ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಸಾಲಗಾರ ಮಲ್ಯಗೆ ಸಿಗುತ್ತಿರುವ ಸವಲತ್ತು - ಮಲ್ಯವರ್ಧಿತ ಸೇವೆ

ಇಲ್ಲಿ ಸಿನಿಮಾ ಬಿಡುಗಡೆ ಮಾಡುವ ಬುದ್ಧಿವಂತ ನಿರ್ದೇಶಕರ ಸಿನಿಮಾಗಳೂ ಈ ಟೆಕ್ನಿಕ್‌ಗೆ ಹೊರತಾ ಗಿಲ್ಲ. ಹಾಗಾಗಿ ಇಂಥ ಚಿತ್ರಗಳು ನಮ್ಮಲ್ಲಿಯೂ 100 ದಿನ ಓಡಬೇಕು. ಇಲ್ಲದಿದ್ದರೆ ಪಾಪ ಆ ಸಿನಿಮಾಗಳ ಮರ್ಯಾದೆ ಹೋಗುತ್ತಲ್ಲ. ಹಾಗಾಗಿ, ಜನ ಬರಲಿ, ಬರದೇ ಇರಲಿ ಇಂಥ ಚಿತ್ರಗಳನ್ನು 100 ದಿನ ಓಡಿಸ ಬೇಕು ಎಂದು ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ರಾಜ್ಯದ ಚಿತ್ರಮಂದಿರಗಳಿಗೆ ಸರಕಾರ ಆದೇಶ ಹೊರಡಿ ಸಬೇಕಿದೆ.

ಸಾಲಗಾರ ಮಲ್ಯಗೆ ಸಿಗುತ್ತಿರುವ ಸವಲತ್ತು - ಮಲ್ಯವರ್ಧಿತ ಸೇವೆ

ಹರಿ ಪರಾಕ್‌ ಹರಿ ಪರಾಕ್‌ May 25, 2025 8:04 AM

ತುಂಟರಗಾಳಿ

ಸಿನಿಗನ್ನಡ

ರಾಜ್ಯ ಸರಕಾರವು ಚಲನಚಿತ್ರ ಪ್ರಶಸ್ತಿಗಳ ವಿಷಯದಲ್ಲಿ ಕನ್ನಡ ಚಿತ್ರರಂಗದ ಕಲಾತ್ಮಕ ಚಿತ್ರಗಳ ಪಾಲಿಗೆ ವರದಾನವಾಗುವಂಥ ಯೋಜನೆಯೊಂದನ್ನು ಜಾರಿಗೆ ತರಬೇಕಿದೆ. ಸಾಮಾನ್ಯವಾಗಿ ಕೆಲವು ಕಲಾತ್ಮಕ ಚಿತ್ರಗಳು ಮತ್ತು ಎನ್ ಆರ್‌ಐ ಕಾಂಟ್ಯಾಕ್ಟ್ ಇರುವ ಸಿನಿಮಾ ಮೇಕರ್‌ಗಳ ಚಿತ್ರಗಳು ಮೊದಲು ವಿದೇಶದ ಅಥವಾ ಚಿತ್ರೋತ್ಸವದ ಪ್ರದರ್ಶನ ಕಂಡು ನಂತರ ಕರ್ನಾಟಕದ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ. ಈ ಸಿನಿಮಾ ಮೇಕರ್‌ಗಳು ಕೆಲವು ಚಿತ್ರೋತ್ಸವಗಳಲ್ಲಿ ಅವಾರ್ಡ್ ತೆಗೆದುಕೊಂಡು ‘ನಮ್ಮದು ಒಳ್ಳೆಯ ಸಿನಿಮಾ’ ಅಂತ ಮೊದಲೇ ಸೀಲು ಒತ್ತಿಸಿಕೊಂಡು ಚಿತ್ರಮಂದಿರಕ್ಕೆ ಬರುತ್ತಾರೆ. ಇಂಥ ನಡೆಗಳು, ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರು ಆ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಲು ಹಿಂಜರಿಯುವಂತೆ ಒತ್ತಾಯಿಸುತ್ತವೆ. ಇನ್ನು ‘ವಿದೇಶಿ ಪ್ರೇಕ್ಷಕರಿಗೆ ಇಷ್ಟವಾದ ಚಿತ್ರ’ ಎಂದು ಅಲ್ಲಿನವರ ಅಭಿಪ್ರಾಯಗಳನ್ನು ಯುಟ್ಯೂಬ್‌ನಲ್ಲಿ, ಸಾಮಾಜಿಕ ತಾಣಗಳಲ್ಲಿ ಕೆಲವೊಂದು ಎಲೆಗಳಿಂದ ಶೃಂಗಾರ ಮಾಡಿದ ಜಾಹೀರಾತುಗಳನ್ನು ರಿಲೀಸ್ ಮಾಡಲಾಗುತ್ತದೆ.

ಇಲ್ಲಿ ಸಿನಿಮಾ ಬಿಡುಗಡೆ ಮಾಡುವ ಬುದ್ಧಿವಂತ ನಿರ್ದೇಶಕರ ಸಿನಿಮಾಗಳೂ ಈ ಟೆಕ್ನಿಕ್‌ಗೆ ಹೊರತಾಗಿಲ್ಲ. ಹಾಗಾಗಿ ಇಂಥ ಚಿತ್ರಗಳು ನಮ್ಮಲ್ಲಿಯೂ 100 ದಿನ ಓಡಬೇಕು. ಇಲ್ಲದಿದ್ದರೆ ಪಾಪ ಆ ಸಿನಿಮಾಗಳ ಮರ್ಯಾದೆ ಹೋಗುತ್ತಲ್ಲ. ಹಾಗಾಗಿ, ಜನ ಬರಲಿ, ಬರದೇ ಇರಲಿ ಇಂಥ ಚಿತ್ರಗಳನ್ನು 100 ದಿನ ಓಡಿಸಬೇಕು ಎಂದು ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ರಾಜ್ಯದ ಚಿತ್ರಮಂದಿರಗಳಿಗೆ ಸರಕಾರ ಆದೇಶ ಹೊರಡಿಸಬೇಕಿದೆ.

ಇದನ್ನೂ ಓದಿ: Hari Paraak Column: ಡಿ ಆರ್‌ ಎಸ್‌ ಅಂದ್ರೆ ಡ್ರೋನ್‌ ರಿವ್ಯೂ ಸಿಸ್ಟಮ್‌

ಲೂಟ್‌ ಟಾಕ್‌ - ಔಟ್‌ ಆಫ್‌ ಔಟ್‌ ತೆಗೆದ ಟಾಪರ್‌ ವಿದ್ಯಾರ್ಥಿ

ಅಲ್ಲಪ್ಪಾ, ಇರೋ 625ರಲ್ಲಿ ಒಂದೂ ಬಿಡದೇ ಅಷ್ಟೂ ಅಂಕ ತಗೊಂಡ್ರೆ ಹೆಂಗೆ?

- ಊಟ ಮಾಡಿದ ಮೇಲೆ ತಟ್ಟೆಯಲ್ಲಿ ಒಂದು ಅಗುಳೂ ಉಳಿಸಬಾರದಂತೆ ಅಂತ ದೊಡ್ಡೋರು ಹೇಳಿದಾರಲ್ವಾ?

ಓಹೋ ಅದೂ ಸರೀನೇ, ನ್ಯೂಸ್ ಪೇಪರ್‌ಗಳ ನಿನ್ನ ಆನ್ಸರ್ ಪೇಪರ್‌ದೇ ಸುದ್ದಿ. ನಿನ್ ಬಗ್ಗೆ ಎಲ್ಲ ಪೇಪರ್‌ಲೂ ಆರ್ಟಿಕಲ್ಸ್‌ ಬಂದಿತ್ತು. ಓದಿದ್ಯಾ?

- ಇರೀ.... ಪೇಪರ್ ಓದ್ತಾ ಕೂತ್ರೆ ಎಕ್ಸಾಮ್ ಪೇಪರ್ ಬರೆಯೋಕಾಗುತ್ತಾ? ನಾನು ಬರೀ ಟೆಕ್ಸ್ ಬುಕ್ ಮಾತ್ರ ಓದೋದು. ‌

ಎಕ್ಸಾಮ್‌ನಲ್ಲಿ ಎಲ್ಲ ಪ್ರಶ್ನೆಗೂ ಉತ್ತರ ಕೊಟ್ಟು ಇಲ್ಲಿ ಮಾತ್ರ ನನ್ನ ಪ್ರಶ್ನೆಗಳಿಗೆ ಪ್ರಶ್ನೆನೇ

ಕೇಳಿದೀಯಲ್ಲ?

- ಏನ್ ಮಾಡೋದು, ಇರೋ ಬರೋ ಉತ್ತರಗಳನ್ನೆ ಅ ಬರೆದುಬಿಟ್ಟಿದ್ದೀನ?

ಸರಿ, ‘ಔಟ್ ಆಫ್ ಔಟ್’ ತೆಗೆದಿದ್ದೀಯ, ಕ್ವೆಶ್ಚನ್ ಪೇಪರ್ ಔಟ್ ಆದ್ರೂ ಇಷ್ಟೊಂದು ಮಾರ್ಕ್ ತೆಗೆಯೋಕಾಗಲ್ಲ ನಮ್ಮಂಥೋರಿಗೆ. ‌ಏನಾಗಬೇಕು ಅಂತಿದೀಯಾ?

- ಮುಂದೆ ಕ್ರಿಕೆಟ್‌ನಲ್ಲಿ ಬೌಲರ್ ಆಗಬೇಕು ಅಂತಿದ್ದೀನಿ, ‘ಹೌ ವಾಸ್ ದಟ್’ ಅಂತ ಅಪೀಲ್ ಮಾಡಿದಾಗ ಅಂಪೈರ್ ‘ಔಟ್ ಆಫ್ ಔಟ್’ ಅಂತ ಕೈಯೆತ್ತೋದನ್ನ ನೋಡಬೇಕು ‌ಅಂತ ಆಸೆ

ಸರಿ, ಒಟ್ಟಾರೆ ನಿನ್ನ ಈ ಸಾಧನೆಯನ್ನ ಒಂದು ಸಾಲಿನಲ್ಲಿ ಏನಂತ ವಿವರಿಸ್ತೀಯಾ?

- ‘ಉತ್ತರ’ ಕುಮಾರನ ಪೌರುಷ

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ನೀನು ರೊಮ್ಯಾಂಟಿಕ್ ಆಗಬೇಕು ಮಗಾ ಅಂತ ಡಾಕ್ಟರ್ ಸೋಮು ಯಾವಾಗಲೂ ಗೆಳೆಯ ಖೇಮುಗೆ ಹೇಳ್ತಾ ಇದ್ದ. ಆದರೆ ರೊಮ್ಯಾಂಟಿಕ್ ಆಗಿ ಬಿಹೇವ್ ಮಾಡುವುದು ಖೇಮು ಜಾಯಮಾನಕ್ಕೆ ಬರುತ್ತಲೇ ಇರಲಿಲ್ಲ. ಅದಕ್ಕೆ “ನನ್ನ ಡಾಕ್ಟರ್ ಶಾಪ್‌ಗೆ ಬರೀ ಹುಡುಗೀರು ಬರ್ತಾರೆ, ಅಲ್ಲಿಗೆ ಬಾ ನೀನು, ಸರಿ ಹೋಗ್ತೀಯಾ" ಅಂದ ಡಾಕ್ಟರ್ ಸೋಮು. ಸರಿ ಅಂತ ಖೇಮು ದಿನಾ ಸೋಮುವಿನ ಕ್ಲಿನಿಕ್‌ಗೆ ಹೋಗತೊಡಗಿದ. ದಿನವೂ ಸುಂದರಿಯರನ್ನು ನೋಡಿ ಕಣ್ತುಂಬಿ ಕೊಳ್ಳುತ್ತಿದ್ದ. ಒಂದಷ್ಟು ದಿನಗಳು ಕಳೆದ ಮೇಲೆ “ಬರೀ ನೋಡಿದ್ದು ಸಾಕು, ಇನ್ನು ಮುಂದೆ ಏನಾ ದರೂ ಮುಂದುವರಿಯಬೇಕು" ಎಂದು ಹೇಳಿದ ಸೋಮು ಕ್ಲಿನಿಕ್‌ಗೆ ಪೇಷೆಂಟ್ ಬಂದಾಗ ಯಾವ ಕಾಯಿಲೆಗೆ ಯಾವ ಔಷಧಿ ಕೊಡಬೇಕು ಎಂದೆ ಹೇಳಿಕೊಟ್ಟು ಒಂದು ದಿನ ಖೇಮುವನ್ನೇ ಡಾಕ್ಟರ್ ಆಗಿಸಿ ತಾನು ಹೊರಟು ಹೋದ. ಸಂಜೆಯ ವೇಳೆಗೆ ಸೋಮು ವಾಪಸ್ ಬಂದ. ಅವನ ಮುಂದೆ ಒಂದು ಸುಂದರವಾದ ಹುಡುಗಿ ಕಣ್ಣುಜ್ಜಿಕೊಳ್ಳುತ್ತಾ ಹೊರಗೆ ಹೋದಳು.

“ಓಹೋ ನಮ್ಮ ಖೇಮು ಏನೋ ಮಾಡಿದಾನೆ" ಅಂತ ಸೋಮುಗೆ ಮನದಟ್ಟಾಯಿತು. ಸೀದಾ ಡಮ್ಮಿ ಡಾಕ್ಟರ್ ಖೇಮುವಿನ ರೂಮಿಗೆ ಹೋದ. ಬೆಳಗ್ಗೆಯಿಂದ ಏನೇನಾಯ್ತು ಅಂತ ವಿಚಾರಿಸಿದ. “ಬೆಳಗ್ಗೆ ಒಂದು ಹುಡುಗಿ ತಲೆನೋವು ಅಂತ ಬಂದಿದ್ಲು, ಅವಳಿಗೆ ಸಾರಿಡಾನ್ ಕೊಟ್ಟೆ" ಅಂದ ಖೇಮು, ಸರಿ ಅಂದ ಸೋಮು. “ಇನ್ನೊಬ್ಬಳು ಜ್ವರ ಅಂತ ಬಂದಿದ್ಲು ಅವಳಿಗೆ ಪ್ಯಾರಾಸಿಟಮಾಲ್ ಮಾತ್ರೆ ಕೊಟ್ಟೆ" ಅಂದ ಖೇಮು, ಸರಿ ಅಂದ ಸೋಮು.

“ಇನ್ನೊಬ್ಬಳು ಮೈ ಕೈ ನೋವು ಅಂತ ಬಂದಿದ್ಲು ಅವಳಿಗೆ ಬ್ರೂಫಿನ್ ಕೊಟ್ಟೆ" ಅಂದ ಖೇಮು. “ಅದ್ಸರಿ ಈಗ ಒಂದು ಹುಡುಗಿ ಹೋದ ಳಲ್ಲ, ಅವಳಿಗೆ ಏನು ಸಮಸ್ಯೆ ಇತ್ತು?" ಅಂದ ಸೋಮು. ಅದಕ್ಕೆ ಖೇಮು ಹೇಳಿದ- “ಅವಳಾ? ಆ ಹುಡುಗಿ ಒಳಗೆ ಬಂದವಳೇ ನನ್ನನ್ನು ನೋಡಿ, ‘ಡಾಕ್ಟರ್ ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಂಡಾಗಲೆ ನನ್ನಂಥ ಬ್ಯೂಟಿಪುಲ್ ಹುಡುಗಿ ಈ ಪ್ರಪಂಚದ ಇಲ್ಲ ಅನ್ಸುತ್ತೆ. ನಿಮಗೂ ಹಾಗೇ ಅನ್ಸುತ್ತಾ?’ ಅಂತ ರೊಮ್ಯಾಂಟಿಕ್ ಆಗಿ ನನ್ನ ಹತ್ತಿರ ಬಂದು ಹೇಳಿದಳು". ಸೋಮು ಕುತೂಹಲದಿಂದ “ಅವಳಿಗೆ ಏನು ಮಾಡಿದೆ"? ಅಂತ ಕೇಳಿದ. ಅದಕ್ಕೆ ಖೇಮು ಕೂಲಾಗಿ ಹೇಳಿದ “ಅವಳ ಕಣ್ಣಿಗೆ ಐ ಡ್ರಾಪ್ಸ್ ಹಾಕಿದೆ".‌

ಲೈನ್‌ ಮ್ಯಾನ್

ಪ್ರತಿ ಬಾರಿ ಸಿನಿಮಾ ಪ್ರಶಸ್ತಿ ಬಂದಾಗಲೂ ಲಾಬಿ ನಡೆದಿದೆಯಾ ಅಂತ ಅನುಮಾನ ಬರುತ್ತೆ. ಆ ಥರ ಅನುಮಾನ ಹುಟ್ಟಿಸುವಂತೆ ಪ್ರಶಸ್ತಿ ಪಡೆದಿರುವ ಚಿತ್ರ ಯಾವುದು?

- ‘ಮಾರಿ’ ‘ಕೊಂಡವರು’

ಕುರುಡನ ಪಾತ್ರದಲ್ಲಿ ನಟನೊಬ್ಬನ ಅಭಿನಯ ಕಂಡು ಅಭಿಮಾನಿಯಾದವರು

- ‘ಅಂಧಾ’ಭಿಮಾನಿಗಳು

‘ಕಾನೂನನ್ನು’ ದುರ್ಬಳಕೆ ಮಾಡಿಕೊಳ್ಳುವ ಕಥೆ ಇರುವ ಚಿತ್ರಕ್ಕೆ ಪ್ರಶಸ್ತಿ ಬಂದರೆ ಅದು

- ‘ಲಾ’ಬಿ

ಐಪಿಎಲ್ ಪ್ರಿಯರ ಫಿಲಾಸಫಿ ‌

- ಲೈಫ್ ಒಮ್ಮೆ ರಾಹುಲ್ ದ್ರಾವಿಡ್ ಥರ, ಇನ್ನೊಮ್ಮೆ ಆಶಿಶ್ ನೆಹ್ರಾ ಥರ. ಕೂತ್ರೆ ವೀಲ್‌ಚೇರಲ್ಲೇ ಇರುತ್ತೆ, ಇಂದ್ರೆ ಒಂದ್ ಕಡೆ ಕೂರದೆ ಸುಮ್ನೆ ಓಡಾಡ್ತಾನೇ ಇರುತ್ತೆ.

ಕವನ ವಿಮರ್ಶೆ

‘ಏ ಹುಡುಗೀ, ಕನ್ನಡಿಗೆ ನಿನ್ನೀ ಸೌಂದರ್ಯವನ್ನು ಸೆರೆ ಹಿಡಿಯಲು ಸಾಧ್ಯವೇ’

- ಈ ಹಾಡಿನಲ್ಲಿ ಕವಿ, ಹುಡುಗಿ ಎಷ್ಟು ದಪ್ಪ ಇದ್ದಾಳೆ ಅಂತ ಹೇಳೋಕೆ ಟ್ರೈ ಮಾಡ್ತಾ ಇದ್ದಾನೆ.

ಗರ್ಭಿಣಿ ಹೆಂಗಸಿಗೆ ಮನೆಯ ಮಗು ಹುಟ್ಟಿದರೆ, ಅದು

- ಹೋಮ್ ಡೆಲಿವರಿ

ಅಷ್ಟೊಂದು ಸಾಲ ಮಾಡಿಕೊಂಡು ವಿದೇಶದಲ್ಲಿರುವ ವಿಜಯ್ ಮಲ್ಯ ಅವರಿಗೆ ಸಿಗುತ್ತಿರುವ ಐಷಾರಾಮಿ ಸೌಲಭ್ಯ

- ‘ಮಲ್ಯ’ವರ್ಧಿತ ಸೇವೆ

ಆರ್ಟ್ ಸಿನಿಮಾಗಳಿಗೂ ಕಮರ್ಷಿಯಲ ವ್ಯಾಲ್ಯೂ ಇದೆ. ಹೇಗೆ?

- ಪ್ರಶಸ್ತಿಯ ಜತೆಗೆ, ಹಣ, ಸೈಟು ಸಿಗುತ್ತಲ್ಲ.

ಪೊಲೀಸ್ ಕ್ವಾಟ್ರಸ್‌ಗಳನ್ನ ಏನಂತ ಕರೀಬಹುದು?

-ಪೊಲೀಸ್ ‘ಬೆಲ್ಟ್’

ಅಪರಾಧ ಮಾಡಿದವರನ್ನು ಗಲ್ಲಿಗೇರಿಸುವ ಪ್ರಕ್ರಿಯೆಗೊಂದು ಡೀಸೆಂಟ್ ಹೆಸರು

- ‘ಉರುಳು’ಸೇವೆ