G Prathap Kodancha Column: ರಾಷ್ಟ್ರಗಳ ಜಗಳದ ಸುತ್ತ ಎದ್ದಿದೆ ಅನುಮಾನದ ಹುತ್ತ !
ರಾಜಿ-ಸಂಧಾನಕ್ಕೆ ಬಹುಮುಖ್ಯವಾಗಿ ಬೇಕಾಗುವುದು ಜಗಳ ಮಾಡಿಕೊಂಡ 2 ರಾಷ್ಟ್ರಗಳ ನಾಯಕರುಗಳು; ಆದರೆ ರಷ್ಯಾ-ಉಕ್ರೇನ್ ಯುದ್ಧದ ವಿಷಯಕ್ಕೆ ಬಂದರೆ, ಆರಂಭ ದಿಂದಲೂ ಕಂಡುಬಂದಿದ್ದು ಉಕ್ರೇನ್ ಮತ್ತು ಅದರ ಬೆಂಬಲಕ್ಕೆ ನಿಂತ ಪಾಶ್ಚಾತ್ಯ ರಾಷ್ಟ್ರಗಳು ಒಂದೆಡೆ, ರಷ್ಯಾ ಇನ್ನೊಂದೆಡೆ ಎಂಬ ಇಬ್ಭಾಗದ ಪರಿಸ್ಥಿತಿ

ಅಂಕಣಕಾರ ಜಿ.ಪ್ರತಾಪ್ ಕೊಡಂಚ

ಟ್ರಂಪಾಯಣ
ಜಿ.ಪ್ರತಾಪ್ ಕೊಡಂಚ
ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಡುವೆ ಇತ್ತೀಚೆಗೆ ಅಮೆರಿ ಕದ ಶ್ವೇತಭವನದಲ್ಲಿ ಶುರುವಾದ ಸಂಧಾನದ ಮಾತುಕತೆಯು ಚಕಮಕಿಯ ಕ್ರಾಂತಿಯಾಗಿ ಅಂತ್ಯಗೊಂಡಿದ್ದು ಈಗ ಎಲ್ಲೆಡೆಯ ಸುದ್ದಿ. 3 ವರ್ಷಗಳ ಯುದ್ಧ ಅಂತ್ಯವಾಗಲಿದೆ ಎಂಬ ಭರವಸೆಯಲ್ಲಿ ಸೇರಿದ್ದ ಅಮೆರಿಕ-ಉಕ್ರೇನ್ ನಾಯಕರುಗಳ ಮಾತುಕತೆಯು, ‘ಮೂರನೆಯ ಮಹಾಯುದ್ಧ ನಡೆಯಲಿದೆಯೇ?’ ಎಂಬ ಆತಂಕವನ್ನು ಸೃಷ್ಟಿಸಿದೆ. ರಾಜಿ-ಸಂಧಾನಕ್ಕೆ ಬಹುಮುಖ್ಯವಾಗಿ ಬೇಕಾಗುವುದು ಜಗಳ ಮಾಡಿಕೊಂಡ 2 ರಾಷ್ಟ್ರಗಳ ನಾಯಕರುಗಳು; ಆದರೆ ರಷ್ಯಾ-ಉಕ್ರೇನ್ ಯುದ್ಧದ ವಿಷಯಕ್ಕೆ ಬಂದರೆ, ಆರಂಭದಿಂದಲೂ ಕಂಡು ಬಂದಿದ್ದು ಉಕ್ರೇನ್ ಮತ್ತು ಅದರ ಬೆಂಬಲಕ್ಕೆ ನಿಂತ ಪಾಶ್ಚಾತ್ಯ ರಾಷ್ಟ್ರಗಳು ಒಂದೆಡೆ, ರಷ್ಯಾ ಇನ್ನೊಂದೆಡೆ ಎಂಬ ಇಬ್ಭಾಗದ ಪರಿಸ್ಥಿತಿ. ಉಳಿದ ಬಹುತೇಕ ರಾಷ್ಟ್ರಗಳ ನಿಲುವು- ‘ತಾವಾಯ್ತು, ತಮ್ಮ ಪಾಡಾಯ್ತು, ತಂತಮ್ಮ ಲಾಭವೇನಾಯ್ತು’ ಎಂಬುದಕ್ಕೆ ಸೀಮಿತ ಗೊಂಡಿದ್ದೂ ವಿಷಾದದ ವಿಷಯವೇ.
ಇದನ್ನೂ ಓದಿ: Prathap P Kodancha Column: ಅಮೆರಿಕದಲ್ಲಿ ಈಗ ಟ್ರಂಪ್ ಅವರ DOGEನದೇ ಗೌಜು !
ಯಾವುದೇ ಸಂಧಾನಕ್ಕೆ ಕೂತಾಗ ಚರ್ಚೆ, ಸಮ್ಮತಿ-ಅಸಮ್ಮತಿ ಸಹಜ. ಆದರೆ ಇವೆಲ್ಲ ನಡೆದು ಒಂದು ನಿರ್ಣಾಯಕ ರೂಪರೇಷೆ ದೊರೆತ ನಂತರವೇ ನಾಯಕರುಗಳು ಮಾಧ್ಯಮ ಗಳೆದುರು ಬಂದು ಸಹಮತ ಪ್ರದರ್ಶಿಸುತ್ತಿದ್ದುದು ರಾಜತಾಂತ್ರಿಕ ನಡಾವಳಿ ಎನಿಸಿ ಕೊಂಡಿತ್ತು.
ಮೊನ್ನೆ ನಡೆದ ವಾಗ್ಯುದ್ಧ, ಅಸಮ್ಮತಿ, ಚಕಮಕಿ ಮಾತ್ರ ಜಗದ್ವ್ಯಾಪಿ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗುವುದರೊಂದಿಗೆ ಹೊಸ ದಾಖಲೆ ನಿರ್ಮಿಸಿತು ಎನ್ನಬೇಕು. ಅಮೆರಿಕದ ದಬ್ಬಾಳಿಕೆ, ವ್ಯಾಪಾರಿ ಮನೋವೃತ್ತಿಗೆ ಝೆಲೆನ್ಸ್ಕಿ ತೋರಿದ ತೀಕ್ಷ್ಣ ಪ್ರತಿಕ್ರಿಯೆ ಮೆಚ್ಚುಗೆಗೆ ಪಾತ್ರವಾಗಿದೆ; ಅಮೆರಿಕದ ಈಗಿನ ಆಡಳಿತವು ರಷ್ಯಾ ಪರವಾಗಿದೆ ಎಂಬುದರ ನಡುವೆ ಯೂ, ಅಂಥ ಕ್ಲಿಷ್ಟಕರ ಸನ್ನಿವೇಶದಲ್ಲೂ ಮಂಡಿಯೂರದ ಸ್ವಾಭಿಮಾನ ಮೆರೆದ ಮಹಾ ನಾಯಕ ಝೆಲೆನ್ಸ್ಕಿ ಎಂಬರ್ಥದ ವಿಶ್ಲೇಷಣೆ ಎಲ್ಲೆಡೆ ಕೇಳಿಬರುತ್ತಿದೆ.
ಇವೆಲ್ಲವೂ ಕೊಂಚ ದಿಟ ಮತ್ತು ಕೊಂಚ ಹುಸಿ ಹೌದಾದರೂ, ಯುದ್ಧ ನಿಲ್ಲಿಸುವ ಬದಲು ಯುದ್ಧ ಮುಂದುವರಿಸುವ ಹಿತಾಸಕ್ತಿಗಳು ಪ್ರಭಾವ ಬೀರಿದ ಅಂಶವನ್ನು ಮಾತ್ರ ಅಲ್ಲ ಗಳೆಯುವಂತಿಲ್ಲ. ಅಮೆರಿಕದ ಪಾಲಿಗೆ ಇದು ಅರಿಯದೇ ನಡೆದ ಆಘಾತವೇ? ಒಂದೊಮ್ಮೆ ಅರಿತಿದ್ದರೆ, ಮಾಧ್ಯಮಗಳ ಎದುರೇ ನಡೆದ ಈ ಮುಜುಗರವನ್ನು ತಪ್ಪಿಸಿಕೊಳ್ಳಲಿಲ್ಲವೇಕೆ? ಎಂಬ ಪ್ರಶ್ನೆಗಳಿಲ್ಲಿ ಮೂಡುತ್ತವೆ.
ಝೆಲೆನ್ಸ್ಕಿ ಈ ಹಾದಿಯನ್ನು ಹಿಡಿಯಬಹುದು ಎಂಬ ಸಣ್ಣ ವಾಸನೆ ಅಮೆರಿಕದ ನಾಯಕರುಗಳಿಗೆ ಇದ್ದಂತಿತ್ತು. ಯಾಕೆಂದರೆ, ಉಕ್ರೇನ್‌ನ ಅಪರೂಪದ ಖನಿಜ ನಿಕ್ಷೇಪಗಳ ಮೇಲೆ ಸ್ವಾಮ್ಯ ಪಡೆಯುವ ಅಮೆರಿಕದ ಒಪ್ಪಂದದ ಪ್ರಸ್ತಾಪವು ಝೆಲೆನ್ಸ್ಕಿಯವರ ಮುಂದೆ ಬಂದದ್ದು ಇದೇ ಮೊದಲಲ್ಲ; ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಣಾಹಣಿ ನಡೆಯುತ್ತಿದ್ದ 2024ರ ಸೆಪ್ಟೆಂಬರ್ ಸಂದರ್ಭದಲ್ಲೇ ಝೆಲೆನ್ಸ್ಕಿ ಟ್ರಂಪ್ ರನ್ನು ನ್ಯೂಯಾ ರ್ಕಿನ ‘ಟ್ರಂಪ್ ಟವರ್’ನಲ್ಲಿ ಭೇಟಿಯಾಗಿದ್ದರು.
ಸುದ್ದಿಮೂಲಗಳ ಪ್ರಕಾರ, ಅಮೆರಿಕವು ಉಕ್ರೇನ್‌ನ ಬೆಂಬಲಕ್ಕೆ ನಿಂತು ಹರಿಸಿದ ಹಣದ ವಸೂಲಾತಿಯ ಬಗ್ಗೆ ಟ್ರಂಪ್ ತಂಡವು ಝೆಲೆನ್ಸ್ಕಿಯವರೊಂದಿಗೆ ಅಂದೇ ಚರ್ಚಿಸಿದೆ. ಆಗಲೇ ಝೆಲೆನ್ಸ್ಕಿ ಮತ್ತು ತಂಡದವರು ತಮ್ಮಲ್ಲಿನ ಅಪರೂಪದ ಖನಿಜ ನಿಕ್ಷೇಪಗಳ ಒತ್ತೆ, ಪಾಲುದಾರಿಕೆಯ ಪ್ರಸ್ತಾಪವನ್ನು ಮುಂದಿಟ್ಟು, ಯುದ್ಧಕ್ಕೆ ಅಮೆರಿಕದ ಬೆಂಬಲವನ್ನು ಕೋರಿದ್ದರು ಎನ್ನಲಾಗುತ್ತಿದೆ.
ಈ ನಡುವೆ, ೨೦೨೫ರ ಜನವರಿಯ ಶುರುವಿನಲ್ಲಿ, ಚುನಾಯಿತ ಅಧ್ಯಕ್ಷ ಟ್ರಂಪ್ ಅಮೆರಿಕ ದಲ್ಲಿ ಅಧಿಕಾರ ವಹಿಸಿಕೊಳ್ಳುವ ಕೆಲವು ದಿನಗಳ ಮುಂಚೆ, ಬ್ರಿಟನ್ ಸರಕಾರವು ಉಕ್ರೇನ್ ಜತೆಗೆ ೧೦೦ ವರ್ಷಗಳ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿದೆ. ಈಗ ಚರ್ಚಿತವಾಗು ತ್ತಿರುವ ಉಕ್ರೇನಿನ ಅಪರೂಪದ ಖನಿಜಗಳ ಸ್ವಾಮ್ಯತೆಯ ನೇರಪ್ರಸ್ತಾಪವು, ಉಕ್ರೇನ್-ಬ್ರಿಟನ್ ಸಹಭಾಗಿತ್ವದ ಒಪ್ಪಂದದಲ್ಲಿ ಇಲ್ಲವಾದರೂ, ಇದು ಉಭಯ ದೇಶಗಳ ನಡುವಿನ ಸೇನಾ ನೆರವು, ಶಕ್ತಿ ಸಂಪನ್ಮೂಲಗಳ ಸಹಿತದ ವಾಣಿಜ್ಯ, ಸಾಂಸ್ಕೃತಿಕ ಸಹಕಾರಗಳ ಒಡಂಬಡಿಕೆಗಳನ್ನು ಒಳಗೊಂಡಿದೆ.
ಹೀಗಿದ್ದೂ ಈಗ ಅಮೆರಿಕ ಉಕ್ರೇನಿನ ರಕ್ಷಣೆಗೆ ನಿಲ್ಲುವ ಬದಲು ಉಕ್ರೇನನ್ನು ದೋಚಲು ಹೊರಟಿತ್ತು ಎಂದು ಬಿಂಬಿಸುತ್ತಿರುವ ಬಹುತೇಕ ಮಾಧ್ಯಮಗಳಲ್ಲಿನ ವಿಶ್ಲೇಷಣೆಗಳು, ಈ ವರ್ಷದ ಜನವರಿಯಲ್ಲಾದ ಉಕ್ರೇನ್-ಬ್ರಿಟನ್ ನಡುವಿನ ಒಪ್ಪಂದದ ಕುರಿತು ಜಾಣ ಮರೆವು-ಜಾಣಮೌನ ತೋರುತ್ತಿರುವುದು ಕೂಡ ಅಚ್ಚರಿಯ ಸಂಗತಿ! ಮುರಿದುಬಿದ್ದ ಉಕ್ರೇನ್-ಅಮೆರಿಕ ಮಾತುಕತೆಯನ್ನು ನೋಡಿ ‘ಕೊಳ್ಳೆ ಹೊಡೆಯುವ ಉದ್ದೇಶವಿತ್ತು’ ಎಂದು ಹೇಳುತ್ತಿರುವವರಿಗೆ, ಒಪ್ಪಿತಗೊಂಡ ‘ಬ್ರಿಟನ್ -ಉಕ್ರೇನ್’ ಸಹಭಾಗಿತ್ವದ ಹಿಂದೆ ಉದಾತ್ತ ಉದ್ದೇಶವಿದೆ ಎನಿಸುತ್ತಿರುವುದು ಅರ್ಥವಾಗದ ಸಂಗತಿ!
ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಡೆಮಾಕ್ರಟಿಕ್ ಪಕ್ಷದ ಸರಕಾರವು ಝೆಲೆನ್ಸ್ಕಿ ಬೆಂಬಲಕ್ಕೆ ನಿಂತಿತ್ತು. ಅವರ ವಿರೋಧಿ ಪಾಳಯದ ಟ್ರಂಪ್ ನೇತೃತ್ವದ ಸರಕಾರವು ಅಮೆರಿಕದಲ್ಲಿ ನೆಲೆಗೊಳ್ಳಲಿದೆ ಎಂಬುದು ಖಚಿತವಾಗುತ್ತಿದ್ದಂತೆ, ಅಮೆರಿಕದ ನೆರವು ನಿಲ್ಲಲಿದೆ ಎಂಬ ಸುಳಿವು ಝೆಲೆನ್ಸ್ಕಿಯವರಿಗೆ ಮತ್ತು ಅವರ ಬೆಂಬಲಕ್ಕೆ ನಿಂತಿದ್ದ ಐರೋಪ್ಯ ರಾಷ್ಟ್ರಗಳಿಗೆ ಸಿಕ್ಕಿರಲಿಲ್ಲ ಎಂಬುದನ್ನು ನಂಬಲಾಗುತ್ತಿಲ್ಲ.
ಹಾಗಾಗಿಯೇ ಅಮೆರಿಕದ ನೂತನ ಸರಕಾರವು ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನ ಗಳಿಗೆ ಮೊದಲು ಉಕ್ರೇನ್-ಬ್ರಿಟನ್ ನಡುವಿನ ಸಹಭಾಗಿತ್ವದ ಒಪ್ಪಂದವನ್ನು ತರಾತುರಿ ಯಲ್ಲಿ ಮಾಡಿಕೊಳ್ಳಲಾಗಿದೆ ಎಂಬ ಅನುಮಾನ ಮೂಡುತ್ತದೆ. ಅಂಕಿ-ಅಂಶಗಳ ಪ್ರಕಾರ, ಸುಮಾರು 177 ಬಿಲಿಯನ್ ಡಾಲರ್‌ನಷ್ಟು (ಅಂದರೆ ಸುಮಾರು 1545 ಕೋಟಿ ರುಪಾಯಿ ಗಳಷ್ಟು) ನೆರವನ್ನು ಅಮೆರಿಕವು ಉಕ್ರೇನ್‌ಗೆ ನೀಡಿದೆ. 28 ದೇಶಗಳ ಯುರೋಪಿ ಯನ್ ಒಕ್ಕೂಟವು ನೀಡಿದ ನೆರವು ಸರಿಸುಮಾರು 138 ಬಿಲಿಯನ್ ಡಾಲರ್‌ನಷ್ಟು (ಅಂದರೆ ಸುಮಾರು 1200 ಕೋಟಿ ರುಪಾಯಿಗಳಷ್ಟು).
ಪಕ್ಕದಲ್ಲೇ ಇದ್ದರೂ, ಹಲವು ದೇಶಗಳ ಒಕ್ಕೂಟವಾಗಿದ್ದರೂ ಯುರೋಪಿಯನ್ ಒಕ್ಕೂ ಟವು ಉಕ್ರೇನ್‌ಗೆ ತನ್ನಷ್ಟು ಸಹಾಯವನ್ನು ನೀಡಿಲ್ಲ ಎಂಬುದು ಕೂಡ ಅಮೆರಿಕದ ಆಡಳಿತದ ಇನ್ನೊಂದು ಆರೋಪ. ಈ ಎಲ್ಲ ದೇಶಗಳಿಂದ ಹರಿದುಬಂದ ಹಣದಲ್ಲಿ ಅರ್ಧದಷ್ಟು ಹಣವು ಆಯಾ ದೇಶಗಳಲ್ಲಿನ ಕಂಪನಿಗಳಿಗೆ ಹರಿದು, ಅಲ್ಲಿಂದ ಶಸ್ತ್ರಾಸ್ತ್ರ ಸಹಿತದ ಹಲವು ರೀತಿಯ ನೆರವುಗಳು ಉಕ್ರೇನನ್ನು ತಲುಪುವ ಗುರಿ ಹೊಂದಿದ್ದವು.
ವಿದೇಶಗಳು ನೀಡುವ ನೆರವಿನ ಹಿಂದೆ ಇಂಥ ವ್ಯಾಪಾರಿ ಹಿತಾಸಕ್ತಿ ಇರುವುದು ಬಹಿರಂಗ ಸತ್ಯ. ಇವೆಲ್ಲವನ್ನೂ ಮೀರಿ, ಅಮೆರಿಕ ನೀಡಿದ 177 ಬಿಲಿಯನ್ ಡಾಲರ್‌ಗಳಲ್ಲಿ ಅರ್ಧ ದಷ್ಟು ಮೊತ್ತ ಅಥವಾ ಆ ಪ್ರಮಾಣದ ಸಹಾಯ ಉಕ್ರೇನನ್ನು ತಲುಪಿಲ್ಲ ಎಂಬುದು ಅದರ ಅಧ್ಯಕ್ಷ ಝೆಲೆನ್ಸ್ಕಿಯವರ ಇನ್ನೊಂದು ಉವಾಚ!
ಹಾಗಿದ್ದರೆ ಅಷ್ಟೊಂದು ದೊಡ್ಡ ಮೊತ್ತದ ಝಣಝಣ ಕಾಂಚಾಣ ಕಾಣೆಯಾಗಿರುವುದೆಲ್ಲಿ? ಎಂಬುದು ಇನ್ನೊಂದು ಅನುಮಾನ! ರಷ್ಯಾ ಅಂದುಕೊಂಡಷ್ಟು ಸುಲಭದಲ್ಲಿ ಗೆಲ್ಲಲಾಗ ಲಿಲ್ಲ ಎಂಬುದು ಸತ್ಯವಾದರೂ, ಇಷ್ಟೆಲ್ಲಾ ಪ್ರಮಾಣದ ನೆರವಿದ್ದೂ ಉಕ್ರೇನ್ ಗೆದ್ದು ಬೀಗುವ ಸಂಭವವೂ ಕಾಣಿಸುತ್ತಿಲ್ಲ. ಒಟ್ಟು ಪರಿಸ್ಥಿತಿ ಹೀಗಿರುವಾಗ, ಗೆಲ್ಲಲಾಗದ ಕುದುರೆಗೆ ಹಾಕಿದ ಖರ್ಚು ಹಿಂಪಡೆಯುವುದು ಹೇಗೆ ಎಂಬ ಲೆಕ್ಕಾಚಾರವೇ ಎಲ್ಲ ಕಡೆ ಕಾಣು ತ್ತಿರುವುದು ಅಸಂಗತವೇನಲ್ಲ.
‘ನಮ್ಮ ಸರಕಾರ ಬಂದರೆ ಯುದ್ಧ ನಿಲ್ಲಿಸುತ್ತೇವೆ’ ಎಂಬ ಆಶ್ವಾಸನೆಯೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದವರು ಟ್ರಂಪ್. ತಮ್ಮ ತೆರಿಗೆ ಹಣವು ಯುದ್ಧಕ್ಕೆ ಪೋಲಾಗುತ್ತಿರುವುದರ ಬಗೆಗೂ ಅಮೆರಿಕನ್ ಸಮಾಜದಲ್ಲಿ ಬೇಸರವಿದೆ. ಟ್ರಂಪ್ ಆಡಳಿತವು ಆರಂಭವಾಗುವುದಕ್ಕೆ ಕೆಲವೇ ದಿನಗಳ ಮುಂಚೆ ಉಕ್ರೇನ್ -ಬ್ರಿಟನ್ ಮಾಡಿಕೊಂಡ 100 ವರ್ಷಗಳ ಸೇನಾ, ಶಕ್ತಿ ಸಂಪನ್ಮೂಲಗಳು, ನಾಗರಿಕ ಹಿತರಕ್ಷಣೆಯ ಅಂಶಗಳನ್ನೂ ಒಳಗೊಂಡ ವಾಣಿಜ್ಯ ಸಹಭಾಗಿತ್ವದ ಒಪ್ಪಂದವು, ಪ್ರಸ್ತುತ ಅಮೆರಿಕ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಬೇರೆ ವಿಷಯಗಳಲ್ಲಿ ತಕರಾರಿದ್ದರೂ, ಜಗಳಗಂಟನೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರೂ, ತಮ್ಮ ಆಡಳಿತದ ಅವಧಿಯಲ್ಲಿ ಯಾರ ಮೇಲೂ ಕಾಲು ಕೆದರಿ ಯುದ್ಧಕ್ಕೆ ಹೋಗದೆ, ಯುದ್ಧವಿದ್ದ ಕಡೆ ಶಾಂತಿ ಬಯಸಿ ಅಮೆರಿಕದ ಪಡೆಗಳನ್ನು ಹಿಂಪಡೆದುಕೊಳ್ಳುವಲ್ಲಿ ತೊಡಗಿಸಿಕೊಂಡ ಅಮೆರಿಕದ ಅಧ್ಯಕ್ಷರು ಟ್ರಂಪ್ ಎಂಬುದು ಒಪ್ಪಿಕೊಳ್ಳಬೇಕಾದ ಸಂಗತಿ.
ಯುದ್ಧಕ್ಕೆ ಬೆಂಬಲ ಕೋರಿ ನಿಂತ ಝೆಲೆನ್ಸ್ಕಿ ಪಡೆಗೆ ಟ್ರಂಪ್ ಆಡಳಿತವು ನೆರವು ನಿಲ್ಲಿಸಿ, ಶಾಂತಿ ಮಾತುಕತೆಗೆ ಸಹಾಯಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಅಮೆರಿಕದ ನೆರವಿನ ಪ್ರತಿ-ಲಕ್ಕಾಗಿ ಅಪರೂಪದ ಖನಿಜ ನಿಕ್ಷೇಪಗಳ ಸ್ವಾಮ್ಯತೆಯ ಒಪ್ಪಂದ ಮಾಡಿ ಕೊಂಡರೆ, ರಷ್ಯಾ ಕಡೆಯಿಂದಲೂ ಯುದ್ಧವಿರಾಮ ಮಾಡಿಸುವ ಮಾತುಕತೆಯಾಗಿದೆ.
ಅದರಂತೆ, ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಸಂಬಂಧಿಸಿ ಪ್ಯಾರಿಸ್‌ನಲ್ಲಿ ಫೆಬ್ರವರಿ ಮೊದಲ ವಾರ ನಡೆದ ಸಮ್ಮೇಳನದ ಸಮಯದಲ್ಲೇ ಈ ಒಪ್ಪಂದವಾಗಬೇಕಿತ್ತು. ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಮತ್ತು ಉಕ್ರೇನ್ ನಾಯಕರ ನಡುವೆ ಪ್ಯಾರಿಸ್‌ನಲ್ಲಿಯೇ ಒಪ್ಪಂದ ಅಂತಿಮ ಗೊಳ್ಳುತ್ತದೆ ಎಂಬ ಗುಸುಗುಸು ಇತ್ತು.
‘ತಾತ್ವಿಕ ಒಪ್ಪಿಗೆಯಿದ್ದರೂ ಅಮೆರಿಕದ ಅಧ್ಯಕ್ಷರೊಡನೆ ಮಾತನಾಡಬೇಕು, ನಮ್ಮ ರಕ್ಷಣೆಯ ಕುರಿತು ಅವರಿಂದ ಅಭಯ ಪಡೆದುಕೊಳ್ಳದೆಯೇ ಮುಂದುವರಿಯಲು ಹಿಂಜರಿ ಯುತ್ತಿದ್ದೇವೆ’ ಎಂಬರ್ಥದ ಸಂದೇಶವನ್ನು ಝೆಲೆನ್ಸ್ಕಿ ಕೊಟ್ಟಿದ್ದರು ಎನ್ನಲಾಗುತ್ತಿದೆ. ತದನಂತರ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಜಾಗತಿಕ ಭದ್ರತಾ ಸಮಾವೇಶದ ಸಮಯದಲ್ಲೂ ಉಭಯ ರಾಷ್ಟ್ರಗಳ ನಡುವೆ ಇನ್ನೊಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
ಇಷ್ಟೆಲ್ಲ ಆದ ಮೇಲೆ, ಒಪ್ಪಿಗೆಗೆ ಮುಂಚೆ ಅಮೆರಿಕದ ಅಧ್ಯಕ್ಷರೊಡನೆ ಚರ್ಚಿಸಿ ಮುಂದು ವರಿಯುವ ತಮ್ಮ ಭರವಸೆಯ ಆಧಾರದ ಮೇಲೆಯೇ ಝೆಲೆನ್ಸ್ಕಿ ಅವರು ಮಾತುಕತೆಗೆಂದು ಶ್ವೇತಭವನದ ಅಂಗಳವನ್ನು ತಲುಪಿದ್ದು. ಈ ಭೇಟಿಯ ಕೆಲವೇ ದಿನಗಳ ಹಿಂದೆ, ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರಾನ್ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮೆರ್ ಶ್ವೇತ ಭವನದ ಕದತಟ್ಟಿ, ಟ್ರಂಪ್‌ರನ್ನು ಭೇಟಿಯಾಗಿ ಹೋಗಿದ್ದು ಕೂಡ ಅಚ್ಚರಿಯ ಬೆಳವಣಿಗೆ ಯೇ!
ಇವೆಲ್ಲ ಟ್ರಂಪ್-ಝೆಲೆನ್ಸ್ಕಿ ಭೇಟಿಯ ಪೂರ್ವತಯಾರಿ, ಒಪ್ಪಂದವಾಗಿಯೇಬಿಟ್ಟಿದೆ ಎಂಬ ಸುದ್ದಿ ಪಸರಿಸುತ್ತಿರುವಾಗಲೇ ಮಾತಿನ ಚಕಮಕಿಯ ಸಂಧಾನದ ಸಭೆಯು ಜಗದಗಲ ನೇರಪ್ರಸಾರಗೊಂಡಿದ್ದು. ಈ ರೀತಿಯ ಪ್ರಹಸನ ನಡೆದು ಟ್ರಂಪ್ ಸರಕಾರದ ಪ್ರಸ್ತಾಪವನ್ನು ಝೆಲೆನ್ಸ್ಕಿ ತಿರಸ್ಕರಿಸುವ ಸಾಧ್ಯತೆಯನ್ನೂ ಶ್ವೇತಭವನದ ಮೂಲಗಳು ತಕ್ಕಮಟ್ಟಿಗೆ ಊಹಿಸಿರಬೇಕು. ಮಾತುಕತೆಯ ಆರಂಭದಿಂದಲೂ ಟ್ರಂಪ್ ಮಾತಿಗೆ ಸಹಮತವಿಲ್ಲವೆಂಬ ಮುಖಭಾವ, ಹಾವಭಾವ ತೋರಿಸುತ್ತಿದ್ದ ಉಕ್ರೇನ್ ಅಧ್ಯಕ್ಷರು, ಕೊನೆಕೊನೆಗೆ ಅಮೆರಿಕದ ನಾಯಕರುಗಳ ಮೇಲೆ ಕೈ ಮಿಲಾಯಿಸುವುದೊಂದನ್ನು ಬಿಟ್ಟು ಮಾತಿನ ಗುದ್ದಾಟ ಪ್ರದರ್ಶಿಸಿ ಬಿಟ್ಟಿದ್ದಾರೆ.
ಮಾತಿಗೆ ಮೊದಲೇ ಸಿಟ್ಟಿಗೇಳುವ ಟ್ರಂಪ್ ರನ್ನು ಸಿಟ್ಟಿಗೇಳಿಸಿ ಜಗದಗಲ ಕೆಟ್ಟದಾಗಿ ತೋರಿ ಸುವ ಹುನ್ನಾರವೂ ಇದಾಗಿರಬಹುದೆಂಬ ಗುಮಾನಿಯ ಮಾತುಗಳು ಜಾಗತಿಕ ರಾಜ ತಾಂತ್ರಿಕ ವಲಯದಲ್ಲಿ ಕೇಳಿಬರುತ್ತಿವೆ. ಪರಿಸ್ಥಿತಿ ಸಂಪೂರ್ಣ ಕೈಮೀರುತ್ತಿದೆ, ತಾವು ಅಂದು ಕೊಂಡ ಒಪ್ಪಂದವಾಗುವುದಿಲ್ಲ ಎಂಬ ಅಂಶ ಖಚಿತಗೊಳ್ಳುತ್ತಿದ್ದಂತೆ ಅಮೆರಿಕ ಉಪಾ ಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು, ಶಾಂತಿ ಪ್ರಕ್ರಿಯೆಗೆ ಉಕ್ರೇನ್ ಅಧ್ಯಕ್ಷರ ಬದ್ಧತೆ, ಅಮೆರಿಕದ ನೆರವಿಗೆ ಅವರಲ್ಲಿದ್ದ ಕೃತಜ್ಞತೆಯ ಪ್ರಸ್ತಾಪ ಮಾಡಿದ್ದಾರೆ.
‘ಹೀಗಿದ್ದರೆ ಮಾತುಕತೆ ಅಸಾಧ್ಯ. ನಿಮಗೆ ಜಗತ್ತನ್ನೇ 3ನೇ ಮಹಾಯುದ್ಧಕ್ಕೆ ತಳ್ಳುವ ಹಪಾ ಹಪಿಯಿದ್ದಂತಿದೆ’ ಎಂಬ ಮಾತಿನೊಂದಿಗೆ ಮಾತುಕತೆ ಮುರಿದುಬಿದ್ದಿದೆ. ತದನಂತರ, ಉಕ್ರೇನ್ ಅಧ್ಯಕ್ಷರ ತಂಡಕ್ಕೆ ಶ್ವೇತಭವನದಿಂದ ಕೂಡಲೇ ತೆರಳುವಂತೆ ಆದೇಶಿಸಲಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ.
‘ಅಮೆರಿಕವು ಉಕ್ರೇನ್ ಅಧ್ಯಕ್ಷರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲವೇನೋ?’ ಅಂತ ಇಲ್ಲಿಯವರೆಗೆ ಅನಿಸಿದ್ದು ನಿಜ. ಆದರೆ ಅಮೆರಿಕದಿಂದ ನಿರ್ಗಮಿಸಿದ ಝೆಲೆನ್ಸ್ಕಿ ನೇರವಾಗಿ ಬಂದಿಳಿದಿದ್ದು ಲಂಡನ್‌ನಲ್ಲಿ; ಬ್ರಿಟನ್ ಸರಕಾರದೊಂದಿಗೆ ಅವರು ತುರ್ತು ಆರ್ಥಿಕ ನೆರವಿನ ಒಪ್ಪಂದವನ್ನು ಮಾಡಿಕೊಂಡಿದ್ದೂ ಅಲ್ಲದೆ, ಐರೋಪ್ಯ ರಾಷ್ಟ್ರಗಳ ನಾಯಕರು ಗಳ ಜತೆಗೆ ಪೂರ್ವನಿರ್ಧರಿತವಲ್ಲದ ತುರ್ತುಸಭೆಯನ್ನು ನಡೆಸಿದ್ದು ನೋಡಿದರೆ, ಝೆಲೆ ನ್ಸ್ಕಿ ಶ್ವೇತಭವನಕ್ಕೆ ಬಂದಿದ್ದೂ ಶಾಂತಿ-ಸಂಧಾನದ ನಟನೆಗಾಗಿಯೇ? ಎಂಬ ಅನುಮಾನ ಮೂಡುತ್ತಿದೆ.
‘ಯುದ್ಧ ನಿಲ್ಲಬೇಕು, ವ್ಯಾಪಾರ ಅವಶ್ಯ’ ಎಂದು ಒಬ್ಬರಿಗೆ ಅನಿಸಿದರೆ, ಇನ್ನೊಬ್ಬರಿಗೆ ‘ಯುದ್ಧ ಸಹಿತದ ವ್ಯಾಪಾರ ಬೇಕು’ ಅನಿಸುತ್ತಿದೆ. ವ್ಯಾಪಾರಿ ಹಿತಾಸಕ್ತಿ, ಈಗಾಗಲೇ ಹೂಡಿದ ಹಣದ ವಸೂಲಿ ಎಲ್ಲರ ಆದ್ಯತೆಯಾಗುತ್ತಿದೆಯೇ? ಎಂಬ ಅನುಮಾನ ಕೂಡ ಕಾಡುತ್ತದೆ. 3 ವರ್ಷಗಳ ಹಿಂದೆ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗಲೇ ಝೆಲೆನ್ಸ್ಕಿ-ಪುಟಿನ್ ನಡುವಿನ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧಗೊಂಡು, ಉಕ್ರೇನ್ ಕೂಡ ಉತ್ಸುಕತೆ ತೋರಿಸಿತ್ತು.
ಆಗಲೂ ಆ ಶಾಂತಿಸಂಧಾನ ಕೈಗೂಡದಂತೆ ನೋಡಿಕೊಂಡು, ರಷ್ಯಾವನ್ನು ಮಣಿಸಲು ಉಕ್ರೇನ್ ಹೋರಾಡುವಂತೆ ಹಿಂದಿನಿಂದ ಪ್ರೇರೇಪಿಸಿದ್ದೂ ಅಂದಿನ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಂಬುದು ಚರ್ಚಿತವಾಗಿದ್ದ ಬಹಿರಂಗ ಸತ್ಯ. ಅಂದಿಗೂ ಇಂದಿಗೂ ಯುದ್ಧೋನ್ಮಾದ ಕಡಿಮೆಯಾಗದಂತೆ ನೋಡಿಕೊಳ್ಳುವ, ಸ್ವತಃ ಮುಳುಗುತ್ತಿದ್ದರೂ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಎನಿಸಿಕೊಂಡ ಬ್ರಿಟನ್‌ನ ಆಸಕ್ತಿ ಕೂಡ ಇಲ್ಲಿ ಅನು ಮಾನಕ್ಕೆ ಎಡೆಮಾಡಿಕೊಟ್ಟಿದೆ.
ಒಟ್ಟಿನಲ್ಲಿ, ಝೆಲೆನ್ಸ್ಕಿಯವರ ನಿಸ್ಸಹಾಯಕತೆ, ನಟನೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸ ಲ್ಪಟ್ಟಿವೆ. ಶಾಲಾದಿನಗಳಲ್ಲಿ ನಾವು ಕೇಳುತ್ತಿದ್ದ ‘ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಬಹಳ ದಿನ ಬಾಳುವುದಿಲ್ಲ’ ಎಂಬ ಮಾತು, ಝೆಲೆನ್ಸ್ಕಿಯವರ ಸದ್ಯದ ಪರಿಸ್ಥಿತಿಯನ್ನು ನೋಡಿದಾಗ ಮತ್ತೆ ನೆನಪಾಗುತ್ತಿದೆ.
ಈಗಂತೂ ಬ್ರಿಟನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಉಕ್ರೇನಿಗೆ ಸೇನಾ ನೆರವಿನ ಆಶ್ವಾಸನೆಯನ್ನು ಕೊಡುತ್ತಿರುವಂತಿದೆ. ಬ್ರಿಟನ್ ಸೈನ್ಯವು ನೇರವಾಗಿ ಉಕ್ರೇನ್‌ನ ಪರವಾಗಿ ನಿಂತರೆ, ನ್ಯಾಟೋ ರಾಷ್ಟ್ರಗಳು ಬ್ರಿಟನ್ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾದರೆ, 3ನೇ ಮಹಾಯುದ್ಧಕ್ಕೆ ಬ್ರಿಟನ್ ಮುನ್ನುಡಿ ಬರೆದಂತಾಗುವುದು ನಿಸ್ಸಂಶಯ.
ಹೀಗಿದ್ದೂ ನ್ಯಾಟೋ ಪಡೆಯ ಬಹುಮುಖ್ಯ ಪಾಲುದಾರ ಎನಿಸಿಕೊಂಡ ಅಮೆರಿಕ, ನ್ಯಾಟೋದಿಂದ ಹೊರ ನಡೆಯಲಿದೆಯೇ? ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಗಗನ ಕ್ಕೇರುತ್ತಿರುವ ಚಿನ್ನದ ಬೆಲೆಯ ಸುದ್ದಿಯ ಜತೆಗೆ, ಇತ್ತೀಚೆಗೆ ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿಟ್ಟ ಚಿನ್ನವನ್ನು ದೊಡ್ಡ ವರ್ತಕರು, ಕೆಲ ಬ್ಯಾಂಕುಗಳು ಅಮೆರಿಕಕ್ಕೆ ಸಾಗಿಸಿದ ಸುದ್ದಿ ವರದಿಯಾಗಿತ್ತು.
ಮಾತೆತ್ತಿದರೆ ‘ಸುಂಕ’ ಎನ್ನುವ ಟ್ರಂಪ್ ಸಾಹೇಬರ ಸುಂಕದ ಹೊಡೆತದಿಂದ ತಪ್ಪಿಸಿ ಕೊಳ್ಳುವ ಮಾರ್ಗವಿದು ಎನ್ನುವ ಸುದ್ದಿಯ ಜತೆಗೆ, ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಘೋಷಿಸಿಕೊಂಡಷ್ಟು ಚಿನ್ನವಿಲ್ಲ ಎಂಬ ಗುಸುಗುಸು ಕೂಡ ಅಲ್ಲಲ್ಲಿ ಕೇಳುತ್ತಿದೆ. ಸದ್ಯ ಜಗತ್ತಿನ ದೃಷ್ಟಿಯನ್ನು ಚಿನ್ನದಿಂದ ಬೇರೆಡೆಗೆ ಹೊರಳುವಂತೆ ಮಾಡುವುದೇ ಚೆನ್ನ ಎಂಬ ನಿಟ್ಟಿನಲ್ಲಿ ಬ್ರಿಟನ್ ದೇಶವು ಅಮೆರಿಕಕ್ಕೆ ಸೆಡ್ಡು ಹೊಡೆದು ರಷ್ಯಾ-ಉಕ್ರೇನ್ ದೇಶಗಳು ಉರಿಯುತ್ತಿರುವಂತೆಯೇ ನೋಡಿಕೊಳ್ಳುತ್ತಿದೆಯೇ ಎಂಬ ಅನುಮಾನ ಮೂಡದಿರುವುದಿಲ್ಲ.
ಇವೆಲ್ಲದರ ನಡುವೆ ಯುದ್ಧ ಸಾಕೆನಿಸುತ್ತಿದ್ದರೂ ನಿಲ್ಲಿಸಲಾಗದೆ, ಸದ್ಯದ ಉಕ್ರೇನ್‌ನ ಪರಿಸ್ಥಿತಿ ನೋಡಿ ಸ್ವಲ್ಪವಾದರೂ ಉಸಿರಾಡಬಹುದೆಂದು ನಿಟ್ಟುಸಿರು ಬಿಡುತ್ತಿರುವುದು ರಷ್ಯಾ ಮತ್ತು ಪುಟಿನ್‌ರ ಪಡೆಗಳು. ಇವೆಲ್ಲವನ್ನು ನೋಡಿಯೇ ಅನಿಸಿದ್ದು- ‘ರಾಷ್ಟ್ರಗಳ ಜಗಳದ ಸುತ್ತ, ಎದ್ದಿದೆ ಅನುಮಾನದ ಹುತ್ತ!’ ಅಂತ.
(ಲೇಖಕರು ಹವ್ಯಾಸಿ ಬರಹಗಾರರು)