ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prathap P Kodancha Column: ಅಮೆರಿಕದಲ್ಲಿ ಈಗ ಟ್ರಂಪ್‌ ಅವರ DOGEನದೇ ಗೌಜು !

ದಿನಕ್ಕೊಂದಿಷ್ಟು ಕಾರ್ಯನಿರ್ವಾಹಕ ಆದೇಶಗಳ ಮೂಲಕ, ಒಂದಾದ ಮೇಲೊಂದರಂತೆ ಹೊಸ ಹುತ್ತ ಕ್ಕೆ ಟ್ರಂಪ್ ಆಡಳಿತ ಲಗ್ಗೆಯಿಡುತ್ತಿದೆ. ಇಲಾಖೆಗಳ ಕಾರ್ಯಕ್ಷಮತೆ, ಹಣಕಾಸು ನಿರ್ವಹಣೆಯ ವಿಮರ್ಶೆ ಮತ್ತು ಸಮಗ್ರ ಸುಧಾರಣೆಗಾಗಿ ತಮಗಿರುವ ಬದ್ಧತೆಯಿದು ಎಂಬುದು ಅವರೆಲ್ಲರ ವಾದ. ಚುನಾವಣೆಯ ಮುನ್ನವೇ, ಸರಕಾರ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಕೆಲವು ಇಲಾಖೆಗಳ ಆಮೂಲಾಗ್ರ ಸುಧಾ ರಣೆಯ ಭರವಸೆ ಕೊಟ್ಟಿದ್ದ ಟ್ರಂಪ್,

ಅಮೆರಿಕದಲ್ಲಿ ಈಗ ಟ್ರಂಪ್‌ ಅವರ DOGEನದೇ ಗೌಜು !

Profile Ashok Nayak Feb 15, 2025 9:56 AM

ಅಮೆರಿಕದ 47ನೇ ಅಧ್ಯಕ್ಷರಾಗಿ ಬಹುಮತದಿಂದಲೇ ಆಯ್ಕೆಗೊಂಡಿದ್ದ ಡೊನಾಲ್ಡ್ ಟ್ರಂಪ್, ಜನ ವರಿ 20ರಿಂದ ಶ್ವೇತಭವನದ ಅಧಿಪತ್ಯ ವಹಿಸಿಕೊಂಡಿದ್ದಾರೆ. ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ( MAGA) ಎಂಬ ಘೋಷವಾಕ್ಯದೊಂದಿಗೆ ಚುನಾವಣೆಯಲ್ಲಿ ಆಡಳಿತಾರೂಢ ಸರಕಾರವನ್ನು, ಬಲಾಢ್ಯ ಹಿತಾಸಕ್ತಿಗಳನ್ನು ಎದುರಿಸಿ ಸೆಟೆದು ನಿಂತ ಟ್ರಂಪ್ ಮಹಾಶಯರು, ಗೆದ್ದಾಯ್ತು ಅಂತ ಕುರ್ಚಿ ಏರಿ ಸುಮ್ಮನಾಗುವ ಬಹುತೇಕ ರಾಜಕಾರಣಿಗಳಂಥ ಮಗ ತಾವಲ್ಲ ಎಂಬುದನ್ನು ಅಧಿಕಾರ ವಹಿಸಿಕೊಂಡ ದಿನದಿಂದಲೇ ಜಗಜ್ಜಾಹೀರು ಮಾಡುತ್ತಿದ್ದಾರೆ! ದಿನಕ್ಕೊಂದಿಷ್ಟು ಕಾರ್ಯ ನಿರ್ವಾ ಹಕ ಆದೇಶಗಳ ಮೂಲಕ, ಒಂದಾದ ಮೇಲೊಂದರಂತೆ ಹೊಸ ಹುತ್ತಕ್ಕೆ ಟ್ರಂಪ್ ಆಡಳಿತ ಲಗ್ಗೆ ಯಿಡುತ್ತಿದೆ.

ಇಲಾಖೆಗಳ ಕಾರ್ಯಕ್ಷಮತೆ, ಹಣಕಾಸು ನಿರ್ವಹಣೆಯ ವಿಮರ್ಶೆ ಮತ್ತು ಸಮಗ್ರ ಸುಧಾರಣೆಗಾಗಿ ತಮಗಿರುವ ಬದ್ಧತೆಯಿದು ಎಂಬುದು ಅವರೆಲ್ಲರ ವಾದ. ಚುನಾವಣೆಯ ಮುನ್ನ ವೇ, ಸರಕಾರ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಕೆಲವು ಇಲಾಖೆಗಳ ಆಮೂಲಾಗ್ರ ಸುಧಾ ರಣೆಯ ಭರವಸೆ ಕೊಟ್ಟಿದ್ದ ಟ್ರಂಪ್,

ಅದಕ್ಕಾಗಿಯೇ ‘ಡಿಪಾರ್ಟ್ ಮೆಂಟ್ ಆಫ್ ಗವರ್ನ್‌ಮೆಂಟ್ ಎಫಿಷಿಯೆನ್ಸಿ’ ( DOGE)ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕುತ್ತೇವೆ ಎಂದಿದ್ದರು. ಎಲ್ಲ ರಾಜಕಾರಣಿಗಳು ಹೇಳುವಂತೆ ಇದು ಆಡಳಿತ ಸುಧಾರಣಾ ಆಯೋಗದ ರೀತಿಯ ಇನ್ನೊಂದು ಸಂಸ್ಥೆ ಎನಿಸಿದ್ದರೂ, ‘ಅದರ ನೇತೃತ್ವವನ್ನು ಪ್ರಪಂಚದ ಶ್ರೀಮಂತರಲ್ಲಿ ಅಗ್ರಸ್ಥಾನದಲ್ಲಿರುವ ಎಲಾನ್ ಮಸ್ಕ್ ಎಂಬ ಉದ್ಯಮಿಗೆ ಕೊಡುತ್ತೇವೆ’ ಎಂದಾಗ, ‌ಉದ್ಯಮ ವಲಯದ ಜತೆಗೆ ಆಡಳಿತಶಾಹಿ ಮತ್ತು ರಾಜಕೀಯ ಹಿತಾಸಕ್ತಿಗಳೂ ಗಲಿಬಿಲಿ ಗೊಂಡಿದ್ದು ನಿಜ.

ಇದನ್ನೂ ಓದಿ: Mirley Chandrashekher Column: ನೀರೇ ಎಲ್ಲಾ, ನೀರಿಲ್ಲದೆ ಏನೂ ಇಲ್ಲ

ಪೇಪಾಲ್, ಟೆಸ್ಲಾ, ಸ್ಪೇಸ್ ಎಕ್ಸ್, ನ್ಯೂರೋ ಲಿಂಕ್, ಸ್ಟಾರ್ ಲಿಂಕ್‌ನಂಥ ಬೃಹತ್ ಉದ್ಯಮಗಳನ್ನು ಕಟ್ಟಿ ಬೆಳೆಸಿದ ಎಲಾನ್ ಮಸ್ಕ್, ಹೊಸ ಆವಿಷ್ಕಾರಗಳ ಬೆನ್ನತ್ತಿ ಔದ್ಯಮಿಕ ಜಗತ್ತಿನಲ್ಲಿ ಅವನ್ನು ಅನಾವರಣಗೊಳಿಸಲೆಂದು ಹಿಡಿದ ಹಠ ಸಾಧಿಸದೆ ವಿರಮಿಸದ ಛಲದಂಕ ಮಲ್ಲ! ಹಾಗಿಲ್ಲದಿದ್ದರೆ, ಬ್ಯಾಂಕಿಂಗ್ ವ್ಯವಸ್ಥೆಗೆ ಪರ್ಯಾಯವಾಗಿ ಹಣಕಾಸು ವರ್ಗಾವಣೆಯನ್ನು ಸಾಧ್ಯವಾಗಿಸಿದ ‘ಪೇಪಾ ಲ್’ನಂಥ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಅಸಾಧ್ಯವಾಗಿರುತ್ತಿತ್ತು.

ಅಷ್ಟೇಕೆ, ಟೆಸ್ಲಾ ಮೂಲಕ ವಿದ್ಯುತ್ ಚಾಲಿತ ವಾಹನಗಳು ಕೂಡ ಪೆಟ್ರೋಲಿಯಂ ಆಧರಿತ ವಾಹನ ಗಳೆದುರು ಸೆಡ್ಡು ಹೊಡೆದು ಜಗತ್ತಿನಲ್ಲಿ ವಿಶ್ವಾಸಾರ್ಹವೆನಿಸಿಕೊಳ್ಳುವುದರಲ್ಲಿ ಮಸ್ಕ್ ಅವರ ಪರಿಶ್ರಮವಿದೆ. ಈ ದಿಸೆಯಲ್ಲಿ ಅವರು ಎದುರಿಸಿದ್ದು, ಅದಾಗಲೇ ಆಟೋಮೊಬೈಲ್ ಕ್ಷೇತ್ರದಲ್ಲಿ ಬೇರೂರಿ ನಿಂತಿದ್ದ ದಿಗ್ಗಜರನ್ನೇ. ಎನಿಸಿದ್ದನ್ನು ಹಿಂದು-ಮುಂದು ನೋಡದೆ ಹೇಳುವ, ಹೇಳಿದ್ದನ್ನು ಸಾಧಿಸಿ ತೋರಿಸುವಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುವ ಹುಚ್ಚು ಸಾಹಸಕ್ಕೆ ಮಸ್ಕ್ ಸುಪ್ರಸಿದ್ಧ. ವಾದ-ವಿವಾದಗಳೇನೇ ಇರಲಿ, ‘ಆನೆ ನಡೆದದ್ದೇ ಹಾದಿ’ ಎನ್ನುವುದು ಟ್ರಂಪ್ ಸ್ವಭಾವ ಕೂಡ.

ಈ ಸ್ವಭಾವಗಳೇ ಇವರಿಬ್ಬರ ನಡುವಿನ ಬಾಂಧವ್ಯಕ್ಕೆ ಕಾರಣವಿರಲೂಬಹುದು ಎನ್ನಿ! ಈ ಬಾರಿಯ ಅಮೆರಿಕ ಚುನಾವಣೆಯ ಪೂರ್ವದಲ್ಲಿ ಮಸ್ಕ್ ನೇರಾನೇರ ಟ್ರಂಪ್ ಬೆಂಬಲಕ್ಕೆ ನಿಂತಿದ್ದು ವಿಶ್ವಾ ದ್ಯಂತ ಅಚ್ಚರಿ ತರಿಸಿತ್ತು. ಶ್ರೀಮಂತರು, ಉದ್ಯಮಿಗಳು ತೆರೆಮರೆಯಲ್ಲಿ ನಿಂತು ರಾಜಕಾರಣಿಗಳಿಗೆ ಶಕ್ತಿ ತುಂಬಿಸುವುದು ಸಾಮಾನ್ಯವೇ ಬಿಡಿ. ಅದರಲ್ಲೂ ಗೆಲ್ಲುವ ಕುದುರೆಯಾಗಿದ್ದರೆ, ಇನ್ನಷ್ಟು ಹೆಚ್ಚು ಬೆಂಬಲಿಸುವ ಉದ್ಯಮಿಗಳು ಸಾಕಷ್ಟಿರುತ್ತಾರೆ.

ಗೆದ್ದವರು ಅಧಿಕಾರ ವಹಿಸಿಕೊಂಡ ನಂತರ ಇವರೆಲ್ಲರೂ ಸರಕಾರಗಳಿಂದ ತನು-ಮನ-ಧನದ ಸಮರ್ಪಣೆಯನ್ನು ಬಡ್ಡಿ ಸಮೇತ ವಸೂಲಿ ಮಾಡದೇ ಇರುವವರಲ್ಲ! ಆದರೆ, ಇಲ್ಲಿ ತಮಗಾವ ರಾಜಕೀಯ ಆಕಾಂಕ್ಷೆಗಳಿಲ್ಲ ಎಂದ ಮಸ್ಕ್, ಮಿತಿಮೀರಿದ ಎಡಪಂಥೀಯ ನಿಲುವುಗಳಿಂದ ಸೆಟೆದು ನಿಂತು, ಟ್ರಂಪ್‌ರನ್ನು ಬೆಂಬಲಿಸುವ ಮೂಲಕ ತಮ್ಮ ಉದ್ಯಮ ಸಾಮ್ರಾಜ್ಯವನ್ನೇ ಪಣಕ್ಕಿಟ್ಟದ್ದು ನಿಜ!

ಈ ಬಾರಿಯ ಚುನಾವಣೆಯಲ್ಲಿ ಟ್ರಂಪ್ ಸೋತರೆ, ವಿರೋಧಿ ಡೆಮಾಕ್ರಟಿಗರ ಪಾಳಯವು ತಮ್ಮನ್ನು ಅಮೆರಿಕದಲ್ಲಿ ಬಿಡಿ, ಪ್ರಪಂಚದಲ್ಲೇ ಇರಲು ಬಿಡಲಿಕ್ಕಿಲ್ಲ ಎಂದು ಸ್ವತಃ ಮಸ್ಕ್ ಬಹಿರಂಗವಾಗಿ ಹೇಳಿ ಕೊಂಡಿದ್ದರು. ಕೆಲಸದ ವಿಷಯಕ್ಕೆ ಬಂದರೆ ಮಸ್ಕ್, ಊಟ-ನಿದ್ರೆ ಬಿಟ್ಟು ಕಂಪನಿಯಲ್ಲೇ ಉಳಿದಿದ್ದು ಕೆಲಸಗಾರರನ್ನೂ ಉಳಿಸಿಕೊಂಡು ಕೆಲಸದ ಬೆನ್ನತ್ತುವ ಅಸಾಮಾನ್ಯ ಬೇತಾಳ. ಈ ವಿಚಾರದಲ್ಲಿ ನಮ್ಮ ಇನ್ಫೋಸಿಸ್ ಮತ್ತು ಎಲ್ ಆಂಡ್ ಟಿ ಮುಖ್ಯಸ್ಥರ ನಿರೀಕ್ಷೆಗಳೇ ವಾಸಿ ಎಂಬು ದು ಮಸ್ಕ್‌ರ ಜತೆಗಿದ್ದು ದಣಿದ ಕೆಲವರ ಅಂಬೋಣ.

ಮಸ್ಕ್‌ರ ಆಟಾಟೋಪಗಳೇನಿದ್ದರೂ ಖಾಸಗಿ ವಲಯದಲ್ಲಿ; ಅವರು ಹೇಳಿದಷ್ಟು ಸುಲಭದಲ್ಲಿ ಸರಕಾರಿ ವಲಯದ ಇಲಾಖೆಗಳನ್ನು ಸುಧಾರಿಸುವುದು, ಕೆಲಸಗಾರರನ್ನು ತೆಗೆದುಹಾಕುವುದು ಸುಲಭವಲ್ಲ ಎಂಬ ಮಾತುಗಳು ಆರಂಭದಲ್ಲಿ ಕೇಳಿಬರುತ್ತಿದ್ದವು. ಆದರೆ, ‘ನುಡಿದಂತೆ ನಡೆದ’ ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆ DOGE ಮುಖ್ಯಸ್ಥರನ್ನಾಗಿ ಮಸ್ಕ್‌ರನ್ನೇ ನೇಮಿಸಿದ್ದಾರೆ. ಚಿಕ್ಕ ಪಡೆಯೊಂದನ್ನು ಕಟ್ಟಿಕೊಂಡ ಮಸ್ಕ್, ಬಲಾಢ್ಯ ಇಲಾಖೆಗಳ ಮೇಲೆ ಪ್ರಹಾರ ಆರಂಭಿಸಿದ್ದಾರೆ.

ವಾರ್ಷಿಕ 50 ಬಿಲಿಯನ್‌ಗೂ ಅಧಿಕ ಬಜೆಟ್ ಹೊಂದಿರುವ USAID (United States Agency for International Aids ) ಎಂಬ ಸಂಸ್ಥೆಯ ಮೇಲೆ ಸಕಾರಣಗಳನ್ನು ಮುಂದಿಟ್ಟು ಕೊಂಡು ಮುಗಿ ಬಿದ್ದಿದ್ದಾರೆ; ಇದು ವಿದೇಶಾಂಗ ವ್ಯವಹಾರಗಳ ಸಚಿವಾಲಯದಷ್ಟೇ ಸ್ವಾಯತ್ತತೆ ಹೊಂದಿರುವ ಸಂಸ್ಥೆ ಎಂಬುದು ನಿಮ್ಮ ಗಮನಕ್ಕೆ. ಈ ಸಂಸ್ಥೆಯ ವ್ಯವಹಾರ, ಲೆಕ್ಕಪತ್ರ ಗಳ ಅವಲೋಕನಕ್ಕೆಂದು ವಾಷಿಂಗ್ಟನ್‌ನಲ್ಲಿನ ಅದರ ಪ್ರಧಾನ ಕಚೇರಿಗೆ ‘ಡೋಜ್’ ತಂಡ ತೆರಳಿದಾಗ, ‘ನಿಮಗೆ ಸಾಂವಿಧಾನಿಕ ಮಾನ್ಯತೆ ಇಲ್ಲ’ ಎಂಬ ನೆಪವೊಡ್ಡಿ ಅದನ್ನು ಬಾಗಿಲಲ್ಲೇ ತಡೆಯುವ ಪ್ರಹಸನವೂ ನಡೆಯಿತು.

ಅದನ್ನೆದುರಿಸಿ ಪ್ರವೇಶ ಪಡೆದ ‘ಡೋಜ್’ ತಂಡವು, ಎರಡೇ ದಿನಗಳಲ್ಲಿ ಭಾರಿ ಪ್ರಮಾಣದ ಅವ್ಯವ ಹಾರವನ್ನು ಬಯಲಿಗೆಳೆದಿದೆ. ಸಂಸ್ಥೆಯ ಜಾಲತಾಣ, ಉದ್ಯೋಗಿಗಳ ಮಿಂಚಂಚೆಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ, ವಿದೇಶಿಗರೂ ಸೇರಿದಂತೆ ಸುಮಾರು 10 ಸಾವಿರ ಮಂದಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆಯಲ್ಲಿ ಸದ್ಯ 300 ಪ್ರಮುಖ ನೌಕರರನ್ನಷ್ಟೇ ಇರಿಸಿಕೊಳ್ಳಲಾಗಿದೆ.

USAID ಸಂಸ್ಥೆಯ ಮೂಲೋದ್ದೇಶಗಳಲ್ಲಿ, ವಿದೇಶಗಳಲ್ಲಿ ಅಮೆರಿಕದ ಹಿತಾಸಕ್ತಿಗಳನ್ನು ಬಲಪಡಿ ಸುವುದು ಮಾತ್ರವಲ್ಲದೆ, ಪ್ರಪಂಚದ ಒಳಿತಿಗೆ ಬೇಕಾದ ಅಂಶಗಳಿಗೆ ಒತ್ತಾಸೆಯಾಗಿ ನಿಲ್ಲುವುದು, ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಕಲ್ಪಿಸಿಕೊಡುವುದು ಸೇರಿವೆ. ಪೋಲಿಯೋ ನಿರ್ಮೂಲನೆ, ಹಸಿವು ನಿವಾರಣೆ, ಹಿಂದುಳಿದ ರಾಷ್ಟ್ರಗಳಲ್ಲಿನ ಸ್ವಚ್ಛತೆ, ಆರೋಗ್ಯ ರಕ್ಷಣೆಗೆ ಅಗತ್ಯ ಸಹಾಯ ನೀಡಿಕೆ, ಯುದ್ಧಪೀಡಿತ ವಲಯದ ಜನಜೀವನದ ಸುಧಾರಣೆ, ಅಲ್ಲಿ ಮೂಲಸೌಕರ್ಯ ನಿರ್ಮಾಣ ಕ್ಕೆ ನೆರವಾಗುವಂಥ ಉದಾತ್ತ ಗುರಿಗಳೂ ಇಲ್ಲಿವೆ.

ಸದ್ಯ ಈ ಸಂಸ್ಥೆಯ ಮೂಲಕ ಹೋಗುತ್ತಿರುವ ಬಹುತೇಕ ವಿದೇಶಿ ನೆರವುಗಳು ನಿಂತಿವೆ. ಅವಶ್ಯ ಮಾನವೀಯ ಬದ್ಧತೆಯ ನೆರವನ್ನು ವಿದೇಶಾಂಗ ಇಲಾಖೆಯ ಅಡಿಯಲ್ಲೇ ಮುಂದುವರಿಸುತ್ತೇವೆ ಎಂಬ ಆಶ್ವಾಸನೆಯನ್ನು ಅಮೆರಿಕ ಸರಕಾರ ನೀಡಿದೆ. ಇಂಥ ಉದಾತ್ತ ಕಲ್ಪನೆಯು ಈ ಸಂಸ್ಥೆಯ ಧ್ಯೇಯೋದ್ದೇಶದ ಭಾಗವಾಗಿದ್ದರೂ, ಇವೆಲ್ಲ ನಡೆಯಬೇಕಿರುವುದು ಅಮೆರಿಕದ ಹಿತಾಸಕ್ತಿಯ ಬೆಳವಣಿಗೆಗಳಿಗೆ ಪೂರಕವಾಗಿಯೇ ಎಂಬುದು ಗಮನಾರ್ಹ.

ಮುಂದುವರಿದ ದೇಶವೆನಿಸಿಕೊಂಡಿರುವ ಅಮೆರಿಕವು ವಿಶ್ವದ ಸ್ವಘೋಷಿತ ದೊಡ್ಡಣ್ಣ! ಜಗತ್ತಿ ನೆಲ್ಲೆಡೆ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದು, ವ್ಯಾಪಾರ-ವಹಿವಾಟುಗಳನ್ನು ಸಮೃದ್ಧವಾ ಗಿಸಿಕೊಳ್ಳುವುದು ಅದರ ಗುರಿ. ಹಾಗಾಗಿ, ‘ಅಮೆರಿಕ ಫಸ್ಟ್, ಬಾಕಿ ಎಲ್ಲಾ ನೆಕ್ಸ್ಟ್!’ ಎಂಬುದು ಅದರ ಗುರಿ.

ಖಿಖಅಐಈ ಕೂಡ ಈ ಗುರಿಯನ್ನು ಬಲಪಡಿಸಿಕೊಳ್ಳಲು ರೂಪಿಸಿದ ಸಂಸ್ಥೆಯೇ. ಜಗದೋದ್ಧಾರದ ಹೊರಮುಖದೊಂದಿಗೆ ಸ್ವಯಂ-ಉನ್ನತಿಯ ಮಹತ್ವಾಕಾಂಕ್ಷೆ ಕೂಡ ಇದರಲ್ಲಿದೆ. ಅಮೆರಿಕವು ಕೆಲವೊಮ್ಮೆ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗುವುದು ಈ ಮಹತ್ವಾಕಾಂಕ್ಷೆಗೆ ಪೂರಕ ವಾಗಿಯೇ! ಕೆಲ ದೇಶಗಳಲ್ಲಿನ ಸರಕಾರಗಳನ್ನು ಅಲ್ಲಾಡಿಸಿ ಉರುಳಿಸುವುದು, ತನ್ನ ಹಿತಾಸಕ್ತಿಗೆ ತಕ್ಕಂತೆ ನಡೆದುಕೊಳ್ಳುವವರನ್ನು ತೆರೆಮರೆಯಲ್ಲಿದ್ದೇ ಗದ್ದುಗೆಗೇರಿಸುವುದು ಕೂಡ ಅದರ ಭಾಗವೇ. ಅಂಥ ಯತ್ನಗಳ ಭಾಗವಾಗಿ, ವಿದೇಶಗಳಲ್ಲಿನ ಸ್ವಯಂಸೇವಾ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು (ಎನ್‌ಜಿಒ), ವಿಶ್ವವಿದ್ಯಾಲಯಗಳು, ವಿದೇಶಿ ನೆಲದ ಪ್ರಭಾವಿ ಪರಿಣತರುಗಳಿಗೆ ನೆರವು ನೀಡುವಿಕೆ, ವಿದೇಶಿ ನೆಲದಲ್ಲಿನ ಚರ್ಚುಗಳೊಂದಿಗೆ ಸಂಪರ್ಕ-ಸಂವಹನ-ಸಂಪನ್ಮೂಲಗಳ ಸಹಕಾರ ಒದಗಿಸು ವುದೂ ಈ ಸಂಸ್ಥೆಯ ಮೂಲಕವೇ ನಡೆಯುತ್ತಿತ್ತು.

ಹೀಗಿದ್ದೂ ಟ್ರಂಪ್-ಮಸ್ಕ್ ಜೋಡಿಗೆ ಈ ಸಂಸ್ಥೆಯ ಮೇಲೆ ಕೆಂಗಣ್ಣೇಕೆ? ಎಂಬ ಪ್ರಶ್ನೆ ಸಹಜ. ಅವ್ಯವ ಹಾರ, ಭ್ರಷ್ಟಾಚಾರಗಳ ಸಹಿತ, ಅಮೆರಿಕದ ಒಳಿತಿಗೆ ಒಗ್ಗದ ಎಡಪಂಥೀಯ ನಿಯಮಗಳಿಗೆ ಹಣದ ಹೊಳೆ ಹರಿಸಿದ ಕಾರಣವನ್ನು ‘ಡೋಜ್’ ಬಹಿರಂಗಪಡಿಸುತ್ತಿದೆ. ಶ್ವೇತಭವನದ ಮಾಧ್ಯಮ ಕಾರ್ಯ ದರ್ಶಿ ಕ್ಯಾರೋಲಿನ್ ಲೆವಿಟ್ಜ್ ಹಂಚಿಕೊಂಡ ಒಂದು ಸಣ್ಣ ಝಲಕ್‌ನ ಪ್ರಕಾರ, ಸೈಬೀರಿ ಯಾದಲ್ಲಿ ‘ಡೈವರ್ಸಿಟಿ ಮತ್ತು ಇನ್‌ಕ್ಲೂಷನ್’ ತರಬೇತಿಗಾಗಿ 1.5 ಮಿಲಿಯನ್ ಡಾಲರ್, ಐರ್ಲೆಂಡ್‌ನಲ್ಲಿ ಡಿಐಐ ಸಂಗೀತ ಕಾರ್ಯಕ್ರಮವೊಂದಕ್ಕೆ 70 ಸಾವಿರ ಡಾಲರ್, ಕೊಲಂಬಿಯಾ ದಲ್ಲಿ ತೃತೀಯ ಲಿಂಗಿಗಳ ಗೀತರೂಪಕದ ಪ್ರಸ್ತುತಿಗಾಗಿ 47 ಸಾವಿರ ಡಾಲರ್, ಪೆರುವಿನಲ್ಲಿ ‘ಡೈವರ್ಸಿಟಿ ಮತ್ತು ಇನ್‌ಕ್ಲೂಷನ್’ ತಿಳಿಸಿಕೊಡುವ ಚಿತ್ರಕಥೆಯ ಪುಸ್ತಕ ಪ್ರಕಟಣೆಗಾಗಿ 32 ಸಾವಿರ ಡಾಲರ್ ವೆಚ್ಚ ಮಾಡಲಾಗಿದೆ.

ಇವೆಲ್ಲ ಅಮೆರಿಕದ ಕರದಾತರ ಹಣದ ದುಂದುವೆಚ್ಚ ಎಂಬುದು ‘ಡೋಜ್’ ಮತ್ತು ಅಮೆರಿಕದ ಇಂದಿನ ಆಡಳಿತದ ಸ್ಪಷ್ಟಅಭಿಪ್ರಾಯ. ಇವಿಷ್ಟೇ ಅಲ್ಲದೆ, ಇರಾಕ್‌ನಲ್ಲಿನ ಸೇಸಮಿ ಸ್ಟ್ರೀಟ್ಷೋ ಪ್ರದರ್ಶನಕ್ಕೆ 20 ಮಿಲಿಯನ್ ಡಾಲರ್, ಈಜಿಪ್ಟ್‌ನಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕಾಗಿ 6 ಮಿಲಿಯನ್ ಡಾಲರ್, ವಿಯೆಟ್ನಾಂನಲ್ಲಿನ ತೃತೀಯ ಲಿಂಗಿ, ಸಲಿಂಗಿ ದಮನಿತರ ಸಾಮಾಜಿಕ ಸೇರ್ಪಡೆಯ ಅಗತ್ಯ ತಿಳಿಸುವ ಪ್ರಚಾರಕಾರ್ಯಕ್ಕೆ 1.5 ಮಿಲಿಯನ್ ಡಾಲರ್ ಹಣವನ್ನು
ಹಂಚಿ ಕೊಂಡಿದ್ದ ಮಾಹಿತಿಯೂ ಬಯಲಾಗಿದೆ.

ಸಮಾಜದಲ್ಲಿ ಗಂಡಸರು, ಹೆಂಗಸರು ಮಾತ್ರವಲ್ಲದೆ ತೃತೀಯ ಲಿಂಗಿಗಳೂ ಇದ್ದಾರೆ, ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ ಜವಾಬ್ದಾರಿ ಸಮಾಜದ್ದು ಎಂದು ತಿಳಿಸಿ ಕೊಡುವ
ತರಬೇತಿಗೆಂದು ಶ್ರೀಲಂಕಾದ ಪತ್ರಕರ್ತರಿಗೆ ನೀಡಲು ಈ ಸಂಸ್ಥೆಯು ಕಳೆದ ಕೆಲ ವರ್ಷಗಳಲ್ಲಿ ತೆತ್ತ ಹಣ ಸುಮಾರು 8 ಮಿಲಿಯನ್ ಡಾಲರ್! ಸಾಲದೆಂಬಂತೆ, ಕೋವಿಡ್ ವೈರಸ್‌ನ ಜನಕನೆಂಬ ಕುಖ್ಯಾತಿ ಪಡೆದ ಚೀನಾದ ವುಹಾನ್ ಲ್ಯಾಬ್‌ಗೂ 5 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ, ಅಲ್‌ಖೈದಾ ಸಂಘಟನೆಯ ಸಖ್ಯ ಹೊಂದಿದ ಉಗ್ರರಿಗೆ ಊಟದ ಪೂರೈಕೆಗಾಗಿ 10 ಮಿಲಿಯನ್ ಡಾಲರ್ ವ್ಯಯಿಸಲಾಗಿದೆ ಎಂಬ ಅಚ್ಚರಿಯ ಮಾಹಿತಿಗಳೂ ಹೊರಬಿದ್ದಿವೆ.

ಇವನ್ನೆಲ್ಲ ನೋಡಿದಾಗ, ಬಹಳಷ್ಟು ಹಣ ಪೋಲಾಗಿರುವುದಲ್ಲದೆ, ಸಂಸ್ಥೆಯ ಮೂಲೋದ್ದೇಶಕ್ಕೆ ವ್ಯತಿರಿಕ್ತವಾದ ಉದ್ದೇಶಕ್ಕೂ ಅದನ್ನು ಬಳಸಲಾಗಿದೆಯೆಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇಂಥ ಅನಗತ್ಯ ದುಂದುವೆಚ್ಚ ಮತ್ತು ಅದರಲ್ಲಿ ಅಡಗಿರುವ ಭ್ರಷ್ಟ ವ್ಯವಹಾರಗಳ ಸುಳಿಯನ್ನು ಕೆದಕಿ ಬಯಲು ಮಾಡುವುದೇ ಮಸ್ಕ್ ನೇತೃತ್ವದ ‘ಡೋಜ್’ತಂಡದ ಮೂಲಗುರಿ ಎಂಬುದು ಟ್ರಂಪ್‌ರ ಸ್ಪಷ್ಟನುಡಿ.

‘ಡೋಜ್’ನ ಇಂಥ ಯತ್ನಗಳಿಗೆ ಅಡೆತಡೆಗಳೇನೂ ಇಲ್ಲದಿಲ್ಲ. ‘ವ್ಯವಹಾರಸ್ಥರಾಗಿರುವ ಮಸ್ಕ್ ತಮ್ಮ ಸ್ವಂತ ವ್ಯವಹಾರದ ಲಾಭಕ್ಕಾಗಿ ಅಮೆರಿಕದ ಸರಕಾರವನ್ನೇ ಖರೀದಿಸಿಬಿಟ್ಟಿದ್ದಾರೆ’ ಎಂಬು ದರಿಂದ ಹಿಡಿದು, ‘ಅವರು ಜನರಿಂದ ಆಯ್ಕೆಯಾದವರಲ್ಲ, ಹಾಗಾಗಿ ಅವರ ಹುದ್ದೆಗೆ, ‘ಡೋಜ್’ ಸಂಸ್ಥೆಗೆ ಸಾವಿಧಾನಿಕ ಮಾನ್ಯತೆಯೇ ಇಲ್ಲ’ ಎಂಬಲ್ಲಿಯವರೆಗಿನ ವಾದ-ವಿವಾದಗಳು ಕೋರ್ಟಿನ ಅಂಗಳ ತಲುಪಿವೆ.

‘ಸರಕಾರಿ ಸಂಬಂಽತ ಗೌಪ್ಯ ಮಾಹಿತಿ ತೆಗೆಯುವ ಅಽಕಾರ ಮಸ್ಕ್‌ಗೆ ಇಲ್ಲ’ ಎಂಬ ತೀರ್ಪು ಸದ್ಯ ಕೆಲವು ಸ್ಥಳೀಯ ನ್ಯಾಯಾಲಯಗಳಿಂದ ಹೊಮ್ಮಿವೆ. ತಮ್ಮ ಹಾದಿ ಸುಗಮವಿಲ್ಲದಿದ್ದರೂ, ಟ್ರಂಪ್-ಮಸ್ಕ್ ಜೋಡಿಯು ಆಡಳಿತದೊಳಗಿನ ಹುಳುಕು-ಕೊಳಕನ್ನು ಹೊರಹಾಕದೆ ಸದ್ಯಕ್ಕಂತೂ ವಿರಮಿಸುವಂತೆ ಕಾಣುತ್ತಿಲ್ಲ.

‘ಅಮೆರಿಕದ ಅನುದಾನಗಳ ಸಂಸ್ಥೆಯದ್ದು ಮಾತ್ರವಲ್ಲದೆ, ಬೇರೆ ಬೇರೆ ಇಲಾಖೆಗಳ ಹುಳುಕು, ಭ್ರಷ್ಟಾಚಾರವನ್ನು ಅಮೆರಿಕದ ಪ್ರಜೆಗಳೆದುರು ತೆರೆದಿಡುವುದಕ್ಕೆ ಜನ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದು, ನಾನು ಅದನ್ನು ನಿರ್ವಹಿಸಿ ನಮ್ಮ ಅರ್ಥವ್ಯವಸ್ಥೆಯನ್ನು ಗಟ್ಟಿಮಾಡಿ ಅಮೆರಿಕವನ್ನು ಮತ್ತೊಮ್ಮೆ ಬಲಾಢ್ಯ ದೇಶವನ್ನಾಗಿಸುತ್ತೇನೆ’ ಎಂಬುದು ಟ್ರಂಪ್‌ರ ಸದ್ಯದ ರಂಪ!ಇಷ್ಟೇ ಅಲ್ಲದೆ, ಹಿರಿಯರ, ಪಿಂಚಣಿದಾರರ ಸಾಮಾಜಿಕ ಭದ್ರತೆಗೆ ಮುಡಿಪಾಗಿಟ್ಟ ಹಣ, ಮಾಜಿ ಸೈನಿಕರ ಕಲ್ಯಾಣ ನಿಧಿಯ ಹಣವನ್ನೂ ಹಿಂದಿನ ಸರಕಾರವು ದುರ್ಬಳಕೆ ಮಾಡಿರುವುದನ್ನು ಬಯಲಿಗೆಳೆಯಲಾಗಿದೆ.

ಅಮೆರಿಕದ ಬಜೆಟ್‌ನಲ್ಲಿ ಸಿಂಹಪಾಲು ಪಡೆಯುವ ಅಲ್ಲಿನ ರಕ್ಷಣಾ ಇಲಾಖೆಯ ಖರ್ಚುವೆಚ್ಚಗಳು ಕಳೆದ ಹಲವು ವರ್ಷಗಳಿಂದ ಲೆಕ್ಕ ಪರಿಶೋಧನೆಗೆ ಒಳಪಡಲಿಲ್ಲವಂತೆ. ನುಸುಳುಕೋರರನ್ನು ಪೊರೆಯುತ್ತಿದ್ದ ಹಿಂದಿನ ಸರಕಾರ, ನ್ಯೂಯಾರ್ಕ್‌ನ ಕೆಲ ಪಂಚತಾರಾ ಹೋಟೆಲ್ ಗಳಿಗೆ ಅಕ್ರಮ ವಲಸಿಗರ ಆರೈಕೆಗೆಂದು 59 ಮಿಲಿಯನ್ ಡಾಲರ್ ಪಾವತಿಸಿರುವುದು, ಸುಮಾರು 150 ವರ್ಷ ಗಳಷ್ಟು ಹಿರಿಯರಾದ (ಪ್ರಾಯಶಃ ಅದಾಗಲೇ ಸ್ವರ್ಗದಲ್ಲಿ ಬೆಚ್ಚಗೆ ಮಲಗಿರುವ) ಹಲವರಿಗೂ ಸಾಮಾಜಿಕ ಭದ್ರತೆಯ ಪಿಂಚಣಿಯ ಪಾವತಿಯಾಗುತ್ತಿರುವುದೂ ಬಯಲಿಗೆ ಬಂದಿದೆ.

ಹೀಗೆ ಹಣ ಪಡೆದ ಹಲವು ಸಂಸ್ಥೆಗಳು ಬಲಾಢ್ಯ ರಾಜಕಾರಣಿಗಳೊಂದಿಗೆ ನಂಟು ಹೊಂದಿರುವುದು ಪಟ್ಟಭದ್ರರ ನಿದ್ರೆ ಕೆಡಿಸುತ್ತಿದೆ. ಒಟ್ಟಿನಲ್ಲಿ, ಅಮೆರಿಕದಂಥ ಮುಂದುವರಿದ ದೇಶದಲ್ಲೂ ಕುಟುಕುವ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ಮೌಖಿಕ ಆದೇಶಗಳ ಮೇಲೆ ಸರಕಾರಿ ಹಣದ ದುರ್ಬಳಕೆ, ‘ಬಿಲ್-ವಿದ್ಯಾ’ ಪರಿಣತಿ ಎಲ್ಲವೂ ಇವೆ! ಈ ತನಕ ನಡೆಯುತ್ತಿದ್ದ (ಅ)ವ್ಯವಹಾರಗಳೆಲ್ಲವೂ ಬಟಾಬಯಲಾಗುತ್ತಿವೆ. ಹಾಗಾಗಿ ಅಮೆರಿಕದಲ್ಲೀಗ ‘ಡೋಜ್’ನದೇ ಗೌಜು!

(ಲೇಖಕರು ಹವ್ಯಾಸಿ ಬರಹಗಾರರು)