ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Sudhakar Hosally Column: ಇಡೀ ವಿಶ್ವದಲ್ಲಿ ಗಣರಾಜ್ಯದ ಮೂಲವು ಭಾರತ ದೇಶವೇ

ಗಣರಾಜ್ಯವೆಂದರೆ, ದೇಶದ ಮುಖ್ಯಸ್ಥನನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಿ ಕೊಂಡು, ದೇಶದ ಆಡಳಿತವನ್ನು ಮುನ್ನಡೆಸುವ ಒಂದು ವಿಧಾನ. ಇಂಥ ಎಲ್ಲ ಮಾದರಿ ಗಳು ತಮ್ಮದೇ ವಾರಸುದಾರಿಕೆಯಿಂದ ಬಂದಂಥವು ಎಂಬುದಾಗಿ ಪಶ್ಚಿಮದ ಚಿಂತಕರು ಘೋಷಿಸಿಕೊಂಡಿ ದ್ದಾರೆ.

ಇಡೀ ವಿಶ್ವದಲ್ಲಿ ಗಣರಾಜ್ಯದ ಮೂಲವು ಭಾರತ ದೇಶವೇ

-

Ashok Nayak
Ashok Nayak Jan 26, 2026 7:47 AM

ವಿಶ್ವಗುರು

ಡಾ.ಸುಧಾಕರ ಹೊಸಳ್ಳಿ

ಜಗತ್ತು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿರುವ ಯೋಗದ ಮಾದರಿಯು ಭಾರತದ ಕೊಡುಗೆ. ಇದನ್ನು ಆಧುನಿಕ ಜಗತ್ತು ಯಾವುದೇ ಚರ್ಚೆ ಅಥವಾ ವಿವಾದವಿಲ್ಲದೆ ಒಪ್ಪುತ್ತದೆ. ಅಧ್ಯಾತ್ಮದ ಮೂಲಕ ಮನುಷ್ಯನನ್ನು ಶ್ರೇಷ್ಠವಾಗಿಸುವ ಈ ಕಲೆಯು ಭಾರತದ ಮಣ್ಣಿನದ್ದು ಎಂಬುದು ಹೆಮ್ಮೆ. 2014ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಯಲ್ಲಿ ಯೋಗದ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಪ್ರಸ್ತಾಪವನ್ನು 2015ರಲ್ಲಿ ಒಪ್ಪಿಕೊಂಡ ವಿಶ್ವಸಂಸ್ಥೆಯು ಜೂನ್ 21ರಂದು ‘ವಿಶ್ವ ಯೋಗದಿನ’ ಎಂದು ಘೋಷಣೆ ಮಾಡಿತು.

ಇಂದು ಭಾರತ ದೇಶದಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಕಾರಣವೂ ಇದೆ. ಅದೆಂದರೆ- ಭಾರತವು ಜಗತ್ತಿನ ಬಲಾಢ್ಯ ರಾಷ್ಟ್ರಗಳ ಸ್ವೀಕೃತ ಪಟ್ಟಿಯಲ್ಲಿರುವ ಅಗ್ರಗಣ್ಯ ರಾಷ್ಟ್ರವಾಗಿರುವುದು ಮತ್ತು ಜಗತ್ತು ನಿರ್ಲಕ್ಷ್ಯ ಮಾಡಲಾಗದಂಥ ಸ್ಥಾನವನ್ನು ಅಲಂಕರಿಸಿರುವುದು.

ಗಣರಾಜ್ಯವೆಂದರೆ, ದೇಶದ ಮುಖ್ಯಸ್ಥನನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಿ ಕೊಂಡು, ದೇಶದ ಆಡಳಿತವನ್ನು ಮುನ್ನಡೆಸುವ ಒಂದು ವಿಧಾನ. ಇಂಥ ಎಲ್ಲ ಮಾದರಿ ಗಳು ತಮ್ಮದೇ ವಾರಸುದಾರಿಕೆಯಿಂದ ಬಂದಂಥವು ಎಂಬುದಾಗಿ ಪಶ್ಚಿಮದ ಚಿಂತಕರು ಘೋಷಿಸಿಕೊಂಡಿದ್ದಾರೆ.

ಭಾರತವನ್ನು ಆಕ್ರಮಿಸಿದ ಮೆಕಾಲೆ ಶಿಕ್ಷಣ ಕ್ರಮವಂತೂ ಭಾರತೀಯತೆಯನ್ನು, ಭಾರತ ತತ್ವವನ್ನು, ಭರತಭೂಮಿಯ ಶ್ರೇಷ್ಠತೆಯನ್ನು ಕುಬ್ಜಪಥದಲ್ಲಿ ನಿಲ್ಲಿಸಿ, ಎಲ್ಲವನ್ನೂ ಪಶ್ಚಿಮದ ಕೃಪೆಯಲ್ಲಿ ನೋಡುವಂಥ ಮನಸ್ಥಿತಿಯನ್ನು ಮತ್ತು ಐತಿಹಾಸಿಕ ಮರು ಸೃಷ್ಟಿಯ ದಾಖಲಾತಿಗಳನ್ನು ಭಾರತೀಯ ಯುವಜನರಿಗೆ ಒಪ್ಪಿಸಿ ಬಿಟ್ಟಿತು.

ಪಾಶ್ಚಿಮಾತ್ಯ ಪಾರುಪತ್ಯವನ್ನು ಪ್ರೀತಿಸುವ, ಭಾರತದ ಶೌರ್ಯ-ಪರಂಪರೆ-ಹೆಚ್ಚುಗಾರಿಕೆ ಗಳನ್ನು ಸಹಜವಾಗಿ ಕಡೆಗಣಿಸುವಷ್ಟರ ಮಟ್ಟಿಗೆ ಇತಿಹಾಸದ ಘಟನಾವಳಿ ಗಳನ್ನು ಮರುಕಟ್ಟಿಕೊಡಲಾಯಿತು. ಆದರೆ ಇಂದು ಜಗತ್ತಿನ ಯಾವುದೇ ರಾಷ್ಟ್ರಗಳು ತಮ್ಮ ನಡುವೆ ಉದ್ವಿಗ್ನತೆ ಉಂಟಾದರೆ, ಶಾಂತಿ ಸ್ಥಾಪನೆಗಾಗಿ ಭಾರತದ ಮಧ್ಯಸ್ಥಿಕೆಯನ್ನು ಬಯಸುತ್ತಿವೆ.

ಇದನ್ನೂ ಓದಿ: Dr Sudhakar Hosalli Column: ಮತಾಂತರವಾದರೆ ಮೋಸ ಹೋಗುತ್ತೀರಿ

ಬಹಳ ಮುಖ್ಯವಾಗಿ ಭಾರತವನ್ನು ನಂಬುವ ಮತ್ತು ಭಾರತದ ಪಾಲುದಾರಿಕೆಯನ್ನು ಗೌರವಿಸುವ ನಡವಳಿಕೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಇವು ಭಾರತದ ಪ್ರಜೆಗಳು ಹೆಮ್ಮೆಪಡುವಂಥ ಸಂಗತಿಯೇ ಆಗಿವೆ. ಆದರೆ, ಭಾರತವು ತನ್ನ ಈಗಿನ ಸ್ಥಿತಿಗಿಂತಲೂ ಉತ್ಕೃಷ್ಟ ಸ್ಥಿತಿಯಲ್ಲಿ ಇದ್ದುದು ವಾಸ್ತವ. ಜಗತ್ತು ಅನೇಕ ಮೊದಲುಗಳನ್ನು ಭಾರತ ದಿಂದಲೇ ಎರವಲುಪಡೆದಿದೆ.

ನಾಗರಿಕತೆಯಿಂದ ಮೊದಲ್ಗೊಂಡು ವಿಶ್ವಶಾಂತಿಯ ತತ್ವಗಳವರೆಗೆ ಅನೇಕ ಸಂಗತಿಗಳನ್ನು ಭಾರತವೇ ಜಗತ್ತಿಗೆ ಮಾದರಿಯಾಗಿ ನೀಡಿದೆ. ಇದು ಕೇವಲ ಕಾಲ್ಪನಿಕ ಪ್ರಶಂಸೆ ಅಲ್ಲ. ಭಾರತದ ಮೂಲಸತ್ವವು ಹಿರಿದಾದುದು,

ಶ್ರೀಮಂತಿಕೆಯುಳ್ಳದ್ದು. ಉದಾಹರಣೆಗೆ, ಗಣರಾಜ್ಯ ಮಾದರಿಯನ್ನು ಭಾರತವು ಅಥೆನ್ಸ್ ಮತ್ತು ಸ್ಪಾಟದಿಂದ ಗುರುತಿಸಿಕೊಂಡಿದೆ ಮತ್ತು ಗಣರಾಜ್ಯ ಎಂಬುದನ್ನು ಆಧುನಿಕ ಅದರಲ್ಲೂ ಸಂವಿಧಾನೋತ್ತರ ಭಾರತದಲ್ಲಿ ಮಾತ್ರ ಕಾಣಬಹುದು ಎಂದು ನಂಬಿಸ ಲಾಗಿದೆ.

ವಾಸ್ತವವಾಗಿ, ಐತಿಹಾಸಿಕ ಭಾರತದಲ್ಲಿ ಇಂಥ ಗಣರಾಜ್ಯದ ಆಡಳಿತವು ಯಶಸ್ವಿಯಾಗಿ ಜರುಗಿದ್ದನ್ನು ದಾಖಲೆಗಳು ಸಮರ್ಥಿಸುತ್ತವೆ. ಇಂಥ ಅನೇಕ ಮೊದಲುಗಳಿಗೆ ಭಾರತವು ವಾರಸುದಾರನಾಗಿದೆ. ಸುಮಾರು 6ನೇ ಶತಮಾನಕ್ಕೂ ಮುಂಚಿತವಾಗಿ ಭಾರತದಲ್ಲಿ ಗಣರಾಜ್ಯ ಮಾದರಿಯ ಆಡಳಿತವಿತ್ತು. ವೈದಿಕ ಯುಗದ ಸಭೆ ಮತ್ತು ಸಮಿತಿಗಳಿಗಿಂತ ಬಹಳ ಹಿಂದೆಯೇ ಇಂಥ ಮಾದರಿಯು ಅಸ್ತಿತ್ವದಲ್ಲಿತ್ತು.

Flag

ಆಗ ಜಗತ್ತಿನ ಇತರೆಡೆ ಸಂಘಟಿತ ರಾಜಕೀಯ ಜೀವನದ ಕುರುಹುಗಳು ಇರಲಿಲ್ಲ. ಪ್ರಾಚೀನ ಭಾರತದಲ್ಲಿ ‘ಗಣ’ ಅಥವಾ ‘ಸಂಘ’ ಎಂಬ ಪದಗಳ ಮೂಲಕ ಗಣರಾಜ್ಯವನ್ನು ಗುರುತಿಸ ಲಾಗುತ್ತಿತ್ತು. ಲಿಚ್ಛವಿ ರಾಜ್ಯದಲ್ಲಿ ಗಣರಾಜ್ಯದ ಶ್ರೇಷ್ಠ ಆಡಳಿತವನ್ನು ಕಾಣಬಹುದಾಗಿದೆ. ಸರಕಾರದ ಮಾದರಿ ಕೇಂದ್ರೀಕೃತ ಮತ್ತು ವಿಕೇಂದ್ರೀಕೃತ ತತ್ವವನ್ನು ಅಳವಡಿಸಿಕೊಂಡಿ ದ್ದಕ್ಕೆ ದಾಖಲಾತಿಗಳು ಸಿಗುತ್ತವೆ.

ಅಂದಿನ ಗಣರಾಜ್ಯಗಳು ದೃಢವಾದ ಆಂತರಿಕ ಸಂಘಟನೆ, ವಿದೇಶಿ ಆಕ್ರಮಣ ಮತ್ತು ಸಾಮ್ರಾಜ್ಯಶಾಹಿಗಳಿಂದ ಒದಗುವ ಸವಾಲುಗಳನ್ನು ಎದುರಿಸಲು ಶಕ್ತವಾದ ಮಾರ್ಗ ಗಳನ್ನು ರೂಪಿಸಿಕೊಂಡಿದ್ದವು. ಈ ವ್ಯವಸ್ಥೆಯಲ್ಲಿ ಸಮಾನತೆಗೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಶೇಷವಾದ ಸ್ಥಾನವಿದ್ದುದನ್ನು ನೋಡಬಹುದು.

ಸಕ್ಯ ಸಂಸ್ಥಾನದ ಆಡಳಿತದಲ್ಲಿ ಯುವಜನರು ಮತ್ತು ಹಿರಿಯರನ್ನು ಸಮಾನವಾಗಿ ಪ್ರತಿ ನಿಧಿಸಲಾಗುತ್ತಿತ್ತು; ಹಿರಿಯರಿಗಾಗಿ ಕಿರಿಯರ ವಾಕ್ ಸ್ವಾತಂತ್ರ್ಯವನ್ನು ಕುಂಠಿತಗೊಳಿಸುತ್ತಿರ ಲಿಲ್ಲ ಎಂಬುದು ಸಾದೃಶ ಸತ್ಯವಾಗಿತ್ತು. ನ್ಯಾಯದ ಪರಿಕಲ್ಪನೆಯೂ ಭಾರತದ ಪ್ರಾಚೀನ ಗಣರಾಜ್ಯಗಳಲ್ಲಿ ಆಳವಾಗಿ ಬೇರೂರಿತ್ತು. ಒಕ್ಕೂಟ ನಿರ್ವಹಣೆಗಾಗಿ 18 ಜನರ ಮಂಡಳಿ ಯನ್ನು ರಚನೆ ಮಾಡಿಕೊಳ್ಳಲಾಗುತ್ತಿತ್ತು.

ಗೂಢಚರ್ಯೆಯ ಸಲಹೆ, ಸೇನೆಯ ಸಮರ್ಥ ನಿರ್ವಹಣೆಯು ಅವರಲ್ಲಿ ಗಟ್ಟಿಯಾಗಿದ್ದುದು ಕಾಣಿಸುತ್ತದೆ. ಯೋಗ ತತ್ವ: ಜಗತ್ತು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿರುವ ಯೋಗದ ಮಾದರಿಯು ಭಾರತದ ಕೊಡುಗೆ. ಇದನ್ನು ಆಧುನಿಕ ಜಗತ್ತು ಯಾವುದೇ ಚರ್ಚೆ ಅಥವಾ ವಿವಾದವಿಲ್ಲದೆ ಒಪ್ಪುತ್ತದೆ.

ಅಧ್ಯಾತ್ಮದ ಮೂಲಕ ಮನುಷ್ಯನನ್ನು ಶ್ರೇಷ್ಠವಾಗಿಸುವ ಈ ಕಲೆಯು ಭಾರತದ ಮಣ್ಣಿ ನದ್ದು ಎಂಬುದು ಹೆಮ್ಮೆ. 2014ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಯಲ್ಲಿ ಯೋಗದ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಪ್ರಸ್ತಾಪವನ್ನು 2015ರಲ್ಲಿ ಒಪ್ಪಿಕೊಂಡ ವಿಶ್ವಸಂಸ್ಥೆಯು ಜೂನ್ 21ರಂದು ‘ವಿಶ್ವ ಯೋಗದಿನ’ ಎಂದು ಘೋಷಣೆ ಮಾಡಿತು.

ಯೋಗವನ್ನು ವಿಶ್ವವ್ಯಾಪಿ ಆಚರಿಸುವ ಭಾರತದ ಪ್ರಸ್ತಾವಕ್ಕೆ 177 ರಾಷ್ಟ್ರಗಳು ಅನುಮೋದಿಸಿರುವುದು ಯೋಗದ ಮಹತ್ವವನ್ನು ಸಾಬೀತುಪಡಿಸುತ್ತದೆ. ‘ಯೋಗ’ ಎಂಬ ಪದವು ‘ಯುಜ್’ ಎಂಬ ಸಂಸ್ಕೃತ ಪದದಿಂದ ಬಂದಿರುವಂಥದ್ದು, ‘ಒಗ್ಗೂಡಿಸುವಿಕೆ’ ಎಂಬುದು ಇದರ ಅರ್ಥ. ಇದು ಸಾಮರಸ್ಯದ ಸೂಚಕವೂ ಹೌದು. ದೇಹವನ್ನು ಮನಸ್ಸಿನೊಂದಿಗೆ, ಮನಸ್ಸನ್ನು ಆತ್ಮದೊಂದಿಗೆ ಸಮನ್ವಯಗೊಳಿಸುವಲ್ಲಿ, ಸಂತೋಷದ ಸಮತೋಲಿತ ಮತ್ತು ತೃಪ್ತಿಕರ ಜೀವನವನ್ನು ಸಾಗಿಸುವಲ್ಲಿ ಯೋಗವು ಸಹಕಾರಿಯಾಗು ತ್ತದೆ.

ಭಾರತದಲ್ಲಿ ಯೋಗವು ತತ್ವಶಾಸ್ತ್ರ, ಮನೋವಿಜ್ಞಾನ, ಅಧ್ಯಾತ್ಮ, ಸಂಗೀತ, ಸಾಹಿತ್ಯ, ನೃತ್ಯ ಮತ್ತು ಇತರ ಕಲಾಪ್ರಕಾರಗಳಲ್ಲಿ ವೈಜ್ಞಾನಿಕವಾಗಿ ಮಿಳಿತಗೊಂಡಿದೆ. ಯೋಗದ ಉಲ್ಲೇಖ ವು ವೇದಗಳ ಕಾಲದಿಂದ ಪ್ರಾರಂಭವಾಗುತ್ತದೆ. ಕ್ರಿ.ಪೂ. 5000 ವರ್ಷಗಳ ಹಿಂದೆಯೇ ಯೋಗದ ಅಸ್ತಿತ್ವವಿದ್ದ ಬಗ್ಗೆ ಮಾಹಿತಿ ದೊರಕುತ್ತದೆ.

ಇನ್ನು ಸಿಂಧೂ ನದಿ ನಾಗರಿಕತೆಯ ಉತ್ಖನನದ ಸಂದರ್ಭದಲ್ಲಿ ಯೋಗಭಂಗಿಗಳನ್ನು ಬಿಂಬಿಸುವ ಕಲ್ಲಿನ ಮುದ್ರೆಗಳು ದೊರಕಿವೆ. ಯೋಗದ ಜ್ಞಾನವನ್ನು ಶಿವನು ಮೊದಲು ತನ್ನ ಪತ್ನಿ ಪಾರ್ವತಿಗೆ ನೀಡಿದ, ಅಲ್ಲಿಂದ ಮುಂದೆ ಅದು ಮನುಕುಲಕ್ಕೆ ಕೊಡುಗೆಯಾಗಿ ದಕ್ಕಿತು ಎಂದು ನಂಬಲಾಗಿದೆ.

ಯೋಗದ ಉಗಮ ಅಥವಾ ವಾರಸುದಾರಿಕೆಯು ಭಾರತವನ್ನು ಹೊರತುಪಡಿಸಿ ಜಗತ್ತಿನ ಬೇರಾವುದೇ ದೇಶದಿಂದ ಮಂಡನೆಯಾಗಿಲ್ಲದಿರುವುದು ದೃಢೀಕೃತ ಯಜಮಾನಿಕೆಯನ್ನು ಭಾರತಕ್ಕೆ ಮೀಸಲಾಗಿರಿಸಿದೆ. ವೈದ್ಯಕೀಯ ಶಾಸ್ತ್ರದ ಛಾಪುಗಳು: ವೈದ್ಯಶಾಸ್ತ್ರದ ಮಹತ್ವ ವನ್ನು ಒಪ್ಪಿಕೊಂಡಿರುವ ಪ್ರಪಂಚವು ವೈದ್ಯಲೋಕದ ಅನೇಕ ಸಂಶೋಧನೆಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದೆ.

ಈ ಕ್ಷೇತ್ರಕ್ಕೆ ಸಂಬಂಧಿಸಿದ ಪಶ್ಚಿಮದ ಅನೇಕ ಸಂಶೋಧನೆಗಳು ಜಗತ್ತನ್ನು ಆಳುತ್ತಿವೆ ಮತ್ತು ಇವು ಜಗತ್ತಿಗೆ ಆಧುನಿಕ ಆವಿಷ್ಕಾರ ನೀಡಿದ ಕೊಡುಗೆ ಎಂಬ ನಂಬಿಕೆ ವ್ಯಾಪಕ ವಾಗಿದೆ. ಆದರೆ, ಭಾರತಕ್ಕೆ ಸಂಬಂಧಪಟ್ಟಂತೆ ಪುರಾತನ ಕಾಲದಲ್ಲೇ ವೈದ್ಯಶಾಸ್ತ್ರದ ಪಟ್ಟುಗಳು ಕರಗತವಾಗಿದ್ದವು ಎಂಬುದು ಚಕಿತಗೊಳಿಸುವ ವಿಷಯ.

ಚರಕ ಮತ್ತು ಸುಶ್ರುತರನ್ನು ಭಾರತೀಯ ವೈದ್ಯಕೀಯ ಶಾಸ್ತ್ರದ ಪಿತಾಮಹರೆಂದು ಗುರುತಿಸಲಾಗಿದೆ. ಚರಕ ಸಂಹಿತೆ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿರುವ ಅನೇಕ ಸಂಗತಿಗಳು ಆಧುನಿಕ ವೈದ್ಯಲೋಕಕ್ಕೂ ಸವಾಲು ಎಸೆಯುತ್ತವೆ. ತರುವಾಯದಲ್ಲಿ ಇದು ವಿಸ್ತರಿಸ ಲ್ಪಟ್ಟು ವಿಶ್ವಕೋಶ ಗ್ರಂಥವೂ ಆಯಿತು ಹಾಗೂ ಅರೇಬಿಕ್, ಲ್ಯಾಟಿನ್ ಮತ್ತಿತರ ವಿದೇಶಿ ಭಾಷೆಗಳಿಗೆ ಅನುವಾದಿಸಲ್ಪಟ್ಟಿತು.

ಇನ್ನು ಶತಮಾನಗಳಷ್ಟು ಹಿಂದೆಯೇ ಇದ್ದ ಸುಶ್ರುತರನ್ನು ‘ಸ್ತ್ರಚಿಕಿತ್ಸೆಯ ಪಿತಾಮಹ’ ಎಂದು ಕರೆಯಲಾಗುತ್ತದೆ. ಇವರ ‘ಸುಶ್ರುತ ಸಂಹಿತ’ ಗ್ರಂಥದಲ್ಲಿ 300ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸಾ ವಿಧಾನಗಳು ಮತ್ತು ಅದರಲ್ಲಿ ಬಳಸಲಾಗುವ 120 ಉಪಕರಣಗಳ ಉಲ್ಲೇಖವಿದೆ.

ಈಗ ‘ರೈನೋ ಪ್ಲಾಸ್ಟಿ’ ಎಂದು ಕರೆಯಲಾಗುವ ಮೂಗಿನ ಪುನರ್‌ನಿರ್ಮಾಣ/ಸುರೂಪಕ ಚಿಕಿತ್ಸೆ, ಚರ್ಮದ ಕಸಿ, ಕಣ್ಣಿನ ಪೊರೆಯ ಸ್ತ್ರಚಿಕಿತ್ಸೆ ಮತ್ತು ಸಿಸೇರಿಯನ್ ಚಿಕಿತ್ಸೆ ಕುರಿತಾದ ಉಲ್ಲೇಖಗಳು ಇದರಲ್ಲಿ ಇದ್ದವು.

ನೌಕಾಶಾದ ಇತಿಹಾಸ: ಆಧುನಿಕ ಕಾಲಘಟ್ಟದಲ್ಲಿ ಯುದ್ಧ ಮತ್ತು ಬಾಹ್ಯ ಆಕ್ರಮಣ ಸಹಜ ಪ್ರಕ್ರಿಯೆಯಾಗಿದ್ದು, ಅಲ್ಲಲ್ಲಿ ಯುದ್ಧಗಳು ಘಟಿಸುತ್ತಿರುವುದನ್ನು ವಿಶ್ವವು ಸಾಕ್ಷೀ ಕರಿಸುತ್ತಿದೆ. ಈ ಕಾರಣಕ್ಕಾಗಿ ಎಲ್ಲ ರಾಷ್ಟ್ರಗಳು ಶಸ್ತ್ರಾಸ್ತ್ರಗಳನ್ನು ಹೆಚ್ಚಾಗಿ ಹೊಂದುವು ದಕ್ಕೆ ಆಸಕ್ತಿ ತೋರಿಸುತ್ತವೆ. ಬಲಾಢ್ಯ ರಾಷ್ಟ್ರಗಳಂತೂ ಪೈಪೋಟಿಗೆ ಬಿದ್ದು ಪರಮಾಣು ಪರೀಕ್ಷೆಗೆ ಮತ್ತು ಆಧುನಿಕ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಗಮನ ಕೊಟ್ಟಿವೆ.

ಆದರೆ ಭಾರತವು ಪ್ರಾಚೀನ ಕಾಲದಲ್ಲೇ ನೌಕಾಶಾಸ್ತ್ರದ ಜ್ಞಾನವನ್ನು ಹೊಂದಿದ್ದು, ಯುದ್ಧಕ್ಕೂ ಮತ್ತು ವ್ಯಾಪಾರಕ್ಕೂ ಅದನ್ನು ಬಳಸುತ್ತಿತ್ತು ಎಂಬುದು ವಿಶೇಷ. 2025ರ ಡಿಸೆಂಬರ್ 29ರಂದು ಭಾರತದಿಂದ ಒಮಾನ್‌ಗೆ ಪ್ರಯಾಣ ಬೆಳೆಸಿದ ಹಡಗೊಂದು, ಭಾರತದ ಪುರಾತನ ತಂತ್ರಜ್ಞಾನ ಮತ್ತು ಸಾಮರ್ಥ್ಯಕ್ಕೆ ನಿದರ್ಶನವಾಗಿದೆ.

ಯಾವುದೇ ಆಧುನಿಕ ಸಲಕರಣೆಗಳನ್ನು ಬಳಸದೆ, ಮರದ ಹಲಗೆಗಳು ಮತ್ತು ತೆಂಗಿನ ನಾರನ್ನು ಬಳಸಿ, ನೈಸರ್ಗಿಕ ರಾಳಗಳಿಂದ ರೂಪಿಸಲಾದ ಈ ಹಡಗನ್ನು ವಿದೇಶ ಪ್ರಯಾಣ ಕ್ಕೆ ಬಳಸಿದ್ದು, ಭಾರತದ ಪುರಾತನ ಜ್ಞಾನವನ್ನು ಜಗತ್ತಿನ ಮುಂದೆ ತೆರೆದಿಡುವ ಉದ್ದೇಶ ದಿಂದ.

ಲೋಹಶಾಸ್ತ್ರದ ಆಗಮನಕ್ಕೂ ಮೊದಲೇ ಭಾರತೀಯರು ಈ ಜ್ಞಾನವನ್ನು ಬಳಸಿ, ಪಶ್ಚಿಮ ಏಷ್ಯಾ, ಆಫ್ರಿಕಾ, ಆಗ್ನೇಯ ಏಷ್ಯಾ ದೇಶಗಳಿಗೆ ಪ್ರಯಾಣ ಮಾಡುತ್ತಿದ್ದರು ಎಂಬು ದನ್ನು ಈ ನಡೆಯು ಮರುದೃಢೀಕರಿಸಿದೆ. ಐಎನ್‌ಎಸ್‌ವಿ ಕೌಂಡಿನ್ಯ ಎಂಬ ಜಲಾಂತ ರ್ಗಾಮಿ ನೌಕೆಯು, ಅಜಂತಾ ಗುಹೆಗಳಲ್ಲಿ ಚಿತ್ರಿಸಲಾಗಿರುವ 5ನೇ ಶತಮಾನದ ಹಡಗಿನ ಮಾದರಿಯಾಗಿದೆ.

ವೈಮಾನಿಕ ಶಾಸ್ತ್ರದ ಯುಗ: ಜಗತ್ತಿನ ಸಂಕರ್ಪವನ್ನು ಕ್ಷಿಪ್ರವಾಗಿಸಿದ್ದು, ಅತ್ಯಂತ ಸರಳವಾಗಿಸಿದ್ದು ವಿಮಾನ ಹಾರಾಟ. ಇಂದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಡಿಮೆ ಸಮಯದಲ್ಲಿ ಪ್ರಯಾಣಿಸಲು, ಯುದ್ಧಸಾಮಗ್ರಿಗಳನ್ನು ಸಾಗಿಸಲು ಮತ್ತು ವ್ಯಾಪಾರ-ವ್ಯವಹಾರದ ಉದ್ದೇಶಕ್ಕೆ ಈ ವೈಮಾನಿಕ ಹಾರಾಟವು ಸಹಕಾರಿಯಾಗಿದೆ. ಶಕುನ ವಿಮಾನದ ಪರಿಕಲ್ಪನೆಯು, ರೆಕ್ಕೆ ಮತ್ತು ಬಾಲ ಹೊಂದಿದ ಹಕ್ಕಿಯಂತೆ ಹಾರುವುದರ ಪ್ರತೀಕವಾಗಿದೆ.

ಶಕುನ, ಸುಂದರ, ರುಕ್ಮ ಮತ್ತು ತ್ರಿಪುರ ಎಂಬ ವಿಮಾನದ ನಾಲ್ಕು ಮಾದರಿಗಳನ್ನು ಪ್ರಾಚೀನ ಭಾರತವು ತನ್ನದಾಗಿಸಿಕೊಂಡಿತ್ತು ಎನ್ನುತ್ತದೆ ‘ಯಂತ್ರ ಸರ್ವಸ್ವ’ ಎಂಬ ಮಹಾನ್ ಗ್ರಂಥ. ಭಾರದ್ವಾಜ ಮಹರ್ಷಿಯು ಮನುಕುಲದ ಒಳಿತಿಗಾಗಿ ಇದನ್ನು ರಚಿಸಿದರು ಎನ್ನಲಾಗಿದೆ.

ಸಂವಿಧಾನದ ತಳಹದಿ: ಭಾರತವು ಸಂವಿಧಾನದ ಮೂಲಭೂತ ಸ್ವರೂಪದ ನಿಯಮ ವನ್ನು (Basic Structure Doctrine) ಜರ್ಮನಿಯಿಂದ ಎರವಲು ಪಡೆದಿದೆ ಎನ್ನಲಾಗುತ್ತಿತ್ತು. ಆದರೆ 1973ರ ಕೇಶವಾನಂದ ಭಾರತಿ ವರ್ಸಸ್ ಕೇರಳ ಸರಕಾರ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ತೀರ್ಮಾನಿಸಿದ ‘ಬೇಸಿಕ್ ಸ್ಟ್ರಕ್ಚರ್’ ತತ್ವವನ್ನು, ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ ಒಂದಾದ ಸಿಂಗಾಪುರವು ತನ್ನ ಸಂವಿಧಾನಕ್ಕೆಂದು 2019 ರಲ್ಲಿ ಎರವಲು ಪಡೆದುಕೊಂಡಿದೆ.

ಪಾಕಿಸ್ತಾನ, ಉಗಾಂಡ ಮತ್ತು ಬಾಂಗ್ಲಾದೇಶಗಳೂ ಭಾರತದ ಈ ಮಾದರಿಯನ್ನೇ ಅನುಸರಿಸುತ್ತಿವೆ. ‘ಭಾರತದ ಸಂವಿಧಾನ ಕೇವಲ ಎರವಲು’ ಎನ್ನುವವರಿಗೆ ಇಂಥ ಪ್ರಕರಣಗಳು ಭಾರತದ ಸಂವಿಧಾನದ ಶ್ರೇಷ್ಠತೆಯನ್ನು ಮನವರಿಕೆ ಮಾಡಿಕೊಡುತ್ತವೆ.

1789ರಲ್ಲಿ ಸಂವಿಧಾನವನ್ನು ರಚಿಸಿಕೊಂಡ ಅಮೆರಿಕದಿಂದ, ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳ ಮಾದರಿಯನ್ನು ಎರವಲು ಪಡೆದುಕೊಳ್ಳಲಾಗಿದೆ ಎನ್ನಲಾಗು ತ್ತಿತ್ತು; ಆದರೆ ಜಗತ್ತಿಗೆ ಮೂಲಭೂತ ಹಕ್ಕುಗಳ ತತ್ವವನ್ನು ಕೊಡುಗೆಯಾಗಿ ನೀಡಿದ್ದು ಭಾರತವೇ. ಏಕೆಂದರೆ, ವೇದಗಳ ಕಾಲದಲ್ಲೇ ಸದರಿ ಮೂಲಭೂತ ಹಕ್ಕುಗಳ ಪರಿಕಲ್ಪನೆ ಯನ್ನು ಪ್ರಸ್ತಾಪಿಸಲಾಗಿದೆ.

"Nobady is superior or inferior. They're all brothers. Everyone ought to work towards the common good and advance collectively. Let your resolutions, hearts and minds be one'' ಎಂದು ಋಗ್ವೇದದಲ್ಲಿ ಉಲ್ಲೇಖಿಸಲಾಗಿದ್ದರೆ, “ವಸತಿ ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ಎಲ್ಲರೂ ಸಮಾನರು" ಎಂದು ಹೇಳುತ್ತದೆ ಯಜುರ್ವೇದ.

ಹೀಗೆ, ದೇಶವು ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ‘ಭಾರತದ ಮೊದಲು’ಗಳನ್ನು ಅಂಕಿ-ಅಂಶಗಳ ಮುಖಾಂತರವೇ ಸಮರ್ಥಿಸಿಕೊಳ್ಳಬಹುದು. ಸಮರ್ಥನೆ ಅನ್ನುವುದಕ್ಕಿಂತ ‘ಸತ್ಯದರ್ಶನ’ ಮಾಡಿಕೊಳ್ಳಬಹುದು. ಇಲ್ಲಿ ಉಲ್ಲೇಖಿಸ ಲಾಗಿರುವ ಸಂಗತಿಗಳನ್ನಲ್ಲದೆ, ಇನ್ನೂ ಅನೇಕ ತತ್ವಗಳನ್ನು ಭಾರತವು ಜಗತ್ತಿಗೆ ಕೊಡುಗೆ ಯಾಗಿ ನೀಡಿದೆ.

ಕಲೆ, ಸಂಸ್ಕೃತಿ, ಸಂಪನ್ನತೆಗಳು ಮಾತ್ರವಲ್ಲದೆ, ಜ್ಞಾನ-ವಿಜ್ಞಾನ- ತಂತ್ರಜ್ಞಾನ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ‘ಮೊದಲುಗಳು’ ಎನ್ನಬಹುದಾದ ಚಿಂತನೆಗಳನ್ನು ಒಳಗೊಂಡಿರುವುದು ಭಾರತದ ಹೆಮ್ಮೆ. ಇಡಿ ಜಗತ್ತು ಭಾರತವನ್ನು ಎತ್ತರದ ಸ್ಥಾನದಲ್ಲಿ ನೋಡುವುದು ಅದರ ಜ್ಞಾನ ಪರಂಪರೆಯ ಕಾರಣಕ್ಕಾಗಿ ಎಂಬುದು ನಿರ್ವಿವಾದ.

(ಈ ಲೇಖನಕ್ಕೆ ವಿವಿಧ ಗ್ರಂಥಗಳನ್ನು ಆಧರಿಸಲಾಗಿದೆ)

(ಲೇಖಕರು ಸಂವಿಧಾನತಜ್ಞರು)