾವಣೆಯ ಲೆಕ್ಕದಲ್ಲಿ ಪ್ರತಿಯೊಂದು 0.1॰ಸಿಗೂ ಬೆಲೆ ಇದೆ. ಉಷ್ಣತೆಯ ಗರಿಷ್ಠ ಮಟ್ಟ ಎಷ್ಟು ಕಡಿಮೆಯಿರುತ್ತದೆಯೋ, ಮಿತಿ ಮೀರಿರುವ ಅವಧಿ ಎಷ್ಟು ಚಿಕ್ಕದಿರುತ್ತದೆಯೋ, ಮನುಷ್ಯ ಮತ್ತು ಪ್ರಕೃತಿಗೆ ಎದುರಾಗುವ ಅಪಾಯವೂ ಅಷ್ಟೇ ಕಡಿಮೆ. ಆದರೆ ನಮ್ಮ ಸಾಮಾನ್ಯ ಬದುಕಿನಲ್ಲಿ ಒಂದು ವಿಚಿತ್ರ ಮನೋಭಾವವಿದೆ.

ವಾಹನದ ಇಂಧನ ಎಚ್ಚರಿಕೆ ಬಂದರೆ ಇನ್ನೂ ಸ್ವಲ್ಪ ಹೋಗುತ್ತದೆ ಎನ್ನುತ್ತೇವೆ. ಅಣೆಕಟ್ಟಿನ ನೀರು ಅಪಾಯದ ಮಟ್ಟದ ಹತ್ತಿರ ಬಂದರೂ ಇನ್ನೂ ಸ್ವಲ್ಪ ಜಾಗ ಇದೆ ಎಂದುಕೊಳ್ಳುತ್ತೇವೆ. ಮಿತಿ ಹತ್ತಿರ ಬಂದಾಗ ಅದರಿಂದ ದೂರ ಸರಿಯುವುದಕ್ಕಿಂತ, ಇನ್ನೂ ಎಷ್ಟು ದೂರ ಹೋಗಬಹುದು ಎಂದು ಪರೀಕ್ಷಿಸುವುದು ಮನುಷ್ಯನ ಹಳೆಯ ಅಭ್ಯಾಸ. ಹವಾಮಾನ ವಿಷಯದಲ್ಲೂ ಅದೇ ತಪ್ಪು. ಇದಕ್ಕೆ ಸಾಮಾನ್ಯ ನಾಗರಿಕನನ್ನೇ ಸಂಪೂರ್ಣ ತಪ್ಪಿತಸ್ಥನನ್ನಾಗಿ ಮಾಡುವುದೂ ಸರಿಯಲ್ಲ.

ಪಳೆಯುಳಿಕೆ ಇಂಧನ ಆಧಾರಿತ ಶಕ್ತಿ ವ್ಯವಸ್ಥೆ, ಕೈಗಾರಿಕೆ, ಸಾರಿಗೆ, ಕಟ್ಟಡಗಳು, ಅರಣ್ಯ ನಾಶ, ಭೂಬಳಕೆಯ ಬದಲಾವಣೆ ಮತ್ತು ನಮ್ಮ ಒಟ್ಟಾರೆ ಬಳಕೆಯ ಮಾದರಿ- ಇವೆಲ್ಲವೂ ಸಮಸ್ಯೆಯ ಭಾಗ. ಅದಕ್ಕಾಗಿಯೇ ಹವಾಮಾನ ಕ್ರಮ ಎಂದರೆ ಸರ್ಕಾರದ ನೀತಿ, ಕೈಗಾರಿಕೆಯ ತಂತ್ರಜ್ಞಾನ, ಶುದ್ಧ ಶಕ್ತಿ, ಸಾರ್ವಜನಿಕ ಸಾರಿಗೆ, ನಗರ ಯೋಜನೆ, ಕೃಷಿ, ಅರಣ್ಯ ಸಂರಕ್ಷಣೆ ಮತ್ತು ನಮ್ಮ ವೈಯಕ್ತಿಕ ಆಯ್ಕೆ- ಎಲ್ಲವೂ ಒಂದೇ ದಿಕ್ಕಿನಲ್ಲಿ ಸಾಗಬೇಕಾಗುತ್ತದೆ.

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಈ ಪ್ರಶ್ನೆ ಇನ್ನಷ್ಟು ಸಂಕೀರ್ಣ. ನಮಗೆ ಮನೆ ಬೇಕು, ವಿದ್ಯುತ್ ಬೇಕು, ರಸ್ತೆ ಬೇಕು, ಉದ್ಯೋಗ ಬೇಕು, ಕೈಗಾರಿಕೆ ಬೇಕು. ಪರಿಸರ ಉಳಿಸಿ ಎನ್ನುವ ಹೆಸರಿನಲ್ಲಿ ಅಭಿವೃದ್ಧಿಯ ಬಾಗಿಲನ್ನೇ ಮುಚ್ಚುವುದು ಪರಿಹಾರವಲ್ಲ. ಅದೇ ಸಮಯದಲ್ಲಿ ಅಭಿವೃದ್ಧಿ ಬೇಕು ಎನ್ನುವ ಹೆಸರಿನಲ್ಲಿ ಪ್ರಕೃತಿಯ ಮಿತಿಯನ್ನೇ ನಿರ್ಲಕ್ಷಿಸುವುದೂ ಅಭಿವೃದ್ಧಿಯಲ್ಲ.

ಒಂದು ದಿನ ನಾವು ಯಶಸ್ವಿಯಾದೆವು ಎಂದುಕೊಳ್ಳೋಣ. ಉಷ್ಣತೆ 1.5 ದಾಟಿತು, ಗರಿಷ್ಠ ಮಟ್ಟ ತಲುಪಿತು, ನಂತರ ನಮ್ಮ ಪ್ರಯತ್ನದಿಂದ ಮತ್ತೆ 1.5 ಕೆಳಗೆ ಬಂತು. ಅಂದರೆ ಎಲ್ಲವೂ ಮೊದಲಿ ನಂತಾಗುತ್ತದೆಯೇ? ಒಮ್ಮೆ ಪ್ರವಾಹ ಬಂದ ಮನೆಯೊಂದನ್ನು ಕಲ್ಪಿಸಿಕೊಳ್ಳಿ. ಗೋಡೆಯ ಮೇಲೆ ನೀರು ಏರಿದ್ದ ಗುರುತು ಉಳಿದಿರುತ್ತದೆ. ಪೀಠೋಪಕರಣ ಹಾಳಾಗಿರಬಹುದು. ಪುಸ್ತಕಗಳು, ದಾಖಲೆಗಳು ಕೊಚ್ಚಿಹೋಗಿರಬಹುದು. ಕೆಲವು ವಸ್ತುಗಳನ್ನು ಹಣ ಕೊಟ್ಟು ಮತ್ತೆ ಖರೀದಿಸ ಬಹುದು. ಆದರೆ ಮನೆ ಹಿಂದಿನ ಸ್ಥಿತಿಗೆ ಬರಲಾರದು.

ಭೂಮಿಯ ಉಷ್ಣತೆಗೂ ಇದೇ ದೊಡ್ಡ ಸವಾಲು. ಕರಗಿದ ಹಿಮ ತಕ್ಷಣ ಮರಳಿ ಬರುವುದಿಲ್ಲ. ಏರಿದ ಸಮುದ್ರಮಟ್ಟ ತಕ್ಷಣ ಇಳಿಯುವುದಿಲ್ಲ. ನಾಶವಾದ ಜೀವಪ್ರಭೇದವನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಕೆಲವು ಪರಿಸರ ವ್ಯವಸ್ಥೆಗಳು ಹಿಂದಿನ ಸ್ಥಿತಿಗೆ ಮರಳದೇ ಇರಬಹುದು. ಕಳೆದುಕೊಂಡ ಎಲ್ಲದಕ್ಕೂ ಮರಳುವ ಟಿಕೆಟ್ ಇರುವುದಿಲ್ಲ.