ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vivek Bhat Column: ಎತ್ತಿನ ಗಾಡಿಯಲ್ಲಿ ಸಾಗಿ ಬಂದ ೨ ಲಕ್ಷ ಕೋಟಿಯ ಕನಸು!

ವಿವರಗಳಿಗೆ ಹೋಗುವ ಮೊದಲು, ಒಂದು ಸಾಫ್ಟ್‌ʼವೇರ್ ಪ್ರೋಗ್ರಾಂ ಹೇಗೆ ತಯಾರಾಗಿ ಜನಸಾಮಾನ್ಯರ ಕೈ ತಲುಪುತ್ತದೆ ಅನ್ನುವುದನ್ನು ಸರಳವಾಗಿ ಹೇಳುತ್ತೇನೆ. ಇಂದು ನಿಮ್ಮ ಬ್ಯಾಂಕ್ ವೆಬ್‌ಸೈಟ್, ಜಿ-ಮೇಲ್, ಅಥವಾ ನೀವು ಬಳಸುವ ಯಾವುದೇ ಮೊಬೈಲ್ ಆಪ್ ತೆರೆದಾಗ, ಅದರ ಹಿಂದೆ ಏನಿದೆ ಅಂದರೆ- ಬೆಂಗಳೂರಿನ (ಅಥವಾ ಯಾವುದೇ ಊರಿನ) ಒಬ್ಬ ಇಂಜಿನಿಯರ್ ತನ್ನ ಕಂಪ್ಯೂಟರ್‌ನಲ್ಲಿ ಕೋಡ್ ಬರೆದು, ಡಿಪ್ಲಾಯ್ (Deploy) ಎಂಬ ಒಂದು ಬಟನ್ ಒತ್ತಿದ್ದಾನೆ

ಎತ್ತಿನ ಗಾಡಿಯಲ್ಲಿ ಸಾಗಿ ಬಂದ ೨ ಲಕ್ಷ ಕೋಟಿಯ ಕನಸು!

-

Profile
Ashok Nayak Aug 23, 2026 5:00 AM

ಕ್ರಾಂತಿಪುರುಷ

- ವಿವೇಕ್ ಭಟ್

ಆಗ 4, 2023ರಂದು ನಾಗರಾಜನ್ ವಿಠ್ಠಲ್ ಎಂಬ 85 ವರ್ಷದ ವ್ಯಕ್ತಿ ಚೆನ್ನೈನಲ್ಲಿ ನಿಧನರಾದರು. ಹೆಚ್ಚಿನ ಪತ್ರಿಕೆಗಳಲ್ಲಿ ಮಾಜಿ ಸೆಂಟ್ರಲ್ ವಿಜಿಲೆನ್ಸ್ ಕಮಿಷನರ್ ಅಂತ ಸಣ್ಣ ಸುದ್ದಿ ಬಂತು. ಆದರೆ ಈ ಮನುಷ್ಯ ಇಲ್ಲದಿದ್ದರೆ- ದೇಶದ ಹಲವು ದೊಡ್ಡ ಐಟಿ ಕಂಪನಿಗಳು ಇವತ್ತಿನ ರೂಪದಲ್ಲಿ ಇರುತ್ತಿರಲಿಲ್ಲ. ಮತ್ತು ಬೆಂಗಳೂರು ಅಂದರೆ ಐಟಿ/ ಬಿಟಿ ಎಂಬ ಹೆಸರು ಹುಟ್ಟುತ್ತಿರಲಿಲ್ಲ. ಎಕ್ಸ್ (ಟ್ವಿಟರ್) ನಲ್ಲಿ ಪರಿಮಲ್ (Fintech03) ಅವರ ಒಂದು ವಿಸ್ತೃತ ಪೋಸ್ಟ್ ಮೂಲಕ ಅವರ ಹೆಸರು ಮತ್ತೆ ಕಣ್ಣಿಗೆ ಬಿತ್ತು. ನಾನು ಸ್ವತಃ ಐಟಿ ಉದ್ಯೋಗದಲ್ಲಿರುವುದರಿಂದ ಅವರ ಕೊಡುಗೆಯ ಬಗ್ಗೆ ಕುತೂಹಲ ಇನ್ನೂ ಹೆಚ್ಚಾಯಿತು. ಇನ್ನಷ್ಟು ಜನರೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಮೂಲ ಲೇಖಕರ ಅನುಮತಿ ಪಡೆದು, ಅದರ ಸಾರವನ್ನು ಉಳಿಸಿಕೊಂಡು ಎನ್.ವಿಠ್ಠಲ್ ಅವರ ಕುರಿತ ನುಡಿನಮನ ಇಲ್ಲಿದೆ.

ವಿವರಗಳಿಗೆ ಹೋಗುವ ಮೊದಲು, ಒಂದು ಸಾಫ್ಟ್‌ʼವೇರ್ ಪ್ರೋಗ್ರಾಂ ಹೇಗೆ ತಯಾರಾಗಿ ಜನಸಾಮಾನ್ಯರ ಕೈ ತಲುಪುತ್ತದೆ ಅನ್ನುವುದನ್ನು ಸರಳವಾಗಿ ಹೇಳುತ್ತೇನೆ. ಇಂದು ನಿಮ್ಮ ಬ್ಯಾಂಕ್ ವೆಬ್‌ಸೈಟ್, ಜಿ-ಮೇಲ್, ಅಥವಾ ನೀವು ಬಳಸುವ ಯಾವುದೇ ಮೊಬೈಲ್ ಆಪ್ ತೆರೆದಾಗ, ಅದರ ಹಿಂದೆ ಏನಿದೆ ಅಂದರೆ- ಬೆಂಗಳೂರಿನ (ಅಥವಾ ಯಾವುದೇ ಊರಿನ) ಒಬ್ಬ ಇಂಜಿನಿಯರ್ ತನ್ನ ಕಂಪ್ಯೂಟರ್‌ನಲ್ಲಿ ಕೋಡ್ ಬರೆದು, ಡಿಪ್ಲಾಯ್ (Deploy) ಎಂಬ ಒಂದು ಬಟನ್ ಒತ್ತಿದ್ದಾನೆ. ಆ ಕ್ಷಣದ ಅದು ಇಂಟರ್‌ನೆಟ್ ಮೂಲಕ ಅಮೆರಿಕ, ಜಪಾನ್, ಯಾವ ದೇಶಕ್ಕಾದರೂ ಹೋಗಿ ಕೆಲಸ ಶುರು ಮಾಡುತ್ತದೆ. ವೆಬ್‌ಸೈಟ್ ಅಪ್‌ಡೇಟ್, ಮೊಬೈಲ್ ಆಪ್ ಬಿಡುಗಡೆ, ಅಥವಾ ಬ್ಯಾಂಕಿಂಗ್ ಸಾಫ್ಟ್‌ʼವೇರ್ ಅನ್ನು ಬಳಕೆದಾರರಿಗೆ ತಲುಪಿಸುವುದೇ Deploy. ಕ್ಷಣಾರ್ಧದ ಕೆಲಸ. ಒಂದು ಕ್ಲಿಕ್ ಅಷ್ಟೇ.

ಇದನ್ನೂ ಓದಿ: Vivek Bhat Column: ಭಾರತೀಯ ಪೌರತ್ವ ಪರೀಕ್ಷೆ ಇದ್ದರೆ ನೀವು ಪಾಸ್‌ ಆಗ್ತೀರಾ ?

ಆದರೆ 1985ರಲ್ಲಿ? ಬಿ ಕ್ಲಿಕ್ ಇರಲಿಲ್ಲ. ಆ ಬಟನ್ ಇರಲಿಲ್ಲ. ಆ ವ್ಯವಸ್ಥೆಯೇ ಇರಲಿಲ್ಲ. ಬೆಂಗಳೂರಿನ ಒಬ್ಬ ಇಂಜಿನಿಯರ್ ಅಮೆರಿಕದ ಗ್ರಾಹಕನಿಗೆ ಕೋಡ್ ಬರೆದಿದ್ದ ಅಂದುಕೊಳ್ಳಿ. ಡಿಪ್ಲಾಯ್ ಮಾಡಲು ಅವನು ಏನು ಮಾಡಬೇಕಿತ್ತು ಅಂದರೆ- ಕೋಡ್ ಅನ್ನು ಮ್ಯಾಗ್ನೆಟಿಕ್ ಕಂಪ್ಯೂಟರ್ ಟೇಪ್ ಮೇಲೆ ಮುದ್ರಿಸಬೇಕು. ಅಂದಹಾಗೆ ಈ ಮ್ಯಾಗ್ನೆಟಿಕ್ ಕಂಪ್ಯೂಟರ್ ಟೇಪ್ ಅಂದರೆ, ಹಳೆಯ ಕಾಲದ ಆಡಿಯೊ ಕ್ಯಾಸೆಟ್ ನೆನಪಿದೆಯಾ? ಹಾಡು ರೆಕಾರ್ಡ್ ಮಾಡಲು ಟೇಪ್ ಬಳಸುತ್ತಿದ್ದೇವಲ್ಲ- ಅದೇ ತರಹದ ಇನ್ನೂ ಅಗಲವಾದ ಟೇಪ್‌ನನ ಮೇಲೆ, ಹಾಡಿನ ಬದಲು ಕಂಪ್ಯೂಟರ್ ಪ್ರೋಗ್ರಾಂ ಅನ್ನು ರೆಕಾರ್ಡ್ ಮಾಡಿ, ಅದನ್ನು ಪೆಟ್ಟಿಗೆಯಲ್ಲಿ ಹಾಕಿ, ವಿಮಾನ ನಿಲ್ದಾಣಕ್ಕೆ ಓಡಬೇಕು. ಅಟ್ಲಾಂಟಿಕ್ ಸಾಗರದಾಚೆ 9000 ಮೈಲಿ ದೂರ ವಿಮಾನದಲ್ಲಿ ಕಳಿಸಬೇಕು. ನಂತರ ವಾರಗಟ್ಟಲೆ ಕಾಯಬೇಕು- ಕಂಪೈಲ್ ಆಯ್ತಾ ಇಲ್ವಾ ಅಂತ (Compile ಅಂದರೆ ಕೋಡ್ ಸರಿ ಇದೆಯಾ ಇಲ್ಲವಾ ಅಂತ ಕಂಪ್ಯೂಟರ್ ಪರೀಕ್ಷೆ ಮಾಡುತ್ತದೆ). ತಪ್ಪಿದ್ದರೆ ಸರಿಪಡಿಸಿ ಮತ್ತೆ ಕಳಿಸಬೇಕು. ಇದು ತಮಾಷೆ ಅಥವಾ ಅತಿರೇಕ ಅಲ್ಲ. 1985ರ ಭಾರತೀಯ ಸಾಫ್ಟ್‌ʼವೇರ್ ಉದ್ಯಮದ ದೈನಂದಿನ ವಾಸ್ತವ.

ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ (ಟಿಐ) ಎಂಬ ಅಮೆರಿಕದ ಕಂಪನಿ ಈ ವ್ಯವಸ್ಥೆಯನ್ನು ಬದಲಾಯಿಸಲು ಹೊರಟಿತು. ಅವರ ಯೋಜನೆ ಹೀಗಿತ್ತು- ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಸೋನಾ ಟವರ್ಸ್ ಮತ್ತು ಡಸ್, ಟೆಕ್ಸಾಸ್‌ನ ಜಾಗತಿಕ ಪ್ರಧಾನ ಕಚೇರಿಯ ನಡುವೆ ಒಂದು ನೇರ ಸಂಪರ್ಕ ಕಲ್ಪಿಸಬೇಕು. ಹೇಗೆ? ಒಂದು ಸ್ಯಾಟಲೈಟ್ ಡಿಶ್ ಆಂಟೆನಾವನ್ನು ಸೋನಾ ಟವರ್ಸ್ ಕಟ್ಟಡದ ಮೇಲೆ ಸ್ಥಾಪಿಸಿ, ಅಂತರಿಕ್ಷದಲ್ಲಿರುವ ಉಪಗ್ರಹದ ಮೂಲಕ ಡಸ್‌ಗೆ ಡೇಟಾ ಕಳಿಸುವುದು. ಇದು ಖಾಸಗಿ ಸ್ಯಾಟಲೈಟ್ ಲಿಂಕ್. ‌

ಎರಡು ಕಟ್ಟಡಗಳ ನಡುವೆ ಆಕಾಶದ ಮೂಲಕ ಒಂದು ನೇರ ಸೇತುವೆ ಕಟ್ಟಿದ ಹಾಗೆ. ಆ ಸೇತುವೆಯಲ್ಲಿ ಡೇಟಾ ಓಡಾಡಬಹುದಾದ ವೇಗ? 64 ಕೆಬಿಪಿಎಸ್. ಈ ಸಂಖ್ಯೆ ಅರ್ಥವಾಗ ಬೇಕಾದರೆ- ಇಂದು ನಿಮ್ಮ ಮನೆಯ ವೈಫೈ ಸಾಮಾನ್ಯವಾಗಿ 100-300 ಎಂಬಿಪಿಎಸ್ ಇರುತ್ತದೆ. ಅಂದರೆ 64 ಕೆಬಿಪಿಎಸ್‌ನ ಸುಮಾರು 2000ರಿಂದ 5000 ಪಟ್ಟು ವೇಗ. ಒಂದು ಸಣ್ಣ ಫೋಟೋ ಕಳಿಸಲೂ ಆ ಕಾಲದಲ್ಲಿ ನಿಮಿಷಗಳು ಬೇಕಾಗುತ್ತಿತ್ತು. ಇಂದು ಕ್ಷಣದಲ್ಲಿ ತಲುಪುತ್ತದೆ. ಆದರೆ 1985ರಲ್ಲಿ 64 ಕೆಬಿಪಿಎಸ್ ಅಂದರೆ- ಬಾಹ್ಯಾಕಾಶ ಯುಗದ ತಂತ್ರಜ್ಞಾನ. ಆ ಕಾಲಕ್ಕೆ ಇದು ಅತ್ಯಾಧುನಿಕ.

Screenshot_2

ಅವರ ಯೋಜನೆಯೇನೋ ಸರಿ ಇತ್ತು, ಆದರೆ ಇದಕ್ಕೆ ಅನುಮತಿ ಬೇಕ? 1985ರ ಭಾರತದಲ್ಲಿ ಒಂದು ಖಾಸಗಿ ವಿದೇಶಿ ಕಂಪನಿ ಅಂತಾರಾಷ್ಟ್ರೀಯ ದೂರಸಂಪರ್ಕ (telecommunication) ಸಾಧನಗಳನ್ನು ಹೊಂದಲು ಯಾವ ನಿಯಮವೂ ಇರಲಿಲ್ಲ. ಅಂತಾರಾಷ್ಟ್ರೀಯ ಸಂವಹನ, ಸಂಪೂರ್ಣವಾಗಿ ಸರಕಾರದ ಕೈಯಲ್ಲಿತ್ತು. ಅಧಿಕಾರಿಗಳು ಭಯಭೀತರಾದರು. ಆಕಾಶದ ಕಡೆ ಮುಖ ಮಾಡಿದ ದೊಡ್ಡ ಡಿಶ್ ಆಂಟೆನಾ ಅಂದರೆ- ಗೂಢಚರ್ಯೆಯ ಸಾಧನ ಅಲ್ಲವಾ? ಎಂದು ಭದ್ರತಾ ಅನುಮತಿ ಕೇಳಿದರು. ತಿಂಗಳುಗಟ್ಟಲೆ ಟೆಕ್ಸಾಸ್ ಇನ್‌ಸ್ಟ್ರಮೆಂಟ್ಸ್ ಭಾರತೀಯ ಕಸ್ಟಮ್ಸ್‌ʼನ ಜೊತೆ ಯುದ್ಧ ಮಾಡಿತು. ಫೈಲ್ ಮೇಲೆ ಫೈಲ್. ‌

ಮಿನಿಸ್ಟ್ರಿ ಮೇಲೆ ಮಿನಿಸ್ಟ್ರಿ. ಅಂತೂ ಕೊನೆಗೆ ಡಿಶ್ ಹಾಕಲು ಅನುಮತಿ ಸಿಕ್ಕಿತು. ಮದ್ರಾಸಿನ ಬಂದರಿ ನಿಂದ ಆ ಡಿಶ್ ಬೆಂಗಳೂರಿಗೆ ಬರಬೇಕು. ಆದರೆ ಮತ್ತೊಂದು ವಿಚಿತ್ರ ಸತ್ಯ ಕಾಯುತ್ತಿತ್ತು.

1980ರ ದಶಕದ ಬೆಂಗಳೂರಿನ ರಸ್ತೆಗಳು ಆ ಭಾರೀ ಮತ್ತು ಸೂಕ್ಷ್ಮ ಸ್ಯಾಟಲೈಟ್ ಡಿಶ್ ಅನ್ನು ಸಾಗಿಸಲು ಸಿದ್ಧವಿರಲಿಲ್ಲ. ಯಾವ ಭಾರೀ ಸರಕು ವಾಹನವೂ ಆ ರಸ್ತೆಗಳಲ್ಲಿ ಹೋಗಲು ಸಾಧ್ಯ ವಿರಲಿಲ್ಲ. ಹಾಗಾದರೆ ಆಗ ಮಾಡಿದ್ದೇನು? ಭಾರತದ ಡಿಜಿಟಲ್ ಕ್ರಾಂತಿಯ ಮೊದಲ ಹೆಜ್ಜೆ- ಒಂದು ಹೈಟೆಕ್ ಸಾರಿಗೆ ಬೆಂಗಾವಲಿನಲ್ಲಿ ಬರಲಿಲ್ಲ. ಅದು ಬಂದಿದ್ದು- ಎತ್ತಿನ ಗಾಡಿಯಲ್ಲಿ! ಹೌದು.

ಮರದ ಬಂಡಿ, ಎರಡು ಬಿಳಿ ಎತ್ತುಗಳು. ಮಿಲ್ಲರ್ಸ್ ರಸ್ತೆಯಲ್ಲಿ ನಿಧಾನವಾಗಿ, ಜೋಕಾಲಿ ಆಡುತ್ತ ಬಂತು. ಭಾರತವನ್ನು ಡಿಜಿಟಲ್ ಯುಗಕ್ಕೆ ಎಳೆದೊಯ್ದ ಆ ಸ್ಯಾಟಲೈಟ್ ಡಿಶ್. ಇದು ರೂಪಕ ಅಲ್ಲ. ಇದು ನಿಜವಾಗಿ ನಡೆದಿದ್ದು.

ಡಿಶ್ ಅನ್ನು ಸೋನಾ ಟವರ್ಸ್‌ನ ಛಾವಣಿ ಮೇಲೆ ಅಳವಡಿಸಿದರು. ಸ್ವಿಚ್ ಆನ್ ಮಾಡಿದರು. ಬೆಂಗಳೂರಿನ ಒಬ್ಬ ಇಂಜಿನಿಯರ್, ಕಂಪ್ಯೂಟರ್ ಮುಂದೆ ಕೂತ. ಒಂದು ಸಾಲು ಕೋಡ್ ಟೈಪ್ ಮಾಡಿ ಎಂಟರ್ ಒತ್ತಿದ. ಆ ಡೇಟಾ ಛಾವಣಿಯ ಡಿಶ್‌ನಿಂದ ಮೇಲೆ ಹಾರಿ, ಭೂಸ್ಥಿರ ಕಕ್ಷೆಯ ಸ್ಯಾಟಲೈಟಗೆ ಬಡಿದು, ಡಸ್‌ನ ಮೇನ್-ಮ್‌ನಲ್ಲಿ ಕಂಪೈಲ್ ಆಗಿ, ಔಟ್‌ಪುಟ್ ಮತ್ತೆ ಬೆಂಗಳೂರಿನ ಕಂಪ್ಯೂಟರ್ ಸ್ಕ್ರೀನ್‌ಗೆ ರಿಯಲ್ ಟೈಮ್‌ನಲ್ಲಿ ಬಂತು. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಭೌತಿಕ ದೂರ ಅನ್ನೋ ಪರಿಕಲ್ಪನೆ ಕುಸಿಯಿತು. ಕ್ರಿಟಿಕಲ್ ಎಂಜಿನಿಯರಿಂಗ್ ಪಾಶ್ಚಾತ್ಯ ದೇಶಗಳ ಆಗಬೇಕು ಎಂಬ ಕಲ್ಪನೆ ಒಂದೇ ದಿನದಲ್ಲಿ ಮುರಿಯಿತು.

ಆದರೆ ಈ ಸಾಧನೆಯ ಹಿಂದೆ ಒಂದು ಬೃಹತ್ ಆರ್ಥಿಕ ಗೋಡೆ ಇತ್ತು. ಆ 64 ಕೆಬಿಪಿಎಸ್ ಸೇತುವೆ ನಿರ್ವಹಿಸಲು ವರ್ಷಕ್ಕೆ, ಪರವಾನಗಿ ಮತ್ತು ಬ್ಯಾಂಡ್‌ವಿಡ್ತ್ ಶುಲ್ಕ 45 ಲಕ್ಷ ರೂ. ಮಾತ್ರ. ಅರ್ಥ್ ಸ್ಟೇಶನ್‌ಗೆ ಬೇರೆ ಕೋಟ್ಯಂತರ ಬೇಕು. ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ತರಹದ ಶತಕೋಟಿ ಡಾಲರ್ ಕಂಪನಿಗಳಿಗೆ ಮಾತ್ರ ಇದು ಸಾಧ್ಯ. ಇನ್‌ʼಫೋಸಿಸ್, ಟಿಸಿಎಸ್, ವಿಪ್ರೊಗಳ ಮುಂಚಿನ ಅವತಾರಗಳು- ಸಣ್ಣ ಭಾರತೀಯ ಸ್ಟಾರ್ಟಪ್ಸ್- ಪೂರ್ಣವಾಗಿ ಹೊರಗುಳಿದಿದ್ದವು. 45 ಲಕ್ಷ ರೂ. ಅಂದರೆ ಅವರಿಗೆ ಕನಸು ಮಾತ್ರಲ್ಲ, ಅದೊಂದು ಊಹಿಸಲೂ ಸಾಧ್ಯವಾಗದ ಮೊತ್ತವಾಗಿತ್ತು.

ಆಗ ಬಂದವರು ನಾಗರಾಜನ್ ವಿಠ್ಠಲ್, ಐಎಎಸ್. ಅವರು ಡಿಪಾರ್ಟ್‌ಮೆಂಟ್ ಆಫ್ ಎಲೆಕ್ಟ್ರಾನಿಕ್ಸ್‌ʼನ ಕಾರ್ಯದರ್ಶಿ. ಗುಜರಾತ್ ಕೇಡರ್‌ನ 1960ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಈ ಮನುಷ್ಯನ ಬಗ್ಗೆ ಸ್ವಲ್ಪ ಹೇಳಬೇಕು. ಈತ ಒಬ್ಬ ಸಾಮಾನ್ಯ ಅಧಿಕಾರಿ ಅಲ್ಲ. ಸಮಾಜವಾದದ ಕಾಲದಲ್ಲಿ ಸಮಾಜವಾದದ ವಿರುದ್ಧ ಯೋಚಿಸಿದ ಅಪರೂಪದ ಅಧಿಕಾರಿ. ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ- ಎರಡೂ ಇಲಾಖೆಗಳ ಸಮಾಜವಾದಿ ಹ್ಯಾಂಗೋವರ್ ಕಳಚಿ, ಖಾಸಗಿ ಉದ್ಯಮಕ್ಕೆ ಬಾಗಿಲು ತೆರೆದವರು. ನಂತರ ಸೆಂಟ್ರಲ್ ವಿಜಿಲೆನ್ಸ್ ಕಮಿಷನರ್ (ಸಿವಿಸಿ) ಆದರು. ಸಿವಿಸಿ ಆಗಿ ಅವರು ಮಾಡಿದ ಕೆಲಸಗಳೂ ಕಡಿಮೆ ಅಲ್ಲ. ಆದರೆ ಅದು ಮತ್ತೊಂದು ಕಥೆ, ಇರಲಿ. 2012ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದರು. ಆದರೆ ಅವರ ನಿಜವಾದ ಪದ್ಮಭೂಷಣ- ಎಸ್‌ಟಿಪಿಐ (ಸಾಫ್ಟ್‌ʼವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ).

ವಿಠ್ಠಲ್ ಅವರು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸನ 45 ಲಕ್ಷದ ಡಿಶ್ ನೋಡಿ ಒಂದು ಮೂಲಭೂತ ಪ್ರಶ್ನೆ ಕೇಳಿದರು- ಪ್ರತಿ ಸಣ್ಣ ಸಾಫ್ಟ್‌ʼವೇರ್ ಉದ್ಯಮಿ ತನ್ನದೇ ಡಿಶ್ ಕೊಳ್ಳಬೇಕು ಅಂತ ಯಾಕೆ? ಸರಕಾರವೇ ಒಂದು ಹಂಚಿಕೆಯ ಡಿಜಿಟಲ್ ಹೆದ್ದಾರಿ (shared digital highway) ಕಲ್ಪಿಸಿದರೆ ಹೇಗೆ?

1991ರಲ್ಲಿ ಭಾರತ ದಿವಾಳಿಯ ಅಂಚಿನಲ್ಲಿತ್ತು. ಚಿನ್ನದ ನಿಕ್ಷೇಪಗಳನ್ನು ವಿಮಾನದಲ್ಲಿ ಇಂಗ್ಲೆಂಡ್‌ಗೆ ಕಳಿಸಿ ಸಾಲ ಪಡೆಯುತ್ತಿದ್ದ ಕಾಲ ಅದು. (ಈ ಸಂದರ್ಭವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇತ್ತೀಚೆಗೆ ಬಂದ ‘ಗವರ್ನರ್: ದಿ ಸೈಲೆಂಟ್ ಸೇವಿಯರ್’ ಚಲನಚಿತ್ರ ನೋಡಿ. 1991ರ ಆರ್ಥಿಕ ಬಿಕ್ಕಟ್ಟಿನ ತೀವ್ರತೆ ಅದರಲ್ಲಿ ಕಣ್ಣಿಗೆ ಕಟ್ಟುತ್ತದೆ.) ಆ ಸಂಕಷ್ಟದ ನಡುವೆ ವಿಠ್ಠಲ್ ಅವರು ಆಗಿನ ಹಣಕಾಸು ಕಾರ್ಯದರ್ಶಿ ಆಗಿದ್ದ ಬಿಮಲ್ ಜಲನ್ ಅವರನ್ನು ಭೇಟಿಯಾದರು.

ಆ ವರ್ಷ, ಭಾರತದ ಒಟ್ಟು ಸಾಫ್ಟ್‌ʼವೇರ್ ರಫ್ತು ಹತ್ತು ಕೋಟಿ ಡಾಲರ್ ಆಗಿತ್ತು. ಜಲನ್ ಕೇಳಿದರು: ‘ನಿಮ್ಮ ಬೇಡಿಕೆ ಒಪ್ಪಿದರೆ, ಅಂದರೆ ಶೂನ್ಯ ಆಮದು ಸುಂಕ, ಏಕ ಗವಾಕ್ಷಿ ವ್ಯವಸ್ಥೆ, ಹಂಚಿಕೆಯ ಡಿಜಿಟಲ್ ಹೆzರಿ, ಈ ಎಲ್ಲವನ್ನೂ ಕೊಡುತ್ತೇನೆ. ಮುಂದಿನ ವರ್ಷ ಎಷ್ಟು ಸಾಫ್ಟ್‌ʼವೇರ್ ರಫ್ತು ಮಾಡುತ್ತೀರಿ ಅಂತ ಹೇಳಿ.’ ವಿಠ್ಠಲ್ ಹೇಳಿದರು: 400 ಮಿಲಿಯನ್. ಒಂದೇ ವರ್ಷದಲ್ಲಿ 4 ಪಟ್ಟು. ವಿಠ್ಠಲ್ ಅವರಿಗೇ ಗೊತ್ತಿತ್ತು- ಇದು ಸಾಧ್ಯವಾಗದ ಸಂಖ್ಯೆ ಅಂತ. ಆದರೂ ಧೈರ್ಯದಿಂದ ಒಂದು ಸುಳ್ಳು ಹೇಳೇಬಿಟ್ಟರು.

ಆ ವಾರವೇ ನಾಸ್ಕಾಮ್ (NASSCOM) ಅಧಿವೇಶನದಲ್ಲಿ 400 ಮಿಲಿಯ ಗುರಿ ಘೋಷಿಸಿದಾಗ, ಸಭಾಂಗಣದಲ್ಲಿ ಕೂತಿದ್ದ ಭಾರತೀಯ ಐಟಿ ಸ್ಥಾಪಕರು ಸ್ತಬ್ಧರಾದರು. ನಾರಾಯಣ ಮೂರ್ತಿ ಅವರೂ ಸೇರಿದಂತೆ ಇನ್ನೂ ಹಲವು ಉದ್ಯಮಿಗಳಿಗೆ ಅನಿಸಿತು- ಈ ಮನುಷ್ಯ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದ ಅಂತ. ವಿಠ್ಠಲ್ ನಕ್ಕರು, ಮತ್ತು ಎಸ್‌ಟಿಪಿಐ ಶುರು ಮಾಡಿದರು. ಎಸ್‌ಟಿಪಿಐ ಏನು ಮಾಡಿತು? 45 ಲಕ್ಷ ರೂ. ಖರ್ಚು ಮಾಡಲಾಗದ ಸಣ್ಣ ಸ್ಟಾರ್ಟಪ್ಸ್‌ಗೆ ದೊಡ್ಡ, ಹಂಚಿಕೆಯ ಸ್ಯಾಟಲೈಟ್ ಆಂಟೆನಾ ಕಟ್ಟಿಕೊಟ್ಟಿತು. ಅತ್ಯಲ್ಪ ಖರ್ಚಿನಲ್ಲಿ ಹೈಸ್ಪೀಡ್ ಡೇಟಾ ಸೇತುವೆ ಸಿಕ್ಕಿತು. ಎಸ್‌ಟಿಪಿಐ ಜೋನ್‌ಗಳಲ್ಲಿ ಶೂನ್ಯ ಆಮದು ಸುಂಕ - ತೆರಿಗೆ ಇನ್‌ಸ್ಪೆಕ್ಟರ್‌ಗಳ ಮತ್ತು ಕಸ್ಟಮ್ಸನ ಕಿರುಕುಳ ಇಲ್ಲ. ಫಲಿತಾಂಶ? 400 ಮಿಲಿಯ ಗುರಿ ತಪ್ಪಲಿಲ್ಲ, ಬದಲಾಗಿ ಮೀರಿತು.

ಇಂದು ಭಾರತದ ಐಟಿ ರಫ್ತು 200 ಬಿಲಿಯ ಡಾಲರ್ ಮೀರಿದೆ. 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಹಾಗೂ ಜಗತ್ತಿನ ಪ್ರತಿ ಬ್ಯಾಂಕ್, ಪ್ರತಿ ಏರ್‌ಲೈನ್, ಪ್ರತಿ ಆಸ್ಪತ್ರೆಯ ಹಿಂದೆ ಭಾರತೀಯರ ಕೋಡ್ ಇದೆ. ಇದೆಲ್ಲ ಶುರುವಾಗಿದ್ದು- ಮರದ ಬಂಡಿಯ ಮೇಲಿನ ಒಂದು ಡಿಶ್‌ನಿಂದ. ಮತ್ತು ಒಬ್ಬ ಅಧಿಕಾರಿಯು ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಹೇಳಿದ ಒಂದು ಅವಶ್ಯಕತೆಯ ಸುಳ್ಳಿನಿಂದ. ಇತಿಹಾಸ ಬರೆಯಲು ಇಷ್ಟೇ ಸಾಕು.