ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gururaj Gantihole Column: ಆಯುಷ್‌ ಕ್ರಾಂತಿ: ಆಯುರ್ವೇದಕ್ಕೂ ಇದೆ ಆರೋಗ್ಯವಿಮೆ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ಜಾರಿಗೆ ತಂದಿರುವ ಐತಿಹಾಸಿಕ ನಿಯಮಾವಳಿಗಳ ಪ್ರಕಾರ, ಏಪ್ರಿಲ್ 1, 2024ರಿಂದ ಜಾರಿಗೆ ಬರುವಂತೆ ಎಲ್ಲಾ ಆರೋಗ್ಯ ವಿಮೆಗಳಲ್ಲಿ ಸಾಂಪ್ರದಾಯಿಕ ಆಯುಷ್ (ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಚಿಕಿತ್ಸೆಗಳನ್ನು ಅಲೋಪತಿ ಚಿಕಿತ್ಸೆಗಳಿಗೆ ಸಮಾನವಾಗಿ ಪರಿಗಣಿಸುವುದು ಕಡ್ಡಾಯವಾಗಿದೆ.

ಆಯುಷ್‌ ಕ್ರಾಂತಿ: ಆಯುರ್ವೇದಕ್ಕೂ ಇದೆ ಆರೋಗ್ಯವಿಮೆ

-

ಗಂಟಾಘೋಷ

ಆರೋಗ್ಯ ವಿಮೆಯ ಬೆಂಬಲದಿಂದ ಆಯುರ್ವೇದ ಚಿಕಿತ್ಸೆ ಹೆಚ್ಚಿನ ಜನರಿಗೆ ಕೈಗೆಟುಕು ವಂತಾಗುತ್ತಿದೆ. ಪರಿಣಾಮವಾಗಿ ಆಯುರ್ವೇದ ಆಸ್ಪತ್ರೆಗಳು, ಪಂಚಕರ್ಮ ಕೇಂದ್ರಗಳು, ಯೋಗ ಮತ್ತು ವೆಲ್‌ನೆಸ್ ಸಂಸ್ಥೆಗಳು, ಔಷಧ ತಯಾರಿಕಾ ಘಟಕಗಳು ಮತ್ತು ಸಂಶೋಧನಾ ಸಂಸ್ಥೆಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಇಂದು ಬಹುಮುಖ ಆರ್ಥಿಕ ವ್ಯವಸ್ಥೆಯಾಗಿ ಬೆಳೆಯುತ್ತಿದೆ.

ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳ ಅಥವಾ ಹಿರಿಯ ನಾಗರಿಕರ ಚಿಕಿತ್ಸಾ ಪದ್ಧತಿ ಎಂಬ ಅಭಿಪ್ರಾಯಕ್ಕೆ ಸೀಮಿತವಾಗಿದ್ದ ಆಯುರ್ವೇದ ಇಂದು ಮಹಾನಗರಗಳ ಯುವಜನತೆ, ಕಾರ್ಪೊರೇಟ್ ಉದ್ಯೋಗಿಗಳು, ಉದ್ಯಮಿಗಳು ಮತ್ತು ಆರೋಗ್ಯ ಜಾಗೃತ ನಾಗರಿಕರ ಆಯ್ಕೆಯಾಗಿ ಬೆಳೆಯುತ್ತಿದೆ. ದೇಹವನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಮತ್ತು ರೋಗದ ಮೂಲ ಕಾರಣವನ್ನು ಗುರುತಿಸಿ ಚಿಕಿತ್ಸೆ ನೀಡುವ ಅದರ ದೃಷ್ಟಿಕೋನವೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಈ ಹಿಂದೆ ಆರೋಗ್ಯ ವಿಮೆ ಎಂದರೆ ಅಲೋಪತಿ ಆಸ್ಪತ್ರೆ ಮತ್ತು ಚಿಕಿತ್ಸೆಗೆ ಮಾತ್ರ ಸೀಮಿತ ವಾಗಿದ್ದರೆ, ಇಂದು ಆಯುರ್ವೇದ ಚಿಕಿತ್ಸೆಗಳಿಗೂ ವಿಮಾ ರಕ್ಷಣೆ ಲಭ್ಯವಾಗುತ್ತಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ( IRDAI ) ಜಾರಿಗೆ ತಂದಿರುವ ಐತಿಹಾಸಿಕ ನಿಯಮಾವಳಿಗಳ ಪ್ರಕಾರ, ಏಪ್ರಿಲ್ 1, 2024ರಿಂದ ಜಾರಿಗೆ ಬರುವಂತೆ ಎಲ್ಲಾ ಆರೋಗ್ಯ ವಿಮೆಗಳಲ್ಲಿ ಸಾಂಪ್ರದಾಯಿಕ ಆಯುಷ್ (ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ಚಿಕಿತ್ಸೆಗಳನ್ನು ಅಲೋಪತಿ ಚಿಕಿತ್ಸೆಗಳಿಗೆ ಸಮಾನವಾಗಿ ಪರಿಗಣಿಸುವುದು ಕಡ್ಡಾಯವಾಗಿದೆ.

ಈ ಪರಿಷ್ಕೃತ ಮರ್ಗಸೂಚಿಗಳ ಅಡಿಯಲ್ಲಿ, ವಿಮಾ ಕಂಪನಿಗಳು ಆಯುಷ್ ಚಿಕಿತ್ಸೆಗಳ ಮೇಲಿದ್ದ ಎಲ್ಲಾ ಗುಪ್ತ ಉಪ-ಮಿತಿಗಳನ್ನು ( sub limits) ಸಂಪೂರ್ಣವಾಗಿ ತೆಗೆದು ಹಾಕಬೇಕಾಗಿದ್ದು, ಪಾಲಿಸಿದಾರರು ಈ ಹಿಂದೆ ಇದ್ದ ಕೇವಲ ಶೇ. 10ರಿಂದ 20ರ ಮಿತಿಯ ಬದಲಾಗಿ ತಮ್ಮ ಒಟ್ಟು ವಿಮಾ ಮೊತ್ತದ ಶೇ.100ರಷ್ಟರವರೆಗೆ ಆಯುಷ್ ಚಿಕಿತ್ಸಾ ವೆಚ್ಚವನ್ನು ಕ್ಲೈಮ್ ಮಾಡಬಹುದು.

ರಾಷ್ಟ್ರೀಯ ಆರೋಗ್ಯ ಕ್ಲೈಮ್ಸ್‌ ಎಕ್ಸ್‌ಚೇಂಜ್ (NHCX) ಮೂಲಕ ನಗದು ರಹಿತ ಸೌಲಭ್ಯ ವನ್ನು ಪಡೆಯಬಹುದು ಆರೋಗ್ಯ ವಿಮೆಯ ಬೆಂಬಲದಿಂದ ಆಯುರ್ವೇದ ಚಿಕಿತ್ಸೆ ಹೆಚ್ಚಿನ ಜನರಿಗೆ ಕೈಗೆಟುಕುವಂತಾಗುತ್ತಿದೆ. ಪರಿಣಾಮವಾಗಿ ಆಯುರ್ವೇದ ಆಸ್ಪತ್ರೆಗಳು, ಪಂಚಕರ್ಮ ಕೇಂದ್ರಗಳು, ಯೋಗ ಮತ್ತು ವೆಲ್‌ನೆಸ್ ಸಂಸ್ಥೆಗಳು, ಔಷಧ ತಯಾರಿಕಾ ಘಟಕಗಳು ಮತ್ತು ಸಂಶೋಧನಾ ಸಂಸ್ಥೆಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ.

ಇದನ್ನೂ ಓದಿ: Gururaj Gantihole Column: ಬೊಕ್ಕಸ ಬರಿದಾಗಿದ್ದಕ್ಕೆ ಪ್ರಗತಿಯ ಅಡಿಗಲ್ಲೇ ಮಾರಾಟ !

ಆಯುರ್ವೇದದ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ವೈಯಕ್ತಿಕ ಆರೋಗ್ಯದ ಮೇಲಿನ ಒತ್ತು. ಒಂದೇ ರೋಗವಿದ್ದರೂ ಇಬ್ಬರು ವ್ಯಕ್ತಿಗಳಿಗೆ ಒಂದೇ ರೀತಿಯ ಚಿಕಿತ್ಸೆ ನೀಡಲಾಗುವು ದಿಲ್ಲ. ಅವರ ದೇಹಪ್ರಕೃತಿ, ವಯಸ್ಸು, ಆಹಾರ ಪದ್ಧತಿ, ಜೀವನಶೈಲಿ ಮತ್ತು ಮಾನಸಿಕ ಸ್ಥಿತಿಯನ್ನು ಪರಿಗಣಿಸಿ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ.

ಇಂದಿನ ವೈಯಕ್ತಿಕ ವೈದ್ಯಕೀಯ (Personalized Medicin) ಪರಿಕಲ್ಪನೆಯೊಂದಿಗೆ ಹೋಲಿಸಿದಾಗ ಆಯುರ್ವೇದವು ಸಾವಿರಾರು ರ್ಷಗಳ ಹಿಂದೆಯೇ ವ್ಯಕ್ತಿ ಕೇಂದ್ರಿತ ಚಿಕಿತ್ಸೆಯ ಮಹತ್ವವನ್ನು ಪ್ರತಿಪಾದಿಸಿರುವುದು ಗಮನಾರ್ಹವಾಗಿದೆ.

ಆಯುರ್ವೇದವು ಆಹಾರವನ್ನೇ ಔಷಧಿಯೆಂದು ಪರಿಗಣಿಸುತ್ತದೆ. ಅನ್ನಂ ಔಷಧಂ ಎಂಬ ತತ್ವದ ಆಧಾರದ ಮೇಲೆ ದೈನಂದಿನ ಆಹಾರ, ಋತುಗಳಿಗೆ ಅನುಗುಣವಾದ ಆಹಾರ ಪದ್ಧತಿ, ನಿದ್ರೆ, ವ್ಯಾಯಾಮ ಮತ್ತು ಮಾನಸಿಕ ಶಾಂತಿಗೆ ಮಹತ್ವ ನೀಡುತ್ತದೆ. ಹೀಗಾಗಿ ಆಯುರ್ವೇದವು ಕೇವಲ ಆಸ್ಪತ್ರೆ ಅಥವಾ ಔಷಧಿಗಳಿಗೆ ಸೀಮಿತವಾಗದೆ, ಸಂಪರ್ಣ ಜೀವನಶೈಲಿಯ ಮಾರ್ಗದರ್ಶಕವಾಗುತ್ತದೆ.

ಸಾವಿರಾರು ವರ್ಷಗಳ ಪಯಣದ ನಂತರವೂ ಆಯುರ್ವೇದವು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳದಿರುವುದು ಅದರ ಸಮಗ್ರ ದೃಷ್ಟಿಕೋನದ ಕಾರಣವಾಗಿದೆ. ಆಧುನಿಕ ಜೀವನ ಶೈಲಿಯಿಂದ ಉಂಟಾಗುತ್ತಿರುವ ಹೊಸ ಆರೋಗ್ಯ ಸವಾಲುಗಳ ನಡುವೆ, ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡುವ ಅದರ ಸಂದೇಶವು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ.

22

ಸೀಮಿತವಾಗಿದ್ದ ಆರೋಗ್ಯ ವಿಮೆ

ಬಹಳ ವರ್ಷಗಳ ಕಾಲ ಆರೋಗ್ಯ ವಿಮೆ ಎಂದರೆ ಅಲೋಪಥಿ ಚಿಕಿತ್ಸೆಗೆ ಮಾತ್ರ ಸೀಮಿತ ವಾಗಿತ್ತು. ಆಯರ್ವೇದ ಆಸ್ಪತ್ರೆ, ಪಂಚರ್ಮ ಚಿಕಿತ್ಸೆ, ಯುನಾನಿ ಚಿಕಿತ್ಸೆ ಅಥವಾ ಹೋಮಿ ಯೋಪಥಿ ಚಿಕಿತ್ಸೆಗೆ ಹೋಗುವ ವ್ಯಕ್ತಿಗಳು ತಮ್ಮ ವೆಚ್ಚವನ್ನು ತಾವೇ ಭರಿಸಬೇಕಾಗುತ್ತಿತ್ತು. ಇದಕ್ಕೆ ಹಲವು ಕಾರಣಗಳಿದ್ದವು. ಮೊದಲನೆಯದಾಗಿ, ವಿಮಾ ಕಂಪನಿಗಳು ಆಧುನಿಕ ಆಸ್ಪತ್ರೆಗಳ ಮಾದರಿಯನ್ನು ಆಧರಿಸಿ ತಮ್ಮ ನೀತಿಗಳನ್ನು ರೂಪಿಸಿದ್ದವು. ಎರಡನೆಯ ದಾಗಿ, ಆಯುಷ್ ಕ್ಷೇತ್ರದಲ್ಲಿ ಮಾನದಂಡ ಮತ್ತು ದಾಖಲೆ ನಿರ್ವಹಣೆ ಎಡೆ ಒಂದೇ ರೀತಿಯಾಗಿರಲಿಲ್ಲ. ಮೂರನೆಯದಾಗಿ, ವಿಮಾ ಕಂಪನಿಗಳು ಚಿಕಿತ್ಸೆಯ ಗುಣಮಟ್ಟ ಮತ್ತು ವೆಚ್ಚ ನಿಯಂತ್ರಣದ ಬಗ್ಗೆ ಸ್ಪಷ್ಟ ವ್ಯವಸ್ಥೆಯನ್ನು ಬಯಸುತ್ತಿದ್ದವು.

ಮೋದಿ ಸರಕಾರ ಮತ್ತು ಆಯುಷ್

2014ನೇ ವರ್ಷ ಭಾರತದ ಪಾರಂಪರಿಕ ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಎಂದು ಪರಿಗಣಿಸಲಾಗುತ್ತದೆ. ಇದೇ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಆಯುಷ್ ಕ್ಷೇತ್ರಕ್ಕೆ ಸ್ವತಂತ್ರ ಗುರುತನ್ನು ನೀಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿತು.

2014ರ ನವೆಂಬರ್ 9ರಂದು ಕೇಂದ್ರ ಸರಕಾರವು ಪ್ರತ್ಯೇಕ ಆಯುಷ್ ಸಚಿವಾಲಯವನ್ನು ಸ್ಥಾಪಿಸಿತು. ಇದಕ್ಕೂ ಮೊದಲು ಆಯುಷ್ ವ್ಯವಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಒಂದು ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಪ್ರತ್ಯೇಕ ಸಚಿವಾಲಯದ ಸ್ಥಾಪನೆಯು ಪಾರಂಪರಿಕ ವೈದ್ಯ ಪದ್ಧತಿಗಳಿಗೆ ಸರಕಾರ ನೀಡಿದ ಹೊಸ ಆದ್ಯತೆಯ ಸಂಕೇತವಾಗಿತ್ತು.

ಆಯುಷ್ (Ayush) ಎಂಬ ಪದವು ಐದು ಪ್ರಮುಖ ವೈದ್ಯ ಪದ್ಧತಿಗಳ ಸಮೂಹವಾಗಿದೆ. ಆಯುರ್ವೇದ, ಯೋಗ ಮತ್ತು ನೈರ್ಗಿಕ ಚಿಕಿತ್ಸೆ, ಯುನಾನಿ, ಸಿದ್ಧ, ಹೋಮಿಯೋಪಠಿಜಿ - ಈ ಎಲ್ಲಾ ಪದ್ಧತಿಗಳ ಅಭಿವೃದ್ಧಿ, ಸಂಶೋಧನೆ, ಶಿಕ್ಷಣ, ನಿಯಂತ್ರಣ ಮತ್ತು ಜಾಗತಿಕ ಪ್ರಚಾರವನ್ನು ಉತ್ತೇಜಿಸುವುದು ಸಚಿವಾಲಯದ ಪ್ರಮುಖ ಉದ್ದೇಶವಾಗಿದೆ.

ಪ್ರತ್ಯೇಕ ಸಚಿವಾಲಯದ ರಚನೆಯ ನಂತರ ಆಯುಷ್ ಕ್ಷೇತ್ರದಲ್ಲಿ ಯೋಜಿತ ಮತ್ತು ವ್ಯವಸ್ಥಿತ ಬೆಳವಣಿಗೆಗೆ ಅವಕಾಶ ದೊರೆಯಿತು. ಮೊದಲು ವಿವಿಧ ಇಲಾಖೆಗಳ ನಡುವೆ ಹಂಚಿಕೆಯಾಗಿದ್ದ ಜವಾಬ್ದಾರಿಗಳನ್ನು ಒಂದೇ ಆಡಳಿತಾತ್ಮಕ ಚೌಕಟ್ಟಿನ ಅಡಿಯಲ್ಲಿ ತರಲಾಯಿತು.

ಇದರಿಂದ ನೀತಿ ರೂಪಿಸುವಿಕೆ, ಅನುದಾನ ಹಂಚಿಕೆ ಮತ್ತು ಯೋಜನೆಗಳ ಅನುಷ್ಠಾನ ಸುಲಭವಾಯಿತು. ಈ ವ್ಯವಸ್ಥಿತ ಯೋಜನೆಯ ಬಳಿಕ ಆಯುಷ್ ಚಿಕಿತ್ಸೆಗಳಿಗೆ ವಿಮೆ ನೀಡಲು ವಿಮಾ ಸಂಸ್ಥೆಗಳಿಗೆ ಸುಲಭವಾಯಿತು.

ಆಯುಷ್ ವಿಮಾ ಕವರ್

ಆಯುಷ್ ವಿಮಾ ಕವರ್ ಎಂದರೆ ಆಯುರ್ವೇದ, ಯೋಗ ಮತ್ತು ನೈರ್ಗಿಕ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಚಿಕಿತ್ಸೆಗಳ ಕೆಲವು ವೆಚ್ಚಗಳಿಗೆ ಆರೋಗ್ಯ ವಿಮೆಯ ಮೂಲಕ ಆರ್ಥಿಕ ರಕ್ಷಣೆ ದೊರೆಯುವ ವ್ಯವಸ್ಥೆ. ಈ ವ್ಯವಸ್ಥೆಯ ಅಡಿಯಲ್ಲಿ ಕೆಲವು ನಿರ್ದಿಷ್ಟ ನಿಯಮಗಳನ್ನು ಪೂರೈಸಿದರೆ ಚಿಕಿತ್ಸೆ ವೆಚ್ಚಗಳಿಗೆ ವಿಮಾ ನೆರವು ದೊರೆಯಬಹುದು. ಇದು ಆಯುರ್ವೇದವನ್ನು ಬಳಸುವ ಜನರಿಗೆ ದೊಡ್ಡ ಅನುಕೂಲ ವಾಗಿದೆ.

ಹಿಂದೆ ಆಸ್ಪತ್ರೆ ದಾಖಲಾತಿ, ಪಂಚಕರ್ಮ ಅಥವಾ ಇತರ ಚಿಕಿತ್ಸೆಗಳ ವೆಚ್ಚವನ್ನು ಸಂಪೂರ್ಣವಾಗಿ ಸ್ವಂತ ಖರ್ಚಿನಲ್ಲಿ ಭರಿಸಬೇಕಾಗುತ್ತಿತ್ತು. ಈಗ ಅನೇಕ ಸಂದರ್ಭಗಳಲ್ಲಿ ವಿಮಾ ರಕ್ಷಣೆ ಲಭ್ಯವಾಗಿದೆ. ದೇಶದಲ್ಲಿ ಆಯುಷ್ ಚಿಕಿತ್ಸೆಗೆ ವಿಮಾ ಕವರ್ ನೀಡುವ ಅವಕಾಶವನ್ನು ಮೊದಲ ಬಾರಿಗೆ ಐಆರ್‌ಡಿಎಐ ತನ್ನ ಹೆಲ್ತ್ ಇನ್ಶೂರೆ ರೆಗ್ಯೂಲೇಷನ್ ಮೂಲಕ ಒದಗಿಸಿತು.

2016ರ ಐಆರ್‌ಡಿಐ ಹೆಲ್ತ ಇನ್ಶೂರೆ ರೆಗ್ಯೂಲೇಷನ್ ಆಯುಷ್ ಚಿಕಿತ್ಸೆಯ ವ್ಯಾಖ್ಯಾನ ವನ್ನು ಇನ್ನಷ್ಟು ಸ್ಪಷ್ಟಗೊಳಿಸಿ, ವಿಮಾ ಕಂಪನಿಗಳು ಆಯುಷ್ ಕವರ್ ಒಳಗೊಂಡ ಯೋಜನೆಗಳನ್ನು ನೀಡಲು ಉತ್ತೇಜಿಸಲಾಯಿತು.

2017ರಲ್ಲಿ ಕೇಂದ್ರ ಸರಕಾರದ ಮಾಹಿತಿ ಪ್ರಕಾರ 15 ವಿಮಾ ಕಂಪನಿಗಳು ಆಯುಷ್ ಚಿಕಿತ್ಸೆ ಒಳಗೊಂಡ ಆರೋಗ್ಯ ವಿಮಾ ಯೋಜನೆಗಳನ್ನು ನೀಡುತ್ತಿದ್ದವು. ನಂತರ ಈ ಸಂಖ್ಯೆ ಗಣನೀಯವಾಗಿ ಏರಿತು. 2020ರ ವೇಳೆಗೆ ಸುಮಾರು 27 ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳು ಆಯುಷ್ ಒಳಗೊಂಡ 140ಕ್ಕೂ ಹೆಚ್ಚು ಆರೋಗ್ಯ ವಿಮಾ ಉತ್ಪನ್ನ ಗಳನ್ನು ನೀಡುತ್ತಿದ್ದವು.

2024-2026 ಅವಧಿಯಲ್ಲಿ ಐಆರ್‌ಡಿಐ ನಿರ್ದೇಶನಗಳ ನಂತರ ಬಹುತೇಕ ಪ್ರಮುಖ ಆರೋಗ್ಯ ವಿಮಾ ಕಂಪನಿಗಳು ತಮ್ಮ ಪಾಲಿಸಿಗಳಲ್ಲಿ ಆಯುಷ್ ಕವರ್ ಸೇರಿಸಿವೆ. ಆಯುಷ್ ಕವರ್ ಒದಗಿಸುವ ಪ್ರಮುಖ ಕಂಪನಿಗಳಲ್ಲಿ ಸ್ಟಾರ್ ಹೆಲ್ತ್-ಅಲೈಡ್ ಇನ್ಶೂರೆ, ನ್ಯಾಷನಲ್ ಇನ್ಶೂರೆ ಕಂಪನಿ, ನ್ಯೂ ಇಂಡಿಯಾ ಅಶ್ಶೂರೆನ್ಸ್, ಓರಿಯಂಟಲ್ ಇನ್ಶೂರೆನ್ಸ್, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್, ಐಸಿಐಸಿಐ ಲೊಂಬಾರ್ಡ್, ಹೆಚ್‌ಡಿಎಫ್‌ʼಡಿಸಿ ಗ್ರೋ, ಕೇರ್ ಹೆಲ್ತ್ ಇನ್ಶೂರೆನ್ಸ್, ನಿವಾಬುಪಾ ಹೆಲ್ತ್ ಇನ್ಶೂರೆನ್ಸ್, ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಇತ್ಯಾದಿ ಸೇರಿವೆ.

ಆಯುಷ್ ಕವರ್ ಈಗ ಬಹುತೇಕ ಪ್ರಮುಖ ಆರೋಗ್ಯ ವಿಮಾ ಯೋಜನೆಗಳಲ್ಲಿ ಲಭ್ಯವಿದೆ. 2024ರಲ್ಲಿ ಐಆರ್‌ಡಿಐ ವಿಮಾ ಕಂಪನಿಗಳಿಗೆ ಆಯುಷ್ ಚಿಕಿತ್ಸೆಯನ್ನು ಇತರ ವೈದ್ಯಕೀಯ ಚಿಕಿತ್ಸೆಗಳಂತೆ ಸಮಾನವಾಗಿ ಪರಿಗಣಿಸುವಂತೆ ಸೂಚಿಸಿತು. ಇದರಿಂದ ಆಯುಷ್ ಕ್ಲೈಮ್‌ ಗಳಿಗೆ ಹೆಚ್ಚಿನ ಮಾನ್ಯತೆ ದೊರೆಯಿತು.

ಆಯುಷ್ ಕ್ಷೇತ್ರದ ವಿಸ್ತಾರ

ಇಂದು ಆಯುಷ್ ಕೇವಲ ವೈದ್ಯಕೀಯ ಸೇವೆಗೆ ಸೀಮಿತವಾದ ಕ್ಷೇತ್ರವಲ್ಲ. ಇಂದು ಬಹು ಮುಖ ಆರ್ಥಿಕ ವ್ಯವಸ್ಥೆಯಾಗಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ವೈದ್ಯರು, ನರ್ಸ್‌ಗಳು, ಪಂಚಕರ್ಮ ತಜ್ಞರು, ಯೋಗ ಶಿಕ್ಷಕರು, ಔಷಧ ತಯಾರಕರು, ಔಷಧಿಯ ಸಸ್ಯ ಬೆಳೆಗಾರರು, ಸಂಶೋಧಕರು, ಆಸ್ಪತ್ರೆ ಆಡಳಿತ ಸಿಬ್ಬಂದಿ, ವೆಲ್‌ನೆಸ್ ಸಲಹೆಗಾರರು - ಹೀಗೆ ವಿವಿಧ ಕ್ಷೇತ್ರಗಳಲ್ಲಿ ಲಕ್ಷಾಂತರ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶ ಗಳಲ್ಲಿ ಔಷಧಿಯ ಸಸ್ಯಗಳ ಕೃಷಿಯು ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗುತ್ತಿದೆ. ಮತ್ತೊಂದೆಡೆ ನಗರ ಪ್ರದೇಶಗಳಲ್ಲಿ ವೆಲ್‌ನೆಸ್ ಉದ್ಯಮದ ಬೆಳವಣಿಗೆಯಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಈ ಕಾರಣದಿಂದ ಆಯುಷ್ ಕ್ಷೇತ್ರವನ್ನು ಕೇವಲ ಆರೋಗ್ಯ ಸೇವೆಯ ದೃಷ್ಟಿಯಿಂದ ಮಾತ್ರವಲ್ಲ, ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದಲೂ ನೋಡಲಾಗುತ್ತಿದೆ.

ಇನ್ನೂ ಇರುವ ಮಾಹಿತಿ ಕೊರತೆ

ಆಯುಷ್ ಚಿಕಿತ್ಸೆಗೆ ವಿಮಾ ಸೌಲಭ್ಯ ಲಭ್ಯವಿದ್ದರೂ, ಬಹುತೇಕ ಜನರಿಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅನೇಕರು ಇನ್ನೂ ಆಯುರ್ವೇದಕ್ಕೆ ವಿಮೆ ಸಿಗುವುದಿಲ್ಲ ಎಂದು ಭಾವಿಸುತ್ತಾರೆ. ತಮ್ಮ ಪಾಲಿಸಿಯಲ್ಲಿ ಆಯುಷ್ ಕವರ್ ಇದೆಯೇ ಎಂಬುದನ್ನು ತಿಳಿದಿಲ್ಲ. ಯಾವ ಆಸ್ಪತ್ರೆಗಳು ಅರ್ಹವಾಗಿವೆ ಎಂಬ ಮಾಹಿತಿ ಹೊಂದಿಲ್ಲ. ಕ್ಲೈಮ್ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಂ ಡಿಲ್ಲದಿರುವುದು ದೊಡ್ಡ ಸವಾಲಾಗಿದೆ.

ಆಯುರ್ವೇದವು ಕೇವಲ ರೋಗ ಬಂದಾಗ ಚಿಕಿತ್ಸೆ ಪಡೆಯುವ ವ್ಯವಸ್ಥೆಯಲ್ಲ; ಆರೋಗ್ಯ ವನ್ನು ಕಾಪಾಡಿಕೊಳ್ಳುವ ಜೀವನಶೈಲಿಯ ಮಾರ್ಗದರ್ಶಕ ಎಂಬ ಅರಿವು ಹೆಚ್ಚುತ್ತಿದೆ. ಇದು ಭಾರತೀಯ ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಒಂದು ಮೌನ ಕ್ರಾಂತಿ ಎಂದು ಹೇಳಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸದರಿ ಚಿಕಿತ್ಸೆಯು ವೈದ್ಯಕೀಯ ವಾಗಿ ಅನಿವಾರ್ಯವಾಗಿರಬೇಕು, ಪರವಾನಗಿ ಪಡೆದ ವೈದ್ಯರಿಂದ ಶಿಫಾರಸು ಮಾಡ ಲ್ಪಟ್ಟಿರಬೇಕು ಮತ್ತು ಕಡ್ಡಾಯವಾಗಿ ಸರಕಾರಿ ಮಾನ್ಯತೆ ಪಡೆದ ಅಥವಾ NABH ಸಂಸ್ಥೆ ಯಿಂದ ಪ್ರಮಾಣೀಕರಿಸಲ್ಪಟ್ಟ ಆಸ್ಪತ್ರೆಗಳಲ್ಲಿಯೇ ನಡೆದಿರಬೇಕು.

ಕೊನೆಯದಾಗಿ ಹೇಳಬೇಕೆಂದರೆ ಆಯುರ್ವೇದ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಇರುವ ಅವಕಾಶ ಗಳು ಹೇರಳವಾಗಿದ್ದು, ಕರ್ನಾಟಕವೂ ಆರೋಗ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶಗಳನ್ನು ಹೊಂದಿದೆ. ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳು, ಕರಾವಳಿ ಪ್ರದೇಶಗಳು, ಯೋಗ ಕೇಂದ್ರಗಳು, ಆಯುರ್ವೇದ ಆಸ್ಪತ್ರೆಗಳು, ನೈಸರ್ಗಿಕ ಪರಿಸರ - ಇವು ಆರೋಗ್ಯ ಪ್ರವಾಸೋದ್ಯಮಕ್ಕೆ ಅನುಕೂಲಕರವಾಗಿವೆ.

ವಿಶೇಷವಾಗಿ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ವೆಲ್‌ನೆಸ್ ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳಾಗುವ ಸಾಮರ್ಥ್ಯವನ್ನು ಹೊಂದಿವೆ.

ಜನರು ಕೇವಲ ರೋಗ ಬಂದಾಗ ಮಾತ್ರ ಆಯುರ್ವೇದವನ್ನು ನೆನಪಿಸಿಕೊಳ್ಳುವುದಲ್ಲ. ಬದಲಾಗಿ, ಆರೋಗ್ಯಕರ ಆಹಾರ, ನಿಯಮಿತ ನಿದ್ರೆ, ಯೋಗ, ಧ್ಯಾನ, ದೈಹಿಕ ಚಟುವಟಿಕೆ, ಮಾನಸಿಕ ಸಮತೋಲನ- ಇವುಗಳನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳ ಬೇಕು. ಇದು ಆಯುರ್ವೇದದ ಮೂಲ ಸಂದೇಶವೂ ಆಗಿದೆ.