ಪಾದಚಾರಿ ಮಾರ್ಗ ಒತ್ತುವರಿ ತೆರವು ಆರಂಭ
ನಗರದ ಅನೇಕ ಪ್ರದೇಶಗಳಲ್ಲಿ ಅಂಗಡಿಗಳ ಮುಂಭಾಗ ನಿರ್ಮಿಸಲಾಗಿದ್ದ ಮೆಟ್ಟಿಲುಗಳು, ನಾಮಫ ಲಕಗಳು, ಕಬ್ಬಿಣದ ಶೆಡ್‌ಗಳು, ತಳ್ಳುಗಾಡಿಗಳು, ಕಟ್ಟಡ ತ್ಯಾಜ್ಯ, ಶಾಶ್ವತ ಹಾಗೂ ತಾತ್ಕಾಲಿಕ ಪೆಟ್ಟಿಗೆ ಗಳು, ಓಎಫ್ʼಸಿ ಕೇಬಲ್‌ಗಳ ಅಡ್ಡಿಗಳು ಸೇರಿದಂತೆ ಪಾದಚಾರಿಗಳ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಎಲ್ಲ ರೀತಿಯ ಅತಿಕ್ರಮಣಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.
-
ಸುರಕ್ಷಿತ ಪಾದಚಾರಿ ಸಂಚಾರಕ್ಕೆ ಜಿಬಿಎ ಒತ್ತು
ಸ್ವಯಂಪ್ರೇರಿತ ತೆರವಿಗೆ ವ್ಯಾಪಾರಿಗಳಿಗೆ ಮನವಿ
ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳನ್ನು ಒತ್ತುವರಿರಹಿತಗೊಳಿಸಿ ನಾಗರಿಕರಿಗೆ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಬುಧವಾರದಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಗೊಳಿಸಿದೆ.
ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನದ ಅಂಗವಾಗಿ ನಗರದ ಪ್ರಮುಖ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ವಿವಿಧ ರೀತಿಯ ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಭಾಗವಹಿಸಿದ್ದರು.
ಜೆಸಿಬಿ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳ ಸಹಾಯದಿಂದ ಪಾದಚಾರಿ ಮಾರ್ಗಗಳ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ರಚನೆಗಳನ್ನು ತೆರವುಗೊಳಿಸಲಾಯಿತು.
ನಗರದ ಅನೇಕ ಪ್ರದೇಶಗಳಲ್ಲಿ ಅಂಗಡಿಗಳ ಮುಂಭಾಗ ನಿರ್ಮಿಸಲಾಗಿದ್ದ ಮೆಟ್ಟಿಲುಗಳು, ನಾಮಫ ಲಕಗಳು, ಕಬ್ಬಿಣದ ಶೆಡ್‌ಗಳು, ತಳ್ಳುಗಾಡಿಗಳು, ಕಟ್ಟಡ ತ್ಯಾಜ್ಯ, ಶಾಶ್ವತ ಹಾಗೂ ತಾತ್ಕಾಲಿಕ ಪೆಟ್ಟಿಗೆ ಗಳು, ಓಎಫ್ʼಸಿ ಕೇಬಲ್‌ಗಳ ಅಡ್ಡಿಗಳು ಸೇರಿದಂತೆ ಪಾದಚಾರಿಗಳ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಎಲ್ಲ ರೀತಿಯ ಅತಿಕ್ರಮಣಗಳನ್ನು ಅಧಿಕಾರಿಗಳು ತೆರವುಗೊಳಿಸಿದರು. ಪಾದಚಾರಿ ಮಾರ್ಗಗಳು ಸಾರ್ವಜನಿಕ ಆಸ್ತಿಯಾಗಿದ್ದು, ಅವುಗಳ ಮೇಲೆ ಖಾಸಗಿ ಸ್ವಾಧೀನ ಅಥವಾ ಅನಧಿಕೃತ ಬಳಕೆ ನಾಗರಿಕರ ಹಕ್ಕಿಗೆ ಧಕ್ಕೆ ತರುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಇದನ್ನೂ ಓದಿ: GBA Voter List: ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಐದು ಪಾಲಿಕೆಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ: ಬೆಂಗಳೂರು ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಾರತಹಳ್ಳಿ-ಇಬ್ಲೂರು ಜಂಕ್ಷನ್, ವರ್ತೂರು ರಸ್ತೆ, ಐಟಿಪಿಎಲ್ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, ಟಿನ್ ಫ್ಯಾಕ್ಟರಿ, ರಾಮಮೂರ್ತಿನಗರ, ಕುಂದಲಹಳ್ಳಿ ಹಾಗೂ ಹೂಡಿ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆಯುಕ್ತ ರಮೇಶ್ ಡಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹಲವು ಅತಿಕ್ರಮಣಗಳನ್ನು ತೆರವುಗೊಳಿಸಲಾಯಿತು.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಟ್ರಿನಿಟಿ ಜಂಕ್ಷನ್‌ನಿಂದ ಎಂಜಿ ಉದ್ಯಾನ, ಇಂದಿರಾನಗರ, ದೊಮ್ಮಲೂರು, ವಿವೇಕಾನಂದ ಮೆಟ್ರೋ ನಿಲ್ದಾಣ, ಬೆನ್ನಿಗಾನಹಳ್ಳಿ, ಜಯನಗರ, ಸೌತ್ ಎಂಡ್ ಸರ್ಕಲ್, ಓಕಳೀಪುರಂ ಹಾಗೂ ಮೆಜೆಸ್ಟಿಕ್ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯಿತು. ನಗರದ ಅತ್ಯಂತ ಜನನಿಬಿಡ ಪ್ರದೇಶಗಳಂದಾದ ಈ ಭಾಗಗಳಲ್ಲಿ ಪಾದಚಾರಿ ಮಾರ್ಗ ಮುಕ್ತಗೊಳಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಆಯುಕ್ತ ಜಗದೀಶ್.ಜಿ ತಿಳಿಸಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉತ್ತರಹಳ್ಳಿ, ಕೊತ್ತನೂರು, ವಿಶ್ವಪ್ರಿಯ ಲೇಔಟ್, ಪದ್ಮನಾಭನಗರ, ಜಯನಗರ, ಜೆಪಿ ನಗರ, ಎಚ್‌ಎಸ್ಆರ್ ಲೇಔಟ್, ಕೋರಮಂಗಲ ಹಾಗೂ ಬಿಟಿಎಂ ಎರಡನೇ ಹಂತ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೀದಿಬದಿ ವ್ಯಾಪಾರಿಗಳು ಹಾಗೂ ಅಂಗಡಿಗಳಿಂದ ಉಂಟಾಗಿದ್ದ ಅತಿಕ್ರಮಣಗಳನ್ನು ತೆರವುಗೊಳಿಸಲಾಯಿತು.
ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯಲಹಂಕ, ಹೆಬ್ಬಾಳ, ವಿದ್ಯಾರಣ್ಯಪುರ, ಸಹಕಾರನಗರ, ಕ್ಲಾರ್ಕ್ ರಸ್ತೆ ಹಾಗೂ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಕಾರ್ಯಾಚರಣೆ ನಡೆ ಯಿತು. ಪಾದಚಾರಿಗಳ ಓಡಾಟಕ್ಕೆ ಅಡ್ಡಿಯಾಗಿದ್ದ ವಿವಿಧ ತಾತ್ಕಾಲಿಕ ಮತ್ತು ಶಾಶ್ವತ ರಚನೆ ಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ತುಮಕೂರು ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎಂಇಐ ರಸ್ತೆ, ಎಂಕೆಕೆ ರಸ್ತೆ, ಚಂದ್ರ ಲೇಔಟ್, ಗೋವಿಂದ ರಾಜನಗರ, ರಾಜಾಜಿನಗರ, ಸಂಪಿಗೆ ರಸ್ತೆ, ಬುಲ್ ಟೆಂಪಲ್ ರಸ್ತೆ ಹಾಗೂ ಕತ್ರಿಗುಪ್ಪೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಅಭಿಯಾನ ಮುಂದುವರಿಕೆ
ಈ ವಿಶೇಷ ಅಭಿಯಾನವು ಒಂದು ದಿನದ ಕಾರ್ಯಾಚರಣೆಗೆ ಸೀಮಿತವಾಗದೆ ನಿರಂತರವಾಗಿ ಮುಂದುವರಿಯಲಿದೆ. ಸಾರ್ವಜನಿಕರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ನಗರದ ಎಲ್ಲ ಭಾಗಗಳಲ್ಲಿಯೂ ಪಾದಚಾರಿ ಮಾರ್ಗ ಅತಿಕ್ರಮಣಮುಕ್ತಗೊಳಿಸುವ ಗುರಿ ಜಿಬಿಎ ಹೊಂದಿದೆ. ನಗರದ ಮೂಲಸೌಕರ್ಯ ಪಾದಚಾರಿ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಸ್ವಯಂಪ್ರೇರಿತ ತೆರವಿಗೆ ಮನವಿ
ಜಿಬಿಎ ವ್ಯಾಪ್ತಿಯ ಅಂಗಡಿ ಮಾಲೀಕರು, ವಾಣಿಜ್ಯ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಗೊಳಿಸಬೇಕು ಎಂದು ಪಾಲಿಕೆಗಳು ಮನವಿ ಮಾಡಿವೆ. ಸ್ವಯಂಪ್ರೇರಿತವಾಗಿ ತೆರವುಗೊಳಿಸದಿದ್ದಲ್ಲಿ ನಿಯಮಾನುಸಾರ ಕಾರ್ಯಾಚರಣೆ ನಡೆಸಿ ಅಗತ್ಯವಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಡಿವಾಳ ಮಾರುಕಟ್ಟೆಯಲ್ಲಿ ಎಚ್ಚರಿಕೆ
ಮಡಿವಾಳ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳಿಗೆ ವಿಶೇಷ ಜಾಗೃತಿ ಮೂಡಿಸಲಾಯಿತು. ಪಾದಚಾರಿ ಮಾರ್ಗಗಳ ಮೇಲೆ ವಸ್ತುಗಳನ್ನು ಇಡದೇ ನಿಗದಿತ ಸ್ಥಳದಲ್ಲಿಯೇ ವ್ಯಾಪಾರ ನಡೆಸು ವಂತೆ ಸೂಚನೆ ನೀಡಲಾಯಿತು. ಕಸ ಎಂದರಲ್ಲಿ ಬಿಸಾಡದೆ ನಿಗದಿತ ವ್ಯವಸ್ಥೆಯ ಮೂಲಕ ವಿಲೇವಾರಿ ಮಾಡುವಂತೆ ತಿಳಿಸಲಾಯಿತು. ಮುಂದಿನ ಶುಕ್ರವಾರದಿಂದ ನಿಯಮ ಉಲ್ಲಂಘಿಸು ವವರ ವಿರುದ್ಧ ದಂಡಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿ ದ್ದಾರೆ. ನಿಯಮ ಉಲ್ಲಂಘನೆ ಮುಂದುವರಿದರೆ 5000 ರು. ದಂಡ ವಿಧಿಸುವುದರ ಜತೆಗೆ ಪಾದಚಾರಿ ಮಾರ್ಗದಲ್ಲಿ ಇರಿಸಲಾದ ವಸ್ತುಗಳನ್ನು ಜಪ್ತಿ ಮಾಡುವುದಾಗಿ ತಿಳಿಸಲಾಗಿದೆ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
![]()
ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನಿಗೂ ಸುರಕ್ಷಿತ ಪಾದಚಾರಿ ಮಾರ್ಗ ಬಳಸುವ ಹಕ್ಕಿದೆ. ಪಾದಚಾರಿ ಮಾರ್ಗ ಒತ್ತುವರಿರಹಿತವಾಗಿಡಲು ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ನಗರ ಆಡಳಿತದೊಂದಿಗೆ ಕೈಜೋಡಿಸಬೇಕು. ಇದು ಕೇವಲ ಸರಕಾರದ ಅಭಿಯಾನ ವಲ್ಲ, ನಾಗರಿಕರ ಸಹಭಾಗಿತ್ವದ ಜನಾಂದೋಲ. ಬೀದಿಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ಸರಕಾರ ಬದ್ಧವಾಗಿದ್ದು, ಪಾದಚಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯಾಪಾರ ನಡೆಸಲು ಎಲ್ಲರೂ ಸಹಕರಿಸಬೇಕು.
- ಕೃಷ್ಣ ಬೈರೇಗೌಡ, ಬೆಂಗಳೂರು ಅಭಿವೃದ್ಧಿ ಸಚಿವ