ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranjith H Ashwath Column: ಒಳಯೇಟಿನ ಆತಂಕದಲ್ಲಿದೆಯೇ ಕಾಂಗ್ರೆಸ್‌ ?

ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಹಾಗೂ ಅನುಕಂಪದ ಅಲೆ ಎರಡೂ ಸೇರಿದರೆ ಗೆಲ್ಲುವುದು ಬಹುದೊಡ್ಡ ಸವಾಲೇನಲ್ಲ ಎನ್ನುವುದು ರಾಜಕೀಯದ ಮೊದಲ ಮೆಟ್ಟಿಲು ಇಡುತ್ತಿರುವವರಿಗೂ ಗೊತ್ತಿರುವ ವಿಷಯ. ಆದರೆ ಎರಡೂ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದ ಬಳಿಕ ನಡೆದ ಆಂತರಿಕ ಸಂಘರ್ಷ, ಮತದಾನ ಹತ್ತಿರವಾಗುತ್ತಿದ್ದಂತೆ ಬರುತ್ತಿರುವ ‘ಗುಪ್ತ’ ಮಾಹಿತಿಗಳು ಪಕ್ಷದ ನಾಯಕರನ್ನು ಗೊಂದಲ ಹಾಗೂ ಆತಂಕಕ್ಕೆ ಸಿಲುಕಿಸಿವೆ ಎಂದರೆ ತಪ್ಪಾಗುವುದಿಲ್ಲ.

Ranjith H Ashwath Column: ಒಳಯೇಟಿನ ಆತಂಕದಲ್ಲಿದೆಯೇ ಕಾಂಗ್ರೆಸ್‌ ?

-

ಅಶ್ವತ್ಥಕಟ್ಟೆ

ರಾಜ್ಯದಲ್ಲಿ ಮತ್ತೊಂದು ಉಪಚುನಾವಣೆ ಎದುರಾಗಿದೆ. ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆಯ ಸೋಲು-ಗೆಲುವಿನಿಂದ ಸರಕಾರ ನಡೆಸುವ ವಿಷಯದಲ್ಲಿ, ಬಹುಮತದ ವಿಷಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ವಾದ್ದರಿಂದ ಒಂದರ್ಥದಲ್ಲಿ ‘ಆಟಕ್ಕುಂಟು-ಲೆಕ್ಕಕ್ಕಿಲ್ಲ’ ಆದರೂ ಚುನಾವಣೆ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲು ಮ್ಯಾಜಿಕ್ ನಂಬರ್ ಲೆಕ್ಕಾಚಾರ ಮೀರಿದ ರಾಜಕೀಯ ಅಡಗಿದೆ.

ಇದರೊಂದಿಗೆ ತಮ್ಮದೇ ಪಕ್ಷದ ಶಾಸಕರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆ ವಿಷಯದಲ್ಲಿ ಕಾಂಗ್ರೆಸ್ ಆರಂಭದಲ್ಲಿ ಸುಲಭ ಗೆಲುವಿನ ಲೆಕ್ಕಾಚಾರವನ್ನು ಇಟ್ಟುಕೊಂಡಿತ್ತು.

ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಹಾಗೂ ಅನುಕಂಪದ ಅಲೆ ಎರಡೂ ಸೇರಿದರೆ ಗೆಲ್ಲುವುದು ಬಹುದೊಡ್ಡ ಸವಾಲೇನಲ್ಲ ಎನ್ನುವುದು ರಾಜಕೀಯದ ಮೊದಲ ಮೆಟ್ಟಿಲು ಇಡುತ್ತಿರುವವರಿಗೂ ಗೊತ್ತಿರುವ ವಿಷಯ. ಆದರೆ ಎರಡೂ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದ ಬಳಿಕ ನಡೆದ ಆಂತರಿಕ ಸಂಘರ್ಷ, ಮತದಾನ ಹತ್ತಿರವಾಗುತ್ತಿದ್ದಂತೆ ಬರುತ್ತಿರುವ ‘ಗುಪ್ತ’ ಮಾಹಿತಿಗಳು ಪಕ್ಷದ ನಾಯಕರನ್ನು ಗೊಂದಲ ಹಾಗೂ ಆತಂಕಕ್ಕೆ ಸಿಲುಕಿಸಿವೆ ಎಂದರೆ ತಪ್ಪಾಗುವುದಿಲ್ಲ.

ಹಾಗೇ ನೋಡಿದರೆ, ಶಾಸಕರು ನಿಧನ ಹೊಂದಿದಾಗ ನಡೆಯುವ ಯಾವುದೇ ಉಪಚುನಾವಣೆ ಗಳಾದರೂ, ಅವುಗಳಲ್ಲಿ ಆ ಪಕ್ಷದ ಅಥವಾ ಕುಟುಂಬದ ಅಭ್ಯರ್ಥಿಗಳು ಅನುಕಂಪದ ಆಧಾರದಲ್ಲಿ ಸುಲಭ ಗೆಲುವು ದಾಖಲಿಸುತ್ತಾರೆ. ಇಲ್ಲದಿದ್ದರೆ ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳಿಗೆ ಗೆಲುವು ನಿಶ್ಚಿತ ಎನ್ನುವುದು ರಾಜಕೀಯ ಗಣಿತ. ಆದರೆ ಈ ಬಾರಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಹಾಕುತ್ತಿರುವ ಶ್ರಮ ನೋಡಿದರೆ, ಈ ರಾಜಕೀಯ ಲೆಕ್ಕಾಚಾರಗಳು ತಲೆ ಕೆಳಗಾಗುವ ಆತಂಕವಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ಇದನ್ನೂ ಓದಿ: Ranjith H Ashwath Column: ತರಾತುರಿಯಲ್ಲಿ ತೃತೀಯ ಭಾಷೆ ಕೈಬಿಟ್ಟಿದ್ದೇಕೆ ?

ಏಕೆಂದರೆ, ಈ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಪ್ರದಾಯದಂತೆ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲು ಮುಂದಾಗುತ್ತಿದ್ದಂತೆ, ಭಿನ್ನ ರೀತಿಯ ಸಮಸ್ಯೆಗಳು ಉದಯಿಸಿದವು. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎನ್ನುವುದಕ್ಕೆ ಯಾರದ್ದೇ ತಕರಾರು ಇಲ್ಲದಿದ್ದರೂ, ನಾಲ್ವರಲ್ಲಿ ಯಾರಿಗೆ ಕೊಡಬೇಕು ಎನ್ನುವ ವಿಷಯಕ್ಕೆ ಹೈಡ್ರಾಮ ನಡೆಯಿತು.

ಕೊನೆಗೆ ಸ್ವತಃ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ನಾಲ್ವರು ಮಕ್ಕಳನ್ನು ಕೂರಿಸಿಕೊಂಡು ಸಂಧಾನ ಮಾಡಿ, ಟಿಕೆಟ್‌ಗಾಗಿ ಹೋರಾಡುತ್ತಿದ್ದ ಇಬ್ಬರ ಬದಲಿಗೆ ಮೂರನೇ ಮಗನಿಗೆ ಟಿಕೆಟ್ ನೀಡುವ ಸೂತ್ರವನ್ನು ಸಿದ್ಧಪಡಿಸಿ ಅದಕ್ಕೆ ಇಡೀ ಕುಟುಂಬದ ಒಪ್ಪಿಗೆ ಪಡೆಯಬೇಕಾಯಿತು.

ಇನ್ನು ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆ ಒಂದೆಡೆಯಾಗಿದ್ದರೆ, ಇನ್ನೊಂದೆಡೆ ಮಲ್ಲಿಕಾರ್ಜುನ ಪುತ್ರ ಸಮರ್ಥ ಬದಲಿಗೆ ಶಾಮನೂರು ಶಿವಶಂಕರಪ್ಪನವರ ಇನ್ನಿಬ್ಬರು ಪುತ್ರರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎನ್ನುವ ವಾದ ಶುರುವಾಗಿತ್ತು.

ಶಾಮನೂರು ಕುಟುಂಬದ ಸಮಸ್ಯೆಯನ್ನು ಎಸ್‌ಎಸ್ ಶೀಘ್ರವೇ ಪರಿಹರಿಸಿಕೊಂಡರು. ಆದರೆ ಮುಸ್ಲಿಂ ಸಮುದಾಯದ ತೀವ್ರ ವಿರೋಧಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ಸಾದಿಕ್ ಪೈಲ್ವಾನ್ ಅವರ ನಾಮಪತ್ರ ತೆಗೆಸುವಲ್ಲಿ ಕಾಂಗ್ರೆಸ್ ಸಫಲವಾಗದಿದ್ದರೂ, ಕಣದಲ್ಲಿ ‘ತಟಸ್ಥ’ರಾಗುವಂತೆ ಮಾಡುವಲ್ಲಿ ರಾಜ್ಯ ನಾಯಕರ ಸರಣಿ ಸಂಧಾನ ಸಭೆಯ ಮೂಲಕ ಸಾಧ್ಯವಾಯಿತು.

ಆದರೂ, ದಾವಣಗೆರೆ ವಿಷಯದಲ್ಲಿ ನಾಯಕರಲ್ಲಿ ಕೊಂಚ ಅಳುಕು ಇರಲು ಪ್ರಮುಖ ಕಾರಣ ವೆಂದರೆ, ಅಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳು ಹಾಗೂ ಎಸ್‌ಡಿಪಿಐ ಅಭ್ಯರ್ಥಿ. ಸದ್ಯ ಕಣದಲ್ಲಿ ಬರೋಬ್ಬರಿ 10 ಪಕ್ಷೇತರ ಅಭ್ಯರ್ಥಿಗಳಿದ್ದು, ಈ ಎಲ್ಲರೂ ಮುಸ್ಲಿಮರಾಗಿದ್ದಾರೆ. ಇದರೊಂದಿಗೆ ಎಸ್‌ಡಿಪಿಐ ಅಭ್ಯರ್ಥಿಯೂ ಮುಸ್ಲಿಂ ಆಗಿರುವುದರಿಂದ, ಸಮುದಾಯದ ಮತಗಳು ವಿಭಜನೆಯಾಗುತ್ತಾ ಹೋದರೆ, ಭಾರಿ ಹೊಡೆತ ಬೀಳುತ್ತದೆ ಎನ್ನುವುದು ಕಾಂಗ್ರೆಸ್ ನಾಯಕರ ಆತಂಕವಾಗಿದೆ.

10 ಪಕ್ಷೇತರ ಅಭ್ಯರ್ಥಿಗಳು ಹಾಗೂ ಎಸ್ʼಡಿಪಿಐ ಅಭ್ಯರ್ಥಿ 10ರಿಂದ 12 ಸಾವಿರ ಮತಗಳನ್ನು ಕಾಂಗ್ರೆಸ್‌ನಿಂದ ಕಿತ್ತುಕೊಂಡರೂ ಇಡೀ ಚುನಾವಣೆಯ ಲೆಕ್ಕಾಚಾರವೇ ಬದಲಾಗುವ ಆತಂಕ ನಾಯಕರಲ್ಲಿದೆ. ಮುಸ್ಲಿಂ ಸಮುದಾಯದ ಶೇ.60ರಿಂದ 70ರಷ್ಟು ಮತಗಳಿರುವುದರಿಂದ, ಈ ಮತಗಳು ಕಾಂಗ್ರೆಸ್ ಬಾರದಿದ್ದರೂ ಪರವಾಗಿಲ್ಲ ಪಕ್ಷೇತರ ಅಭ್ಯರ್ಥಿಗಳಿಗೆ ಹರಿದು ಹಂಚದಂತೆ ನೋಡಿಕೊಳ್ಳುವ ಪ್ಲಾನ್ ಬಿ ಅನ್ನು ನಾಯಕರು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮುಸ್ಲಿಂ ಜನಪ್ರತಿನಿಧಿಗಳೆಲ್ಲ ದಾವಣಗೆರೆಯಲ್ಲಿಯೇ ಬೀಡುಬಿಟ್ಟು, ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ.

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ಗೆ ಮುಸ್ಲಿಂ ಮತಗಳ ಚಿಂತೆಯಾದರೆ, ಬಾಗಲಕೋಟೆಯಲ್ಲಿ ಹಿಂದೂಗಳ ಚಿಂತೆಯಾಗಿದೆ. ಬಾಗಲಕೋಟೆಯಲ್ಲಿ ಲಿಂಗಾಯತ ಸಮುದಾಯವೇ ನಿರ್ಣಾಯಕ ವಾಗಿದೆ. 80 ಸಾವಿರ ಲಿಂಗಾಯತರು, 40 ಸಾವಿರ ಕುರುಬರು, 58 ಸಾವಿರ ದಲಿತರು ಸೇರಿದಂತೆ 45 ಸಾವಿರ ಇತರರಿದ್ದಾರೆ.

ಇದರೊಂದಿಗೆ 25 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಕಳೆದ ತಿಂಗಳು ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯದ ಯುವಕರು ನಡೆಸಿದ್ದ ಕಲ್ಲು ತೂರಾಟ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಚರ್ಚೆಯಾಗಿದ್ದಷ್ಟೇ ಅಲ್ಲದೇ, ತುಷ್ಠೀಕರಣದ ರಾಜಕಾರಣ ಎನ್ನುವ ಆರೋಪ ಕಾಂಗ್ರೆಸ್ ವಿರುದ್ಧ ಕೇಳಿಬಂದಿತ್ತು.

ಇದರ ಲಾಭವನ್ನು ತಕ್ಕಮಟ್ಟಿಗೆ ಸ್ಥಳೀಯ ಬಿಜೆಪಿ ನಾಯಕರು ಪಡೆದಿದ್ದಾರೆ. ಆ ಘಟನೆಯಿಂದಾಗಿ ಹಿಂದೂ ಮತಗಳು ಒಂದಾದರೆ ಆಗ ಕಾಂಗ್ರೆಸ್‌ಗೆ ಸಂಕಷ್ಟ ನಿಶ್ಚಿತ. ಇನ್ನು 2023ರ ಚುನಾವಣೆಯ ಫಲಿತಾಂಶ ಗಮನಿಸಿದರೆ, ಎಚ್.ವೈ. ಮೇಟಿ ಅವರು ಕೇವಲ ಐದಾರು ಸಾವಿರ ಮತಗಳ ಅಂತರ ದಿಂದ ಗೆಲುವು ಸಾಧಿಸಿದ್ದರು. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ವೀರಣ್ಣ ಚರಂತಿಮಠ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ 10 ಸಾವಿರ ಚಿಲ್ಲರೆ ಮತಗಳನ್ನು ಪಡೆದಿದ್ದರು.

ಇದೀಗ ಸಹೋದರನಿಗೆ ಮಲ್ಲಿಕಾರ್ಜುನ ಬೆಂಬಲಿಸಿರುವುದರಿಂದ, ವೀರಣ್ಣ ಅವರ ಮತಗಳು ಹಿಗ್ಗುವ ಸಾಧ್ಯತೆಯಿದೆ. ಒಂದು ವೇಳೆ ಅನುಕಂಪದ ಅಲೆಯನ್ನು ಕಳೆದ ತಿಂಗಳ ಕೋಮು ಸಂಘರ್ಷ ಹಿಂದೆ ಹಾಕಿದರೆ ಆಗ ಬಾಗಲಕೋಟೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗೆ ಸಂಕಷ್ಟ ಎದುರಾಗುವ ಆತಂಕವಿದೆ.

ಇದರೊಂದಿಗೆ ಈ ಉಪಚುನಾವಣೆಯಲ್ಲಿ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿರುವ ಬಹುದೊಡ್ಡ ಪ್ಲಸ್ ಪಾಯಿಂಟ್ ಎಂದರೆ, ಪಕ್ಷದಲ್ಲಿ ಇಷ್ಟು ದಿನಗಳ ಕಾಲವಿದ್ದ ಭಿನ್ನಾಭಿಪ್ರಾಯಗಳನ್ನು ಮರೆತು ವಿಜಯೇಂದ್ರ ವಿರೋಧಿ ಬಣದಲ್ಲಿದ್ದ ಪ್ರಮುಖ ನಾಯಕರು ಚುನಾವಣಾ ಪ್ರಚಾರದಲ್ಲಿ ಕಾಣಿಸಿ ಕೊಂಡಿರುವುದು.

ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಘೋಷಣೆಯಾದ ದಿನದಿಂದಲೂ, ಅಂತರ ಕಾಯ್ದು ಕೊಂಡಿದ್ದ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ವಿಜಯೇಂದ್ರ ವಿರುದ್ಧ ನೇರ-ಪರೋಕ್ಷ ವಾಗ್ದಾಳಿ ನಡೆಸುತ್ತಿದ್ದ ಹಲವು ನಾಯಕರು ಇದೀಗ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಅದರಲ್ಲಿಯೂ ಕಳೆದ ಎರಡುವರೆ ವರ್ಷದಿಂದ ರಾಜ್ಯ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಮ್ಮದೇಯಾದ ಕಾರಣಗಳಿಗೆ ವಿಜಯೇಂದ್ರ ಅವರೊಂದಿಗೆ ಬಾಗಲಕೋಟೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದಾರೆ.

ಆರಂಭದಲ್ಲಿ ಅರವಿಂದ ಲಿಂಬಾವಳಿ ಹಾಗೂ ವಿಜಯೇಂದ್ರ ಒಂದೇ ಪ್ರಚಾರ ವಾಹನದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ತಣಿದಿವೆ ಎನ್ನುವ ವಿಷಯ ಹರಿದಾಡಲು ಶುರುವಾಗಿತ್ತು. ಆದರೆ ವಾಸ್ತವದಲ್ಲಿ, ಅರವಿಂದ ಲಿಂಬಾವಳಿ ಅವರು ಪಕ್ಷಕ್ಕಿಂತ ಅಭ್ಯರ್ಥಿಗಳಿಗಾಗಿ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಅರವಿಂದ ಲಿಂಬಾವಳಿ ಅವರ ಜಿಲ್ಲೆಯಲ್ಲಿಯೇ ಉಪಚುನಾವಣೆ ನಡೆಯುತ್ತಿದ್ದರೂ ಭಾಗವಹಿಸದೇ ಹೋದರೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎನ್ನವ ಕಾರಣಕ್ಕೆ ಮತ್ತು ಬಿಜೆಪಿ ಅಭ್ಯರ್ಥಿಯಾಗಿರುವ ವೀರಣ್ಣ ಚರಂತಿಮಠ ಅವರೊಂದಿಗೆ ಪಕ್ಷ ಮೀರಿದ ಸ್ನೇಹಕ್ಕೆ ಕಟ್ಟುಬಿದ್ದು ಪ್ರಚಾದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ದಾವಣಗೆರೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ತಮ್ಮ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಆ ಕಾರಣಕ್ಕೆ ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ ಸೇರಿದಂತೆ ಬಂಡಾಯ ಗುಂಪಿನಲ್ಲಿ ಕಾಣಿಸಿಕೊಂಡಿರುವ ಅನೇಕರನ್ನು ಕರೆ ತರುತ್ತಿದ್ದಾರೆ.

ಸಿದ್ದೇಶ್ವರ ಅವರೊಂದಿಗಿನ ಸ್ನೇಹಕ್ಕಾಗಿ ವಿರೋಧಿ ಗುಂಪಿನಲ್ಲಿದ್ದರೂ ನಾಯಕರು ಎರಡೂ ಕ್ಷೇತ್ರ ದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ವಿಜಯೇಂದ್ರ ವಿರೋಧಿ ಗುಂಪಿನಲ್ಲಿರುವ ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ ಸೇರಿ ಹಲವರು ಪ್ರಚಾರಕ್ಕೆ ಬಂದಿದ್ದರೂ, ಈ ವಿಷಯ ದಲ್ಲಿ ವಿಜಯೇಂದ್ರ ಮೌನವಾಗಿರುವ ಮೂಲಕ ಜಾಣ ನಡೆ ತೋರಿದ್ದಾರೆ.

ಯಾರಾದರೂ ಬರಲಿ, ಬಿಜೆಪಿ ಅಭ್ಯರ್ಥಿ ಗೆದ್ದರೆ ಅದರ ಸಣ್ಣ ಪ್ರಮಾಣದ ಲಾಭವಾದರೂ ತಮಗೆ ಬರುತ್ತದೆ ಎನ್ನುವ ಲೆಕ್ಕಚಾರ ವಿಜಯೇಂದ್ರ ಅವರದ್ದಾಗಿದೆ ಎಂದರೆ ತಪ್ಪಾಗುವುದಿಲ್ಲ. ಕರ್ನಾಟಕ ದಲ್ಲಿ ಎದುರಾಗಿರುವ ಈ ಎರಡು ಕ್ಷೇತ್ರದ ಉಪಚುನಾವಣೆಯ ಸೋಲು-ಗೆಲುವಿನಿಂದ ಸ್ಪರ್ಧಿಸಿ ರುವ ಅಭ್ಯರ್ಥಿಗಳಿಗೆ ಕಳೆದುಕೊಳ್ಳುವುದು ಏನು ಇಲ್ಲ. ಆದರೆ ಈ ಚುನಾವಣಾ ಫಲಿತಾಂಶದ ಮೇಲೆ ನಾಯಕರ ವಿವಿಧ ರೀತಿಯ ಪರಿಣಾಮ ಬೀರುವುದಂತೂ ಸತ್ಯ.

ಕೇವಲ ಪಕ್ಷ ಪಕ್ಷಗಳ ನಡುವಿನ ಪ್ರತಿಷ್ಠೆಯಾಗಿ ಮಾತ್ರ ಈ ಚುನಾವಣೆ ಕಾಣಿಸಿಕೊಳ್ಳದೇ, ಪಕ್ಷ ದೊಳಗಿನ ಆಂತರಿಕ ರಾಜಕೀಯ ಶಕ್ತಿ ಪ್ರದರ್ಶನ ಮಾಡುವುದಕ್ಕೂ ಈ ಫಲಿತಾಂಶ ಪರಿಣಾಮ ಬೀರಲಿದೆ ಸ್ಪಷ್ಟ. ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಆಂತರಿಕ ಕಿತ್ತಾಟಕ್ಕೆ ಬ್ರೇಕ್ ಹಾಕಿದ್ದು ಉಪ ಚುನಾವಣೆ ಎನ್ನುವುದು ಎಷ್ಟು ಸತ್ಯವೋ, ಚುನಾವಣಾ ಫಲಿತಾಂಶದ ಆಧಾರದ ಮೇಲೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ತಮ್ಮ ಬೇಡಿಕೆಗಳನ್ನು ಹೈಕಮಾಂಡ್ ಮುಂದಿಡಲಿದ್ದಾರೆ ಎನ್ನುವುದು ಎಷ್ಟೇ ಸತ್ಯ.

ಈ ಚುನಾವಣಾ ಫಲಿತಾಂಶದ ಆಧಾರದಲ್ಲಿ, ಬದಲಾವಣೆಗಳಾಗುತ್ತವೆ ಎನ್ನುವುದಕ್ಕಿಂತ, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ತಮ್ಮ ತಮ್ಮ ಜವಾಬ್ದಾರಿಯನ್ನು ಯಾವ ರೀತಿಯಲ್ಲಿ ನಿಭಾಯಿಸಿದ್ದಾರೆ ಎನ್ನುವುದನ್ನು ಒರೆಗಲ್ಲಿಗೆ ಹಚ್ಚಬಹುದು. ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ, ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯಿಲ್ಲ.

ಆದ್ದರಿಂದ ನಾಯಕತ್ವ ಬದಲಾವಣೆ ವಿಷಯ ಅಪ್ರಸ್ತುತ ಎನ್ನುವ ವಿಷಯವನ್ನು ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಅವರು ಮಂಡಿಸಬಹುದು. ಇನ್ನೊಂದೆಡೆ ಪಕ್ಷ ಕೊಟ್ಟಿರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿರುವೆ. ಈಗಲಾರದೂ ಕೂಲಿ ಕೊಡಿ ಎಂದು ಡಿ.ಕೆ.ಶಿವ ಕುಮಾರ್ ಅವರು ದೆಹಲಿ ನಾಯಕರ ಮುಂದೆ ತಮ್ಮ ಬೇಡಿಕೆಯನ್ನು ಇಡಬಹುದು (ಅಸ್ಸಾಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಡಿಕೆಗೆ ಮತ್ತೊಂದು ಲಾಡು ಬಾಯಿಗೆ ಬಿದ್ದ ಹಾಗಾಗುತ್ತದೆ).

ಈ ಎರಡು ಕ್ಷೇತ್ರಗಳ ಉಪಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಬದಲಾವಣೆ ಯಾದಿದ್ದರೂ, ವೈಯಕ್ತಿಕ ಪ್ರತಿಷ್ಠೆ, ಬೇಡಿಕೆಗಳ ಕಾರಣಕ್ಕೆ ಪ್ರಮುಖ ಎನಿಸಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಪಕ್ಷದೊಳಗಿದ್ದ ಬೇಗುದಿಗಳನ್ನು ಸರಿಪಡಿಸಿಕೊಂಡಿ ಫಿನಿಕ್ಸ್ ಹಕ್ಕಿಯಂತೆ ಎದ್ದು‌ ಬಂದು, ಈಗಲೂ ಕರ್ನಾಟಕದಲ್ಲಿ ನಾನೇ ಬಲಿಷ್ಠ ಎಂದು ಪಕ್ಷದ ಹೈಕಮಾಂಡ್‌ಗೆ ಹಾಗೂ ರಾಜ್ಯದ ಜನರಿಗೆ ತೋರಿಸುವ ಉತ್ಸಾಹವಿದ್ದರೆ, ಪ್ರತಿಪಕ್ಷ ಬಿಜೆಪಿಗೆ ಮೈತ್ರಿ ಪಕ್ಷ ಜೆಡಿಎಸ್ ನೊಂದಿಗಿನ ಭಿನ್ನಭಿಪ್ರಾಯ, ಪಕ್ಷದೊಳಗಿನ ಹತ್ತಾರು ಗುಂಪುಗಾರಿಕೆ, ರಾಜ್ಯ ನಾಯಕತ್ವದ ವಿಷಯದಲ್ಲಿ ಒಡಕಿನ ಮಾತು ಗಳನ್ನು ಮೀರಿ ಗೆಲುವು ಸಾಧಿಸುವ ಮೂಲಕ ಸೊರಗಿರುವ ಸಂಘಟನೆಗೆ ಜೀವ ತುಂಬಬಹುದು ಎನ್ನುವ ಲೆಕ್ಕಚಾರವಿದೆ.

ಈ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ, ಮತನೀಡುವ ಪ್ರಭುವಿನ ಮನಸ್ಸಿನಲ್ಲಿ ಏನಿದೆ ಎನ್ನುವ ಪ್ರಶ್ನೆಗೆ ಏ.9ರಂದು ನಡೆಯವ ಮತದಾನದಲ್ಲಿ ಉತ್ತರ ಸಿಗಲಿದ್ದು, ಮುಂದಿನ ತಿಂಗಳು ಮತಎಣಿಕೆ ವೇಳೆ ಫಲಿತಾಂಶ ಸಿಗಲಿದೆ.