Vishweshwar Bhat Column: ಶ್ವಾನಗಳ ಆಘ್ರಾಣ ಪತ್ರಿಕೋದ್ಯಮ
ನಾಯಿಯ ಮೂಗಿನಲ್ಲಿರುವ ಕೋಟ್ಯಂತರ ಸೆನ್ಸರ್‌ಗಳು ವಾಸನೆಯನ್ನು ಕೇವಲ ಒಂದು ಸುಳಿವಾಗಿ ಪಡೆಯುವುದಿಲ್ಲ, ಬದಲಿಗೆ ಅದನ್ನು ಒಂದು ಡೇಟಾ ಆಗಿ ಪರಿವರ್ತಿಸುತ್ತವೆ. ಒಂದು ಮರದ ಬುಡದಲ್ಲಿ ಇರುವ ಮೂತ್ರದ ಹನಿ ಅಥವಾ ವಾಸನೆಯ ಕಣಗಳು ಆ ಪ್ರದೇಶದ ಇತರೆ ನಾಯಿಗಳ ಬಗ್ಗೆ ಸಂಪೂರ್ಣ ಬಯೋ-ಡೇಟಾ ನೀಡುತ್ತವೆ.
-
ಸಂಪಾದಕರ ಸದ್ಯಶೋಧನೆ
ಮನುಷ್ಯನಿಗೆ ಜಗತ್ತು ಕಾಣುವುದು ಕಣ್ಣಿನ ಮೂಲಕ. ಆದರೆ ನಾಯಿಗೆ ಜಗತ್ತು ತೆರೆದುಕೊಳ್ಳುವುದು ಅದರ ಮೂಗಿನ ಮೂಲಕ. ನಾವು ರಸ್ತೆಯಲ್ಲಿ ಹೋಗುವಾಗ ಕಣ್ಣಿಗೆ ಕಾಣುವ ಬೋರ್ಡ್ʼಗಳನ್ನು, ಮನುಷ್ಯರನ್ನು ನೋಡಿ ಮಾಹಿತಿ ಪಡೆಯುತ್ತೇವೆ. ಆದರೆ ನಮ್ಮ ಜತೆಗಿರುವ ನಾಯಿ ಪ್ರತಿ ಮರ, ಕಂಬ ಅಥವಾ ಗೋಡೆಯ ಮೂಲೆಯನ್ನು ಮೂಸುವಾಗ ಅದು ಅಲ್ಲಿನ ‘ಸ್ಥಳೀಯ ದಿನಪತ್ರಿಕೆ’ ಯನ್ನು ಅತ್ಯಂತ ಆಸ್ಥೆಯಿಂದ ಓದಿದಂತೆ. ನಮಗೆ ಅದು ಕೇವಲ ಒಂದು ಮರದ ಬುಡ, ಆದರೆ ನಾಯಿಗೆ ಅದು ಇಡೀ ಲೊಕಾಲಿಟಿಯ ‘ಬ್ರೇಕಿಂಗ್ ನ್ಯೂಸ್’ ನೀಡುವ ಮಾಹಿತಿ ಕೇಂದ್ರ!
ನಾಯಿಯ ಮೂಗಿನಲ್ಲಿರುವ ಕೋಟ್ಯಂತರ ಸೆನ್ಸರ್‌ಗಳು ವಾಸನೆಯನ್ನು ಕೇವಲ ಒಂದು ಸುಳಿವಾಗಿ ಪಡೆಯುವುದಿಲ್ಲ, ಬದಲಿಗೆ ಅದನ್ನು ಒಂದು ಡೇಟಾ ಆಗಿ ಪರಿವರ್ತಿಸುತ್ತವೆ. ಒಂದು ಮರದ ಬುಡದಲ್ಲಿ ಇರುವ ಮೂತ್ರದ ಹನಿ ಅಥವಾ ವಾಸನೆಯ ಕಣಗಳು ಆ ಪ್ರದೇಶದ ಇತರೆ ನಾಯಿಗಳ ಬಗ್ಗೆ ಸಂಪೂರ್ಣ ಬಯೋ-ಡೇಟಾ ನೀಡುತ್ತವೆ.
ಆ ನಾಯಿ ಗಂಡೋ ಅಥವಾ ಹೆಣ್ಣೋ, ಅದರ ವಯಸ್ಸೇನು, ಅದು ಆರೋಗ್ಯವಾಗಿದೆಯೇ ಅಥವಾ ಯಾವುದಾದರೂ ಅನಾರೋಗ್ಯದಿಂದ ಬಳಲುತ್ತಿದೆಯೇ, ಅದು ಈ ಜಾಗಕ್ಕೆ ಬಂದಾಗ ಖುಷಿ ಯಾಗಿತ್ತೇ ಅಥವಾ ಭಯಗೊಂಡಿತ್ತೇ ಮುಂತಾದ ಮಾಹಿತಿ ಅದಕ್ಕೆ ಲಭ್ಯವಾಗುತ್ತವೆ.
ಇದನ್ನೂ ಓದಿ:Vishweshwar Bhat Column: ತಾಯಿ ಜತೆ ತಾಲೀಮು ಸಲ್ಲ
ಇದು ನಮಗೆ ಬೆಳಗಿನ ಪತ್ರಿಕೆಯಲ್ಲಿ ‘ನಿನ್ನೆ ಏನಾಯಿತು’ ಎಂದು ಓದಿದಷ್ಟೇ ಸ್ಪಷ್ಟವಾಗಿರುತ್ತದೆ. ನಾಯಿಗೆ ಆ ವಾಸನೆಯ ತೀವ್ರತೆಯಿಂದ ‘ಸಮಯ’ ಕೂಡ ತಿಳಿಯುತ್ತದೆ. ವಾಸನೆ ಹಳೆಯದಾಗಿದ್ದರೆ ಅದು ಆ ಸುದ್ದಿಯನ್ನು ‘ಹಳೆಯ ವರದಿ’ ಎಂದು ಭಾವಿಸುತ್ತದೆ.
ವಾಸನೆ ಹಸಿಬಿಸಿಯಾಗಿದ್ದರೆ, ‘ಇನ್ನೊಂದು ನಾಯಿ ಈ ಮಾರ್ಗದ ಈಗಷ್ಟೇ ಹೋಗಿದೆ’ ಎಂಬ ಲೈವ್ ಅಪ್ಡೇಟ್ ಅದಕ್ಕೆ ಸಿಗುತ್ತದೆ. ಅಂದರೆ, ಆ ಮರದ ಬುಡವು ಒಂದು ‘ಸಾರ್ವಜನಿಕ ನೋಟಿಸ್ ಬೋರ್ಡ್’ ಇದ್ದಂತೆ. ಅಲ್ಲಿಗೆ ಬರುವ ಪ್ರತಿಯೊಂದು ನಾಯಿಯೂ ತನ್ನದೇ ಆದ ಸಹಿಯನ್ನು ಅಲ್ಲಿ ಬಿಟ್ಟು ಹೋಗುತ್ತದೆ ಮತ್ತು ಇತರರ ಸಹಿಯನ್ನು ಪರಿಶೀಲಿಸುತ್ತದೆ.
ಇಂದಿನ ಕಾಲದಲ್ಲಿ ನಾವು ಫೇಸ್ಬುಕ್ ಅಥವಾ ಎಕ್ಸ್ (ಟ್ವಿಟ್ಟರ್) ನಲ್ಲಿ ‘ಸ್ಟೇಟಸ್ ಅಪ್ಡೇಟ್’ ನೋಡು ವಂತೆ, ನಾಯಿಗಳು ಈ ಮರಗಳನ್ನು ಮೂಸುತ್ತವೆ. ‘ನಾನು ಇಲ್ಲಿಗೆ ಬಂದಿದ್ದೆ, ನಾನು ಈ ಏರಿಯಾದ ಡಾನ್!’ ಎಂದು ಒಂದು ನಾಯಿ ತನ್ನ ವಾಸನೆಯ ಮೂಲಕ ಸ್ಟೇಟಸ್ ಹಾಕಿದ್ದರೆ, ಅದನ್ನು ಓದಿದ ಮತ್ತೊಂದು ನಾಯಿ ಅದರ ಮೇಲೆ ತನ್ನ ವಾಸನೆಯನ್ನು ಬೆರೆಸಿ ‘ನಾನು ಕೂಡ ಇಲ್ಲಿಗೆ ಭೇಟಿ ನೀಡಿದ್ದೇನೆ’ ಎಂದು ಕಮೆಂಟ್ ಮಾಡಿದಂತಿರುತ್ತದೆ.
ಇದು ಅವುಗಳ ನಡುವಿನ ಅತ್ಯಂತ ಸಂಕೀರ್ಣವಾದ ರಾಸಾಯನಿಕ ಸಂವಹನ. ನಾಯಿಗಳ ಈ ಶಕ್ತಿಗೆ ಮುಖ್ಯ ಕಾರಣ ಅವುಗಳ ಬಾಯಿಯ ಮೇಲ್ಭಾಗದಲ್ಲಿರುವ ‘ವೊಮೆರೊನಾಸಲ್’ ಅಥವಾ ಜಾಕೋಬ್ಸನ್ ಅಂಗ. ಇದು ಗಾಳಿಯಲ್ಲಿರುವ ತೇವಾಂಶಭರಿತ ವಾಸನೆಯ ಅಣುಗಳನ್ನು ಹೀರಿ, ಸಾಮಾನ್ಯ ವಾಸನೆಗಿಂತ ಭಿನ್ನವಾದ ಮಾಹಿತಿಯನ್ನು ಮಿದುಳಿಗೆ ರವಾನಿಸುತ್ತದೆ.
ಮನುಷ್ಯರಿಗೆ ಕೇವಲ ಐದು ಇಂದ್ರಿಯಗಳಿದ್ದರೆ, ನಾಯಿಗಳಿಗೆ ಈ ಆಘ್ರಾಣಶಕ್ತಿಯೇ ಒಂದು ಆರನೇ ಇಂದ್ರಿಯವಾಗಿ ಕೆಲಸ ಮಾಡುತ್ತದೆ. ಹೆಚ್ಚಿನ ಜನರು ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋದಾಗ, ಅದು ಎಲ್ಲಾ ನಿಂತು ಮೂಸುತ್ತಿದ್ದರೆ ‘ಬಾ ಹೋಗೋಣ’ ಎಂದು ಎಳೆದುಕೊಂಡು ಹೋಗುತ್ತಾರೆ. ಆದರೆ ವಾಸ್ತವದಲ್ಲಿ, ಅದು ತನ್ನ ಜ್ಞಾನವನ್ನು ವೃದ್ಧಿಸಿಕೊಳ್ಳುವ ಮತ್ತು ಸುತ್ತಮುತ್ತ ಲಿನ ಪರಿಸರವನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿರುತ್ತದೆ. ಇದನ್ನು ತಡೆಯುವುದು ಎಂದರೆ ನಮಗೆ ಪತ್ರಿಕೆ ಓದದಂತೆ ತಡೆದ ಹಾಗೆ ಅಥವಾ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿದ ಹಾಗೆ! ಅವುಗಳಿಗೆ ಆ ‘ಸುದ್ದಿ’ ಓದಲು ಸ್ವಲ್ಪ ಸಮಯ ನೀಡುವುದು ಅವುಗಳ ಮಾನಸಿಕ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಹೀಗೆ, ನಾಯಿಗಳಿಗೆ ಪ್ರತಿಯೊಂದು ಮರದ ಬುಡವೂ ಒಂದು ಇತಿಹಾಸದ ಪುಟ. ಅವುಗಳ ಪಾಲಿಗೆ ಜಗತ್ತು ಕೇವಲ ಭೂಪಟವಲ್ಲ, ಅದು ವಾಸನೆಗಳ ವಿಭಿನ್ನ ಪದರಗಳಿಂದ ಕೂಡಿದ ಒಂದು ಮಹಾಗ್ರಂಥ. ಮುಂದಿನ ಬಾರಿ ನಿಮ್ಮ ನಾಯಿ ಯಾವುದಾದರೂ ಕಂಬದ ಬಳಿ ದೀರ್ಘಕಾಲ ನಿಂತರೆ, ಅದು ಇಡೀ ನಗರದ ‘ಎಡಿಟೋರಿಯಲ್’ ಪುಟವನ್ನು ಗಂಭೀರವಾಗಿ ವಿಶ್ಲೇಷಿಸುತ್ತಿದೆ ಎಂದು ಅರ್ಥ ಮಾಡಿಕೊಳ್ಳಬಹುದು.