ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಹಂಗಿನರಮನೆಗಿಂತ ವಿಂಗಡದ ಗುಡಿಲೇಸು...

ಬದುಕಿನಲ್ಲಿ ವೈಭೋಗಗಳ ಆಸೆಗೆ ನಾವು ಅನೇಕ ಬಾರಿ ಕೆಲವರ ಹಂಗಿನಲ್ಲಿ ಬೀಳುತ್ತೇವೆ. ನೆನಪಿರಲಿ, ಯಾರೂ ನಮಗೆ ಅನಗತ್ಯವಾಗಿ ಸಹಾಯ ಮಾಡುವುದಿಲ್ಲ. ಅವರಿಗೆ ನಮ್ಮಿಂದ ಏನೋ ಅನುಕೂಲವಾಗುತ್ತಿರುತ್ತದೆ. ಆದ್ದರಿಂದಲೇ ಅವರು ನಮ್ಮನ್ನು ಅತಿಯಾಗಿ ಹೊಗಳಿ, ಉಡುಗೊರೆಗಳನ್ನು ನೀಡುತ್ತಾ ನಮಗೆ ವಿಶೇಷ ಮರ್ಯಾದೆ ಕೊಡುತ್ತಾರೆ.

Roopa Gururaj Column: ಹಂಗಿನರಮನೆಗಿಂತ ವಿಂಗಡದ ಗುಡಿಲೇಸು...

-

ಒಂದೊಳ್ಳೆ ಮಾತು

ಸಂತ ಕವಿಯೊಬ್ಬರು ತತ್ವ ಪದಗಳನ್ನು ಹಾಡಿಕೊಂಡು, ಭಿಕ್ಷಾಟನೆ ಮಾಡಿಕೊಂಡು, ಪುಟ್ಟ ಗುಡಿಸಲೊಂದರಲ್ಲಿ ಜೀವನ ನಡೆಸುತ್ತಿದ್ದರು. ಅವರು ಹೇಳುತ್ತಿದ್ದ ತತ್ವ ಪದಗಳು ತುಂಬಾ ಅರ್ಥವತ್ತಾಗಿದ್ದು ಸತ್ಯದಿಂದ ಕೂಡಿರುತ್ತಿದ್ದವು.

ಊರಿನ ಜನರೆ ಅವರ ತತ್ವ ಪದಗಳನ್ನು ಕೇಳಲು ಯಾವಾಗಲೂ ಕಾತುರರಾಗಿರುತ್ತಿದ್ದರು. ಈ ಸಂತರ ವಿಚಾರ ಆ ಊರಿನ ರಾಜನ ಕಿವಿಗೂ ಬಿದ್ದು, ಅವರ ತತ್ವ ಪದಗಳನ್ನು ಕೇಳಲು ತವಕಿಸಿ ಸಂತರಿದ್ದಲ್ಲಿಗೆ ಬಂದನು. ಸಂತರು ಹೇಳುತ್ತಿದ್ದ ತತ್ವ ಪದಗಳು ರಾಜನ ಮನಸ್ಸಿಗೆ ಬಹಳವಾಗಿ ಹಿಡಿಸಿ “ನಿಮ್ಮಂಥ ಜ್ಞಾನಿಗಳು ನನ್ನ ರಾಜ್ಯದಲ್ಲಿರುವುದೇ ನನಗೊಂದು ಹೆಮ್ಮೆಯ ವಿಷಯ. ನೀವು ಕೃಪೆ ಮಾಡಿ ನನ್ನ ಆಸ್ಥಾನಕ್ಕೆ ಬರಬೇಕು" ಎಂದು ಒತ್ತಾಯ ಮಾಡಿದನು.

ರಾಜನ ಒತ್ತಾಯಕ್ಕೆ ಕಟ್ಟುಬಿದ್ದು ಸಂತರು ಅವನೊಂದಿಗೆ ಅರಮನೆಗೆ ಹೋಗಲು ಒಪ್ಪಿ ಕೊಂಡರು. ರಾಜನು ಸಂತರನ್ನು ಸಕಲ ರಾಜಮರ್ಯಾದೆಯಿಂದ ಅರಮನೆಗೆ ಪದಗಳ ನ್ನು ದಿನ ದಿನವೂ ಎಲ್ಲರೂ ಕೇಳಿ ಸಂತೋಷಪಟ್ಟರು. ಅಷ್ಟೇ ಅಲ್ಲದೆ, ಹೊರ ರಾಜ್ಯದ ರಾಜನ ಅನೇಕ ಸ್ನೇಹಿತರು ಕೂಡಾ ಸಂತರ ತತ್ವ ಪದಗಳನ್ನು ಕೇಳಲೆಂದೇ ಇವನ ಆಸ್ಥಾನಕ್ಕೆ ಬರಲು ಶುರುಮಾಡಿದರು. ಈ ಸಂತಕವಿಗಳಿಂದಾಗಿ ಬಹಳ ಪ್ರಸಿದ್ಧನಾದ ರಾಜನಿಗೆ ಈಗ ಸ್ವಲ್ಪ ಅಹಂಕಾರ ಶುರುವಾಯಿತು.

ಇದನ್ನೂ ಓದಿ: Roopa Gururaj Column: ಮುಷ್ಟಿಯಲ್ಲಿ ಜೀವನದ ಪಾಠವನ್ನು ತಿಳಿಸಿದ ಗುರು

ಯಾರಾದರೂ ಸಂತರ ತತ್ವ ಪದಗಳನ್ನು ಕೇಳಲು ಬಂದಾಗ ರಾಜನು, “ಆ ತತ್ವಪದ ಬೇಡ ಇದು ಹೇಳಿ, ಅದು ಹೇಳಿ" ಎಂದು ಸಂತರಿಗೆ ಆಜ್ಞೆ ಮಾಡಲು ಶುರು ಮಾಡಿದ. ಒಂದೆರಡು ಸಲ ಸಂತರಿಗೆ ಮುಜುಗರವಾದರೂ ರಾಜ ತಮಗೆ ಆಶ್ರಯ ಕೊಟ್ಟಿರುವುದನ್ನು ನೆನೆದು ಸುಮ್ಮನಾದರು. ಆದರೆ ರಾಜನ ಅಹಂಕಾರ ಮಿತಿ ಮೀರಿತು, ಸಂತರ ಮೇಲೆ ದಬ್ಬಾಳಿಕೆ ದಿನದಿಂದ ದಿನಕ್ಕೆ ಜಾಸ್ತಿಯಾಗತೊಡಗಿತು. ಇದು ಕವಿ ಸಂತರಿಗೆ ಕಿರಿಕಿರಿಯಾಗಿ ತುಂಬಾ ಚಿಂತಿಸುವಂತೆ ಮಾಡಿತು.

ಅವರು ತಮಗೆ ತಾವೇ ಹಳಿದುಕೊಂಡು, “ಇದು ನನ್ನದೇ ತಪ್ಪು. ನಾನೆಂಥಾ ಮೂರ್ಖ. ರಾಜ ಕರೆದನೆಂದು ನಾನೂ ರಾಜಾಶ್ರಯವನ್ನು ಬಯಸಿ ಬಂದೆ. ಬಹುಶಃ ನನಗೂ ಎಲ್ಲಾ ಅರಮನೆಯ ರುಚಿ ನೋಡಬೇಕೆಂಬ ಆಸೆ ಬಂದಿರಬೇಕು, ಅದಕ್ಕೆ ಈಗ ನನಗೆ ತಕ್ಕ ಶಾಸ್ತಿ ಯೇ ಆಯಿತು.

ನನ್ನ ಪುಟ್ಟ ಗುಡಿಸಲಿನಲ್ಲಿ ಎಷ್ಟು ಆನಂದವಾಗಿ ಸ್ವಚ್ಛಂದವಾಗಿ ನನ್ನ ಪಾಡಿಗೆ ನಾನು ಇದ್ದೆ. ಇಲ್ಲಿ ನನ್ನ ಸ್ಥಿತಿಯು ಹಕ್ಕಿಯೊಂದನ್ನು ಚಿನ್ನದ ಪಂಜರದಲ್ಲಿ ಇರಿಸಿದಂತೆ ಆಗಿದೆ. ಅದೆಷ್ಟೇ ಉಪಚಾರ ಮಾಡಿ ನನ್ನನ್ನು ನೋಡಿಕೊಂಡರೂ ಈ ಬಂಧನ ಉಸಿರು ಕಟ್ಟುತ್ತಿದೆ. ಇನ್ನೊಂದು ಕ್ಷಣವೂ ಈ ರಾಜನ ಅಥವಾ ಇನ್ಯಾರ ಹಂಗಿನಲ್ಲೂ ಇರಕೂಡದು" ಎಂದು ತೀರ್ಮಾನಿಸಿ ಯಾರಿಗೂ ಹೇಳದಂತೆ, ಅರಮನೆಯನ್ನು ತ್ಯಜಿಸಿ ಅಲ್ಲಿಂದ ಬಹುದೂರ ಹೊರಟುಹೋದರು.

ಬದುಕಿನಲ್ಲಿ ವೈಭೋಗಗಳ ಆಸೆಗೆ ನಾವು ಅನೇಕ ಬಾರಿ ಕೆಲವರ ಹಂಗಿನಲ್ಲಿ ಬೀಳುತ್ತೇವೆ. ನೆನಪಿರಲಿ, ಯಾರೂ ನಮಗೆ ಅನಗತ್ಯವಾಗಿ ಸಹಾಯ ಮಾಡುವುದಿಲ್ಲ. ಅವರಿಗೆ ನಮ್ಮಿಂದ ಏನೋ ಅನುಕೂಲವಾಗುತ್ತಿರುತ್ತದೆ. ಆದ್ದರಿಂದಲೇ ಅವರು ನಮ್ಮನ್ನು ಅತಿಯಾಗಿ ಹೊಗಳಿ, ಉಡುಗೊರೆಗಳನ್ನು ನೀಡುತ್ತಾ ನಮಗೆ ವಿಶೇಷ ಮರ್ಯಾದೆ ಕೊಡುತ್ತಾರೆ.

ನಾವು ಅವರ ಈ ನಡವಳಿಕೆಯನ್ನು ಕಂಡು ಅವರು ನಮ್ಮ ಗುಣವನ್ನು ಪ್ರೋತ್ಸಾಹಿಸು ತ್ತಿದ್ದಾರೆ ಎಂದು ಉಬ್ಬಿ ಹೋಗಿ, ಅವರಿಗೆ ಅತಿ ಹತ್ತಿರದವರಾಗಿಬಿಡುತ್ತೇವೆ. ಆದರೆ ನಿಧಾನ ವಾಗಿ ಉಡುಗೊರೆಗಳನ್ನು ನೀಡುತ್ತಾ ನಮ್ಮನ್ನು ಅವರ ಹಿಡಿತದಲ್ಲಿ ಇರಿಸಿಕೊಳ್ಳು ತ್ತಾರೆ.

ಅವರಿಂದ ಅನಗತ್ಯವಾಗಿ ಬಹಳ ಸಹಾಯಗಳನ್ನು ಪಡೆದ ನಾವು ಒಂದು ರೀತಿ ಅವರ ಹಂಗಿನಲ್ಲಿ ಇರುತ್ತೇವೆ. ನಂತರ ಅವರು ಕೇಳಿದ ಚಿಕ್ಕ ಪುಟ್ಟ ವಿಷಯಕ್ಕೆ ಕೂಡ ಮನಸಿರಲಿ ಇಲ್ಲದಿರಲಿ ಒಪ್ಪಿಕೊಳ್ಳಬೇಕಾಗುತ್ತದೆ. ಆದ್ದರಿಂದ, ದಯವಿಟ್ಟು ಅನಗತ್ಯವಾಗಿ ಸಹಾಯ, ಉಡುಗೊರೆಗಳನ್ನು ಪಡೆಯಬೇಡಿ.

ಒಂದಲ್ಲಾ ಒಂದು ದಿನ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸ್ವತಂತ್ರ ಮನೋಭಾವ, ಆತ್ಮ ವಿಶ್ವಾಸದ ಬದುಕು ಇದು ನಾವೇ ನಮ್ಮ ಬದುಕಿಗೆ ಕೊಟ್ಟುಕೊಳ್ಳುವ ದೊಡ್ಡ ಉಡುಗೊರೆ ಯಾಗಿದೆ ಎಂಬುದನ್ನು ಮರೆಯದಿರೋಣ...