Dr N Someshwara Column: ಪ್ರಾಚೀನ ರೋಮ್‌ನ ಮಿಲಿಟರಿ ಆಸ್ಪತ್ರೆಗಳು

ರೋಮನ್ನರ ವ್ಯವಸ್ಥಿತ ಆಡಳಿತಕ್ಕೆ ಅತ್ಯುತ್ತಮ ಉದಾಹರಣೆ ‘ವ್ಯಾಲೆಟುಡಿನೇರಿಯ’ಗಳ ರಚನೆ. ವ್ಯಾಲೆ ಟುಡಿನೇರಿಯ, ಪ್ರಾಚೀನ ಜಗತ್ತಿನ ಅಧಿಕೃತವಾಗಿ ದಾಖಲಾಗಿರುವ ಪ್ರಪ್ರಥಮ ಮಿಲಿಟರಿ ಆಸ್ಪತ್ರೆ ಯಾಗಿದೆ. ರೋಮನ್ನರ ಮಿಲಿಟರಿ ಆಸ್ಪತ್ರೆಗಳ ಪರಿಕಲ್ಪನೆಯು ಅದ್ಭುತವಾಗಿದೆ.

Dr N Someshwara 290125
Profile Ashok Nayak Jan 29, 2025 10:13 AM

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಜಗತ್ತಿನ ಮಹಾಸಾಮ್ರಾಜ್ಯಗಳಲ್ಲಿ ರೋಮನ್ ಸಾಮ್ರಾಜ್ಯವೂ ಒಂದು. ಇದು ಕ್ರಿ.ಪೂ.27ರಲ್ಲಿ ಆರಂಭವಾಗಿ ಕ್ರಿ.ಶ.395ರವರೆಗೆ ಮುಂದುವರಿಯಿತು. ರೋಮನ್ ಸಾಮ್ರಾಜ್ಯವು ತನ್ನ ವಾಸ್ತು ರಚನೆ ಗಳಿಂದ, ಅದ್ಭುತ ಎಂಜಿನಿಯರಿಂಗ್ ತಂತ್ರಜ್ಞಾನದಿಂದ ಹಾಗೂ ಆಡಳಿತದಿಂದ ವಿಶ್ವ ವಿಖ್ಯಾತ ವಾಗಿದೆ.

ರೋಮನ್ನರ ವ್ಯವಸ್ಥಿತ ಆಡಳಿತಕ್ಕೆ ಅತ್ಯುತ್ತಮ ಉದಾಹರಣೆ ‘ವ್ಯಾಲೆಟುಡಿನೇರಿಯ’ಗಳ ರಚನೆ. ವ್ಯಾಲೆಟುಡಿನೇರಿಯ, ಪ್ರಾಚೀನ ಜಗತ್ತಿನ ಅಧಿಕೃತವಾಗಿ ದಾಖಲಾಗಿರುವ ಪ್ರಪ್ರಥಮ ಮಿಲಿಟರಿ ಆಸ್ಪತ್ರೆಯಾಗಿದೆ. ರೋಮನ್ನರ ಮಿಲಿಟರಿ ಆಸ್ಪತ್ರೆಗಳ ಪರಿಕಲ್ಪನೆಯು ಅದ್ಭುತವಾಗಿದೆ.

ಒಂದು ಸಾಮ್ರಾಜ್ಯವು ಸರ್ವತೋಮುಖ ಅಭಿವೃದ್ಧಿಯನ್ನು ಕಾಣಬೇಕಾದರೆ ಆ ಸಾಮ್ರಾಜ್ಯದ ಸೈನ್ಯವು ಸರ್ವಸನ್ನದ್ಧವಾಗಿರಬೇಕು. ಸೈನಿಕರಲ್ಲಿ ತೃಪ್ತಿಯಿರಬೇಕು. ಅರಸನಲ್ಲಿ ನಂಬಿಕೆಯಿರಬೇಕು. ದೇಶಕ್ಕಾಗಿ ಆತ್ಮಾರ್ಪಣೆಯನ್ನು ಮಾಡಿಕೊಳ್ಳಲು ಹಿಂದೆಗೆಯದ ಕೆಚ್ಚೆದೆಯಿರಬೇಕು. ಅರಸನಾದ ವನು ತಾನು ಸೈನಿಕರ ಬಗ್ಗೆ ಅತೀವ ಕಾಳಜಿಯನ್ನು ಹೊಂದಿರುವುದಕ್ಕೆ ಪ್ರತ್ಯಕ್ಷ ಪುರಾವೆಗಳನ್ನು ಒದಗಿಸುತ್ತಿರಬೇಕು.

ಇದನ್ನೂ ಓದಿ: Dr N Someshwara Column: ಔಷಧವಲ್ಲ, ಇದು ಪ್ರತ್ಯೇಕ ವಿಷ !

ರೋಮನ್ ಅರಸರು ಇಂಥ ಸೈನ್ಯವನ್ನು ಕಟ್ಟಿದರು. ಹಾಗಾಗಿ ‘ಸೈನಿಕರ ಯೋಗಕ್ಷೇಮಕ್ಕಿಂತ ಹೆಚ್ಚಿನದು ಮತ್ತೊಂದಿಲ್ಲ’ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ‘ವ್ಯಾಲೆಟುಡಿನೇರಿಯ’ ಎಂಬ ಮಿಲಿಟರಿ ಆಸ್ಪತ್ರೆಗಳನ್ನು ಕಟ್ಟಿಸಿದರು. ಇದು ರೋಮನ್ ಅರಸರ ಬುದ್ಧಿವಂತಿಕೆಗೆ, ಮುತ್ಸದ್ದಿತನಕ್ಕೆ ಹಾಗೂ ಸೈನಿಕರ ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ ಅವರಿಗಿದ್ದ ಪ್ರಾಮಾಣಿಕತೆಗೆ ಸಾಕ್ಷಿಯಾಯಿತು.

ವ್ಯಾಲೆಟುಡಿನೇರಿಯಗಳು ರೋಮನ್ ಸೈನಿಕರಿಗೆ ಅಗತ್ಯವಿದ್ದ ಎಲ್ಲ ರೀತಿಯ ವೈದ್ಯಕೀಯ ಅನು ಕೂಲತೆಗಳನ್ನು ಮಾಡಿಕೊಡುವುದರ ಜತೆಯಲ್ಲಿ ಆಧುನಿಕ ಆಸ್ಪತ್ರೆಗಳು ಅಸ್ತಿತ್ವಕ್ಕೆ ಬರಲು ಭದ್ರ ವಾದ ಬುನಾದಿಯನ್ನು ಹಾಕಿದವು.

ಆರಂಭ: ಪ್ರಾಚೀನ ಜಗತ್ತಿನಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ ಗಾಯಗೊಳ್ಳುವ ಸೈನಿಕರಿಗಾಗಿ ಸುಸಜ್ಜಿತ ಆಸ್ಪತ್ರೆಗಳು ಇರುತ್ತಿರಲಿಲ್ಲ. ರಣರಂಗದಿಂದ ಸಾಕಷ್ಟು ದೂರದಲ್ಲಿ ಬಿಡಾರಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳು ನಿರ್ಮಾಣವಾಗುತ್ತಿದ್ದವು. ಇಲ್ಲಿ ಪ್ರಾಥಮಿಕ ಚಿಕಿತ್ಸೆಯ ಅನುಕೂಲತೆ ಗಳಿರುತ್ತಿದ್ದವು, ಅಷ್ಟೇ.

ಗಂಭೀರ ಸ್ವರೂಪದ ಶಸಚಿಕಿತ್ಸೆಗಳಾಗಲಿ ಅಥವಾ ಪುನರ್ವಸತಿಯ ಅನುಕೂಲತೆಗಳಾಗಲಿ ಇರುತ್ತಿರ ಲಿಲ್ಲ. ಗಾಯಗೊಂಡ ರೋಗಿಗಳಿಗೆ ಸಾವು ಬೇಗ ಬರುತ್ತಿರಲಿಲ್ಲ. ಅವರು ನರಳಿ ನರಳಿ ಸಾಯುವುದು ಅನಿವಾರ್ಯವಾಗುತ್ತಿತ್ತು.

ಕ್ರಿ.ಪೂ.1ನೆಯ ಶತಮಾನದ ವೇಳೆಗೆ ರೋಮನ್ನರ ಮಹತ್ವಾಕಾಂಕ್ಷೆಯು ತೀವ್ರವಾಗಿ ಬೆಳೆಯಿತು. ಚಕ್ರವರ್ತಿ ಗೈಸ್ ಜೂಲಿಯಸ್ ಸೀಸರ್ ಅಗಸ್ಟಸ್ ಸೈನ್ಯದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ. ಅತ್ಯಂತ ಸಮರ್ಥವಾದ, ಶಿಸ್ತುಬದ್ಧವಾದ ಹಾಗೂ ಯಾವ ಕ್ಷಣದಲ್ಲಾದರೂ ಯುದ್ಧ ಸನ್ನದ್ಧವಾದ ಸೈನ್ಯವನ್ನು ಕಟ್ಟಲು ತೀರ್ಮಾನವನ್ನು ತೆಗೆದುಕೊಂಡ. ಆ ದಿಶೆಯಲ್ಲಿ ಸೈನಿಕರ ನಂಬಿಕೆ ಹಾಗೂ ವಿಶ್ವಾಸವನ್ನು ಪಡೆಯಲು, ತಾತ್ಕಾಲಿಕ ಹಾಗೂ ಸಂಚಾರಿ ಆಸ್ಪತ್ರೆಗಳ ಬದಲು ‘ವ್ಯಾಲೆಟುಡಿ ನೇರಿಯ’ ಎಂಬ ಸ್ಥಿರ ಆಸ್ಪತ್ರೆಗಳನ್ನು ಕಟ್ಟಿಸಿದ.

ಗಾಯಾಳುಗಳು ಹಾಗೂ ಅಸ್ವಸ್ಥರು ಇಲ್ಲಿ ಅತ್ಯುತ್ತಮ ಆರೈಕೆಯನ್ನು ಪಡೆದು, ಸಾಕಷ್ಟು ವಿಶ್ರಾಂತಿ ಯನ್ನು ತೆಗೆದುಕೊಂಡು, ಯುದ್ಧ ಸನ್ನದ್ಧರಾಗಿ ಸೈನ್ಯದ ಕರೆಗಾಗಿ ಕಾಯುವ ಪುನಶ್ಚೇತನಾ ಕೇಂದ್ರ ಗಳಾಗಿ ಇವು ಅತ್ಯಲ್ಪ ಕಾಲದಲ್ಲಿ ಪ್ರಸಿದ್ಧವಾದವು.

ವ್ಯಾಲೆಟುಡಿನೇರಿಯ ಎಂಬುದು ಲ್ಯಾಟಿನ್ ಮೂಲದ ಶಬ್ದ. ‘ವೀಲೆಟುಡು’ ಎಂಬುದು ಕಾಂಡ ಶಬ್ದ. ‘ಆರೋಗ್ಯ’ ಅಥವಾ ‘ಸ್ವಾಸ್ಥ್ಯ’ ಎನ್ನುವುದು ಇದರ ಮೂಲ ಅರ್ಥ. ಆರಂಭದ ದಿನಗಳಲ್ಲಿ ಈ ಆಸ್ಪತ್ರೆಗಳು ರೋಮ್ ಸಾಮ್ರಾಜ್ಯದ ಕೋಟೆಗಳ ಒಳಗೆ ಇರುತ್ತಿದ್ದವು. ಹಾಗಾಗಿ ಯಾವುದೇ ಯುದ್ಧದ ಸಂದರ್ಭದಲ್ಲಿ ಗಾಯಾಳುಗಳನ್ನು ಎಲ್ಲಿ ಸಾಗಿಸಬೇಕು ಹಾಗೂ ಹೇಗೆ ಸಾಗಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗದರ್ಶನವು ಇರುತ್ತಿತ್ತು.

ರೋಮನ್ನರ ಯೋಜನೆ, ಪ್ರಮಾಣಬದ್ಧ ಸೇವೆ ಹಾಗೂ ಶಿಸ್ತಿಗೆ ವ್ಯಾಲೆಟುಡಿನೇರಿಯ ಮಾದರಿ ಯಾಗಿತ್ತು. ಹಾಗಾಗಿ ರೋಮ್ ಸಾಮ್ರಾಜ್ಯದಲ್ಲಿರುವ ಎಲ್ಲ ವ್ಯಾಲೆಟುಡಿನೇರಿಯಗಳು ಪೂರ್ವ ನಿರ್ಣೀತ ಕಟ್ಟುಪಾಡುಗಳಿಗೆ ಅನುಗುಣವಾಗಿ ನಿರ್ಮಾಣವಾಗಿದ್ದವು.

ವಾಸ್ತು ಮತ್ತು ವಿನ್ಯಾಸ: ವ್ಯಾಲೆಟುಡಿನೇರಿಯ ಸಾಮಾನ್ಯವಾಗಿ ದೀರ್ಘ ಚತುರಸ್ರ ಆಯತಾಕಾರ/ರೆಕ್ಟ್ಯಾಂಗಲ್ ಆಕಾರದಲ್ಲಿ ಇರುತ್ತಿದ್ದವು. ಕಟ್ಟಡದ ಮಧ್ಯದಲ್ಲಿ ಒಂದು ದೊಡ್ಡ ಅಂಗಳವಿರುತ್ತಿತ್ತು. ಉಳಿದ ಸಾಮಾನ್ಯ ರಚನೆಯನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.

ವಾರ್ಡುಗಳು: ಅತ್ಯಂತ ಹೊರಗೆ, ಆಸ್ಪತ್ರೆಯ ಗೋಡೆಗಳಿಗೆ ಅಂಟಿಕೊಂಡಂತೆ ರೋಗಿಗಳ ವಾರ್ಡು ಗಳು ಇರುತ್ತಿದ್ದವು. ಒಂದು ವಾರ್ಡಿನಲ್ಲಿ 4-6 ರೋಗಿಗಳು ಮಾತ್ರ ಇರಲು ಅವಕಾಶವಿತ್ತು. ಏಕೆಂದರೆ ರೋಗಿಗಳ ಸಂಖ್ಯೆ ಕಡಿಮೆ ಇದ್ದಷ್ಟು, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯು ಕಡಿಮೆ ಇರುತ್ತಿತ್ತು.

ಶಸ್ತ್ರಚಿಕಿತ್ಸಾಲಯ: ಆಪರೇಷನ್ ಥಿಯೇಟರ್ ಪ್ರತ್ಯೇಕವಾಗಿ ಇರುತ್ತಿತ್ತು. ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯ ಉಪಕರಣಗಳು ಅಲ್ಲಿ ಇರುತ್ತಿದ್ದವು.

ಉಗ್ರಾಣಗಳು: ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲು ಬೇಕಾದ ಎಲ್ಲ ವಸ್ತುಗಳ ಮೂಲಿಕೆ, ಬ್ಯಾಂ ಡೇಜು, ಶಸ್ತ್ರಚಿಕಿತ್ಸಾ ಉಪಕರಣ ಇತ್ಯಾದಿಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇರುತ್ತಿದ್ದ ವು.

ಅಡುಗೆ ಮನೆ ಮತ್ತು ಶೌಚಾಲಯ: ಆಸ್ಪತ್ರೆಗೆ ಇವೆರಡೂ ಮುಖ್ಯ. ರೋಗಿಗಳಿಗೆ ಅಗತ್ಯವಾದ ಪೌಷ್ಟಿಕ ಆಹಾರವನ್ನು ನೀಡಲು ಪ್ರತ್ಯೇಕ ಅಡುಗೆ ಮನೆ ಇರುತ್ತಿತ್ತು. ರೋಗಿಗಳು ಹಾಗೂ ಆಸ್ಪತ್ರೆ ಯ ಸಿಬ್ಬಂದಿಗೆ ಪ್ರತ್ಯೇಕವಾದ ಶೌಚಾಲಯಗಳು ಇರುತ್ತಿದ್ದವು. ಒಬ್ಬ ರೋಗಿಯು ಶೀಘ್ರವಾಗಿ ಗುಣ ಮುಖನಾಗಬೇಕಾದರೆ ಅವನಿಗೆ ಪೌಷ್ಟಿಕ ಆಹಾರವು ಬೇಕು ಹಾಗೂ ಸ್ವಚ್ಛ ಪರಿಸರವಿರಬೇಕು ಎನ್ನುವ ತತ್ತ್ವವನ್ನು ಅವರು ತಿಳಿದಿದ್ದರು ಎನ್ನಬಹುದು.

ನೀರಿನ ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ: ನೀರಿನ ಪೂರೈಕೆ ಹಾಗೂ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸಂಬಂಧಪಟ್ಟ ಹಾಗೆ ಅತ್ಯುತ್ತಮ ಎಂಜಿನಿಯರಿಂಗ್ ವ್ಯವಸ್ಥೆಯನ್ನು ರೂಪಿಸಿದ್ದರು. ಅಡುಗೆ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಪದಾರ್ಥಗಳಿಂದ ಹಿಡಿದು, ಇಡೀ ಆಸ್ಪತ್ರೆಯಲ್ಲಿ ಉತ್ಪಾದನೆಯಾಗುತ್ತಿದ್ದ ಎಲ್ಲ ತ್ಯಾಜ್ಯ ಪದಾರ್ಥಗಳ ಸುರಕ್ಷಿತ ವಿಲೇವಾರಿಗಾಗಿ ಒಳಚರಂಡಿ ವ್ಯವಸ್ಥೆಯು ಇರುತ್ತಿತ್ತು. ಇದರಿಂದ ಸೋಂಕು ಹರಡುವ ಸಾಧ್ಯತೆಯು ಕನಿಷ್ಠ ಪ್ರಮಾಣಕ್ಕೆ ಇಳಿದಿತ್ತು.

ರೋಮನ್ ಅರಸರು ಸೈನಿಕರ ಆರೋಗ್ಯಕ್ಕೆ ಕಟ್ಟಿಸಿದ ವ್ಯಾಲೆಟುಡಿನೇರಿಯ ಎಷ್ಟು ಕ್ರಮಬದ್ಧವಾದ ವಿನ್ಯಾಸವನ್ನು ಒಳಗೊಂಡಿತ್ತು ಹಾಗೂ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯು ಎಷ್ಟು ಕನಿಷ್ಠ ಪ್ರಮಾಣಕ್ಕೆ ಇಳಿದಿತ್ತು ಎನ್ನುವ ವಿಚಾರವು, ಸೈನ್ಯದ ಬಗ್ಗೆ ರೋಮನ್ ಆಳರಸರ ಕಾಳಜಿ ಎಷ್ಟು ಉನ್ನತವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.

ವೈದ್ಯ ಮತ್ತು ವೈದ್ಯಕೀಯ: ವ್ಯಾಲೆಟುಡಿನೇರಿಯದಲ್ಲಿದ್ದ ವೈದ್ಯರು ನಡೆಸುತ್ತಿದ್ದ ಚಿಕಿತ್ಸಾ ಪರಿ ಕಲ್ಪನೆಯನ್ನು ಮೂರು ರೀತಿಯಲ್ಲಿ ವರ್ಗೀಕರಿಸಬಹುದಾಗಿತ್ತು. ಮೊದಲನೆಯದಾಗಿ ಸಾಂಪ್ರ ದಾಯಿಕ ಗ್ರೀಕ್ ಚಿಕಿತ್ಸಾ ವ್ಯವಸ್ಥೆಯ ಅನುಕರಣೆ. ಹಿಪ್ಪೋಕ್ರೇಟ್ಸ್ ಮತ್ತು ಗ್ಯಾಲನ್ ಅವರ ಬೋಧನೆ ಹಾಗೂ ಚಿಕಿತ್ಸಾ ಸ್ವರೂಪವನ್ನು ಯಥಾವತ್ ಬಳಸುತ್ತಿದ್ದರು (ಬಹುಶಃ ಇದು ಯುರೋಪಿನ ಮಧ್ಯ ಯುಗದವರೆಗೆ ಆಬಾಧಿತವಾಗಿ ಮುಂದುವರಿಯಿತು).

ಎರಡನೆಯದಾಗಿ, ಅನುಭವಜನ್ಯ (ಎಂಪೆರಿಕಲ್) ಕಾದುನೋಡುವ ತಂತ್ರವನ್ನು ಅನುಸರಿಸು ತ್ತಿದ್ದರು. ಕೆಲವು ಪ್ರಕರಣಗಳಲ್ಲಿ ರೋಗಪ್ರಗತಿಯು ಯಾವ ಪ್ರಮಾಣದಲ್ಲಿ ಮುಂದುವರಿಯುತ್ತಿದೆ ಎನ್ನುವುದನ್ನು ಗಮನಿಸಿ ಚಿಕಿತ್ಸಾ ಸ್ವರೂಪವನ್ನು ನಿರ್ಣಯಿಸುತ್ತಿದ್ದರು.

ಮೂರನೆಯದು ಪ್ರಾಯೋಗಿಕ ಅಥವಾ ಕಾರ್ಯೋಪಯೋಗಿ ವಿಧಾನ (ಪ್ರಾಕ್ಟಿಕಲ್). ಇಲ್ಲಿ ಆರೋಗ್ಯದ ಬಗ್ಗೆ ಇರುವ ಸಿದ್ಧಾಂತಗಳ ಬಗ್ಗೆ ಹೆಚ್ಚು ತಲೆಯನ್ನು ಕೆಡಿಸಿಕೊಳ್ಳದೇ, ಕಾರ್ಯೋ ಪಯೋಗಿ ವಿಧಾನಗಳ ಮೂಲಕ ತಾರ್ಕಿಕ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು.

ಇನ್ನು, ಅಂದಿನ ಚಿಕಿತ್ಸಾ ಪದ್ಧತಿಯಲ್ಲಿ ಲಭ್ಯವಿದ್ದ ಮುಖ್ಯ ಅಂಗಗಳು ಹೀಗಿವೆ:

ವೈದ್ಯರು ಮತ್ತು ಸಿಬ್ಬಂದಿ: ವ್ಯಾಲೆಟುಡಿನೇರಿಯದಲ್ಲಿ ‘ಮೆಡಿಸಿ’ ಎಂಬ ಹೆಸರಿನ ವೈದ್ಯರು ಇರು ತ್ತಿದ್ದರು. ಇವರಿಗೆ ನೆರವನ್ನು ನೀಡಲು ‘ಕಪ್ಸಾರಿ’ಗಳಿದ್ದರು. ಗಾಯವನ್ನು ಸ್ವಚ್ಛಗೊಳಿಸಿ ಪಟ್ಟಿ ಯನ್ನು ಕಟ್ಟುವುದು ಇವರ ಮುಖ್ಯ ಕೆಲಸವಾಗಿತ್ತು. ‘ಇಮ್ಯೂನ್ಸ್’ ಎಂಬ ಯೋಧರು ಇರುತ್ತಿದ್ದರು. ಇವರು ಯುದ್ಧರಂಗಕ್ಕೆ ಹೋಗುತ್ತಿರಲಿಲ್ಲ. ಬದಲಿಗೆ ವೈದ್ಯಕೀಯದ ಮೂಲಭೂತ ತತ್ತ್ವಗಳನ್ನು ಕಲಿತುಕೊಂಡು ಚಿಕಿತ್ಸೆಯಲ್ಲಿ ನೆರವಾಗುತ್ತಿದ್ದರು.

ವೈದ್ಯಕೀಯ ಸೇವೆಗಳು ಗಾಯಗಳ ಆರೈಕೆ: ಯುದ್ಧವೆಂದರೆ ಗಾಯಗಳಾಗುವುದು ಸಾಮಾನ್ಯ. ಗಾಯಗಳಲ್ಲಿ ಹಲವು ವಿಧಗಳಿವೆ. ತರಚುಗಾಯ, ಸೀಳುಗಾಯ, ಚುಚ್ಚುಗಾಯ, ಮೂಳೆ ಮುರಿಯು ವುದು, ಕೀಲು ತಪ್ಪುವುದು ಇತ್ಯಾದಿ. ವೈದ್ಯರು ಇವುಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದರು. ವಿನಿಗರ್ ಮತ್ತು ಶುದ್ಧ ಜೇನುತುಪ್ಪವನ್ನು ಕ್ರಿಮಿನಾಶಕ ದ್ರಾವಣವನ್ನಾಗಿ ಉಪಯೋಗಿಸುತ್ತಿದ್ದರು.

ಶಸ್ತ್ರವೈದ್ಯ: ಪ್ರಧಾನವಾಗಿ ಮೂರು ರೀತಿಯ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು. ಮೊದಲನೆ ಯದು ಅಂಗಛೇದನ. ಗುಣಪಡಿಸಲು ಸಾಧ್ಯವಿಲ್ಲದ ಅಂಗವನ್ನು ಛೇದಿಸುವುದರಿಂದ ಸೈನಿಕ ಜೀವ ವನ್ನು ಉಳಿಸಬಹುದು ಎನ್ನುವುದು ಅವರಿಗೆ ತಿಳಿದಿತ್ತು. ದೇಹದ ವಿವಿಧ ಅಂಗಗಳಲ್ಲಿ ಚುಚ್ಚಿ ಕೊಂಡಿರಬಹುದಾದ ಬಾಣದ ತುದಿಯಂಥ ಲೋಹಚೂರುಗಳನ್ನು ಸುರಕ್ಷಿತವಾಗಿ ಹೊರತೆಗೆದು ರಕ್ತಸ್ರಾವವನ್ನು ನಿಲ್ಲಿಸುತ್ತಿದ್ದರು. ಮೂರನೆಯದು ಕಪಾಲ ರಂಧ್ರನ (ಟ್ರಿಪನೇಶನ್). ತಲೆಗೆ ಪೆಟ್ಟು ಬಿದ್ದು, ಒಳಗಡೆ ರಕ್ತವು ಹೆಪ್ಪುಗಟ್ಟಿಕೊಂಡಿದ್ದಾಗ, ಕಪಾಲ ರಂಧ್ರವನ್ನು ಕೊರೆದು, ಒಳಗೆ ಒತ್ತಡ ದಲ್ಲಿರುವ ರಕ್ತವನ್ನು ಹೊರಹರಿಯಬಿಡುತ್ತಿದ್ದರು.

ನಾರುಬೇರಿನ ಚಿಕಿತ್ಸೆ: ರೋಮನ್ನರು ನಾನಾ ಮೂಲಿಕೆಗಳನ್ನು ಹಾಗೂ ಬೇರುಗಳನ್ನು ತಮ್ಮ ಚಿಕಿತ್ಸೆಯಲ್ಲಿ ಬಳಸುತ್ತಿದ್ದರು. ಅವುಗಳಲ್ಲಿ ಬೆಳ್ಳುಳ್ಳಿ, ವಿಲ್ಲೋ ಬಾರ್ಕ್ ಮತ್ತು ಅಫೀಮು ಮುಖ್ಯ ವಾಗಿದ್ದವು.

ನಮಗೆಲ್ಲ ತಿಳಿದಿರುವ ಹಾಗೆ ವಿಲ್ಲೋಬಾರ್ಕ್ ಜ್ವರವನ್ನು ಇಳಿಸುವ ಆಸ್ಪಿರಿನ್ ಅನ್ನು ಒಳಗೊಂಡ ತೊಗಟೆ. ಮುಂದೆ ಈ ತೊಗಟೆಯಿಂದಲೆ ಆಸ್ಪಿರಿನ್ ಔಷಧವನ್ನು ರೂಪಿಸಿದೆವು. ಆ ಆಸ್ಪಿರಿನ್ ಅನ್ನು ಇಂದಿಗೂ ಚಿಕಿತ್ಸೆಯಲ್ಲಿ ಬಳಸುತ್ತಿದ್ದೇವೆ. ಅಫೀಮನ್ನು ಪ್ರಧಾನವಾಗಿ ನೋವು ನಿವಾರಕ ಔಷಧವಾಗಿ ಬಳಸುತ್ತಿದ್ದರು.

ಪುನರ್ವಸತಿ (ರಿಹ್ಯಾಬಿಲಿಟೇಶನ್): ಒಂದು ರೋಗದಿಂದ ಗುಣಮುಖನಾದ ಸೈನಿಕನು ತಕ್ಷಣ ಯುದ್ಧರಂಗಕ್ಕೆ ಮರಳಬೇಕಾಗಿರಲಿಲ್ಲ. ಅವನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಪೂರ್ಣ ಚೇತರಿಸಿಕೊಂಡ ಮೇಲೆಯೇ ಮರಳಿ ಯುದ್ಧಕ್ಕೆ ತೆರಳಬೇಕಾಗಿತ್ತು.

ಸ್ವಚ್ಛತೆ: ರೋಮನ್ ವ್ಯಾಲೆಟುಡಿನೇರಿಯದಲ್ಲಿ ಸ್ವಚ್ಛತೆಗೆ ಆದ್ಯತೆಯಿತ್ತು. ಶುದ್ಧ ಕುಡಿಯುವ ನೀರು, ಉತ್ತಮ ಒಳಚರಂಡಿಯ ವ್ಯವಸ್ಥೆಯ ಜತೆಯಲ್ಲಿ ರೋಗಿಗಳಿಗೆ ನಿತ್ಯ ಸ್ನಾನ ಮಾಡಲು ಅನುಕೂಲತೆಗಳಿದ್ದವು. ವೈಯುಕ್ತಿಕ ಸ್ವಚ್ಛತೆಯನ್ನು ನಿತ್ಯ ಪಾರಿಪಾಲಿಸುತ್ತಿದ್ದ ರೋಗಿಗಳು ಬೇಗ ಗುಣಮುಖರಾಗುತ್ತಿದ್ದರು ಹಾಗೂ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯು ತುಂಬಾ ಕಡಿಮೆಯಾಗುತ್ತಿತ್ತು.

ಪರಿಸರ: ರೋಮ್‌ನಲ್ಲಿ ಮಾರ್ಕಸ್ ಟೆರೆನ್ಷಿಯಸ್ ವಾರೊ ಎಂಬ ವಿದ್ವಾಂಸನು ಚಕ್ರವರ್ತಿ ಅಗಸ್ಟಸ್‌ನ ಆಸ್ಥಾನದಲ್ಲಿದ್ದ. ಈತನು ನಮ್ಮ ಬರಿಗಣ್ಣಿಗೆ ಕಾಣದ ರೋಗಜನಕಗಳು ಇರುತ್ತವೆ ಎಂದು ನಂಬಿದ್ದ. ಸೂಕ್ಷ್ಮಜೀವಿಗಳ ಅಸ್ತಿತ್ವದ ಬಗ್ಗೆ ಬಲವಾಗಿ ಪ್ರತಿಪಾದಿಸುತ್ತಿದ್ದ ಇವನು, ಜೌಗುಪ್ರದೇಶದ ಗಾಳಿಯಲ್ಲಿ ಇವು ವ್ಯಾಪಾಕವಾಗಿರುತ್ತವೆ ಎಂದ. ಇಂಥ ಪ್ರದೇಶಗಳಲ್ಲಿ ಜನವಸತಿ ಇರಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ. ಏಕೆಂದರೆ ಇವು ಜೌಗುಪ್ರದೇಶದ ಗಾಳಿಯಲ್ಲಿ ಬೆರೆತು, ಆ ಪ್ರದೇಶದಲ್ಲಿ ವಾಸ ಮಾಡುವ ಜನರಲ್ಲಿ ನಾನಾ ಕಾಯಿಲೆಗಳನ್ನುಉಂಟುಮಾಡುತ್ತವೆ ಎಂದ.

ಜತೆಯಲ್ಲಿ ನೀರಿನಲ್ಲಿ ಸೊಳ್ಳೆಗಳು ವರ್ಧಿಸುತ್ತವೆ ಎನ್ನುವುದು ಅವನಿಗೆ ತಿಳಿದಿತ್ತು. ಅವುಗಳ ಕಡಿತ ದಿಂದ ಪಾರಾಗಲು ವ್ಯಾಲೆಟುಡಿನೇರಿಯಗಳನ್ನು ನೀರಿನ ತಾಣಗಳಿಂದ ದೂರ ನಿರ್ಮಿಸಲು ಹೇಳುತ್ತಿದ್ದ. ಸಾಮಾನ್ಯವಾಗಿ ಅರಣ್ಯದಿಂದ ಆವೃತವಾಗಿದ್ದ ಬೆಟ್ಟ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ವ್ಯಾಲೆಟುಡಿನೇರಿಯಗಳನ್ನು ಕಟ್ಟುತ್ತಿದ್ದರು.

ಪರಿಣಾಮ: ರೋಮನ್ನರ ವ್ಯಾಲೆಟುಡಿನೇರಿಯಗಳು ರೋಮನ್ ಸೈನ್ಯದ ಮೇಲೆ ಅಪಾರ ಪರಿಣಾಮವನ್ನು ಬೀರಿದವು. ಸೈನಿಕರು ಉತ್ಸಾಹದಿಂದ ಯುದ್ಧಗಳಲ್ಲಿ ಪಾಲುಗೊಳ್ಳುತ್ತಿದ್ದರು. ಯುವಕರು ಸೈನ್ಯವನ್ನು ಸೇರಲು ಮುಂದೆ ಬರುತ್ತಿದ್ದರು. ರೋಮ್ ಅರಸರು ತಮ್ಮ ಸಾಮ್ರಾಜ್ಯ ವನ್ನು ವಿಸ್ತರಿಸಿದರು. ಸೈನ್ಯದಲ್ಲಿ ಅಸ್ತಿತ್ವದಲ್ಲಿದ್ದ ಆಸ್ಪತ್ರೆಗಳು ಸಾರ್ವಜನಿಕ ಕ್ಷೇತ್ರವನ್ನೂ ಪ್ರವೇಶಿಸಿ ದವು.

‘ಸಾರ್ವಜನಿಕ ನೈರ್ಮಲ್ಯ’ ಎನ್ನುವ ಪರಿಕಲ್ಪನೆಯನ್ನು ಜನರು ಸ್ವಾಗತಿಸಿದರು. ರೋಮ್ ಸಾಮ್ರಾಜ್ಯದ ಅವನತಿಯ ಜತೆಯಲ್ಲಿ ವ್ಯಾಲೆಟುಡಿನೇರಿಯಗಳ ನಿರ್ಮಾಣವೂ ಕಡಿಮೆಯಾದವು. ಆದರೆ ವ್ಯಾಲೆಟುಡಿನೇರಿಯಗಳ ಪರಿಕಲ್ಪನೆಯು ಕ್ರೈಸ್ತ ಮತ್ತು ಸ್ಲಾಮ್ ದೇಶಗಳಲ್ಲಿ ಆಧುನಿಕ ಆಸ್ಪತ್ರೆಗಳ ನಿರ್ಮಾಣಕ್ಕೆ ಸ್ಪೂರ್ತಿಯನ್ನು ನೀಡಿದವು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?