M J Akbar Column: ಜಗತ್ತಿನ ರೂಪವನ್ನೇ ಬದಲಿಸುತ್ತಿರುವ ಡೊನಾಲ್ಡ್ ಟ್ರಂಪ್
‘ಯಾರಾದರೂ ದುರಹಂಕಾರದಿಂದ ಮೆರೆಯುತ್ತಿದ್ದರೆ ನನಗೆ ತೋರಿಸಿ. ನಾನು ನಿಮಗೆ ಸೋತು ಶರಣಾದವರನ್ನು ಕೊಡುತ್ತೇನೆ’ ಎಂದು ಟ್ರಂಪ್ ಹೇಳಿದ್ದರು. ಬಹುಶಃ ಟ್ರಂಪ್ ತಮ್ಮ ಸಾಮರ್ಥ್ಯವನ್ನು ಕೀಳಂದಾಜು ಮಾಡಿದ ಯಾವುದೇ ನಿದರ್ಶನವಿಲ್ಲ. ನನಗಿಂತ ಯಶಸ್ವಿ ವ್ಯಕ್ತಿ ಇನ್ನೊಬ್ಬ ಇಲ್ಲ ಎಂದು ಅವರೇ ಹೇಳಿದ್ದರು. ಅದು ನಿಜ ಕೂಡ.
-
ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ಸತ್ಯವು ಇತಿಹಾಸದ ತಾಯಿ. ಇತಿಹಾಸವು ಕಾಲದ ಶತ್ರು, ಅದ್ಭುತ ಕಾರ್ಯಗಳ ಕಣಜ, ವರ್ತಮಾನದ ಶಿಕ್ಷಕ ಮತ್ತು ಭವಿಷ್ಯದ ಸಲಹೆಗಾರ’- ಹೀಗಂತ ಹೇಳಿದವನು ಸ್ಪ್ಯಾನಿಶ್ ಲೇಖಕ ಸರ್ವಾಂಟೆಸ್. ಈತನ ಪ್ರಸಿದ್ಧ ಕಾದಂಬರಿ ‘ಡಾನ್ ಕ್ವಿಕ್ಸೋಟೆ’ ಯುರೋಪಿಯನ್ ಸಾಹಿತ್ಯದ ಮೊದಲ ಆಧುನಿಕ ಕಾದಂಬರಿ ಎಂದು ಪ್ರಸಿದ್ಧವಾಗಿದೆ. ಆದರೆ ಬ್ರಿಟನ್ʼನಲ್ಲಿ 1950ರ ದಶಕದಲ್ಲಿ ಅತ್ಯಂತ ಪ್ರಾಕ್ಟಿಕಲ್ ಪ್ರಧಾನಿಯೆಂಬ ಹೆಗ್ಗಳಿಕೆಯೊಂದಿಗೆ ಆಡಳಿತ ನಡೆಸಿದ್ದ ಹೆರಾಲ್ಡ್ ಮ್ಯಾಕ್‌ಮಿಲನ್ ಬೇರೆಯದೇ ರೀತಿಯಲ್ಲಿ ಇತಿಹಾಸವನ್ನು ವ್ಯಾಖ್ಯಾನಿಸಿದ್ದಾರೆ.
ಅವರ ಪ್ರಕಾರ ಇತಿಹಾಸವೆಂಬುದು ಊಹಿಸಲಾಗದ ಮತ್ತು ಕಂಡುಕೇಳರಿಯದ ಸಂಗತಿ ಗಳ ಗುಚ್ಛ. ಅವರೇ ಇನ್ನೊಮ್ಮೆ ಇತಿಹಾಸವನ್ನು ‘ಘಟನೆಗಳು ಸ್ವಾಮಿ, ಘಟನೆಗಳು’ ಎಂದೂ ಹೇಳಿದ್ದಾರೆ. ನಿರಾಶಾವಾದಿಯೊಬ್ಬನನ್ನು ಕೇಳಿದರೆ ಅವನು ‘ಇತಿಹಾಸವೆಂಬುದು ಮಹತ್ವಾಕಾಂಕ್ಷೆ ಮತ್ತು ಅಹಂಕಾರದಿಂದ ಜನಿಸಿದ ಕೂಸು’ ಎಂದು ಹೇಳಬಹುದು.
ಡೊನಾಲ್ಡ್ ಟ್ರಂಪ್ ಹೇಗೆ ನಿಮ್ಮನ್ನು ಆಳುತ್ತಿದ್ದಾರೆ ಎಂಬುದರ ಬಗ್ಗೆ ನಿಮಗೆ ತಕರಾರು ಇರಬಹುದು. ಆದರೆ ಅವರು ಯಾವತ್ತೂ ನಿಮ್ಮನ್ನು ದಾರಿ ತಪ್ಪಿಸುವುದಿಲ್ಲ. ಅವರು ಯಾವತ್ತೂ ತಮ್ಮ ಉದ್ದೇಶಗಳನ್ನು ಮರೆಮಾಚಿ ಇನ್ನೇನನ್ನೋ ಹೇಳುವುದಿಲ್ಲ. ತಾವೇನು ಮಾಡಬೇಕು ಅಂದುಕೊಂಡಿದ್ದೇನೋ ಅದನ್ನು ನೇರವಾಗಿಯೇ ಹೇಳುತ್ತಾರೆ. ವಿರೋಧ ಎದುರಾದರೆ ಇನ್ನೂ ಹೆಚ್ಚಿನ ಉತ್ಸಾಹದಿಂದ ಅದನ್ನು ಮಾಡುತ್ತಾರೆ!
ಅವರು ಕೆನಡಾಕ್ಕೆ ಅಮೆರಿಕದ 51ನೇ ರಾಜ್ಯವಾಗುವಂತೆ ಮೊದಲ ಬಾರಿ ಕರೆ ನೀಡಿದಾಗ ಕೆಲವರು ನಕ್ಕಿದ್ದರು. ಗ್ರೀನ್‌ಲ್ಯಾಂಡನ್ನು ಅಮೆರಿಕದ ವಶಕ್ಕೆ ಪಡೆಯುತ್ತೇವೆ ಮತ್ತು ವೆನಿಜು ವೆಲಾವನ್ನು ಅಮೆರಿಕದಲ್ಲಿ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದಾಗಲೂ ಇದೇನು ಹುಚ್ಚು ಮಾತು ಎಂದೇ ಅನೇಕರು ತಳ್ಳಿಹಾಕಿದ್ದರು. ಈಗ ಅವರೆಲ್ಲರೂ ಅಳುತ್ತಿದ್ದಾರೆ.
ಇದನ್ನೂ ಓದಿ: M J Akbar Column: ಆರ್ಥಿಕ ಕಾರ್ಯಕ್ರಮವಿಲ್ಲದೆ ಚುನಾವಣೆ ಗೆಲ್ಲಲು ಅಸಾಧ್ಯ
‘ಯಾರಾದರೂ ದುರಹಂಕಾರದಿಂದ ಮೆರೆಯುತ್ತಿದ್ದರೆ ನನಗೆ ತೋರಿಸಿ. ನಾನು ನಿಮಗೆ ಸೋತು ಶರಣಾದವರನ್ನು ಕೊಡುತ್ತೇನೆ’ ಎಂದು ಟ್ರಂಪ್ ಹೇಳಿದ್ದರು. ಬಹುಶಃ ಟ್ರಂಪ್ ತಮ್ಮ ಸಾಮರ್ಥ್ಯವನ್ನು ಕೀಳಂದಾಜು ಮಾಡಿದ ಯಾವುದೇ ನಿದರ್ಶನವಿಲ್ಲ. ನನಗಿಂತ ಯಶಸ್ವಿ ವ್ಯಕ್ತಿ ಇನ್ನೊಬ್ಬ ಇಲ್ಲ ಎಂದು ಅವರೇ ಹೇಳಿದ್ದರು. ಅದು ನಿಜ ಕೂಡ.
ಬ್ಯಾಂಕಿಂಗ್ ಕ್ಷೇತ್ರವನ್ನು ಅವರಿಗಿಂತ ಚೆನ್ನಾಗಿ ತಿಳಿದುಕೊಂಡವರು ಇಲ್ಲ. ಅವರಿಗಿಂತ ದೊಡ್ಡ ಮಿಲಿಟರಿ ಹೊಂದಿರುವವರು ಇಲ್ಲ. ‘ನಿಮ್ಮೆಲ್ಲರಿಗಿಂತ ಹೆಚ್ಚು ಐಕ್ಯೂ ನನಗಿದೆ. ಅದು ನಿಮಗೂ ಗೊತ್ತಿದೆ!’ ಎಂದು ಅವರು ‘ಸೋತವರು ಮತ್ತು ದ್ವೇಷಿಗಳಿಗೆ’ ಹೇಳಿದ್ದರು. ‘ಚೀನಾಕ್ಕೆ ಕ್ಸಿ ಜಿನ್ ಪಿಂಗ್ ಆಜೀವ ಅಧ್ಯಕ್ಷನಾಗಿರುವಂತೆ ಅಮೆರಿಕಕ್ಕೆ ನಾನೂ ಜೀವನ ಪರ್ಯಂತ ಅಧ್ಯಕ್ಷನಾಗಿರಬೇಕಿತ್ತು, ಆದರೆ ಅಮೆರಿಕದ ಸಂವಿಧಾನದಲ್ಲಿ ಅದಕ್ಕೆ ಅವಕಾಶ ವಿಲ್ಲ’ ಎಂದು ಅವರೊಮ್ಮೆ ತಮಾಷೆಯಿಂದ ಹೇಳಿದ್ದರು.
ಅದು ಪಶ್ಚಾತ್ತಾಪದ ಮಾತಿನಂತಿತ್ತು. ಅವರಿಗೊಂದು ಮಹತ್ವಾಕಾಂಕ್ಷೆಯಿದೆ. ಜಗತ್ತಿನ ಇತಿಹಾಸದಲ್ಲಿ ತಾನು ವಿಶಿಷ್ಟ ಸ್ಥಾನ ಪಡೆಯಬೇಕು. ಅದಕ್ಕಾಗಿ ‘ಟ್ರಂಪೇರಿಕಾ’ ವನ್ನು ನಿರ್ಮಿಸಬೇಕು. ಅದು ಈಗಿರುವ ಅಮೆರಿಕದ ದುಪ್ಪಟ್ಟು ಗಾತ್ರದ ದೇಶವಾಗಬೇಕು. ಅದರಲ್ಲಿ ತೈಲ ನಿಕ್ಷೇಪಗಳು ತುಂಬಿ ಹರಿಯುತ್ತಿರಬೇಕು.
1945ರಿಂದ ಜಗತ್ತನ್ನು ಆಳುತ್ತಿರುವ ಸಂಸ್ಥೆಗಳನ್ನೆಲ್ಲ ನಿರ್ನಾಮ ಮಾಡಿ ತಾವೇ ಒಂದಷ್ಟು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹುಟ್ಟುಹಾಕಿ, ಅವುಗಳ ಸಿಂಹಾಸನದ ಮೇಲೆ ಕುಳಿತು ಮೆರೆಯಬೇಕು, ಪಶ್ಚಿಮದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಬೇಕು, ಜಗತ್ತಿನ ಪ್ರಮುಖ ದೇಶಗಳು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಬದಲು ಶ್ವೇತಭವನದಲ್ಲಿ ಕುಳಿತುಕೊಂಡ ಕಮಾಂಡರ್-ಇನ್-ಚೀ-ಗೆ ವರದಿ ಮಾಡಿಕೊಳ್ಳುವಂತಾಗಬೇಕು ಎಂಬ ಕನಸನ್ನು ಅವರು ಕಂಡಿದ್ದಾರೆ.
ಈ ಕನಸಿನೊಂದಿಗೆ ಟ್ರಂಪ್ ಆಡುತ್ತಿರುವ ಆಟಗಳೆಲ್ಲ ಸದ್ಯದಲ್ಲೇ ತಣ್ಣಗಾಗುತ್ತವೆ ಎಂದು ನ್ಯಾಟೋ ಒಕ್ಕೂಟದ ಯುರೋಪಿಯನ್ ಪಾಲುದಾರ ದೇಶಗಳು 2025ರ ಉದ್ದಕ್ಕೂ ಕತ್ತು ಉದ್ದ ಮಾಡಿಕೊಂಡು ನಿರೀಕ್ಷಿಸುತ್ತಲೇ ಇದ್ದವು. ಕೊನೆಯ ಪಕ್ಷ 2026ರ ನವೆಂಬರ್‌ನಲ್ಲಿ ನಡೆಯುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ನರು ಸೋತರೆ ಆಗಲಾದರೂ ಟ್ರಂಪ್ ಮೆತ್ತಗಾಗುತ್ತಾರೆ ಎಂಬ ನಿರೀಕ್ಷೆ ಅವರದು.
ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳಲು ಆ ದೇಶಗಳು ‘ಟಾಕೋ’ ಎಂಬ ಪದವೊಂದನ್ನು ಸೃಷ್ಟಿಸಿಕೊಂಡಿವೆ. ‘ಟಾಕೋ’ ಅಂದರೆ ‘ಟ್ರಂಪ್ ಆಲ್ವೇಸ್ ಚಿಕನ್ಸ್ ಔಟ್’! ಟ್ರಂಪ್ ಯಾವಾಗಲೂ ಹಿಂದೆ ಸರಿಯುತ್ತಾರೆ ಎಂಬುದು ಇದರ ಸರಳ ಅರ್ಥ. ಅವರು ಒಂದಾದ ಮೇಲೊಂದು ದೇಶಕ್ಕೆ ತೆರಿಗೆ ವಿಧಿಸಿ, ಕೊನೆಗೆ ತೆರಿಗೆ ವಾಪಸ್ ಪಡೆಯುವುದನ್ನು ನೋಡಿ ಯುರೋಪಿಯನ್ ದೇಶಗಳು ಹೀಗೆ ಆಡಿಕೊಳ್ಳುತ್ತಿವೆ.
ಸಾರ್ವಜನಿಕವಾಗಿ ಸ್ವಲ್ಪ ಹಿನ್ನಡೆಯಾದರೂ ಟ್ರಂಪ್ ಹಿಂದೆ ಸರಿಯುತ್ತಾರೆ ಎಂದು ಅವು ನಂಬಿವೆ. ಆದ್ದರಿಂದಲೇ ಅಮೆರಿಕಕ್ಕೆ ಅತ್ಯಂತ ನಿಷ್ಠ ರಾಜಕಾರಣಿಯಾಗಿರುವ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಕೂಡ ಟ್ರಂಪ್ ಗ್ರೀನ್ ಲ್ಯಾಂಡನ್ನು ವಶಪಡಿಸಿಕೊಳ್ಳಲು ಹೊರಟಿರುವುದು ‘ಬಹಳ ದೊಡ್ಡ ತಪ್ಪು’ ಎಂದು ಹೇಳಿದ್ದಾರೆ.
ತನ್ನೊಳಗಿನ ಚಾರ್ಲ್ಸ್ ಡಿ ಗೌಲೆಯನ್ನು ಮರುಶೋಧನೆ ಮಾಡಿಕೊಂಡಿರುವ ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯಿಟ್ಟು ಗ್ರೀನ್‌ಲ್ಯಾಂಡ್‌ಗೆ ತನ್ನ ಸೈನಿಕರನ್ನೇ ಕಳುಹಿಸಿದ್ದಾರೆ. ತನ್ಮೂಲಕ, ಅಮೆರಿಕವೇನಾದರೂ ಗ್ರೀನ್‌ಲ್ಯಾಂಡನ್ನು ವಶಪಡಿಸಿಕೊಳ್ಳಲು ಹೊರಟರೆ ಇಡೀ ಯುರೋಪ್ ಒಂದಾಗಿ ಅದನ್ನು ವಿರೋಧಿಸುತ್ತದೆ ಎಂಬ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: M J Akbar Column: ಬಿಹಾರದಿಂದ ಬಂಗಾಳದವರೆಗೆ ಹಬ್ಬಿರುವ ಚುನಾವಣೆಯ ಮಾಯೆ...
ಇನ್ನು, 1945ರ ನಂತರ ಅಮೆರಿಕದ ಭದ್ರತೆಯಲ್ಲಿ ನೆಮ್ಮದಿಯಿಂದಿರುವ ನಾರ್ವೆ ಕೂಡ ‘ಬೆದರಿಕೆಗಳಿಗೆ ಮಿತ್ರರ ನಡುವೆ ಜಾಗವಿಲ್ಲ’ ಎಂದು ಉಪದೇಶ ಮಾಡಿದೆ. ಆದರೆ ಎಲ್ಲರೂ ಒಂದು ವಿಷಯವನ್ನು ಮರೆತೇ ಬಿಟ್ಟಿದ್ದಾರೆ. ಇಂಥ ಯುರೋಪಿಯನ್ ನಾಯಕರನ್ನು ಟ್ರಂಪ್ ‘ಜಿಗಣೆಗಳು’ ಎಂದು ಕರೆಯುತ್ತಾರೆ. ನ್ಯಾಟೋ ಮೈತ್ರಿಕೂಟದ ಸ್ನೇಹಿತರೆಂದು ಇವರನ್ನು ಗೌರವಿಸುವುದರ ಬದಲು ಟ್ರಂಪ್ ಇವರನ್ನೆಲ್ಲ ಬಹಳ ತುಚ್ಛವಾಗಿ ಕಾಣುತ್ತಾರೆ.
ನ್ಯಾಟೋದ ಮಿತ್ರರ ಮೇಲೇ ಅವರ ಪ್ರಹಾರ ಆರಂಭವಾಗಿದ್ದು ಜನವರಿ 18ರಂದು ನ್ಯಾಟೋದ ಎಂಟು ಸದಸ್ಯ ರಾಷ್ಟ್ರಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ತೆರಿಗೆ ಘೋಷಿಸಿ ದಾಗ. ಈಗಲೂ ಅವು ಅಮೆರಿಕಕ್ಕೆ ನಿಷ್ಠವಾಗಿ ನಡೆದುಕೊಳ್ಳದಿದ್ದರೆ ಫೆಬ್ರವರಿ 1ರಿಂದ ಈ ತೆರಿಗೆ ಜಾರಿಗೆ ಬರುತ್ತದೆ ಎಂದು ಟ್ರಂಪ್ ಪ್ರಕಟಿಸಿದ್ದಾರೆ. ಅದರೊಂದಿಗೆ, ಟ್ರಂಪ್ ಆಡುತ್ತಿರು ವುದು ಬರೀ ಹುಚ್ಚಾಟ ಎನ್ನುತ್ತಿದ್ದ ಯುರೋಪಿನ ಎಲ್ಲರ ಬಾಯಿಗಳು ಬಂದ್ ಆಗಿವೆ.
ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದೆ ಇರುವುದಕ್ಕೆ ಜನವರಿ 19ರಂದು ನಾರ್ವೆಯನ್ನು ಉದ್ದೇಶಿಸಿ ಮಾತನಾಡಿದ್ದ ಟ್ರಂಪ್, ‘ಇನ್ನು ಮುಂದೆ ನಾನು ಕೇವಲ ಶಾಂತಿಯ ಬಗ್ಗೆ ಯೋಚನೆ ಮಾಡಬೇಕಿಲ್ಲ. ಈಗಲೂ ನಾನು ಶಾಂತಿಗೇ ಆದ್ಯತೆ ನೀಡುತ್ತೇನಾದರೂ, ಇನ್ನು ಮುಂದೆ ಅಮೆರಿಕಕ್ಕೆ ಯಾವುದು ಒಳ್ಳೆಯದು ಮತ್ತು ಏನು ಮಾಡಿದರೆ ಸರಿ ಎಂಬುದರ ಬಗ್ಗೆ ಹೆಚ್ಚು ಯೋಚನೆ ಮಾಡಬಹುದು’ ಎಂದು ಹೇಳಿದ್ದರು.
ಇದು ಅಪ್ಪಟ ಟ್ರಂಪ್ ಸಿದ್ಧಾಂತ: ‘ವೆನಿಜುವೆಲಾ, ಗ್ರೀನ್‌ಲ್ಯಾಂಡ್, ಡೆನ್ಮಾರ್ಕ್, ಯುರೋಪಿನ ಡಿಸ್ನಿಲ್ಯಾಂಡ್‌ಗಳೇ, ನನಗಾಗಿ ಅಳಬೇಡಿ. ಅಗತ್ಯ ಬಿದ್ದರೆ ತೆರಿಗೆ, ವ್ಯಾಪಾರ, ಸಮುದ್ರ ವ್ಯವಹಾರಗಳ ಮೂಲಕ ‘ಪ್ಯಾಕ್ಸ್ ಅಮೆರಿಕಾನಾ’ವನ್ನು ಹುಟ್ಟು ಹಾಕುತ್ತೇನೆ’. ಡೆನ್ಮಾರ್ಕನ್ನು ನೋಡಿ ಟ್ರಂಪ್ ವ್ಯಂಗ್ಯವಾಗಿ ನಕ್ಕಿದ್ದರು.
‘ಗ್ರೀನ್‌ಲ್ಯಾಂಡ್‌ಗೆ ಎರಡು ನಾಯಿಮರಿಗಳು ರಕ್ಷಣೆ ನೀಡುತ್ತಿವೆ. ಅವುಗಳಲ್ಲಿ ಒಂದು ಇತ್ತೀಚೆಗಷ್ಟೇ ಸೇರ್ಪಡೆಯಾಗಿದೆ’ ಎಂದು ತಮ್ಮ ಯಾವೊತ್ತಿನ ತಮಾಷೆಯ ಶೈಲಿಯಲ್ಲಿ ಹೇಳಿದ್ದರು. ಡಿಯೆಗೋ ಗಾರ್ಸಿಯಾ ದ್ವೀಪವನ್ನು ಮಾರಿಷಸ್‌ಗೆ ಮರಳಿಸಿದ ಕೀರ್ ಸ್ಟಾರ್ಮರ್ ‘ಪರಮ ಮೂರ್ಖ’ ಎಂದು ಟ್ವೀಟ್ ಮಾಡಿದ್ದರು.
ಅದರಲ್ಲಿ ಸ್ಟುಪಿಡ್ ಪದದ ಅಕ್ಷರಗಳನ್ನು ಕ್ಯಾಪಿಟಲ್‌ನಲ್ಲಿ ಬರೆದಿದ್ದರು. ನಂತರ ‘ನಾನು ಗ್ರೀನ್‌ಲ್ಯಾಂಡನ್ನು ಇಡಿಯಾಗಿ ಖರೀದಿ ಮಾಡಲು ಬಯಸುತ್ತೇನೆ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಅಮೆರಿಕದ ಒಂದು ನ್ಯೂಸ್ ಚಾನಲ್ ಈ ಕುರಿತು ಲೆಕ್ಕಾಚಾರ ಹಾಕಿ, ಗ್ರೀನ್ ಲ್ಯಾಂಡನ್ನು ಖರೀದಿಸಲು 700 ಬಿಲಿಯನ್ ಡಾಲರ್ ಬೇಕಾಗಬಹುದು ಎಂದು ಹೇಳಿತ್ತು.
ಡಾಲರ್‌ಗಳನ್ನು ಪ್ರಿಂಟ್ ಮಾಡುವ ದೇಶವೊಂದನ್ನು ಬಿಟ್ಟು ಇನ್ನಾವುದೇ ದೇಶಕ್ಕೆ ಇದು ಊಹೆ ಕೂಡ ಮಾಡಿಕೊಳ್ಳಲು ಆಗದಷ್ಟು ದೊಡ್ಡ ಮೊತ್ತದ ಹಣ. ಇಲ್ಲಿಯವರೆಗೆ ಯುರೋಪಿಯನ್ ನಾಯಕರು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದಾರೆಯೇ ಹೊರತು ಅವುಗಳನ್ನು ಕಾರ್ಯರೂಪಕ್ಕೆ ಇಳಿಸುವುದರಲ್ಲಿ ಹಿಂದೆ ಬಿದ್ದಿದ್ದಾರೆ.
ಅಮೆರಿಕದ ಸಂಭವನೀಯ ದಾಳಿಯನ್ನು ತಡೆಯಲು ಗ್ರೀನ್‌ಲ್ಯಾಂಡ್‌ಗೆ ಕೆಲ ಯುರೋಪಿ ಯನ್ ದೇಶಗಳು ಒಂದಷ್ಟು ಸೈನಿಕರನ್ನು ಕಳುಹಿಸಿವೆ. ಗ್ರೀನ್‌ಲ್ಯಾಂಡಿನ ಜನರು ತಮ್ಮನ್ನು ತಾವೇ ಅಮೆರಿಕಕ್ಕೆ ಮಾರಾಟ ಮಾಡಿಕೊಳ್ಳದೆ ಇದ್ದರೆ ಅಮೆರಿಕ ಖಂಡಿತ ದಾಳಿ ನಡೆಸುತ್ತದೆ ಎಂಬ ಭಯ ಯುರೋಪ್‌ಗಿದೆ. ಕಳೆದ ಶತಮಾನದ ಪ್ರಸಿದ್ಧ ಐರಿಶ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಶಾ ಈಗ ಇದ್ದಿದ್ದರೆ ಅವರನ್ನು ‘ಚಾಕ್ಲೇಟ್ ಸೈನಿಕರು’ ಎಂದು ಕರೆಯುತ್ತಿದ್ದರು.
ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಟ್ರಂಪ್ ಅವರ ನಗ್ನ ಪ್ರತಿಕೃತಿಯ ಮೆರವಣಿಗೆ ಮಾಡಿ ಬೆಂಕಿ ಹಚ್ಚಲಾಗಿದೆ. ಗ್ರೀನ್ ಲ್ಯಾಂಡ್‌ನ ಮಾತೃದೇಶವಾಗಿರುವ ಡೆನ್ಮಾರ್ಕ್‌ನಲ್ಲಿ 2.8 ಲಕ್ಷ ಜನರು ‘ನಾವು ಅಮೆರಿಕದ ಕ್ಯಾಲಿಫೋರ್ನಿಯಾವನ್ನು ಖರೀದಿಸಿ ಅದಕ್ಕೆ ನ್ಯೂ ಡೆನ್ಮಾರ್ಕ್ ಎಂದು ಹೆಸರಿಡುತ್ತೇವೆ’ ಎಂಬ ಪತ್ರಕ್ಕೆ ಸಹಿ ಹಾಕಿದ್ದಾರೆ.
ಪ್ರತಿಭಟನಾಕಾರರು ’MAGA’ ಅಂದರೆ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಅಲ್ಲ, ‘ಮೇಕ್ ಅಮೆರಿಕ ಗೋ ಅವೇ’ ಎಂಬ ಸ್ಲೋಗನ್ ಬರೆದ ಪ್ಲಕಾರ್ಡ್‌ಗಳನ್ನು ಪ್ರದರ್ಶಿಸಿದ್ದಾರೆ. ಅದಕ್ಕೆ ಟ್ರಂಪ್ ಆಕಾಶದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಜನವರಿ 19-20ರ ರಾತ್ರಿ ಗ್ರೀನ್ ಲ್ಯಾಂಡ್‌ನಲ್ಲಿರುವ ಅಮೆರಿಕದ ವಾಯುನೆಲೆಗೆ ಒಂದಷ್ಟು ಹೆಚ್ಚುವರಿ ಬಿ-52 ಯುದ್ಧ ವಿಮಾನಗಳು ಬಂದಿಳಿದಿವೆ. ಗಾಜಿನ ಚಾವಣಿಯ ಮೇಲೆ ಓಡುತ್ತಿರುವ ಭಯಾನಕ ಗೂಳಿಗೆ ಹಗ್ಗ ಹಾಕಿ ಹಿಡಿಯುವುದು ಸುಲಭವಲ್ಲ.
ವಿಶ್ವಸಂಸ್ಥೆಗೆ ಬದಲಾಗಿ ಶಾಂತಿ ಮಂಡಳಿ ರಚಿಸುವ ನಿರ್ಧಾರವನ್ನು ಟ್ರಂಪ್ ಪ್ರಕಟಿಸಿದಾಗ ಜಗತ್ತಿಗೆ ಅಜೀರ್ಣ ಜಾಸ್ತಿಯಾಯಿತು. ಆ ಶಾಂತಿ ಮಂಡಳಿಗೆ ಪರಮೋಚ್ಚ ಬಾಸ್ ಟ್ರಂಪ್ ಅವರೇ ಆಗಿರುತ್ತಾರೆ. ಸಂವಿಧಾನಬದ್ಧವಾಗಿ ಟ್ರಂಪ್‌ಗೇ ಅಂತಿಮ ನಿರ್ಧಾರ ಕೈಗೊಳ್ಳುವ ಅಽಕಾರ ಅದರಲ್ಲಿರುತ್ತದೆ. ಅದನ್ನು ಟ್ರಂಪ್ ಪ್ರಕಟಿಸಿದಾಗ ಜಗತ್ತು ಬೆರಗಾಯಿತು.
ಶಾಂತಿ ಮಂಡಳಿಗೆ ಸೇರುವಂತೆ ಚೀನಾ ಹಾಗೂ ರಷ್ಯಾಗೂ ಟ್ರಂಪ್ ಆಹ್ವಾನ ನೀಡಿದರು. ಆ ದೇಶಗಳಿಗೆ ಪರಿತ್ಯಕ್ತ ಭಾವನೆ ಬರಬಾರದು ಎಂಬ ಕಾರಣಕ್ಕೆ ಆಹ್ವಾನ ನೀಡಿದ್ದಿರಬಹುದು. ಆದರೆ ಮಂಡಳಿಗೆ ಸೇರಲು ಯಾವುದೇ ದೇಶ ಸತತ 3 ವರ್ಷಗಳ ಕಾಲ ಒಂದು ಬಿಲಿಯನ್ ಡಾಲರ್ ಹಣ ನೀಡಬೇಕೆಂಬ ಷರತ್ತಿನಲ್ಲಿ ಯಾರಿಗೂ ರಿಯಾಯ್ತಿಯಿಲ್ಲ ಎಂದು ತಿಳಿಸಿ ದರು. ಶಾಂತಿ ದುಬಾರಿ.
ಆದರೂ ರಷ್ಯಾದ ಸ್ನೇಹಿತ ರಾಷ್ಟ್ರವಾದ ಬೆಲಾರಸ್ ತಾನು ಶಾಂತಿ ಮಂಡಳಿಗೆ ಸೇರುವು ದಾಗಿ ಒಪ್ಪಿಕೊಂಡಿತು. ಆದರೆ ಅದು ಬಿಲಿಯನ್ ಡಾಲರ್ ಹಣ ನೀಡುತ್ತದೆಯೇ ಎಂಬು ದನ್ನು ಕಾದು ನೋಡಬೇಕಷ್ಟೆ. ಮಂಡಳಿಗೆ ಸೇರಲು ಒಪ್ಪಿರುವ ದೇಶಗಳೆಲ್ಲ ‘ಸದ್ಯಕ್ಕೆ ಟ್ರಂಪ್ ಮಾತಿಗೆ ಯಸ್ ಅನ್ನುವುದೇ ಒಳ್ಳೆಯ ಉತ್ತರ’ ಎಂಬ ಕಾರಣಕ್ಕೆ ಹಾಗೆ ಮಾಡಿರ ಬಹುದು.
ಗಟ್ಟಿ ಗುಂಡಿಗೆಯ ನಾರ್ವೆಯಂಥ ದೇಶಗಳು ನೇರವಾಗಿ ‘ನೋ’ ಎಂದವು. ಕೆನಡಾ ಒಪ್ಪಿ ಕೊಂಡಿತಾದರೂ, ಹಣ ನೀಡುವುದಿಲ್ಲ ಎಂದಿತು. ಸ್ಟಾರ್ಮರ್ ಮೌನ ವಹಿಸಿದರು. ಆಪ್ತ ಸ್ನೇಹಿತನಿಂದಲೇ ಅವಮಾನ ಮಾಡಿಸಿಕೊಂಡವರಿಗೆ ಯೋಗ್ಯವಾದ ನಡೆಯದು. ಮ್ಯಾಕ್ರನ್ ಕೂಡ ‘ನೋ’ ಅಂದರು. ವಿಶ್ವಸಂಸ್ಥೆಯ ಸದಸ್ಯತ್ವಕ್ಕೆ ಈ ಮಂಡಳಿಯ ಸದಸ್ಯತ್ವ ವನ್ನು ಹೋಲಿಸಲಾಗದು ಎಂಬುದು ಅವರ ಹೇಳಿಕೆ. ಅದು ಸರಿಯಾಗಿಯೇ ಇದೆ. ಆದರೆ ಟ್ರಂಪ್ ವಾದ ಕೂಡ ಅದೇ. ಈಗಾಗಲೇ ಸತ್ತು ಹೆಣವಾಗಿರುವ ವಿಶ್ವಸಂಸ್ಥೆಯನ್ನು ಇನ್ನಷ್ಟು ಬಡಿದು ಸಾಯಿಸುವುದು ಅವರ ಉದ್ದೇಶ.
ನಾಜೂಕಾದ ಮಾತನಾಡಿ ನಯವಾಗಿ ವ್ಯವಹರಿಸುವ ರಾಜತಾಂತ್ರಿಕರಿಗೆಲ್ಲ ಅಚ್ಚರಿ ಹುಟ್ಟಿಸುವಂತೆ ಟ್ರಂಪ್ ನೇರವಾದ ರಾಜಕೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಉದಾ ಹರಣೆಗೆ, ದಾವೋಸ್‌ನಲ್ಲಿ ಜಾಗತಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಸೇರಿದ್ದ ಯುರೋಪಿಯನ್ ದೇಶಗಳ ನಡುವೆ ಹೋಗಿ ನಿಂತು ಗ್ರೀನ್‌ಲ್ಯಾಂಡ್ ವಿಷಯದಲ್ಲಿ ನಾನು ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ನ್ಯಾಟೋ ದೇಶಗಳ ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲು ಗ್ರೀನ್‌ಲ್ಯಾಂಡ್ ಯತ್ನಿಸುತ್ತಿರುವಾಗ ಟ್ರಂಪ್ ‘ಶಾಂತಿ ಮಂಡಳಿಯು ಈವರೆಗೆ ಜಗತ್ತಿನಲ್ಲಿ ರಚನೆಯಾದ ಯಾವುದೇ ಜಾಗತಿಕ ಒಕ್ಕೂಟಕ್ಕಿಂತಲೂ ಪ್ರಭಾವಿ ಒಕ್ಕೂಟವಾಗಿರುತ್ತದೆ’ ಎಂದು ಹೇಳಿದ್ದಾರೆ. 2026ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುವ ವೇಳೆಗೆ ಜಗತ್ತಿನ ಎಲ್ಲಾ ಯುದ್ಧಗಳನ್ನೂ ನಿಲ್ಲಿಸುವುದು ಅವರ ಹವಣಿಕೆಯಿರಬಹುದು.
ಕೆಲ ಯುರೋಪಿಯನ್ ದೇಶಗಳು ಎಷ್ಟು ದಯನೀಯ ಸ್ಥಿತಿಗೆ ಹೋಗಿವೆ ಅಂದರೆ, ಅವು ಶಾಂತಿ ಮಂಡಳಿಗೆ ಜಂಟಿ ಭದ್ರತೆ ಇರಬೇಕು ಎಂದು ಅಮೆರಿಕವನ್ನು ಕೇಳತೊಡಗಿವೆ. ಅಂದರೆ ಅವುಗಳಿಗೆ ವಿಷಯ ಅರ್ಥವಾಗಿಲ್ಲ. ನ್ಯಾಟೋ ಒಕ್ಕೂಟವೇ ಜಂಟಿ ಪಡೆ. ಆದರೆ ಟ್ರಂಪ್‌ಗೆ ನ್ಯಾಟೋ ಅಪ್ರಸ್ತುತವಾಗಿದೆ.
ಸುದೀರ್ಘ ಕಾಲದಿಂದ ಅಮೆರಿಕದ ಭದ್ರತೆಯ ಛತ್ರದಲ್ಲಿ ಹಾಯಾಗಿದ್ದ ಯುರೋಪ್‌ಗೆ ಈಗ ಆಘಾತದಿಂದ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಟ್ರಂಪ್ ಆಡುತ್ತಿರುವ ಆಟದಿಂದ ಸಮಸ್ಯೆಗೆ ಸಿಲುಕದೆ ಇರುವ ಏಕೈಕ ನ್ಯಾಟೋ ದೇಶವೆಂದರೆ ಟರ್ಕಿ. ಅದು ನ್ಯಾಟೋ ದಲ್ಲಿದ್ದುಕೊಂಡೇ ತನ್ನ ಸ್ವಂತ ಸೇನೆಯನ್ನು ಗಟ್ಟಿಯಾಗಿ ಕಟ್ಟಿಕೊಂಡಿದೆ.
***
ಟ್ರಂಪ್ ಆಡುವ ಮಾತುಗಳಾಚೆ ಏನಿರುತ್ತದೆ ಎಂಬುದನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಅದಕ್ಕೊಂದು ಸ್ಪಷ್ಟವಾದ ಶೈಲಿ ಇದೆ. ಅಸಾಧ್ಯವಾದುದನ್ನು ಸಂಭವನೀಯ ಎಂಬಂತೆ ಮೊದಲು ಬಿಂಬಿಸುವುದು. ನಂತರ ಅದು ಸಾಧ್ಯವೇ ಎಂದು ಹುಡುಕುವುದು!
ಅಮೆರಿಕದ ಹಿತಾಸಕ್ತಿಗಳಲ್ಲಿ ಮೂಗು ತೂರಿಸುವ ಯಾವುದೇ ದೇಶವನ್ನೂ ಅವರು ಗೌರ ವಿಸುವುದಿಲ್ಲ. ವಿಶ್ವಸಂಸ್ಥೆಯನ್ನು ಮುಚ್ಚಬೇಕು, ಏಕೆಂದರೆ ಅದರ ಚಾರ್ಟರ್ ಅಮೆರಿಕಕ್ಕೆ ಅನುಕೂಲಕರವಾಗಿಲ್ಲ ಮತ್ತು ಅದರ ಕಾರ್ಯವಿಧಾನ ಪರಿಣಾಮಕಾರಿ ಯಾಗಿಲ್ಲ. ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ ಒಂದು ದೇಶ ಇನ್ನೊಂದು ದೇಶವನ್ನು ವಶಪಡಿಸಿ ಕೊಳ್ಳುವುದು ಅಕ್ರಮ. ಅದು ಸಾಮ್ರಾಜ್ಯಗಳ ಆಳ್ವಿಕೆಯನ್ನು ಅಂತ್ಯಗೊಳಿಸಿದೆ. ಬ್ರಿಟಿಷ್ ಸಾಮ್ರಾಜ್ಯ ಅನೈತಿಕವಾಗಿತ್ತು, ಆದರೆ ಅಕ್ರಮವಾಗಿರಲಿಲ್ಲ. ನ್ಯಾಟೋ ಎಂಬು ದೊಂದು ಅವಶೇಷ. ಈಗ ಅದು ಪರಾವಲಂಬಿಯಾಗಿದೆ.
ಅಮೆರಿಕದ ಸಂಪತ್ತು ಮತ್ತು ಪ್ರಭಾವವನ್ನು ಹೆಚ್ಚಿಸಲು ಆರ್ಥಿಕ ಮತ್ತು ಮಿಲಿಟರಿ ಬಲವನ್ನು ಬಳಸಲು ಟ್ರಂಪ್ ಸಿದ್ಧರಿದ್ದಾರೆ. ‘ಮೇಕ್ ಅಮೆರಿಕಾ ಗ್ರೇಟ್ ಅಗೇನ್’- MAGA ಎಂಬುದರ ಅರ್ಥವೇ ಅದು. ಉಕ್ರೇನ್‌ನೊಳಗೆ ರಷ್ಯಾ ನುಸುಳಿರುವುದರಿಂದ ಯುರೋಪ್‌ಗೆ ಬೇಸರವಾಗುತ್ತದೆ ಅಂತಾದರೆ ಅದು ಯುರೋಪ್‌ನ ಸಮಸ್ಯೆ.
ಅಮೆರಿಕಕ್ಕೆ ಅದರಲ್ಲಿ ಪರೋಕ್ಷ ಹಿತಾಸಕ್ತಿಯಷ್ಟೇ ಇದೆ. ಅದರ ಬದಲಿಗೆ ಚೀನಾದಿಂದ ಎದುರಾಗುವ ಸವಾಲುಗಳ ಬಗ್ಗೆ ಟ್ರಂಪ್ ತಲೆಕೆಡಿಸಿಕೊಳ್ಳುತ್ತಾರೆ. ಟ್ರಂಪ್ ಹೋಗುತ್ತಿರುವ ವೇಗವನ್ನು ನೋಡಿ ಸಾಂಪ್ರದಾಯಿಕ ಜಗತ್ತು ನಡುಗಲು ಕಾರಣವಿದೆ. ದೇಶಗಳ ಸಾರ್ವ ಭೌಮತೆಗಿಂತ ಟ್ರಂಪ್‌ಗೆ ಅಮೆರಿಕದ ಭದ್ರತೆಯೇ ಹೆಚ್ಚಾದರೆ ಕತಾರ್‌ಗೂ ಗ್ರೀನ್‌ಲ್ಯಾಂಡ್ ನಷ್ಟೇ ಅಪಾಯವಿದೆ.
ಕತಾರ್ ದೇಶ ಪಶ್ಚಿಮ ಏಷ್ಯಾ ಅಥವಾ ಮಧ್ಯಪ್ರಾಚ್ಯದಲ್ಲಿ ಅಮೆರಿಕಕ್ಕೆ ಗ್ವಾಮ್ ಆಗಬಹುದು. ವಾಷಿಂಗ್ಟನ್‌ನಿಂದ ಗ್ವಾಮ್ 8000 ಮೈಲು ದೂರವಿದ್ದರೆ, ಕತಾರ್ ಕೇವಲ 7000 ಮೈಲು ದೂರವಿದೆ.
ಗ್ವಾಮ್‌ನಲ್ಲಿ ಅಮೆರಿಕದ ನೌಕಾನೆಲೆಯಿದೆ; ಕತಾರ್‌ನಲ್ಲೂ ಇದೆ. 1899ರಿಂದಲೇ ಗ್ವಾಮ್ ಅಮೆರಿಕದ ಒಂದು ಭಾಗವಾಗಿದೆ. ಸ್ಪೇನ್ ಜತೆಗಿನ ಯುದ್ಧದಲ್ಲಿ ಗೆದ್ದಿದ್ದಕ್ಕೆ ಸಿಕ್ಕ ಉಡುಗೊರೆ ಯದು. ಕತಾರ್ ದೇಶ ಗ್ರೀನ್‌ಲ್ಯಾಂಡ್‌ಗಿಂತ ಹೆಚ್ಚಿನ ಬೆಲೆ ಕೇಳಬಹುದು. ಅಮೆರಿಕಕ್ಕೆ ಅದರಿಂದೇನೂ ಸಮಸ್ಯೆಯಿಲ್ಲ. ಕಾಗದದ ಹಣವನ್ನು ಈಗ ಕತಾರ್‌ಗೆ ನೀಡಿದರೆ, ಕತಾರ್ ಅಮೆರಿಕದ ಭಾಗವಾದ ಮೇಲೆ ಆ ಹಣ ಅಮೆರಿಕಕ್ಕೇ ಬರುತ್ತದೆ.
1867ರಲ್ಲಿ ರಷ್ಯಾದಿಂದ ಅಲಾಸ್ಕಾವನ್ನು 7.2 ಮಿಲಿಯನ್ ಡಾಲರ್‌ಗೆ ಅಮೆರಿಕ ಖರೀದಿಸಿ ತ್ತು. ಇವತ್ತು ಅದು 132 ಮಿಲಿಯನ್ ಡಾಲರ್‌ಗೆ ಸಮ. 1917ರಲ್ಲಿ ಡೆನ್ಮಾರ್ಕ್ʼನಿಂದ ವರ್ಜಿನ್ ಐಲ್ಯಾಂಡನ್ನು ಅಮೆರಿಕ ಖರೀದಿಸಿತ್ತು. ಅಂದರೆ ಡೆನ್ಮಾರ್ಕ್ ಈ ಹಿಂದೆ ಇಂಥ ವ್ಯಾಪಾರ ಮಾಡಿದೆ. 1946ರಲ್ಲೇ ಅಮೆರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್ ಡೆನ್ಮಾರ್ಕ್ ಬಳಿ 100 ಮಿಲಿಯನ್ ಡಾಲರ್‌ಗೆ ಗ್ರೀನ್‌ಲ್ಯಾಂಡನ್ನು ಕೇಳಿದ್ದರು.
2ನೇ ಮಹಾಯುದ್ಧದ ವೇಳೆ ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕದ ಸೇನಾನೆಲೆಯನ್ನು ಸ್ಥಾಪಿಸಿದ ಬಳಿಕ ಅವರು ಈ ಪ್ರಸ್ತಾಪ ಇರಿಸಿದ್ದರು. 1951ರಲ್ಲಿ ಅಮೆರಿಕ ಮತ್ತು ಗ್ರೀನ್ʼಲ್ಯಾಂಡ್ ನಡುವೆ ಏರ್ಪಟ್ಟ ರಕ್ಷಣಾ ಒಪ್ಪಂದದ ಪ್ರಕಾರ ನ್ಯಾಟೋ ಅಸ್ತಿತ್ವದಲ್ಲಿ ಇರುವವರೆಗೂ ಗ್ರೀನ್‌ಲ್ಯಾಂಡ್‌ನಲ್ಲಿ ರಕ್ಷಣಾ ವ್ಯವಸ್ಥೆಗಳನ್ನು ನಿರ್ಮಿಸಲು ಅಮೆರಿಕಕ್ಕೆ ಹಕ್ಕಿದೆ.
ಅಮೆರಿಕವನ್ನು ಗ್ರೇಟ್ ಮಾಡುವ ಟ್ರಂಪ್ ಕನಸಿಗೆ ನ್ಯಾಟೋ ಅಡ್ಡಿಯಾಗಿರುವುದಕ್ಕೆ ಇದೂ ಒಂದು ಕಾರಣ. ಅಮೆರಿಕ ನೇತೃತ್ವದ ಪಶ್ಚಿಮವನ್ನು ಕಮ್ಯುನಿಸ್ಟ್ ಸೋವಿಯತ್ ಒಕ್ಕೂಟ ದಿಂದ ರಕ್ಷಿಸಿಕೊಳ್ಳಲು ನ್ಯಾಟೋ ರಚನೆಯಾಗಿತ್ತು. 1990ರಲ್ಲಿ ಸೋವಿಯತ್ ಒಕ್ಕೂಟ ಪತನವಾದಾಗಲೇ ನ್ಯಾಟೋದ ಮೂಲ ಉದ್ದೇಶವೂ ಅಂತ್ಯವಾಗಿ, ವಾರ್ಸಾ ಒಪ್ಪಂದ ಕೇವಲ ಸ್ಮರಣೆಗೆ ಸೀಮಿತವಾಯಿತು. ಆದರೆ ಪಶ್ಚಿಮ ಯುರೋಪಿಯನ್ ದೇಶಗಳು ನ್ಯಾಟೋವನ್ನು ಜೀವಂತವಾಗಿಟ್ಟುಕೊಂಡಿದ್ದವು.
ಏಕೆಂದರೆ ನ್ಯಾಟೋಗೆ ಹಣ ಸುರಿಯುವುದು ಅಮೆರಿಕ. ಯುರೋಪ್‌ಗೆ ಅದು ಹಾಲು ಕರೆಯುವ ಹಸು. ವಿಶ್ವಸಂಸ್ಥೆಯ ಬಗ್ಗೆ ಟ್ರಂಪ್‌ಗೆ ಇರುವ ತಕರಾರಿನಲ್ಲಿ ಹುರುಳಿದೆ. ಎರಡನೇ ವಿಶ್ವ ಮಹಾಯುದ್ಧದಲ್ಲಿ ಗೆದ್ದ ಐದು ದೇಶಗಳು ಕಟ್ಟಿದ ಜಾಗತಿಕ ಒಕ್ಕೂಟವದು. ನಂತರದಲ್ಲಿ ಅದು ಸುಧಾರಣೆಯೇ ಆಗಿಲ್ಲ. ಹೀಗಾಗಿ ಇಂದು ನಪುಂಸಕನಾಗಿದೆ.
1930ರಲ್ಲಿ ಲೀಗ್ ಆಫ್ ನೇಷನ್ಸ್ ಎಷ್ಟು ದಿವಾಳಿಯಾಗಿತ್ತೋ ಅದಕ್ಕಿಂತ ಹೆಚ್ಚು ಬೌದ್ಧಿಕ ವಾಗಿ ಮತ್ತು ರಾಜಕೀಯವಾಗಿ ಇಂದು ವಿಶ್ವಸಂಸ್ಥೆ ದಿವಾಳಿಯಾಗಿದೆ. ಲೀಗ್ ಆಫ್ ನೇಷನ್ಸ್‌ನ ವೈಫಲ್ಯದ ಅವಶೇಷಗಳ ಮೇಲೆ ಕಾಲಿಟ್ಟು ಅಮೆರಿಕ 1930ರಲ್ಲಿ ಅದರಿಂದ ಹೊರ ಹೋಗಿತ್ತು. ವಿಶ್ವಸಂಸ್ಥೆ ಮತ್ತು ನ್ಯಾಟೋ ಕೂಡ ಇಷ್ಟೊತ್ತಿಗೆ ವಯಸ್ಸಾಗಿ ಸಾಯ ಬೇಕಿತ್ತು. ಟ್ರಂಪ್ ಈಗ ದಯಾಮರಣ ನೀಡುತ್ತಿದ್ದಾರೆ.
ಅಮೆರಿಕಕ್ಕೆ ಡೊನಾಲ್ಡ್ ಟ್ರಂಪ್ ಶಾಶ್ವತವಾಗಿ ಅಧ್ಯಕ್ಷರಾಗಿರುವುದಿಲ್ಲ. ಆದರೆ ಅವರು ಈಗಾಗಲೇ ಅಂತಾರಾಷ್ಟ್ರೀಯ ಸಂಬಂಧಗಳ ಸ್ವರೂಪವನ್ನು ಗುರುತು ಸಿಗದಂತೆ ಬದಲಿಸಿ ದ್ದಾರೆ. 20ನೇ ಶತಮಾನವು ಕೊನೆಗೂ ಮುಗಿದು 21ನೇ ಶತಮಾನ ಆರಂಭವಾಗಿದೆಯೇ ಅಥವಾ ಇಲ್ಲವೇ ಎಂಬುದು 2026ರ ಅಂತ್ಯದ ವೇಳೆಗೆ ನಮಗೆಲ್ಲರಿಗೂ ತಿಳಿಯುತ್ತದೆ.
(ಲೇಖಕರು ಹಿರಿಯ ಪತ್ರಕರ್ತರು)