#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Narada Sanchara: ನಿತೀಶ್ ಎಂಬ ಕಿಲಾಡಿ

ಮಾಂಝಿಯವರಂಥ ಮಹಾ ದಲಿತ ನಾಯಕನನ್ನೇ ‘ಯಾವುದೇ ಪ್ರಯೋಜನಕ್ಕೆ ಬಾರದ ವ್ಯಕ್ತಿ’ ಎಂಬರ್ಥದಲ್ಲಿ ಹೀಗಳೆದ ನಿತೀಶರು, ಲಾಲು ಪ್ರಸಾದ್ ಯಾದವ್‌ರ ರಾಷ್ಟ್ರೀಯ ಜನತಾದಳ ಪಕ್ಷ ದೊಂದಿಗೆ ಮೈತ್ರಿ ಮಾಡಿಕೊಂಡರು. ತರುವಾಯ ಅದನ್ನೂ ಝಾಡಿಸಿ, ಎನ್‌ಡಿಎ ಜತೆಗೆ ಪ್ರಸ್ತುತ ‘ಹನಿಮೂನ್’ ನಡೆಸಿದ್ದಾರೆ. ಆದರೀಗ, ಬಿಹಾರದಲ್ಲಿ ಚುನಾವಣಾ ಅಖಾಡ ರಂಗೇರುತ್ತಿರುವುದರಿಂದ ಮತ್ತೊಂದು ಸುತ್ತಿನ ನವರಂಗಿ ನಾಟಕಕ್ಕೆ ನಿತೀಶ್ ಚಾಲನೆ ನೀಡಿದ್ದಾರೆ

Narada Sanchara: ನಿತೀಶ್ ಎಂಬ ಕಿಲಾಡಿ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್

Profile Ashok Nayak Feb 11, 2025 10:26 AM

ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ಎಂದೂ ತಾಳಕ್ಕೆ ತಕ್ಕಂತೆ ಕುಣಿಯಬೇಕು’ ಎಂಬ ಹಾಡಿನ ಸಾಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಖತ್ತಾಗಿ ಸೂಟ್ ಆಗುತ್ತೆ ಕಣ್ರಿ. ಏಕೆಂದರೆ, ರಾಜಕೀಯದ ಅಖಾಡದಲ್ಲಿ ಯಾವಾಗ ಏನು ಪಟ್ಟು ಹಾಕಬೇಕು, ಎದುರಾಳಿಗಳನ್ನು ಹೇಗೆ ಮಣ್ಣು ಮುಕ್ಕಿಸಬೇಕು ಎಂಬುದನ್ನು ಮಾತ್ರವಲ್ಲದೆ, ಸ್ವಂತ ಅಸ್ತಿತ್ವಕ್ಕೇ ಧಕ್ಕೆ ಬಂದಾಗ ಅವಕಾಶವಾದಿ ರಾಜಕಾರಣವನ್ನು ಹೇಗೆ ಮಾಡಬೇಕು ಎಂಬುದನ್ನೂ ಚೆನ್ನಾಗಿ ಅರಿತಿರುವ ಮಹಾನುಭಾವರು ನಮ್ ನಿತೀಶರು. ಅದರಲ್ಲೂ ನಿರ್ದಿಷ್ಟವಾಗಿ, ಜಿತನ್ ರಾಮ್ ಮಾಂಝಿ ಅವರ ವಿಷಯದಲ್ಲಿ ನಿತೀಶ್ ಕುಮಾರರು ಆಡುತ್ತಿರುವ ನವ ರಂಗಿ ಆಟಗಳು, ಯಾವುದೇ ಬಾಲಿವುಡ್ ಸಿನಿಮಾದ ಸ್ಕ್ರಿಪ್ಟ್‌ಗೆ ಗ್ರಾಸವನ್ನು ಒದಗಿಸಬಲ್ಲವು.

ಮೊಟ್ಟಮೊದಲಿಗೆ ಅವರು 2014ರಲ್ಲಿ ಮಾಂಝಿ ಅವರಿಗೆ ಬಿಹಾರದ ಮುಖ್ಯ ಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿದರು, ಆದರೆ ಇಬ್ಬರ ನಡುವೆ ಅದೇನು ಎಡವಟ್ಟಾಯ್ತೋ ಗೊತ್ತಿಲ್ಲ, 2015ರಲ್ಲಿ ಅದೇ ಮಾಂಝಿಯವರನ್ನು ನಿತೀಶರು ಪದಚ್ಯುತಗೊಳಿಸಿ ಕೈತೊಳೆದು ಕೊಂಡರು.

ಹಗ್ಗಜಗ್ಗಾಟ ಇಷ್ಟಕ್ಕೇ ನಿಲ್ಲದೆ 2023ರ ಹೊತ್ತಿಗೆ ಇನ್ನೂ ತೀವ್ರವಾಯಿತು. ಮಾಂಝಿಯವರಂಥ ಮಹಾದಲಿತ ನಾಯಕನನ್ನೇ ‘ಯಾವುದೇ ಪ್ರಯೋಜನಕ್ಕೆ ಬಾರದ ವ್ಯಕ್ತಿ’ ಎಂಬರ್ಥದಲ್ಲಿ ಹೀಗಳೆದ ನಿತೀಶರು, ಲಾಲು ಪ್ರಸಾದ್ ಯಾದವ್‌ರ ರಾಷ್ಟ್ರೀಯ ಜನತಾದಳ ಪಕ್ಷದೊಂದಿಗೆ ಮೈತ್ರಿ ಮಾಡಿ ಕೊಂಡರು. ತರುವಾಯ ಅದನ್ನೂ ಝಾಡಿಸಿ, ಎನ್‌ಡಿಎ ಜತೆಗೆ ಪ್ರಸ್ತುತ ‘ಹನಿಮೂನ್’ ನಡೆಸಿದ್ದಾರೆ. ಆದರೀಗ, ಬಿಹಾರದಲ್ಲಿ ಚುನಾವಣಾ ಅಖಾಡ ರಂಗೇರುತ್ತಿರುವುದರಿಂದ ಮತ್ತೊಂದು ಸುತ್ತಿನ ನವರಂಗಿ ನಾಟಕಕ್ಕೆ ನಿತೀಶ್ ಚಾಲನೆ ನೀಡಿದ್ದಾರೆ.

ಫೆಬ್ರವರಿ 2ರಂದು ಏಕಾಏಕಿ ಮಾಂಝಿ ಅವರ ಪಟನಾ ಮನೆಗೆ ಭೇಟಿಯಿತ್ತ ನಿತೀಶರು, ‘ಇವ ರೊಂದು ದೊಡ್ಡ ಬ್ಲಂಡರ್’ ಎಂದು ತಾವೇ ಒಂದು ಕಾಲಕ್ಕೆ ಕರೆದಿದ್ದ ಆ ವ್ಯಕ್ತಿಯನ್ನು ಬಾಚಿ ತಬ್ಬಿಕೊಂಡರು. ಚುನಾವಣಾ ಪರ್ವವು ಠಳಾಯಿಸುತ್ತಿರುವಾಗ, ಕೆಲವರ ಕೆಲವೊಂದು ತಪ್ಪುಗಳು ಅಷ್ಟೊಂದು ದೊಡ್ಡದಾಗಿ ಕಾಣುವುದಿಲ್ಲ ಎಂಬುದಕ್ಕೆ ನಿತೀಶರಿಗಿಂತ ಮತ್ತು ಅವರ ಅವಕಾಶ ವಾದಿತನಕ್ಕಿಂತ ಮತ್ತೊಂದು ನಿದರ್ಶನ ಬೇಕಿದೆಯೇ?!

ಕಮಾಲ್ ಮಾಡದ ‘ದೂಸ್ರಾ’

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಹರ್ ಭಜನ್ ಸಿಂಗ್‌ರನ್ನು ಆಪ್ತರು ‘ಭಜ್ಜಿ’ ಎಂದೇ ಪ್ರೀತಿಯಿಂದ ಕರೆಯುವುದು ವಾಡಿಕೆ. ಕ್ರಿಕೆಟ್ ಪಿಚ್‌ನಲ್ಲಿ ಸಾಕಷ್ಟು ಕಮಾಲ್ ಮಾಡಿದ್ದ ಭಜ್ಜಿ, ರಾಜಕೀಯದ ಪಿಚ್‌ನಲ್ಲೂ ಕಮಾಲ್ ತೋರಿಸುವುದಿನ್ನೂ ಬಾಕಿಯಿದೆ. ಆದರೆ ಅದಕ್ಕೆ ಅವಕಾಶಗಳೇ ಸಿಗದಿದ್ದುದಕ್ಕೆ ಭಜ್ಜಿ ಮಾತ್ರವಲ್ಲದೆ ಅವರ ಅಭಿಮಾನಿಗಳೂ ಶಾನೆ ಬೇಸರ ಮಾಡಿ ಕೊಂಡಿದ್ದುಂಟು.

ಕಾರಣ, ಲೋಕಸಭೆಯ ಪ್ರಚಾರಕಾರ್ಯದ ವೇಳೆಯಾಗಲೀ ಅಥವಾ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲರ ಬಂಧನದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ವೇಳೆಯಾಗಲೀ ಪಕ್ಷ ದವರು ಭಜ್ಜಿಯನ್ನು ಬಳಸಿಕೊಳ್ಳದೆ ಮೂಲೆಗುಂಪು ಮಾಡಿದ್ದು. ಆದರೆ, ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರವು ‘ಅಂತಿಮ ಓವರ್’ ಹಂತಕ್ಕೆ ಪ್ರವೇಶಿಸುವಾಗ ಮಾತ್ರವೇ ಕಾಟಾಚಾರಕ್ಕೆಂಬಂತೆ ಹರ್‌ಭಜನ್ ಸಿಂಗ್‌ರಿಗೆ ಮಣೆಹಾಕಲಾಯಿತು. ದೆಹಲಿ ಮುಖ್ಯಮಂತ್ರಿಯಾಗಿದ್ದ ಆತಿಶಿ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರ ಕಣಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಜ್ಜಿ ಪ್ರಚಾರಕ್ಕೆ ಇಳಿದಿದ್ದೂ ಉಂಟು. ಆದರೆ ಮತದಾರ ಮಹಾಪ್ರಭುವು ಆಮ್ ಆದ್ಮಿ ಪಾರ್ಟಿಯನ್ನೇ ಮಕಾಡೆ ಮಲಗಿಸಿ ಬಿಜೆಪಿಯನ್ನು ಗದ್ದುಗೆಯಲ್ಲಿ ತಂದು ಕೂರಿಸಿಬಿಟ್ಟಿದ್ದಾನೆ.

ಆಡಳಿತ-ವಿರೋಧಿ ಗಾಳಿ ಮೀಸುತ್ತಿರುವಾಗ ಯಾರೇನು ಕಸರತ್ತು ಮಾಡಿದರೂ ಕೆಲವೊಮ್ಮೆ ಪ್ರಯೋಜನವಾಗುವುದಿಲ್ಲ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ!