ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rajnath Singh Column: ಜನರೇ ಪ್ರಥಮ ಆದ್ಯತೆಯಾಗಿರುವ ಗಣತಂತ್ರವಿದು

ರಾಜಕೀಯ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಸಾರ್ವಭೌಮತ್ವವನ್ನು ಸಾಧಿಸಲು ಸಾಧ್ಯ ವಾಗಿದೆಯಾದರೂ, ಗಣರಾಜ್ಯದ ಕಾರ್ಯವು ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಅವರ ಮಾತಿನ ಸೂಕ್ಷ್ಮವಾದ, ಆದರೆ ಅಷ್ಟೇ ಆಳವಾದ ಸಂದೇಶವಾಗಿತ್ತು. ಡಾ.ಪ್ರಸಾದ್ ಅವರು ಹೇಳಿದಂತೆ, ಭಾರತದ ಮುಂದಿರುವ ನಿಜವಾದ ಕಾರ್ಯವೆಂದರೆ ‘ನಮ್ಮ ಜನರಿಗೆ ಸ್ವಲ್ಪ ಮಟ್ಟಿಗೆ ಸಂತೋಷವನ್ನು ತರುವುದು ಮತ್ತು ಅವರು ಅನುಭವಿಸುತ್ತಿರುವ ಹೊರೆಗಳನ್ನು ಕಡಿಮೆ ಮಾಡುವುದು’.

ಜನರೇ ಪ್ರಥಮ ಆದ್ಯತೆಯಾಗಿರುವ ಗಣತಂತ್ರವಿದು

-

Ashok Nayak
Ashok Nayak Jan 26, 2026 6:58 AM

ಗಣತಂತ್ರ

ರಾಜನಾಥ್‌ ಸಿಂಗ್

1952ರ ಮೇ 16ರಂದು ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಮೊದಲ ಚುನಾಯಿತ ಸಂಸತ್ತನ್ನು ಉದ್ದೇಶಿಸಿ ಮಾತನಾಡುವಾಗ, ಆ ಕ್ಷಣದ ಐತಿಹಾಸಿಕ ಮಹತ್ವವನ್ನು ಒತ್ತಿ ಹೇಳಿದರು. ಇದರೊಂದಿಗೆ ಭಾರತದ ಪ್ರಯಾಣದ ಒಂದು ಹಂತ ಮಾತ್ರ ಮುಕ್ತಾಯವಾದಂತಾಗಿದೆ.

ಎರಡನೇ ಹಂತದಲ್ಲಿ, ಯಾವುದೇ ದೇಶ ಅಥವಾ ಅಲ್ಲಿನ ಜನರಿಗೆ ಅವರ ಮುಂದಿನ ಪ್ರಯಾಣದಲ್ಲಿ ‘ಯಾವುದೇ ವಿಶ್ರಾಂತಿ ಸ್ಥಳವಿರುವುದಿಲ್ಲ’ ಎಂದು ಅವರು ಸದಸ್ಯರಿಗೆ ನೆನಪಿಸಿದರು.

ರಾಜಕೀಯ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಸಾರ್ವಭೌಮತ್ವವನ್ನು ಸಾಧಿಸಲು ಸಾಧ್ಯ ವಾಗಿದೆಯಾದರೂ, ಗಣರಾಜ್ಯದ ಕಾರ್ಯವು ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಅವರ ಮಾತಿನ ಸೂಕ್ಷ್ಮವಾದ, ಆದರೆ ಅಷ್ಟೇ ಆಳವಾದ ಸಂದೇಶವಾಗಿತ್ತು. ಡಾ. ಪ್ರಸಾದ್ ಅವರು ಹೇಳಿದಂತೆ, ಭಾರತದ ಮುಂದಿರುವ ನಿಜವಾದ ಕಾರ್ಯವೆಂದರೆ ‘ನಮ್ಮ ಜನರಿಗೆ ಸ್ವಲ್ಪ ಮಟ್ಟಿಗೆ ಸಂತೋಷವನ್ನು ತರುವುದು ಮತ್ತು ಅವರು ಅನುಭವಿಸುತ್ತಿರುವ ಹೊರೆಗಳನ್ನು ಕಡಿಮೆ ಮಾಡುವುದು’.

ಈ ಮಾತು ಹೊಸ ಗಣರಾಜ್ಯದ ನೈತಿಕ ಉದ್ದೇಶವನ್ನು ವ್ಯಾಖ್ಯಾನಿಸಿತು. ಪ್ರಜಾಸತ್ತಾತ್ಮಕ ಆಡಳಿತದ ಹೃದಯಭಾಗದಲ್ಲಿ ಈ ನೈತಿಕ ಬಾಧ್ಯತೆಯನ್ನು ಇರಿಸುವ ಮೂಲಕ, ಡಾ. ಪ್ರಸಾದ್ ಅವರು ದೇಶ ಮತ್ತು ಅಲ್ಲಿನ ಜನರ ನಡುವಿನ ಸಂಬಂಧವನ್ನು ಮರುರೂಪಿಸಿ ದರು.

ಇದನ್ನೂ ಓದಿ: 77th Republic Day: 77ನೇ ಗಣರಾಜ್ಯೋತ್ಸವಕ್ಕೆ ಜಿಲ್ಲಾಕ್ರೀಡಾಂಗಣ ಸರ್ವರೀತಿಯಲ್ಲೂ ಸಜ್ಜು: ಗಮನ ಸೆಳೆಯಲಿದೆ ಫಲಪುಷ್ಪಪ್ರದರ್ಶನ

ಭಾರತವು ಇನ್ನು ಮುಂದೆ ಪ್ರಜೆಗಳ ದೇಶವಾಗಿರುವುದಿಲ್ಲ, ಬದಲಿಗೆ ನಾಗರಿಕರ ಗಣರಾಜ್ಯ ವಾಗಿರಲಿದೆ- ರಾಜಕೀಯ ಧ್ವನಿಯಲ್ಲಿ ಸಮಾನತೆ ಹೊಂದಿರಲಿದೆ, ಸಂವಿಧಾನಕ್ಕೆ ಬದ್ಧ ವಾಗಿರುತ್ತದೆ ಮತ್ತು ಹಂಚಿಕೆಯ ರಾಷ್ಟ್ರೀಯ ಪ್ರಯಾಣದಲ್ಲಿ ಸಹಪ್ರಯಾಣಿಕ ನಾಗಿರುತ್ತದೆ ಎಂದ ಹೇಳಿದ್ದರು.

ಈ ಹಿನ್ನೆಲೆಯಲ್ಲಿ, ಭಾರತೀಯ ಗಣರಾಜ್ಯವು ಕೇವಲ ಸ್ವಾತಂತ್ರ್ಯದಿಂದ ಹುಟ್ಟಿದಂಥದ್ದಲ್ಲ, ಬದಲಿಗೆ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವವನ್ನು ಸ್ಥಾಪಿಸಿದ ಪ್ರಜ್ಞಾಪೂರ್ವಕ ಸಾಂವಿಧಾನಿಕ ಆಯ್ಕೆಯಿಂದ ಅದು ಜನ್ಮ ತಳೆದಿದೆ. ಪ್ರಜಾಪ್ರಭುತ್ವವನ್ನು ಸಾಮಾನ್ಯವಾಗಿ ‘ಜನರ, ಜನರಿಂದ ಮತ್ತು ಜನರಿಗಾಗಿ ಇರುವ ಸರಕಾರ’ ಎಂದು ಸಂಕ್ಷಿಪ್ತವಾಗಿ ಅರ್ಥೈಸ ಲಾಗುತ್ತದೆ- ಈ ನುಡಿಗಟ್ಟು ಪ್ರಜಾ ಪ್ರಭುತ್ವದ ಮೂಲ ತತ್ತ್ವಶಾಸ್ತ್ರವನ್ನು ಸೆರೆ ಹಿಡಿಯುತ್ತದೆ.

ಸಂವಿಧಾನದ ಅಂಗೀಕಾರದೊಂದಿಗೆ ‘ಜನರ’ ತತ್ವವು ಸಾಕಾರಗೊಂಡಿತು, ಇದು ನಾಗರಿಕ ರಿಗೆ ಸಾರ್ವಭೌಮತ್ವವನ್ನು ನೀಡಿತು ಮತ್ತು ರಾಜ್ಯದ ಅಧಿಕಾರವನ್ನು ಸಾಂವಿಧಾನಿಕ ಮಿತಿಗಳಿಗೆ ಒಳಪಡಿಸಿತು. 1952ರ ಮೊದಲ ಸಾರ್ವತ್ರಿಕ ಚುನಾವಣೆಗಳಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ಪ್ರತಿಯೊಬ್ಬ ವಯಸ್ಕ ಭಾರತೀಯನಿಗೆ, ಅವರ ಹಿನ್ನೆಲೆಯನ್ನು ಲೆಕ್ಕಿಸದೆ, ಸಮಾನ ರಾಜಕೀಯ ಧ್ವನಿಯನ್ನು ನೀಡಿದಾಗ ‘ಜನರಿಂದ’ ಎಂಬ ತತ್ವವು ಅಭಿವ್ಯಕ್ತವಾಯಿತು.

ಆದರೆ, ‘ಜನರಿಗಾಗಿ’ ಮೂರನೆಯ ತತ್ವವು ನಾಗರಿಕರಿಗೆ ಕಲ್ಯಾಣ ಮತ್ತು ಯೋಗಕ್ಷೇಮ ವನ್ನು ಒದಗಿಸುವ ಸರಕಾರದ ನಿರಂತರ ಬಾಧ್ಯತೆಯನ್ನು ಒಳಗೊಂಡಿದೆ. ಸರಕಾರದ ಪ್ರತಿಯೊಂದು ಕ್ರಮವೂ ಸಾಮಾಜಿಕ-ಆರ್ಥಿಕ ನ್ಯಾಯ ಮತ್ತು ಸಮಾಜದ ಅಂಚಿನಲ್ಲಿರುವ ಹಾಗೂ ಹಿಂದುಳಿದ ವರ್ಗಗಳ ಉನ್ನತಿಯ ಗುರಿಯತ್ತ ನಿರ್ದೇಶಿತವಾಗಿರಬೇಕು.

hand

ಜನರ ಕಲ್ಯಾಣದ ಉತ್ತೇಜನಕ್ಕಾಗಿ ಸಾಮಾಜಿಕ ವ್ಯವಸ್ಥೆಯನ್ನು ಭದ್ರಪಡಿಸುವುದನ್ನು ಭಾರತೀಯ ಸಂವಿಧಾನವು ಸರಕಾರಕ್ಕೆ ಕಡ್ಡಾಯಗೊಳಿಸುತ್ತದೆ. ಪ್ರಜಾಸತ್ತಾತ್ಮಕ ಗಣರಾಜ್ಯ ದ ಯಶಸ್ಸು ಆಡಳಿತವು ಜನರಿಗೆ ಎಷ್ಟರ ಮಟ್ಟಿಗೆ ಸೇವೆ ಸಲ್ಲಿಸುತ್ತದೆ ಎಂಬುದರ ಮೇಲೆ ನಿಂತಿದೆ.

ಪ್ರಜಾಸತ್ತಾತ್ಮಕ ನ್ಯಾಯಸಮ್ಮತತೆಯನ್ನು ಕಾರ್ಯವಿಧಾನಗಳಿಂದ ಮಾತ್ರವಲ್ಲದೆ, ಕಾರ್ಯ ಕ್ಷಮತೆಯಿಂದ ಕಾಪಾಡಬೇಕು- ಸಾಮಾಜಿಕ ಅಗತ್ಯಗಳಿಗೆ ಪ್ರತಿಕ್ರಿಯಿಸುವ, ಅಸಮಾನತೆ ಗಳನ್ನು ಕಡಿಮೆ ಮಾಡುವ ಮತ್ತು ಮಾನವ ಘನತೆಯನ್ನು ಎತ್ತಿ ಹಿಡಿಯುವ ಸರಕಾರದ ಸಾಮರ್ಥ್ಯದಿಂದ ಪ್ರಜಾಸತ್ತಾತ್ಮಕತೆಯನ್ನು ಕಾಯ್ದುಕೊಳ್ಳಬೇಕು.

ಗಣರಾಜ್ಯದ ಬಲವನ್ನು ಅದು ತನ್ನ ದುರ್ಬಲ ನಾಗರಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ಅಳೆಯಲಾಗುತ್ತದೆ.

ಭಾರತೀಯ ರಾಜಕೀಯ ಚಿಂತನೆಯು ಪ್ರಜಾಪ್ರಭುತ್ವದ ಬಗ್ಗೆ ಮಾನವ ಕೇಂದ್ರಿತ ತಿಳಿವಳಿಕೆಯನ್ನು ಸತತವಾಗಿ ಒತ್ತಿ ಹೇಳಿದೆ. ಪ್ರಾಚೀನ ಭಾರತದಲ್ಲಿ, ‘ಯೋಗ-ಕ್ಷೇಮ’ ಪರಿಕಲ್ಪನೆಯು ವ್ಯಕ್ತಿಯ ಯೋಗಕ್ಷೇಮ ಮತ್ತು ರಕ್ಷಣೆಯನ್ನು ಪ್ರತಿಪಾದಿಸುತ್ತಿತ್ತು. ಮಹಾತ್ಮ ಗಾಂಧಿಯವರ ‘ಸರ್ವೋದಯ’ದ ಕಲ್ಪನೆಯು ಎಲ್ಲರನ್ನು, ವಿಶೇಷವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯನ್ನು ಕಲ್ಪಿಸಿಕೊಂಡಿತ್ತು.

ದೀನದಯಾಳ್ ಉಪಾಧ್ಯಾಯ ಅವರ ‘ಏಕಾತ್ಮ ಮಾನವವಾದ’ವು ಅಭಿವೃದ್ಧಿ ವಿಚಾರ ದಲ್ಲಿ ಸಮಗ್ರ, ಮಾನವ ಕೇಂದ್ರಿತ ಕಾರ್ಯವಿಧಾನವನ್ನು ನಿರೂಪಿಸಿತು. ಸಮಕಾಲೀನ ಆಡಳಿತದಲ್ಲಿ, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ದೃಷ್ಟಿಕೋನವು ಎಲ್ಲರನ್ನೂ ಒಳಗೊಂಡ, ಜನ ಕೇಂದ್ರಿತ ಆಡಳಿತಕ್ಕೆ ಶಾಶ್ವತವಾದ ಸೈದ್ಧಾಂತಿಕ ಬದ್ಧತೆಯನ್ನು ಪ್ರತಿಧ್ವನಿಸುತ್ತದೆ.

ದುರ್ಬಲ ಮತ್ತು ಅತ್ಯಂತ ದುರ್ಬಲರ ಏಳಿಗೆಗೆ ಆದ್ಯತೆ ನೀಡುವ ಮೂಲಕ ಸರಕಾರವು ಸಕ್ರಿಯವಾಗಿ ‘ಜನರಿಗಾಗಿ’ ಕೆಲಸ ಮಾಡುವ ಈ ಬದ್ಧತೆಯು ಕಳೆದ 12 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಗಮನಾರ್ಹ ಫಲಿತಾಂಶಗಳನ್ನು ನೀಡಿದೆ.

ಸರಕಾರವು ಸೈದ್ಧಾಂತಿಕ ದೃಷ್ಟಿಕೋನವನ್ನು ಸ್ಪಷ್ಟವಾದ ಕ್ರಿಯೆಯಾಗಿ ಪರಿವರ್ತಿಸಿದೆ, ಸಮಾಜದ ಮೂಲೆ ಮೂಲೆ ಮತ್ತು ಎಲ್ಲಾ ವರ್ಗವನ್ನು ತಲುಪುವ ಸಮಗ್ರ ಅಭಿವೃದ್ಧಿ ಯನ್ನು ಕಾಯ್ದುಕೊಂಡಿದೆ.

ಸಂವಿಧಾನದ ಭಾಗ 4ರ ಅಡಿಯಲ್ಲಿ, ನ್ಯಾಯಯುತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. 29 ಕಾರ್ಮಿಕ ಕಾನೂನು ಗಳನ್ನು 4 ಸಮಗ್ರ ಕಾರ್ಮಿಕ ಸಂಹಿತೆಗಳಾಗಿ ಕ್ರೋಡೀಕರಿಸುವ ಮೂಲಕ, ಸಾಂವಿಧಾನಿಕ ನಿರ್ದೇಶನಕ್ಕೆ ಅನುಗುಣವಾಗಿ ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣವನ್ನು ಉತ್ತೇಜಿಸಲು ಸಮರ್ಥ ಹೊಸ ಕಾರ್ಮಿಕ ನೀತಿಗಳನ್ನು ಜಾರಿಗೊಳಿಸಿದೆ.

ಕಳೆದ ದಶಕದಲ್ಲಿ, ‘ಜನರಿಗಾಗಿ’ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಉತ್ತೇಜಿಸಲು ಸಾಮಾಜಿಕ-ಆರ್ಥಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶ್ವ ಬ್ಯಾಂಕಿನ ‘ಸ್ಪ್ರಿಂಗ್ 2025 ಬಡತನ ಮತ್ತು ಸಮಾನತೆ ಸಂಕ್ಷಿಪ್ತ ವರದಿ’ಯ ಪ್ರಕಾರ, ಕಳೆದ ದಶಕದಲ್ಲಿ, ಭಾರತವು 171 ದಶಲಕ್ಷ ಜನರನ್ನು ತೀವ್ರ ಬಡತನದಿಂದ ಮೇಲೆತ್ತಿದೆ.

ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಗುರಿಯ ಭಾಗವಾಗಿ ಆರ್ಥಿಕವಾಗಿ ದುರ್ಬಲ ವರ್ಗ ಗಳಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ಒದಗಿಸ ಲಾಗಿದೆ.

ಘನತೆ ಮತ್ತು ಸಮಾನತೆಯನ್ನು ಎತ್ತಿ ಹಿಡಿಯಲು ಮತ್ತು ಐತಿಹಾಸಿಕವಾಗಿ ಹಿಂದುಳಿದ ಗುಂಪುಗಳಿಗೆ ಅಗತ್ಯ ನ್ಯಾಯವನ್ನು ಒದಗಿಸಲು ‘ವಿಕಲಚೇತನರ ಹಕ್ಕುಗಳ ಕಾಯ್ದೆ-2016’ ಮತ್ತು ‘ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ-2019’ನಂಥ ಪ್ರಗತಿ ಪರ ಶಾಸನಗಳನ್ನು ಜಾರಿಗೆ ತರಲಾಗಿದೆ.

ಈ ಜನಕೇಂದ್ರಿತ ಆಡಳಿತದ ಅತ್ಯಂತ ಶಕ್ತಿಶಾಲಿ ಉದಾಹರಣೆಗಳಲ್ಲಿ ‘ಸ್ವಚ್ಛ ಭಾರತ ಯೋಜನೆ’ (ಎಸ್‌ಬಿಎಂ) ಸಹ ಒಂದಾಗಿದೆ. ಈ ಅಭಿಯಾನವು ತಳಮಟ್ಟದಲ್ಲಿ ‘ಜನರಿಗೋ ಸ್ಕರ’ ಎಂಬ ಪ್ರಜಾಸತ್ತಾತ್ಮಕ ಆದರ್ಶವನ್ನು ಕಾರ್ಯಗತಗೊಳಿಸಿತು. ಇದು ನೈರ್ಮಲ್ಯ ಉಪಕ್ರಮಕ್ಕಿಂತ ಹೆಚ್ಚಾಗಿ, ಮಾನವ ಘನತೆ, ಸಾರ್ವಜನಿಕ ಆರೋಗ್ಯ, ಮಹಿಳೆಯರ ಸುರಕ್ಷತೆ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯನ್ನು ಕೇಂದ್ರೀಕರಿಸಿದ ರಾಷ್ಟ್ರವ್ಯಾಪಿ ಜನಾಂದೋಲನವಾಯಿತು.

ದೈನಂದಿನ ಜೀವನದ ಮೇಲೆ ಆಳವಾದ ಪರಿಣಾಮದ ಹೊರತಾಗಿಯೂ ದೀರ್ಘಕಾಲ ದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಮಸ್ಯೆಯನ್ನು ಪರಿಹರಿಸುವ ಮೂಲಕ, ‘ಸ್ವಚ್ಛ ಭಾರತ ಯೋಜನೆ’ಯು ಈ ಶತಮಾನದ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಜನ-ನೇತೃತ್ವದ ಮತ್ತು ಜನ-ಚಾಲಿತ ಸಾರ್ವಜನಿಕ ಆಂದೋಲನವಾಗಿ ಹೊರಹೊಮ್ಮಿದೆ.

ಅವಕಾಶಗಳು ಮತ್ತು ಸ್ಥಾನಮಾನದಲ್ಲಿ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಅವಕಾಶ ವಂಚಿತರು, ದುರ್ಬಲರು, ವೃದ್ಧರು ಹಾಗೂ ವೈಯಕ್ತಿಕ ದುರಂತ/ದುರದೃಷ್ಟ ಎದುರಿಸುತ್ತಿರುವವರ ಕಲ್ಯಾಣವು ಅಗತ್ಯವಾಗಿದೆ. ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಅಡಿಯಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರವನ್ನು ಒದಗಿಸಿರುವುದು ಇದಕ್ಕೆ ಉದಾಹರಣೆಯಾಗಿದೆ.

ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಒದಗಿಸಲಾದ ‘ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ’ಯು ಕೇವಲ ಒಂದು ಸರಕಾರಿ ನೀತಿಗಿಂತಲಕೂ ಮಿಗಿಲಾದ ವಿಶಾಲ ಗುರಿಯನ್ನು ಹೊಂದಿದೆ. ಇದು ಕರಾಳ ಸಮಯದಲ್ಲಿ ಘನತೆ ಮತ್ತು ಭರವಸೆಯನ್ನು ಸೂಚಿಸುತ್ತದೆ. ಇದರ ಶೇ.53ರಷ್ಟು ಫಲಾನುಭವಿಗಳು ಮಹಿಳೆಯರು ಹಾಗೂ ಶೇ.72ಕ್ಕೂ ಹೆಚ್ಚು ಫಲಾನುಭವಿಗಳು ಗ್ರಾಮೀಣ ಭಾರತದವರಾಗಿದ್ದಾರೆ.

ಈ ಯೋಜನೆಯು ದೇಶಾದ್ಯಂತ ಜೀವವಿಮೆಗೆ ಜನರ ಪ್ರವೇಶವನ್ನು ವಿಸ್ತರಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ ಭಾರತ’ಕ್ಕೆ ಕರೆ ನೀಡಿದಾಗ, ಅದು ಕೇವಲ ಆರ್ಥಿಕ ಘೋಷಣೆಯಾಗಿರಲಿಲ್ಲ, ಬದಲಿಗೆ ವೈಯಕ್ತಿಕ ಮಟ್ಟದಲ್ಲಿ ಸ್ವಾವಲಂಬನೆಯ ವಿಸ್ತರಣೆಯಾಗಿತ್ತು.

‘ಮುದ್ರಾ ಯೋಜನೆ’ ಮತ್ತು ‘ಸ್ಕಿಲ್ ಇಂಡಿಯಾ ಯೋಜನೆ’ಯಂಥ ಉಪಕ್ರಮಗಳ ಮೂಲಕ, ನಾಗರಿಕರು ಸ್ವಾವಲಂಬಿಗಳಾಗಲು, ಉದ್ಯಮಶೀಲರಾಗಲು ಮತ್ತು ತಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಲು ಸಬಲೀಕರಣಕ್ಕೆ ಒತ್ತು ನೀಡಲಾಯಿತು. ಸ್ವಾವಲಂಬನೆಯು ವೈಯಕ್ತಿಕ ಸ್ವಾಯತ್ತತೆಯ ತಿರುಳಾಗಿದೆ ಮತ್ತು ಈ ಮಧ್ಯಸ್ಥಿಕೆಗಳು ಅದಕ್ಕೆ ನಿರ್ಣಾಯಕ ಉತ್ತೇಜನವನ್ನು ನೀಡಿವೆ.

ಅಂತೆಯೇ, ‘ಆಯುಷ್ಮಾನ್ ಭಾರತ್’ ಯೋಜನೆಯು ಗೌರವಯುತ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ರಕ್ಷಣೆಯ ಲಭ್ಯತೆಯನ್ನು ಖಾತ್ರಿಪಡಿಸುವ ಮೂಲಕ ಸ್ವಾತಂತ್ರ ವನ್ನು ವಿಸ್ತರಿಸಲು ಪ್ರಯತ್ನಿಸಿತು. ಇದೇ ವೇಳೆ ‘ಜನ್ ಧನ್’ ಯೋಜನೆಯು ಲಕ್ಷಾಂತರ ಬಡವರನ್ನು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ತಂದಿತು.

ಲೇವಾದೇವಿಗಾರರ ಮೇಲಿನ ಅವಲಂಬನೆಯಿಂದ ಅವರನ್ನು ಮುಕ್ತಗೊಳಿಸುವ ಮೂಲಕ, ಅದು ದೀರ್ಘಕಾಲದಿಂದ ಸಾಂಸ್ಥಿಕ ಬೆಂಬಲದಿಂದ ಹೊರಗುಳಿದವರಿಗೆ ಆರ್ಥಿಕ ಭದ್ರತೆ ಮತ್ತು ವೈಯಕ್ತಿಕ ಘನತೆಯನ್ನು ಮರುಸ್ಥಾಪಿಸಿತು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಯನ್ನು ಒದಗಿಸುವ ‘ನಾರಿ ಶಕ್ತಿ ವಂದನ್ ಅಧಿನಿಯಮ’ದಲ್ಲಿ ‘ಜನರಿಗಾಗಿ’ ಆಡಳಿತದ ಇದೇ ಪ್ರಜಾಸತ್ತಾತ್ಮಕತೆಯು ಬಲವಾಗಿ ಅಭಿವ್ಯಕ್ತಿಗೊಂಡಿದೆ. ಈ ಸುಧಾರಣೆಯು ಸಾರ್ವ ಭೌಮತ್ವವನ್ನು ಚಲಾಯಿಸುವ ಸಾಮಾಜಿಕ ತಳಹದಿಯನ್ನು ವಿಸ್ತರಿಸುವ ಮೂಲಕ ‘ಜನರನ್ನು’ ಬಲಪಡಿಸುತ್ತದೆ.

ಇದು ಪ್ರಾತಿನಿಧಿಕ ಸಂಸ್ಥೆಗಳನ್ನು ಸಮಾಜದ ವೈವಿಧ್ಯವನ್ನು ಹೆಚ್ಚು ಪ್ರತಿಬಿಂಬಿಸುವ ಮೂಲಕ ‘ಜನರಿಂದ’ ತತ್ವವನ್ನು ಶ್ರೀಮಂತಗೊಳಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಆಡಳಿತದ ಫಲಿತಾಂಶಗಳು ಜೀವಂತ ಅನುಭವಗಳಲ್ಲಿ ನೆಲೆಗೊಂಡ ದೃಷ್ಟಿಕೋನಗಳಿಂದ ರೂಪುಗೊಳ್ಳುತ್ತವೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಇದು ‘ಜನರಿಗಾಗಿ’ ತತ್ವವನ್ನು ಮುನ್ನಡೆಸುತ್ತದೆ.

ಆದ್ದರಿಂದ ಭಾರತದ ಪ್ರಜಾಸತ್ತಾತ್ಮಕ ಪಯಣವು ಒಂದು ಸ್ಥಿರ ಸಾಂವಿಧಾನಿಕ ಸಾಧನೆ ಯಲ್ಲ, ಬದಲಿಗೆ ನಿರಂತರ ರಾಷ್ಟ್ರೀಯ ಯೋಜನೆಯಾಗಿದೆ. ಸಂವಿಧಾನ ಮತ್ತು ಚುನಾವಣೆಗಳು ಪ್ರಜಾಪ್ರಭುತ್ವದ ಚೌಕಟ್ಟನ್ನು ಸ್ಥಾಪಿಸಿದರೆ, ಗಣರಾಜ್ಯವು ಸ್ಪಂದನಶೀಲ ಆಡಳಿತ, ನೈತಿಕ ನಾಯಕತ್ವ ಮತ್ತು ಜನರ ಆಕಾಂಕ್ಷೆಗಳೊಂದಿಗೆ ನಿರಂತರ ತೊಡಗಿಸಿ ಕೊಳ್ಳುವಿಕೆಯ ಮೂಲಕ ಬದುಕುತ್ತದೆ.

ಸರಕಾರವು ‘ಜನರಿಗಾಗಿ’ ಆಡಳಿತ ನಡೆಸಲು ಅಚಲವಾಗಿ ಬದ್ಧವಾಗಿರುವಾಗ ಮಾತ್ರ ಪ್ರಜಾಪ್ರಭುತ್ವವು ತನ್ನ ನೈಜ ಅರ್ಥದಲ್ಲಿ ಉಳಿಯುತ್ತದೆ.

ಗಣರಾಜ್ಯದ ಶಕ್ತಿಯು ಅದರ ಸಂಸ್ಥೆಗಳ ಸಹಿಷ್ಣುತೆಯಲ್ಲಿ ಮಾತ್ರವಲ್ಲದೆ ಆಡಳಿತವನ್ನು ಅದರ ಜನರ ಜೀವಂತ ವಾಸ್ತವತೆಗಳೊಂದಿಗೆ ಜೋಡಿಸುವ ನಿರಂತರ ಪ್ರಯತ್ನದಲ್ಲಿ ಅಡಗಿದೆ. ಸ್ವಾತಂತ್ರ್ಯವು ಸರ್ವರಿಗೂ ಘನತೆ, ಅವಕಾಶ ಮತ್ತು ನ್ಯಾಯವನ್ನು ಒದಗಿಸಿ ಕೊಡಬೇಕೆಂಬ ಸಾಂವಿಧಾನಿಕ ಭರವಸೆಯನ್ನು ನವೀಕರಿಸಲು ಪ್ರತಿ ಪೀಳಿಗೆಗೆ ಕರೆ ನೀಡಲಾಗುತ್ತದೆ.

ಭಾರತೀಯ ಗಣರಾಜ್ಯವು ಒಂದು ಪೂರ್ಣಗೊಂಡ ಯೋಜನೆಯಲ್ಲ; ಇದು ಹಂಚಿಕೆಯ ಜವಾಬ್ದಾರಿಯಾಗಿದೆ, ಪ್ರಜಾಪ್ರಭುತ್ವದ ಭಾಗವಹಿಸುವಿಕೆಯಿಂದ ಅದು ಉಳಿಯುತ್ತದೆ ಮತ್ತು ಸರಕಾರವು ತನ್ನ ನಾಗರಿಕರಿಗೆ ಎಷ್ಟು ನಿಷ್ಠೆಯಿಂದ ಸೇವೆ ಸಲ್ಲಿಸುತ್ತದೆ ಎಂಬುದರ ಮೇಲೆ ಅದು ನಿರ್ಧಾರಿತವಾಗುತ್ತದೆ.

ದೇಶವು 77ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ನಾಗರಿಕರು ಇಂದು ಸರಕಾರದ ಆಡಳಿತದ ಕೇಂದ್ರಬಿಂದುವಾಗಿದ್ದಾರೆ ಎಂದು ಹೇಳಬಹುದು. ಇದೇ ವೇಳೆ, ಭಾರತೀಯ ಗಣರಾಜ್ಯವು ಮುನ್ನಡೆಯುತ್ತಿದೆ, ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತಿದೆ, ಆರ್ಥಿಕ ಸೇರ್ಪಡೆಯನ್ನು ಸಕ್ರಿಯಗೊಳಿಸುತ್ತಿದೆ ಮತ್ತು ಸಂವಿಧಾನದ ಕಲ್ಯಾಣ ಆಧಾರಿತ ಪ್ರಜಾಪ್ರಭುತ್ವದ ಆಶಯವನ್ನು ಬಲಪಡಿಸುತ್ತಿದೆ.

(ಲೇಖಕರು ಕೇಂದ್ರ ರಕ್ಷಣಾ ಸಚಿವರು)