Dr Vijay Darda Column: ನಮ್ಮೊಳಗಿನ ಭಯವನ್ನು ಗೆದ್ದರೆ ಜಗತ್ತನ್ನೇ ಗೆಲ್ಲಬಹುದು !
ಭಯದಲ್ಲೂ ಅಸಂಖ್ಯ ವಿಧಗಳಿವೆ. ಕೆಲ ಮಕ್ಕಳಿಗೆ ಶಾಲೆಯಲ್ಲಿ ಸರಿಯಾಗಿ ಇಂಗ್ಲಿಷ್ ಬರುವು ದಿಲ್ಲ ಎಂದು ಭಯವಾದರೆ, ಇನ್ನು ಕೆಲ ಮಕ್ಕಳಿಗೆ ಗಣಿತದ ಬಗ್ಗೆ ಭಯ. ಕೆಲವರಿಗೆ ಬಿದ್ದು ಗಾಯ ಮಾಡಿಕೊಳ್ಳುವ ಭಯ. ಇನ್ನು ಕೆಲವರಿಗೆ ನಾಳಿನ ಅನಿಶ್ಚಿತತೆಯ ಬಗ್ಗೆ ಭಯ. ಕೆಲವರಿಗೆ ಏನನ್ನೋ ಕಳೆದುಕೊಳ್ಳುತ್ತೇವೆಂಬ ಭಯವಾದರೆ, ಮತ್ತೆ ಕೆಲವರಿಗೆ ನಾಳೆ ಕಳೆದುಕೊಂಡು ದುಃಖಿಸುವುದಕ್ಕಾಗಿಯೇ ಇವತ್ತು ಏನೋ ಸಿಗುತ್ತದೆ ಎಂಬ ಭಯ!
-
ಸಂಗತ
ಸಸೋಲಿನಲ್ಲಿ ಮಾತ್ರವಲ್ಲ, ಗೆಲುವಿನಲ್ಲೂ ನಮಗೆ ಭಯವಿದೆ. ಗೆದ್ದಿರುವುದು ಮತ್ತೆ ಕಳೆದುಹೋದರೆ ಏನು ಮಾಡುವುದು ಎಂಬ ಭಯ ನಮಗೆ. ಭಯ ಎಲ್ಲರ ಬದುಕಿನ ಅವಿಭಾಜ್ಯ ಅಂಗ. ಭಯವೆಂಬುದು ರಾಜತಾಂತ್ರಿಕತೆಯಲ್ಲೂ ಒಂದು ಭಾಗ. ಆದರೆ ಒಂದು ಮಾತು ನೆನಪಿಡಿ- ನಿರ್ಭೀತಿಗಿಂತ ದೊಡ್ಡ ಅಸ್ತ್ರ ಇನ್ನೊಂದಿಲ್ಲ!
ಆಂತರ್ಯದಲ್ಲಿ ನಾನೊಬ್ಬ ತತ್ವಜ್ಞಾನಿ! ಇವತ್ತಿನ ಅಂಕಣ ಕೂಡ ನನ್ನೊಳಗಿನ ವಿಚಾರ ಗಳ ತಾತ್ವಿಕ ಮಂಥನದಿಂದಲೇ ಹುಟ್ಟಿದೆ. ನಾನು ಆಗಾಗ ತತ್ವಶಾಸ್ತ್ರವನ್ನು ಅಭ್ಯಾಸ ಮಾಡುತ್ತೇನೆ. ನನ್ನೊಳಗೊಬ್ಬ ತತ್ವಶಾಸ್ತ್ರಜ್ಞ ಅಡಗಿದ್ದಾನೆ. ಹೀಗಾಗಿ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ, ಆದರೆ ನಾವು ಅಷ್ಟಾಗಿ ಗಮನ ನೀಡದ ಸಂಗತಿ ಯೊಂದರ ಬಗ್ಗೆ ಇವತ್ತು ಚರ್ಚಿಸುತ್ತೇನೆ.
ಏನದು ಸಂಗತಿ? ಭಯ! ನಮ್ಮೊಳಗೊಂದು ಭಯ ಸದಾ ಸುಳಿದಾಡುತ್ತಿರುತ್ತದೆ. ಅದು ಎಲ್ಲಿಂದ ಹುಟ್ಟುತ್ತದೆ? ಇದನ್ನು ಚರ್ಚಿಸುವುದಕ್ಕಿಂತ ಮೊದಲು ಈಗ ನಮ್ಮ ದೇಶದಲ್ಲಿ ಪ್ರಚಲಿತದಲ್ಲಿರುವ ಸಂಗತಿಗಳನ್ನೇ ಗಮನಿಸಿ. ಬಿಹಾರದಲ್ಲಿ ಈಗಷ್ಟೇ ಚುನಾವಣೆ ಮುಗಿ ದಿದೆ. ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಎರಡೂ ಕಡೆ ಒಂದಷ್ಟು ರಾಜಕಾರಣಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಅವರು ಸೋಲಿನ ಭಯದಲ್ಲಿ ಒಳಗೊಳಗೇ ಅದುರುತ್ತಿದ್ದಾರೆ!
ಭಯದಲ್ಲೂ ಅಸಂಖ್ಯ ವಿಧಗಳಿವೆ. ಕೆಲ ಮಕ್ಕಳಿಗೆ ಶಾಲೆಯಲ್ಲಿ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ ಎಂದು ಭಯವಾದರೆ, ಇನ್ನು ಕೆಲ ಮಕ್ಕಳಿಗೆ ಗಣಿತದ ಬಗ್ಗೆ ಭಯ. ಕೆಲವರಿಗೆ ಬಿದ್ದು ಗಾಯ ಮಾಡಿಕೊಳ್ಳುವ ಭಯ. ಇನ್ನು ಕೆಲವರಿಗೆ ನಾಳಿನ ಅನಿಶ್ಚಿತತೆಯ ಬಗ್ಗೆ ಭಯ. ಕೆಲವರಿಗೆ ಏನನ್ನೋ ಕಳೆದುಕೊಳ್ಳುತ್ತೇವೆಂಬ ಭಯವಾದರೆ, ಮತ್ತೆ ಕೆಲವರಿಗೆ ನಾಳೆ ಕಳೆದುಕೊಂಡು ದುಃಖಿಸುವುದಕ್ಕಾಗಿಯೇ ಇವತ್ತು ಏನೋ ಸಿಗುತ್ತದೆ ಎಂಬ ಭಯ!
ಇದನ್ನೂ ಓದಿ: Dr Vijay Darda Column: ಈ ಮೈಲುಗಲ್ಲು ತಲುಪಿದ್ದು ಸುಲಭದ ಹಾದಿಯಾಗಿರಲಿಲ್ಲ !
ನೀವು ಭಯದ ಬಗ್ಗೆ ಕೆಲ ಹೊತ್ತು ಯೋಚನೆ ಮಾಡಿದರೆ ನಿಮಗೆ ಭಯದ ಮೊದಲ ಪಾಠ ವನ್ನು ಮನೆಯಲ್ಲೇ ಮಾಡಿರುತ್ತಾರೆ ಎಂಬುದು ತಿಳಿಯುತ್ತದೆ. “ನೀರಿಗೆ ಇಳಿಯಬೇಡ, ಬೆಂಕಿಯ ಹತ್ತಿರ ಹೋಗಬೇಡ, ಮರ ಹತ್ತಬೇಡ, ಕುಸ್ತಿ ಆಡಿದರೆ ಮೂಳೆ ಮುರಿದು ಕೊಳ್ತೀಯಾ ನೋಡು, ಹುಷಾರಾಗಿ ಕ್ರಿಕೆಟ್ ಆಡದಿದ್ದರೆ ಬಾಲ್ ಬಂದು ಬಡಿಯುತ್ತದೆ!
ಅದನ್ನು ಮಾಡಬೇಡ, ಇದನ್ನು ಮಾಡಬೇಡ!" ಎಂದು ಅಪ್ಪ-ಅಮ್ಮ ಸಾಕಷ್ಟು ಸಲ ಹೇಳಿರುತ್ತಾರೆ. ಮನೆಯಲ್ಲಿ ಹಿರಿಯರು ಮಕ್ಕಳಿಗೆ ಎಷ್ಟೊಂದು ಎಚ್ಚರಿಕೆಗಳನ್ನು ನೀಡುತ್ತಾ ರೆಂದರೆ, ಅವರೊಳಗೊಂದು ಭಯ ತನ್ನಿಂತಾನೇ ತೂರಿಕೊಂಡು ಶಾಶ್ವತವಾಗಿ ನೆಲೆಸಿ ಬಿಡುತ್ತದೆ.
ಮನುಷ್ಯನ ಬದುಕಿನಲ್ಲಿ ಭಯದ ಅಧ್ಯಾಯ ಆರಂಭವಾಗುವುದು ಮನೆಯಿಂದಲೇ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಬಾಲ್ಯದಲ್ಲಿ ನಮ್ಮೊಳಗೆ ಬಿತ್ತಿದ ಭಯವು ಯೌವನವನ್ನು ದಾಟಿ, ವಯಸ್ಕರಾಗಿ ಬದುಕಿ, ವೃದ್ಧಾಪ್ಯ ಕಳೆದು, ಸಾವಿನವರೆಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅಷ್ಟೇಕೆ, ಇದೇ ಭಯವನ್ನು ನಾವು ಮುಂದಿನ ತಲೆಮಾರಿಗೂ ಯಥಾವತ್ತಾಗಿ ವರ್ಗಾಯಿಸಿ ಹೋಗಿರುತ್ತೇವೆ. ಭಯದ ಈ ಚಕ್ರ ಹೀಗೇ ತಿರುಗುತ್ತಿರುತ್ತದೆ.
ಹೀಗಾಗಿ ನಮ್ಮ ಸಾಮಾಜಿಕ ಬದುಕು ಭಯದ ನೆರಳಿನಲ್ಲೇ ನಡೆಯುತ್ತಿರುತ್ತದೆ. ನಿಜ ಹೇಳಬೇಕೆಂದರೆ, ನಾವು ಕೇವಲ ನಷ್ಟದ ಬಗ್ಗೆ ಭಯಪಡುವುದಿಲ್ಲ, ಗೆಲುವಿನ ಬಗ್ಗೆಯೂ ಭಯಪಡುತ್ತೇವೆ. ಮುಂದೊಂದು ದಿನ ಈ ಜಯವನ್ನು ನಮ್ಮಿಂದ ಯಾರೋ ಕಿತ್ತುಕೊಳ್ಳ ಬಹುದು ಎಂಬ ಕಾರಣಕ್ಕೆ ಜಯದ ಬಗ್ಗೆಯೂ ಭಯ ಅನುಭವಿಸುತ್ತೇವೆ!
ಒಟ್ಟಿನಲ್ಲಿ ಪರಿಸ್ಥಿತಿ ಹೇಗಿದೆ ಅಂದರೆ, ಎಲ್ಲರೂ ಇನ್ನೊಬ್ಬರನ್ನು ಯಾವುದಾದರೂ ವಿಷಯಕ್ಕೆ ಹೆದರಿಸುತ್ತಲೇ ಇರುತ್ತಾರೆ. ಕೊನೆಗೆ ಗಂಡ ಮತ್ತು ಹೆಂಡತಿ ಕೂಡ ಬೇರೆ ಬೇರೆ ವಿಷಯಗಳಲ್ಲಿ ಪರಸ್ಪರರನ್ನು ಹೆದರಿಸುತ್ತಿರುತ್ತಾರೆ.
ನಾನು ನೋಡಿದಂತೆ ವಿದೇಶಗಳಲ್ಲಿ ಈ ರೀತಿಯ ಸನ್ನಿವೇಶ ಇಲ್ಲ. ಅಲ್ಲಿ ಅಪ್ಪ-ಅಮ್ಮಂದಿ ರು ತಮ್ಮ ಎರಡು ವರ್ಷದ ಮಗುವನ್ನು ಸ್ವಿಮ್ಮಿಂಗ್ ಪೂಲ್‌ಗೆ ಇಳಿಸಿ ಧೈರ್ಯ ವಾಗಿ ಈಜು ಕಲಿಯುವಂತೆ ಮಾಡುತ್ತಾರೆ. ನಮ್ಮಲ್ಲಿ ಅದು ಸಾಧ್ಯವೇ? ಇಲ್ಲ, ಏಕೆಂದರೆ ನಮಗೆ ವಿಪರೀತ ಭಯ. ವಿದೇಶಗಳಲ್ಲಿ ಮಕ್ಕಳು ನಿರ್ಭಯವಾಗಿ ಬದುಕುವುದನ್ನು ಬಾಲ್ಯ ದಿಂದಲೇ ಕಲಿಯುತ್ತಾರೆ. ಆದ್ದರಿಂದಲೇ ಅವರು ಕಾಡು-ಮೇಡು, ಬೆಟ್ಟ-ಗುಡ್ಡ ಗಳನ್ನು ಒಬ್ಬರೇ ಅಲೆಯುತ್ತಾರೆ.
ಒಬ್ಬರೇ ವಿದೇಶಗಳಿಗೆ ಹೋಗುತ್ತಾರೆ. ಬಾಲ್ಯ ಕಳೆಯುತ್ತಿದ್ದಂತೆ ಅವರಲ್ಲೊಂದು ಸಾಹಸಿ ಪ್ರವೃತ್ತಿ ಮನೆ ಮಾಡಿರುತ್ತದೆ. ಅದು ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತುವುದೇ ಇರಬಹುದು ಅಥವಾ ಸಮುದ್ರಕ್ಕೆ ಜಿಗಿದು ಈಜುವುದಿರಬಹುದು, ಬಾಲ್ಯದಿಂದಲೇ ನಿರ್ಭೀತ ಮನಸ್ಥಿತಿಯನ್ನು ಬೆಳೆಸಿಕೊಳ್ಳುವವರು ಬದುಕಿನಲ್ಲಿ ಸದಾ ಮುಂದೆ ಇರುತ್ತಾರೆ.
ನಮ್ಮ ದೇಶದಲ್ಲೂ ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ದಟ್ಟವಾದ ಕಾಡಿನಲ್ಲಿ ಅಥವಾ ಬೆಟ್ಟಗುಡ್ಡಗಳ ಗುಹೆಗಳಲ್ಲಿ ಒಬ್ಬರೇ ತಪಸ್ಸು ಮಾಡುತ್ತಿದ್ದರು. ಏಕೆಂದರೆ ಅವರಲ್ಲಿ ಭಯವೆಂಬುದು ಇರುತ್ತಿರಲಿಲ್ಲ. ಆದರೆ ಇಂದು ನಿರ್ಭೀತ ಮನಸ್ಥಿತಿ ದೂರವಾಗುತ್ತಿದೆ.
ನಮ್ಮ ದೇಶವನ್ನು ಗಟ್ಟಿಯಾಗಿ ಕಟ್ಟಬೇಕು ಅಂದರೆ ನಾವೆಲ್ಲರೂ ನಿರ್ಭೀತರೂ, ಶಿಸ್ತಿನ ನಾಗರಿಕರೂ ಆಗಬೇಕು. ಬಾಲ್ಯದ ನೆನಪು ಮಾಡಿಕೊಂಡಾಗ ನನಗೆ ಯಾವಾಗಲೂ ಒಂದು ದೃಶ್ಯ ಕಣ್ಣ ಮುಂದೆ ಬರುತ್ತದೆ. 1960-62ರ ಸಮಯದಲ್ಲಿ ಯವತ್ಮಾಲ್‌ನಲ್ಲಿ ನಾನು ನೋಡಿದ ಸಂಗತಿಯಿದು. ಆಗ ಪೊಲೀಸ್ ಇಲಾಖೆಯಲ್ಲಿ ಥಾಣೆದಾರರು ಇರುತ್ತಿದ್ದರು.
ಜಂಗ್ ಬಹಾದೂರ್ ಸಿಂಗ್ ಎಂಬ ಥಾಣೆದಾರನೊಬ್ಬ ದೊಗಲೆ ಚಡ್ಡಿ, ಪೊಲೀಸ್ ಟೋಪಿ ಧರಿಸಿ, ಕೈಯಲ್ಲಿ ಕೋಲು ಹಿಡಿದು ರಸ್ತೆಗಿಳಿಯುತ್ತಿದ್ದ. ಅವನು ಬಂದರೆ ಸಾಕು, ಇಡೀ ರಸ್ತೆ ನಿಶ್ಶಬ್ದವಾಗುತ್ತಿತ್ತು. ಎಲ್ಲರೂ ನಿಂತಲ್ಲೇ ನಿಲ್ಲುತ್ತಿದ್ದರು. ಕಾಡಿನಿಂದ ಸಿಂಹ ಹೊರಗೆ ಬಂದಿದೆಯೋ ಎಂಬಂತೆ ಜಂಗ್ ಬಹಾದೂರ್‌ನನ್ನು ನೋಡಿ ಜನರು ಹೆದರಿಕೊಳ್ಳು ತ್ತಿದ್ದರು.
ಇವತ್ತು ಇಂಥ ಶಿಸ್ತು ಎಲ್ಲಾದರೂ ಕಾಣಿಸುತ್ತದೆಯಾ? ಸುಮ್ಮನೆ ಯೋಚಿಸಿ ನೋಡಿ- ನನಗೆ ಇವತ್ತಿಗೂ ಅವನ ಹೆಸರು ನೆನಪಿದೆ ಅಂದರೆ ಆ ವ್ಯಕ್ತಿ ನನ್ನ ಮೇಲೆ ಎಷ್ಟು ಪ್ರಭಾವ ಬೀರಿರಬಹುದು! ನಮಗೆ ಇವತ್ತು ನಮ್ಮ ನಮ್ಮ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರು ಕೂಡ ಗೊತ್ತಿರುವುದಿಲ್ಲ. ಆದರೆ ನನಗೆ ನನ್ನ ಬಾಲ್ಯದ ಸಮಯದಲ್ಲಿದ್ದ ಪೊಲೀಸ್ ಪೇದೆಯ ಹೆಸರು ಈಗಲೂ ನೆನಪಿದೆ. ಪೊಲೀಸರೇ ಆಗಲಿ ಅಥವಾ ನಮ್ಮನ್ನು ಆಳುವವರೇ ಆಗಲಿ, ಅವರು ನಮ್ಮ ಮೇಲೆ ಪ್ರಭಾವ ಬೀರುವುದು ಯಾವಾಗ ಅಂದರೆ ಅವರ ಬಗ್ಗೆ ನಮಗೊಂದು ಭಯವಿದ್ದಾಗ. ಅದರ ಜತೆಗೆ ಗೌರವವೂ ಇರಬೇಕೆನ್ನಿ.
ನಾವೆಲ್ಲಾ ಚಿಕ್ಕವರಿದ್ದಾಗ ಶಾಲೆಯಲ್ಲಿ ಕ್ಲಾಸ್ ರೂಮಿಗೆ ಶಿಕ್ಷಕರು ಬಂದ ತಕ್ಷಣ ಎಲ್ಲಾ ಮಕ್ಕಳಲ್ಲೂ ಡುಗುಡುಗು ಭಯ ಶುರುವಾಗುತ್ತಿತ್ತು. ನಿಜವಾಗಿ ಅದು ಭಯವಾಗಿರು ತ್ತಿರಲಿಲ್ಲ, ಶಿಕ್ಷಕರ ಬಗ್ಗೆ ಮಕ್ಕಳಿಗಿರುವ ಗೌರವವಾಗಿರುತ್ತಿತ್ತು. ಗೌರವದಿಂದಲೇ ಭಯದ ಭಾವನೆ ಹುಟ್ಟುತ್ತಿತ್ತು. ಆ ಗೌರವವಾದರೂ ಏಕಿರುತ್ತಿತ್ತು ಅಂದರೆ, ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ತಮ್ಮ ಮಕ್ಕಳು ಅಂತಲೇ ಭಾವಿಸುತ್ತಿದ್ದರು.
ಯಾವುದಾದರೂ ಮಗು ಯಾವುದೋ ಒಂದು ವಿಷಯದಲ್ಲಿ ದುರ್ಬಲನಿದ್ದರೆ ಅವನನ್ನು ತಮ್ಮ ಮನೆಗೇ ಕರೆಸಿಕೊಂಡು ಕಲಿಸುತ್ತಿದ್ದರು. ಆ ಕಾಲದಲ್ಲಿ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್‌ಗಳು ಇರಲಿಲ್ಲ. ಶಿಕ್ಷಕರ ಹೃದಯ ನಿಷ್ಕಲ್ಮಶವಾಗಿರುತ್ತಿತ್ತು. ಮಕ್ಕಳನ್ನು ಸುಶಿಕ್ಷಿತರಾಗಿಸಬೇಕು ಎಂಬ ಪರಿಶುದ್ಧ ಭಾವನೆಯೊಂದೇ ಅವರ ಮನದಲ್ಲಿರುತ್ತಿತ್ತು.
ಇಂದಿನ ಮಕ್ಕಳು ತಮ್ಮ ಟೀಚರ್ ಎದುರೇ ಸಿಗರೇಟ್ ಸೇದುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ! ಶಾಲೆಯಿಂದ ಹೊರಗೆ ಟೀಚರ್ ಹೇಳಿದಂತೆ ನಾನು ಕೇಳಬೇಕಿಲ್ಲ ಎಂಬ ಭಂಡತನ ಇದಕ್ಕೆ ಕಾರಣ. ಹಿಂದಿನ ಕಾಲದಲ್ಲಿ ವೈದ್ಯರು ಚಿಕಿತ್ಸೆ ಅಥವಾ ನಾನಾ ಪರೀಕ್ಷೆಗಳ ನೆಪದಲ್ಲಿ ನಮ್ಮನ್ನು ಸುಲಿಯುವುದಿಲ್ಲ ಎಂಬ ಧೈರ್ಯ ನಮಗೆ ಇರುತ್ತಿತ್ತು. ವೈದ್ಯರು ಏನು ಔಷಧ ಬರೆಯುತ್ತಿದ್ದರೋ ಅದೇ ಫೈನಲ್ ಆಗಿರುತ್ತಿತ್ತು. ವೈದ್ಯರನ್ನು ಕೂಡ ಜನರು ತಮ್ಮ ಕುಟುಂಬದ ವಿಸ್ತರಿತ ಭಾಗವೆಂದೇ ಭಾವಿಸುತ್ತಿದ್ದರು.
ಅದೇ ರೀತಿ, ಚರ್ಚ್‌ಗೆ ಹೋದರೆ ಕ್ರಿಶ್ಚಿಯನ್ ಆಗಿ ಬಿಡುತ್ತಾರೆ ಎಂಬ ಕಲ್ಪನೆಯನ್ನು ಆಗಿನ ಕಾಲದಲ್ಲಿ ಯಾರೂ ಇನ್ನೊಬ್ಬರ ಮನದಲ್ಲಿ ಬಿತ್ತುತ್ತಿರಲಿಲ್ಲ. “ಮಗನೇ, ಚರ್ಚ್‌ಗೆ ಹೋಗ ಬೇಡ. ಹೋದರೆ ನೀನೂ ಕ್ರಿಶ್ಚಿಯನ್ ಆಗಿಬಿಡ್ತೀಯಾ!" ಎಂದು ಯಾವ ಅಪ್ಪ-ಅಮ್ಮನೂ ಹೇಳುತ್ತಿರಲಿಲ್ಲ.
“ಮಗನೇ, ಮಸೀದಿಗೆ ಹೋಗಬೇಡ. ಹೋದರೆ ನೀನೂ ಮುಸ್ಲಿಂ ಆಗಿಬಿಡ್ತೀಯಾ!", “ಮಗನೇ, ದೇವಸ್ಥಾನಕ್ಕೆ ಹೋಗಬೇಡ. ಹೋದರೆ ಹಿಂದೂ ಆಗಿಬಿಡ್ತೀಯಾ" ಎಂದು ಯಾರೂ ಹೇಳುತ್ತಿರಲಿಲ್ಲ. ದುರದೃಷ್ಟವಶಾತ್ ಇಂದು ಅಂಥ ಭಯವನ್ನೂ ಮಕ್ಕಳಲ್ಲಿ ಬಿತ್ತಲಾಗು ತ್ತಿದೆ.
ಇಂಥ ಭಯದಿಂದಲೇ ದ್ವೇಷ ಬೆಳೆಯಲು ಆರಂಭವಾಗುತ್ತದೆ. ಇದನ್ನೆಲ್ಲ ನೋಡಿದರೆ ನಿಜಕ್ಕೂ ಆತಂಕವಾಗುತ್ತಿದೆ. ಇಂದು ಧರ್ಮದ ಜತೆಗೆ ಭಯವನ್ನು ಲಿಂಕ್ ಮಾಡುತ್ತಿರುವು ದನ್ನು ಎಲ್ಲರೂ ನೋಡುತ್ತಿದ್ದಾರೆ. ಪರೀಕ್ಷೆಯೇ ಇರಲಿ ಅಥವಾ ಚುನಾವಣೆಯೇ ಇರಲಿ, ನಾವು ಸಣ್ಣಪುಟ್ಟ ವಿಷಯಗಳಿಗೂ ಇಂದು ಹರಕೆ ಕಟ್ಟಿಕೊಳ್ಳುತ್ತೇವೆ. ಅಂದರೆ ಪಾಸಾ ಗುತ್ತೇವೋ ಇಲ್ಲವೋ ಅಥವಾ ಗೆಲ್ಲುತ್ತೇವೋ ಇಲ್ಲವೋ ಎಂದು ತುಂಬಾ ಭಯಪಡುತ್ತೇವೆ.
ಚೆನ್ನಾಗಿ ಓದಿದ್ದರೆ ಪಾಸಾಗುತ್ತೇವೆ ಎಂದು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವುದಕ್ಕೆ ಏನು ಅಡ್ಡಿ? ಅದೇ ರೀತಿ, ನಿಜವಾದ ಸಮಾಜಸೇವೆ ಮಾಡಿದ್ದರೆ ಚುನಾವಣೆಯಲ್ಲಿ ಗೆಲ್ಲುವ ಆತ್ಮವಿಶ್ವಾಸ ತನ್ನಿಂತಾನೇ ಬರುತ್ತದೆಯಲ್ಲವೇ? ಒಂದು ವೇಳೆ ಚುನಾವಣೆಯಲ್ಲಿ ಗೆದ್ದೇ ಬಿಟ್ಟರೂ ಮುಂದೆ ಆ ಯಶಸ್ಸು ಕೈತಪ್ಪಿ ಹೋದರೆ ಏನು ಮಾಡುವುದು ಎಂಬ ಭಯ ಶುರುವಾಗುತ್ತದೆ!
ನಿಮಗೆ ಗೊತ್ತಾ? ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಬಳಿ ಆರಂಭದಲ್ಲಿ ಸ್ವಂತ ಶೂ ಗಳಿರ ಲಿಲ್ಲ. ಓಟದ ಜಿಂಕೆ ಪಿ.ಟಿ.ಉಷಾ ಬಳಿ ಪ್ರಾಕ್ಟೀಸ್ ಮಾಡುವುದಕ್ಕೆ ಹಣವಿರಲಿಲ್ಲ. ಆದರೂ ಅವರು ಭಾರತೀಯ ಕ್ರೀಡಾಲೋಕದಲ್ಲಿ ಪವಾಡಗಳನ್ನು ಮಾಡಿದರು.
ತಮ್ಮಲ್ಲಿರುವ ಸಾಹಸ ಪ್ರವೃತ್ತಿ ಹಾಗೂ ಧೈರ್ಯದ ಮನೋಭಾವದಿಂದ ಸೋಲು ಅಥವಾ ಕೊರತೆಯ ಭಯವನ್ನು ಅವರು ಸೋಲಿಸಿದ್ದರು. ‘ಲಿಟ್ಲ್ ಮಾಸ್ಟರ್’ ಸಚಿನ್ ತೆಂಡೂ ಲ್ಕರ್‌ರನ್ನು ಮೈದಾನದಲ್ಲಿ ಎತ್ತರದ ಬೌಲರ್‌ಗಳು ಹೆದರಿಸುತ್ತಿದ್ದರು. ಆದರೆ ಸಚಿನ್ ಹೆದರದೆ ಅವರ ಬಾಲ್‌ಗೇ ಹಿಗ್ಗಾಮುಗ್ಗಾ ರನ್ ಹೊಡೆಯುತ್ತಿದ್ದರು.
ಗಡಿಯಲ್ಲಿ ನಮ್ಮ ಸೈನಿಕರು ಜೀವ ಕೊಡುವುದಕ್ಕೂ ಹಿಂದೆಮುಂದೆ ನೋಡುವುದಿಲ್ಲ. ಏಕೆಂದರೆ ಅವರೊಳಗೆ ಭಯವಿಲ್ಲ. ಸೇನೆಯಲ್ಲಿ ನೀಡುವ ತರಬೇತಿಯೇ ಅವರನ್ನು ನಿರ್ಭೀತರನ್ನಾಗಿಸುತ್ತದೆ. ನಿರ್ಭೀತಿಯ ಮೊದಲ ಪಾಠವನ್ನು ಮಕ್ಕಳಿಗೆ ಮನೆಯಲ್ಲೇ ಕಲಿಸಬೇಕು. ಸೈನಾ ನೆಹ್ವಾಲ್‌ರ ತಾಯಿ ಉಷಾ ರಾಣಿಯವರು ಈ ವಿಷಯದಲ್ಲಿ ನನಗೆ ಸ್ಪೂರ್ತಿ. ಆಕೆ ಸೈನಾಳಲ್ಲಿ ಕೆಚ್ಚೆದೆಯ ಧೈರ್ಯವನ್ನು ತುಂಬಿದರು.
ಹೀಗಾಗಿ ಜಾಗತಿಕ ಮಟ್ಟದಲ್ಲಿ ಸೈನಾ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು. ಗಾಂಧೀಜಿ ಯವರ ನಿರ್ಭೀತ ಅಹಿಂಸಾ ಚಳವಳಿಯನ್ನು ನೆನಪು ಮಾಡಿಕೊಳ್ಳಿ. ಅದು ಬ್ರಿಟಿಷ್ ಸಾಮ್ರಾಜ್ಯವನ್ನೇ ನಡುಗಿಸಿತ್ತು. ಸೂರ್ಯ ಮುಳುಗದ ದೇಶದ ಆಡಳಿತ ವ್ಯವಸ್ಥೆ ನಮ್ಮ ದೇಶದ ವೃದ್ಧ ಹೋರಾಟಗಾರನ ಅಹಿಂಸಾವಾದಕ್ಕೆ ಬೆಚ್ಚಿಬಿದ್ದಿತ್ತು. ಹೀಗಾಗಿ ಅಪ್ಪ-ಅಮ್ಮಂದಿರಿಗೆ ನನ್ನದೊಂದು ಮನವಿಯಿದೆ. ದಯವಿಟ್ಟು ನಿಮ್ಮ ಮಕ್ಕಳ ಮನಸ್ಸಿನಲ್ಲಿ ಭಯವನ್ನು ತುಂಬಬೇಡಿ!
ಅವರನ್ನು ನಿರ್ಭೀತಿಯಿಂದ ಬೆಳೆಸಿ. ನಾನಂತೂ ಸದಾ ಒಂದು ಸಿದ್ಧಾಂತವನ್ನು ನೆನಪಿ ನಲ್ಲಿಟ್ಟುಕೊಳ್ಳುತ್ತೇನೆ. ನೀನು ಏನಾದರೂ ಸಾಧಿಸಬೇಕು ಅಂತಿದ್ದರೆ ಮೊದಲು ನಿನ್ನೊಳ ಗಿನ ಭಯವನ್ನು ಹೊರಹಾಕು ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಏಕೆಂದರೆ, ಭಯವನ್ನು ಗೆದ್ದರೆ ಎಲ್ಲರನ್ನೂ ಗೆದ್ದಂತೆ!
(ಲೇಖಕರು ಹಿರಿಯ ಪತ್ರಿಕೋದ್ಯಮಿ)