ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Hunj Column: ತನ್ನ ಮೂಲವನ್ನೇ ಅರಿಯದ ಜಾಮದಾರರು ವಚನಗಳನ್ನು ಅರಿಯಬಲ್ಲರೇ ?!

ಉತ್ತರ ಕರ್ನಾಟಕದ ಅಪ್ಪಟ ಗಂಡುಮೆಟ್ಟಿನ ನಾಡಿನಲ್ಲಿ ಹುಟ್ಟಿ ಬೆಳೆದು ಓದಿದ್ದರೂ, ಕೆಲವೇ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಓದಿದ ಕಾರಣವಾಗಿ ತಮ್ಮ ಗಂಡುಮೆಟ್ಟಿನ ನಾಡಿನ ಭಾಷಾ ಸೊಗಡನ್ನೇ ತ್ಯಜಿಸಿ ಓರ್ವ ವಿದೇಶಿಗನು ಕನ್ನಡ ಮಾತನಾಡಿದಂತೆ ಶ್ರೀಯುತರು ಮಾತ ನಾಡುತ್ತಾರೆ. ಹೀಗೆಂದು ಅವರ ಮಾತು ಕೇಳಿದ ಯಾವುದೇ ಕನ್ನಡಿಗನೂ ಹೇಳುತ್ತಾನೆ.

ತನ್ನ ಮೂಲವನ್ನೇ ಅರಿಯದ ಜಾಮದಾರರು ವಚನಗಳನ್ನು ಅರಿಯಬಲ್ಲರೇ ?!

-

Ashok Nayak
Ashok Nayak Nov 25, 2025 10:03 AM

ಎದುರೇಟು

ರವಿ ಹಂಜ್

ಶ್ರೀಯುತ ಜಾಮದಾರರು, ಕರ್ನಾಟಕ ರಾಜ್ಯ ಘನಸರಕಾರದ ಕಾರ್ಯದರ್ಶಿಯಾಗಿ ನಿವೃತ್ತ ರಾಗಿದ್ದಾರೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಜಾಮದಾರರು ಅಭಿಪ್ರಾಯ ಹೊಂದಿರದ ವಿಷಯವಿಲ್ಲ. ಅಲ್ಲಮನ ಬೆಡಗಿನ ವಚನಗಳಲ್ಲದೆ ವಿಶ್ವದ ಆಡಳಿತದ ಸೂಕ್ಷ್ಮಗಳನ್ನು ಅರಿತವರೂ ಆಗಿದ್ದಾರೆ.

ಇಂಥ ಮಹನೀಯರು, ನಿರಕ್ಷರ ಕುಕ್ಷಿಗಳೂ ಓದಿಸಿ ಅರ್ಥ ಮಾಡಿಕೊಳ್ಳಬಹುದಾದ ನನ್ನ ಸ್ಫಟಿಕ ಸದೃಶ ಲೇಖನಗಳನ್ನು ಗ್ರಹಿಸಲಾಗಿಲ್ಲವಲ್ಲ ಎನ್ನುವುದು ಒಂದು ಸೋಜಿಗ. ಮೇಲು ನೋಟಕ್ಕೆ ಕೆಲವರಿಗೆ ಇದು ಅವರು ಲೇಖನಗಳನ್ನು ತಮ್ಮ ಕಾರಕೂನರಿಂದ ಓದಿಸಿ ಈ ಅಭಿಪ್ರಾಯವನ್ನು ಬರೆಸಿರಬಹುದು ಎನಿಸಿದರೂ ಇದು ಖಂಡಿತವಾಗಿ ಅವರೇ ಓದಿ ಬರೆದಿರುವ ಅಭಿಪ್ರಾಯವಾಗಿದೆ ಎನಿಸುತ್ತದೆ. ಅಥವಾ ತಮ್ಮ ಹವ್ಯಾಸದಂತೆ ಲೇಖನ ಗಳನ್ನು ಇಂಗ್ಲಿಷಿನಲ್ಲಿ ಬರೆದು ಕಾರಕೂನರಿಂದ ಕನ್ನಡಕ್ಕೆ ತರ್ಜುಮೆ ಮಾಡಿಸಿರಬಹು ದಷ್ಟೇ.

ಇವರೇಕೆ ಹೀಗೆ?

ಉತ್ತರ ಕರ್ನಾಟಕದ ಅಪ್ಪಟ ಗಂಡುಮೆಟ್ಟಿನ ನಾಡಿನಲ್ಲಿ ಹುಟ್ಟಿ ಬೆಳೆದು ಓದಿದ್ದರೂ, ಕೆಲವೇ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಓದಿದ ಕಾರಣವಾಗಿ ತಮ್ಮ ಗಂಡುಮೆಟ್ಟಿನ ನಾಡಿನ ಭಾಷಾ ಸೊಗಡನ್ನೇ ತ್ಯಜಿಸಿ ಓರ್ವ ವಿದೇಶಿಗನು ಕನ್ನಡ ಮಾತನಾಡಿದಂತೆ ಶ್ರೀಯುತರು ಮಾತನಾಡುತ್ತಾರೆ. ಹೀಗೆಂದು ಅವರ ಮಾತು ಕೇಳಿದ ಯಾವುದೇ ಕನ್ನಡಿಗ ನೂ ಹೇಳುತ್ತಾನೆ.

ಇದನ್ನೂ ಓದಿ: Ravi Hunj Column: ಕಮ್ಯುನಿಸ್ಟ್‌ ಪ್ರೇರಿತ ಸಮಾಸನಪ್ರೀತ ವಿರಕ್ತರ ಮುಜುಗರ ಸಂಕೀರ್ಣತೆ..!

ಅನುಮಾನವಿದ್ದವರು ಅವರ ಮಾತುಗಳನ್ನು ಕೇಳಿ ನಿರ್ಧರಿಸಬಹುದು. ಓರ್ವ ವ್ಯಕ್ತಿ ವಿದೇಶದಲ್ಲಿ ಕೆಲವೇ ಕೆಲವು ವರ್ಷಗಳನ್ನು ಕಳೆದರೆ ಆತನ ಇಂಗ್ಲಿಷ್ ಉಚ್ಚಾರಣೆ ಬದಲಾಗಬಹುದೇ ಹೊರತು ಆತನ ಮಾತೃಭಾಷೆಯ ಉಚ್ಚಾರಣೆಯಲ್ಲ. ನಾನು ಕಳೆದ ಮೂವತ್ತು ವರ್ಷಗಳಿಂದ ಅಮೆರಿಕೆಯಲ್ಲಿದ್ದರೂ ನನ್ನ ಮಾತೃಭಾಷೆಯ ಉಚ್ಚಾರಣಾ ಶೈಲಿ ಬದಲಾಗಿಲ್ಲ. ನನ್ನಂಥ ಲಕ್ಷಾಂತರ ಭಾರತೀಯರ ಮಾತೃಭಾಷಾ ಉಚ್ಚಾರಣೆ ಸಹ ಬದಲಾಗಿಲ್ಲ!

ಇದು ಮಾನಸಿಕ ವಿಶ್ಲೇಷಣೆಗೆ ಪ್ರಮುಖವಾದ ಒಂದು ಅಂಶ. ಪ್ರಮುಖವಾಗಿ ಕರ್ನಾಟಕ ದಾದ್ಯಂತ ಅಲ್ಲಲ್ಲಿ ಓರ್ವ ಐಎಎಸ್ ಅಧಿಕಾರಿಯ ಕತೆಯನ್ನು ಕೇಳಿರುತ್ತೀರಿ. ಈ ಕತೆಯ ಪ್ರಕಾರ ಓರ್ವ ಜಿಲ್ಲಾಧಿಕಾರಿಯ ರೈತಾಪಿ ತಂದೆಯು ತನ್ನ ಮಗನಾದ ಜಿಲ್ಲಾಧಿಕಾರಿಯನ್ನು ನೋಡಲು ಮಗನ ಕಚೇರಿಗೆ ಹೋಗುತ್ತಾನೆ, ಮಾಸಲು ಬಟ್ಟೆ ಧರಿಸಿದ್ದ ತನ್ನ ತಂದೆಯನ್ನು ಜಿಲ್ಲಾಧಿಕಾರಿಯು ತನ್ನೊಂದಿಗಿದ್ದವರಿಗೆ, “ಇವನು ನಮ್ಮ ಮನೆಯ ನೌಕರ" ಎಂದು ಪರಿಚಯಿಸುತ್ತಾನೆನ್ನುವುದು ಈ ಕತೆಯ ಸಾರಾಂಶ.

ಈ ಕತೆಯ ಜಿಲ್ಲಾಧಿಕಾರಿ ಯಾರೆಂದು ಉತ್ತರ ಕರ್ನಾಟಕದಾದ್ಯಂತ ಹಲವಾರು ಜನರು ಶ್ರೀಯುತರ ಹೆಸರನ್ನೇ ಹೇಳುತ್ತಾರೆ. ಇದು ಇವರೇ ಆಗಿದ್ದರೋ ಅಥವಾ ಇವರ ದರ್ಪದ ಕಾರಣವಾಗಿ ಈ ಕತೆ ಸೃಷ್ಟಿಯಾಗಿದೆಯೋ ಗೊತ್ತಿಲ್ಲ. ಏಕೆಂದರೆ ಇವರ ಬಹುಪಾಲು ಸಂದರ್ಶನಗಳು, ಭಾಷಣಗಳು ಏಕಮುಖವಾಗಿರುತ್ತವೆ. ಅವು ಅಧಿಕಾರಾಯುತವಾಗಿ ತಾವು ಹೇಳಿದ್ದೇ ಕಾನೂನು, ಅದೇ ಅಂತಿಮ ಎಂಬ ಧಾರ್ಷ್ಟ್ಯದ ಶೈಲಿಯಲ್ಲಿರುತ್ತವೆ.

ಹಾಗಾಗಿ ಇದು ಮಾನಸಿಕ ವಿಶ್ಲೇಷಣೆಯ ಇನ್ನೊಂದು ಅಂಶ. ಇವರ ಅಧಿಕಾರಾವಧಿಯಲ್ಲಿ ಕೆಲ ಅಧಿಕಾರಿಗಳು ಯಾರಾದರೂ ಲಿಂಗಾಯತರಿದ್ದರೆ ಅವರನ್ನು ಎತ್ತಿ ದೂರದ ಊರಿಗೆ ವರ್ಗಾವಣೆ ಮಾಡುವುದು ಅಥವಾ ಅನವಶ್ಯಕವಾಗಿ ಸಸ್ಪೆಂಡ್ ಮಾಡುವುದು ಇವರ ಕುಖ್ಯಾತಿಯಾಗಿತ್ತು.

ತಾನು ಜಾತಿವಾದಿಯಲ್ಲ ಎಂದು ತೋರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದರು ಎಂದು ಸರಕಾರಿ ವಲಯದಲ್ಲಿ ಮಾತಿದೆ. ಇದಕ್ಕೆ ಪೂರಕವಾಗಿ ಶಾಮನೂರು ಶಿವಶಂಕರಪ್ಪನವರು ಹಿಂದೊಮ್ಮೆ, “ಅವನ್ಯಾವ ಜಾಮದಾರ? ಅವನಿಂದ ಯಾವ ಲಿಂಗಾಯತರಿಗೆ ಸಹಾಯ ವಾಗಿದೆ?" ಎಂದು ಪತ್ರಕರ್ತರೊಂದಿಗೆ ಮಾತನಾಡಿದ್ದನ್ನು ಸ್ಮರಿಸಬಹುದಾಗಿದೆ. ಇದು ಮಾನಸಿಕ ವಿಶ್ಲೇಷಣೆಯ ಮಗದೊಂದು ಅಂಶ.

ಒಟ್ಟಾರೆ ಇದೆಲ್ಲವೂ ಒಂದು ವಿಕ್ಷಿಪ್ತ ಮನಸ್ಥಿತಿಯನ್ನು ತೋರುತ್ತವೆ. ಈ ವಿಕ್ಷಿಪ್ತ ಮಾನಸಿಕ ಅಂಶಗಳಾಚೆ ಊಳಿಗಮಾನ್ಯ ಪ್ರಜಾಪ್ರಭುತ್ವದ ಉನ್ನತ ಅಧಿಕಾರವನ್ನು ಅನುಭವಿಸಿ ನಿವೃತ್ತರಾದವರೂ ‘ಪರಿತ್ಯಕ್ತ ಚುರುಕರಿವಿನ ಮುಜುಗರ ಸಂಕೀರ್ಣತೆ’ಗೊಳಗಾಗುತ್ತಾರೆ ಎಂದು ಜಾಮದಾರರ ಸದ್ಯದ ಪ್ರತಿಕ್ರಿಯೆಯಿಂದ ಸರಳವಾಗಿ ಕಂಡುಕೊಳ್ಳಬಹುದು.

ಇಂತಿಪ್ಪ ದರ್ಪದ ಅಧಿಕಾರ ನಿವೃತ್ತಿಯಿಂದ ಪರಿತ್ಯಕ್ತರಾಗಿ ಅಧಿಕಾರದಾಹದ ಬೇಗುದಿಯ ಬೇಗೆಯಲ್ಲಿ ಶ್ರೀಯುತರು ನರಳುತ್ತಿರುವುದು ಸುಸ್ಪಷ್ಟ. ಅವರು ವೀರಶೈವ ಬೇರೆ, ಲಿಂಗಾ ಯತ ಬೇರೆ ಎನ್ನುವ ಭಂಜಕ ಮುಖಂಡತ್ವ ವಹಿಸಿ ಮಂಡಿಸುತ್ತಿರುವ ಗೊಂದಲದ ಪುರಾವೆ ರಹಿತ ಸಿದ್ಧಾಂತಗಳೇ ಅವರ ಪರಿತ್ಯಕ್ತ ಸಂಕೀರ್ಣತೆಗೆ ಸಾಕ್ಷಿ ಒದಗಿಸುತ್ತವೆ.

ಜಗತ್ತು ಈಗಾಗಲೇ ಇದನ್ನು ಗಮನಿಸಿದೆ ಸಹ. ತಮ್ಮ ಪ್ರತಿಕ್ರಿಯೆಯಲ್ಲಿ ಅವರು ನನ್ನನ್ನು ಬಹುವಚನದಲ್ಲಿ, ಏಕವಚನದಲ್ಲಿ, ದುಷ್ಟ ಎಂದು ನಿಂದಿಸಿ ಸಂಬೋಧಿಸಿರುವುದು ಇದಕ್ಕೆ ಮತ್ತಷ್ಟು ಸಾಕ್ಷಿಯನ್ನೊದಗಿಸುತ್ತದೆ. ಹೀಗೆ ಗೊಂದಲಗೊಂಡ ಕಾರಣವೇ ಅವರನ್ನು ಮತ್ತವರ ಪ್ರತ್ಯೇಕ ಧರ್ಮ ಕೂಗಿ ಗರನ್ನು ಉದ್ದೇಶಿಸಿದ ನನ್ನ ಮೂಲ ಲೇಖನಗಳಲ್ಲಿಯೇ ಜಾಮದಾರರು ಎತ್ತಿರುವ ಪ್ರಶ್ನೆಗಳಿಗೆ ತಕ್ಕ ಸಾಕ್ಷೀಭೂತ ಉತ್ತರಗಳಿದ್ದರೂ ಅವರು ಗ್ರಹಿಸಿಲ್ಲ. ಅವರು ಗ್ರಹಿಸದ ಕಾರಣ ಮತ್ತೊಮ್ಮೆ ಅವೇ ವಿಷಯಗಳನ್ನು ಅವರ ಪ್ರಶ್ನೆಗಳಿ ಗನುಗುಣವಾಗಿ ಮತ್ತೊಮ್ಮೆ ಸಾಂದರ್ಭಿಕವಾಗಿ ಉಲ್ಲೇಖಿಸುತ್ತ ಅವರ ಮನಸ್ಥಿತಿಯನ್ನು ಓದುಗರ ವಿಶ್ಲೇಷಣೆಗೆ ಬಿಡುತ್ತೇನೆ.

* * *

ಶ್ರೀಯುತ ಜಾಮದಾರರು ನನ್ನ ಜಾತಿಯನ್ನು ಉಲ್ಲೇಖಿಸಿ ನನ್ನನ್ನು ಒಂದು ಗುಂಪಿಗೆ ಸೇರಿಸಿದ್ದಾರೆ. ಅಲ್ಲದೆ ನಾನು ‘ಬಸವಣ್ಣನವರ ಅನುಯಾಯಿ’ಗಳನ್ನು ನಿರಂತರವಾಗಿ ಮನಸ್ಸಿಗೆ ಬಂದಂತೆ ಹಿಗ್ಗಾಮುಗ್ಗಾ ನಿಂದಿಸುತ್ತೇನೆ. “ಪಂಚಾಚಾರ್ಯರ ‘ವೀರಶೈವ’ ವನ್ನು ಹೊಗಳಿ, ಅವರಿಗೆ ಇಲ್ಲದ ಇತಿಹಾಸವನ್ನು ಸೃಷ್ಟಿಸಿ, ಅವರ ಪುರಾಣಗಳನ್ನು ವೈಭವೀಕರಿಸಿ ಅವರ ತತ್ವಗಳನ್ನು ಬೋಧಿಸುವುದು" ನನ್ನ ಉದ್ದೇಶ ಎಂದಿದ್ದಾರೆ.

“ಶರಣರ ವಚನಗಳನ್ನೂ ಬಳಸಿ ಅಮಾಯಕ ಲಿಂಗಾಯತರನ್ನು ಗೊಂದಲಕ್ಕೆ ತಳ್ಳುತ್ತಿ ದ್ದೇನೆ" ಎಂದಿದ್ದಾರೆ. ಇದು ಸಹ ಅವರ ಕಳವಳ ಮನಸ್ಥಿತಿಯನ್ನೇ ಹೇಳುವ ಕಾರಣ ಅವರ ಬಗ್ಗೆ ನನಗೆ ಕನಿಕರವಿದೆ. ಏಕೆಂದರೆ ನನ್ನ ಲೇಖನಗಳನ್ನು ಅವರು ತಮ್ಮ ಧಾರ್ಷ್ಟ್ಯ ಮನಸ್ಥಿತಿಯ ಕಾರಣ ಸರಿಯಾಗಿ ಓದಿಯೇ ಇಲ್ಲ.

ಹಾಗಾಗಿ ಶ್ರೀಯುತ ಜಾಮದಾರರು ಅವರದೇ ಆದ ಲೇಖನ, ಭಾಷಣಗಳನ್ನು ಗಮನಿಸಿ, “ಹಿಗ್ಗಾಮುಗ್ಗಾ ನಿಂದಿಸುವುದು, ಹೊಗಳುವುದು, ಇಲ್ಲದ ಇತಿಹಾಸ ಸೃಷ್ಟಿಸುವುದು, ಇರುವ ಇತಿಹಾಸ ಮರೆಮಾಚುವುದು" ಯಾರೆಂದು ಅರಿತುಕೊಳ್ಳಬೇಕು. ಅವರು ನಾನು ಮಾಡು ತ್ತಿರುವೆನೆಂದು ಆರೋಪಿಸುತ್ತಿರುವುದೆಲ್ಲವೂ ಖುದ್ದು ಜಾಮದಾರರು ಮತ್ತವರ ಸಂಗಡಿ ಗರು ಮಾಡುತ್ತಿರುವರೇ ಹೊರತು ನಾನಲ್ಲ. ‘ತನ್ನಂತೆಯೇ ಪರರು’ ಎಂಬ ನೀತಿಯನ್ನು ಎಂದೂ ನಂಬದ ದರ್ಪದ ಅಧಿಕಾರಶಾಹಿ ಶ್ರೀಯುತರು ಆಪಾದಿಸುವಾಗ ಮಾತ್ರ ಸುಪ್ತ ವಾಗಿ ‘ತನ್ನಂತೆಯೇ ಪರರು’ ಎಂದು ನಂಬುತ್ತಾರೆ. ಇವರ ವಾದ ಹೇಗೆಂದರೆ, “ಹಮ್ ಕರೇ ತೋ ಪ್ಯಾರ್, ಆಪ್ ಕರೇ ತೋ ಬಲಾತ್ಕಾರ್" (ನಾವು ಮಾಡಿದರೆ ಪ್ರೇಮ, ನೀವು ಮಾಡಿದರೆ ಅತ್ಯಾಚಾರ) ಎಂಬ ಸೂತ್ರಕ್ಕೆ ಬದ್ಧರಾಗಿರುವುದು; ಇದು ಅವರ ನಡೆನುಡಿಯಲ್ಲಿ ಸ್ಫಟಿಕ ಸದೃಶವಾಗಿ ಕಾಣುತ್ತದೆ!

ಐತಿಹಾಸಿಕ ಆಕರ, ಪುರಾವೆ, ಶಿಲಾಶಾಸನಗಳ ಹಿನ್ನೆಲೆಯಲ್ಲಿ ಮತ್ತು ಗ್ರಾಂಥೈತಿಹಾಸಿಕ ತುಲನೆಯ ಮೂಲಕ ತಾರ್ಕಿಕ ವಿಶ್ಲೇಷಣೆ ಮತ್ತು ಸತ್ಯಶೋಧನೆಯ ಸಂಶೋಧನೆ ಮಾಡು ವುದು ನನ್ನ ಹವ್ಯಾಸ. ಇದನ್ನು ನಾನು ಕೇವಲ ‘ಬಸವ ಮಂಟಪ’ ಅಂಕಣದಲ್ಲಿ ಬರೆಯು ತ್ತಿರುವುದಲ್ಲ. ಈ ಅಂಕಣಕ್ಕೂ ಪೂರ್ವದಲ್ಲಿ ನಾನು ಬರೆದ ‘ಹುಯೆನ್ ತ್ಸಾಂಗನ ಮಹಾ ಪಯಣ’, ‘ಭಾರತ ಒಂದು ಮರುಶೋಧನೆ’, ‘ಬಸವರಾಜಕಾರಣ’ ಕೃತಿಗಳಲ್ಲಿ ಸಹ ಇದನ್ನು ಕಾಣಬಹುದಾಗಿದೆ.

ಇಂದಿನ ಇಪ್ಪತ್ತೊಂದನೇ ಶತಮಾನದ ಮಾಹಿತಿ ತಂತ್ರಜ್ಞಾನದ ವರ್ತಮಾನದಲ್ಲಿ ಅಖಂಡ ವೀರಶೈವ (ಲಿಂಗಾಯತ)ದ ಸುಸ್ಪಷ್ಟ ಇತಿಹಾಸವನ್ನು ಗಾಂಪ ರಾಜಕಾರಣಿಗಳು, ಸ್ವಾಮಿಗಳು, ಸ್ವಾಮಿನಿಯರು, ಸಂಶೋಧಕರು, ಜಾತಿಭ್ರಷ್ಟರು ತಿರುತಿರುಚಿ ನಗೆಪಾಟಲಿನ ವಿಷಯವಾಗಿಸಿದ್ದಾರೆ.

ಒಂದು ಗಂಭೀರ ಪರಂಪರೆಯನ್ನು ತಮ್ಮ ಮೂಗಿನ ನೇರಕ್ಕೆ ಸಮೀಕರಿಸಿ ಎಲ್ಲಾ ವಿಶ್ವ ಮಾನ್ಯ ಸಾಕ್ಷ್ಯವನ್ನು ಗೌಣವಾಗಿಸಿದ್ದಾರೆ. ಇದಕ್ಕೆ ಶ್ರೀಯುತ ಜಾಮದಾರರೂ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಹಾಗಾಗಿ ಅವರನ್ನೂ ಒಳಗೊಂಡು ನಗೆಪಾಟಲಿನ ಗಾಂಪ ಸಿದ್ಧಾಂತದ ಅನುಸೂಚಿಗೆ ತಕ್ಕಂತೆ ವಿಮರ್ಶಿಸಿ ಅವರ ಆಭಾಸಗಳು ಅದೆಷ್ಟು ನಗೆಪಾಟ ಲಿನವು ಎಂದು ನಗೆಪಾಟಲಿಗೆ ಈಡು ಮಾಡಿದ್ದೇನೆ.

ಯಾನೆ ವೀರಶೈವ ಶರಣ ಸಂಕುಲವು ಬಯಸುವ ವೀರಗಣಾಚಾರ ಸೂತ್ರದಂತೆ ನಿಷ್ಠುರ ವಾಗಿ ಖಂಡಿಸಿ ‘ಸತ್ಯಮೇವ ಜಯತೆ’ ಎಂಬ ಗಣರಾಜ್ಯ ಭಾರತದ ಉದ್ಘೋಷವನ್ನು ಎತ್ತಿ ಹಿಡಿದಿದ್ದೇನಷ್ಟೇ! ಹಾಗೆ ಎತ್ತಿ ಹಿಡಿಯಲು ವಿಶ್ವಮಾನ್ಯ ಭಾರತೀಯ ನ್ಯಾಯಶಾಲೆಯ ತಾರ್ಕಿಕ ಹಿನ್ನೆಲೆಯಲ್ಲಿ ಇರುವ ಎಲ್ಲಾ ಆಧಾರಗಳನ್ನು ವೃತ್ತಿಪರ ಅಂತರ್ಶಿಸ್ತಿನಿಂದ What-if ಎಂದು ವಿಶ್ಲೇಷಿಸಿ ಈ ಸತ್ಯವನ್ನು ಕಟ್ಟಿಕೊಟ್ಟಿದ್ದೇನೆ.

ಕುದುರೆಯ ಕಣ್ತಡೆ ಪಟ್ಟಿಗಳಿಲ್ಲದ ಸಮಗ್ರ ನೋಟವನ್ನು ಕಟ್ಟಿಕೊಡುವ ಸ್ಥಿತಪ್ರಜ್ಞ, ನಿಷ್ಪಕ್ಷ ಪಾತ ತಾರ್ಕಿಕತೆಯ ಖಚಿತತೆಯನ್ನು ಕೊಡುವ ವಿಶ್ಲೇಷಣೆಯನ್ನು ಸಮಾಜದ ಮುಂದಿಟ್ಟು ಸಮಾಜವೇ ನಿರ್ಧರಿಸುವಂತೆ ಮಾಡುವುದು ನನ್ನ ಗುರಿಯೇ ಹೊರತು ಯಾವುದೋ ಒಂದು ನಿಗದಿತ ವೈಯಕ್ತಿಕ ಉದ್ದೇಶವನ್ನು ಸಾಧಿಸುವುದಲ್ಲ.

ಹಾಗಾಗಿ ಅನಾದಿ ಕಾಲದಿಂದಲೂ ಭಾರತದ ಇತಿಹಾಸದಷ್ಟೇ ಪ್ರಾಚೀನವೂ ಆದ ಸಕಲ ಅಖಂಡ ವೀರಶೈವ (ಲಿಂಗಾಯತ) ಪರವಾಗಿ, ಆದ್ಯ ವಚನಕಾರರ ಗೌರವಾರ್ಥವಾಗಿ ಮತ್ತು ಶರಣ ಸಂಕುಲದ ಗಣಾಚಾರ ಪ್ರತಿನಿಧಿಯಾಗಿ ನಾನು ಕಂಡುಕೊಂಡ ಸತ್ಯವನ್ನು ಸಮಾಜದ ಮುಂದಿಟ್ಟಿದ್ದೇನಷ್ಟೇ.

ಇನ್ನು ನನ್ನ ಲೇಖನದ ಪ್ರತಿಯೊಂದು ವಾಕ್ಯವೂ ಸಾಕ್ಷ್ಯ ಪುರಾವೆಗಳ ಆಧಾರದಲ್ಲಿವೆಯೇ ಹೊರತು ಯಾವುದೇ ಭಾವನಾತ್ಮಕ, ಉತ್ಪ್ರೇಕ್ಷೆ, ಉದ್ವೇಗಗಳ ವಾಲುವಿಕೆಯಿಂದಲ್ಲ. ನನ್ನದು ಎನ್ನುವ ಯಾವ ಗುಂಪೂ ನನಗಿಲ್ಲ. ಅಂಥ ಗುಂಪು, ಬೆಂಬಲ, ಪ್ರಶಸ್ತಿ, ನಗದು ಇಂಥದ್ದು ಏನಾದರೂ ಇದೆ ಎನಿಸಿದರೆ ದಯಮಾಡಿ ಕೊಡಿಸಬೇಕಾಗಿ ಜಾಮದಾರರಲ್ಲದೆ ಅವರದೇ ಅಭಿಪ್ರಾಯ ಹೊಂದಿದ ಸಕಲರಲ್ಲೂ ಓರ್ವ ಬಡ ಅನಿವಾಸಿಯಾಗಿ ಕೇಳಿ ಕೊಳ್ಳುತ್ತೇನೆ.

ಅಲ್ಲಿಯವರೆಗೆ ನನ್ನದು ಏಕಾಂಗಿ ಹೋರಾಟವಷ್ಟೇ. ಇನ್ನು ಶ್ರೀಯುತರು ಆಪಾದಿಸಿರುವ ಒಂದೊಂದೇ ಅಂಶಗಳಿಗೆ ನನ್ನದೇ ಲೇಖನಗಳ ಭಾಗದಿಂದ ಆಯ್ದು ಉತ್ತರಿಸೋಣ. ಇಲ್ಲಿ ‘ಉತ್ತರಿಸೋಣ’ ಎಂದೇಕೆ ಹೇಳುತ್ತೇನೆಂದರೆ, ಈ ಅಂಕಣದ ಓದುಗರೆಲ್ಲರೂ ಈ ಅಂಶ ಗಳನ್ನು ಈಗಾಗಲೇ ಬಲ್ಲವರೇ ಆಗಿದ್ದೀರಿ ಎಂದಷ್ಟೇ.

೧. ಜಾಮದಾರರು “.... ‘ಬಸವ ಸಂಸ್ಕೃತಿ ಅಭಿಯಾನ’ವನ್ನು ‘ವಿಕೃತಿ ಅಭಿಯಾನ’ವೆಂದು ಹಂಜಗಿಮಠ ಟೀಕಿಸಿದ್ದು, ಅದರಲ್ಲಿ ಭಾಗವಹಿಸಿದ ನಾಲ್ಕುನೂರು ವಿರಕ್ತ ಮಠಗಳ ಸ್ವಾಮಿಗಳನ್ನು ಮನಸಿಗೆ ಬಂದಂತೆ ಬೈದದ್ದು ಅವರ ಮುಖವಾಡವನ್ನು ಕಳಚಿಸಿದೆ" ಎಂದಿದ್ದಾರೆ.

ಇದು ಅವರ ಮನಸ್ಸಿನ ಭಾವನೆಯೇ ಹೊರತು ನನ್ನದಲ್ಲ. ನನ್ನ ಆರೋಪಕ್ಕೆ ಅದೇ ಲೇಖನದಲ್ಲಿ ತಮಿಳುನಾಡಿನ ಸತ್ಯಕ್ಕ ಎಂಬುವವರ ಆಡಿಯೋವನ್ನು, ಮತ್ತು ಸತ್ಯಕ್ಕ ಆರೋಪಿಸಿದ ಯಾವುದೇ ಒಕ್ಕೂಟಿಯು ಆಕೆಯ ಮೇಲೆ ದಾವೆ ಹೂಡದ ವಿಚಾರವನ್ನು ಸಾಕ್ಷ್ಯವಾಗಿ ಉಲ್ಲೇಖಿಸಿದ್ದೇನೆ.

ಇನ್ನು ಇವರ ಆಪ್ತ ಧನ್ನೂರ ಎನ್ನುವವರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಪತ್ರಿಕಾ ಸುದ್ದಿಯಾದ್ದದನ್ನೂ ಉಖಿಸಿದ್ದೇನೆ. ಮಾನ್ಯ ಜಾಮದಾರರಿಗೆ ತಮ್ಮ ಒಕ್ಕೂಟಿಗಳು ಅಪರಂಜಿ ಚಿನ್ನ ಎನಿಸಿದರೆ ಖುದ್ದು ತಾವೇ ಮಾದರಿಯಾಗಿ ತಮ್ಮ ಒಕ್ಕೂಟಿಗಳೊಂದಿಗೆ ವೈಜ್ಞಾನಿಕ ಮಂಪರು ಪರೀಕ್ಷೆ, ದೈಹಿಕ ಪರೀಕ್ಷೆಗಳಿಗೊಪ್ಪಿಸಿದರೆ ನಾನು ಹೇಳಿದ ಸಂಖ್ಯೆ ಗಿಂತ ಅಧಿಕ ಸಂಖ್ಯೆಯಲ್ಲಿ ಸಲಿಂಗಿ, ದ್ವಿಲಿಂಗಿ, ಎಚ್‌ಐವಿ+ ವಿಸ್ಮೃತಿಗಳು ಇವರ ಗುಂಪಿ ನಲ್ಲಿ ಹೊಮ್ಮುತ್ತಾರೆ.

ಅಲ್ಲದೇ ತಮ್ಮ ಪಾಪವನ್ನು ಕಳೆದುಕೊಳ್ಳಲು ಪ್ರಯಾಗರಾಜ ಕುಂಭಮೇಳಕ್ಕೆ ಇವರ ಒಕ್ಕೂಟದ ಮುನ್ನೂರಕ್ಕೂ ಅಧಿಕ ವಿರಕ್ತಿಗಳು ಹೋಗಿ ಬಂದಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದ ಮಧ್ಯದಲ್ಲಿಯೇ ಎದ್ದು ಹೋಗಿ ತಮ್ಮ ತಮ್ಮ ವಾಹನಗಳನ್ನು ತೊಳೆದು ಶೃಂಗರಿಸಿ ಆಯುಧ ಪೂಜೆ ಸಹ ಮಾಡಿಬಂದಿದ್ದಾರೆ.

ಹಾಗಾಗಿ ಜಾಮ್ದಾರರು ಎಲ್ಲಿಯೋ ಹುಡುಕದೆ ತಮ್ಮ ಹುಡುಕಿದರೆ ಸತ್ಯ ಅವರ ಕಿಸೆ ಯಿಂದಲೇ ಹೊರಬರುತ್ತದೆ. ೨. ಜಾಮದಾರರು, “ಅವರ ದುರ್ದೈವದಿಂದ ಅದೇ ಕಾಲಕ್ಕೆ ಸೆಪ್ಟೆಂಬರ್ ೧೯ರಂದು ಹುಬ್ಬಳ್ಳಿಯಲ್ಲಿ ನಡೆದ ಪಂಚಪೀಠಗಳ ‘ಏಕತಾ ಸಮಾವೇಶ’ ದಯನೀಯವಾಗಿ ಸೋತು ಹೋದದ್ದು ಮತ್ತು ಪಂಚ ಪೀಠದ ಹತ್ತು ದಿನಗಳ ‘ದಸರಾ ದರ್ಬಾರ’ವು ಬಸವಕಲ್ಯಾಣದಲ್ಲಿ ನೆಲಕಚ್ಚಿದ್ದು ಹಂಜರಿಗೆ ಮತ್ತು ಅವರ ಪಟಾಲಂಗೆ ಹಾಗೂ ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಕ್ಕೆ ಮುಖಭಂಗವಾಗಿದೆ" ಎನ್ನುತ್ತಾರೆ.

ಇವರು ಹೇಳಿರುವ ಹುಬ್ಬಳ್ಳಿಯ ಏಕತಾ ಸಮಾವೇಶವನ್ನು ಏರ್ಪಡಿಸಿದವರು ವಿರಕ್ತರೇ ಆಗಿದ್ದರು. ಇದರ ಮುಂದಾಳತ್ವವನ್ನು ವೀರಶೈವ ಮಹಾಸಭಾ ಸೇರಿದಂತೆ ದಿಂಗಾಲೇಶ್ವರ ಶ್ರೀಗಳು ವಹಿಸಿದ್ದರು. ಇದಕ್ಕೆ ಸಿದ್ಧಗಂಗಾ ಶ್ರೀಗಳೂ ಹೋಗಿದ್ದರು ಎಂಬುದು ಸಾರ್ವತ್ರಿಕ ಮಾಹಿತಿ. ಇನ್ನು ಬಾಳೆಹೊನ್ನೂರು ಶ್ರೀಗಳು ನಡೆಸುವ ದಸರಾ ದರ್ಬಾರ್ ಇತ್ತೀಚಿನದಲ್ಲ.

ಅದೊಂದು ಪರಂಪರಾನುಗತವಾಗಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ಉತ್ಸವ ಎಂದು ಇತಿಹಾಸ ತಿಳಿಸುತ್ತದೆ. ಈ ಬಾರಿ ಅದು ಬಸವ ಕಲ್ಯಾಣದಲ್ಲಿ ನಡೆಯುವು ದನ್ನು ತಡೆಯೊಡ್ಡಲು ತೆರೆಯ ಮರೆಗೆ ನಿಂತು ಪ್ರೋತ್ಸಾಹಿಸಿದ ಜಾಮ್ದಾರರು ತಿಪ್ಪರಲಾಗ ಹಾಕಿ ಮುಗ್ಗರಿಸಿಬಿದ್ದರು. ಅವರ ಎಲ್ಲ ಪ್ರಯತ್ನಗಳೂ ವ್ಯರ್ಥವಾಗಿ ದಸರಾ ದರ್ಬಾರ್ ಸತತವಾಗಿ ಹತ್ತು ದಿನಗಳ ಕಾಲ ನಡೆಯಿತೆಂದು ದೃಶ್ಯ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆ ಗಳಲ್ಲಿ ಸುದ್ದಿಗಳು ಪ್ರಕಟವಾಗಿವೆ.

ಇದರ ಯಶಸ್ವಿಯಾಗಲಿ ಆಯಶಸ್ವಿಯಾಗಲಿ ನನಗೆ ಸಂಬಂಧಿಸಿದ್ದಲ್ಲ. ಆದರೆ ಇದರ ಯಶಸ್ಸು ಜಾಮದಾರರಿಗೆ ನುಂಗಲಾರದ ತುತ್ತಾಗಿ ನನ್ನ ಮೇಲೆ ಕಕ್ಕಿದ್ದೆರಷ್ಟೇ. ಇನ್ನು ಬಸವ ವಿಸ್ಮೃತಿ ಅಭಿಯಾನಕ್ಕೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಲಕ್ಷಗಟ್ಟಲೆ ಜನರನ್ನು ಸೇರಿಸಿದ್ದು ಜಾಮ್ದಾರರಲ್ಲ, ಕರ್ನಾಟಕ ಸರಕಾರದ ಹಾಲಿ ಮಂತ್ರಿಗಳು!

ಪ್ರತ್ಯೇಕಿಗಳಿಗೆ ಇವರೇ ಆಶ್ರಯದಾತರು ಎನ್ನುವುದು ಲೋಕಕ್ಕೇ ತಿಳಿದ ವಿಷಯ. 2017-18ರ ರ‍್ಯಾಲಿಗಳಲ್ಲೂ ಹೀಗೆಯೇ ಸೇರಿಸಲಾಗಿದ್ದ ಜನರು ರಾತ್ರಿ ಹೊತ್ತಿಗೆ ತಾವು ಹಾಕಿಕೊಂಡಿದ್ದ ಲಿಂಗಾಯತ ಟೋಪಿಗಳನ್ನು ಚರಂಡಿಗಳಲ್ಲಿ ಎಸೆದು ಮದ್ಯ ದಂಗಡಿ ಸೇರಿದ್ದನ್ನು ಮತ್ತು ಚರಂಡಿಗಳಲ್ಲಿ ರಾಶಿ ರಾಶಿ ಬಿದ್ದಿದ್ದ ಆ ಟೋಪಿಗಳ ದೃಶ್ಯಾವಳಿಗಳನ್ನು ಜಾಮ್ದಾರರು ನೆನಪಿಸಿಕೊಳ್ಳಲಿ.

ವರ್ತಮಾನದಲ್ಲಿ ನಡೆದ ಇಂಥ ಸತ್ಯವನ್ನೇ ಸರಿಯಾಗಿ ಅರಿಯದವರು ಇನ್ನು ಇತಿಹಾಸ ವನ್ನು ಅರಿಯಬಲ್ಲರೇ? ಹಾಗಾಗಿಯೇ ಎಲ್ಲವನ್ನೂ ಮರೆಮಾಚಿ ತಮ್ಮ ವಿರುದ್ಧ ಯಾರಾ ದರೂ ಮಾತನಾಡಿದರೆ ‘ಅವನು ಆ ಗುಂಪಿಗ, ಈ ಗುಂಪಿಗ, ಪಂಚಪೀಠಿ, ಬಸವದ್ವೇಷಿ, ಜಂಗಮ, ಬ್ರಾಹ್ಮಣ, ಪೇಯ್ಡ್ ಗಿರಾಕಿ’ ಇತ್ಯಾದಿಯಾಗಿ ಅವಹೇಳಿಸುವುದು.‌

೩. ಜಾಮದಾರರು ಮರಾಠ ಆಡಳಿತದ ಕೆಲವು ಹುದ್ದೆಗಳನ್ನು ಹೆಸರಿಸಿ ಆ ಹುದ್ದೆಗಳು ಹೇಗೆ ಮರಾಠರ ಆಡಳಿತದಲ್ಲಿ ವಿಕಾಸಗೊಂಡವು ಎಂದು ತಮ್ಮ ವಂಶವಾಹಿಯನ್ನೂ ಸೇರಿಸಿ ಹೀಗೆ ವರ್ಣಿಸಿದ್ದಾರೆ: ‘ಪೇಶ್ವಾ’, ‘ಮುಜುಮ್ದಾರ’, ‘ವಖಿಯ ನವೀಸ’, ‘ದಾಬೀರ’ ‘ಸುಮಂತ’ ಸಚಿವ, ಸೇನಾಪತಿ, ‘ನ್ಯಾಯಾಧೀಶ’, ‘ನ್ಯಾಯಶಾಸ್ತ್ರೀ’ ಅಥವಾ ‘ಪಂಡಿತ ರಾವ’ ದಿವಾನ, ಫಡನವೀಸ, ‘ಸಬ್ರವೀಸ’, ಖಾರಕಾನೀಸ, ಚಿಟ್ನೀಸ, ಪೋಸ, ಜಾಮ್ದಾರ ಎಲ್ಲವೂ ಶುದ್ಧ ಮರಾಠಿ ಪದಗಳು ಎನ್ನುತ್ತಾರೆ.

ಹಾಗೆಯೇ ಅವರ ಮನೆತನದವರು ‘ದೇಸಾಯಿ’ ಗಳಾಗಿದ್ದವರು ಜಾಮ್ದಾರ ಹುದ್ದೆ ಸಿಕ್ಕ ನಂತರ ಜಾಮದಾರ ಎಂದು ಬದಲಿಸಿಕೊಂಡರು ಎಂದು ಅವರ ವಂಶಾವಳಿಯನ್ನು ಹೇಳುತ್ತಾರೆ.

ನಂತರ, “ಮೇಲೆ ವಿವರಿಸಿದ ನನ್ನ ಮನೆತನದ ನಿಜವಾದ ಹಿನ್ನೆಲೆಯಲ್ಲಿ, ರವಿ ಹಂಜಗೀ ಮಠ ಎಂಬ ದುಷ್ಟನು ನನ್ನ ಬಗ್ಗೆ, ನನ್ನ ಮನೆತನದ ಹೆಸರಿನ ಬಗ್ಗೆ ಅವನೇ ಸೃಷ್ಟಿಸಿದ ಬೋಗಸ್ ಇತಿಹಾಸದ ಬಗ್ಗೆ, ಆ ಹೆಸರಿಗೆ ಅಂಟಿಕೊಂಡಿದೆ ಎಂಬ ನನ್ನ ಮನೋಭೂಮಿಕೆ ಇತ್ಯಾದಿಗಳ ಬಗ್ಗೆ ಬರೆದದ್ದು ಎಷ್ಟು ಸತ್ಯ, ಎಷ್ಟು ಸಮಂಜಸ ಎಂಬುದನ್ನು ಓದುಗರೇ ನಿರ್ಣಯಿಸಲಿ.

ಅಂಥ ಸುಳ್ಳುಗಳನ್ನು ಈಗ ಹಂಜ ಏಕೆ ಸೃಷ್ಟಿಸಿ ಸತ್ಯವನ್ನು ತಿರುಚುತ್ತಿದ್ದಾನೆ ಎಂಬುದನ್ನು ಓದುಗರೇ ನಿರ್ಣಯಿಸಲಿ. ಅಂಥ ಕೀಳು ದರ್ಜೆಯ ಲೇಖನಗಳನ್ನು ಪ್ರಕಟಿಸುತ್ತಿರುವ ದಿನ ಪತ್ರಿಕೆಯ ಉದ್ದೇಶವಾದರೂ ಏನು?" ಎಂದು ಪ್ರಶ್ನಿಸಿದ್ದಾರೆ. ಮೊದಲಿಗೆ ಶ್ರೀಯುತ ಜಾಮದಾರರು, ‘ಜಾಮದಾರ ಉರ್ಫ್ ಜಮೇದಾರ ಎಂಬುದು ಅಪ್ಪಟ ಮರಾಠಿ ಪದ’ ಎಂದಿರುವುದು ಅವರ ಭಾಷಾ ಅeನವನ್ನು ತೋರುತ್ತದೆ.

ಮಹಾರಾಷ್ಟ್ರಿ-ಪ್ರಾಕೃತ ಎಂಬ ಮರಾಠಿ ಭಾಷೆಯು ಹತ್ತರಿಂದ ಹನ್ನೆರಡನೇ ಶತಮಾನ‌ ದಲ್ಲಿ ಸೃಜಿಸಿದ ಒಂದು ನವೀನ ಭಾಷೆ. ಎಂಟನೇ ಶತಮಾನದ ತಾಮ್ರಪತ್ರ ವೊಂದರಲ್ಲಿ ಮಹಾರಾಷ್ಟ್ರಿ ಎಂಬ ಪದವಿದ್ದು ಅದೇ ಮರಾಠಿ ಭಾಷಾ ಪರಂಪರೆಗೆ ಸಾಕ್ಷಿ ಎಂದು ಮರಾಠಿಗರು ಹಕ್ಕೊತ್ತಾಯ ಮಂಡಿಸಿದರೂ ಹದಿಮೂರನೇ ಶತಮಾನಕ್ಕೂ ಮುಂಚೆ ಯಾವುದೇ ಮರಾಠಿ ಭಾಷೆಯ ಸಾಹಿತ್ಯ ಉಪಲಬ್ಧವಿಲ್ಲ.

ಇಂದು ‘ಇಂಡೋ ಆರ್ಯನ್ ಭಾಷೆ’ ಎಂದೇ ಗುರುತಿಸಲ್ಪಟ್ಟಿರುವ ಇದು ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳ ಮೂಲವನ್ನು ಹೊಂದಿದೆ. ಅತ್ಯಂತ ಹೆಚ್ಚು ಕನ್ನಡ ಪದಗಳಲ್ಲದೆ ಸಂಸ್ಕೃತ, ಪರ್ಷಿಯನ್ ಮತ್ತಿತರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆದುಕೊಳ್ಳುತ್ತಾ ಇಂದಿನ ಹೊಸ ಮರಾಠಿ ವಿಕಾಸಗೊಂಡಿದೆ ಎಂದು ಭಾಷಾ ವಿಕಾಸಶಾಸ್ತ್ರಗಳು ಹೇಳುತ್ತವೆ.

ಇದರಲ್ಲಿ ಜಾಮ್ದಾರ್ ಪದವೂ ಸೇರಿದಂತೆ ಮೇಲೆ ಜಾಮ್ದಾರರು ಉಲ್ಲೇಖಿಸಿದ ಅನೇಕ ಪರ್ಷಿಯನ್ ಪದಗಳಿವೆ. ಈ ಬಗ್ಗೆ ಜಾಮದಾರರು ಹೆಚ್ಚು ಓದಿ ತಿಳಿದುಕೊಳ್ಳಲಿ ಎಂದಷ್ಟೇ ಹೇಳುತ್ತೇನೆ. ಅಂದ ಹಾಗೆ ಇವರು ಕೊಟ್ಟಿರುವ ಮರಾಠ ಆಡಳಿತದ ಹುದ್ದೆಗಳ ವಿವರಗಳು, pwonlyIAS ಎನ್ನುವ ಯುಪಿಎಸ್‌ಸಿ ಪರೀಕ್ಷೆಗೆ ಅಭ್ಯಾಸ ಮಾಡುವ ಜಾಲತಾಣ ದಿಂದ ಯಥಾವತ್ತಾಗಿ ಎತ್ತಿದ ವಿವರಗಳಾಗಿವೆ.

ಮೊಘಲ ಮತ್ತು ಬಹಮನಿ ಸಲ್ತನತ್ತಿನ ಜಾಗೀರುದಾರರಾಗಿದ್ದ ಮರಾಠರು ತಮ್ಮ ಸಲ್ತನತ್ತಿನ ಆಡಳಿತದ ರೀತಿಯನ್ನೇ ನಕಲು ಮಾಡಿದ್ದರಷ್ಟೇ. ಹಾಗಾಗಿ ಇವೆಲ್ಲವೂ ಪರ್ಷಿಯನ್ ಮೂಲದ ಪದಗಳೇ ಆಗಿವೆ.

ಇನ್ನು ನಾನು ಸ್ಪಷ್ಟವಾಗಿ ‘ಕಾಯಕವಾಹಿ’ ಅನುವಂಶೀಯತೆಯ ಪಿತ್ರಾರ್ಜಿತವನ್ನೇ ಊರ್ಜಿತ ಮಾಡಿಕೊಂಡಿರುವ ಜಾಮ್ದಾರ್ ಎಂದಿದ್ದೇನೆ. ಇದರ ಅರ್ಥ, ಕಾಯಕದಿಂದ ಬಂದ ಉಪನಾಮವೇ ಕುಟುಂಬನಾಮ ಎಂದು! ಈ ಹುದ್ದೆಗೇರುವವರ ಮೂಲನಾಮ ಏನೇ ಆಗಿದ್ದರೂ ಅದು ಅಳಿಸಿ ಜಾಮ್ದಾರ್ ಎನ್ನುವುದೇ ಆಗುತ್ತದೆ ಎಂಬುದು ಜಾಮದಾರರ ವೈಯಕ್ತಿಕ ಇತಿಹಾಸದ ಸ್ಪಷ್ಟವಾಗಿ ದೇಸಾಯಿಯಿಂದ ಜಾಮ್ದಾರ್ ಆಗಿದೆ.

ಇದು ಗಂಡಾಳ್ವಿಕೆ, ಹೆಣ್ಣಾಳ್ವಿಕೆ, ದತ್ತು ಮುಖೇನ ಏನೇ ಆದರೂ ಕಾಯಕವಾಹಿ ಎನಿಸಿ ವಂಶವಾಹಿ ನಾಮವಾಗಿ ಮುಂದುವರಿದಿದೆ. ಇಷ್ಟು ಸರಳ, ತಾರ್ಕಿಕ ವ್ಯಾಖ್ಯಾನವನ್ನು ತಮ್ಮ ವೈಯಕ್ತಿಕ ಇತಿಹಾಸ ಮುಖೇನ ಅರಿತೂ/ಅರಿಯದೆಯೂ ಜಾಮದಾರರು, ಜಾಮ್ದಾರ್ ಪದವು ಶುದ್ಧ ಮರಾಠಿ ಎಂದು ಅದನ್ನು ಸಮರ್ಥಿಸಿಕೊಳ್ಳಲು ಇನ್ನಷ್ಟು ಪರ್ಷಿಯನ್ ಮೂಲದ (ಅಶುದ್ಧ ಮರಾಠಿ) ಪದಗಳನ್ನೇ ಉಲ್ಲೇಖಿಸಿರುವುದು ‘ಉರುಳು ತ್ತಿರುವವನಿಗೆ ಹುಲ್ಲುಕಡ್ಡಿ ಆಸರೆ’ ಎಂಬಂತಷ್ಟೇ. ಒಂದು ವೇಳೆ ಜಾಮ್ದಾರ್ ಪದವು ಪರ್ಷಿಯನ್ ಮೂಲದ್ದಲ್ಲ, ಇದು ಪರಿಶುದ್ಧ ಮರಾಠಿ ಅಥವಾ ಪ್ರಾಕೃತ ಅಥವಾ ಸಂಸ್ಕೃತ ಅಥವಾ ಕನ್ನಡದ್ದು ಎಂದು ಸಾಬೀತು ಮಾಡಿದರೆ ಅವರಿಗೆ ಒಂದು ಲಕ್ಷ ರುಪಾಯಿ ಬಹುಮಾನ ಕೊಡುವೆ. ಒಂದೊಮ್ಮೆ ಸಾಬೀತು ಮಾಡಲಾಗದಿದ್ದರೆ ಅವರು ನನಗೆ ಒಂದು ರುಪಾಯಿ ಕೊಟ್ಟರೆ ಸಾಕು. ಇದು ಶುದ್ಧ ಹಿಂದೂ ಕಾಳಾಮುಖ ವೀರಶೈವ ಲಿಂಗವಂತ ಸವಾಲು!

ಮಾನ್ಯ ಜಾಮದಾರರು ಸ್ವೀಕರಿಸಿ ತಮ್ಮ ಬದ್ಧತೆ ಮೆರೆಯಲಿ. ತಮ್ಮ ಮೂಲವನ್ನೇ ಸರಿಯಾಗಿ ಅರಿಯದ ಜಾಮದಾರರು ವೀರಶೈವ ಲಿಂಗವಂತ ವಚನಗಳನ್ನು ಅರಿಯಬಲ್ಲರೇ?! ತಮ್ಮ ಅರಿವಿನ ಕುರಿತು ಬದ್ಧತೆ ಮೆರೆವರೆ?

ವೀರಶೈವ ಜಂಗಮರು ಲಿಂಗಾಯತರನ್ನು ಶೋಷಣೆ ಮಾಡಿದ್ದಾರೆ ಎನ್ನುವ ಶ್ರೀಯುತ ಜಾಮ್ದಾರರು ದೇಸಾಯಿಗಳ ಶೋಷಣೆ ಬಗೆಗಿನ ಕನ್ನಡ ಸಾಹಿತ್ಯವನ್ನು ಗಮನಿಸಿದರೆ ಸಾಕು, ಸಾಕಷ್ಟು ಕತೆ, ಕಾದಂಬರಿ, ಗೌಡ್ರ ಗದ್ಲ, ಸಂಪತ್ತಿಗೆ ಸವಾಲ್ ಅಂಥ ನಾಟಕಗಳು ಸೇರಿದಂತೆ ಸಾವಿರಾರು ನಿದರ್ಶನಗಳು ಸಿಗುತ್ತವೆ.

ಬಸವಣ್ಣನ ಧರ್ಮ ಎನ್ನುವ ಇವರಿಗೆ ಬಸವಣ್ಣನ ಮೂಲವೂ ಗೊತ್ತಿಲ್ಲ, ಆತನು ಪಾಲಿಸಿದ ಧರ್ಮವೂ ತಿಳಿದಿಲ್ಲ. ಇವರೆಂದೂ ವಿಭೂತಿ ಧರಿಸಿಲ್ಲ. ಸಿದ್ದಯ್ಯ ಪುರಾಣಿಕ ರಂಥ ಹಿರಿಯ ಐಎಎಸ್ ಅಧಿಕಾರಿಗಳು ಸದಾ ವಿಭೂತಿ ಧರಿಸುತ್ತಿದ್ದರು. ಅಂತೆಯೇ ಶಂಕರ್ ಬಿದರಿಯವರೂ ಅಧಿಕಾರದಲ್ಲಿದ್ದಾಗ ವಿಭೂತಿ ಧರಿಸುತ್ತಿದ್ದರು.

ಈಗಲೂ ಅಧಿಕಾರದಲ್ಲಿರುವ ಮಹಾಂತೇಶ್ ಬೀಳಗಿ ಅವರೂ ವಿಭೂತಿ ಧರಿಸಿಕೊಂಡೇ ಇರುತ್ತಾರೆ. ಹಾಗೆಂದು ಇವರ‍್ಯಾರೂ ತಮ್ಮ ವೃತ್ತಿಯಲ್ಲಿ ಜಾತಿಭೇದ ಮಾಡಿದ ಆಪಾದನೆ ಗಳಿಲ್ಲ. ಅಧಿಕಾರದಲ್ಲಿದ್ದಾಗ ಇಂಥ ಯಾವ ಆಚರಣೆಯನ್ನೂ ಮಾಡದ, ಲಿಂಗಾಯತ ಸಿಬ್ಬಂದಿಗೆ ತೊಂದರೆಯನ್ನೇ ಮಾಡಿದ್ದರು ಎಂಬ ಆಪಾದನೆಯ ಜಾಮದಾರರು ಧಾರ್ಮಿಕ ಮುಖಂಡತ್ವ ವಹಿಸಿ ಬಸವಧರ್ಮದ ಬಗ್ಗೆ ಯಾವ ನೈತಿಕತೆಯಿಂದ ಮಾತನಾಡುತ್ತಾರೆ? ಎನ್ನುವುದು ಒಂದು ಜಿಜ್ಞಾಸೆ!

(ಮುಂದುವರಿಯುವುದು)

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)