ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ravi Sajangadde Column: ಆರ್.ಗಣೇಶ್:‌ ಭೂಷಣಕೆ ಭೂಷಣ ಪದ್ಮಭೂಷಣ !

ಶ್ರೀಯುತರಿಗೆ ಈ ಪ್ರಶಸ್ತಿ ಸಂದಿರುವುದು, ಆ ಪ್ರಶಸ್ತಿಯ ಗೌರವಾದರವನ್ನೇ ನೂರ್ಮಡಿ ಹೆಚ್ಚಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಇದು ಗಣೇಶರ ದಿವ್ಯ ಸ್ಮರಣಶಕ್ತಿ, ಕನ್ನಡ-ಇಂಗ್ಲಿಷ್-ಸಂಸ್ಕೃತ ಹೀಗೆ ವಿವಿಧ ಭಾಷೆಗಳಲ್ಲಿನ ಪಾಂಡಿತ್ಯ, ವೈವಿಧ್ಯಮಯ ವಿಚಾರಗಳ ಕುರಿತಾದ ಪ್ರಬುದ್ಧ ಜ್ಞಾನ, ಅಪರೂಪದ ‘ಅವಧಾನ ಕಲೆ’ ಮುಂತಾದವಕ್ಕೆ ಸಂದ ನಿಜ ವಾದ ಆದರ. ಗಣೇಶರ ಈ ಮಹಾನ್ ಸಾಧನೆಗೆ ಅಂತಃಕರಣಪೂರ್ವಕವಾದ ಅಕ್ಷರನಮನ ವಿದು.

ಆರ್.ಗಣೇಶ್:‌ ಭೂಷಣಕೆ ಭೂಷಣ ಪದ್ಮಭೂಷಣ !

-

Ashok Nayak
Ashok Nayak Jan 28, 2026 5:48 AM

ಮುಕುಟಮಣಿ

ರವೀ ಸಜಂಗದ್ದೆ

ವಿಸ್ತರಿತ ವಿಷಯ ವ್ಯಾಖ್ಯಾನ, ತಿಳಿಯಾದ ಹಾಸ್ಯಪ್ರಜ್ಞೆ, ಅದ್ಭುತ ಸಮಯಪ್ರಜ್ಞೆ, ನೂತನ ಅಂಗಗಳ ಆವಿಷ್ಕಾರ ಮತ್ತು ಸೇರ್ಪಡೆ, ಬಹುಶಾಸ್ತ್ರ ವ್ಯವಹಾರ ಪರಾಮರ್ಶೆ ಮುಂತಾದವು ಗಣೇಶರ ಅವಧಾನಗಳಲ್ಲಿ ಹಾಸುಹೊಕ್ಕಾಗಿರುವ ವಿಶೇಷ ಸಂಗತಿಗಳು. ಅವಧಾನದಲ್ಲಿ ಕಷ್ಟಸಾಧ್ಯ ಎಂದೇ ಭಾವಿಸಲಾಗಿದ್ದ ಚಿತ್ರ ಕವಿತ್ವವನ್ನು ಅಳವಡಿಸಿಕೊಂಡು ಸೈ ಎನಿಸಿಕೊಂಡಿರುವ ಅಪರೂಪದ ಸಾಧಕ ಇವರು.

ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಹೆಮ್ಮೆಯ ಕುಡಿ ಶತಾವಧಾನಿ ಆರ್.ಗಣೇಶರು ಇನ್ನು ಮುಂದೆ ‘ಪದ್ಮಭೂಷಣ’ ಶತಾವಧಾನಿ ಆರ್.ಗಣೇಶ್!

ಶ್ರೀಯುತರಿಗೆ ಈ ಪ್ರಶಸ್ತಿ ಸಂದಿರುವುದು, ಆ ಪ್ರಶಸ್ತಿಯ ಗೌರವಾದರವನ್ನೇ ನೂರ್ಮಡಿ ಹೆಚ್ಚಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಇದು ಗಣೇಶರ ದಿವ್ಯ ಸ್ಮರಣಶಕ್ತಿ, ಕನ್ನಡ-ಇಂಗ್ಲಿಷ್-ಸಂಸ್ಕೃತ ಹೀಗೆ ವಿವಿಧ ಭಾಷೆಗಳಲ್ಲಿನ ಪಾಂಡಿತ್ಯ, ವೈವಿಧ್ಯಮಯ ವಿಚಾರಗಳ ಕುರಿತಾದ ಪ್ರಬುದ್ಧ ಜ್ಞಾನ, ಅಪರೂಪದ ‘ಅವಧಾನ ಕಲೆ’ ಮುಂತಾದವಕ್ಕೆ ಸಂದ ನಿಜ ವಾದ ಆದರ. ಗಣೇಶರ ಈ ಮಹಾನ್ ಸಾಧನೆಗೆ ಅಂತಃಕರಣಪೂರ್ವಕವಾದ ಅಕ್ಷರನಮನ ವಿದು.

ಮನಸ್ಸಿನ ಏಕಾಗ್ರತೆಯೇ ಅವಧಾನ. ಸ್ಮರಣೆ, ಸ್ಪೂರ್ತಿ, ಬುದ್ಧಿ ಮತ್ತು ಆಶುಕವಿತ್ವದ ಶಕ್ತಿ ಗಳಿಂದ ನಡೆಸುವ ವಿದ್ವತ್ಪೂರ್ಣ ಕಲೆಯೇ ಅವಧಾನ ಕಲೆ. ಪೃಚ್ಛಕ ಪಂಡಿತರು ಡ್ಡುವ ವಿವಿಧ ಸಮಸ್ಯೆಗಳಿಗೆ ಯಥೋಚಿತವಾಗಿ, ಆಶುವಾಗಿ, ಛಂದೋಬದ್ಧ ಪದ್ಯಗಳ ರೂಪದಲ್ಲಿ ಪರಿಹಾರ ನೀಡುವುದು ಈ ಕಲೆಯ ವಿಶೇಷ.

‘ಧಾರಣ’ ಮತ್ತು ‘ಪೂರಣ’ ಇವು ಅವಧಾನದ ಮೂಲಧಾತುಗಳು. ಸಮಸ್ಯೆಗಳನ್ನು ನಾಲ್ಕು ಸುತ್ತುಗಳಲ್ಲಿ ಸ್ವಾರಸ್ಯಕರವಾಗಿ ಪರಿಹರಿಸುವುದು ‘ಪೂರಣ’ವಾದರೆ, ಸಮಸ್ಯೆ ಮತ್ತು ಹಿಂದಿನ ಸುತ್ತುಗಳಲ್ಲಿ ನೀಡಿರುವ ಪರಿಹಾರ ಪಾದಗಳನ್ನು ನೆನಪಿನಲ್ಲಿಟ್ಟು ಮುಂದುವರಿಸುವುದು ‘ಧಾರಣ’.

ಇವೆಲ್ಲವುಗಳ ಮಧ್ಯೆ ಅಪ್ರಸ್ತುತ ಪೃಚ್ಛಕರು ಅವಧಾನಿಗಳ ಆಲೋಚನೆಗಳನ್ನು ಭಂಗಪಡಿ ಸಲು ನಾನಾ ರೀತಿಯಲ್ಲಿ ಪ್ರಶ್ನಿಸುತ್ತಾ ಚೇಷ್ಟೆ ಮಾಡುತ್ತಿದ್ದರೂ ಶಾಂತಚಿತ್ತರಾಗಿದ್ದು ಕೊಂಡು ಎಲ್ಲರಿಗೂ ಉತ್ತರಿಸುವುದೇ ಈ ಅವಧಾನ ಕಲೆಯ ವೈಶಿಷ್ಟ್ಯ.

ಇದನ್ನೂ ಓದಿ: Ravi Sajangadde Column: ಬ್ಯಾಲೆಟ್‌- ಇವಿಎಂ ಜಗಳದಲ್ಲಿ ನಾಡು ಬಡವಾಗದಿರಲಿ

ಅವಧಾನಗಳಲ್ಲಿ ಅನೇಕ ವಿಧಗಳಿದ್ದರೂ, ‘ಅಷ್ಟಾವಧಾನ’ ಮತ್ತು ‘ಶತಾವಧಾನ’ಗಳು ಖ್ಯಾತಿ ಪಡೆದಿವೆ. ಅಷ್ಟಾವಧಾನದಲ್ಲಿ 8 ಸಮಸ್ಯೆಗಳನ್ನೂ, ಶತಾವಧಾನದಲ್ಲಿ 100 ಸಮಸ್ಯೆ ಗಳನ್ನೂ ಪರಿಹರಿಸುವ ಚಾಕಚಕ್ಯತೆಯನ್ನು ಹೊಂದಿರಬೇಕು; ಕೊನೆಯಲ್ಲಿ ಪೃಚ್ಛಕರ ಪ್ರಶ್ನೆಗಳಿಗೆ ಪರಿಹಾರಗಳು ಒದಗಿದಾಗ ಅವಧಾನವು ಪೂರ್ಣವಾಗುತ್ತದೆ.

ಶಾಸ್ತ್ರ ಮತ್ತು ಕಾವ್ಯ, ವಾಗ್ದೇವಿಯ ಎರಡು ಮಾರ್ಗಗಳು. ಶಾಸ್ತ್ರವು ಬೌದ್ಧಿಕ ಸಾಮರ್ಥ್ಯ ದಿಂದಲೂ, ಕಾವ್ಯಪ್ರಕಾರವು ಪ್ರತಿಭಾ ವಿಲಾಸದಿಂದಲೂ ಒಲಿಯುತ್ತದೆ" ಎನ್ನುತ್ತದೆ ಸಂಸ್ಕೃತದ ಶ್ಲೋಕವೊಂದು. ಈ ಎರಡೂ ಮಾರ್ಗಗಳನ್ನು ಒಲಿಸಿಕೊಂಡ ಕೆಲವೇ ಸಾಧಕ ರಲ್ಲಿ ಆರ್.ಗಣೇಶ್ ಅಗ್ರಗಣ್ಯರು. ನಮ್ಮ ನಾಡಿನಿಂದ ಮತ್ತು ಜನಮಾನಸದಿಂದ ಮರೆ ಯಾಗುತ್ತಿದ್ದ ಅವಧಾನ ಕಲೆಗೆ ಮತ್ತೆ ಜೀವ-ಭಾವವನ್ನು ತುಂಬಿ, ಆ ಕಲೆಯನ್ನು ಜನಾನು ರಾಗಿಯಾಗಿಸಿದ ಕೀರ್ತಿ ಗಣೇಶರದ್ದು.

ವ್ಯಕ್ತಿಯೊಬ್ಬರು ಉನ್ನತಸ್ತರದ ಸೃಜನಶೀಲ ಕವಿಯಾಗಿರಬ ಹುದು ಅಥವಾ ವಾಗ್ಮಿ ಯಾಗಿರಬಹುದು ಅಥವಾ ಲೇಖಕರಾಗಿರಬಹುದು- ಅಚ್ಚರಿಯೆಂದರೆ ಗಣೇಶರು ಈ ಮೂರೂ ಮಾರ್ಗಗಳಲ್ಲಿ ಸರ್ವೋತ್ತಮರು!

ಪ್ರತಿಭೆ, ವಿದ್ವತ್ತು, ಪರಿಶ್ರಮ, ಬೋಧನೆ ಮತ್ತು ರಂಜನೆಯ ಒಟ್ಟಂದದ ಈ ಕಲೆಯನ್ನು ಪುನರುಜ್ಜೀವನಗೊಳಿಸಿ, ಪೋಷಿಸಿ, ಬೆಳೆಸಿ, ಆ ಮೂಲಕ ಅವಧಾನಕ್ಕೆ ಪೂರ್ಣತೆ ಮತ್ತು ಸಾತತ್ಯವನ್ನು ನೀಡಿದ ಹೆಗ್ಗಳಿಕೆ ಗಣೇಶ್ ಅವರದ್ದು. ಹತ್ತನೆಯ ವಯಸ್ಸಿನಿಂದಲೇ ಸಾಹಿತ್ಯಾಸಕ್ತಿಯನ್ನು ಮೈಗೂಡಿಸಿಕೊಂಡು, ಹದಿನಾರನೆಯ ವಯಸ್ಸಿನಲ್ಲಿ ಛಂದೋಬದ್ಧ ವಾಗಿ ಕವಿತೆ ಮತ್ತು ಆಶುಕವನಗಳನ್ನು ರಚಿಸತೊಡಗಿದ ಗಣೇಶರು, 19ನೇ ವಯಸ್ಸಿನಲ್ಲಿ ಸಂಸ್ಕೃತ ಭಾಷೆಯ ಅಷ್ಟಾವಧಾನ ಪುಸ್ತಕವನ್ನು ಆಕಸ್ಮಿಕವಾಗಿ ನೋಡಿ, ತಾವೂ ಅದನ್ನು ಸಿದ್ಧಿಸಿಕೊಳ್ಳುವ ಕುರಿತು ಆಲೋಚಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.

R ganesh shatavadhani R

1981ರ ನವೆಂಬರ್ 9ರಿಂದ ಗೆಳೆಯರ ಬಳಗದಲ್ಲಿ ಪ್ರಾರಂಭಿಸಿದ ಅಷ್ಟಾವಧಾನವನ್ನು ಅವರು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಕಲೆಯಲ್ಲಿ ಹಂತಹಂತ ವಾಗಿ ಮತ್ತಷ್ಟು ಪರಿಣತಿ ಸಾಧಿಸಿ, ಷ್ಟಾವಧಾನದಿಂದ ಶತಾವಧಾನದವರೆಗೆ ಹೆಮ್ಮರವಾಗಿ ಬೆಳೆದುನಿಂತ ಕೀರ್ತಿ ಗಣೇಶರದ್ದು.

ವಿಸ್ತರಿತ ವಿಷಯ ವ್ಯಾಖ್ಯಾನ, ತಿಳಿಯಾದ ಹಾಸ್ಯಪ್ರಜ್ಞೆ, ಅದ್ಭುತ ಸಮಯಪ್ರಜ್ಞೆ, ನೂತನ ಅಂಗಗಳ ಆವಿಷ್ಕಾರ ಮತ್ತು ಸೇರ್ಪಡೆ, ಬಹುಶಾಸ್ತ್ರ ವ್ಯವಹಾರ ಪರಾಮರ್ಶೆ ಮುಂತಾ ದವು ಗಣೇಶರ ಅವಧಾನಗಳಲ್ಲಿ ಹಾಸುಹೊಕ್ಕಾಗಿರುವ ವಿಶೇಷ ಸಂಗತಿಗಳು. ಅವಧಾನ ದಲ್ಲಿ ಕಷ್ಟಸಾಧ್ಯ ಎಂದೇ ಭಾವಿಸಲಾಗಿದ್ದ ಚಿತ್ರಕವಿತ್ವವನ್ನು ಅಳವಡಿಸಿಕೊಂಡು ಸೈ ಎನಿಸಿಕೊಂಡಿರುವ ಅಪರೂಪದ ಸಾಧಕ ಇವರು.

‘ಬುದ್ಧಿಮಾರ್ಗದಿಂದ ಪ್ರಜ್ಞೆ ಹರಿದಾಗ ಶಾಸ್ತ್ರ, ಹೃದಯದಿಂದ ಹರಿದಾಗ ಕಾವ್ಯ, ಎರಡ ಕ್ಕೂ ಒಂದೇ ಮೂಲ’ ಎನ್ನುವ ಇವರ ಸೊಗಸಾದ ವಿವರಣೆ ಕೇಳುಗರನ್ನು ರೋಮಾಂಚನ ಗೊಳಿಸುತ್ತದೆ.

ಗಣೇಶರ ಮೇಲೆ ಪ್ರಭಾವ ಬೀರಿದವರು ಅವರ ತಂದೆ ಶಂಕರ ನಾರಾಯಣ ಅಯ್ಯರ್ ಮತ್ತು ತಾಯಿ ಅಲಮೇಲಮ್ಮನವರು. ರಾಮಾಯಣ, ಮಹಾಭಾರತಗಳನ್ನು ಓದುತ್ತಾ ಅವುಗಳ ಲ್ಲಿನ ಶ್ರೇಷ್ಠ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆದ ಗಣೇಶರು, ಸಂಸ್ಕೃತಿ ಗೆ ಸಂವೇದನೆ, ಸ್ಪಂದನ ಇದ್ದಾಗ ಎಲ್ಲವೂ ಚೆಂದ ಮತ್ತು ಸುಲಲಿತ ಎಂದು ಬಲವಾಗಿ ನಂಬಿ, ಆಚರಣೆಯಲ್ಲಿ ತೋರಿಸಿದವರು.

“ನಾಟಕ, ಚರ್ಚಾಸ್ಪರ್ಧೆ ಮತ್ತಿತರ ಬೌದ್ಧಿಕ ಸ್ಪರ್ಧೆಗಳಲ್ಲಿ ಅಮ್ಮನ ಒತ್ತಾಸೆಯಿಂದಾಗಿ ಭಾಗಿಯಾದುದರ ಪರಿಣಾಮ ನನ್ನ ವ್ಯಕ್ತಿತ್ವ ರೂಪುಗೊಂಡಿತು" ಎಂದು ಗಣೇಶರು ಹೇಳು ವಾಗ ಅವರ ಕಂಗಳ ತುಂಬಾ ದಿವ್ಯಕಾಂತಿಯ ಹೊಳಪು!

ಬಹುಭಾಷಾ ವಿದ್ವಾಂಸರಾದ ಗಣೇಶರು ಕಾವ್ಯಮೀಮಾಂಸೆ, ಛಂದಶ್ಶಾಸ, ವೇದಾಂತ ಉಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಭಾರತೀಯ ತತ್ವಶಾಸ್ತ್ರ, ಅಲಂಕಾರ ಶಾಸ್ತ್ರ, ವ್ಯಾಕರಣ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿರುವು ದರ ಜತೆಗೆ, ಸಂಗೀತ, ನೃತ್ಯ, ಚಿತ್ರಕಲೆಗಳಲ್ಲೂ ಪ್ರಾವೀಣ್ಯವನ್ನು ಪಡೆದಿದ್ದಾರೆ.

ಕನ್ನಡ, ಸಂಸ್ಕೃತ, ತಮಿಳು, ತೆಲುಗು, ಹಿಂದಿ, ಪಾಲಿ, ಶೌರಸೇನಿ, ಮರಾಠಿ, ಬಂಗಾಳಿ ಮುಂತಾದ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ, ಇಂಗ್ಲಿಷ್, ಗ್ರೀಕ್, ಲ್ಯಾಟಿನ್, ಇಟಾಲಿ ಯನ್‌ನಂಥ ವಿದೇಶಿ ಭಾಷೆಗಳಲ್ಲೂ ಅಪಾರ ಪರಿಣತಿಯನ್ನು ಹೊಂದಿದ್ದಾರೆ.

ಏಕಕಾಲದಲ್ಲಿ ನೂರು ಜನರ ನೂರಾರು ಪ್ರಶ್ನೆಗಳಿಗೆ, ತರ್ಕಗಳಿಗೆ, ಕೀಟಲೆಗಳಿಗೆ ಉತ್ತರಿಸು ತ್ತಾ, ಕವಿತೆಗಳನ್ನು ರಚಿಸಿ ವಾಚಿಸುತ್ತಾ ಸಾಗುವ, ಶ್ರೋತೃಗಳಿಗೆ ರಸಾನುಭವ ನೀಡುವ ‘ಶತಾವಧಾನ’ ಕಲೆಯಲ್ಲಿ ಇವರು ಸಿದ್ಧಹಸ್ತರು. ಪ್ರಪಂಚದಾದ್ಯಂತ ಸುಮಾರು 1200ಕ್ಕೂ ಹೆಚ್ಚಿನ ಸಂಖ್ಯೆಯ ‘ಅಷ್ಟಾವಧಾನ’ಗಳನ್ನು ಮತ್ತು ಗಣನೀಯ ಸಂಖ್ಯೆಯ ‘ಶತಾವಧಾನ’ ಗಳನ್ನು ಅದ್ಭುತವಾಗಿ ನೆರವೇರಿಸಿರುವ ಗಣೇಶರು ಮೌಲಿಕ ಉಪನ್ಯಾಸಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನೀಡಿದ್ದಾರೆ, 75ಕ್ಕೂ ಹೆಚ್ಚು ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದಿದ್ದಾರೆ.

ಒಟ್ಟಂದದಲ್ಲಿ ಹೇಳುವುದಾದರೆ, ವಿಶ್ವವಿದ್ಯಾಲಯವೊಂದು ಮಾಡಬೇಕಾದಷ್ಟು ಕೆಲಸ ಗಳನ್ನು ಏಕಾಂಗಿಯಾಗಿ ಮಾಡಿರುವ ಹೆಗ್ಗಳಿಕೆ ಗಣೇಶರದ್ದು. ಈ ನಡೆದಾಡುವ ವಿಶ್ವಕೋಶ ಕ್ಕೆ ಈಗ ‘ಪದ್ಮಭೂಷಣ’ ಪ್ರಶಸ್ತಿ ಲಭಿಸಿರುವುದು ಅತ್ಯಂತ ಹೆಮ್ಮೆಯ ಮತ್ತು ಸಂಭ್ರಮದ ಸಂಗತಿ. ಗಣೇಶರು ತಪಸ್ಸು ಮಾಡಿ ಅವಧಾನ ಕಲೆಯ ಸಾಧನೆಯ ಶಿಖರವನ್ನು ಏರಿದರು ಎನ್ನುವುದಕ್ಕಿಂತ, ಅದನ್ನು ಚಂದ್ರನ ಷೋಡಷ ಕಲೆಯ ರೀತಿ ತಮ್ಮೊಳಗೆ ಧರಿಸಿ ಮೆರೆಸು ತ್ತಿರುವವರು ಎನ್ನುವುದು ಹೆಚ್ಚು ಸೂಕ್ತ.

ಭಾರತೀಯ ಸಾಹಿತ್ಯ-ಸಂಸ್ಕೃತಿ ಕ್ಷೇತ್ರಗಳಲ್ಲಿ ಅವರ ಸೇವೆ ಹೀಗೆಯೇ ಅನವರತ ಮುಂದು ವರಿಯಲಿ ಎಂಬುದು ಸಹೃದಯಿಗಳ ಆಶಯ. ತೆರೆಮರೆಯ ಮತ್ತು ಅರ್ಹ ಸಾಧಕರನ್ನು ಗುರುತಿಸಿ, ಅವರಿಗೆ ‘ಪದ್ಮ’ ಪುರಸ್ಕಾರವನ್ನು ನೀಡುವ ಪರಿಪಾಠವನ್ನು ಕೇಂದ್ರ ಸರಕಾರವು ಕಳೆದೊಂದು ದಶಕದಿಂದ ಅತ್ಯಂತ ವ್ಯವಸ್ಥಿತವಾಗಿ ಮತ್ತು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದೆ.

ಬಹುಶ್ರುತ ವಿದ್ವಾಂಸರಾದ ಡಾ.ಆರ್.ಗಣೇಶ್ ಅವರಿಗೆ ಈ ಪ್ರಶಸ್ತಿಯು ಅರ್ಹವಾಗಿಯೇ ಒಲಿದಿದೆ ಹಾಗೂ ತನ್ಮೂಲಕ ತನ್ನ ಗರಿಮೆ-ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಏಕೆಂದರೆ, ಕನ್ನಡದಲ್ಲಿ ಮರೆಯಾಗಿದ್ದ ಅದ್ಭುತ ಕಲಾಪ್ರಕಾರವೊಂದನ್ನು ಪುನರುಜ್ಜೀವನಗೊಳಿಸಿ, ಉತ್ಸಾಹಿ ತರುಣ ಅವಧಾನಿಗಳ ಪೀಳಿಗೆಯನ್ನೇ ಕಟ್ಟಿ ಬೆಳೆಸುತ್ತಿರುವ ಮಹಾನುಭಾವ ರಿವರು. ಡಾ.ಗಣೇಶರ ಸುಕಾರ್ಯಗಳು ಇನ್ನಷ್ಟು ಮತ್ತಷ್ಟು ವೃದ್ಧಿಯಾಗಲಿ ಎಂದು ಹಾರೈಸೋಣ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)