ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಹೆಚ್ಚುತ್ತಿರುವ ತಾರತಮ್ಯದ ಬಗ್ಗೆ ಹೋರಾಡೋಣ

ಜಗತ್ತಿನ ಜನಸಂಖ್ಯೆಯ ಒಂದು ಪ್ರತಿಶತ ಜನರು, ಜಗತ್ತಿನ ಸಂಪತ್ತಿನ ೫೦ ಪ್ರತಿಶತ ಭಾಗದ ಮೇಲೆ ಅಧಿಕಾರ ಹೊಂದಿದ್ದಾರೆ. ಅದೇ ಸಮಯದಲ್ಲಿ ಜಗತ್ತಿನ ೫೦ ಪ್ರತಿಶತ ಜನರು, ಜಗತ್ತಿನ 0.75 ಪ್ರತಿಶತ ಸಂಪತ್ತಿನ ಮೇಲೆ ಹಿಡಿತ ಹೊಂದಿದ್ದಾರೆ ಎನ್ನುವುದು ಜಗತ್ತಿನಲ್ಲಿರುವ ಹಣಕಾಸು ತಾರತಮ್ಯವನ್ನು ತೋರಿಸುತ್ತದೆ.

ಹೆಚ್ಚುತ್ತಿರುವ ತಾರತಮ್ಯದ ಬಗ್ಗೆ ಹೋರಾಡೋಣ

-

ವಿಶ್ವರಂಗ

ಈ ಬದುಕು, ಪ್ರಪಂಚ ಎಂದಿಗೂ ಸಮವಾಗಿಲ್ಲ, ಅದು ಮುಂದೆಂದಿಗೂ ಸಮವಾಗುವುದೂ ಇಲ್ಲ. ಇದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತೇವೋ ಅಷ್ಟು ನಮಗೆ ಒಳ್ಳೆಯದು. ಇದನ್ನೇ ಇಂಗ್ಲಿಷ್‌ನಲ್ಲಿ The World/Life was never fair and never will be. The sooner you will realize it, the better ಎಂದಿದ್ದಾರೆ.

ಒಂದಲ್ಲಾ ಒಂದು ಬಾರಿ ಈ ಮಾತನ್ನು ನಾವು ಕೇಳಿರುತ್ತೇವೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ನಾವು ಹೋಗುವುದಿಲ್ಲ. ನಮ್ಮದೇನಿದ್ದರೂ ಗೊಣಗಾಟ. ನಿಲ್ಲದ ನಿತ್ಯ ಗೊಣಗಾಟ. “ನನಗೆ ಯಾರೂ ಅವಕಾಶ ಕೊಡಲಿಲ್ಲ, ನನಗ್ಯಾರೂ ಸಹಾಯ ಮಾಡ ಲಿಲ್ಲ. ಈ ಜಗತ್ತಿನಲ್ಲಿ ಹೊಸಬರಿಗೆ ಜಾಗವಿಲ್ಲ"- ಹೀಗೆ ಗೊಣಗಾಟಗಳ ಪಟ್ಟಿ ಹನುಮಂತನ ಬಾಲದಂತೆ ಲಂಬವಾಗುತ್ತಲೇ ಹೋಗುತ್ತದೆ.

ಈ ಸಮಾಜ ಇರುವುದೇ ಹೀಗೆ, ಇಲ್ಲಿ ಯಾವುದೂ ಪುಕ್ಕಟೆ ಸಿಗುವುದಿಲ್ಲ. ಏನನ್ನಾದರೂ ಗಳಿಸಲು ನಾವು ಏನನ್ನಾದರೂ ಕಳೆದುಕೊಳ್ಳಲು ತಯಾರಿರಬೇಕು. ಇಲ್ಲಿ ಪುಕ್ಕಟೆ ಎನ್ನುವುದು ಕೇವಲ ಭ್ರಮೆ. ಇಷ್ಟಕ್ಕೂ ಯಾರಾದರೂ ನಮಗೇಕೆ ಸಹಾಯ ಮಾಡುತ್ತಾರೆ? ಅದಕ್ಕಿಂತ ಮುಂಚೆ ಅವರೇಕೆ ನಮಗೆ ಸಹಾಯ ಮಾಡಬೇಕು? ಬೇರೆಯವರು ನಮಗೆ ಸಹಾಯ ಮಾಡಲಿ ಎಂದು ಯೋಚಿಸುವುದೇ ತಪ್ಪು.

ಇದನ್ನೂ ಓದಿ: Rangaswamy Mookanahalli Column: ದುಡ್ಡಿಲ್ಲದೆ ಜಗವಿಲ್ಲ, ದುಡ್ಡಿದ್ದರೆ ಜಗವೆಲ್ಲ !

ಇಲ್ಲಿ ನಮ್ಮ ಸಾಮರ್ಥ್ಯದಿಂದ ನಮ್ಮ ಜಾಗವನ್ನು ನಾವು ಸೃಷ್ಟಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯತತ್ಪರರಾದಾಗ ಮನುಷ್ಯ ಸಹಾಯ, ದೈವ ಸಹಾಯ ಒದಗಿ ಬರುತ್ತದೆ. ಅಲ್ಲಿಯವರೆಗೆ ಕಾಯುವ ತಾಳ್ಮೆ ಇರಬೇಕು. ಈ ಮಾತುಗಳನ್ನು ಇನ್ನಷ್ಟು ಪುಷ್ಟಿ ಪಡಿಸುವ, ಸಂಪತ್ತಿಗೆ ಸಂಬಂಧಿಸಿದ ಒಂದಷ್ಟು ಅಂಶಗಳನ್ನು ಹಂಚಿಕೊಳ್ಳುವೆ. ಕೊನೆಗೆ ನಿರ್ಧಾರ ನಿಮಗೆ ಬಿಟ್ಟದ್ದು.

ಜಗತ್ತಿನ ಜನಸಂಖ್ಯೆಯ ಒಂದು ಪ್ರತಿಶತ ಜನರು, ಜಗತ್ತಿನ ಸಂಪತ್ತಿನ ೫೦ ಪ್ರತಿಶತ ಭಾಗದ ಮೇಲೆ ಅಧಿಕಾರ ಹೊಂದಿದ್ದಾರೆ. ಅದೇ ಸಮಯದಲ್ಲಿ ಜಗತ್ತಿನ ೫೦ ಪ್ರತಿಶತ ಜನರು, ಜಗತ್ತಿನ 0.75 ಪ್ರತಿಶತ ಸಂಪತ್ತಿನ ಮೇಲೆ ಹಿಡಿತ ಹೊಂದಿದ್ದಾರೆ ಎನ್ನುವುದು ಜಗತ್ತಿನಲ್ಲಿ ರುವ ಹಣಕಾಸು ತಾರತಮ್ಯವನ್ನು ತೋರಿಸುತ್ತದೆ.

ಜಗತ್ತಿನ ೮೦ ಬಿಲಿಯನೇರ್‌ಗಳು ಪ್ರಪಂಚದ ೫೦ ಪ್ರತಿಶತ ಜನರ ಬಳಿ ಇರುವ ಸಂಪತ್ತಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ನಮ್ಮ ಸಮಾಜದಲ್ಲಿನ ೧೦ ಜನ ಬಿಲಿಯನೇರ್‌ಗಳು ಆಫ್ರಿಕಾದ ಸಾಮಾನ್ಯ 200 ಮಿಲಿಯನ್ ಮಹಿಳೆಯರ ಬಳಿ ಇರುವ ಸಂಪತ್ತನ್ನು ಹೊಂದಿ ದ್ದಾರೆ.

Screenshot_7 R

ಜಗತ್ತಿನಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗು ತ್ತಿದೆ. ಇವತ್ತು ನಾವು ಕಾಣುತ್ತಿರುವ ದೊಡ್ಡ ಮಟ್ಟದ ಕಂದರ ಸೃಷ್ಟಿಯಾಗಿದ್ದು ಕಳೆದ 25 ವರ್ಷಗಳಲ್ಲಿ ಎನ್ನುವುದನ್ನು ನಾವು ಗಮನಿಸಬೇಕು. ಜಗತ್ತಿನ ಅತಿ ಬಡ ದೇಶಗಳು ತಮ್ಮ ದೇಶದ ಆರೋಗ್ಯದ ಮೇಲೆ ವ್ಯಯಿಸುವ ಹಣದ ನಾಲ್ಕು ಪಟ್ಟು ಹಣವನ್ನು ಬಡ್ಡಿಯ ರೂಪದಲ್ಲಿ ಶ್ರೀಮಂತ ದೇಶಗಳಿಗೆ ಕಟ್ಟುತ್ತಿವೆ. ಇತ್ತೀಚಿಗೆ ಸೃಷ್ಟಿಯಾಗಿರುವ ಹೊಸ ಜಾಗತಿಕ ಸಂಪತ್ತಿನ ಅಗ್ರಪಾಲನ್ನು ಕೂಡ ಈ ಸಾಹುಕಾರರು ತಮ್ಮ ಕಿಸೆಗೆ ಹಾಕಿಕೊಳ್ಳುತ್ತಿದ್ದಾರೆ.

ಈ ಸಾಹುಕಾರರು, ಸಾಮಾನ್ಯ ಮನುಷ್ಯ ಉತ್ಪಾದಿಸುವ ಕಾರ್ಬನ್‌ನ ಹತ್ತು ಲಕ್ಷ ಪಟ್ಟು ಹೆಚ್ಚು ಕಾರ್ಬನ್ ಉತ್ಪಾದಿಸುತ್ತಾರೆ. ತನ್ಮೂಲಕ ಜಾಗತಿಕ ವಾತಾವರಣ ಬದಲಾವಣೆಗೆ ಮುಖ್ಯ ಕಾರಣೀಕರ್ತರಾಗಿದ್ದಾರೆ. ಜಗತ್ತಿನ ಎಲ್ಲಾ ಬಿಲಿಯನೇರ್‌ಗಳು ಒಟ್ಟಾಗಿ ಪ್ರತಿದಿನ ಹತ್ತಿರತ್ತಿರ ೩ ಬಿಲಿಯನ್ ಡಾಲರ್ ಆದಾಯವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ.

ಆಹಾರ ಮತ್ತು ಎನರ್ಜಿ ಸಂಸ್ಥೆಗಳು, ಅಂದರೆ ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್ ಮತ್ತು ಇಲೆಕ್ಟ್ರಿಸಿಟಿ, ಗ್ಯಾಸ್ ಮತ್ತಿತರೆ ಎನರ್ಜಿ ಮಾರಾಟ ಮಾಡುವ ಸಂಸ್ಥೆಗಳು ಕೋವಿಡ್ ಸಾಂಕ್ರಾಮಿಕದ ನಂತರ, ಹಿಂದಿನ ಲೆಕ್ಕಾಚಾರದಲ್ಲಿ ಲಾಭವನ್ನು ದುಪ್ಪಟ್ಟು ಮಾಡಿ ಕೊಂಡಿವೆ. ಅದೇ ಸಮಯದಲ್ಲಿ ಜಗತ್ತಿನಾದ್ಯಂತ ಹತ್ತಿರತ್ತಿರ ೧ ಬಿಲಿಯನ್ ಜನರು ರಾತ್ರಿ ಹಸಿವಿನಿಂದ ಮಲಗುತ್ತಿದ್ದಾರೆ ಎನ್ನುವ ಅಂಕಿ-ಅಂಶ ಕೂಡ ನಮ್ಮ ಮುಂದಿದೆ. ಜಗತ್ತಿನ ಅತಿ ದೊಡ್ಡ ಸಾಹುಕಾರರು ೩ರಿಂದ ೪ ಪ್ರತಿಶತ ಮಾತ್ರ ತೆರಿಗೆಯನ್ನು ನೀಡುತ್ತಾರೆ.

ಅವರಿಗೆ ಹೆಚ್ಚು ತೆರಿಗೆ ನೀಡದೆ ಬರುವ ದಾರಿ ಗೊತ್ತಿದೆ. ಸರಕಾರಗಳು ಕೂಡ ಕೆಲಸ ಸೃಷ್ಟಿಸಿ ದರೆ ಸಾಕು ಎಂದು ಅವರಿಗೆ ಕನಿಷ್ಠ ೫ ವರ್ಷ ತೆರಿಗೆ ವಿನಾಯತಿ ನೀಡುತ್ತವೆ. ಅದೇ ಸಮಯದಲ್ಲಿ ಒಬ್ಬ ಸಾಮಾನ್ಯ ವ್ಯಾಪಾರಸ್ಥ ತನ್ನ ಆದಾಯದ 40 ಪ್ರತಿಶತ ಹಣವನ್ನು ತೆರಿಗೆಯ ರೂಪದಲ್ಲಿ ನೀಡುತ್ತಾನೆ. ಸಣ್ಣ ಪುಟ್ಟ ವ್ಯಾಪಾರಸ್ಥರು ದಿವಾಳಿಯಾದಾಗ ಬ್ಯಾಂಕುಗಳು ಮುಲಾಜಿಲ್ಲದೆ ಅವರ ಆಸ್ತಿಯನ್ನು ಮಟ್ಟುಗೋಲು ಹಾಕಿಕೊಳ್ಳುತ್ತವೆ.

ಸಾಹುಕಾರ ಡಿಫಾಲ್ಟರ್ ಆದಾಗ ಬ್ಯಾಂಕುಗಳು ಅವನೊಡನೆ ನೆಗೋಸಿಯೆಷನ್‌ಗೆ ಇಳಿಯುತ್ತವೆ. ಸಾಲದ ೬೦ ಅಥವಾ ೭೦ ಭಾಗ ನೀಡಿದರೆ ಉಳಿದ ೪೦ ಅಥವಾ ೩೦ ಭಾಗ ಡಿಸ್ಕೌಂಟ್ ಕೊಡುವುದಾಗಿ ಹೇಳುತ್ತವೆ.

ಇನ್ನು ಉಳ್ಳವರ ಮತ್ತು ಅಧಿಕಾರಸ್ಥರ ನಡವಳಿಕೆ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಗ್ರಂಥವಾಗುತ್ತದೆ. ಇಂದಿಗೂ ಮನುಷ್ಯರ ಕಳ್ಳಸಾಗಾಣಿಕೆ, ಬಲವಂತದಿಂದ ವೇಶ್ಯಾವೃತ್ತಿ ಮಾಡಿಸುವುದು, ಅಂಗಾಂಗ ಕಳ್ಳತನ ಮಾಡುವುದು, ಮಕ್ಕಳನ್ನು ಬೀದಿಯಲ್ಲಿ ಭಿಕ್ಷೆಗೆ ಬಿಡುವುದು- ಹೀಗೆಲ್ಲಾ ಇರುವ ಆಟಗಳು ಒಂದೆರಡಲ್ಲ, ಪಟ್ಟಿ ಬಹು ದೊಡ್ಡದು.

ಜಗತ್ತಿನಾದ್ಯಂತ ಇದು ಸೇಮ್. ಕ್ರಿಕೆಟ್ ಮತ್ತು ಫುಟ್ಬಾಲ್ ಆಟಗಾರರು ಒಂದು ವರ್ಷದಲ್ಲಿ ಗಳಿಸುವ ಹಣವನ್ನು ಸಾಮಾನ್ಯ ಮನುಷ್ಯ 500/600 ಕೆಲವೊಮ್ಮೆ ಸಾವಿರ ವರ್ಷವಾದರೂ ದುಡಿಯಲು ಸಾಧ್ಯವಿಲ್ಲ. ಇದೇ ಮಾತನ್ನು ನಾವು ಚಲನಚಿತ್ರ ನಟರ ಬಗ್ಗೆ ಕೂಡ ಹೇಳ ಬಹುದು. ಆದರೆ ವಿಪರ್ಯಾಸ ಗೊತ್ತೇ? ಕೆಲವೇ ಕೆಲವು ಜನರಿಗೆ ಮಾತ್ರ ಈ ಅದೃಷ್ಟವಿದೆ.

ಕೋಟ್ಯಂತರ ಸಂಭಾವನೆ ಪಡೆಯುವ ಹೀರೋನ ಜತೆಯಲ್ಲಿ ಪೋಷಕ ಪಾತ್ರ ಮಾಡುವ ವ್ಯಕ್ತಿಗೆ ನಿಜ ಜೀವನದಲ್ಲಿ ಉತ್ತಮ ಜೀವನ ನಡೆಸಲು ಬೇಕಾಗುವ ಹಣವೇ ಇರುವುದಿಲ್ಲ. ನೀವು ಯಾವುದೇ ಕಾರ್ಯಕ್ಷೇತ್ರವನ್ನು ಗಣನೆಗೆ ತೆಗೆದುಕೊಳ್ಳಿ ಇದು ಸತ್ಯ. ಸಂಪತ್ತು ಎನ್ನುವುದು ಕೆಲವೇ ಕೆಲವರ ಸೊತ್ತು. ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತ ಸಾಗುತ್ತಿದೆ.

ಹಿಂದೆ ಒಂದು ದಶಕದಲ್ಲಿ ಆಗುತ್ತಿದ್ದ ಬದಲಾವಣೆಗಳು ಇಂದು ವರ್ಷದಲ್ಲಿ ಹೆಚ್ಚೆಂದರೆ ಎರಡು ವರ್ಷದಲ್ಲಿ ಆಗುತ್ತಿವೆ. ತಂತ್ರಜ್ಞಾನ ಎನ್ನುವುದು ಇಂದು ಜಗತ್ತನ್ನು ಆವರಿಸಿ ಕೊಂಡುಬಿಟ್ಟಿದೆ. ಮುಂಬರುವ ವರ್ಷಗಳಲ್ಲಿ ಜಗತ್ತನ್ನು ಆಳುವುದು, ನಿಯಂತ್ರಣದಲ್ಲಿಡು ವುದು ತಂತಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ನಿಯಂತ್ರಣ ಹೊಂದಿದ ಜನ ಎನ್ನುವುದ ರಲ್ಲಿ ಯಾವ ಸಂಶಯವೂ ಇಲ್ಲ. ಈ ಮಾತುಗಳನ್ನು ಕಳೆದ ಐದಾರು ವರ್ಷದಲ್ಲಿ ನಾನು ಹತ್ತಾರು ಬಾರಿ ಉಚ್ಚರಿಸಿದ್ದೇನೆ, ಬರೆದಿದ್ದೇನೆ.

ಆದರೂ ಇದನ್ನು ಎಷ್ಟು ಬಾರಿ ಹೇಳಿದರೂ ಕಡಿಮೆ ಎನ್ನಿಸುತ್ತದೆ. ಏಕೆಂದರೆ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ಜನಸಾಮಾನ್ಯ ಅನುಭವಿಸುತ್ತಿದ್ದಾನೆ, ಆದರೆ ಅದರ ಫಲಿತಾಂಶ ಅಥವಾ ಔಟ್‌ಕಮ್ ಬಗ್ಗೆ ಆತನಿಗೆ ಅರಿವಿಲ್ಲ. ಇವೆಲ್ಲವೂ ಆತನನ್ನು ನಿಯಂತ್ರಿಸಲು ಹಣೆದಿರುವ ಬಲೆ ಎನ್ನುವುದು ಆತನಿಗೆ ಅರಿವಾಗುತ್ತಿಲ್ಲ.

ನೀವೇ ಗಮನಿಸಿ ನೋಡಿ- ಜಗತ್ತಿನ ಒಂದು ವರ್ಗದವರು ಬದುಕಿನ ಆಟವನ್ನು ವೇಗವಾಗಿ ತಮ್ಮಿಚ್ಛೆಯ ದಾರಿಯಲ್ಲಿ ಒಯ್ಯುತ್ತಿದ್ದಾರೆ. ಜನಸಾಮಾನ್ಯನಿಗೆ ಅದರ ಹಿಂದೆ ಹೋಗು ವುದು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಈ ಆಟದಲ್ಲಿ ಅಲ್ಪಸ್ವಲ್ಪ ತಿಳಿವಳಿಕೆ ಉಳ್ಳವರು ಕೂಡ ಹೇಗೋ ಬದುಕುತ್ತಾರೆ, ಉಳಿದವರ ಪಾಡೇನು? ಭಾರತದಂಥ ದೊಡ್ಡ ಮತ್ತು ಅತ್ಯಂತ ಸಂಕೀರ್ಣ ಸಮಾಜದಲ್ಲಿ ಯಾವುದೇ ಮಾತು ಹೇಳಿದರೂ ಅದು ಬೇರೆಯ ಅರ್ಥ ಮತ್ತು ರೂಪವನ್ನು ಪಡೆದುಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ.

ಒಮ್ಮತ, ಸಹಮತ ಎನ್ನುವುದು ಇಲ್ಲಿ ಸಾಧ್ಯವಿಲ್ಲದ ಮಾತು. ಇಂಥ ಸಮಯದ ಲಾಭ ವನ್ನು ಪಡೆದು ಒಂದು ವರ್ಗದವರು ವೇಗವಾಗಿ ಬಲಿಷ್ಠವಾಗಿದ್ದಾರೆ, ಆಗುತ್ತಿದ್ದಾರೆ. ಜನಸಾಮಾನ್ಯ ಮಾತ್ರ ಅವರು ಸೃಷ್ಟಿಸಿರುವ ಜಾತಿ-ಭಾಷೆ-ಧರ್ಮ ಎನ್ನುವ ಸರಪಳಿಯಲ್ಲಿ ಸುಖವಾಗಿ ಬಂದಿಯಾಗಿದ್ದಾನೆ.

ಒಂದು ವಿಷಯದಲ್ಲಿ ಎಲ್ಲರೂ ಒಂದೇ! ಅದೇನು ಗೊತ್ತೇ? ಈ ಜನಸಾಮಾನ್ಯ ಅಥವಾ ಮಧ್ಯಮವರ್ಗವಿಲ್ಲದೆ ಶ್ರೀಮಂತನಿಗೆ ಹೆಚ್ಚು ದಿನ ಉಳಿಗಾಲವಿಲ್ಲ, ಅದು ಅವನಿಗೆ ಗೊತ್ತಾಗುತ್ತಿಲ್ಲ, ಮಧ್ಯಮ ವರ್ಗವನ್ನು ಕೊಲ್ಲಲು ಬಯಸುತ್ತಿದ್ದಾನೆ. ಇನ್ನು ಮಧ್ಯಮ ವರ್ಗ ದವನಿಗೆ ತನಗೆ ಹೀಗಾಗುತ್ತಿದೆ, ಹೋರಾಟ ಮಾಡ ಬೇಕು, ಉಳಿಯಬೇಕು ಎನ್ನುವುದು ಕೂಡ ಗೊತ್ತಾ ಗುತ್ತಿಲ್ಲ. ಈ ನಿಟ್ಟಿನಲ್ಲಿ ಜಗತ್ತಿನ ಜನರೆಲ್ಲಾ ಸೇಮ್!

ಉಳ್ಳವರು ತಮ್ಮ ನಡುವಿನ ನೆಟ್‌ವರ್ಕ್‌ನ ತಮ್ಮ ಸಾಮ್ರಾಜ್ಯವನ್ನು ಉಳಿಸಿ ಬೆಳೆಸಿಕೊಳ್ಳು ತ್ತಿದ್ದಾರೆ. ಸಾವಿರಕ್ಕೋ ಲಕ್ಷಕ್ಕೋ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಶ್ರಮದಿಂದ, ಬುದ್ಧಿವಂತಿಕೆ ಯಿಂದ, ಚಿಟಿಕೆ ಅದೃಷ್ಟದಿಂದ ಕೂಡ ಮೇಲೇರಿದ ಉದಾಹರಣೆಗಳನ್ನು ಬಿಟ್ಟರೆ, ಎಡೆ ಅವರದೇ ಸಾಮ್ರಾಜ್ಯ. ಇಲ್ಲಿ ಯಾರೂ ಇಂಚು ಜಾಗ ಬಿಟ್ಟುಕೊಡುವುದಿಲ್ಲ.

ನಮ್ಮ ಜಾಗವನ್ನು ಸೃಷ್ಟಿಸಿಕೊಳ್ಳಲು ಕೂಡ ನೂರೆಂಟು ಅಡ್ಡಿ ಆತಂಕಗಳು. ಇಲ್ಲಿ ನಮ್ಮ ಜಾಗ ಸೃಷ್ಟಿಸಿಕೊಳ್ಳಲು ವಿಶೇಷ ಗುಣಗಳ ಅವಶ್ಯಕತೆಯಿದೆ. ಅದೇನೂ ಇಲ್ಲದ ಜನ ಸಾಮಾನ್ಯನ ಬದುಕುವ ಹಕ್ಕನ್ನು ಅವನಿಗೆ ಗೊತ್ತಿಲ್ಲದೇ ಕಸಿಯಲಾಗಿದೆ.

ಜಗತ್ತಿನ ಯಾವುದೇ ದೇಶವನ್ನು ತೆಗೆದುಕೊಳ್ಳಿ, ಅಲ್ಲಿಯೂ ಯಾವುದರಲ್ಲೂ ಸಮಾಜದಲ್ಲಿ ಸಹಮತವಿಲ್ಲ. ಯಾವುದೇ ವಿಷಯಕ್ಕೂ ೨೦/೨೫ ಪ್ರತಿಶತ ಒಪ್ಪಿಗೆ ಸಿಗುತ್ತಿಲ್ಲ. ಯುರೋ ಪಿನ ದೇಶಗಳಲ್ಲಿ ಇದು ಇನ್ನೂ ಹೆಚ್ಚು. ಜಗತ್ತು ಇಂದಿಗೆ ಛಿದ್ರವಾದ ಕನ್ನಡಿ. ಯಾವ ತುಂಡಿನಲ್ಲೂ, ಎಲ್ಲಾ ತುಂಡಿನಲ್ಲೂ ನಮ್ಮ ಮುಖ ಕಾಣುತ್ತದೆ; ಆದರೆ ಯಾವುದರಲ್ಲೂ ಇಲ್ಲದ ಖಾಲಿತನವೂ ಜತೆಯಾಗಿದೆ.

ಸಮಾಜದಲ್ಲಿ ಸ್ಥಿರತೆ, ಮನಸ್ಸಿನಲ್ಲಿ ಶಾಂತಿ ನೆಮ್ಮದಿಯಿದ್ದಾಗ ಬದುಕು ಸುಂದರ. ಆದರೆ ಇಂದಿಗೆ ಜಾಗತಿಕವಾಗಿ ಇದನ್ನು ಕದಡಲಾಗಿದೆ. ಜನಸಾಮಾನ್ಯನಿಂದ ನಾಳೆಯ ಬಗೆಗಿನ ಭರವಸೆಯನ್ನು ಕಸಿಯಲಾಗಿದೆ. ‘ಅಬ್ಬಾ, ಇಂದು ಬದುಕಿದೆ’ ಎನ್ನುವ ಮಟ್ಟಕ್ಕೆ ಜೀವನ ವನ್ನು ತರಲಾಗಿದೆ. ಇಂದಿಗೆ 14/16 ತಾಸು ದುಡಿಯದಿದ್ದರೆ ಬದುಕಲು ಸಾಧ್ಯವಿಲ್ಲ ಎನ್ನುವ ವ್ಯಕ್ತಿಯ ಬಳಿ ನಾಳೆಯ ಬಗ್ಗೆ ಚಿಂತೆ ಮಾಡುವಷ್ಟು ಸಮಯವೆಲ್ಲಿದೆ? ಈಗೇನು ಮಾಡುವುದು? ವಿಶ್ವ ವ್ಯವಸ್ಥೆ ಇಂದು ಇರುವುದು ಹೀಗೆ.

ಇದನ್ನು ಬದಲಿಸುವ ಶಕ್ತಿ ಬಹುಸಂಖ್ಯಾತರಾದ ಸಾಮಾನ್ಯರಲ್ಲಿ ಇಲ್ಲವೇ? ಸಂಪತ್ತಿನ ಮೇಲೆ ಅಧಿಕಾರವಿಲ್ಲ ಗೊತ್ತಿದೆ. ಆದರೆ ನಾವೆ ಒಗ್ಗಟ್ಟಾಗಿ ನಿಂತರೆ ವಿಶ್ವ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲವೇ? ಸಾಧ್ಯವಿದೆ. ಆದರೆ ಈ ಒಗ್ಗಟ್ಟು ಎನ್ನುವುದನ್ನು ಎಲ್ಲಿಂದ ಎರವಲು ತರೋಣ ನೀವೇ ಹೇಳಿ? ಜಗತ್ತಿನಲ್ಲಿ ಎಲ್ಲದಕ್ಕೂ ಹೊಡೆದಾಟ ಶುರು.

ನಾವು ಅದೆಷ್ಟು ಛಿದ್ರವಾಗಿದ್ದೇವೆ ಎಂದರೆ ನಮ್ಮ ದೇಹದ ಎರಡು ಕೈಗಳ ನಡುವೆ ಅಂದರೆ ಎಡಗೈ ಮತ್ತು ಬಲಗೈ ಜತೆಯಲ್ಲಿ ಕಿತ್ತಾಟ ನಡೆಸುವಷ್ಟು; ನಾವು ಬದಲಾಗುವುದಿಲ್ಲ, ಹೀಗಾಗಿ ಅವರ ಸಂಪತ್ತಿನ ಮೇಲಿನ ಹಿಡಿತ ಇಂಚೂ ಕರಗುವುದಿಲ್ಲ. ಸರಿ ನಾವು ಇರುವುದು ಹೀಗೆ, ಇಲ್ಲಿ ಎಲ್ಲರನ್ನೂ ಬದಲಿಸಲು ಸಾಧ್ಯವಿಲ್ಲ. ಆದರೆ ಸ್ವ ಪ್ರಯತ್ನದಿಂದ ನಾವು ಇತ್ತಕಡೆಯಿಂದ, ಅತ್ತಕಡೆಗೆ ಖಂಡಿತ ವಲಸೆ ಹೋಗಬಹುದು.

ಅದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಪರಿಸ್ಥಿತಿಯನ್ನು ಒಪ್ಪಿಕೊಂಡು, ಬದಲಾವಣೆಗೆ ಸಿದ್ಧವಾಗುವುದು, ಮಾತು ಗೊಣಗಾಟ ನಿಲ್ಲಿಸುವುದು. ಆಗ ಮಾತ್ರ ನಾವು ಒಂದಿಂಚು ಮುಂದೆ ಹೋಗಬಹುದು...