ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಭಕ್ತಿ ಒಂದಿದ್ದರೆ, ಭಗವಂತ ಕೈ ಬಿಡುವುದಿಲ್ಲ

ಗುರುಗಳು ಶಾಂತವಾಗಿಯೇ ಇದ್ದರು, ಒಂದು ಮಾತನ್ನೂ ಆಡದೆ, ಸ್ವಲ್ಪ ದೂರದಲ್ಲಿ ಒಂದು ಗುಹೆ ಕಾಣುತ್ತಿತ್ತು, ಶಿಷ್ಯನ ಕೈಹಿಡಿದು ಕೊಂಡು ಆ ಗುಹೆಯೊಳಗೆ ನಡೆದು, ಇಬ್ಬರೂ ಅಲ್ಲಿ ಅಡಗಿ ಕುಳಿತರು. ಸ್ವಲ್ಪ ಸಮಯದ ನಂತರ, ಕೊಲೆಗಡುಕರ ಗುಂಪು ಆ ಗುಹೆಯ ಬಾಗಿಲಲ್ಲಿ ಬಂದು ನಿಂತಿತು.

ಭಕ್ತಿ ಒಂದಿದ್ದರೆ, ಭಗವಂತ ಕೈ ಬಿಡುವುದಿಲ್ಲ

ಒಂದೂರಿನಲ್ಲಿ ಮಹಾ ಸಂತರೊಬ್ಬರಿದ್ದರು. ಸದಾ ಸತ್ಯವನ್ನೇ ನುಡಿಯುತ್ತಾ, ಎಲ್ಲರನ್ನೂ ಸನ್ಮಾ ರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದರು. ಇವರನ್ನು ಕಂಡರೆ ಸಹಿಸದ ಕೆಲವು ಜನ ಹೇಗಾ ದರೂ ಮಾಡಿ, ಈ ಸಂತರನ್ನು ಮುಗಿಸಿಯೇ ಬಿಡಬೇಕೆಂದು ತೀರ್ಮಾನಿಸಿದರು. ಅದು ಹೇಗೋ ಅವರ ಭಕ್ತನೊಬ್ಬನಿಗೆ ತಿಳಿದುಬಿಟ್ಟಿತು. ಆತ ಬಂದು, ‘ಗುರುಗಳೇ, ತಮ್ಮ ಜೀವ ತುಂಬಾ ಅಪಾ ಯದ ಸ್ಥಿತಿಯಲ್ಲಿದೆ, ತಾವು ಯಾರ ಕಣ್ಣಿಗೂ ಬೀಳದಂತೆ ಸ್ವಲ್ಪ ದಿನಗಳವರೆಗೆ ಮರೆಯಾಗಿರುವುದು ವಾಸಿ’ ಎಂದು ಕೇಳಿಕೊಂಡ. ಸಂತರಿಗೂ ಇದು ಸರಿಯನಿಸಿ ಯಾರನ್ನು ಜೊತೆಗೆ ಕರೆದುಕೊಳ್ಳದೆ ದೇಶಾಂತರ ಹೊರಟರು. ಆದರೆ ಅವರ ಪರಮಾಪ್ತ ಶಿಷ್ಯನೊಬ್ಬ ಮಾತ್ರ ಹಠ ಮಾಡಿ ಅವರ ಜೊತೆ ಹೊರಟ.

ಈ ವಿಷಯ, ಹೇಗೊ, ಕೊಲೆಗಡುಕರ ಕಿವಿಗೂ ಬಿತ್ತು. ತಕ್ಷಣವೇ ಅವರು, ಕುದುರೆಗಳನ್ನು ಹತ್ತಿ, ಖಡ್ಗವನ್ನು ಹಿಡಿದುಕೊಂಡು ಇವರನ್ನು ಹುಡುಕುತ್ತಾ ಹಿಂಬಾಲಿಸಿದರು. ಇವರ ಹಿಂದಿನಿಂದಲೇ ಕುದುರೆಗಳ ಕಾಲಿನ ಸದ್ದು ಕೇಳಿಸತೊಡಗಿತು. ಈಗ ಶಿಷ್ಯನಿಗೆ ತುಂಬಾ ಭಯವಾಯಿತು. ಆತ ನಡುಗುತ್ತಾ, ‘ಗುರುಗಳೇ, ಅವರೆಲ್ಲಾ ನಮ್ಮ ಹಿಂದೆಯೇ ಬರುತ್ತಿದ್ದಾರೆ, ಇವರಿಂದ ಪಾರಾಗುವುದು ಹೇಗೆ ಗುರುಗಳೇ?’ ಎಂದು ನಡುಗುತ್ತಾ ಹೇಳಿದ.

ಇದನ್ನೂ ಓದಿ: Roopa Gururaj Column: ಒಡಹುಟ್ಟಿದವರು ತಂದೆ ತಾಯಿಯ ಸ್ಥಾನ ತುಂಬಬೇಕು

ಗುರುಗಳು ಶಾಂತವಾಗಿಯೇ ಇದ್ದರು, ಒಂದು ಮಾತನ್ನೂ ಆಡದೆ, ಸ್ವಲ್ಪ ದೂರದಲ್ಲಿ ಒಂದು ಗುಹೆ ಕಾಣುತ್ತಿತ್ತು, ಶಿಷ್ಯನ ಕೈಹಿಡಿದು ಕೊಂಡು ಆ ಗುಹೆಯೊಳಗೆ ನಡೆದು, ಇಬ್ಬರೂ ಅಲ್ಲಿ ಅಡಗಿ ಕುಳಿ ತರು. ಸ್ವಲ್ಪ ಸಮಯದ ನಂತರ, ಕೊಲೆಗಡುಕರ ಗುಂಪು ಆ ಗುಹೆಯ ಬಾಗಿಲಲ್ಲಿ ಬಂದು ನಿಂತಿತು.

ಅವರಲ್ಲೊಬ್ಬ ಕೂಗಿ ಹೇಳಿದ, ‘ಅವರು ಇಲ್ಲೇ ಅಡಗಿದ್ದಾರೆ, ಗುಹೆಯ ಒಳಗೆ ನುಗ್ಗಿ ಹುಡುಕಿ’ ಎಂದ. ಶಿಷ್ಯನಿಗೆ, ನಡುಕ ಪ್ರಾರಂಭವಾಯಿತು, ‘ಈಗೇನು ಮಾಡೋಣ ಗುರುಗಳೇ? ಈ ಗುಹೆಯಿಂದ ಈಗ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಇಷ್ಟೊಂದು ಜನರ ಕಣ್ಣು ತಪ್ಪಿಸಿ, ಓಡುವುದಾದರೂ ಹೇಗೆ, ಇನ್ನು ನಮ್ಮಿಬ್ಬರ ಕಥೆ ಮುಗಿಯಿತು’ ಎಂದು ನಡುಗುತ್ತಲೇ ಹೇಳಿದ.

ಗುರುಗಳು ಶಾಂತರಾಗಿ, ‘ಹುಷ್ ಸುಮ್ಮನಿರು, ಇಲ್ಲಿ , ನಾವು ಇಬ್ಬರೇ ಅಲ್ಲಾ, ಮೂವರಿದ್ದೇವೆ’ ಎಂದ ರು. ‘ಏನು ಮೂವರೇ? ಅದು ಹೇಗೆ ಗುರುಗಳೇ?’ಎಂದ ಶಿಷ್ಯ. ‘ಭಗವಂತನನ್ನು ಮರೆತೆಯಾ? ಅವನಿ ರುವಾಗ ನಿನಗೇಕೆ ಭಯ?’ ಎಂದರು ಗುರುಗಳು. ಆಗ ಒಂದು ಪವಾಡವೇ ನಡೆಯಿತು.

ಇವರು ಗುಹೆಯೊಳಗೆ ಸೇರಿದ ಕ್ಷಣವೇ , ಒಂದು ದೊಡ್ಡ ಜೇಡ ಗುಹೆಯ ಬಾಗಿಲಿಗೆ ತನ್ನ ಬಲೆ ಯನ್ನು ಹೆಣೆದು ಬಿಟ್ಟಿತ್ತು. ಅದನ್ನು ಕಂಡ ಕೊಲೆಗಡುಕರ ಗುಂಪಿನ ನಾಯಕ ಹೇಳಿದ, ‘ಜೇಡರ ಬಲೆ ಹಾಗೆಯೇ ಇದೆ, ಅವರು ಗುಹೆಯೊಳಗೆ ಹೋಗಿರಲು ಸಾಧ್ಯವಿಲ್ಲ, ಅವರು ಬೇರೆಡೆಗೆ, ಹೋಗಿ ರಬೇಕು, ಅವರು ಬಹಳ ದೂರ ಹೋಗುವ ಮುಂಚೆ ಅವರನ್ನು ಹುಡುಕೋಣ ಬನ್ನಿ’ ಎಂದು ಅಲ್ಲಿಂದ ಬೇರಡೆಗೆ ನಡೆದರು.

ಗುರು ಶಿಷ್ಯರ ಪ್ರಾಣ ಉಳಿಯಿತು. ‘ಸದ್ಯಕ್ಕಂತೂ ನಾವು ಇಲ್ಲಿ ನಿರಾಳವಾಗಿ ಇರಬಹುದು. ನೋಡಿ ದೆಯಾ, ನಾವೆಂದೂ ಏಕಾಂಗಿಗಳಲ್ಲ,ಆ ಭಗವಂತ ಸದಾ ನಮ್ಮ ಜೊತೆಗೇ ಇರುತ್ತಾನೆ, ಅವನಲ್ಲಿ ನಮಗೆ ಸದಾ ನಂಬಿಕೆ ಇರಬೇಕು ಅಷ್ಟೇ’ ಎಂದು ಗುರುಗಳು ಶಿಷ್ಯನಿಗೆ ಹೇಳಿದರು.

ಬದುಕಿನಲ್ಲಿ ನಮ್ಮ ಧೈರ್ಯವನ್ನು ಕುಗ್ಗಿಸುವಂಥ, ತಾಳ್ಮೆಯನ್ನು ಪರೀಕ್ಷಿಸುವಂಥ ಅನೇಕ ಕಷ್ಟ ಸವಾಲುಗಳು ನಮಗೆ ಎದುರಾಗುತ್ತವೆ. ಆಗ ಯಾರೂ ನಮ್ಮ ಜೊತೆಗಿಲ್ಲ ಎಂದು ಅನಿಸಿಬಿಡುತ್ತದೆ. ಅಂತಹ ಸಮಯದಲ್ಲೇ ನಾವು ಭಗವಂತನ ಮೇಲೆ ಸಂಪೂರ್ಣ ನಂಬಿಕೆಯನ್ನು ಇರಿಸಿಕೊಂಡು ಅವನಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು.

ಯಾರು ನಮ್ಮನ್ನು ಕೈಬಿಟ್ಟರೂ, ಭಗವಂತನ ಕೃಪೆ ಸದಾ ನಮ್ಮ ಜೊತೆ ಇದ್ದೇ ಇರುತ್ತದೆ. ಅದಕ್ಕೆ ನಮ್ಮ ಸಮರ್ಪಣಾ ಮನೋಭಾವ ಮತ್ತು ಅಪರಿಮಿತ ನಂಬಿಕೆ ಬಹಳ ಮುಖ್ಯ. ದಾಸರು ಅದನ್ನೇ ತಾನೇ ಹೇಳಿರುವುದು ‘ತಲ್ಲಣಿಸದಿರು ಕಂಡ್ಯಾ ತಾಳು ಮನವೇ, ಎಲ್ಲರನು ಸಲಹುವನು ಇದಕ್ಕೆ ಸಂಶಯ ಬೇಡ, ತಲ್ಲಣಿಸದಿರು ಕಂಡ್ಯಾ ತಾಳು ಮನವೇ’.