ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧರೆ ಹೊತ್ತಿ ಉರಿದರೆ ನಿಲಬಹುದೆ?

ಡಾ.ಶಿವರಾಮ ಕಾರಂತರ ‘ಶನೀಶ್ವರನ ನೆರಳಲ್ಲಿ’ ಕಾದಂಬರಿಯಲ್ಲಿ ‘ತಾನು ಪಕ್ಷಪಾತ ಮಾಡಿದೆನೇ’ ಎಂದು ಪರಿತಪಿಸುತ್ತಿದ್ದ ನಾಯಕಿ ವೃದ್ಧೆಯನ್ನು ಸಂತೈಸುತ್ತಾ ಆಕೆಯ ಹಿತೈಷಿ ಗೋವಿನ ನಿದರ್ಶನ ಹೇಳುತ್ತಾನೆ. ದನ ತನ್ನ ಕರುವಿಗೆ ಮಾತ್ರ ಹಾಲು ಕೊಡುವುದು; ಇನ್ನೊಂದು ದನದ ಕರು ಕೆಚ್ಚಲ ಬಳಿ ಬಂದರೆ ಒದೆಯುತ್ತದೆ!

ಧರೆ ಹೊತ್ತಿ ಉರಿದರೆ ನಿಲಬಹುದೆ?

-

Profile
Ashok Nayak Jul 7, 2026 6:00 AM

ಸಕಾಲಿಕ

- ದೇವು ಹನೆಹಳ್ಳಿ, ಮಂಗಳೂರು

ಬೆಂಗಳೂರಿನ ಕ್ಯಾಪ್ ಜೆಮಿನಿ ಸಂಸ್ಥೆಯು ತನ್ನ ಉದ್ಯೋಗಿಗಳ ಪುಟ್ಟ ಮಕ್ಕಳಿಗಾಗಿ ತಾನೇ ನಡೆಸು ತ್ತಿದ್ದ ಡೇ ಕೇರ್ ಶಿಶುಮಂದಿರದಲ್ಲಿ ಅದರ ಸಿಬ್ಬಂದಿಗಳೇ ಪುಟ್ಟ ಮಕ್ಕಳಿಗೆ ನೀಡಿದ ಅಮಾನುಷ ಶಿಕ್ಷೆ ಮತ್ತು ನಂತರದ ಕಾನೂನು ಕ್ರಮಗಳು, ವಾದ-ವಿವಾದಗಳು ಸರ್ವವೇದ್ಯ. ಅದು ವಿವೇಚನಾ ರಹಿತವಾದ ಕ್ರೌರ್ಯ. ನಮ್ಮ ಗ್ರಹಿಕೆಗೆ ನಿಲುಕದ ಸಂವೇದನಾರಾಹಿತ್ಯ. ಅವರಿಗೆ ಶಿಕ್ಷೆಯಾಗಬೇಕು. ಶಿಕ್ಷೆಯಾಗುತ್ತದೆ. ಈಗಾಗಲೇ ಒಂದಿಬ್ಬರ ಬಂಧನ ಕೂಡಾ ಆಗಿದೆ. ಅಲ್ಲಿಗೆ ಮುಗಿಯಿತು.

ಆದರೆ ಅದು ಅಲ್ಲಿಗೆ ಮುಗಿಯಬಾರದು. ಇದು ಏಕೆ ನಡೆಯಿತು? ಆ ಐದೂ ಜನ ಸಿಬ್ಬಂದಿಯವರು ಮಹಿಳೆಯರೇ. ಅವರೂ ತಾಯಂದಿರೇ. ಅವರೂ ಕೂಡ ತಮ್ಮ ಮಕ್ಕಳನ್ನು ಮುದ್ದಿಸಿದವರೇ! ನಾಚಿಕೆಮುಳ್ಳು ಚುಚ್ಚಿ ಆ ಮಕ್ಕಳು ಬೋರೆಂದು ಅತ್ತಾಗ ಗಾಬರಿಯಾದವರೇ! ಶೀತವಾದಾಗ ಮಗುವನ್ನು ಹೊತ್ತುಕೊಂಡು ಆಸ್ಪತ್ರೆಗೆ ಓಡಿದವರೇ! ಅದು ಎಲ್ಲ ಮನುಷ್ಯರಲ್ಲೂ, ಎಲ್ಲ ತಾಯಂದಿರಲ್ಲೂ ಇರುವ ಸಹಜ ಅನುಭೂತಿ. ಆದರೂ ಹೀಗೇಕೆ ಮಾಡಿದರು?! ಏಕೆಂದರೆ ನಾವು ನಮ್ಮ ಮಕ್ಕಳನ್ನು ಸಲಹುವ ಮತ್ತು ಸಹಿಸುವ ರೀತಿಯೇ ಬೇರೆ, ಇತರರ ಮಕ್ಕಳನ್ನು ಪರಿಭಾವಿ ಸುವ ರೀತಿಯೇ ಬೇರೆ. ಅದು ಸಹಜ. ಅನುಭೂತಿಯು ಸಹಾನುಭೂತಿಯಾಗಿ ಏರುವುದು ಸಹಜವೂ ಅಲ್ಲ, ಸುಲಭವೂ ಅಲ್ಲ.

ಡಾ.ಶಿವರಾಮ ಕಾರಂತರ ‘ಶನೀಶ್ವರನ ನೆರಳಲ್ಲಿ’ ಕಾದಂಬರಿಯಲ್ಲಿ ‘ತಾನು ಪಕ್ಷಪಾತ ಮಾಡಿದೆನೇ’ ಎಂದು ಪರಿತಪಿಸುತ್ತಿದ್ದ ನಾಯಕಿ ವೃದ್ಧೆಯನ್ನು ಸಂತೈಸುತ್ತಾ ಆಕೆಯ ಹಿತೈಷಿ ಗೋವಿನ ನಿದರ್ಶನ ಹೇಳುತ್ತಾನೆ. ದನ ತನ್ನ ಕರುವಿಗೆ ಮಾತ್ರ ಹಾಲು ಕೊಡುವುದು; ಇನ್ನೊಂದು ದನದ ಕರು ಕೆಚ್ಚಲ ಬಳಿ ಬಂದರೆ ಒದೆಯುತ್ತದೆ!

ಇದನ್ನೂ ಓದಿ: Ganesh Bhat Column: ಭಾರತದ ಜೆನ್ ಝೀ ಮುಂದಿನ ದಾರಿ ಯಾವುದು?

ಅನುಭೂತಿಯನ್ನು ಸಹಾನುಭೂತಿಯನ್ನಾಗಿ ಉನ್ನತೀಕರಿಸಿಕೊಳ್ಳುವ ಬೌದ್ಧಿಕ ಸಾಧ್ಯತೆ ಇರುವ ಜೀವಿ ಮನುಷ್ಯ ಮಾತ್ರ. ಹಾಗೆಯೇ, ಅದರ ಅಗತ್ಯವಿರುವ ಜೀವಿ ಕೂಡ ಮನುಷ್ಯ ಮಾತ್ರ. ಆದರೆ ಅದು ಸಹಜವಲ್ಲ. ಅದಕ್ಕೆ ವಿದ್ಯೆ, ಸಂಸ್ಕಾರ, ತರಬೇತಿ, ಪರಿಸರಗಳ ಅಗತ್ಯವಿದೆ. ಇಲ್ಲ ನಮಗೆ ಅಡಿಗಡಿಗೆ ನೆನಪಾಗಬೇಕಾದದ್ದು ನಾವು ಮನುಷ್ಯರಾಗಿ ಹುಟ್ಟಿಲ್ಲ; ನಾವು ಮನುಷ್ಯರಾಗಲು ಹುಟ್ಟಿದವರು ಎಂಬ ಯಶವಂತ ಚಿತ್ತಾಲರ ಮಾತು. ಇನ್ನೊಂದು ತಾಯಿಯ ಮಕ್ಕಳನ್ನು ಮತ್ತೊಬ್ಬಾಕೆ, ಮತ್ತೊಬ್ಬರು ಪಾಲಿಸುವುದು ಸುಲಭವಲ್ಲ. ನಮ್ಮ ಮಕ್ಕಳ ತುಂಟಾಟ, ಹಠಮಾರಿ ತನ, ಅಳು-ನಗು, ಬೇಕು-ಬೇಡಗಳು ಪ್ರಿಯವಾದಷ್ಟು ಮತ್ತು ಸಹ್ಯವಾದಷ್ಟು ಇನ್ನೊಬ್ಬ ತಾಯಿಯ ಮಗುವಿನ ವಿಚಾರದಲ್ಲಿ ಸಾಧ್ಯವಾಗುವುದಿಲ್ಲ.

ನಮ್ಮ ಮಕ್ಕಳ ಮತ್ತು ಪರರ ಮಕ್ಕಳ ಮಲಮೂತ್ರ, ಎಂಜಲು, ಸಿಂಬಳ, ಕಣ್ಣೀರು ಎಲ್ಲವುಗಳ ನಡುವೆ ಅಗಾಧ ವ್ಯತ್ಯಾಸವಿರುತ್ತದೆ. ಅದು ಸಹಜ. ಅದನ್ನು ಮೀರಲು ಬೇಕಾದ ಸಿದ್ಧತೆ ಮಹತ್ತಾ ದದ್ದು. (ಆಸ್ಪತ್ರೆಯಲ್ಲಿ ಯಾರ್ಯಾರೋ ರೋಗಿಗಳ ಮಲಮೂತ್ರ, ಎಂಜಲು, ರಕ್ತ ಬಳಿಯುವ ದಾದಿಯರ ಮತ್ತು ಇತರ ನೌಕರರ ಸಿದ್ಧತೆ, ಮನೋಸ್ಥೈರ್ಯ ಅದೆಷ್ಟು ಉದಾತ್ತವಾಗಿರಬೇಕು! ಅದು ಸುಲಭವಲ್ಲ ಮತ್ತು ‘ಹೊಟ್ಟೆಪಾಡಿಗೆ ಮಾಡುತ್ತಾರೆ’ ಎಂದು ತಿರಸ್ಕಾರ ಮಾಡುವಷ್ಟು ಕ್ಷುಲ್ಲಕವೂ ಅಲ್ಲ.) ಪ್ರಾಥಮಿಕವಾಗಿ ಅದಕ್ಕೊಂದು ಉದಾರವಾದ ಮನಸ್ಸು, ಹೃದಯ ಬೇಕು. ತರಬೇತಿ, ಸಂಸ್ಕಾರ ಇತ್ಯಾದಿ ಮತ್ತಿನದು.

ಆದರೆ ಇಲ್ಲ ನೇಮಕಾತಿ ಹೇಗೆ ನಡೆಯುತ್ತಿದೆ?! ಅಯ್ಯೋ ಬಿಡಿ! ಬಾಲವಾಡಿ ಮಕ್ಕಳ ಕುಂಡೆ ತೊಳೆಯಲು; ಚಡ್ಡಿ ಜಾರಿಸಿ ಮೂತ್ರ ಮಾಡಿಸಲು; ಅತ್ತಾಗ ಬಿಸ್ಕಿಟ್ ತಿನ್ನಿಸಲು ಅದೇನು ಮಹಾ ತರಬೇತಿ ಬೇಕು ಎನ್ನುವುದೇ ನಮ್ಮ ದೇಶದ ನೇಮಕಾತಿ ನೀತಿ. (ಇದರ ನಡುವೆ ‘ಇಷ್ಟಾದರೂ ಸರಿ ಇದೆಯ’ ಎಂದು ಸಮಾಧಾನಪಡಬೇಕು!) ಆದುದರಿಂದ ಇವರು ಕೊಡುವ ಬಿಡಿಗಾಸಿಗೆ ಹತಭಾಗ್ಯರು ಸಿಗುತ್ತಾರೆ.

72 ಒಕ

ಅವರ ಬಡತನ, ಅಗತ್ಯಗಳಿಂದಾಗಿ ಚೌಕಾಸಿ ಮಾಡುವ ಸ್ಥಿತಿಯಲ್ಲಿಯೂ ಅವರು ಇರುವುದಿಲ್ಲ. ಇವೆ ತೀರಾ ನಿರ್ಲಕ್ಷಿತ ರಂಗಗಳು. ಇವೇ ರಂಗಗಳು ಜಪಾನ್, ನಾರ್ವೆ, ಜರ್ಮನಿ, ಅಮೆರಿಕಗಳಲ್ಲಿ ಹೇಗಿವೆ ಎಂದು ನೋಡಿ ನಮ್ಮದನ್ನು ಗಮನಿಸಿದರೆ ಖೇದವಾಗುತ್ತದೆ. ನಾವು ತೀರಾ ತೀರಾ ಅನಾಗರಿಕ ಮಟ್ಟದಲ್ಲಿದ್ದೇವೆ. (ನಮ್ಮ ಸಂಸ್ಕೃತಿ, ನಾಗರಿಕತೆ, ಪಾರಂಪರಿಕ ಗ್ರಾಮೀಣ ಜನಜೀವನ ತಕ್ಕಮಟ್ಟಿಗೆ ಉತ್ತಮವಾಗಿರುವ ಕಾರಣ ಹೆಚ್ಚಿನ ಅನಾಹುತವಿಲ್ಲದೆ ಈ ರಂಗಗಳು ಹೇಗೋ ಕುಂಟುತ್ತಾ ಸಾಗುತ್ತಿವೆ.) ಈ ಕ್ಷುಲ್ಲಕ ಉದ್ಯೋಗಗಳಿಗೆ ತರಬೇತಿ, ಸಂಸ್ಕಾರ ಬೇಕು ಎಂದು ನಮಗೆ ಅನ್ನಿಸುವುದೂ ಇಲ್ಲ. ನಿಜವೆಂದರೆ ಒಬ್ಬ ಸಾಫ್ಟ್‌ʼವೇರ್ ಎಂಜಿನಿಯರ್ ಮತ್ತು ಐಎಎಸ್ ಆಫೀಸರ್‌ ಗೆ ಅಗತ್ಯವಿರುವ ತರಬೇತಿಗಿಂತ ಬಹುಹೆಚ್ಚಿನ ಮತ್ತು ಒಬ್ಬ ವೈದ್ಯನಿಗೆ ಬೇಕಾದ ಮಟ್ಟದ ತರಬೇತಿ ಯ ಅಗತ್ಯ ಇಲ್ಲಿದೆ. ಇದನ್ನು ಹೇಳಿದರೆ ನಮ್ಮ ಶಿಕ್ಷಣೋದ್ಯಮಿಗಳು ಬಿದ್ದುಬಿದ್ದು ನಗುತ್ತಾರೆ.

ಇನ್ನು ಈ ಕ್ಷುಲ್ಲಕ, ಕೆಳಮಟ್ಟದ ಉದ್ಯೋಗಕ್ಕೆ ಬರುವವರು ಯಾರು? ಅವರು ತೀರಾ ಬಡವ ರಾಗಿರುತ್ತಾರೆ. ತಮ್ಮ ಮಕ್ಕಳನ್ನು ಒಂದು ಕ್ಷಣ ಮುದ್ದಿಸುವ ವ್ಯವಧಾನ, ಸಮಾಧಾನ, ಪುರುಸೊತ್ತು ಇಲ್ಲದೆ ದುಡಿಯುವ ಅಗತ್ಯವಿರುವವರು. ಕಣ್ಣು ತೆರೆದರೆ ಟಿವಿಯಲ್ಲಿ, ರಸ್ತೆಯಲ್ಲಿ, ಹೊರಗೆ ಕಾಣುವ ವೈಭವದ ಒಂದು ತುಣುಕನ್ನೂ ತಮ್ಮ ಮಕ್ಕಳಿಗೆ ಒದಗಿಸಲಾಗದವರು. ಅವರು ‘ಎಲೀಟ’ ಅಲ್ಲ. ಅಚ್ಚುಕಟ್ಟು, ಒಪ್ಪ-ಓರಣ, ನಯನಾಜೂಕು ಎಲ್ಲವೂ ಕನಿಷ್ಠ. ಹೆಚ್ಚು ಓದಿಕೊಂಡವರಲ್ಲ.

ಇಂಗ್ಲಿಷ್ ಮಾತನಾಡಲು ಬರದು. ಇವರೆಲ್ಲ ಹಠಾತ್ತನೆ ಸಮಾಜದ ಮೇಲುಸ್ತರದ ಎಲೀಟ್ ಜನರ ಮುಂದೆ ತಬ್ಬಿಬ್ಬಾಗಿ ನಿಂತವರು. ಕನ್ನಡದ ದಾರ್ಶನಿಕ ಲೇಖಕ, ವಿಮರ್ಶಕ ಎ.ಎನ್.ಮೂರ್ತಿ ರಾಯರು ಒಮ್ಮೆ ಅನಾಥರ ಮುಂದೆ ನಿಮ್ಮ ಮಕ್ಕಳನ್ನು ಮುದ್ದಿಸಬೇಡಿ ಎಂದಿದ್ದರು! ಹೌದಲ್ಲವೇ? ಸಮಾಜದ ಮೇಲ್ವರ್ಗದ, ಸಿರಿವಂತ, ನಾಜೂಕು ನಡೆನುಡಿಯ ಅಪ್ಪ-ಅಮ್ಮಂದಿರು ತಮ್ಮ ಬೊಂಬೆ ಯಂತಹ ಮಕ್ಕಳನ್ನು ಪುಷ್ಪಕವಿಮಾನದಲ್ಲಿ ಕರೆತಂದು ಹೂವಿನಂತೆ ಎತ್ತಿ ಇಳಿಸುವಾಗ ಈ ಹತಭಾಗ್ಯರಿಗೆ ಏನೆನ್ನಿಸಬಹುದು?!

ಇನ್ನು ಈ ಎಲ್ಲ ಕ್ಷುಲ್ಲಕ, ಸಾಮಾನ್ಯ, ಕೆಳಮಟ್ಟದ ವೃತ್ತಿನಿರತರಿಗೆ ಸಿಗುವ ಸಂಬಳವಾದರೂ ಎಷ್ಟಿರಬಹುದು? ತಿಂಗಳಿಗೆ ಹತ್ತು ಸಾವಿರಕ್ಕಿಂತ ಹೆಚ್ಚಿದ್ದರೆ ಅದೇ ಪುಣ್ಯ! ಅವರ ಮುಂದೆಯೇ ಲಕ್ಷಲಕ್ಷ ಸಂಬಳ ಎಣಿಸುವವರು ತಮ್ಮ ಮಕ್ಕಳನ್ನು ಬಿಟ್ಟುಹೋಗುತ್ತಾರೆ. ಈ ಅಂತರ ಅದೆಂತಹ ಈರ್ಷ್ಯೆ, ಸಿಟ್ಟು, ಹತಾಶೆಗಳನ್ನು ಹುಟ್ಟಿಸಬಹುದು? (ಅದೇ ಕೆಲಸ, ಅಷ್ಟೇ ಸಮಯ, ಅಷ್ಟೇ ಜವಾಬ್ದಾರಿ- ಆದರೆ ಗುತ್ತಿಗೆ ನೌಕರರಿಗೆ ಮೂರು ಸಾವಿರ ಸಂಬಳ, ಖಾಯಂ ನೌಕರರಿಗೆ ಒಂದೂವರೆ ಲಕ್ಷ ಸಂಬಳ ಎನ್ನುವ ಇಲಾಖೆಯಲ್ಲಿ ಕೆಲಸ ಮಾಡಿ ಅಲ್ಲಿ ಹುಟ್ಟಿದ ಈ ಕಮ್ಮಟದ ಕಿಡಿಗಳನ್ನು ಕಂಡು ಅನುಭವಿಸಿದವನು ನಾನು.) ಅತ್ತೆ ಮೇಲೆ ಸಿಟ್ಟು ಕೊತ್ತಿಯ ಮೇಲೆ ಎಂಬಂತೆ ಅವಕಾಶ ಸಿಕ್ಕಾಗ ಈ ಜನರು ತಮ್ಮ ಹತಾಶೆ, ಸೋಲು, ಅಸಾಯಕತೆ, ರೊಚ್ಚು, ಅಸಹನೆ, ಹೊಟ್ಟೆಕಿಚ್ಚು ಎಲ್ಲವನ್ನು ಈ ಎಲ್ಲ ರೀತಿಗಳಲ್ಲಿ ತೋರಿಸಿಕೊಳ್ಳುತ್ತಾರೆ.

ಸಮಾಜದಲ್ಲಿರುವ ಅಸಮಾನತೆಯ ಫಲಶ್ರುತಿಯಾಗಿ ಇಂತಹ ವಿಪರೀತದ ಪ್ರತಿಕ್ರಿಯೆಗಳು ಹುಟ್ಟಿ ನಮ್ಮೊಳಗಿನ ಕಂದಕ ಇನ್ನೂ ದೊಡ್ಡದಾಗುತ್ತವೆ. ಇನ್ನೂ ಇನ್ನೂ ಮೂರ್ತ-ಅಮೂರ್ತ ಗೇಟೆಡ್ ಕಮ್ಯೂನಿಟೀಸ್ ಸಿದ್ಧವಾಗುತ್ತವೆ.

ಅಲ್ಲಿಗೇ ಮುಗಿಯಬಾರದು ಎಂದರೆ ಮುಂದುವರಿಯುವುದಾದರೂ ಹೇಗೆ? ಆಳುವವರಿಗೆ ಶಿಕ್ಷಣ ಆದ್ಯತೆಯಲ್ಲ. ನಮಗೆ ಕಡಿಮೆ ಸಂಬಳದ, ಹೆಚ್ಚು ಶುಲ್ಕದ ಶಾಲೆಗಳೆಂದರೆ ಉತ್ತಮ ಶಾಲೆಗಳು! ಮನುಷ್ಯತ್ವ-ಮನುಷ್ಯರಿಂದ ತೊಡಗಿ ನ್ಯಾಯದ ತನಕ ಎಲ್ಲವೂ ಮಾರಾಟಕ್ಕಿರುವ ಈ ದೇಶದಲ್ಲಿ ಖರೀದಿಸುವ ಶಕ್ತಿ ಇಲ್ಲದವರು ಹೀಗೆ ಅರ್ಥಾರ್ಥ ಸಂಬಂಧವಿಲ್ಲದವರ ಮೇಲೆ ಉರಿದು ಬಿದ್ದು ಉರಿದು ಹೋಗುತ್ತಾರೆ. ಶಿಕ್ಷಣತಜ್ಞರು ಭಾಷಣ ಮಾಡುತ್ತಿರುತ್ತಾರೆ, ಲೇಖನ ಬರೆಯುತ್ತಿರುತ್ತಾರೆ ಎಂಬಲ್ಲಿಗೆ ಎಲ್ಲವೂ ಮುಗಿಯುತ್ತವೆ.