G N Bhat Column: ಸಂಗೀತದ ಮಹಿಮೆಯನ್ನು ಆಕಾಶದೆತ್ತರಕ್ಕೆ ಒಯ್ದ ಎಸ್.ಜಾನಕಿ
ನಾನು ಅವರು ಹಾಡಿದ ಒಂದು ಹಾಡನ್ನು ಗಮನವಿಟ್ಟು ಕೇಳಿದ್ದೆ. ಅದು ಮಿಸ್ ಲೀಲಾವತಿ ಸಿನಿಮಾದ, ಕುವೆಂಪು ರಚಿತ ‘ದೋಣಿ ಸಾಗಲಿ | ಮುಂದೆ ಹೋಗಲಿ | ದೂರ ತೀರವ ಸೇರಲಿ’ ಹಾಡು. ಅದನ್ನು ಹಾಡಿದವರು ಎಸ್. ಜಾನಕಿ ಮತ್ತು ರಾಮಚಂದ್ರ ರಾವ್. ಆದರೆ ಕೇಳಿದ್ದು ಜಾನಕಿಯವರ ಕಂಠಶ್ರೀ ಯಿಂದ ಅಲ್ಲ. ಅವರು ಹಾಡಿದಂತೆಯೇ ಡಿಟ್ಟೊ ಹಾಡಿದ ನನ್ನ ಸಹಾಧ್ಯಾಯಿನೀ ಚಟ್ಟೆಮನೆ ಸುಶೀಲಾಳಿಂದ
-
ಸ್ವರ ಸರಸ್ವತಿ
- ಗ.ನಾ ಭಟ್ಟ
ಆಗ ನನಗೆ ಏಳೆಂಟು ವರ್ಷಗಳಿರಬಹುದು. (60ರ ದಶಕದ ಕೊನೆ, 70ರ ಆರಂಭ) ನಮ್ಮೂರ (ಪಂಚಲಿಂಗ) ಕಾರ್ತಿಕೋತ್ಸವದಲ್ಲಿ ರಾತ್ರಿ ನಡೆಯುವ ಯಕ್ಷಗಾನ ಬಯಲಾಟಕ್ಕೆ ಪ್ರತಿವರ್ಷ ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಬಂದು ವೇಷ ಹಾಕುತ್ತಿದ್ದರು. ಅವರ ಭಸ್ಮಾಸುರ, ಪಾರಿಜಾತದ ಕೃಷ್ಣ ಮೊದಲಾದವು ಈಗಲೂ ನೆನಪಿದೆ. ಅವರ ಹೆಸರು ಅದೆಷ್ಟು ಚಿರಪರಿಚಿತವಾಗಿದ್ದವು ಎಂದರೆ ಅವರ ಮನೆ ನಮ್ಮ ಮನೆಯ ಆಜೂಬಾಜಲ್ಲಿ ಎಲ್ಲೋ ಇದ್ದವು ಎಂಬ ಭಾವನೆಯನ್ನು ಹುಟ್ಟು ಹಾಕುತ್ತಿದ್ದವು. ಆದರೆ ಸ್ವಲ್ಪ ತಿಳುವಳಿಕೆ ಬರಹತ್ತಿದ ಮೇಲೆ ಅವರ ಮನೆ ನೂರಾರು ಕಿ.ಮೀ. ದೂರದಲ್ಲಿ ಇದೆ ಎಂಬ ಸತ್ಯ ಗೋಚರವಾಗ ತೊಡಗಿತು. ಇದರ ಅರ್ಥ ಅವರ ಹೆಸರಿನ ಪ್ರಸಿದ್ಧಿ ಆ ಪರಿಯಲ್ಲಿ ಇತ್ತು ಎಂಬುದು.
ಹಾಗೆಯೇ ಎಸ್. ಜಾನಕಿ, ಪಿ. ಸುಶೀಲಾ, ಪಿ.ಬಿ. ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹೆಸರುಗಳೂ ನಮಗೆ ಚಿರಪರಿಚಿತವಾಗಿದ್ದವು. ಹಾಗೆ ಅವರ ಹೆಸರು ನಮ್ಮಂತಹ ಚಿಕ್ಕ ಹುಡುಗರ ಕಿವಿಯಲ್ಲಿ ಅನುರಣಿಸಲು ಕಾರಣ- ಅಂದು ರೇಡಿಯೋದಲ್ಲಿ ಪ್ರತಿದಿನವೂ ಪ್ರಸಾರಗೊಳ್ಳುತ್ತಿದ್ದ ಚಿತ್ರಗೀತೆಗಳೇ. ಎಸ್.ಜಾನಕಿ, ಪಿ. ಸುಶೀಲಾ ಇವರ ಹೆಸರು ಕೇಳದೇ ಇದ್ದವರೇ ಇಲ್ಲ. ಅಷ್ಟು ಜನಪ್ರಿಯ, ಅಂತೆಯೇ ಅವರ ಹಾಡುಗಳೂ.
ತಮಾಷೆಯ ಸಂಗತಿಯೆಂದರೆ ನನ್ನ ಮನೆಯಲ್ಲಿ ರೇಡಿಯೋನೇ ಇರಲಿಲ್ಲ. ಒಂದೇ ಒಂದು ಚಿತ್ರಗೀತೆ ಯನ್ನೂ ನಾನು ಕೇಳಿದವನಲ್ಲ. ನಾನು ಚಿತ್ರಗೀತೆಗಳನ್ನು ಕೇಳಿದ್ದಿದ್ದರೆ ಅದು ಅವರಿವರ ಮನೆ ಯಲ್ಲಿ ಅಲ್ಪ ಸ್ವಲ್ಪ. ಆದರೂ ಎಸ್.ಜಾನಕಿಯವರ ಹೆಸರು ನನ್ನ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುವುದಕ್ಕೆ ಕಾರಣ ಅವರ ಚಿತ್ತಸಮ್ಮೋಹಕ ಹಾಡು, ಅವುಗಳ ಮಾಧುರ್ಯ ಮತ್ತು ಅವುಗಳ ವೈವಿಧ್ಯ.
ಇದನ್ನೂ ಓದಿ: G N Bhat Column: ಚಿತ್ರವನ್ನಷ್ಟೇ ಅಲ್ಲ, ಭಾವವಿಶೇಷ, ಧ್ವನಿಯನ್ನೂ ಗಮನಿಸಿ
ನಾನು ಅವರು ಹಾಡಿದ ಒಂದು ಹಾಡನ್ನು ಗಮನವಿಟ್ಟು ಕೇಳಿದ್ದೆ. ಅದು ಮಿಸ್ ಲೀಲಾವತಿ ಸಿನಿಮಾದ, ಕುವೆಂಪು ರಚಿತ ‘ದೋಣಿ ಸಾಗಲಿ | ಮುಂದೆ ಹೋಗಲಿ | ದೂರ ತೀರವ ಸೇರಲಿ’ ಹಾಡು. ಅದನ್ನು ಹಾಡಿದವರು ಎಸ್. ಜಾನಕಿ ಮತ್ತು ರಾಮಚಂದ್ರ ರಾವ್. ಆದರೆ ಕೇಳಿದ್ದು ಜಾನಕಿಯವರ ಕಂಠಶ್ರೀಯಿಂದ ಅಲ್ಲ. ಅವರು ಹಾಡಿದಂತೆಯೇ ಡಿಟ್ಟೊ ಹಾಡಿದ ನನ್ನ ಸಹಾಧ್ಯಾಯಿನೀ ಚಟ್ಟೆಮನೆ ಸುಶೀಲಾಳಿಂದ. ಏಳನೆ ತರಗತಿಯಲ್ಲಿ ಅವಳು ನನ್ನ ಕ್ಲಾಸ್‌ಮೇಟ್ ಆಗಿದ್ದಳು. ಶಾಲೆ ಯಲ್ಲಿ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಳು ಆ ಹಾಡನ್ನು ಎಷ್ಟು ಸುಂದರವಾಗಿ, ಹೃದ್ಯವಾಗಿ ಹಾಡಿದ್ದಳೆಂದರೆ ಸಾಕ್ಷಾತ್ ಜಾನಕಿಯೇ ಹಾಡಿದಂತಿತ್ತು. ಅವಳು ಹೇಗೆ ಕಲಿತಳೋ?
ಎಸ್. ಜಾನಕಿ ಜುಲೈ 11ರಂದು ನಿಧನರಾದರು. ಅವರು ಅಕ್ಷರಶಃ ಕನ್ನಡ ನಾಡಿನ ಮನೆಮಾತಾ ಗಿದ್ದರು. ಅದಕ್ಕೆ ಮುಖ್ಯ ಕಾರಣ- ಕಲಾಪ್ರಕಾರದಲ್ಲೇ ಅತ್ಯಂತ ಜನಪ್ರಿಯ ಮಾಧ್ಯಮವಾದ ಚಲನಚಿತ್ರಕ್ಕೆ ಅವರು ಹಾಡುಗಾರ್ತಿಯಾಗಿ ಸೇರ್ಪಡೆಗೊಂಡಿದ್ದು. ಇಡೀ ಜನಕೋಟಿಗೆ ಸಂಗೀತದ ಅಮೃತಪಾನ ಮಾಡಿಸಿದ್ದು; ಹಾಡಿನ ರಸದೌತಣ ಮಾಡಿಸಿದ್ದು. ಸಂಗೀತವೆಂದರೆ ಮನುಷ್ಯನ ಹೃದಯವನ್ನು ಅರಳಿಸುವಂಥಾದ್ದು. ಅಪರಿಮಿತ ಸಂತೋಷವನ್ನು ಕೊಡುವಂಥಾದ್ದು. ಹಾಡೋ, ಸಂಗೀತವೋ, ಗಮಕವೋ, ಭಾವಗೀತೆಯೋ, ಜಾನಪದ ಗೀತೆಯೋ, ಯಕ್ಷಗಾನವೋ- ಯಾವುದೂ ಇರಲಿ, ಅವನ್ನು ಕೇಳದೆ ಇರುವವರು ಬಹುಶಃ ಯಾರೂ ಇಲ್ಲ. ಉಪಾಸನೆ ಮಾಡದವರು ಯಾರೂ ಇರಲಿಕ್ಕಿಲ್ಲ.
ಆದರೆ ಒಂದು- ಇದರ ಉಪಾಸನೆ ಮಾಡುವವರ ಪಾಡು ಕ್ಷಣಭಂಗುರವಾದುದು. ಇದರ ಪಾಡು ಜಾಜಿ-ಪಾರಿಜಾತಗಳ ಪಾಡಿನಂತೆ. ಅದು ಒಂದೆರಡು ಕ್ಷಣ ತನ್ನ ಸೌಭಾಗ್ಯವನ್ನು ಸೂಸಿ ಆ ಬಳಿಕ ಕಣ್ಣು ಮುಚ್ಚಿಬಿಡುತ್ತದೆ. ಆಮೇಲೆ ಅದು ಅಲಭ್ಯ. ಮರೆವು ಅದನ್ನು ಆವರಿಸಿ ಎಲ್ಲಿಯೋ ಕರಗಿಸಿ ಬಿಡುತ್ತದೆ. ಆದರೆ ಅದೆಂತಹ ಒಂದೆರಡು ಕ್ಷಣ! ಅನುಭವಿಸಿದವರ ಪಾಲಿಗೆ ಅದು ಯಾವಜ್ಜೀವವೂ ಜೊತೆಯಲ್ಲಿರುವ ಕ್ಷಣ; ಅದೇ ಅಮೃತ ಕ್ಷಣ. ಆ ಅಮೃತತ್ತ್ವವು ಅನುಭವಿಸಿ ದವರಿಗೆ ಮಾತ್ರ ಲಭ್ಯವಾಗುವಂಥಾದ್ದು. ಆ ಅನುಭವವನ್ನು ಇತರರಿಗೋಸ್ಕರ ಮಾತಿನಲ್ಲಿ ಹಿಡಿದಿಡುವುದು ಸಾಧ್ಯ ವಲ್ಲ. ಮಾತಿಗೆ ಒಂದು ಮಿತಿಯಿದೆ.
ನಾವು ಹೂದೋಟದಲ್ಲಿ ಎಂತೆಂಥ ಸುಖಗಳನ್ನನುಭವಿಸುತ್ತೇವೆ! ಹೂವಿನ ಕೋಮಲಸ್ಪರ್ಶವನ್ನು, ಅದರ ರೇಕುಗಳ ಚಿತ್ರವಿಚಿತ್ರಗಳನ್ನು, ಬಣ್ಣಗಳನ್ನು ಮಾತಿನಿಂದ ಹೇಗೆ ತಿಳಿಸಲು ಸಾಧ್ಯ? ಸಂಗೀತ, ಹಾಡಿನ ಸೊಗಸುಗಳ ವರ್ಣನೆಯೂ ಹಾಗೆಯೇ ಮಾತಿಗೆ ಅಶಕ್ಯವಾದದ್ದು. ಸಂಗೀತದ ಅಕ್ಷರದ ದೀರ್ಘಗಳೂ, ಕೊಂಬುಗಳೂ ಲಿಪಿಗೆ ಸಿಗುವುದಿಲ್ಲ. ಅದಿರುವುದು ಲಿಪಿಗೆ ಸಿಗದ ಕಾಕು ಕೊಂಕು ಗಳಲ್ಲಿ. ಸಂಗೀತ ಇರುವುದು ಅಕ್ಷರಗಳಲ್ಲಲ್ಲ. ಒಂದಕ್ಷರಕ್ಕೂ ಇನ್ನೊಂದಕ್ಷರಕ್ಕೂ ನಡುವೆ ಹುದುಗಿ ಕೊಂಡಿರುವ ನಾದದ ಉರುಳು ಜಾರುಗಳಲ್ಲಿ. ಅಂಥಾದ್ದು ಸಂಗೀತದ ಮಹಿಮೆ. ಇಂತಹ ಸಂಗೀತದ ಮಹಿಮೆಯನ್ನು ಆಕಾಶದೆತ್ತರಕ್ಕೆ ಒಯ್ದವರು ಎಸ್. ಜಾನಕಿ.
1970ರಲ್ಲಿ ತೆರೆ ಕಂಡ ಕರುಳಿನ ಕರೆ ಫಿಲಂನಲ್ಲಿ ಎಸ್.ಜಾನಕಿ ಮತ್ತು ಬಿ.ಕೆ.ಸುಮಿತ್ರ ಅವರ ‘ಅ ಆ ಇ ಈ ಕನ್ನಡದ ಅಕ್ಷರ ಮಾಲೆ’ ಹಾಡು ಅದೆಷ್ಟು ಹೃದಯಂಗಮವಾಗಿ ಮೂಡಿಬಂದಿದೆಯೆಂದರೆ ಅದನ್ನೆಂದೂ ಮರೆಯಲು ಸಾಧ್ಯವಿಲ್ಲ. ಸಿನಿಮಾದ ವಿಶೇಷತೆಯೆಂದರೆ ಹಿನ್ನೆಲೆ ಗಾಯಕರ ಹಾಡಿಗೆ ನಟರ ಅಭಿನಯ ಸೇರಿಕೊಂಡಿರುತ್ತದೆ. ಅದನ್ನು ಮತ್ತಷ್ಟು ರಂಗುರಂಗಾಗಿಸುವುದಕ್ಕೆ ನಿರ್ದೇಶಕರ ಕೈಚಳಕವೂ ಇರುತ್ತದೆ. ಪ್ರಕೃತಿ ಸೌಂದರ್ಯವನ್ನು ಅವರಷ್ಟು ದುಡಿಸಿಕೊಂಡವರು ಮತ್ತೊಬ್ಬ ರಿಲ್ಲ. ಬೆಟ್ಟ, ಕಾಡು, ನದಿ, ಆಕಾಶ, ಜಲಪಾತ- ಒಂದೇ ಎರಡೇ? ಹೀಗೆ ಸಾವಿರಾರು! ಹಾಡಿಗೆ ತಕ್ಕಂತೆ ಇತರ ಸಮುಚಿತ ಪರಿಕರ ಗಳನ್ನೂ ಅವರು ನಮ್ಮ ಮುಂದೆ ತರುತ್ತಾರೆ. ಇವೆಲ್ಲದರ ಮೇಳನದಿಂದ ಹಾಡು ಮತ್ತಷ್ಟು ಜೀವಂತಿಕೆ ಪಡೆದುಕೊಳ್ಳುತ್ತದೆ.
ಕರುಳಿನ ಕರೆಯಲ್ಲಿ ಹಾಗೆ ಜೀವಂತಿಕೆಯನ್ನು ಪಡೆದುಕೊಂಡ ಹಾಡು ಆರ್.ಎನ್. ಜಯಗೋಪಾರದ್ದು. ಅವರ ಆ ಹಾಡು ಕನ್ನಡದ ಹಿರಿಮೆಯನ್ನು ಸಾರುವುದರೊಂದಿಗೆ ನೀತಿ ಯನ್ನೂ ಬೋಧಿಸುತ್ತದೆ. ಈ ಹಾಡಿನ ಮಧ್ಯದಲ್ಲಿ ಬರುವ ‘ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ | ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ | ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು |’ ಇತ್ಯಾದಿ ನೀತ್ಯುಪದೇಶಪರ ಪಲ್ಲವಿಗಳು ಎಸ್. ಜಾನಕಿ ಮತ್ತು ಬಿ.ಕೆ.ಸುಮಿತ್ರ ಅವರ ಕಂಠಮಾಧುರ್ಯದಲ್ಲಿ ಆಸ್ವಾದಿಸುವುದೇ ಒಂದು ರೋಚಕ ಅನುಭವ.
ಎಸ್. ಜಾನಕಿ ಕಂಠದ ವೈಶಿಷ್ಟ್ಯವೆಂದರೆ ಅದು ಎಲ್ಲ ತಹಹದ ವಯೋಮಾನಕ್ಕೂ, ಎಲ್ಲ ತರಹದ ಸ್ವಭಾವಕ್ಕೂ, ಎಲ್ಲ ತರಹದ ಕಾಲಘಟ್ಟಕ್ಕೂ ಹೊಂದುವಂಥಾದ್ದು. ಸಾಮಾಜಿಕ, ಪೌರಾಣಿಕ, ಐತಿಹಾಸಿಕ- ಹೀಗೆ. ನವರಸಗಳನ್ನೂ ಧುಮ್ಮಿಕ್ಕುಸುವ ಅನುಪಮ ಕಂಠ ಅವರದು. ಕಾಮೋತ್ತೇಜಕ, ವಿರಹೋತ್ಕಂಠತೆ, ಭಕ್ತಿ, ವೀರ, ಜಾನಪದ, ಶಾಸ್ತ್ರೀಯ- ಹೀಗೆ ವಿವಿಧ ಮುಖಗಳಲ್ಲಿ ಅವರು ಲೀಲಾ ಜಾಲವಾಗಿ ಹಾಡಬಲ್ಲರು.
ಸಾಮಾನ್ಯವಾಗಿ ಕಾಮೋತ್ತೇಜಕ ಹಾಡನ್ನು ಎಲ್ಲರೂ ಹಾಡುವುದಿಲ್ಲ. ಅದಕ್ಕಾಗಿಯೇ ಹಾಡು ವವರು, ನೃತ್ಯ ಮಾಡುವವರು ಬೇರೆಯೇ ಇರುತ್ತಾರೆ. ಜಯಮಾಲಿನಿ, ಜ್ಯೋತಿಲಕ್ಷ್ಮೀ, ಅನುರಾಧಾ, ಹಲಂ, ಹೆಲನ್, ಸಿಲ್ಕ್‌ಸ್ಮಿತಾ, ಡಿಸ್ಕೋ ಶಾಂತಿ ಮೊದಲಾದವರು ಕ್ಯಾಬರೆ ನೃತ್ಯಕ್ಕೆ ಹೆಸರಾದವರು. ಅವರ ಕುಣಿತಕ್ಕೆ ತಕ್ಕಂತೆ ಹಾಡುವವರೂ ಇದ್ದರು. ಇಂದು ಅದನ್ನು ಐಟಂ ಡ್ಯಾನ್ಸ್ ಎಂದು ಕರೆಯುತ್ತಾರೆ.
ಅದರಲ್ಲೂ ಅದೇ ಕುಣಿತ, ಅದೇ ನೃತ್ಯ ಬರುತ್ತವೆ. ಆದರೆ ಹೀರೋ, ಹಿರೋಯಿನ್ ಗಳೇ ಕಥೆಗನುಗುಣವಾಗಿ ಕಾಮೋತ್ತೇಜಕ ದೃಶ್ಯದಲ್ಲಿ ಕಾಣಿಸಿಕೊಂಡರೆ ಅದಕ್ಕೆ ಸಭ್ಯತೆಯ ಮುಖವಾಡ ಬರುತ್ತದೆ. ಅದಕ್ಕೆ ಹಾಡುವವರೂ ಶ್ರೇಷ್ಠಮಟ್ಟದ ಗಾಯಕಿಂiiರಾದರೆ ಅದು ಅಶ್ಲೀಲ ಎಂಬ ತಲೆಬರಹದಿಂದ ಕಳಚಿಕೊಂಡು ಬಿಡುತ್ತದೆ. ಸಾಹಿತ್ಯರಚನಾಕಾರ ಅಶ್ಲೀಲದ ಸೋಂಕೂ ಇಲ್ಲದೆ ಶೃಂಗಾರ ರಸದ್ಯೋತಕವಾಗಿ ಬರೆದರೆ ಅದು ಉತ್ತಮ ಸಾಹಿತ್ಯಕ್ಕೆ ಸೇರಿಬಿಡುತ್ತದೆ. ಅಂತಹದ್ದಕ್ಕೆ ಉದಾಹರಣೆಯಾಗಿ ಕೆಲವು ಹಾಡುಗಳನ್ನು ಜಾನಕಿ ಹಾಡಿದ್ದಾರೆ.
1983ರಲ್ಲಿ ತೆರೆಗೆ ಬಂದ ಚಕ್ರವ್ಯೂಹದ ಒಂದು ಹಾಡು ಅದು. ಅಂಬರೀಷ್ ಮತ್ತು ಅಂಬಿಕಾ ಅಭಿನಯಕ್ಕೆ ‘ಚಳಿ ಚಳಿ ತಾಳೆನು ಈ ಚಳಿಯ ಆಹಾ ಆಹಾ’ ಎಂಬ ಹಾಡನ್ನು ಎಸ್.ಪಿ.ಬಿ. ಮತ್ತು ಜಾನಕಿಯಮ್ಮ ಹಾಡಿದರು. ಈ ಯುಗಳಗೀತೆ ಅಂದು ಅದೆಷ್ಟು ಜನಪ್ರಿಯವಾಗಿತ್ತು ಎಂದರೆ ಆ ಹಾಡಿಗಾಗಿಯೇ ಜನ ಮುಗಿಬೀಳುತ್ತಿದ್ದರು. ಹತ್ತೆಂಟು ಬಾರಿ ಆ ಸಿನಿಮಾ ನೋಡುತ್ತಿದ್ದರು.
ವಸ್ತುತಃ ಹೀರೊ-ಹೀರೋಯಿನ್ ಹಾಡುಗಳು ಪ್ರೀತಿ-ಪ್ರೇಮ-ಪ್ರಣಯಕ್ಕೆ ಸಂಬಂಧಪಟ್ಟಂತೆ ಇರುತ್ತವೆ. ಶ್ಲೇಷಾರ್ಥಗಳು ತುಂಬಿ ತುಳುಕುತ್ತಾ ಇರುತ್ತವೆ. ಉಪಮೆ, ರೂಪಕಗಳಿಗಂತೂ ಬರವೇ ಇರುವುದಿಲ್ಲ. ಶೃಂಗಾರ ರಸವನ್ನು (ಸ್ವಲ್ಪ ರತಿಪ್ರಚೋದಕ ಸನ್ನಿವೇಶಗಳನ್ನು) ಅಷ್ಟು ಸೊಗಸಾಗಿ ಚಿತ್ರಿಸುವ ಸಾಹಿತ್ಯ ರಾಮಾಯಣ-ಭಾರತದಂತಹ ಮಹಾಕಾವ್ಯಗಳ ಹೊರತು ನಮಗೆ ಕಾಣ ಸಿಗುವುದಾದರೆ ಅದು ಚಿತ್ರ/ ಗೀತಸಾಹಿತ್ಯದಲ್ಲಿ ಮಾತ್ರ. ಅಂತಹ ಘಟಾನುಘಟಿ ಚಿತ್ರಸಾಹಿತಿಗಳು ಅನೇಕರು ಮೆರೆದುಹೋದರು.
ಅಂತಹ ಗೀತಸಾಹಿತಿಗಳಲ್ಲಿ ಚಿ. ಉದಯಶಂಕರ್ ಒಬ್ಬರು. ಅವರು ರಚಿಸಿದ ‘ಚಳಿ ಚಳಿ ತಾಳೆನು’ ಹಾಡಿಗೆ ಮತ್ತೊಂದು ಜನ್ಮ ಕೊಟ್ಟವರು ಎಸ್. ಜಾನಕಿ ಮತ್ತು ಎಸ್.ಪಿ.ಬಾಲಸುಬ್ರಹ್ಮಣಂ ಅವರು. ‘ಐ ಲವ್ ಯು’ ಎನ್ನುತ್ತಾ ಆರಂಭವಾಗುವ ಈ ಹಾಡು ಅಂಬರೀಷ್ ಮತ್ತು ಅಂಬಿಕಾ ಅವರನ್ನು ಪ್ರವೇಶ ಮಾಡಿಸುವ ಕ್ರಮವೇ ಚೇತೋಹಾರಿಯಾದುದು. ಬಣ್ಣಬಣ್ಣದ ಹೂರಾಶಿಗಳ ಮಧ್ಯದಿಂದ ಎದ್ದು ಬರುವ ಅಂಬರೀಷ್ ಮತ್ತು ಅಂಬಿಕಾ ನಮ್ಮನ್ನು ಶೃಂಗಾರ ರಸದ ಹೊಳೆಯಲ್ಲಿ ಮೀಯಿಸಿ ಬಿಡುತ್ತಾರೆ. ಅರೆ ಪಾರದರ್ಶಕ ಬಿಳಿಸೀರೆಯುಟ್ಟುಕೊಂಡ ಅಂಬಿಕಾ ಎದ್ದು ಬರುವ ದೃಶ್ಯವೇ ಎಂತಹವನ ಎದೆಯನ್ನೂ ಝಲ್ಲೆನಿಸುವಂತೆ ಮಾಡಿಬಿಡುತ್ತದೆ. ಅವಳ ಸೀರೆಯ ಸೆರಗನ್ನು ತನ್ನ ಮೈಗೆ ಸುತ್ತಿಕೊಂಡು ‘ಗೆಳತಿಯೆ ಬಾರೆಯ ನೀ ಸನಿಹ ಓಹೋ ಓಹೋ ಒಲವಿನ ಕಥೆಯ ಹೇಳುವೆನು’ ಎನ್ನುವಾಗ ಅಲ್ಲಲ್ಲಿ ಮಿಂಚುವ ‘ಆಹಾ ಓಹೋ’ ಎಂಬ ಉದ್ಗಾರ ರತಿಯ ಪರಮಾವಧಿ ಯನ್ನು ಸೂಚಿಸಿಬಿಡುತ್ತದೆ.
ಇಲ್ಲಿ ಆ ಕಲಾವಿದರ ಅಭಿನಯ ಮೇಲೋ, ಹಾಡುಗಾರರ ಹಾಡು ಮೇಲೋ, ನಿರ್ದೇಶಕನ ಚಮತ್ಕಾರ ಮೇಲೋ ಎಂದು ಹೇಳಲು ಅಸಾಧ್ಯವಾಗಿ, ಒಂದಕ್ಕೊಂದು ಪೈಪೋಟಿ ನಡೆಸುತ್ತಾ, ಇಡೀ ಹಾಡು ಮತ್ತು ದೃಶ್ಯವೇ ನಮ್ಮ ಮನದಲ್ಲಿ ತುಂಬಿಕೊಂಡು, ನಿತ್ಯ ಹಸುರಾಗಿ ಉಳಿದು ಕೊಳ್ಳುತ್ತವೆ. ಇಂತಹ ಹಾಡನ್ನೂ ಹಾಡಿ ಪ್ರೇಕ್ಷಕರ ಮನಕ್ಕೆ ಕಚಗುಳಿ ಇಟ್ಟ ಎಸ್. ಜಾನಕಿ ನಿಜಕ್ಕೂ ಎಲ್ಲೆಯಿಲ್ಲದ ಪ್ರತಿಭಾವಂತೆ, ಗಾನ ವಿಶಾರದೆ, ಗೀತಸಾಮ್ರಾಜ್ಞೀ ಎಂದರೆ ಅವರ ಗಾನವೈದುಷ್ಯ ವನ್ನು ಅಳೆಯುವುದಕ್ಕೆ ಮತ್ತೊಂದು ಪದ ಸಿಗಲಿಲ್ಲ ಎಂತಾಗುತ್ತದೆಯೇ ಹೊರತು ಅವರನ್ನು ನಿಜವಾಗಿ ಅಳೆದಂತಾಗುವುದಿಲ್ಲ.
ಇದು ಅವರ ಹಾಡಿನ ಮಜಲಿನಲ್ಲಿ ಒಂದಾದರೆ ಭಕ್ತಿ, ಜಾನಪದ, ಐತಿಹಾಸಿಕ, ಪೌರಾಣಿಕ-ಹೀಗೆ ಎಲ್ಲದರಲ್ಲೂ ಅವರು ತಮ್ಮ ಛಾಪನ್ನು ಮುದ್ರಿಸಬಲ್ಲರು. ಹಾಗೆಯೇ ಶೃಂಗಾರ, ಕರುಣ, ಅದ್ಭುತ, ಹಾಸ್ಯ, ವೀರ, ಶಾಂತ ಮೊದಲಾದ ಒಂಬತ್ತು ರಸಗಳಲ್ಲೂ ಹಾಡನ್ನು ಹಾಡಬಲ್ಲರು. ಮೈಸೂರು ಮಲ್ಲಿಗೆಯಲ್ಲಿ ಕೆ.ಎಸ್.ನರಸಿಂಹ ಸ್ವಾಮಿಯವರ ‘ದೀಪವು ನಿನ್ನದೆ | ಗಾಳಿಯು ನಿನ್ನದೆ | ಆರದಿರಲಿ ಬೆಳಕು’ ಹಾಡಿನಲ್ಲಿ ಜಾನಕಿಯವರು ಕರುಣರಸದ ಕೋಡಿಯನ್ನೇ ಹರಿಸಿದ್ದಾರೆ. ಸುಧಾರಾಣಿಯವರ ಅಭಿನಯದಲ್ಲಿ ಅದು ಮತ್ತಷ್ಟು ಉಜ್ವಲವಾಗಿ ಬೆಳಗಿದೆ. ಅನುರಾಧಾ ಸಿನಿಮಾದಲ್ಲಿ ಪುರಂದರ ದಾಸರ ರಚನೆ- ‘ಗುಮ್ಮನ ಕರೆಯದಿರೆ ಅಮ್ಮಾ ನೀ | ಗುಮ್ಮನ ಕರೆಯದಿರೆ |’ಯ ಹಾಡಿನಲ್ಲಿ ಆ ಹಾಡಿಗೆ ತಕ್ಕಂತೆ ಬಾಲ ಕೃಷ್ಣನ ತುಂಟಾಟ, ಆ ತುಂಟಾಟಕ್ಕೆ ತಕ್ಕಂತೆ ಜಾನಕಿಯವರ ಹಾಡು ಅದೆಷ್ಟು ಹೊಂದಿಕೊಂಡು ಜನಮನವನ್ನು ಸೂರೆಗೊಂಡಿದೆಯೆಂದರೆ ಅದನ್ನು ಎಷ್ಟು ನೋಡಿದರೂ ನಮ್ಮ ಕಣ್ಣು ತಣಿಯದು.
ಬದುಕು ಬಂಗಾರವಾಯಿತು ಫಿಲ್ಮಲ್ಲಿ, ಮಂಜುಳಾ ಅಭಿನಯದಲ್ಲಿ ‘ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನಿಗೆ’ ಎಂಬ ಜಾನಪದ ಹಾಡು ಬರುತ್ತದೆ. ಬೂತಯ್ಯನ ಮಗ ಅಯ್ಯುದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿಯವರ ಕಂಠದಲ್ಲಿ ಹೊರಹೊಮ್ಮಿದ ‘ಮಲೆನಾಡ ಹೆಣ್ಣ | ಮೈ ಬಣ್ಣ | ಬಲು ಚೆನ್ನ |’ ಹಾಡಂತೂ ಎಷ್ಟು ಕೇಳಿದರೂ ನಮ್ಮ ಶ್ರವಣೇಂದ್ರಿಯ ತೃಪ್ತವಾಗಲಾರದು. ವಿಷ್ಣುವರ್ಧನ್ ಮತ್ತು ಭವಾನಿಯ ಅಭಿನಯದಲ್ಲಿ, ಆ ಕಾಫಿತೋಟದ ರಮ್ಯ ತಾಣ ನಮ್ಮ ಕಣ್ಣಿಗೆ ಅದೆಷ್ಟು ಹಸುರಾಗಿರುತ್ತದೆಯೋ ಅಷ್ಟೇ ಹಸುರು ನಮ್ಮ ಕಿವಿಗೂ ಆಗಿರುತ್ತದೆ ಜಾನಕಿಯವರ ಆ ಹಾಡಿನಲ್ಲಿ. ಜೊತೆಗೆ ಪಿಬಿಎಸ್ ಅವರದ್ದೂ ಕೂಡಾ.
ಇನ್ನು ಜಾನಕಿಯವರ ಭಕ್ತಿಗೀತೆಯ ಬಗ್ಗೆ ಹೇಳುವುದಾದರೆ 1975ರಲ್ಲಿ ತೆರೆ ಕಂಡ ದಾರಿ ತಪ್ಪಿದ ಮಗ ಸಿನಿಮಾದಲ್ಲಿ ಬರುವ ಹಾಡು ‘ಕಾಪಾಡು ಶ್ರೀ ಸತ್ಯನಾರಾಯಣ | ಪನ್ನಗ ಶಯನ ಪಾವನ ಚರಣ’ ಗೀತೆ ಅದೆಷ್ಟು ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು ಎಂದರೆ ಸತ್ಯನಾರಾಯಣ ಪೂಜೆ ಮಾಡುವವರ ಮನೆಯಲ್ಲೆಲ್ಲ ಆ ಹಾಡು ಕಡ್ಡಾಯ ಎಂಬಂತಾಗಿ ಹೋಗಿತ್ತು. ಇದೊಂದು ಕರ್ನಾಟಕದ ಅಪೂರ್ವ ದಾಖಲೆಯಾಗಿ ಇಂದಿಗೂ ಉಳಿದಿದೆ ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ. ಜೊತೆಗೆ ಪಿಬಿಎಸ್ ಮತ್ತು ಎ.ಪಿ.ಕೋಮಲ ಜಾನಕಿಯವರ ಕಂಠಕ್ಕೆ ದನಿಗೂಡಿಸಿದ್ದರು ಎಂಬುದೂ ಅಷ್ಟೇ ಮುಖ್ಯ.
ಇಂತಹ ಎಸ್. ಜಾನಕಿ 88 ವರ್ಷ ಬಾಳಿ ಬದುಕಿ ನಮ್ಮನ್ನು ಅಗಲಿಹೋಗಿದ್ದಾರೆ. ಅವರಿಲ್ಲ. ಹೌದು. ಆದರೆ ಅವರ ಹಾಡಿದ ಹಾಡುಗಳು ನಮ್ಮ ಮುಂದೆ ಚಿರಸ್ಥಾಯಿಯಾಗಿ ಉಳಿದಿವೆ. ಅದೇ ನಮ್ಮ ಸೌಭಾಗ್ಯ.