Yagati Raghu Naadig Column: ಕಾವಿಯನ್ನು ಸಡಿಲಿಸಿ ಸ್ವಾಮೀಜಿ ಅಪಚಾರ ಎಸಗಿದರೇ ?
ಅವಧೂತರು ವಿಷಾದದ ದನಿಯಲ್ಲಿ, “ಸರ್ವಸಂಗ ಪರಿತ್ಯಾಗಿಯಾಗಿ ಇರಬೇಕಾಗಿದ್ದ ಆ ಮಹಾನುಭಾವ ತನ್ನ ಕಾವಿಯನ್ನು ಕೊಂಚ ಸಡಿಲಿಸಿದ್ದೇ ಅಪಸವ್ಯದ ಮುಂದುವರಿಕೆಗೆ ಮುನ್ನುಡಿ ಯಾಯಿತು" ಎಂದು ಹೇಳಿ, “ಛೇ... ಛೇ.." ಎಂದು ಲೊಚಗುಟ್ಟಿದರು. ಈ ಮಾತಿಗೆ ಶಿಷ್ಯರೊಬ್ಬರು ಸಂಕ್ಷೋಭೆಗೊಂಡು, “ಗುರುಗಳೇ, ಹೌದಾ...?" ಎನ್ನುತ್ತಾ ವ್ಯಗ್ರರಾದರು.


ರಸದೌತಣ
(ಭಾಗ-13)
ಕಾರಿನ ಹಿಂಬಾಗಿಲನ್ನು ನಿಧಾನವಾಗಿ ತೆರೆದು ಕೆಳಗಿಳಿದ ಕಟ್ಟುಮಸ್ತಾದ ಆಸಾಮಿಯ ಕಡೆಗೆ ಬೆರಳು ಮಾಡಿ ತೋರಿಸಿದ ಅವಧೂತರು, “ನೀವು ಊಹಿಸಿದ ಅಡುಗೆ ಭಟ್ಟ ‘ನಳಪಾಕ’ ಅಲ್ಲ ಸ್ವಾಮಿ ಕಳ್ಳಬೆಕ್ಕು; ಎದುರಿಗೆ ನಿಂತಿದೆ ನೋಡಿ ಕಥೆಯ ಸಸ್ಪೆನ್ಸು ಮತ್ತು ಕ್ಲೈಮ್ಯಾಕ್ಸು" ಎಂದು ಹೇಳಿದ್ದನ್ನು ಕೇಳಿ, ಕೆಲಕ್ಷಣದ ಹಿಂದಷ್ಟೇ ಅವರನ್ನು ಪ್ರಶ್ನಿಸಿದ್ದ ಶಿಷ್ಯರು ನಿಜಕ್ಕೂ ಅವಾಕ್ಕಾಗಿದ್ದರು. ಅದಕ್ಕೆ ಕಾರಣವೂ ಇತ್ತು. ಆ ಕಟ್ಟುಮಸ್ತಾದ ಆಸಾಮಿ ಬೇರಾರೂ ಆಗಿರದೆ, ಅವಧೂತರನ್ನು ಭೇಟಿ ಮಾಡಲು ಸರ್ಕಲ್ ಇನ್ಸ್ ಪೆಕ್ಟರ್ ಜತೆಯಲ್ಲಿ ಬಂದಿದ್ದ ಹಿರಿಯ ರಾಜಕಾರಣಿಯ ಮಗನೇ ಆಗಿದ್ದ!
ಆ ರಾಜಕಾರಣಿಯ ‘ಉತ್ತರಾಧಿಕಾರಿ’ ಎಂದೇ ಬಿಂಬಿಸಲ್ಪಟ್ಟಿದ್ದ ಆ ಕಟ್ಟುಮಸ್ತಾದ ತರುಣ, ಅಪ್ಪ ಕಟ್ಟಿದ ‘ರಾಜಕಾರಣದ ಕೋಟೆ’ಯನ್ನು ಮತ್ತಷ್ಟು ಭದ್ರಪಡಿಸುವುದರ ಜತೆಗೆ, ತನ್ನ ‘ಉತ್ತರಾಧಿ ಕಾರಿತ್ವ’ದ ಪರಿಕಲ್ಪನೆಯನ್ನೂ ಜನಮನದಲ್ಲಿ ಆಳವಾಗಿ ಬೇರೂರಿಸಬೇಕು ಎಂಬ ಹುಕಿಗೆ ಬಿದ್ದು ಅಪ್ಪನ ಜತೆಯಲ್ಲಿ ಊರೂರು ಸುತ್ತುತ್ತಿದ್ದ. ಹೀಗಾಗಿ ಆ ತರುಣ ಸಾಕಷ್ಟು ಜನರಿಗೆ ಗೊತ್ತಿದ್ದ. ಹಾಗೆ ಆತನ ಚಹರೆಯ ಪರಿಚಯವಿದ್ದವರಲ್ಲಿ ಅವಧೂತರ ಶಿಷ್ಯರೂ ಸೇರಿದ್ದರು. ಆದರೆ ಈತ ಕಥೆಯ ‘ಸಸ್ಪೆನ್ಸ್’ ಮತ್ತು ‘ಕ್ಲೈಮ್ಯಾಕ್ಸ್’ ಆಗಲಿಕ್ಕೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಶಿಷ್ಯರ ಮನದಲ್ಲಿ ಗಿರಕಿ ಹೊಡೆಯುತ್ತಲೇ ಇತ್ತು...
ಇದನ್ನೂ ಓದಿ: Yagati Raghu Naadig Column: ಕ್ಲೈಮಾಕ್ಸ್ʼಗೆ ಕಾಲಿಟ್ಟಿತು ಕಳ್ಳಬೆಕ್ಕಿನ ಕಥನ...
ಕಾರಿನಿಂದ ಇಳಿದು ಮಳ್ಳನಂತೆ ಸುಮ್ಮನೆ ನಿಂತಿದ್ದ ಆ ‘ಯುವ ರಾಜಕಾರಣಿ’...! ಎದುರಿಗೆ ಜನ ಸಮುದಾಯವನ್ನು ಕಂಡಾಗಲೆಲ್ಲಾ ತಾನೇ ಮುಂದಡಿಯಿಟ್ಟು ಅವರಿವರ ಕೈಕುಲುಕುತ್ತಿದ್ದ ಆ ಮಹಾನುಭಾವ, ಇಂದು ಮಾತ್ರ ಕೈಕಟ್ಟಿ ತೆಪ್ಪಗೆ ನಿಂತಿದ್ದ. ಅದಕ್ಕೆ ಕಾರಣ, ಮುಂದಡಿಯಿಟ್ಟು ಅವಧೂತರ ಮನೆಯ ಬಾಗಿಲು ಬಡಿಯುವ ಧೈರ್ಯವಾಗಲೀ ತಾಕತ್ತಾಗಲೀ ಅವನಲ್ಲಿ ಉಳಿದಿರ ಲಿಲ್ಲ. ಜತೆಗೆ ಆತನ ಕಾಲುಗಳು ಲಘುವಾಗಿ ನಡುಗುತ್ತಿದ್ದವು. ಅವಧೂತರ ಭೇಟಿಗೆ ದೂರದ ಪಟ್ಟಣದಿಂದ ಕಾರಿನಲ್ಲಿ ಕರೆತರುವಾಗಲೇ, ಆತನ ಅಪ್ಪ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಕಡೆಯಿಂದ ಒದಗಿದ್ದ ಮುನ್ನೆಚ್ಚರಿಕೆಯ ಪಾಠಗಳೂ ಅದಕ್ಕೆ ಕಾರಣವಾಗಿದ್ದಿರಬೇಕು! ಏಕೆಂದರೆ, ಒಂದು ದಿನದ ಹಿಂದೆ ಅವರಿಬ್ಬರೂ ತಮ್ಮ ಭೇಟಿಗೆ ಮನೆಯ ಹಿತ್ತಲಿಗೇ ಬಂದಿದ್ದಾಗ ಅವಧೂತರು ತಮ್ಮ ಶಿಷ್ಯ ರನ್ನೆಲ್ಲಾ ಮನೆಯೊಳಗೆ ಕಳಿಸಿ, ಅವರಿಬ್ಬರ ಜತೆಗಿನ ಏಕಾಂತದ ಮಾತುಕತೆಗೆ ಅನುವು ಮಾಡಿ ಕೊಟ್ಟಿದ್ದ ಸಂದರ್ಭದಲ್ಲಿ “ಓಹೋ... ನಿಮಗೆ ಇಷ್ಟೊಂದು ಧಾರ್ಷ್ಟ್ಯವೇ?" ಎಂದು ಸಿಂಹಗರ್ಜನೆಯ ಸ್ವರೂಪದಲ್ಲಿ ಅಬ್ಬರಿಸಿ, ಅವರಿಬ್ಬರ ಕೊಬ್ಬಿಳಿಸಿ ಕಳಿಸಿದ್ದರು. ಸಾಲದೆಂಬಂತೆ, ಅವರು ತಂದಿದ್ದ ಹಣ್ಣು-ಹೂವು, ಸಿಹಿ ತಿನಿಸಿನ ಪೊಟ್ಟಣಗಳನ್ನು ಸ್ವೀಕರಿಸಲು ಬಿಲ್‌ಕುಲ್ ಒಪ್ಪದೆ, “ಅವನ್ನು ಹೇಗೆ ತಂದಿದ್ದಿರೋ, ಹಾಗೇ ನಿಮ್ಮ ಕಾರಿನಲ್ಲಿ ವಾಪಸ್ ತೆಗೆದು ಕೊಂಡು ಹೋಗಿ ಬಿಡಿ..." ಎಂದು ಕಟ್ಟಾಜ್ಞೆ ವಿಧಿಸಿದ್ದರು. ಹೀಗೆ ಸುಡುಮಾತಿನಲ್ಲೇ ತಪರಾಕಿ ತಿಂದಿದ್ದ ಆ ಹಿರಿಯ ರಾಜಕಾರಣಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್, ‘ಅವಧೂತರ ಜತೆ ನಡೆದುಕೊಳ್ಳುವ ಬಗೆ ಹೇಗೆ’ ಎಂಬುದರ ಕುರಿತು ಆ ಯುವ ರಾಜಕಾರಣಿಗೆ ದಾರಿ ಯುದ್ದಕ್ಕೂ ‘ಬಾಯಿಪಾಠ’ ಹೇಳಿಕೊಂಡು ಬಂದಿರುವುದರ ಸಾಧ್ಯತೆಯಿತ್ತು. ಹೀಗಾಗಿ ಆ ಯುವ ರಾಜಕಾರಣಿ ತನ್ನ ಕೈ-ಬಾಯಿ-ಕುಚೇಷ್ಟೆ ಗಳಿಗೆಲ್ಲಾ ಬೀಗ ಹಾಕಿಕೊಂಡು ಕಾರಿನ ಬಳಿ ತೆಪ್ಪಗೆ ನಿಂತಿದ್ದ. ಸದ್ಯಕ್ಕೆ ಅವನಲ್ಲಿ ಕಾಣ ಬರುತ್ತಿದ್ದುದು ಕಾಲುಗಳ ನಡುಕವಷ್ಟೇ..!
ಅವಧೂತರ ಜತೆಗೇ ನಿಂತುಕೊಂಡಿದ್ದು ಇವಿಷ್ಟೂ ದೃಶ್ಯವೈಭವವನ್ನು ಹಜಾರದ ಕಿಟಿಕಿ ಯಿಂದಲೇ ವೀಕ್ಷಿಸಿದ ಶಿಷ್ಯರಲ್ಲಿ ಒಬ್ಬರು ಅಪ್ರಯತ್ನವಾಗಿ ಅವಧೂತರ ಕಡೆಗೊಮ್ಮೆ ನೋಡಿದರು...
ಆ ನೋಟವನ್ನು ಗ್ರಹಿಸಿದ ಅವಧೂತರು, “ಆ ಮೂವರಿಗೂ ಮನೆಯ ಬಾಗಿಲು ತೆರೆಯುವ ಅಗತ್ಯ ವಿಲ್ಲ ಸ್ವಾಮೀ... ಮೂಲೆಯಲ್ಲಿರೋ ಗೋಣಿಚೀಲದಿಂದ ಮೂರು ತೆಂಗಿನಕಾಯಿಗಳನ್ನು ಹೆಕ್ಕಿ ತೆಗೆದು, ನೀವಾಗೇ ಅವರಿದ್ದಲ್ಲಿಗೆ ತೆರಳಿ ಕೊಟ್ಟುಬಿಡಿ, ನಂತರ ಇಲ್ಲಿಂದ ಹೊರಡುವಂತೆ ತಿಳಿಸಿ ಬಂದುಬಿಡಿ, ಅಷ್ಟೇ!" ಎಂದು ಹೇಳಿ ಆ ಶಿಷ್ಯರ ಉತ್ತರಕ್ಕೂ ಕಾಯದೆ ಮಿಕ್ಕ ಶಿಷ್ಯರೊಂದಿಗೆ ಹಿತ್ತಲಿಗೆ ಮರಳಿದರು. ಮನೆಯ ಹೊರಗೇ ನಿಂತಿದ್ದ ಆ ಮೂವರಿಗೂ ಅವಧೂತರ ಸೂಚನೆ ಯಂತೆಯೇ ತೆಂಗಿನಕಾಯಿಗಳನ್ನು ಕೊಟ್ಟ ಆ ಶಿಷ್ಯರು, “ನೀವಿನ್ನು ಹೊರಡಬಹುದಂತೆ" ಎಂದಷ್ಟೇ ಚುಟುಕಾಗಿ ಹೇಳಿ, ಮನೆಯ ಹಿತ್ತಲಿಗೆ ಮರಳಿದರು. ‘ಇನ್ನು ನಿನ್ ಕಥೆ ಅಷ್ಟೇ’ ಎನ್ನುವ ಧಾಟಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆ ಯುವ ರಾಜಕಾರಣಿಯ ಕಡೆಗೆ ಹತಾಶ ನೋಟವನ್ನು ಚೆಲ್ಲಿದರು. ತಮ್ಮ ಉತ್ತರಾಧಿಕಾರಿಯಾಗಿ ಮುಂದೆ ರಾಜಕೀಯದ ಆಗಸದಲ್ಲಿ ಸೂರ್ಯನಂತೆ ಬೆಳಗಬೇಕಿದ್ದ ತಮ್ಮ ಕುಲಪುತ್ರ, ಶುರುವಿನಲ್ಲೇ ಹೀಗೆ ‘ಖಗ್ರಾಸ ಸೂರ್ಯಗ್ರಹಣ’ಕ್ಕೆ ಒಳಗಾಗು ವಂತಾಗಿದ್ದಕ್ಕೆ ಹಿರಿಯ ರಾಜಕಾರಣಿ ಕಾರಿನ ಕಿಟಕಿಗೆ ಹಣೆಹಣೆ ಚಚ್ಚಿಕೊಂಡರು. ‘ಬಂದ ದಾರಿಗೆ ಸುಂಕವಿಲ್ಲ’ ಎಂಬ ಮಾತಿನಂತೆ ಆ ಮೂವರೂ ಅಲ್ಲಿಂದ ಫೇರಿ ಕೀಳಬೇಕಾಗಿ ಬಂತು..!
ಹಿತ್ತಲಲ್ಲಿ ಶಿಷ್ಯರೊಡನೆ ಕೂತಿದ್ದ ಅವಧೂತರಲ್ಲಿ ಉಸಿರಾಟ ತೀವ್ರವಾಗಿತ್ತು, ಮನಸ್ಸಿನಲ್ಲಿ ಸಂಕ್ಷೋಭೆ ಗಿರಕಿ ಹೊಡೆಯುತ್ತಿತ್ತು. ಕಾರಣ, ಸರ್ಕಲ್ ಇನ್ಸ್‌ಪೆಕ್ಟರ್, ಹಿರಿಯ ರಾಜಕಾರಣಿ ಮತ್ತು ಅವರ ಮಗ ತಮ್ಮ ಭೇಟಿಗೆ ಬಂದಿದ್ದು ಅವಧೂತರಿಗೆ ಪಥ್ಯವಾಗಿರಲಿಲ್ಲ. ಇದನ್ನು ಕಣ್ಣಲ್ಲೇ ಅಳೆದ ಶಿಷ್ಯರು ಅವರೊಂದಿಗೆ ಮಾತಿಗಿಳಿಯುವ ಧೈರ್ಯವನ್ನೂ ತೋರಲಿಲ್ಲ. ಆದರೆ ಅವರಲ್ಲಿ ‘ಮನ-ಮಂಥನ’ ನಡೆಯುತ್ತಲೇ ಇತ್ತು- ‘ಮೊದಲ ಭೇಟಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಹಿರಿಯ ರಾಜಕಾರಣಿಯನ್ನು ಮನೆಯೊಳಗಷ್ಟೇ ಏನು ಹಿತ್ತಲಿನವರೆಗೂ ಬಿಟ್ಟುಕೊಂಡಿದ್ದರು ಅವಧೂತರು; ಆದರೆ ಈ ಸಲ ಅವರಿಗೆ ಮನೆಬಾಗಿಲೂ ತೆರೆಯಲಿಲ್ಲ. ಯುವ ರಾಜಕಾರಣಿಯನ್ನು ಕಂಡು ಅವಧೂತರು ಕೆರಳಿದ್ದಾರೆಂದರೆ, ಕಥೆಯ ಸಸ್ಪೆನ್ಸು ಮತ್ತು ಕ್ಲೈಮ್ಯಾಕ್ಸು ಎಂದು ಅವರಿಂದಲೇ ಬೆರಳು ಮಾಡಿ ತೋರಿಸಲ್ಪಟ್ಟ ಆತನೇ ಶಾರದೆಯ ಕಥನದಲ್ಲಿನ ಖಳನಾಯಕ ಎಂದಾಯಿತಲ್ಲಾ? ಹಾಗಿದ್ದರೆ ಮಠದ ಸ್ವಾಮೀಜಿ, ಸಂಸ್ಥೆಯ ಮ್ಯಾನೇಜರ್, ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಹಿರಿಯ ರಾಜಕಾರಣಿ ಹಾಗೆ ಅವಧೂತರ ಭೇಟಿಗೆ ಹಾತೊರೆದಿದ್ದೇಕೆ? ಅವರಲ್ಲಿ ಕೆಲವರು ತಪ್ಪಿತಸ್ಥರಂತೆ ಅವಧೂತರಲ್ಲಿ ಅಲವತ್ತುಕೊಂಡು ರೋಧಿಸಿದ್ದೇಕೆ? ಅಡುಗೆ ಭಟ್ಟ ‘ನಳಪಾಕ’ನ ಉದ್ಯೋಗಕ್ಕೆ ಸಂಚಕಾರ ಬಂದಿದ್ದೇಕೆ? ಶಾರದೆಯ ವಿಷಯದಲ್ಲಿ ಯುವ ರಾಜಕಾರಣಿ ತೋರಿದ ಅಸಭ್ಯ ವರ್ತನೆಯನ್ನೇ ಇವರೆಲ್ಲರೂ ತೋರಿದರೇ? ಆ ಕಾರಣಕ್ಕೇ ತಪ್ಪಿತಸ್ಥ ಭಾವನೆಯಲ್ಲಿ ಅವರೆಲ್ಲಾ ಪ್ರಲಾಪಿಸುವಂತಾಯಿತೇ? ಕಥೆಯ ಸಸ್ಪೆನ್ಸು ಮತ್ತು ಕ್ಲೈಮ್ಯಾಕ್ಸು ಬಿಚ್ಚಿಕೊಳ್ಳುವ ಘಟ್ಟ ಬಂದಿದ್ದರೂ ಈ ಗೊಂದಲಗಳು ಪರಿಹಾರವಾಗುತ್ತಿಲ್ಲವಲ್ಲಾ..?’ ಎಂಬೆಲ್ಲಾ ‘ಪ್ರಶ್ನಾಸಾಗರ’ದ ಮಂಥನದಲ್ಲಿ ಶಿಷ್ಯರು ವ್ಯಸ್ತರಾಗಿದ್ದರು...
“ತಪ್ಪೆಸಗಿದ್ದು ಆ ‘ಮರಿ ಪುಢಾರಿ’ ಮಾತ್ರವೇ ಅಲ್ಲ; ಸ್ವಾಮೀಜಿ, ಮ್ಯಾನೇಜರ್, ಅಡುಗೆಭಟ್ಟ ‘ನಳಪಾಕ’, ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಹಿರಿಯ ರಾಜಕಾರಣಿ ಹೀಗೆ ಎಲ್ಲರೂ ಸಾಕಷ್ಟು ಎಡವಿದ್ದಾರೆ ಕಣ್ರಯ್ಯಾ..." ಎಂಬ ಅವಧೂತರ ದನಿ ಕೇಳುತ್ತಿದ್ದಂತೆಯೇ ಶಿಷ್ಯರು ಕಲ್ಪನಾ ವಿಹಾರದಿಂದ ವಾಸ್ತವ ಪ್ರಪಂಚಕ್ಕೆ ಮರಳಿದರು. ತಮ್ಮ ಮಾತಿನಿಂದ ಶಿಷ್ಯರ ಹಣೆಗಳಲ್ಲಿ ಪ್ರಶ್ನಾರ್ಥಕ ಚಿಹ್ನೆಗಳು ಮೂಡಿದ್ದನ್ನು ಕಂಡ ಅವಧೂತರು ಮಾತನ್ನು ಮುಂದುವರಿಸುತ್ತಾ, “ಸನ್ಯಾಸಧರ್ಮವನ್ನು ಒಂದಿಷ್ಟು ಕಾಲ ತೊರೆದ ಸ್ವಾಮೀಜಿ, ಸ್ವಾರ್ಥಕ್ಕೆ ಸಿಲುಕಿ ಕೆಲಕಾಲ ಕರ್ತವ್ಯ ಪ್ರಜ್ಞೆ ಮರೆತ ಮ್ಯಾನೇಜರ್, ತನ್ನ ಕಸುಬಿಗೆ ಇದ್ದ ಇತಿಮಿತಿಯನ್ನು ಮರೆತು ಉದ್ಧಟತನ ಮೆರೆದ ಅಡುಗೆಭಟ್ಟ ‘ನಳಪಾಕ’, ಸರಕಾರವಿತ್ತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಸರ್ಕಲ್ ಇನ್ಸ್‌ಪೆಕ್ಟರ್, ಮಗನ ಕುಕೃತ್ಯದ ಅರಿವಿದ್ದೂ ಅವನಿಗೆ ಬಡಿದು ಬುದ್ಧಿ ಹೇಳದ ಹಿರಿಯ ರಾಜಕಾರಣಿ ಈ ಎಲ್ಲರೂ ಶಾರದೆಯ ಕಥನದಲ್ಲಿ ಖಳನಾಯಕರೇ. ಹೀಗಾಗಿ, ಆಕೆಯ ಪ್ರಕರಣವು ದೈವನಿರ್ಮಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತಿದ್ದಂತೆ, ಪೈಪೋಟಿಗೆ ಬಿದ್ದವರಂತೆ ಒಬ್ಬರಾದ ಮೇಲೊಬ್ಬರು ಸಾಕ್ಷ್ಯ ಹೇಳಲು ಬರಬೇಕಾಯಿತು. ಅದು ದೈವನಿಯಮ" ಎಂದು ಹೇಳಿ ಅರೆಕ್ಷಣ ನಿಲ್ಲಿಸಿದರು.
ಈ ಮಾತಿಗೆ ಅಪ್ರತಿಭರಾದ ಶಿಷ್ಯರೊಬ್ಬರು, “ಅಂದರೆ, ಮೊಳಕೆಯಲ್ಲೇ ಚಿವುಟಿ ಸರಿಮಾಡ ಬಹುದಾಗಿದ್ದ ಅಪಸವ್ಯವನ್ನು ಇವರೆಲ್ಲರೂ ಮುಂದುವರಿಸಿಕೊಂಡು ಬಂದರಾ ಗುರುಗಳೇ? ಸನ್ಯಾಸಧರ್ಮವನ್ನು ಪರಿಪಾಲಿಸಬೇಕಿದ್ದ ಮಠದ ಸ್ವಾಮೀಜಿಯೂ ಇದರಲ್ಲಿ ಸೇರಿಕೊಂಡು ಬಿಟ್ಟರಾ?" ಎಂದು ಏರುದನಿಯಲ್ಲಿ ಪ್ರಶ್ನಿಸಿದರು.
ಈ ಪ್ರಶ್ನೆಗೆ ಅವಧೂತರು ವಿಷಾದದ ದನಿಯಲ್ಲಿ, “ಸರ್ವಸಂಗ ಪರಿತ್ಯಾಗಿಯಾಗಿ ಇರಬೇಕಾಗಿದ್ದ ಆ ಮಹಾನುಭಾವ ತನ್ನ ಕಾವಿಯನ್ನು ಕೊಂಚ ಸಡಿಲಿಸಿದ್ದೇ ಅಪಸವ್ಯದ ಮುಂದುವರಿಕೆಗೆ ಮುನ್ನುಡಿ ಯಾಯಿತು" ಎಂದು ಹೇಳಿ, “ಛೇ... ಛೇ.." ಎಂದು ಲೊಚಗುಟ್ಟಿದರು. ಈ ಮಾತಿಗೆ ಶಿಷ್ಯರೊಬ್ಬರು ಸಂಕ್ಷೋಭೆಗೊಂಡು, “ಗುರುಗಳೇ, ಹೌದಾ...?" ಎನ್ನುತ್ತಾ ವ್ಯಗ್ರರಾದರು.
ಅವರ ತಲೆ ನೇವರಿಸಿದ ಅವಧೂತರು, “ಶಾಂತತೆಯನ್ನು ಕಾಯ್ದುಕೊಳ್ಳಿ. ಆ ‘ಧರ್ಮಸೂಕ್ಷ್ಮದ ಉಲ್ಲಂಘನೆ’ಯ ಕುರಿತು ವಿವರಿಸುವೆ" ಎಂದು ಸಮಾಧಾನಿಸಿದರು...
(ಮುಂದುವರಿಯುವುದು)