ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಗೊಂದಲ ಮೀರಿ ಸದನದಲ್ಲಿ ಒಗ್ಗಟ್ಟು ಸಾಧ್ಯವೇ ?

ಬೆಳಗಾವಿ ಅಧಿವೇಶನದ ದಿನಾಂಕ ಘೋಷಣೆಯ ಬಳಿಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕೂಗು ಶುರುವಾಗಿತ್ತು. ಈ ಕೂಗು ಒಂದು ಹಂತದಲ್ಲಿ ಸದನವನ್ನೇ ಮುಂದೂಡುವ ಅಥವಾ ಹೆಚ್ಚುವರಿ ಸಮಯ ನಡೆಸುವ ಮಟ್ಟಿಗಿತ್ತು. ಆದರೆ ಹೈಕಮಾಂಡ್ ನಾಯಕರ ಮಧ್ಯಸ್ಥಿಕೆ ಹಾಗೂ ‘ಸೂತ್ರ’ ಸಿದ್ಧಪಡಿಸುವ ಭರವಸೆಯ ಬಳಿಕ ತಾತ್ಕಲಿಕವಾಗಿ ಈ ಗೊಂದಲಕ್ಕೆ ಇತಿಶ್ರೀ ಹಾಡಿ ದಂತಾಗಿದೆ ಅಥವಾ ಗೊಂದಲ ಶಮನವಾಗಿರುವಂತೆ ಕೆಲವರು ‘ತೋರಿಸಿಕೊಳ್ಳುತ್ತಿದ್ದಾರೆ’.

Ranjith H Ashwath Column: ಗೊಂದಲ ಮೀರಿ ಸದನದಲ್ಲಿ ಒಗ್ಗಟ್ಟು ಸಾಧ್ಯವೇ ?

-

ಅಶ್ವತ್ಥಕಟ್ಟೆ

ಶಾಸಕಾಂಗ ವ್ಯವಸ್ಥೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೆ ತಮ್ಮ ಬಲಪ್ರದರ್ಶನ ಮಾಡುವು ದಕ್ಕೆ ಇರುವ ಬಹುದೊಡ್ಡ ಅಸ್ತ್ರವೆಂದರೆ ‘ಕಲಾಪ’. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕರ್ನಾಟಕದ ಸದನ ಕಲಾಪಗಳನ್ನು ಗಮನಿಸಿದರೆ, ಪಕ್ಷಗಳು ಈ ಅಸ್ತ್ರವನ್ನು ಬಳಸಿಕೊಳ್ಳುತ್ತಿಲ್ಲ ವೇನೋ ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ.

ಈ ಪ್ರಶ್ನೆಗಳ ಜತೆ ಜತೆಗೆ ಹಾಗೂ ರಾಜ್ಯ ಕಾಂಗ್ರೆಸ್'ನಲ್ಲಿರುವ ನಾಯಕತ್ವದ ಗೊಂದಲ, ಬಿಜೆಪಿ ಯಲ್ಲಿನ ರಾಜ್ಯಾಧ್ಯಕ್ಷರ ವಿಷಯದಲ್ಲಿನ ಭಿನ್ನಾಭಿಪ್ರಾಯಗಳ ಗೊಂದಲ-ಗೋಜಲುಗಳ ನಡುವೆ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ.

ಮೂರೂ ಪಕ್ಷಗಳು ತಮ್ಮದೇ ಆದ ಸಮಸ್ಯೆಯಲ್ಲಿರುವಾಗ ಈ ಎಲ್ಲವನ್ನೂ ಮೀರಿ ಯಾವ ರೀತಿ ಯಲ್ಲಿ ‘ಒಗ್ಗಟ್ಟು’ ಪ್ರದರ್ಶನ ಮಾಡಲಿವೆ ಎನ್ನುವುದೇ ಈ ಬಾರಿಯ ಅಧಿವೇಶನದ ಪ್ರಮುಖ ಆಕರ್ಷಣೆ ಎಂದರೆ ತಪ್ಪಾಗುವುದಿಲ್ಲ.

ಬೆಳಗಾವಿ ಅಧಿವೇಶನದ ದಿನಾಂಕ ಘೋಷಣೆಯ ಬಳಿಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕೂಗು ಶುರುವಾಗಿತ್ತು. ಈ ಕೂಗು ಒಂದು ಹಂತದಲ್ಲಿ ಸದನವನ್ನೇ ಮುಂದೂಡುವ ಅಥವಾ ಹೆಚ್ಚುವರಿ ಸಮಯ ನಡೆಸುವ ಮಟ್ಟಿಗಿತ್ತು. ಆದರೆ ಹೈಕಮಾಂಡ್ ನಾಯಕರ ಮಧ್ಯಸ್ಥಿಕೆ ಹಾಗೂ ‘ಸೂತ್ರ’ ಸಿದ್ಧಪಡಿಸುವ ಭರವಸೆಯ ಬಳಿಕ ತಾತ್ಕಲಿಕವಾಗಿ ಈ ಗೊಂದಲಕ್ಕೆ ಇತಿಶ್ರೀ ಹಾಡಿ ದಂತಾಗಿದೆ ಅಥವಾ ಗೊಂದಲ ಶಮನವಾಗಿರುವಂತೆ ಕೆಲವರು ‘ತೋರಿಸಿಕೊಳ್ಳುತ್ತಿದ್ದಾರೆ’.

ಇದನ್ನೂ ಓದಿ: Ranjith H Ashwath Column: ಉಪಾಹಾರ ಸಭೆಯಿಂದ ಕೊಟ್ಟ ಸಂದೇಶವೇನು ?

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನಡೆದ ಎರಡು ಬ್ರೇಕ್ ಫಾಸ್ಟ್ ಸಭೆಯ ಬಳಿಕ, ತಮ್ಮ ನಡುವಿನ ‘ಅಂತರ’ವನ್ನು ತಗ್ಗಿಸಿಕೊಂಡಿರುವುದಾಗಿ ಇಬ್ಬರೂ ಹೇಳಿಕೊಳ್ಳುತ್ತಿದ್ದಾರೆ. ಆದರೆ ದೆಹಲಿ ಮಟ್ಟದಲ್ಲಿನ ತಮ್ಮ ತಮ್ಮ ‘ಶಕ್ತಿ’ಬಳಸಿಕೊಂಡು ಹೈಕಮಾಂಡ್‌ನ ಸಮ್ಮುಖದಲ್ಲಿ ರಾಜ್ಯ ನಾಯಕತ್ವದ ಕುರಿತಾದ ಚರ್ಚೆಯನ್ನು ಜೀವಂತವಾಗಿರಿಸಿ ಕೊಳ್ಳುವ ಪ್ರಯತ್ನವನ್ನು ಅವರು ಈಗಲೂ ಮಾಡುತ್ತಿದ್ದಾರೆ.

ಈ ಪ್ರಯತ್ನದ ಭಾಗವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರಿಗೂ ‘ಸದನವನ್ನು ಮುಗಿಸಿಕೊಂಡು ದೆಹಲಿಗೆ ಬನ್ನಿ; ಸೋನಿಯಾ ಗಾಂಧಿ ಅವರ ಮುಂದೆಯೇ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ’ ಎನ್ನುವ ಸಂದೇಶವನ್ನು ರವಾನಿಸ ಲಾಗಿದೆ.

ಈ ಸಂದೇಶದ ಬಳಿಕ ಎರಡೂ ಕಡೆಯಲ್ಲಿಯೂ ತಮ್ಮದೇ ಆದ ಲೆಕ್ಕಾಚಾರಗಳನ್ನು ಹಾಕಿಕೊಳ್ಳು ತ್ತಿದ್ದರೂ, ‘ಸೂತ್ರ’ವೇನು ಎನ್ನುವ ಸ್ಪಷ್ಟನೆ ಸಿಗದಿರುವುದು ಕಾಂಗ್ರೆಸ್‌ನಲ್ಲಿನ ನಾಯಕತ್ವದ ಗೊಂದಲವನ್ನು ಬೂದಿ ಮುಚ್ಚಿದ ಕೆಂಡವಾಗಿರಿಸಿದೆ. ಆದರೆ ಈ ಗೊಂದಲವನ್ನೇ ಮುಂದಿಟ್ಟು ಕೊಂಡು ಬಿಜೆಪಿಯವರು ಅವಿಶ್ವಾಸ ನಿರ್ಣಯ ಮಂಡಿಸುವ ತಯಾರಿ ಆರಂಭಿಸಿರುವ ಸುಳಿವು ಸಿಗುತ್ತಿದ್ದಂತೆ, ಕಾಂಗ್ರೆಸ್ಸಿಗರು ಸದ್ಯಕ್ಕೆ ಒಗ್ಗಟ್ಟಿನ ಮಂತ್ರ ಪಠಿಸಲು ತೀರ್ಮಾನಿಸಿದ್ದಾರೆ.

ಅದರಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಎರಡೂ ಕಡೆಯ ಆಪ್ತರು ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಿದ್ದಾರೆ. ಈ ಮೂಲಕ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಗೆ ಸಿಗಬಹುದಾಗಿದ್ದ ಬಹುದೊಡ್ಡ ಅಸವನ್ನು ಸಿಗದಂತೆ ಕಾಂಗ್ರೆಸ್ ನೋಡಿಕೊಂಡಿದೆ.

ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ಈ ಗೊಂದಲಕ್ಕೂ ಮಿಗಿಲಾದ ಗೊಂದಲಗಳು ಬಿಜೆಪಿ ಪಾಳಯ ದಲ್ಲಿವೆ ಎನ್ನುವುದು ವಾಸ್ತವ. ಅಧಿವೇಶನದ ಹೊರತಾಗಿಯೂ ಹಲವು ಸನ್ನಿವೇಶಗಳಲ್ಲಿ ಬಿಜೆಪಿಯ ಭಿನ್ನಮತ ಸ್ಫೋಟಗೊಂಡಿರುವ ಉದಾಹರಣೆಗಳಿವೆ. ರಾಜ್ಯ ಕಾಂಗ್ರೆಸ್‌ನ ಈ ಗೊಂದಲಕ್ಕೆ ತಾತ್ಕಲಿಕ ಮದ್ದನ್ನು ಅರೆಯುವ ಪ್ರಯತ್ನವನ್ನು ದೆಹಲಿ ನಾಯಕರು ಮಾಡಿದ್ದಾರೆ. ಆದರೆ ಬಿಜೆಪಿಯ ವಿಷಯದಲ್ಲಿ ಈ ಪ್ರಯತ್ನವೂ ನಡೆದಿಲ್ಲ.

ಬಿಹಾರ ಚುನಾವಣೆಯ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ವಿಷಯದಲ್ಲಿ ಸ್ಪಷ್ಟನೆ ಸಿಗಲಿದೆ ಎನ್ನುವ ವಿಶ್ವಾಸದಲ್ಲಿ ವಿಜಯೇಂದ್ರ ಆಂಡ್ ಟೀಮ್ ಇತ್ತು. ಆದರೆ ಬಿಹಾರ ಚುನಾವಣೆ ಮುಗಿದು, ಸರಕಾರ ಅಸ್ತಿತ್ವಕ್ಕೆ ಬಂದು ವಾರಗಳೇ ಕಳೆದರೂ ಈವರೆಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಸ್ಪಷ್ಟನೆ ಪಡೆಯ ಬೇಕೆಂಬ ಉದ್ದೇಶದಿಂದಲೇ ವಿಜಯೇಂದ್ರ, ಯಡಿಯೂರಪ್ಪ ಇಬ್ಬರೂ ದೆಹಲಿ ಪರೇಡ್ ನಡೆಸಿ ದರೂ ಸಿಕ್ಕಿದ್ದು ಆಗಿದ್ದು ಶೂನ್ಯ ಸಂಪಾದನೆ.

ಈ ನಡುವೆ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಿರುವ ರಮೇಶ್ ಜಾರಕಿ ಹೊಳಿ ತಂಡ ತನ್ನ ಕಾರ್ಯವನ್ನು ಮುಂದುವರಿಸಿದೆ. ಈ ಎರಡು ಬಣಗಳಷ್ಟೇ ಅಲ್ಲದೆ, ವಿಧಾನ ಸಭೆಯಲ್ಲಿಯೇ ಇರುವ ೬೦ ಚಿಲ್ಲರೆ ಶಾಸಕರಲ್ಲಿ ಹತ್ತಾರು ಬಣಗಳು ರೂಪುಗೊಂಡಿವೆ.

ಕಳೆದ ಬೆಳಗಾವಿ ಅಧಿವೇಶನ ಸಮಯದಲ್ಲಿ ಸ್ಫೋಟಗೊಂಡಿದ್ದ ಬಣ ರಾಜಕೀಯ ಈಗಲೂ ಮುಂದುವರಿದಿದ್ದು, ಅದಕ್ಕೆ ತಾರ್ಕಿಕ ಅಂತ್ಯ ನೀಡಬೇಕಿದ್ದ ರಾಜ್ಯ ಉಸ್ತುವಾರಿ ರಾಧಮೋಹನ್ ದಾಸ್ ಅಗರ್ವಾಲ್ ಅವರು, ತಮಗೂ ರಾಜ್ಯಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿದ್ದಾರೆ. ದೆಹಲಿ ನಾಯಕರ ಈ ಗೊಂದಲದಿಂದ ಯಾರಿಗೆ ಲಾಭ-ನಷ್ಟ ಎನ್ನುವುದಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿದ್ದ ಬಲಿಷ್ಠ ಸಂಘಟನೆ ಕಮರುತ್ತಿದೆ. ಬಣ ರಾಜಕೀಯಕ್ಕೆ ಬೇಸತ್ತು ಹಲವು ಕಾರ್ಯಕರ್ತರು ಈಗಾಗಲೇ ಬದಿಗೆ ಸರಿದಿದ್ದಾರೆ.

ಇನ್ನು ಪ್ರಾದೇಶಿಕ ಪಕ್ಷ ಜೆಡಿಎಸ್‌ನ ನಾಯಕತ್ವ ಪ್ರಶ್ನಾತೀತ ಎನ್ನುವ ರೀತಿಯಲ್ಲಿದ್ದರೂ ಜಿ.ಟಿ. ದೇವೇಗೌಡ ಸೇರಿದಂತೆ ಹಲವು ಹಿರಿಯ ಶಾಸಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇರುವ ೧೮ ಶಾಸಕರ ಪೈಕಿ ಈ ರೀತಿ ಅಂತರ ಕಾಯ್ದುಕೊಂಡಿರುವುದರಿಂದ ಸದನದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಲು ಸಾಧ್ಯವೇ? ಎನ್ನುವ ಪ್ರಶ್ನೆಗೆ ಉತ್ತರವಿಲ್ಲವಾಗಿದೆ.

ಮೂರೂ ಪಕ್ಷಗಳಲ್ಲಿ ಎದ್ದಿರುವ ಈ ಗೊಂದಲದ ನಡುವೆ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಯಾವ ವಿಷಯವನ್ನು ‘ಎತ್ತಿಕೊಂಡು’ ಹೋಗಬೇಕು ಎನ್ನುವ ಸ್ಪಷ್ಟತೆ ಪ್ರತಿಪಕ್ಷ ಗಳಿಗೆ ಇಲ್ಲವಾಗಿದೆ. ಈ ಹಿಂದಿನ ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್‌ನಲ್ಲಿನ ಸಮನ್ವಯದ ಕೊರತೆ ಯನ್ನು ಮನಗಂಡು ಕಳೆದ ವಾರ ಬೆಂಗಳೂರಿನಲ್ಲಿ ಮೈತ್ರಿಪಕ್ಷಗಳು ಸಮನ್ವಯ ಸಮಿತಿ ಸಭೆ ಯನ್ನು ನಡೆಸಿವೆ. ಆದರೆ ಈ ಸಭೆಯಲ್ಲಿ ಆಗಿರುವ ತೀರ್ಮಾನಗಳು ಯಾವ ಪ್ರಮಾಣದಲ್ಲಿ ಸದನದಲ್ಲಿ ಕೈಗೂಡಲಿವೆ ಎನ್ನುವುದು ಈಗಿರುವ ಪ್ರಶ್ನೆ.

ಹಾಗೆ ನೋಡಿದರೆ, ರಾಜ್ಯ ಸರಕಾರದ ವಿರುದ್ಧ ಬಿಜೆಪಿ ನಾಯಕರು ಬ್ರಹ್ಮಾಸ್ತ್ರದ ರೀತಿ ಬಳಸಲು ಸಿದ್ಧಪಡಿಸಿಕೊಂಡಿದ್ದ ವಿಷಯಗಳು ಈಗ ‘ಔಟ್‌ಡೇಟೆಡ್’ ರೀತಿ ಕಾಣುತ್ತಿವೆ. ಏಕೆಂದರೆ, ಪ್ರಮುಖ ವಾಗಿ ನಾಯಕತ್ವ ಗೊಂದಲವನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೂತು ಬಗೆಹರಿಸಿ ಕೊಂಡಿರುವುದರಿಂದ ಆ ವಿಷಯದ ಮೇಲೆ ಚರ್ಚಿಸಿದರೆ ಹೆಚ್ಚು ಪರಿಣಾಮ ಬೀರುವುದಿಲ್ಲ.

ಇನ್ನು ರೈತರ ವಿಷಯವನ್ನು ಮುಂದಿಟ್ಟುಕೊಂಡು ಇಂದು (ಮಂಗಳವಾರ) ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದಾರೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಸದ್ದು ಮಾಡಿದ್ದ ಕಬ್ಬು ಬೆಳೆಗಾರರ ಸಮಸ್ಯೆಗೆ ಸರಕಾರ ಈಗಾಗಲೇ ಪರಿಹಾರ ಕಂಡು ಕೊಂಡಿದ್ದು, ಇನ್ನುಳಿದ ಸಮಸ್ಯೆಯನ್ನು ಕೇಂದ್ರ ಸರಕಾರದ ಮೇಲೆ ಎತ್ತಿ ಹಾಕಿದೆ.

ಇನ್ನುಳಿದಂತೆ ಮೆಕ್ಕೆಜೋಳ ಖರೀದಿ ವಿಷಯದಲ್ಲಿಯೂ ಈಗಾಗಲೇ ಕ್ರಮವಹಿಸಲಾಗಿದೆ. ಹೀಗಿರು ವಾಗ, ಈ ಎರಡು ವಿಷಯಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸ ಬಹುದೇ ಎನ್ನುವ ಗೊಂದಲ ಸ್ವತಃ ಬಿಜೆಪಿಗರಲ್ಲಿದೆ. ಇನ್ನುಳಿದಂತೆ ಈ ಬಾರಿ ೨೯ ವಿಧೇಯಕವನ್ನು ಮಂಡಿಸಲು ಸರಕಾರ ಸಜ್ಜಾಗಿದೆ. ಇದರಲ್ಲಿ ಕೆಲವೊಂದಷ್ಟು ವಿರೋಧಕ್ಕೆ ಕಾರಣವಾಗಬಹುದು.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಪಕ್ಷ ಬಿಜೆಪಿ ಎಷ್ಟರ ಮಟ್ಟಿಗೆ ವಿರೋಧಿಸಲಿದೆ ಎನ್ನುವುದು ಈಗಿರುವ ಪ್ರಶ್ನೆ. ಈ ಹಿಂದೆ ಸರಕಾರದ ವಿರುದ್ಧ ಸಿಕ್ಕಿದ್ದ ‘ಅಸ್ತ್ರ’ಗಳನ್ನೇ ಬಳಸಿಕೊಳ್ಳದೇ ಪೇಚಿಗೆ ಸಿಲುಕಿದ್ದ ಬಿಜೆಪಿಗೆ ಈ ಬಾರಿ ಇದ್ದ ಅಸ್ತ್ರಗಳೆಲ್ಲ ಅಧಿವೇಶನದ ಆರಂಭದ ವೇಳೆಗೆ ಮುಗಿದ ಅಧ್ಯಾ ಯದ ರೀತಿಯಾಗಿದೆ. ಹೀಗಿರುವಾಗ ಅದು ಹೊಸ ವಿಷಯಗಳನ್ನು ಎತ್ತಿಕೊಂಡು ಹೋರಾಟ ನಡೆಸುವುದೇ ಎನ್ನುವ ಪ್ರಶ್ನೆಗೆ ಹಲವರ ಬಳಿ ಉತ್ತರವಿಲ್ಲ.

ಹಾಗೆ ನೋಡಿದರೆ, ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾದ ದಿನದಿಂದಲೂ, ಕೆಲವೊಂದಷ್ಟು ಚರ್ಚೆಗಳು ‘ಸಂಪ್ರದಾಯ’ದ ರೀತಿಯಲ್ಲಿ ನಡೆದುಕೊಂಡು ಬರುತ್ತಿವೆ. ಅದರಲ್ಲಿಯೂ ಉತ್ತರ ಕರ್ನಾಟಕ ಅಭಿವೃದ್ಧಿ, ಕೃಷ್ಣಾ ಮೇಲ್ದಂಡೆ ಯೋಜನೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಸುವರ್ಣಸೌಧಕ್ಕೆ ಕೆಲ ಸಚಿವಾಲಯಗಳ ವರ್ಗಾವಣೆ, ರೈತರ ಸಮಸ್ಯೆ ಸೇರಿದಂತೆ ಕೆಲ ವಿಷಯಗಳು ಪ್ರತಿ ಅಧಿವೇಶನದಲ್ಲಿಯೂ ಚರ್ಚೆಯಾಗುತ್ತವೆ.

ಅದಕ್ಕೆ ‘ನಾಮ್-ಕೆ-ವಾಸ್ತೆ’ ರೀತಿಯಲ್ಲಿನ ಸಿದ್ಧ ಉತ್ತರಗಳು ಅಧಿಕಾರಾರೂಢರಿಂದ ಸಿಗುತ್ತವೆ. ಕಳೆದ ೧೦ ವರ್ಷಗಳ ಚರ್ಚೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹೊಸತು ಎನ್ನುವ ಯಾವುದೇ ನಿರ್ಣಯ, ತೀರ್ಮಾನಗಳಾಗಿಲ್ಲ. ಪ್ರತಿವರ್ಷ ಅಧಿವೇಶನದ ಕೊನೆಯಲ್ಲಿ ಒಂದಿಷ್ಟು ಅನುದಾನ ಘೋಷಣೆ, ಕೆಲವೊಂದಷ್ಟು ಅಭಿವೃದ್ಧಿ ಕಾರ್ಯಗಳ ಭರವಸೆ, ಖಾಲಿ ಹುದ್ದೆಗಳ ಭರ್ತಿಗೆ ‘ಕ್ರಮ’ದ ಆಶ್ವಾಸನೆ ಸಿಗುತ್ತವೆ.

ಸ್ಥಳೀಯರ ಪ್ರಕಾರ, ಬೆಳಗಾವಿ ಚಳಿಗಾಲದ ಅಧಿವೇಶನ ಎನ್ನುವುದು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಿಂತ ಹೆಚ್ಚಾಗಿ ಸಂಪ್ರದಾಯವಾಗುತ್ತಿದೆ. ಪ್ರತಿಬಾರಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ದ ಚರ್ಚೆಯನ್ನು ಅಧಿವೇಶನದ ಎರಡನೇ ವಾರದ ಪ್ರತಿ ಮಧ್ಯಾಹ್ನ ಕೈಗೆತ್ತಿಕೊಳ್ಳಲಾಗುತ್ತದೆ.

ಮೊದಲ ವಾರದ ಶುಕ್ರವಾರ ಊರುಗಳಿಗೆ ತೆರಳಿದ ಅನೇಕ ಶಾಸಕರು ಎರಡನೇ ವಾರದಲ್ಲಿ ಕಾಣಿಸಿ ಕೊಳ್ಳುವುದಿಲ್ಲ. ಹೀಗಿರುವಾಗ, ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸುವ ಉದ್ದೇಶದಿಂದಲೇ ನಡೆಸುವ ಬೆಳಗಾವಿ ಅಧಿವೇಶನದಲ್ಲಿ ಆ ಭಾಗದ ಚರ್ಚೆಯನ್ನು ಕೊನೆಯಲ್ಲಿಟ್ಟುಕೊಂಡರೆ ಇಡೀ ಪ್ರಹಸನದ ಉದ್ದೇಶವೇ ಈಡೇರುವುದಿಲ್ಲ ಎನ್ನುವುದು ಬಹುಪಾಲು ಜನರ ಅಭಿಪ್ರಾಯವಾಗಿದೆ.

ಈ ಬಾರಿಯಾದರೂ ಮೊದಲ ವಾರದಲ್ಲಿಯೇ ಉತ್ತರ ಕರ್ನಾಟಕದ ಕುರಿತಾದ ಚರ್ಚೆಗೆ ಅಗ್ರಸ್ಥಾನ ನೀಡಬೇಕು ಎನ್ನುವುದು ಸ್ಥಳೀಯರ ನಿರೀಕ್ಷೆ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಬಾರಿಯೂ ‘ಸಂಪ್ರದಾಯ’ದಂತೆ ಎರಡನೇ ವಾರದ ಕೊನೆಯಲ್ಲಿ ಕಾಟಾಚಾರಕ್ಕೆ ಚರ್ಚೆ ಮಾಡಿ, ಮುಗಿಸುವ ಸಾಧ್ಯತೆಯೇ ಹೆಚ್ಚು ಎನ್ನುವುದು ಸ್ಪಷ್ಟ.

ಹಿಂದಿನ ಅಧಿವೇಶನಕ್ಕೆ ಹೋಲಿಸಿದರೆ, ಈ ಬಾರಿ ಮೂರೂ ಪಕ್ಷಗಳಲ್ಲಿ ಹಲವು ಗೊಂದಲ ಗಳಿರುವು ದರಿಂದ, ಯಾವ ವಿಷಯವನ್ನು ಮುಂದಿಟ್ಟುಕೊಂಡು ಹೋರಾಡಬೇಕು ಎನ್ನುವ ಸ್ಪಷ್ಟತೆ ಪ್ರತಿ ಪಕ್ಷಗಳಿಗೆ ಇಲ್ಲದಿರುವುದರಿಂದ ಹಾಗೂ ಒಗ್ಗಟ್ಟಿನ ವಿಷಯದಲ್ಲಿ ಮೂರೂ ಪಕ್ಷಗಳಲ್ಲಿ ಭಿನ್ನರಾಗ ಗಳು ಇರುವುದರಿಂದ ಯಾವ ರೀತಿಯಲ್ಲಿ ಬೆಳಗಾವಿ ಅಧಿವೇಶನ ನಡೆಯಲಿದೆ ಎನ್ನುವುದು ಕುತೂಹಲ ಹುಟ್ಟಿಸಿದೆ. ಇದಕ್ಕೆ ಮುಂದಿನ ಎರಡು ವಾರವೇ ಉತ್ತರ ಕೊಡಲಿದೆ.