Dr D S Srinivas Prasad Column: ಮಾಧುರ್ಯದ ಮಹಾರಾಜ ಡಾ.ಪಿ.ಬಿ.ಶ್ರೀನಿವಾಸ್
ಊರುಗೋಲು ಹಿಡಿದು ಬಂದರು ನೋಡಿ ಗಂಧರ್ವ ಡಾ.ಪಿ.ಬಿ.ಶ್ರೀನಿವಾಸ್. ಅದುವರೆಗೂ ಗಿಜಿಗಿಜಿ ಗುಡುತ್ತಿದ್ದ ಜನ ಒಮ್ಮೆಲೆ ಮೌನವಾಗಿ ಆ ಅಪ್ರತಿಮ ಗಾಯಕರಾದ ಪಿಬಿಎಸ್ ಮೇಲಿನ ಅಮಿತ ವಾದ ಅಕ್ಕರೆ-ಅಭಿಮಾನ ಮತ್ತು ಆ ಸಾಧಕಶ್ರೇಷ್ಠರ ಕುರಿತಾದ ನಿಡುಗಾಲದ ಗೌರವಕ್ಕೆ ಅರ್ಹ ಮರ್ಯಾದೆ ಸಲ್ಲಿಸಿತು. ಬಾಯಿ ತೆರೆದ ಕ್ಷಣವೇ ಮಾಧುರ್ಯದ ಸಿಹಿ ಇಂಚರವನ್ನು ನಮ್ಮೆಲ್ಲರ ಕಿವಿ - ಹೃನ್ಮನಗಳಿಗೆ ಧಾರೆ ಎರೆದ ಪಿ.ಬಿ. ಶ್ರೀನಿವಾಸ್ ಮತ್ತು ಸಂಗೀತ ಒಟ್ಟೊಟ್ಟಿಗೆ ಅಲ್ಲಿ ಘನತೆಯ ವಿಜಯ ಸಾಧಿಸಿತ್ತು.
-
ಸಂಸ್ಮರಣೆ
ಡಾ.ಡಿ.ಎಸ್.ಶ್ರೀನಿವಾಸ ಪ್ರಸಾದ್
Songs may end, but it's melody lingers on. 1995-96 ಇರಬಹುದು. ಅಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜನ ಕಿಕ್ಕಿರಿದಿದ್ದರು. ಅಲ್ಲಿ ಜಯಂತಿ, ಎಸ್.ಜಾನಕಿ ಯವರೂ ಸೇರಿದಂತೆ ಅನೇಕ ಅತಿರಥ ಮಹಾರಥ ಚಲನಚಿತ್ರ ಕಲಾವಿದರು ವೇದಿಕೆಯ ಮೇಲಿದ್ದರು. ಸಭೆ ಇನ್ನೊಬ್ಬ ಮಹಾನ್ ಗಾನಕೋಗಿಲೆಗೆ ಕಾಯುತ್ತಿತ್ತು.
ಸಹಜವಾಗಿಯೇ ಸದ್ದುಗದ್ದಲ ಅಲ್ಲಿ ಇದ್ದೇ ಇತ್ತು. ಕಾರ್ಯಕ್ರಮದ ನಿರೂಪಕಿ ಅಪರ್ಣ ಅವರು ಧ್ವನಿವರ್ಧಕದಲ್ಲಿ ನೆರೆದಿದ್ದ ಜನರಿಗೆ ನೋಡಿ ಬರ್ತಾ ಇದೆ ನಾವಾಡುವ ನುಡಿಯೇ ಕನ್ನಡ ನುಡಿ, ಕನ್ನಡ ನುಡಿ, ಗಂಧದ ಗುಡಿ ಎಂದು ಉಲಿದ ಕೋಗಿಲೆ, ದಯವಿಟ್ಟು ಎಲ್ಲರೂ ಸುಮ್ಮನಿರಿ ಅಂತಂದರು.
ಊರುಗೋಲು ಹಿಡಿದು ಬಂದರು ನೋಡಿ ಗಂಧರ್ವ ಡಾ.ಪಿ.ಬಿ.ಶ್ರೀನಿವಾಸ್. ಅದುವರೆಗೂ ಗಿಜಿಗಿಜಿ ಗುಡುತ್ತಿದ್ದ ಜನ ಒಮ್ಮೆಲೆ ಮೌನವಾಗಿ ಆ ಅಪ್ರತಿಮ ಗಾಯಕರಾದ ಪಿಬಿಎಸ್ ಮೇಲಿನ ಅಮಿತ ವಾದ ಅಕ್ಕರೆ-ಅಭಿಮಾನ ಮತ್ತು ಆ ಸಾಧಕಶ್ರೇಷ್ಠರ ಕುರಿತಾದ ನಿಡುಗಾಲದ ಗೌರವಕ್ಕೆ ಅರ್ಹ ಮರ್ಯಾದೆ ಸಲ್ಲಿಸಿತು. ಬಾಯಿ ತೆರೆದ ಕ್ಷಣವೇ ಮಾಧುರ್ಯದ ಸಿಹಿ ಇಂಚರವನ್ನು ನಮ್ಮೆಲ್ಲರ ಕಿವಿ - ಹೃನ್ಮನಗಳಿಗೆ ಧಾರೆ ಎರೆದ ಪಿ.ಬಿ. ಶ್ರೀನಿವಾಸ್ ಮತ್ತು ಸಂಗೀತ ಒಟ್ಟೊಟ್ಟಿಗೆ ಅಲ್ಲಿ ಘನತೆಯ ವಿಜಯ ಸಾಧಿಸಿತ್ತು.
ಇದನ್ನೂ ಓದಿ: Vishweshwar Bhat Column: ರೆಸಿಗ್ನೇಷನ್ ಸಿಂಡ್ರೋಮ್ ಎಂದರೇನು ?
ಸ್ವಲ್ಪ ಹೊತ್ತಾದ ಮೇಲೆ ಆ ಮಹಾನ್ ಗಾಯಕರ ಮುಂದೆ ನಾನು ನಿಂತರೂ ಆ ಸುಶ್ರಾವ್ಯ ಶಾರೀರದ ಹಾಡುಗಳೆಲ್ಲ ನೆನಪಾಗಿ ಮಾತನಾಡಲು ಬಾರದೆ, ನಮಸ್ಕಾರ ಹೇಳಿ ಧನ್ಯತಾಭಾವದಲ್ಲಿ ಹೊರ ಬಂದ ಪುಣ್ಯ ನನ್ನದಾಗಿತ್ತು.
ಚೆನ್ನೈನಲ್ಲಿ ವಾಸವಾಗಿದ್ದ ಪಿ.ಬಿ.ಶ್ರೀನಿವಾಸ್ ತಮಿಳಿನಲ್ಲಿ ಜೆಮಿನಿ ಗಣೇಶನ್‌ಗೆ ಸೂಪರ್‌ಹಿಟ್ ಗೀತೆಗಳನ್ನು ಹಾಡಿದ್ದಾರೆ ನಿಜ. ಆದರೆ, ಡಾ. ರಾಜ್-ಡಾ. ಪಿ.ಬಿ. ಶ್ರೀನಿವಾಸ್ ಶರೀರ- ಶಾರೀರದ ಜೋಡಿ ಮಾಡಿದ ಮೋಡಿ ಅವರಿಬ್ಬರ ಸಹ ಸಂಯೋಜನೆಯ ಬಂದ ಹಾಡಾದನಿನದೇ ‘ನೆನಪು ದಿನವೂ ಮನದಲ್ಲಿ...’ ಎನ್ನುವ ಹಾಗೆ ಸದಾಕಾಲವೂ ಚಿರಸ್ಮರಣೀಯ ಚಿನ್ನದ ಖನಿಗಳೇ ಆಗಿ, ಒಲಿದು, ಉಲಿದು ಬಂದ ಸುಮಧುರ ಬಾಂಧವ್ಯದ ಕನ್ನಡ ನೆಲದ ಪುಣ್ಯ.
ಪಿ.ಬಿ.ಎಸ್ ಅವರ ಹಾಡುಗಳಲ್ಲಿ ಯಾವುದು ಬಹಳ ಸೊಗಸಾಗಿದೆ ಎಂಬ ನಿರ್ಧಾರಕ್ಕೆ ಬರುವುದು ಕಷ್ಟ. ಹಾಗಿರುವಾಗ ಡಾ.ರಾಜ್- ಪಿ.ಬಿ.ಎಸ್ ಅವರ ಅನುಪಮ ಜುಗಲ್ಬಂದಿಯಲ್ಲಿ ಮೂಡಿದ ಹಾಡುಗಳ ರಸಸಿಂಚನದಲ್ಲಿ ಹಾಡುಗಳ ಜ್ಯೇಷ್ಠತೆ ಇನ್ನೂ ಕಠಿಣವಾದ ಕೆಲಸ.
ಓಹಿಲೇಶ್ವರದ(1956) ಡಾ.ರಾಜ್‌ಗೆ ಶ್ರೀನಿವಾಸ್ ಅವರಿಗೆ ಹಾಡಿದ್ದರೂ ಸಹ ಇವರಿಬ್ಬರ ಜೋಡಿಯ ಯಶೋಗಾಥೆಗೆ ಮುನ್ನುಡಿಯಾದ ಚಿತ್ರ 1960ರಲ್ಲಿ ಬಂದ ‘ಭಕ್ತ ಕನಕದಾಸ’ ಚಿತ್ರ. ರಾಜ್ ಅಭಿನಯ ಕ್ಕೆ ಪಿ.ಬಿ.ಎಸ್ ಹಾಡಿದ ಹಿಂದೋಳರಾಗದ ಬಾಗಿಲನು ತೆರೆದು ಅದ್ಭುತ. ಇದೇ ಚಿತ್ರದ ‘ಕುಲಕುಲ ಕುಲವೆಂದು’, ‘ಈತನೀಗ ವಾಸುದೇವನು..’ ಅಂದಿಗೆ ಮಾತ್ರವಲ್ಲದೆ ಇವತ್ತಿಗೂ ಆಪಾತ ಮಧುರ. ಆದರೆ ಸ್ವತಃ ಶ್ರೀನಿವಾಸ್ ಅವರಿಗೆ ಬಹಳ ಇಷ್ಟವಾಗಿದ್ದಿದ್ದು ಇದೇ ಚಿತ್ರದ ವೆಂಕಟರಾಜು ಸಂಗೀತದ ‘ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು..’ಎಂಬ ಕೀರ್ತನೆ.
ಜಯತು ಜಯವಿಠಲ (ಮೋಹನ), ಹಾಡೊಂದ ಹಾಡುವೆ, (ಮಧ್ಯಮಾವತಿ) ಆಕಾಶವೇ ಬೀಳಲಿ ಮೇಲೆ (ಅಭೇರಿ), ಆಡಿಸಿ ನೋಡು ಬೀಳಿಸಿ ನೋಡು, ಹರಿ ನಾಮವೆ ಚಂದ (ಮೋಹನ) ಮನವೇ ಮಂದಿರ(ರಾಗ-ಕಲಾವತಿ)ನೀ ಜನಿಸಿದ ದಿನವೂ ಅಳುವೆ.. ನಗಬೇಡ, ನಗಬೇಡ, ನಗಬೇಡ ಒಲವೇ ಜೀವನ ಸಾಕ್ಷಾತ್ಕಾರ, ನಾವಾಡುವ ನುಡಿಯೇ, ಆಡುತಿರುವ ಮೋಡಗಳೇ, ಎಲ್ಲಿಗೇ ಪಯಣ.. ಬಾಡಿ ಹೋದ ಬಳ್ಳಿಯಿಂದ, ಚಿನ್ನ ಎಂದೂ ನಗುತಿರು... ನೂರಾರು ಗೀತೆಗಳ ಚಿತ್ರ- ಗಾನ ಮಂಜರಿ ಯೇ ನಮ್ಮೆದೆಯಲ್ಲಿ ರಿಂಗಣಿಸುತ್ತದೆ.
ಆದರೆ ಪಿ.ಬಿ.ಎಸ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಕನ್ನಡ ಚಿತ್ರರಂಗದ ಭೀಷ್ಮ ಆರ್. ನಾಗೇಂದ್ರ ರಾಯರಿಗೆ ಇಡೀ ಕನ್ನಡ ಜನತೆ ಧನ್ಯಮಾನ್ಯ ನಮಸ್ಕಾರ ಸಲ್ಲಿಸಬೇಕು. ತಮ್ಮ ಜಾತಕ ಫಲ (1953) ಚಿತ್ರವನ್ನು ಕನ್ನಡ, ತಮಿಳು, ತೆಲುಗು ತ್ರಿಭಾಷೆಗಳಲ್ಲಿ ತೆಗೆದಾಗ ಪಿ.ಬಿ.ಎಸ್ ಅವರ ಪಾದಾರ್ಪಣೆ ಆಯಿತು.
ಕನ್ನಡದಲ್ಲಿ ಜಿ.ಕೆ.ವೆಂಕಟೇಶ್ ಸಹ ಈ ಚಿತ್ರದಲ್ಲಿ ಹಾಡಿzರೆ. ಇಲ್ಲಿಂದ ಅವರ ಕನ್ನಡ ಚಿತ್ರರಂಗದ ಜತೆಗಿನ ಬೆಸುಗೆ ಕನ್ನಡಿಗರ ಪಾಲಿನ ಅಮೃತಘಳಿಗೆಗಳಾದವು. ಶ್ರೀನಿವಾಸ ಒಬ್ಬ ಶಾಪಗ್ರಸ್ತ ಗಂಧರ್ವ. ದೇವಲೋಕದಲ್ಲಿ ಇರಬೇಕಾದವನು ಭೂಲೋಕಕ್ಕೆ ಇಳಿದು ಬಂದಿರುವ ಗಾಯನ ಲೋಕದ ಗಂಧರ್ವ ನಮ್ಮ ಶ್ರೀನಿವಾಸ - ಜಿ.ಕೆ. ವೆಂಕಟೇಶ್. ಜಿ.ಕೆ.ವಿ ಅವರ ಮಾತುಗಳನ್ನು ಇಲ್ಲವೆನ್ನಲು ಅಸಾಧ್ಯ. ಜಿಕೆವಿ, ಶ್ರೀನಿವಾಸ್ ಜೋಡಿಯ ಮಧುರ ಹಾಡುಗಳ ರಾಶಿಯೇ ಸಾಕಷ್ಟಿವೆ.
ದೀನ ನಾ ಬಂದಿರುವೆ, ಕಣ್ಣಂಚಿನ ಈ ಮಾತಲಿ, ನಗುವುದೋ ಅಳುವುದೋ ನೀವೇ ಹೇಳಿ, ಆಡೋಣ ನೀನು ನಾನು, ನಿನದೇ ನೆನಪು ದಿನವೂ.. ಹೀಗೆ. ಶ್ರೀನಿವಾಸ ಅವರು ತಮ್ಮ ತಾಯಿ ಶೇಷಗಿರಿಯಮ್ಮ ಸತ್ತ ನೋವು ಅದುಮಿಟ್ಟುಕೊಂಡು ಹಾಡಿದ ಭೀಮ್ ಪಲಾಸ್/ಅಭೇರಿ ರಾಗಾ ಧಾರಿತ(ಅನ್ಯರಾಗಗಳ ಮಿಶ್ರಣವೂ ಇದೆ) ಗೀತೆಯಾದ ರವಿವರ್ಮನ ಸೊಗಸಾಗಿದೆ.
ಬಂಗಾರದ ಮನುಷ್ಯ ಚಿತ್ರದ ‘ನಗುನಗುತಾ ನಲಿ ನಲಿ’ ನನಗೆ ಇದೇ ಚಿತ್ರದ ಆಗದು ಎಂದು ಗೀತೆ ಬಹಳ ಇಷ್ಟ. ಎಂ.ರಂಗರಾವ್ -ಶ್ರೀನಿವಾಸರ ಜೋಡಿಯ ಮೋಡಿಯೂ ವಿಶಿಷ್ಟ. ಇವರಿಬ್ಬರ ಜೋಡಿಯಲ್ಲೂ ಅನೇಕ ಒಳ್ಳೆಯ ಗೀತೆಗಳಿವೆ. ‘ಮೈಸೂರು ದಸರಾ...’, ‘ನಗಬೇಡ ನಗಬೇಡ ನಗಬೇಡ’, ಅನೇಕ. ರಾಜನ್ ನಾಗೇಂದ್ರ, ಸತ್ಯಂ ಎಲ್ಲರ ಸಂಯೋಜನೆಯಲ್ಲಿಯೂ, ಅವರ ಗಾನ ಸುಧೆಯ ಕೊಡುಗೆ ಅಗಾಧ. ಆದರೆ ವಿಜಯ ಭಾಸ್ಕರ್, ಪಿ.ಬಿ.ಎಸ್ ಸಹಸಾಂಗತ್ಯ ಮರೆಯಲು ಸಾಧ್ಯವಾದ ಸಂಗತಿ.
ಕೆಂಪು ರೋಜಾ ಮೊಗದವಳೇ, ಬೆಳ್ಳಿ ಮೋಡದ ಅಂಚಿನಿಂದ, ಪಂಚಮ ವೇದ, ಪ್ರೇಮದ ನಾದ, ಇಳಿದು ಬಾ (ಈ ಹಾಡಿಗೆ ಮತ್ತು ತೂಗುದೀಪ ಚಿತ್ರದ ವಿಜಯಭಾಸ್ಕರ್ ಅವರದ್ದೇ ಸಂಗೀತ ನಿರ್ದೇಶನದ ನಿಮ್ಮ ಮುದ್ದಿನ ಕಂದ ನಾವು ಹಾಡುಗಳಿಗೆ ಪಿ.ಬಿ.ಎಸ್ ತಾವೇ ಅಭಿನಯಿಸಿದ್ದಾರೆ) ನಾನೂ ನೀನು ಜತೆಗಿರಲು ಕಾಲದ ನೆನಪೇ ಬೇಕಿಲ್ಲ, ಬಂದದ್ದೆಲ್ಲ ಬರಲಿ, ಗೋವಿಂದನ ದಯೆ ಒಂದಿರಲಿ, ಕನ್ನಡನಾಡಿನ ವೀರ ರಮಣಿಯ, ಬಾರೆ ಬಾರೆ...ಬರೆದೆ ನೀನು ನಿನ್ನ ಹೆಸರ, ಕಲ್ಪನಾ ರೂಪರಾಶಿ. ಹೀಗೆ ನೂರಾರು ಗೀತೆಗಳಿವೆ.
ಭಾಗ್ಯಜ್ಯೋತಿ ಚಿತ್ರಕ್ಕೆ ತಾವೇ ರಚಿಸಿ ವಾಣಿಜಯರಾಂ ಜತೆಗೆ ಹಾಡಿದ ದಿವ್ಯ ಗಗನ ವನವಾಸಿ, ಉರ್ದು ಕಲಿತು, ತಮಿಳಿನ ನಂದು ಚಿತ್ರಕ್ಕೆ ಬರೆದು, ಭೂಪೇನ್ ಹಝಾರಿಕಾ ಹಾಡಿದ ಕುಛ್ ಕೆಹ್ ಸಕೂ, ಲಕ್ಷ್ಮಣ್ ಶ್ರುತಿ ಎಂಬ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ, ಏಸುದಾಸರನ್ನು ಹೊಗಳಿ ಬರೆದ ಹಾಡು, ನೀಲ್ ಆರ್ಮ್ ಸ್ಟ್ರಾಂಗ್ ಸಾಧನೆಯನ್ನು ಕುರಿತು ಇಂಗ್ಲೀಷ್‌ನಲ್ಲಿ ರಚಿಸಿದ Man to Moon, Moon to God... ಎಂಟು ಭಾಷೆಗಳನ್ನು ಅರಿತಿದ್ದ ಅರಿಜೋನ ವಿವಿಯ ಡಾಕ್ಟರೇಟ್‌ಗೆ ಭಾಜನರಾಗಿದ್ದರು.
ಕರುಣೆಯಿಲ್ಲದ ಕಾನೂನು ಚಿತ್ರಕ್ಕೆ ಪಿ.ಬಿ. ಅವರೇ ರಚಿಸಿ ಪ್ರಭಾಕರ್ ಅವರ ಅಭಿನಯಕ್ಕೆ ಹಾಡಿರುವ ಧೈರ್ಯವೇ ಹಿಮಾಲಯ ನನಗೆ ಬಹಳ ಮೆಚ್ಚು. ಅನಂತನಾಗ್ ಅವರಿಗೂ ಮರೆಯದ ಹಾಡು ಚಿತ್ರಕ್ಕೆ ಬಾನಲಿ ತಾರಾವೃಂದದ ನಡುವೆ ಎಂಬ ಹಿಟ್ ಹಾಗೂ ಶಂಕರನಾಗ್ ಅವರಿಗೂ ದೇವರ ಆಟ ಚಿತ್ರದಲ್ಲಿ ಮೊದಲನೆ ನೋಟಕೆ..ದಂಥ ಯಶಸ್ವೀ ಗೀತೆಗಳನ್ನು ಹಾಡಿದ್ದಾರೆ.
ಡಾ.ಪಿ.ಬಿ.ಎಸ್ ಕಲ್ಯಾಣಿರಾಗ, ಮೋಹನ, ಹಂಸಧ್ವನಿ, ಹಿಂದೋಳ, ಶಿವರಂಜಿನಿ ವಿವಿಧ ರಾಗ ಸಮ್ಮೇಳಗಳಲ್ಲಿ ಉಲಿದ ಗೀತೆಗಳಾಗಲಿ, ತಾವೇ ಸೃಜಿಸಿದ ರಾಗಸೃಷ್ಟಿಯ ಹಿರಿಮೆಯಾಗಲೀ ಕಡಿಮೆ ಸಾಧನೆಯಲ್ಲ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ, ತಮಿಳು ನಾಡಿನ ಕಲೈ ಮಾಮಣಿ ಹೀಗೆಲ್ಲ ಗೌರವಾದರಗಳಿಗೆ ಭಾಜನರಾಗಿದ್ದ ಅವರ ಸಾಧನೆ ಶಿಖರಸದೃಶ. ಅವರ 13ನೇ ವರ್ಷದ ಸ್ಮರಣೆಯ ಏಪ್ರಿಲ್ 14ರಂದು ಅವರ ಸಾಧನೆ, ಗಾನಗುಂ-ನಗಳ ಮೂಲಕ ಅವರಿಗೆ ಹೀಗೊಂದು ನುಡಿ ಗಾನ ನಮನ.