ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rangaswamy Mookanahally Column: ನಾವೇ ಸೃಷ್ಟಿಸಿಕೊಂಡ ಖೆಡ್ಡಾದಿಂದ ಹೊರಬರಲು ಸಾಧ್ಯವಿಲ್ಲವೆ?

ನಾವು ಕುಡಿಯುವ ಹಾಲು ಎಷ್ಟು ಹಳೆಯದು ಎನ್ನುವುದು ಕೂಡ ನಮಗೆ ತಿಳಿದಿರುವುದಿಲ್ಲ. ಹೀಗೆ ಎಲ್ಲವನ್ನೂ ನಿಖರವಾಗಿ ಲೆಕ್ಕ ಹಾಕುತ್ತ ಹೋದರೆ ನಮ್ಮ ಕೈಯಲ್ಲಿ ಉಳಿತಾಯ ಎಂದು ಉಳಿದ ಹಣ ನಾವೇ ಬೇಕೆಂದು ಇಷ್ಟ ಪಟ್ಟು ಬದಲಿಸಿಕೊಂಡ ಜೀವನ ಶೈಲಿಗೆ ಸಮವೇ? ಎನ್ನುವ ಪ್ರಶ್ನೆಯನ್ನ ಹಾಕಿಕೊಳ್ಳಬೇಕಿದೆ.

ನಾವೇ ಸೃಷ್ಟಿಸಿಕೊಂಡ ಖೆಡ್ಡಾದಿಂದ ಹೊರಬರಲು ಸಾಧ್ಯವಿಲ್ಲವೆ?

-

ವಿಶ್ವರಂಗ

ನೂರಾರು ವರ್ಷಗಳ ಹಿಂದೆ ಹೋಗುವ ಪ್ರಮೇಯವಿಲ್ಲ. ಕೇವಲ ನಾಲ್ಕೆ ದು ದಶಕಗಳ ಹಿಂದೆ ಹೋದರೆ ಸಾಕು. ನಮ್ಮ ತಾತ ಯಾವ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ತಮ್ಮ ಬದುಕು ಕಳೆಯಲು ಅವರು ನಗರ ಪ್ರದೇಶಕ್ಕೆ ವಲಸೆ ಕೂಡ ಹೋಗಲಿಲ್ಲ. ವರ್ಷ ತುಂಬಿದರೂ ಅವರು ಹೇಳಿಕೊಳ್ಳುವಷ್ಟು ಹಣವನ್ನ ನೋಡುತ್ತಿರಲಿಲ್ಲ. ಆದರೆ ಅವರ ಬದುಕು ನಮ್ಮ ಇಂದಿನ ಬದುಕಿಗಿಂತ ಬಹಳ ಚನ್ನಾಗೇ ಇತ್ತು. ಹಿತ್ತಲಲ್ಲಿ ಬೆಳೆಯುವ ಕರಿಬೇವು, ಕೊತ್ತಂಬರಿಗೆ ಹಣ ನೀಡುವ ಅವಶ್ಯಕತೆಯಿರಲಿಲ್ಲ. ಅದೇ ಹಿತ್ತಲಲ್ಲಿ ಬೆಳೆದ ಕುಂಬಳ, ನುಗ್ಗೆ ಜೊತೆಗೆ ಇತರ ಸೊಪ್ಪು ಆಹಾರವಾಗುತ್ತಿತ್ತು. ಮನೆಯಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಕರೆಯುತ್ತಿದ್ದ ಹಾಲು ಫ್ರಿಡ್ಜ್‌ʼನಲ್ಲಿ ಡುವ ಅವಶ್ಯಕತೆ ಇರುತ್ತಿರಲಿಲ್ಲ.

ಕೆಡದಂತೆ ಹಾಲಿಗೆ ಹತ್ತಾರು ರೀತಿಯ ದ್ರಾವಣವನ್ನ ಬೆರೆಸುತ್ತಿರಲಿಲ್ಲ. ಒಟ್ಟಿನಲ್ಲಿ ಆರೋಗ್ಯ ಚೆನ್ನಾಗಿರುತಿತ್ತು. ಇವತ್ತಿಗೆ ಸೃಷ್ಟಿಯಾಗಿರುವ ಅನೇಕ ಖರ್ಚುಗಳು ಅಂದು ಇರಲೇ ಇಲ್ಲ. ಹೌದು ಅಂದು ಹಣದ ಹರಿವು ಇರಲಿಲ್ಲ ನಿಜ, ಅದರ ಜೊತೆಗೆ ಖರ್ಚುಗಳು ಕೂಡ ಇರಲಿಲ್ಲ ಎನ್ನುವುದನ್ನ ನಾವು ಗಮನಿಸುವುದಿಲ್ಲ. ಇವತ್ತೇನಾಗಿದೆ, ಮಾಸಿಕ ವೇತನ ಐದಾರು ಅಂಕಿಯಲ್ಲಿದೆ ನಿಜ, ಆದರೆ ಎರಡು ಎಸಳು ಕರಿಬೇವು, ಕೊತ್ತಬರಿಯಿಂದ ಎಲ್ಲಕ್ಕೂ ಹಣ ನೀಡಬೇಕಾಗಿದೆ.

ನಾವು ಕುಡಿಯುವ ಹಾಲು ಎಷ್ಟು ಹಳೆಯದು ಎನ್ನುವುದು ಕೂಡ ನಮಗೆ ತಿಳಿದಿರುವುದಿಲ್ಲ. ಹೀಗೆ ಎಲ್ಲವನ್ನೂ ನಿಖರವಾಗಿ ಲೆಕ್ಕ ಹಾಕುತ್ತ ಹೋದರೆ ನಮ್ಮ ಕೈಯಲ್ಲಿ ಉಳಿತಾಯ ಎಂದು ಉಳಿದ ಹಣ ನಾವೇ ಬೇಕೆಂದು ಇಷ್ಟ ಪಟ್ಟು ಬದಲಿಸಿಕೊಂಡ ಜೀವನ ಶೈಲಿಗೆ ಸಮವೇ? ಎನ್ನುವ ಪ್ರಶ್ನೆಯನ್ನ ಹಾಕಿಕೊಳ್ಳಬೇಕಿದೆ. ಸದಾ ಹಪಹಪಿಕೆ, ಟಾರ್ಗೆಟ್ ಎಂದು ಓಡುವ ಮನುಷ್ಯ ಈ ಮಧ್ಯೆ ಕಳೆದುಕೊಂಡ ಸಮಯದ ಲೆಕ್ಕವನ್ನ ಹಾಕುವುದಿಲ್ಲ. ಹಾಗೊಮ್ಮೆ ಆ ಸಮಯದ ಲೆಕ್ಕಾಚಾರ ಹಾಕಿದರೆ ಇಷ್ಟೆ ಮಾಡಿದ್ದು ಯಾವ ಪುರುಷಾರ್ಥ ಸಾಧನೆಗೆ? ಎನ್ನುವ ಪ್ರಶ್ನೆ ಖಂಡಿತ ಉದ್ಭವ ವಾಗದೆ ಇರದು.

ಇದನ್ನೂ ಓದಿ: Rangaswamy Mookanahally Column: ಸ್ವಂತ ವಿವೇಚನೆ ಇರುವ ಜನರು ಸಮಾಜದ ಆಸ್ತಿ !

ಇವತ್ತಿನ ಸಮಾಜವನ್ನ ನಾವು ಈ ರೀತಿಯ ಹಣದ ಸುತ್ತಮುತ್ತ ಸುತ್ತುವ ಬದುಕಾಗಿ ಬದಲಿಸಿ ಕೊಂಡಿದ್ದೇವೆ. ಇವತ್ತು ಮನೆಯಿಂದ ಹೊರ ಬಂದರೆ ಹಣ ಬೇಕು ಎನ್ನುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಪೂರ್ಣವಾಗಿ ಹಣವೇ ಇಲ್ಲದೆ ಅಥವಾ ಹಣದ ಸಹಾಯವಿಲ್ಲದೆ ಬದುಕುತ್ತೇನೆ ಎನ್ನುವ ಮಾತು ಸಿನಿಕತೆ ಎನ್ನಿಸುವ ಮಟ್ಟಿಗೆ ನಾವು ನಮ್ಮ ಸಮಾಜವನ್ನ ಬದಲಾಯಿಸಿ ಬಿಟ್ಟಿದ್ದೇವೆ. ಆದರೆ ಹಣವೇ ಜೀವನ ಎನ್ನುವುದು ತಪ್ಪು. ಮೂಲಭೂತ ಬದುಕಿಗೆ ಬೇಕಾದ ಹಣವಂತೂ ಬೇಕಲ್ಲವೇ? ಹೀಗಾಗಿ ಸಾಧ್ಯವಾದಷ್ಟು ಕಡಿಮೆ ಹಣದಲ್ಲಿ ಬದುಕಲು ಸಾಧ್ಯವಿದೆ. ಅದೆಷ್ಟು ಎನ್ನುವುದು ಅವರ ವರ ಬದುಕಿನ ಮೇಲೆ, ಮನಸ್ಥಿತಿಯ ಮೇಲೆ ಅವಲಂಬಿತ. ಕಡಿಮೆ ಹಣದಲ್ಲಿ ಬದುಕಲು ಹಲವು ಮಾರ್ಗಸೂಚಿಗಳಿವೆ ಅವುಗಳಲ್ಲಿ ಮುಖ್ಯವಾದವುಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ.

ನಗರ ಪ್ರದೇಶದಲ್ಲಿ ವಾಸಿಸುವ ಮನೆಗೆ ವೇತನದ ಐವತ್ತರಿಂದ, ಅರವತ್ತು ಪ್ರತಿಶತ ಹಣವನ್ನ ವ್ಯಯಿಸಬೇಕಾಗುತ್ತದೆ. ಹೀಗಾಗಿ ನಗರ ಪ್ರದೇಶದಲ್ಲಿ ವಾಸಿಸುವ ಬದಲು ನಮ್ಮ ಊರುಗಳಲ್ಲಿ ವಾಸಿಸುವುದು ಬಹಳ ಉತ್ತಮ. ಆದರೆ ಊರಿನಲ್ಲಿ ವೇತನವೇ ಇರುವುದಿಲ್ಲವಲ್ಲ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಇವತ್ತಿನ ದಿನದಲ್ಲಿ ತಂತ್ರಜ್ಞಾನದ ಸಹಾಯದಿಂದ ಸರಿಯಾಗಿ ಪ್ಲಾನ್ ಮಾಡಿದರೆ ನಾವು ಎಲ್ಲೇ ಇರಲಿ ಅಲ್ಲಿಂದ ಒಂದಷ್ಟು ಹಣವನ್ನ ದುಡಿಯುವುದು ಅಸಾಧ್ಯವೇನಲ್ಲ. ಮೊದಲೇ ಹೇಳಿದಂತೆ ಒಟ್ಟು ಆದಾಯ ಮತ್ತು ಖರ್ಚುಗಳನ್ನ ತೆಗೆದು ಉಳಿಯುವ ಹಣ, ಬದುಕುವ ರೀತಿಗೆ, ಜೀವನ ಮಟ್ಟಕ್ಕೆ ಸರಿ ಹೊಂದುತ್ತಿದೆಯೇ? ಎನ್ನುವ ಪ್ರಶ್ನೆ ಹಾಕಿಕೊಂಡು ಆಯ್ಕೆ ಮಾಡಿಕೊಳ್ಳಬೇಕು.

71 ಒಕ

ಕಡಿಮೆ ಹಣ ಇದೆ ಎಂದರೆ ಅಥವಾ ಹಣದ ಕೊರತೆಯಿದೆ ಎಂದರೆ ವೃಥಾ ಖರ್ಚು ಕಡಿಮೆ ಎಂದರ್ಥ. ನೀವೇ ನಿಮ್ಮ ಒಂದು ತಿಂಗಳ ಖರ್ಚಿನ ಅಭ್ಯಾಸವನ್ನ ಅಧ್ಯಯನ ಮಾಡಿ ನೋಡಿ. ಹೆಚ್ಚು ಹಣ, ಹೆಚ್ಚು ವೇತನ ಇರುವವರ ಖರ್ಚು ನೋಡಿ, ಅದರಲ್ಲಿ 50 ರಿಂದ 60 ಪ್ರತಿಶತ ಖರ್ಚು ಬೇಕಿಲ್ಲದ್ದು. ಆದರೆ ಸಮಾಜದ ಕಣ್ಣಿನಲ್ಲಿ ನಾವು ಯಶಸ್ವೀ, ಹಣವಂತರು ಎಂದು ತೋರಿಸಿ ಕೊಳ್ಳುವ ಉಮೇದಿಯಲ್ಲಿ ಇಂತಹ ಖರ್ಚುಗಳನ್ನ ಮಾಡುತ್ತಾರೆ. ಈ ಖರ್ಚುಗಳನ್ನ ಮಾಡದೆ ಕೂಡ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ.

ಕಡಿಮೆ ಹಣ ಸಂಪಾದನೆ ಎಂದರೆ, ನಿಮಗಾಗಿ ಹೆಚ್ಚು ವೇಳೆಯಿದೆ ಎಂದರ್ಥ. ಗಮನಿಸಿ ನೋಡಿ ನಾವು ಜಗತ್ತಿನ ಎಲ್ಲರೊಡನೆ ಸಂವಹನ ಮಾಡುತ್ತೇವೆ. ಆದರೆ ನಾವು ನಮ್ಮೊಡನೆ ಕುಳಿತು ಮಾತ ನಾಡಿಕೊಂಡು ಎಷ್ಟು ಸಮಯವಾಯ್ತು? ನಮ್ಮ ಬೇಕು ಬೇಡಗಳನ್ನ ನಾವು ನಮ್ಮೊಂದಿಗೆ ಚರ್ಚಿಸು ವುದು ಬಿಟ್ಟಿದ್ದೇವೆ. ಸಮಾಜದಲ್ಲಿ ನಾವಾಗೇ ಸೃಷ್ಟಿಸಿಕೊಂಡ ಸುಳಿಯಲ್ಲಿ ಸಿಕ್ಕಿಕೊಂಡು, ಸಮಾಜದ ಕಣ್ಣಿನಲ್ಲಿ ನಾವೇನೂ ದೊಡ್ಡವರು ಎನ್ನಿಸಿಕೊಳ್ಳಲು ಸಮಯವನ್ನ ಕಳೆಯುತ್ತೇವೆ. ನಿಜಕ್ಕೂ ನಮಗೇನು ಬೇಕು ಎನ್ನುವುದು ಹಿಂಬದಿಯ ಸ್ಥಾನವನ್ನ ಪಡೆಯುತ್ತದೆ. ನಿಜಾರ್ಥದಲ್ಲಿ ನಮಗೇನು ಬೇಕು ಎನ್ನುವುದು ಪ್ರಥಮ ಸ್ಥಾನ ಪಡೆಯಬೇಕು.

ಹೆಚ್ಚು ಸಂಪಾದನೆಯಿಲ್ಲ ಎಂದರೆ ಕಡಿಮೆ ತಿರುಗಾಟ ಎಂದರ್ಥ. ಕರೋನ ಎನ್ನುವ ವೈರಸ್ ಹೆಚ್ಚು ತಿರುಗಾಟವಿಲ್ಲದೆ ಬಹಳಷ್ಟು ಕೆಲಸವನ್ನ ಕುಳಿತ ಜಾಗದಿಂದ ಮಾಡಿ ಮುಗಿಸಬಹುದು ಎನ್ನುವುದನ್ನ ನಮಗೆ ಕಲಿಸಿ ಕೊಟ್ಟಿದೆ. ವೃಥಾ ಸುತ್ತುವುದರಿಂದ ಹಣದ ಜೊತೆಗೆ ಸಮಯವೂ ಪೋಲು. ಜೊತೆಗೆ ನಾವು ಸುಡುವ ತೈಲದ ಮೇಲಿನ ವಿದೇಶಿ ವಿನಿಮಯ ಕೂಡ ನಷ್ಟವಾಗುತ್ತದೆ.

ನಗರ ಪ್ರದೇಶಗಳಲ್ಲಿ ನಾಯಿಕೊಡೆಯಂತೆ ತಲೆಯೆತ್ತಿರುವ ಜಿಮ್‌ಗಳನ್ನ ನೋಡಿದಾಗ ಮನುಷ್ಯ ತಾನಾಗೇ ತಂದುಕೊಂಡಿರುವ ವಿಷಮತೆಯ ಅರಿವಾಗುತ್ತದೆ. ವ್ಯಾಯಾಮ ಎನ್ನುವುದು ದಿನದಲ್ಲಿ ಒಂದು ಅಥವಾ ಎರಡು ನಿರ್ದಿಷ್ಟ ತಾಸುಗಳಲ್ಲಿ ಮಾಡಿ ಮುಗಿಸುವ ವಿಷಯವಲ್ಲ. ಅದು ಜೀವನ ಶೈಲಿಯಾಗಬೇಕು. ನಮ್ಮದೇ ಮನೆಯ ಮುಂದೆ ನಮಗೆ ಬೇಕಾದ ಆಹಾರ ಬೆಳೆದುಕೊಳ್ಳುವುದು ಅಂತಹ ಒಂದು ಜೀವನ ಶೈಲಿ ಸೃಷ್ಟಿಸುತ್ತದೆ. ಪ್ರತ್ಯೇಕವಾಗಿ ವ್ಯಾಯಾಮಕ್ಕೆ ಎಂದು ನಾವು ವೇಳೆ ಯನ್ನ ಮೀಸಲಿಡುವುದು ತಪ್ಪುತ್ತದೆ. ಹೌದು ಇಂತಹ ಜೀವನ ಶೈಲಿ ಆರಿಸಿಕೊಳ್ಳುವುದರಿಂದ ಸಂಪಾದನೆ ಇರುವುದಿಲ್ಲ, ಜೊತೆಗೆ ಖರ್ಚು ಕೂಡ ಇರುವುದಿಲ್ಲ. ಆದರೂ ಬದುಕಿಗೆ ಒಂದಷ್ಟು ಹಣವಂತೂ ಬೇಕೇ ಬೇಕು. ಅಷ್ಟು ಹಣ ಹೊಂದಿಸಿಕೊಳ್ಳುವ ಕೆಲಸ ಮಾಡಿದರೆ ಉಳಿದ ಸಮಯ ನಮ್ಮದು.

ಹೆಚ್ಚು ಗಳಿಸುತ್ತಾ ಹೋದಂತೆ ಅದಕ್ಕೆ ತಕ್ಕಂತೆ ತೆರಿಗೆಯನ್ನ ಕಟ್ಟಬೇಕಾಗುತ್ತದೆ. ಗಳಿಕೆಯ 30 ಪ್ರತಿಶತ ತೆರಿಗೆಯನ್ನ ನೀಡಬೇಕು. ಉಳಿಸಿದ ಹಣವನ್ನ ಎದರೂ ಹೂಡಿಕೆ ಮಾಡಬೇಕು. ಹೂಡಿಕೆ ಯ ಮೇಲಿನ ಮತ್ತು ಉಳಿಕೆಯ ಮೇಲಿನ ಹಣಕ್ಕೂ ಮತ್ತೆ ತೆರಿಗೆ ಕಟ್ಟಬೇಕಾಗುತ್ತದೆ. ಇದರರ್ಥ ನಾವು ಕೆಲಸದಿಂದ ವಿಮುಖರಾಗಬೇಕು ಎಂದಲ್ಲ. ಒಂದು ಹಂತದ ನಂತರ ಗಳಿಸುವ ಹಣ ತನ್ನ ಮೌಲ್ಯವನ್ನ ಕಳೆದುಕೊಳ್ಳುತ್ತದೆ. ಅದು ಬ್ಯಾಂಕಿನಲ್ಲಿ ಒಂದು ಸಂಖ್ಯೆ ಅಷ್ಟೇ, ನಾವು ನೆಲದ ಮೇಲೆ ಅಥವಾ ಷೇರಿನ ಮೇಲೆ ಮಾಡಿದ ಹೂಡಿಕೆ ಕೂಡ ನಿರ್ಜಿವ ವಸ್ತು. ಅದು ನಮಗೆ ಯಾವುದೇ ರೀತಿಯ ಸಂತೋಷವನ್ನ ನೀಡಲು ಸಾಧ್ಯವಿಲ್ಲ. ನಾವು ಗಳಿಸಿದ ಸಮಯದ ಸದ್ವಿ ನಿಯೋಗ, ಸಮಯವನ್ನ ಸರಿಯಾಗಿ ವ್ಯಯಿಸಿ ಗಳಿಸುವ ಜ್ಞಾನ ನಮಗೆ ಖುಷಿ ಮತ್ತು ಬದುಕಿ ಗೊಂದು ಅರ್ಥವನ್ನ ನೀಡುತ್ತದೆ.

ವೃತ್ತಿಪರರು ಹೆಚ್ಚೆಚ್ಚು ಗ್ರಾಮೀಣ ಪ್ರದೇಶಗಳಿಗೆ ಮರಳಿ ಹೋಗುವುದು ಕೂಡ ಉತ್ತಮ ಆಯ್ಕೆ. ನಗರ ಪ್ರದೇಶದಲ್ಲಿ ಕೋಟಿಗಟ್ಟಲೆ ಸಂಪಾದನೆಯಿದೆ, ಅದಕ್ಕೆ ತಕ್ಕಂತೆ ನೆಲ, ಮನೆಗೂ ವ್ಯಯಿಸ ಬೇಕು. ಹಗಲು ರಾತ್ರಿಯೆನ್ನದೆ ದುಡಿಯಬೇಕು. ಇಷ್ಟೆ ಮಾಡಿಕೊಂಡೂ ಏನೂ ಸಾಧಿಸಿದ ಭಾವನೆ ಕೂಡ ನಮ್ಮಲ್ಲಿ ಉತ್ಪನ್ನವಾಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮಾಡುವ ಸೇವೆ ಮನಸ್ಸಿಗೆ ಮುದ ನೀಡುವ ಸಾಧ್ಯತೆಯನ್ನ ಅಲ್ಲಗೆಳೆಯಲು ಬರುವುದಿಲ್ಲ.

ಸರಳವಾಗಿ ಹೇಳಬೇಕೆಂದರೆ ಬಾಹ್ಯ ವಸ್ತುಗಳ, ಅಥವಾ ಹಣ ತೆತ್ತು ಕೊಳ್ಳುವ ವಸ್ತುಗಳ ಸಹಾಯ ದಿಂದ ಖುಷಿಯನ್ನ ಬಯಸುವುದು ನಿಂತರೆ ಅಲ್ಲಿಗೆ ಹಣದ ಅವಶ್ಯಕತೆ ಮುಕ್ಕಾಲು ಪಾಲು ಕಡಿಮೆ ಯಾಗುತ್ತದೆ. ಉದಾಹರಣೆಗೆ ನಮ್ಮ ತಾತನ ಕಾಲದಲ್ಲಿ ನೋಡಿ ಅವರ ಬಳಿ ಇಂದಿನ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್, ಮೊಬೈಲ್ ಯಾವುದೂ ಇರಲಿಲ್ಲ ಆದರೆ ಅವರು ಖುಷಿಯಾಗಿದ್ದರು.

ಇಂಟರ್ನೆಟ್ ನಾವು ಬದುಕುವ ರೀತಿಯನ್ನ ಖಂಡಿತ ಬದಲಾಯಿಸಿದೆ. ಅದನ್ನ ಕೂಡ ನಮ್ಮ ಅನುಕೂಲಕ್ಕೆ ತಕ್ಕಷ್ಟು ಬಳಸಿಕೊಂಡರೆ ನಮಗೆ ಒಳಿತು. ಇಂದಿನ ಮಕ್ಕಳು ದಿನದಲ್ಲಿ ಎರಡು ತಾಸು ಇಂಟರ್ನೆಟ್ ಇಲ್ಲದಿದ್ದರೆ ಸಾಕು ನೀರಿನಿಂದ ಹೊರತೆಗೆದ ಮೀನಿನಂತೆ ಪರದಾಡುತ್ತಾರೆ. ಇದೊಂದು ಅಡಿಕ್ಷನ್, ಇದರಿಂದ ಹೊರಬರಲು ಮತ್ತೆ ಹಣ ವ್ಯಯಿಸಬೇಕಾಗುತ್ತದೆ.

ಮೇಲೆ ಹೇಳಿರುವ ಎಲ್ಲಾ ಅಂಶಗಳನ್ನೂ ನಾವು ನೂರಕ್ಕೆ ನೂರು ಇವತ್ತಿನ ಕಾಲಘಟ್ಟದಲ್ಲಿ ಖಂಡಿತ ಪಾಲಿಸಲು ಸಾಧ್ಯವಿಲ್ಲ. ಇವೆಲ್ಲವನ್ನೂ ಯಥಾವತ್ತಾಗಿ ಮಾಡಬೇಕು ಎನ್ನುವ ಕಾರಣಕ್ಕೆ ಆ ಸಾಲುಗಳನ್ನು ಬರೆದಿಲ್ಲ. ಸುತ್ತಾಟ ಬೇಡವೆಂದಲ್ಲ, ಖರ್ಚು ಮಾಡಬಾರದು ಎಂದಲ್ಲ. ನಿತ್ಯದ ಬದುಕನ್ನು ನಾವು ಸರಳವಾಗಿ ಇಟ್ಟುಕೊಳ್ಳಬಹುದು. ಇಟ್ಟುಕೊಳ್ಳಬೇಕು ಎನ್ನುವುದಕ್ಕೆ ಆ ಸಾಲು ಗಳನ್ನು ಬರೆದಿದ್ದೇನೆ. ಆರು ತಿಂಗಳಿಗೋ, ವರ್ಷಕ್ಕೋ ಒಮ್ಮೆ ಪ್ರವಾಸ ಹೋಗುವುದು, ಖರ್ಚು ಮಾಡುವುದು ಕೂಡ ಇವತ್ತಿಗೆ ಅವಶ್ಯಕತೆ ಎನ್ನಿಸಿಕೊಂಡಿವೆ. ಹೀಗಾಗಿ ನಾವು ನಿತ್ಯದ ಜೀವನಕ್ಕೆ ಕಡಿವಾಣ ಹಾಕಿಕೊಳ್ಳದೆ ಇದ್ದಲ್ಲಿ ಇವತ್ತಿನ ದಿನ ಸಮಾಜದ ಬಹುಪಾಲು ಜನತೆಯ ಗೋಳಾಟ ನಮ್ಮದು ಕೂಡ ಆಗುತ್ತದೆ. ಹೀಗಾಗಿ ಸ್ವಲ್ಪ ಚಿಂತಿಸಿ ಹೆಜ್ಜೆ ಇಟ್ಟರೆ, ಸಮಾಜ ನಿರೀಕ್ಷೆ ಮಾಡುವ ಮಟ್ಟದಲ್ಲಿ ಹಣವಿಲ್ಲದಿದ್ದರೂ ಉತ್ತಮ ಬದುಕನ್ನು ಖಂಡಿತ ಬದುಕಬಹುದು.

ಸಮಾಜದಲ್ಲಿ ಹೆಚ್ಚುತ್ತಿರುವ ಅಸಮಾನತೆ ಹೋಗಲಾಡಿಸಲು ಒಂದೇ ಮದ್ದು. ಗ್ಲೋಬಲ್ ಲಾಬಿಯಿಗಳು ಹಾಕುವ ಯಾವುದೇ ತಂತ್ರಕ್ಕೂ ನಾವು ಬಲಿಯಾಗದೆ ಇರುವುದು. ಅವರ ಸಾಮ್ರಾಜ್ಯ ನಿಂತಿರುವುದು ನಮ್ಮ ಮೇಲೆ. ನೀವು ಗಮನಿಸಿ ನೋಡಿ, ಅವರ ಬಳಿ ಜಗತ್ತಿನ ಅತಿ ದೊಡ್ಡ ಉತ್ಪಾದನಾ ಘಟಕಗಳಿವೆ. ಅಲ್ಲಿ ಅವರು ನಿಮ್ಮ ಬದುಕಿಗೆ ಬೇಕಾದ ವಸ್ತುಗಳಿಗಿಂತ ಬೇಡವಾದ ವಸ್ತುಗಳನ್ನ ಉತ್ಪಾದಿಸುತ್ತಾರೆ. ಅದನ್ನ ನಿಮಗೆ ಮಾರಲು ಮಾರ್ಕೆಟಿಂಗ್ ತಂತ್ರವನ್ನ ಅನುಸರಿಸು ತ್ತಾರೆ.

ನಿಮ್ಮ ಬಳಿ ಹಣವಿಲ್ಲದಿದ್ದರೆ ನಿಮಗೆ ಸಾಲ ನೀಡುತ್ತಾರೆ. ಸಾಲ ನೀಡಿದ ಹಣದಲ್ಲಿ ನಿಮ್ಮಿಂದ ಖರ್ಚು ಮಾಡಿಸಿ ಅದೇ ಹಣವನ್ನ ಮತ್ತೆ ತಮ್ಮ ಬಳಿಗೆ ತರಿಸಿಕೊಳ್ಳುತ್ತಾರೆ. ನಿಮಗೆ ಗೊತ್ತಿಲ್ಲದೇ ನೀವು ನಿಮಗೆ ಬೇಡವಾದ ವಸ್ತುವನ್ನ ಕೊಂಡು ಸಾಲಗಾರರಾಗುತ್ತೀರಿ. ಅದಕ್ಕೆ ಕಂತು ಕಟ್ಟುತ್ತೀರಿ, ಕಂತು ಕಟ್ಟಲು ವೇತನಕ್ಕೆ ಮತ್ತೆ ಅವರ ಬಳಿ ದುಡಿಯುತ್ತೀರಿ. ನಿಮ್ಮ ಸಮಯ ಎನ್ನುವುದನ್ನ ಅವರಿಗೆ ಒತ್ತೆ ಇಡುತ್ತೀರಿ. ಇಷ್ಟೆ ಮಾಡಿ ಸುಸ್ತಾಗಿ ಬಂಡವಾಳಶಾಹಿಗಳು ಕಟ್ಟಿದ ರೆಸಾರ್ಟ್‌ನಲ್ಲಿ ವಿಶ್ರಮಿಸುತ್ತೀರಿ.

ಎಲ್ಲವನ್ನೂ ಮಾಡುತ್ತೀರಿ, ಆದರೆ ನಿಮಗೆ ಬೇಕಾದ ಬದುಕನ್ನ ನೀವು ಬದುಕಿದಿರಾ? ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಿಗುವುದಿಲ್ಲ. ಏಕೆಂದರೆ ಇಂಟರ್ನೆಟ್, ಬದುಕು, ಯಶಸ್ಸು, ಹಣ ಇವುಗಳ ಹಿಂದಿನ ಓಟದಲ್ಲಿ ನಮ್ಮೊಂದಿಗೆ ನಾವು ಸಂವಹನ ನಡೆಸುವುದು ಬಿಟ್ಟು ದಶಕಗಳು ಮಾತ್ರ ಸದ್ದಿಲ್ಲದೇ ಕರಗಿ ಹೋಗಿದೆ. ಹೆಚ್ಚು ಹಣದ ಅವಶ್ಯಕತೆಯಿಲ್ಲದ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ನಾವು ಅದರ ಬಗ್ಗೆ ಚಿಂತಿಸಬೇಕಿದೆ. ಕಾರ್ಯತತ್ಪರರಾಗಬೇಕಿದೆ.

ಗಳಿಕೆ- ಖರ್ಚು- ಗಳಿಕೆ ಎನ್ನುವ ಪ್ಯಾಟ್ರನ್ ಮುರಿಯದಿದ್ದರೆ ನಾವು ಈ ಚಕ್ರದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಇದು ಸದಾ ಸುತ್ತುತ್ತಲೇ ಇರುತ್ತದೆ. ಕಡೆ ಪಕ್ಷ ನಾವು ಇಂತಹ ಸುಳಿಯಲ್ಲಿ ಸಿಲುಕಿಕೊಂಡಿದ್ದೇವೆ ಎನ್ನುವ ಅರಿವು ಮೂಡಿದರೆ ನಂತರ ಅದರಿಂದ ಹೊರಬರುವ ದಾರಿ ಕೂಡ ಸಿಗುತ್ತದೆ. ಆದರೆ ಅದನ್ನು ಅರಿತುಕೊಳ್ಳುವಷ್ಟು ವೇಳೆ ಎಲ್ಲಿದೆ ಹೇಳಿ?