ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಕಾಶ್ಮೀರದ ಕಣವೆಯಲ್ಲಿ ಅಮಾಯಕ ಹೆಣ್ಣು ಮಕ್ಕಳ ಆಪದ್ಭಾಂಧವ

ಗಡಿ ನಿಯಂತ್ರಣ ರೇಖೆಯ (LoC) ಅತ್ಯಂತ ಸೂಕ್ಷ ಪ್ರದೇಶವಾದ ಕುಪ್ವಾರದಲ್ಲಿ ಇವರು ಕೆಲಸ ಮಾಡಲು ಆರಂಭಿಸಿದಾಗ, ಉಗ್ರರು ಇವರನ್ನು ಗುಪ್ತಚರ ಏಜೆಂಟ್ ಎಂದು ಶಂಕಿಸಿ 19 ಬಾರಿ ಅಪಹರಿಸಿದ್ದರು. ಆದರೆ ಅಧಿಕ್ ಅವರ ನಿಷ್ಕಲ್ಮಶ ಸೇವೆಯನ್ನು ಕಂಡಿದ್ದ ಸ್ಥಳೀಯ ಕಾಶ್ಮೀರಿ ಬಾಂಧವರೇ ಉಗ್ರರ ಎದುರು ನಿಂತು ಇವರನ್ನು ಪ್ರತಿ ಬಾರಿಯೂ ಜೀವಂತವಾಗಿ ಬಿಡಿಸಿಕೊಂಡು ಬರುತ್ತಿದ್ದರು. ಜೀವಕ್ಕೆ ಕಂಟಕವಿದ್ದರೂ ಅಧಿಕ್ ಹೆದರಿ ಓಡಲಿಲ್ಲ

ಕಾಶ್ಮೀರದ ಕಣವೆಯಲ್ಲಿ ಅಮಾಯಕ ಹೆಣ್ಣು ಮಕ್ಕಳ ಆಪದ್ಭಾಂಧವ

-

ಒಂದೊಳ್ಳೆ ಮಾತು

ಅಹ್ಮದ್ ನಗರದ ರೈತ ಕುಟುಂಬದಲ್ಲಿ ಜನಿಸಿದ ಅಧಿಕ್ ಕದಂ, 1997ರಲ್ಲಿ ಕೇವಲ 15 ದಿನಗಳ ಸಂಶೋಧನಾ ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ಕಾಲಿಟ್ಟಿದ್ದರು. ಆದರೆ ಅಲ್ಲಿ ಹಿಂಸಾಚಾರದಿಂದ ತಂದೆ-ತಾಯಿಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದ ಅನೇಕ ಅನಾಥ ಮಕ್ಕಳ ಸ್ಥಿತಿ ಅವರ ಇಡೀ ಜೀವನದ ದಾರಿಯನ್ನೇ ಬದಲಾಯಿಸಿತು. ಕಣಿವೆಯ ಕಣ್ಣೀರು ಒರೆಸಲು ಅವರು ಅ ಉಳಿದು ಕೊಂಡರು.

ಗಡಿ ನಿಯಂತ್ರಣ ರೇಖೆಯ (LoC) ಅತ್ಯಂತ ಸೂಕ್ಷ ಪ್ರದೇಶವಾದ ಕುಪ್ವಾರದಲ್ಲಿ ಇವರು ಕೆಲಸ ಮಾಡಲು ಆರಂಭಿಸಿದಾಗ, ಉಗ್ರರು ಇವರನ್ನು ಗುಪ್ತಚರ ಏಜೆಂಟ್ ಎಂದು ಶಂಕಿಸಿ 19 ಬಾರಿ ಅಪಹರಿಸಿದ್ದರು. ಆದರೆ ಅಧಿಕ್ ಅವರ ನಿಷ್ಕಲ್ಮಶ ಸೇವೆಯನ್ನು ಕಂಡಿದ್ದ ಸ್ಥಳೀಯ ಕಾಶ್ಮೀರಿ ಬಾಂಧವರೇ ಉಗ್ರರ ಎದುರು ನಿಂತು ಇವರನ್ನು ಪ್ರತಿ ಬಾರಿಯೂ ಜೀವಂತವಾಗಿ ಬಿಡಿಸಿಕೊಂಡು ಬರುತ್ತಿದ್ದರು. ಜೀವಕ್ಕೆ ಕಂಟಕವಿದ್ದರೂ ಅಧಿಕ್ ಹೆದರಿ ಓಡಲಿಲ್ಲ.

ಕಾಶ್ಮೀರದ ಸಂಘರ್ಷದಲ್ಲಿ ಅತಿ ಹೆಚ್ಚು ನೊಂದಿದ್ದು ಅಲ್ಲಿನ ಹೆಣ್ಣುಮಕ್ಕಳು. ಅವರಿಗಾಗಿ 2002ರಲ್ಲಿ ಅಧಿಕ್ ‘ಬಾರ್ಡರ್‌ಲೆಸ್ ವರ್ಲ್ಡ್ ಫೌಂಡೇಶನ್’ (BWF) ಸಂಸ್ಥೆಯನ್ನು ಸ್ಥಾಪಿಸಿ, ‘ಬಸೇರಾ-ಎ-ತಬಸ್ಸುಮ್’ (ನಗುವಿನ ಮನೆ) ಎಂಬ ಅನಾಥಾಶ್ರಮಗಳನ್ನು ಆರಂಭಿಸಿದರು.

ಇದನ್ನೂ ಓದಿ: Roopa Gururaj Column: ಶಕುನಿ ಮತ್ತು ಪವಿತ್ರೇಶ್ವರಂನ ನೈಜ ಜನಪದ ಕಥೆ

ಹಿಂಸಾಚಾರದಲ್ಲಿ ಸರ್ವಸ್ವವನ್ನೂ ಕಳೆದುಕೊಂಡ 700ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಅಧಿಕ್ ಅವರೇ ತಂದೆಯಾಗಿ ಸಲಹಿ ಜೀವನದ ದಾರಿ ತೋರಿದ್ದಾರೆ. ಇಂದು ಆ ಹೆಣ್ಣುಮಕ್ಕಳು ಸಮಾಜ‌ ದಲ್ಲಿ ವೈದ್ಯರು, ವಕೀಲರು ಹಾಗೂ ಇಂಜಿನಿಯರ್‌ಗಳಾಗಿ ತಲೆ ಎತ್ತಿ ಬಾಳುತ್ತಿದ್ದಾರೆ. ‘ರಾಹ್-ಎ-ನಿಸ್ವಾನ್’ ಕೇಂದ್ರದ ಮೂಲಕ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಹಾಗೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತರಬೇತಿ ನೀಡಿ, ಅವರಿಗೆ ಆರ್ಥಿಕ ಭದ್ರತೆ ಒದಗಿಸಿದ್ದಾರೆ.

ಅಷ್ಟೇ ಅಲ್ಲ ಪ್ರಸಿದ್ಧ ಅಲ್ಲಿನ ದಾಲ್ ಸರೋವರದ ಹೌಸ್‌ಬೋಟ್‌ಗಳಲ್ಲಿ ವಾಸಿಸುವ ಸಾವಿರಾರು ಬಡ ನಿವಾಸಿಗಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಸಿಗುವುದು ಮರೀಚಿಕೆಯಾಗಿತ್ತು. ಇದನ್ನು ಮನಗಂಡ ಅಧಿಕ್, ಸರೋವರದ ಒಳಗೆ ಆಮ್ಲಜನಕ, ಸ್ಟ್ರೆಚರ್ ಹಾಗೂ ಸುಸಜ್ಜಿತ ವೈದ್ಯಕೀಯ ಸೌಲಭ್ಯವಿರುವ ವಿಶಿಷ್ಟ ‘ಶಿಖಾರಾ ಆಂಬ್ಯುಲೆನ್ಸ್’ (Water Ambulance) ವ್ಯವಸ್ಥೆ ಕಲ್ಪಿಸಿದರು. ಇದು ನೂರಾರು ಗರ್ಭಿಣಿಯರು ಹಾಗೂ ವೃದ್ಧರ ಜೀವ ಉಳಿಸುತ್ತಿದೆ.

‘ಕಾಶ್ಮೀರ್ ಲೈಫ್ ಲೈನ್’ ಅಡಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುವುದರ ಜೊತೆಗೆ, ಪೆಲೆಟ್ ಗನ್‌‌ ಗಳಿಂದ ದೃಷ್ಟಿ ಕಳೆದುಕೊಂಡಿದ್ದ ಸಾವಿರಾರು ಕಾಶ್ಮೀರಿ ಯುವಕರಿಗೆ ದೇಶದ ಪ್ರಮುಖ ತಜ್ಞರಿಂದ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ವ್ಯವಸ್ಥೆಯನ್ನೂ ಇವರು ಮಾಡಿದ್ದಾರೆ.

ಕಾಶ್ಮೀರವೆಂದರೆ ಹಿಂಸೆ, ಭಯೋತ್ಪಾದನೆ ಎಂದು ಹೆದರಿ ದೂರ ಸರಿಯುತ್ತಿದ್ದ ನೂರಾರು ಜನರ ನಡುವೆ ಪ್ರೀತಿಯ ಬೀಜ ಬಿತ್ತಿ ನೂರಾರು ಹೆಣ್ಣುಮಕ್ಕಳಿಗೆ ರಕ್ಷಕರಾಗಿರುವ ಅಧಿಕ್ ಕದಂ ಅವರಿಗೆ ದಲೈ ಲಾಮಾ ಅವರ ಹಸ್ತದಿಂದ ಪ್ರತಿಷ್ಠಿತ ‘ಮದರ್ ತೆರೇಸಾ ಪ್ರಶಸ್ತಿ’ ಲಭಿಸಿದೆ.

ಬಂದೂಕಿನ ಗುಂಡುಗಳಿಗೆ ಕೇವಲ ಜೀವ ತೆಗೆಯಲು ಮಾತ್ರ ಸಾಧ್ಯ, ಆದರೆ ನಿಸ್ವಾರ್ಥ ಪ್ರೀತಿ ಮತ್ತು ಕರುಣೆಗೆ ಇಡೀ ಸಮಾಜವನ್ನೇ ಬದಲಾಯಿಸುವ ಶಕ್ತಿ ಇದೆ ಎಂಬುದಕ್ಕೆ ಅಧಿಕ್ ಕದಂ ಅವರ ಬದುಕೇ ದೊಡ್ಡ ಸಾಕ್ಷಿ. ಕಣಿವೆಯ ಮಕ್ಕಳಲ್ಲಿ ಅವರು ಮೂಡಿಸುತ್ತಿರುವ ನಗು, ಇಡೀ ಮಾನವ ಕುಲಕ್ಕೆ ಪ್ರೇರಣೆಯಾಗಿದೆ.

ಇಂದಿನ ದಿನಗಳಲ್ಲಿ ನಾನು ನನ್ನ ಕುಟುಂಬ ನನ್ನ ಮಕ್ಕಳು, ಅವರ ಏಳಿಗೆ ಎಂದು ಅಗತ್ಯಕ್ಕಿಂತ 100 ಪಟ್ಟು ಹೆಚ್ಚು ಆಸ್ತಿ ಮಾಡಿ ತಮ್ಮನ್ನು ತಾವು ಉದ್ಧಾರ ಮಾಡಿಕೊಳ್ಳುವ ಸ್ವಾರ್ಥಪರ ಜನರ ನಡುವೆ ಇಂತಹವರು ನಕ್ಷತ್ರಗಳಾಗಿ ಮಿನುಗುತಾರೆ. ಸಮಾಜಕ್ಕೆ ಒಳಿತನ್ನು ಮಾಡಲು ಅನೇಕ ಬಾರಿ ನಮ್ಮಲ್ಲಿ ಹಣ, ಆಸ್ತಿ, ಅಧಿಕಾರ ಬೇಕಾಗಿಲ್ಲ. ಆದರೆ ನಮಗೆ ಒಳ್ಳೆ ಬದುಕು ವ್ಯಕ್ತಿತ್ವ ನೀಡಿದ ಸಮಾಜಕ್ಕೆ ಏನನ್ನಾದರೂ ಮಾಡುವ ಒಳ್ಳೆಯ ಮನಸ್ಸು ಮತ್ತು ಛಲ ಇರಬೇಕು ಅಷ್ಟೇ. ಅಧಿಕ್ ಕದಂನಂತಹ ಒಬ್ಬರು ನೂರಾರು ಜನರಿಗೆ ಪ್ರೇರಣೆಯಾಗಿ ಸಾವಿರಾರು ಜನರ ಬದುಕನ್ನು ಬದಲಾಯಿಸುವ ಶಕ್ತಿ ಹೊಂದಿರುತ್ತಾರೆ. ಭಾರತದ ಪ್ರತಿ ಮನೆಯಲ್ಲೂ ಇಂತಹ ಧೀಮಂತ ಮಕ್ಕಳು ಬೆಳೆಯುವಂತಾಗಲಿ.